Image default
Dance Reviews

Daasa shreshtha – Rasaanubhavada Meru

ದಾಸಶ್ರೇಷ್ಠ ಪುರಂದರ ರಸಾನುಭಾವದ ಮೇರು

‘ದಾಸರೆಂದರೆ ಪುರಂದರ ದಾಸರಯ್ಯ’ ಎಂಬ ಸುವಿಖ್ಯಾತಿ ಪಡೆದ ದಾಸಶ್ರೇಷ್ಠ ಪುರಂದರ ದಾಸರ ಪದಗಳನ್ನು ಕೇಳದವರಿಲ್ಲ, ಹಾಡದವರಿಲ್ಲ, ಅಭಿನಯಿಸದವರಿಲ್ಲ ಎನ್ನುವಂತೆ ಜಗದಗಲ ಪುರಂದರರ ಕೃತಿಗಳು ಮನೆ ಮಾತಾಗಿವೆ. ನವನವೋನ್ಮೇಷಶಾಲಿನಿಯಾಗಿ ಪ್ರಯೋಗಗೊಳ್ಳುತ್ತಿರುವ ಪುರಂದರದಾಸರ ಪದಗಳು, ಅವರ ಜೀವಿತ ಕಥನ ಎಲ್ಲ ಮಾಧ್ಯಮಗಳಲ್ಲೂ ಅಳವಡಿಕೆಯಾಗಿವೆ, ನವ ಪರಿಕಲ್ಪನೆಗಳಲ್ಲಿ ಜನಮಾನಸವನ್ನು ತಲುಪುತ್ತಿವೆ.

ಸುಮಾರು ಐದುಲಕ್ಷದವರೆಗೂ ಕೀರ್ತನೆಗಳನ್ನು ರಚಿಸಿರುವ ಅವರು, ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಅವರು ರಚಿಸದೇ ಇರುವ ವಿಷಯಗಳೇ ಇಲ್ಲ. ನಮ್ಮ ಸುತ್ತಮುತ್ತಲ ಬದುಕಿನ ಪ್ರತಿಯೊಂದು ಸಂಗತಿಗಳ ಬಗ್ಗೆಯೂ ವಸ್ತುನಿಷ್ಠವಾಗಿ, ಅರ್ಥಪೂರ್ಣವಾಗಿ, ವಿಶ್ಲೇಷಣಾತ್ಮಕವಾಗಿ ನಿರೂಪಿಸಿದ್ದಾರೆ. ಹಾಗೆಯೇ  ಲೋಕದ ಅಂಕು-ಡೊಂಕು, ಡಾಂಭಿಕತೆಗಳ ಬಗ್ಗೆ, ವಿಪರ್ಯಾಸಗಳ ಬಗ್ಗೆ ಬಹು ಮಾರ್ಮಿಕವಾಗಿ ವಿಡಂಬಿಸಿ, ಜನರ ಕಣ್ತೆರೆಸುವ ಪ್ರಯತ್ನವನ್ನು ಮಾಡಿದ್ದಾರೆ. ಅವು ಇಂದಿಗೂ ಪ್ರಸ್ತುತ ಹಾಗೂ ಸಾರ್ವಕಾಲಿಕವಾಗಿ ಉಳಿಯುವಂಥದ್ದು. ಅವರ ಸ್ವಂತ ಜೀವನವೇ ಬದುಕಿನ ತಾತ್ವಿಕ ತಿಳುವಳಿಕೆಗೊಂದು ಉತ್ತಮ ಮಾದರಿ. ಅಷ್ಟೇ ಹೃದಯಂಗಮವಾದ ಒಂದು ಕಥಾನಕವೂ ಹೌದು. ಲೌಕಿಕ ಮೋಹ-ವಿರಕ್ತಿಗಳಿಗೊಂದು ಪ್ರಾತ್ಯಕ್ಷಿಕ ನಿದರ್ಶನ.

