Image default
Dancer Profile

Nrutyalokada Rasarushi Prof. M.R. Krishna Murthy

ನೃತ್ಯಲೋಕದ ರಸಋಷಿ ಪ್ರೊ. ಎಂ.ಆರ್. ಕೃಷ್ಣಮೂರ್ತಿ

ನಾಟ್ಯರಂಗದ ದಿಗ್ಗಜ- ಅತ್ಯಂತ ಹಿರಿಯ ನೃತ್ಯಗುರು ಶ್ರೀ ಎಂ.ಆರ್.ಕೃಷ್ಣಮೂರ್ತಿ ಅವರ ಹೆಸರನ್ನು ಕೇಳದವರೇ ಇಲ್ಲ. ಅವರ ಹಿರಿದಾದ ಸಾಧನೆ, ನಡೆದು ಬಂದ ಹಾದಿ, ಹಾಕಿಕೊಟ್ಟ ಮೇಲ್ಪಂಕ್ತಿ ಮುಂದಿನ ಯುವ ನೃತ್ಯಜನಾಂಗಕ್ಕೆ ಉತ್ತಮ ಮಾದರಿ, ಪರಿಪೂರ್ಣ ವ್ಯಕ್ತಿತ್ವದ ದ್ಯೋತಕ. ಉತ್ತಮ ನೃತ್ಯಸಾಧಕನೊಬ್ಬನ ಜೀವನ-ದಿನಚರಿ, ನಡೆ ಹೇಗಿರಬೇಕೆಂಬುದಕ್ಕೆ ಅವರು ನಿದರ್ಶನವೆಂದರೂ ಅತಿಶಯೋಕ್ತಿಯಲ್ಲ. ಅವರು ಬೆಳೆದು ಬಂದ ದಿವ್ಯಹಾದಿ ಅನುಪಮ. ಹಾಕಿಕೊಟ್ಟಿರುವ ಶಿಸ್ತಿನ ಜೀವನದ ಅಡಿಪಾಯ ಅವರ ಶಿಷ್ಯರಿಗೆ ಎಂದೂ ಚಿರಸ್ಮರಣೀಯ.

ಬೆಂಗಳೂರಿನ ಬಸವನಗುಡಿಯ ಅವರ ಕಲಾದೇಗುಲ  ಒಳಪ್ರವೇಶಿಸಿದವರಿಗೊಂದು ಅನನ್ಯ ಅನುಭವ. ‘ಕೈ ಮುಗಿದು ಒಳಗೆ ಬಾ-ಇದು ಕಲಾಕ್ಷಿತಿ’ ಎಂಬ ದೈವೀಕ ಭಾವ ಹುಟ್ಟು ಹಾಕುವ ಪವಿತ್ರ ಪರಿಸರ. ವಿಶಾಲವಾದ ಪ್ರಾಂಗಣದಲ್ಲಿ ನಗರದ ಗೌಜು-ಗದ್ದಲವಿರದ ನಿರ್ಮಲ ಪ್ರಶಾಂತ ವಾತಾವರಣ. ಸುತ್ತ ಕಣ್ತಂಪಾಗಿಸುವ ಮುದವಾದ ಹಸಿರು ಗಿಡ-ಮರ-ಬಳ್ಳಿಗಳು. ನಡುವೆ ಹಿರೇಕರ ಕಾಲದ ಬಹು ಹಳೆಯ ಭವ್ಯ ಬಂಗಲೆ. ಅನೇಕ ಸಾರ್ಥಕ ಜೀವ-ಚೇತನಗಳು ಬಾಳಿ ಬೆಳಗಿದ ತಾಣ. ಅದೇ ಎಂಭತ್ತಾರರ ಅನುಭವೀ ನಾಟ್ಯಕೋವಿದ ರಸಋಷಿ ಕೃಷ್ಣಮೂರ್ತಿ ಅವರು ಸರಳವಾಗಿ ಜೀವನ ನಡೆಸುತ್ತಿರುವ ನಿವಾಸ ಹಾಗೂ ನಾಟ್ಯರಂಗದ ನೆಲೆವೀಡು.

