ಸಂಗೀತ- ನೃತ್ಯಗಳ ಮಧುರ ಸಂಗಮ ‘ಫ್ಲೂಟ್ ಅಂಡ್ ಫೀಟ್’ ’ ಕಲಾಸಂಸ್ಥೆ. ನಾದ-ನೃತ್ಯ ಒಂದರೊಳಗೊಂದು ಅವಿನಾಭಾವದ ಬೆಸುಗೆ ಹೊಂದಿದ ಕಲೆಗಳಾಗಿರುವುದರಿಂದ ಅವುಗಳನ್ನು ಪ್ರತ್ಯೇಕಿಸುವಂತೆಯೇ ಇಲ್ಲ. ಪೂರಕ ರಸಾನುಭವ ನೀಡುವ ಗಾನಮಾಧುರ್ಯದ ಒಡಲಲ್ಲಿ ವಿಕಸಿಸುವ ನೃತ್ಯಾಭಿನಯದ ಅನುಭವ ಅನುಪಮ. ಇಂಥ ಒಂದು ವಿಶಿಷ್ಟ ಪರಿಕಲ್ಪನೆಯ ಸಂಗೀತ-ನೃತ್ಯೋತ್ಸವದ ಮನನೀಯ ಅನುಭವವನ್ನು ‘ಫ್ಲೂಟ್ ಅಂಡ್ ಫೀಟ್’ ಅಕಾಡೆಮಿ ಒದಗಿಸುತ್ತಿದೆ. ಕಳೆದ 12 ವರ್ಷಗಳಿಂದ ಈ ಅಕಾಡೆಮಿಯು ಕಲಾರಂಗದಲ್ಲಿ ತನ್ನದೇ ಆದ ಅಸ್ಮಿತೆಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು, ಈ ಅಪೂರ್ವ ನಾದ-ಅಭಿನಯದ ರಸಪೂರ್ಣ ಕಾರ್ಯಕ್ರಮದ ರೂವಾರಿಗಳು ಪ್ರಖ್ಯಾತ ಕೊಳಲುವಾದಕ ವಿವೇಕ್ ಕೃಷ್ಣ ಮತ್ತು ಪ್ರಸಿದ್ಧ ಭರತನಾಟ್ಯ ಕಲಾವಿದೆ ಅರಣ್ಯ ನಾರಾಯಣ್. ಇವರಿಬ್ಬರ ಕನಸಿನ ಕೂಸು ಈ ‘ಫ್ಲೂಟ್ ಅಂಡ್ ಫೀಟ್’ ಸಂಸ್ಥೆ. ಪ್ರತಿವರ್ಷ ಉತ್ತಮವಾದ ಮೌಲಿಕ ಕಾರ್ಯಕ್ರಮ, ಉತ್ಸವಗಳನ್ನು ಯಶಸ್ವಿಯಾಗಿ ಆಯೋಜಿಸುತ್ತ ಬಂದಿರುವ ಹಿರಿಮೆ ಈ ಕಲಾ ದಂಪತಿಗಳದು.
ಭಾರತೀಯ ಸಂಸ್ಕೃತಿಯ ಅಭಿವೃದ್ಧಿಗಾಗಿ ವ್ಯಾಪಕವಾಗಿ ಮತ್ತು ಅಷ್ಟೇ ಬದ್ಧತೆಯಿಂದ ಶ್ರಮಿಸುತ್ತಿರುವ ಅಕಾಡೆಮಿಯು, ಚೆನ್ನೈನಲ್ಲಿ ನೆಲೆಗೊಂಡಿರುವ ವಿಶ್ವ ಪ್ರಸಿದ್ಧ ಕಲಾಕ್ಷೇತ್ರದ ಶೈಲಿಯಲ್ಲಿ, ಕರ್ನಾಟಕದ ಶಾಸ್ತ್ರೀಯ ರೀತ್ಯ ಕೊಳಲುವಾದನ ಮತ್ತು ಭರತನಾಟ್ಯದ ಮೌಲಿಕ ಶಿಕ್ಷಣವನ್ನು ಯುವಸಮುದಾಯದವರಿಗೆ ಸಮರ್ಥವಾಗಿ ನೀಡುತ್ತಿರುವುದು ಶ್ಲಾಘನೀಯ ಸಂಗತಿ.
ಇಲ್ಲಿ ವಿದ್ಯಾರ್ಥಿಗಳಿಗೆ ಕಲಾಕೌಶಲ್ಯದ ವರ್ಧನೆಗೆ ಸೂಕ್ತ ಸಹಕಾರ ಮತ್ತು ಬೆಳವಣಿಗೆಗೆ ಅಮಿತ ಪ್ರೋತ್ಸಾಹವನ್ನು ನೀಡಿ, ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಹಾಗೂ ಭರವಸೆಯ ಕಲಾವಿದರಾಗಿ ಹೊರಹೊಮ್ಮಲು ಸರ್ವರೀತಿಯ ಸಮಗ್ರ ಮಾರ್ಗದರ್ಶನವನ್ನು ನೀಡುಟ್ಟ ಬಂದಿರುವುದು ಸಂಸ್ಥೆಯ ಅಗ್ಗಳಿಕೆ.