ಇತ್ತೀಚಿಗೆ ‘ನಟನಂ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್’ ಖ್ಯಾತಿಯ ಅಂತರರಾಷ್ಟ್ರೀಯ ನೃತ್ಯಕಲಾವಿದೆ-ನಾಟ್ಯಾಚಾರ್ಯ ಡಾ. ರಕ್ಷಾ ಕಾರ್ತೀಕ್ ‘ನಯನ’ ರಂಗಮಂದಿರದಲ್ಲಿ ಶ್ರೀ ಪುರಂದರದಾಸರ ಜೀವನಾಧಾರಿತ ನೃತ್ಯರೂಪಕವನ್ನು ತಮ್ಮ ಪ್ರೌಢ ಅಭಿನಯದ ಹೃದಯಸ್ಪರ್ಶೀ ಸಾಕ್ಷಾತ್ಕಾರದಿಂದ ನೋಡುಗರಲ್ಲಿ ಸಂಚಲನವನ್ನು ಉಂಟುಮಾಡಿದರು. ದಾಸಶ್ರೇಷ್ಟ ಪುರಂದರರ ಜೀವನಚಿತ್ರ- ಕೃತಿಗಳ ಅಮೂಲ್ಯ ಕೊಡುಗೆಯನ್ನು ಸಂಸ್ಮರಣಗೊಳಿಸಿದ ಈ ಸಂದರ್ಭದಲ್ಲಿ ರಕ್ಷಾ,  ತಾವೊಬ್ಬ ಶ್ರೇಷ್ಠ ಅಭಿನೇತ್ರಿ ಎಂಬುದನ್ನು ಸಾಬೀತುಗೊಳಿಸಿದ್ದಾರೆ.

ಅವರು ಕಥೆ ಹೆಣೆಯಲು ಆರಿಸಿಕೊಂಡ ಒಂದೊಂದೂ ಪದಗಳೂ ಅಮೂಲ್ಯ ಮುತ್ತಾಗಿತ್ತೆಂದರೆ ಅತಿಶಯೋಕ್ತಿಯಲ್ಲ. ಇದರ ಹಿನ್ನಲೆಯಲ್ಲಿ ದೀರ್ಘವಾದ ಅಧ್ಯಯನ ನಡೆದಿರುವುದು ಸುವೇದ್ಯವಾಗಿತ್ತು. ಘಟನೆಯಿಂದ ಘಟನೆಗೆ ಕೋದುಕೊಂಡು ಹೋದ ಕೀರ್ತನೆಗಳು, ಸುಳಾದಿ- ಉಗಾಭೋಗಗಳು ಅತ್ಯಂತ ಸಹಜ-ಸುಂದರವಾಗಿ ಸಾಗುತ್ತ, ಪುರಂದರದಾಸರೇ ಅವತರಿಸಿ, ತಮ್ಮ ನಿಜಕಥೆಯನ್ನು ಭಾವತೀವ್ರತೆಯಿಂದ ನಿರೂಪಿಸುತ್ತ ಹೋದಂಥ  ಭಾವಪೂರ್ಣ ಅನುಭವವನ್ನು ರಕ್ಷಾ ತಮ್ಮ ಪರಕಾಯ ಪ್ರವೇಶದ ಅದ್ಭುತ ಅಭಿನಯ ಪ್ರಾವೀಣ್ಯದಿಂದ ನೋಡುಗರ ಹೃದಯಕ್ಕೆ ಮುಟ್ಟಿಸಿದರು. ಕಲಾವಿದೆಯ ಸೂಕ್ಷ್ಮನೆಲೆಯ ಅಭಿವ್ಯಕ್ತಿ, ಸ್ಥಾಯಿಭಾವದ ಸಾಂದ್ರತೆ, ಸಂಯಮಪೂರಿತ ಹದವರಿತ ಚಲನೆಗಳು, ತಾದಾತ್ಮ್ಯತೆ ಪುರಂದರದಾಸರನ್ನು ಜೀವಂತವಾಗಿ ಹಿಡಿದಿಟ್ಟಿತು.