ಮನೆಯ ಸುತ್ತ ನಳನಳಿಸುವ ಹಸಿರು ರಾಜಿ, ಉತ್ಸಾಹ ಚಿಮ್ಮಿಸುವ ಬಣ್ಣ ಬಣ್ಣದ ಅರಳಿ ನಿಂತ ಆಕರ್ಷಕ ಪುಷ್ಪಗಳು, ಪುಟ್ಟ ದೇವಾಲಯಗಳಂಥ ವಿವಿಧ ಮೂರ್ತಿಗಳ ಪುಟ್ಟ ಪುಟ್ಟ ಗುಡಿಗಳು, ನೆಲದ ಮೇಲೆ, ಗೋಡೆಗಳಲ್ಲಿ ಕಲಾತ್ಮಕ ಚಿತ್ತ-ಚಿತ್ತಾರಗಳು, ರಂಗೋಲಿ ಚಿತ್ರಗಳು. ಗಂಟೆ-ಗೋಪುರಗಳು. ಮನೆಯ ಪಾರ್ಶ್ವದಿಂದ ಹಾದು ಹೋದರೆ ಹಿತ್ತಲಲ್ಲಿ ಹರವಾದ ರಂಗಸಜ್ಜಿಕೆಯ ವೇದಿಕೆ- ನೂರಾರು ಜನ ಒಟ್ಟಿಗೆ ಕುಳಿತು ವೀಕ್ಷಿಸಬಹುದಾದಂಥ ವಿಶಾಲವಾದ ರಂಗಮಂದಿರ. ಪ್ರತಿದಿನ ಗೆಜ್ಜೆ ಸದ್ದುಗಳು ನಿನದಿಸುವ ತಾಣದಲ್ಲಿ ನೃತ್ಯ ತರಬೇತಿ-ತಾಲೀಮು ನಿರಂತರ. ಪ್ರತಿದಿನ ನೃತ್ಯಾಕಾಂಕ್ಷಿಗಳಿಗೆ ತಾಳ-ಲಯಗಳೊಂದಿಗೆ ಗಾಯನ-ಪಕ್ಕವಾದ್ಯದೊಂದಿಗೆ ನರ್ತಿಸುವ ನಲಿವಿನ ವಾತಾವರಣ. ಹಿರಿಯ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯೊಂದಿಗೆ ಮಾರ್ಗದರ್ಶನ ಮಾಡುತ್ತಿದ್ದರೆ, ನಟುವಾಂಗ ಮಾಡುತ್ತ ತಪ್ಪದೆ ಅವರೆದುರಿಗೆ ಕುಳಿತಿರುವ ಮಹಾಗುರು ಎಷ್ಟೋ ಬಾರಿ ತಾವೇ ಮೇಲೆದ್ದು ಆಂಗಿಕಾಭಿನಯ- ಅಡವುಗಳನ್ನು ಹೇಳಿಕೊಡುವ, ತಿದ್ದುವ ಪರಿಪಾಠ. ಇವೆಲ್ಲ ಇಲ್ಲಿ ನೋಡಲು ಸಿಗುವ ಅಪರೂಪದ ದೃಶ್ಯಗಳು!!!…ಬೆಳಗಿನಿಂದ ರಾತ್ರಿಯವರೆಗೂ ಈ ಹಿರಿಯ ಗುರುಗಳು ತಮ್ಮ ವಯಸ್ಸನ್ನೂ ಮರೆತು ನಿಗದಿತವಾಗಿ ತಾಲೀಮಿನ ಜಾಗದಲ್ಲಿ ಉಪಸ್ಥಿತರಿರುತ್ತಾರೆಂದರೆ ನಿಜಕ್ಕೂ ಅವರಿಗೆ ಗೌರವಪೂರ್ವಕ ಪ್ರಣಾಮಗಳು.  

