Image default
Dance Reviews Events

Divyaabhinaya – Ramaniya Nartanada ‘Dhanya’te

ದಿವ್ಯಾಭಿನಯ- ರಮಣೀಯ ನರ್ತನದ  ‘ಧನ್ಯ’ತೆ

ಕಲಾಪೂರ್ಣ ರಂಗಸಜ್ಜಿಕೆ- ನರ್ತನಕ್ಕೆ ಹೇಳಿ ಮಾಡಿಸಿದ ಸುಂದರ ಆವರಣ, ಅಂದು ಕಲಾವಿದೆ ಧನ್ಯಳ ಲವಲವಿಕೆಯಯ ಸುಮನೋಹರ ನರ್ತನಕ್ಕೆ  ರವೀಂದ್ರ ಕಲಾಕ್ಷೇತ್ರ ಅಡುಂಬೊಲವಾಗಿತ್ತು.  `ನೃತ್ಯ ದಿಶಾ ಟ್ರಸ್ಟ್’ ನಾಟ್ಯಸಂಸ್ಥೆಯ ಸ್ಥಾಪಕ ನಿರ್ದೇಶಕಿ, ನೃತ್ಯ ಕಲಾವಿದೆ, ನೃತ್ಯ ಸಂಯೋಜಕಿ ಮತ್ತು ದಕ್ಷಗುರು ಕಲಾಭೂಷಿಣಿ ದರ್ಶಿನಿ ಮಂಜುನಾಥ್ ಅವರ ಸಮರ್ಥ ಗರಡಿಯಲ್ಲಿ ರೂಹುಗೊಂಡಿರುವ ಉದಯೋನ್ಮುಖ ಕಲಾವಿದೆ ಜೆ.ಆರ್. ಧನ್ಯ ತನ್ನ ರಂಗಪ್ರವೇಶದಲ್ಲಿ ಬಹು ಆತ್ಮವಿಶ್ವಾಸದಿಂದ ಚೇತೋಹಾರಿಯಾಗಿ ನರ್ತಿಸಿದಳು. ಈ ರಂಗಪ್ರವೇಶದ ವಿಶೇಷವೆಂದರೆ ಸಂಪೂರ್ಣ ಕನ್ನಡ ಮತ್ತು ಸಂಸ್ಕೃತ ಕೃತಿಗಳನ್ನೇ ಆಯ್ಕೆ ಮಾಡಿಕೊಂಡದ್ದು ಸ್ವಾಗತಾರ್ಹವಾಗಿತ್ತು.

ನಗುಮೊಗದಿಂದ ರಂಗವನ್ನು ಪ್ರವೇಶಿಸಿದ ಧನ್ಯ, ಶುಭಾರಂಭದ ‘ಪುಷ್ಪಾಂಜಲಿ’ಯಲ್ಲಿ ನೃತ್ತ ನಮನದಲ್ಲಿ ಎಲ್ಲ ವಾದ್ಯಗಳನ್ನೂ ಆಂಗಿಕದಲ್ಲಿ ಸಮರ್ಥವಾಗಿ ಒಡಮೂಡಿಸಿದಳು. ಗುರು-ಹಿರಿಯರು, ದೇವಾನುದೇವತೆಗಳಿಗೆ ನಮನ ಸಲ್ಲ್ಲಿಸಿ, ಅನಂತರ ಗಣೇಶಸ್ತುತಿಯನ್ನು ಶ್ರದ್ಧಾ -ಭಕ್ತಿಗಳಿಂದ ನಿರೂಪಿಸಿದಳು. ವಿನಾಯಕನ ನಾನಾ ಸ್ವರೂಪ ಮತ್ತು ಮಹಿಮೆಗಳನ್ನು ತನ್ನ ವಿಶಿಷ್ಟ ಆಂಗಿಕಾಭಿನಯದಿಂದ ಕಟ್ಟಿಕೊಟ್ಟಳು.

ಅನಂತರ- ಭಯ ಹರ-ಭವ ಹರ ಮಹಾಭೈರವ ಕಾಲಭೈರವನ ರುದ್ರ ರಮಣೀಯ ನೃತ್ಯದ ಮಜಲುಗಳನ್ನು ಧನ್ಯ,  ‘ಕಾಶಿ ಪುರಾಧಿನಾಥ ಕಾಲಭೈರವಂ ಭಜೆ..’ ಎಂಬುದಾಗಿ ಆರಾಧಿಸುತ್ತ  ತನ್ನ ಮೋಹಕ ನೃತ್ತಮಂಜರಿಗಳು, ಅನುಪಮ-ಆಕರ್ಷಕ  ಭಂಗಿಗಳ ಮೂಲಕ ಅನಾವರಣಗೊಳಿಸಿದಳು. ಅಂಗಶುದ್ಧ ನರ್ತನದ ಸೊಬಗು, ಸಲೀಸಾದ ಆಕಾಶಚಾರಿಗಳು, ಸುಂದರಾಭಿನಯ ಗಮನ ಸೆಳೆದವು. ಮುಂದೆ- ಜತಿಗಳ ಝೇಂಕಾರದ ಮಿಂಚಿನ ಸಂಚಾರದ ನೃತ್ತಾವಳಿ ಕಣ್ತುಂಬಿತು. ಲೀಲಾಜಾಲವಾದ  ಅಂಗಶುದ್ಧಿಯ ನರ್ತನಕ್ಕೆ ಗುರು ದರ್ಶಿನಿಯ ನಗುಮೊಗದ, ಉತ್ಸಾಹಪೂರ್ಣ, ಕಂಚಿನ ಕಂಠದ ಸ್ಫುಟವಾದ ನಟುವಾಂಗ ಇಂಬು ನೀಡಿತು. ಅಂತ್ಯದ ಭಂಗಿ ವಿಶೇಷವಾಗಿತ್ತು.