ಸುಮಾರು ಒಂದುಗಂಟೆಯ ನೃತ್ಯರೂಪಕ. ಕಣ್ಮುಂದೆ ದಾಸರ ಪ್ರತಿ ಹೆಜ್ಜೆಯನ್ನೂ, ಘಟನಾವಳಿಗಳನ್ನೂ ಸಾವಯವವಾಗಿ ರಸಪೂರ್ಣವಾಗಿ ರಂಗದ ಮೇಲೆ ಸಾಕ್ಷಾತ್ಕರಿಸಿದ ರಕ್ಷಾ ಅವರದು ಅಪೂರ್ವಾಭಿನಯವಾದರೆ, ಹೃದಯಸ್ಪರ್ಶೀ ಗಾಯನದ ಮೂಲಕ ಪ್ರತಿ ಎದೆಗೂ ರಸಾಮೃತ ಉಣಿಸಿದ ಬಾಲಸುಬ್ರಮಣ್ಯ ಶರ್ಮರ ಸುಶ್ರಾವ್ಯ ಕಂಠಸಿರಿ, ಭಾವ ರಸಹೂರ್ಣಕ್ಕೆ ವಾದ್ಯಗಳ ಅಮೃತ ಬೆರೆಸಿದ ಶ್ರೀಹರಿ ರಂಗಸ್ವಾಮಿ ಮೃದಂಗ ಮಾಂತ್ರಿಕತೆ , ಕಿಕ್ಕೇರಿ ಜಯರಾಂ ಎರೆದ ವೇಣುವಾದನದ ತಾದಾತ್ಮ್ಯ, ವಿ. ಗೋಪಾಲರ ವೀಣಾವಾದನದ ಮಾಧುರ್ಯ, ನಾದಮಯ ಕುಂಜ-ಖಂಜೀರ ಪ್ರವೀಣ ಡಿ.ವಿ. ಪ್ರಸನ್ನ ಕುಮಾರರ ರಿಂಗಣಿಸಿದ ನಿನಾದದ ಸಾಂಗತ್ಯ, ದೇವರಾಜ ನಟುವಾಂಗ, ಒಟ್ಟಾರೆ ವಾದ್ಯಗೋಷ್ಟಿ ಮೂಡಿಸಿದ ಪರಿಣಾಮ ನಿಜಕ್ಕೂ ಇನ್ನೊಂದು ದಿವ್ಯಾನುಭವ.

ನವಕೋಟಿ ನಾರಾಯಣನೆನಿಸಿದ್ದ ಚಿನ್ನದ ವ್ಯಾಪಾರಿ ಶ್ರೀನಿವಾಸ ನಾಯಕ, ಮೂಗುತಿಯ ಪ್ರಕರಣದಿಂದ ದೈವ ಸಾಕ್ಷಾತ್ಕಾರವನ್ನು ಪಡೆದುಕೊಂಡು, ಐಹಿಕ ಬದುಕಿನ ವ್ಯಾಮೋಹವನ್ನು ತೊರೆದು ವೈರಾಗ್ಯದತ್ತ ಹೊರಳಿದ ಕಥೆ ಜನಜನಿತ. ನಾಟಕೀಯ ಘಟನೆಯ ಚೌಕಟ್ಟಿನಿಂದ ಆರಂಭವಾದ ಕಲಾವಿದೆಯ ಅಭಿನಯ, ವಿರಕ್ತ ದಾಸರ ಅಂತರಂಗವನ್ನು ಚಿತ್ರಿಸುವಾಗ ತೋರಿದ ಭಕ್ತಿಪೂರ್ಣ ತಾದಾತ್ಮ್ಯ ನೋಡುಗರ ಹೃದಯವನ್ನು ನೆನೆಸಿತು. ಕಣ್ಣು ತೆರೆಸಿದ ಹೆಂಡತಿಗೆ ಕೃತಜ್ಞತೆಯನ್ನು ಅರ್ಪಿಸಿ ದಾಸರು ಬರೆದ ‘ಆದದ್ದೆಲ ಒಳಿತೇ ಆಯಿತು…’ ಹೃದಯಸ್ಪರ್ಶೀ ಗೀತೆಗೆ ಕಲಾವಿದೆ ನೃತ್ಯವಾದ ಬಗೆ ಮನನೀಯ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಬುನಾದಿ ಹಾಕಿದ ದಾಸರು ಸಂಗೀತದ ಪ್ರಾಥಮಿಕ ಪಾಠಗಳು, ಸರಳ ವರಸೆಗಳು, ಜಂಟೀ ವರಸೆಗಳು, ಪಿಳ್ಳಾರಿ ಗೀತೆಗಳನ್ನು ಬರೆದ ಹಾಗೂ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುವ ಪ್ರಸಂಗವು  ಸೊಗಸಾಗಿ ಮೂಡಿಬಂತು.