ಹಿರಿಯ ಚೇತನ ‘ಕಿಟ್ಟು ಸಾರ್’ ಎಂದೇ ಶಿಷ್ಯವೃಂದದಲ್ಲಿ ಜನಪ್ರಿಯರಾಗಿರುವ ಏಳು ದಶಕಗಳ ನಾಟ್ಯಸಾಧಕ ಯಾವ ಹಮ್ಮು ಬಿಮ್ಮು ಇಲ್ಲದೆ ಸರಳವಾಗಿ ಮನಬಿಚ್ಚಿ ಮಾತನಾಡುವ ವೈಖರಿ ಕಂಡಾಗ ಯಾರಿಗಾದರೂ ಅಚ್ಚರಿಯಾದೀತು. ‘ತುಂಬಿದ ಕೊಡ ತುಳುಕದು’- ಎಂಬ ಅನುಭವ ಅವರೊಡನೆ ಮುಖಾಮುಖಿ ಮಾತಿಗೆ ಕುಳಿತಾಗ.

ಅಂದಿನ ಮದರಾಸಿನ ‘ಕಲಾಕ್ಷೇತ್ರ’ದ ಖ್ಯಾತಿ ಬಲ್ಲವರು, ಇಂದು ‘ಮಿನಿ ಕಲಾಕ್ಷೇತ್ರ’ದಂತಿರುವ ‘ಕಲಾಕ್ಷಿತಿ’ಯ ಹಾಗೂ ವಿಶ್ವಪ್ರಸಿದ್ಧ ನಾಟ್ಯಗುರು ರುಕ್ಮಿಣೀದೇವಿ ಅರುಂಡೇಲ್ ಪ್ರಿಯಶಿಷ್ಯ, ಅವರ ಮಾನಸ ಪುತ್ರನಂತಿರುವ ‘ಕಿಟ್ಟು ಸರ್’ ಕಳೆದ ಮೂರು ದಶಕಗಳಿಂದ ಸಾವಿರಾರು ಶಿಷ್ಯರನ್ನು ಉತ್ತಮ ಅಡಿಪಾಯ ಹಾಕಿ ಗಟ್ಟಿ ವ್ಯಕ್ತಿತ್ವ ರೂಪಿಸಿ ಅವರನ್ನು ಅಪ್ಪಟ ಪಂದನಲ್ಲೂರು ಶೈಲಿಯ ನೃತ್ಯ ಕಲಾವಿದರನ್ನಾಗಿ ರೂಪಿಸುತ್ತಿದ್ದಾರೆಂದರೆ ಉತ್ಪ್ರೇಕ್ಷೆಯಲ್ಲ. ಇಲ್ಲಿ ಮದರಾಸಿನ ಆ ಕಲಾಕ್ಷೇತ್ರದ ವಾತಾವರಣವೇ ಬಿಂಬಿತವಾಗಿಸುವಲ್ಲಿ ಕಿಟ್ಟು ಸರ್ ಯಶಸ್ವಿಯಾಗಿದ್ದಾರೆ.