ಅನಂತರ- ಪ್ರಪ್ರಥಮವಾಗಿ ಅಭಿನಯವನ್ನು ಪರಿಚಯಿಸುವ ‘ಶಬ್ದಂ’-ಸಾಮಾನ್ಯವಾಗಿ ಇಷ್ಟದೈವದ ಹೊಗಳಿಕೆ- ಸ್ತುತಿ ಅಥವಾ ಆಳುವ ಅರಸ ಮಹಾರಾಜರ ಗುಣಗಾನವನ್ನು ಮಾಡುವ ಕೃತಿಯೇ ಶಬ್ದಂ. ಧನ್ಯ ಅಂದು ಆರಾಧನೆ ಸಲ್ಲಿಸಿದ್ದು ಚೆಲುವ ಚೆನ್ನಿಗ ಸುಬ್ರಹ್ಮಣ್ಯಸ್ವಾಮಿಗೆ . ಪ್ರಸ್ತುತಿಯ ಆರಂಭದಲ್ಲಿ ಷಣ್ಮುಖದೇವನ ಪ್ರಿಯವಾಹನ ಮಯೂರದ ನವಿಲುಗರಿಗಳನ್ನು ಹಿಂಬದಿಯಿಂದ ಗರಿಬಿಚ್ಚಿ ನಲಿದಂತೆ ಅಂದವಾಗಿ ಕಾಣಿಸಿದ್ದು ಉತ್ತಮ ಮುನ್ನೋಟ ನೀಡಿತು. ಜಂಬೂರು ಸಾವಿತ್ರಮ್ಮನವರ ರಚನೆ ‘ಪಾಲಿಸು ಜಗದೀಶನೇ’ ಎಂಬ ಹೃದ್ಯವಾದ ಕೃತಿಯನ್ನು ಕಲಾವಿದೆ ಬಹು ಮೋಹಕವಾಗಿ, ಅಷ್ಟೇ ಪರಿಣಾಮಕಾರಿಯಾಗಿ ನಿರೂಪಿಸಿದಳು.

ಪ್ರಸ್ತುತಿಯ ಹೃದಯ ಭಾಗ –‘’ವರ್ಣ’’ ನಿರೂಪಿಸಲು ಕಲಾವಿದರಿಗೆ ಸಾಕಷ್ಟು ನೆನಪಿನ ಶಕ್ತಿ, ತಾಳ-ಲಯ ಜ್ಞಾನಗಳು ಅತ್ಯಾವಶ್ಯ. ಕ್ಲಿಷ್ಟ ಜತಿಗಳ, ಅಭಿನಯ ಪ್ರಧಾನವಾದ ವರ್ಣವನ್ನು ನಿಭಾಯಿಸುವುದು ಕಲಾವಿದರಿಗೆ ಸವಾಲೇ ಸರಿ. ಈ ಪರೀಕ್ಷೆಯಲ್ಲಿ ಸುಲಭವಾಗಿ ಜಯಶಾಲಿಯಾದ ಧನ್ಯ ಉತ್ತಮ ಕಲಾವಿದೆಯಾಗಿ ಹೊರಹೊಮ್ಮಿದಳು.  ಅವಳು ಅಂದು ಅಭಿನಯಿಸಿದ ಪದವರ್ಣ-   ‘’ಶ್ರೀಕೃಷ್ಣ ಕಮಲಾನಾಥೋ ವಾಸುದೇವ ಸನಾತನಃ…’  ಅತ್ಯಂತ ಜನಪ್ರಿಯ, ಅಭಿನಯಕ್ಕೆ ವಿಪುಲ ಅವಕಾಶವಿರುವ ಭಕ್ತಿಪ್ರಧಾನ ಕೃತಿ. ಸುಲಲಿತವಾಗಿ ಕ್ಲಿಷ್ಟಜತಿಗಳನ್ನು ನಿರ್ವಹಿಸಿದ ಧನ್ಯ, ಆತ್ಮವಿಶ್ವಾಸದ ಆಂಗಿಕಾಭಿನಯ, ಮನೋಹರ ಅಭಿನಯಗಳಿಂದ, ಅನೇಕ ಸಂಚಾರಿ ಕಥಾನಕಗಳಿಂದ ಕೂಡಿದ ಕೃಷ್ಣನ ಚರಿತೆಯನ್ನು ಮನಮುಟ್ಟುವಂತೆ ಚಿತ್ರಿಸಿದಳು.