ಮುಂದೆ ಅವರು ಕಂಡ ಅನೇಕ ದಿನನಿತ್ಯದ ಸಂಗತಿಗಳಿಗೆ ಸಮಯಸ್ಫೂರ್ತಿ ಎಂಬಂತೆ ಅರ್ಥವತ್ತಾದ ಗೀತೆಗಳು, ದೇವರನಾಮಗಳು  ಪುಂಖಾನುಪುಂಖವಾಗಿ ಸುಲಲಿತವಾಗಿ ಸರಳವಾದ ಕನ್ನಡಭಾಷೆಯಲ್ಲಿ ಸಲಿಲವಾಗಿ ಹರಿಯುತ್ತವೆ. ಒಂದೊಂದು ಹಾಡುಗಳೂ ಕರ್ಣಾನಂದಕರ. ಅನುಕ್ರಮವಾಗಿ ಸಾಗುವ ಕಥೆಗೆ ಪೂರಕ ಗೀತೆಗಳು ಹುಟ್ಟಿಕೊಳ್ಳುತ್ತ, ಅಂತ್ಯದಲ್ಲಿ ಪುರಂದರದಾಸರು ಹರಿಸಾಯುಜ್ಯವನ್ನು ಪಡೆಯುವತನಕ ಭಾವಪೂರ್ಣ ಗಾಯನಸುಧೆಯಲ್ಲಿ ಸಾಗುವ ನೃತ್ಯರೂಪಕ ಅನನ್ಯವಾಗಿ ಹೊರಹೊಮ್ಮಿತು. ‘ಗಿಳಿಯು ಪಂಜರದೊಳಿಲ್ಲ…’ ಎನ್ನುವ ಚರಮಗೀತೆಯೊಂದಿಗೆ ಪ್ರಾಣ ತ್ಯಜಿಸುವ ದಾಸರಾಗಿ ರಕ್ಷಾ ಅಭಿನಯಕ್ಕೆ ತೆರೆದುಕೊಂಡ ರೀತಿ ವಿಸ್ಮಯ ಹುಟ್ಟಿಸಿ, ನೋಡುಗರ ಕಣ್ಣಲ್ಲಿ ನೀರು ಕೆನೆಯಾಗುತ್ತದೆ. ಕಲಾವಿದೆಯ ಭಾವರಸಗಂಗೆಯ ಉತ್ತಮಿಕೆ, ಸಾಮರ್ಥ್ಯ, ಅಭಿನಯದ ಪರಿಣತಿ, ಸಹಜತೆ ಶ್ರೇಷ್ಠತಮವಾಗಿತ್ತು.

ಭಾರತೀಯ ಸಂಗೀತ- ಸಾಹಿತ್ಯಚರಿತ್ರೆಗಳಲ್ಲಿ ಅಮರವಾಗಿ ಉಳಿದಿರುವ ದಾಸಶ್ರೇಷ್ಠ ಪುರಂದರರ ಜೀವನಬಿಂದುಗಳು – ಅನುಭವಗಮ್ಯ ಗೀತೆ-ದೇವರನಾಮಗಳು ಚಿರಸ್ಮರಣೀಯ.

                    ****************************

  •   

Related posts

ಕಣ್ಮನ ತುಂಬಿದ ಪವಿತ್ರ ಪ್ರಿಯಳ ಭಾವಸ್ಫುರಣ ನೃತ್ಯ

YK Sandhya Sharma

Natanam Institute of Dance-Tyagaraja Sampoorna Ramayana

YK Sandhya Sharma

ಭಾವಪ್ರದ ಅಭಿವ್ಯಕ್ತಿಯ ಭೂಮಿಕಾ ನೃತ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.