ಸೃಜನಾತ್ಮಕ ಕಲಾಶಿಕ್ಷಣದಲ್ಲಿ ಅಚಲ ನಂಬಿಕೆಯುಳ್ಳ ಅಕಾಡೆಮಿಯು ವಿದ್ಯಾರ್ಥಿಗಳಲ್ಲಿ ಚಿಂತನಶೀಲತೆಯನ್ನು ಬೆಳೆಸಲು ಅನವರತ ಶ್ರಮಿಸುತ್ತ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ದಿಸೆಯಲ್ಲಿ ಅಕಾಡೆಮಿಯು ರಾಜ್ಯಾದ್ಯಂತ, ದೇಶವ್ಯಾಪಿ ಅಧ್ಯಯನ , ಉತ್ತಮ ಶಿಕ್ಷಣ, ಅನೇಕ ಉಪಯುಕ್ತ ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆ -ಉಪನ್ಯಾಸ ಮತ್ತು ಪ್ರಸ್ತುತಿ- ಪ್ರದರ್ಶನಗಳನ್ನು ಏರ್ಪಡಿಸುತ್ತ ಬಂದಿದೆ. ಅಕಾಡೆಮಿಯ ಅನೇಕ ವಿದ್ಯಾರ್ಥಿಗಳು ಕರ್ನಾಟಕ ಸೆಕೆಂಡರಿ ಶಿಕ್ಷಣ ಮಂಡಳಿ ನಡೆಸುವ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕಗಳಿಂದ ಜಯಶೀಲರಾಗಿರುವುದು ಗರಿಮೆಯ ವಿಚಾರ.
ಡಿಸೆಂಬರ್ 24-25 ‘ನಾದಾಭಿನಯಂ’ ಸಂಗೀತ-ನೃತ್ಯೋತ್ಸವ
ಇದೇ ತಿಂಗಳ 24 ಶನಿವಾರ ಮತ್ತು 25 ಭಾನುವಾರ ಬಸವನಗುಡಿಯಲ್ಲಿರುವ ‘ಕಲಾಕ್ಷಿತಿ’ಯ ಆಡಿಟೋರಿಯಂನಲ್ಲಿ ಎರಡು ದಿನಗಳ ‘ನಾದಾಭಿನಯಂ’ ಸಂಗೀತ-ನೃತ್ಯೋತ್ಸವನ್ನು ಅಕಾಡೆಮಿ ಹಮ್ಮಿಕೊಂಡಿದೆ.
ಮೊದಲ ದಿನ 24- ಶನಿವಾರದಂದು ಸಂಜೆ 5.30 ಕ್ಕೆ ನೃತ್ಯೋತ್ಸವದ ಉದ್ಘಾಟನೆ- ಕಲಾಮಂಡಲಂ ನೃತ್ಯಗುರು ಉಷಾ ದಾತಾರ್ ಮತ್ತು ಲಿಪಿಪ್ರಾಜ್ಞೆ ಲೇಖಕಿ-ನೃತ್ಯ-ನಾಟಕ ವಿಮರ್ಶಕಿ ವೈ.ಕೆ.ಸಂಧ್ಯಾ ಶರ್ಮ. ಕು. ಸಂಸ್ಕೃತಿ ಕೇಶವನ್ ಮತ್ತು ಹಿರಿಯ ನೃತ್ಯ ಕಲಾವಿದೆ ಡಾ. ಅರ್ಚನಾ ನಾರಾಯಣ ಮೂರ್ತಿ ಚೆನ್ನೈ ಅವರಿಂದ ಭರತನಾಟ್ಯ ನೃತ್ಯ ಪ್ರಸ್ತುತಿ.
ಎರಡನೆಯ ದಿನ- ಸಂಜೆ 5.30 ಕ್ಕೆ ಶ್ರೀಮತಿ ವಿದ್ಯಾ ಬಾಲಚಂದ್ರ ಅವರಿಂದ ಭರತನಾಟ್ಯ ನೃತ್ಯ ಪ್ರದರ್ಶನ. ಅನಂತರ- ವಿ. ಹೇರಂಭ್ ಮತ್ತು ಹೇಮಂತ್ ಅವರಿಂದ ಕರ್ನಾಟಕ ಶಾಸ್ತ್ರೀಯ ಕೊಳಲುವಾದನ. ಮುಖ್ಯ ಅತಿಥಿಗಳು- ಕರ್ನಾಟಕ ಕಲಾಶ್ರೀ ಹಿರಿಯ ವೇಣುವಾದಕರು ವಿದ್ವಾನ್. ಹೆಚ್.ಎಸ್.ವೇಣುಗೋಪಾಲ್-ಗೋಕುಲಂ ಸ್ಕೂಲ್ ಆಫ್ ಮ್ಯೂಸಿಕ್- ನಿರ್ದೇಶಕರು ಮತ್ತು ಹಿರಿಯ ಮೃದಂಗ ಕಲಾವಿದರು ಟಿ.ಎನ್. ಶಶಿ ಕುಮಾರ್.
ಈ ಸುಮನೋಹರ-ಸುಶ್ರಾವ್ಯ ‘ನಾದಾಭಿನಯಂ’ ಕಾರ್ಯಕ್ರಮವನ್ನು ಆಸ್ವಾದಿಸಲು ಕಲಾರಸಿಕರೆಲ್ಲರಿಗೂ ಆದರದ ಸುಸ್ವಾಗತ.