ಭಾರತೀ ವೇಣುಗೋಪಾಲರ ಭಾವಪೂರ್ಣ ಗಾಯನ, ಮಧುಸೂದನರ ವಯೊಲಿನ್ ವಾದನದ ಪೂರಕ ಸಾಂಗತ್ಯದಿಂದ ಕಲಾವಿದೆ ಪರಿಣಾಮಕಾರಿಯಾಗಿ ಸೆರೆಮನೆಯಲ್ಲಿ ಕೃಷ್ಣ ಜನನದಿಂದ ಹಿಡಿದು, ಗೋಕುಲದಲ್ಲಿ ಬಾಲ್ಯ, ಪೂತನಿ ಪ್ರಸಂಗ, ಬಾಲಕೃಷ್ಣನ ಗೋವರ್ಧನ ಗಿರಿ, ಕಾಳಿಂಗ ಮರ್ಧನ ಮುಂತಾದ ಸಾಹಸ ಪ್ರಸಂಗಗಳು, ವಿಶ್ವರೂಪ-ಗೀತೋಪದೇಶದ ನಾಟಕೀಯ ದೃಶ್ಯಗಳ ನಿರ್ಮಾಣದವರೆಗೂ ಪ್ರತಿಯೊಂದು ಘಟನೆಗಳನ್ನು, ಸುಂದರ ದಶಾವತಾರದ ರಮ್ಯನೋಟ ನೀಡಿ, ಅತ್ಯಂತ ಸೂಕ್ಷ್ಮಾಭಿನಯದ ಸೊಗಸಿನಿಂದ ಅಭಿವ್ಯಕ್ತಿಸಿದಳು. ದರ್ಶಿನಿ ಅವರ ಭೋರ್ಗರೆದ ನಟುವಾಂಗಕ್ಕೆ ಧನ್ಯಳದು ಓತಪ್ರೋತ ನೃತ್ತಗಳ ಧಾರೆ. ಕಲಾವಿದೆಯ ಬತ್ತದ ಉತ್ಸಾಹ, ಕಸುವು, ರಂಗಾಕ್ರಮಣದ ಸೊಗಸು ಮನಮುಟ್ಟಿತು.

ಉತ್ತರಾರ್ಧದಲ್ಲಿ ಪ್ರಸ್ತುತವಾದ ನವರಸಗಳ ಅಭಿನಯ ಕಲಾವಿದೆಯ ಅಭಿನಯ ಪರಿಣತಿಗೆ ಕನ್ನಡಿ ಹಿಡಿಯಿತು. ಪ್ರತಿರಸಗಳ ಅಭಿವ್ಯಕ್ತಿಯನ್ನೂ ಒಂದೊಂದು ಸೂಕ್ತ ಸಂಚಾರಿಗಳ ಮೂಲಕ ನಿರೂಪಿಸಿದಳು. ಶ್ರೀ ರಘುರಾಮನ ಸ್ತುತಿ ‘ ರಾಮನ ನೆನೆ ಮನವೇ’ ಭಕ್ತಿಪೂರಿತವಾಗಿತ್ತು. ಮುಂದೆ- ‘ಏನೀ ಮಹಾನಂದವೇ..’ – ಡಿವಿಜಿ ಅಂತಃಪುರ ಗೀತೆಗಳ ಸಾಕ್ಷಾತ್ಕಾರದಲ್ಲಿ ಶಿಲೆ ಕಲೆಯಾಗಿ ಅರಳಿ, ಶಿಲ್ಪವಾಗಿ ಜೀವ ತಳೆದು ನರ್ತಿಸಿದ ಪರಿಕಲ್ಪನೆಯಲ್ಲಿ ಧನ್ಯ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಮಹದಾನಂದದಿಂದ ನರ್ತಿಸಿದಳು. ಪ್ರದರ್ಶಿಸಿದ ಅನುಪಮ ಭಂಗಿಗಳು ಮನೋಜ್ಞವಾಗಿದ್ದವು. ಮಿಂಚಿನ ಸಂಚಾರದ ಆಹ್ಲಾದಕರ ‘ತಿಲ್ಲಾನ’ದೊಂದಿಗೆ ಕಲಾವಿದೆಯ ಸೊಗಸಾದ ಪ್ರಸ್ತುತಿ ಸಂಪನ್ನವಾಯಿತು. ನೃತ್ತಗಳ ರಸಧಾರೆಯ ತನ್ನ ದಿವ್ಯ ನರ್ತನದಲ್ಲಿ ಧನ್ಯ ನೋಡುಗರನ್ನು ಮೀಯಿಸಿದಳು.

                                  ********************  

Related posts

ಉದಯೋನ್ಮುಖ ಉತ್ಸಾಹೀ ಪ್ರತಿಭೆಗಳ ಗೆಜ್ಜೆನಾದ

YK Sandhya Sharma

ಭಾವಪ್ರದ ಅಭಿವ್ಯಕ್ತಿಯ ಭೂಮಿಕಾ ನೃತ್ಯ

YK Sandhya Sharma

ಮನೋಜ್ಞ ಅಭಿನಯದ ‘ಅನನ್ಯ’ ನೃತ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.