ಶಿಸ್ತಿನ ಜೀವನಕ್ಕೆ ಎರಕ ಹುಯ್ಯುವ ಇಲ್ಲಿನ ನಾಟ್ಯ ಕಲಿಕೆಯ ಪದ್ಧತಿ ವಿಶಿಷ್ಟ. ಕೇವಲ ನೃತ್ಯ ಕಲಿಸುವುದಷ್ಟೇ ಇಲ್ಲಿನ ಪಠ್ಯಕ್ರಮವಲ್ಲ. ನೃತ್ಯಾಕಾಂಕ್ಷಿಗಳ ಸರ್ವಾಂಗೀಣ ಬೆಳವಣಿಗೆ ಕಲಾಕ್ಷಿತಿಯ ಗುರಿ. ಪರಿಪೂರ್ಣ ವ್ಯಕ್ತಿತ್ವ ರೂಪಿಸುವತ್ತ ಆದ್ಯತೆ. ಇಲ್ಲಿನ ಬೋಧನಾಕ್ರಮವೇ ವಿಭಿನ್ನ. ಪ್ರತಿಯೊಬ್ಬ ವಿದ್ಯಾರ್ಥಿಯೂ ತರಗತಿಗೆ ಬಂದೊಡನೆ ಶ್ಲೋಕಗಳ ಪಠಣ ಕಡ್ಡಾಯ. ಉಚ್ಚಾರಣೆ, ಧ್ವನಿ ಏರಿಳಿತ, ವ್ಯಾಕರಣಗಳ ಬಗ್ಗೆ ಗಮನ ಕೊಡುವ ಇದು ಸನಾತನ ಸಂಸ್ಕೃತಿಯ ಜ್ಞಾನಾರ್ಜನೆಯ ಭಾಗವೂ ಹೌದು. ತಾಳ-ಲಯಜ್ಞಾನಗಳಿಗಾಗಿ ಸಂಗೀತವನ್ನು ಕನಿಷ್ಠ ಆರು ವರ್ಷಗಳು, ಸರಿಯಾದ ಕ್ರಮದಲ್ಲಿ ಕನಿಷ್ಠ 2 ವರ್ಷಗಳು ಅಡವುಗಳನ್ನು ಕರಗತ ಮಾಡಿಕೊಳ್ಳಬೇಕಾದ್ದು ಇಲ್ಲಿನ ಸಂಪ್ರದಾಯ. ಹಾಗೆಯೇ ಸತತ ಅಭ್ಯಾಸಕ್ರಮದ ಮೂಲಕ ನೃತ್ಯವನ್ನು ಜೊತೆಯಲ್ಲಿ ಪ್ರಸಾಧನ ಕಲೆಯನ್ನು, ನಟುವಾಂಗವನ್ನೂ ಕಲಿಸಲಾಗುವುದು. ಜೊತೆಗೆ ಅವುಗಳ ಪಠ್ಯವನ್ನೂ ಹೇಳಿಕೊಡಲಾಗುವುದು. ವರ್ಷಪೂರ್ತಿ ಇವುಗಳಿಗೆ ಪೂರಕವಾಗಿ ವಿವಿಧ ಕಾರ್ಯಾಗಾರಗಳು, ವಿಚಾರ ಸಂಕಿರಣ-ವಿಶೇಷ ಉಪನ್ಯಾಸಗಳನ್ನೂ ಆಯೋಜಿಸುವ ಪರಿಪಾಠವಿದೆ. ಈ ಎಲ್ಲ ಅಂಶಗಳಿಂದ ‘ಕಲಾಕ್ಷಿತಿ’ ಇನ್ನಿತರ ನೃತ್ಯಶಾಲೆಗಳಿಗಿಂತ ವಿಶಿಷ್ಟ ನೆಲೆಯಲ್ಲಿ ನಿಲ್ಲುತ್ತದೆ.

ಕಲಾಕ್ಷಿತಿಯ ವಿಶೇಷ ಪರಿಕಲ್ಪನೆಯನ್ನು ಸಾಕಾರಗೊಳಿಸಿರುವ ಕೃಷ್ಣಮೂರ್ತಿ ಅವರಿಗೆ ಅಂಥ ಆಳವಾದ ಭದ್ರ ಅಡಿಪಾಯ, ವಿದ್ಯಾರ್ಜನೆ ದೊರೆತದ್ದರ ಹಿನ್ನಲೆಯಲ್ಲಿ ಒಂದು ರೋಚಕ ಕಥೆಯಿದೆ. ತಂದೆ ರಾಜಾರಾವ್-ತಾಯಿ ಸೇತುಬಾಯಿ, ತುಂಬು ಕುಟುಂಬ. ಬಾಲ್ಯದಿಂದಲೂ ಕಿಟ್ಟು ಅವರಿಗೆ ಸಂಗೀತ-ನೃತ್ಯ ಮುಂತಾದ ಲಲಿತಕಲೆಗಳಲ್ಲಿ ಒಲವು. ಮನೆಯ ಹತ್ತಿರವೇ ಇದ್ದ ಖ್ಯಾತ ಕಥಕ್ ನೃತ್ಯಗುರು ಮಾಯಾರಾವ್ ಅವರ ಮನೆಗೆ ಹೋಗುತ್ತಾ, ಅಲ್ಲಿ ನಡೆಯುತ್ತಿದ್ದ ನೃತ್ಯಾಭ್ಯಾಸ ನೋಡುತ್ತ ಮೊದಲ ಹೆಜ್ಜೆಗಳನ್ನು ಹಾಕಿದ್ದು ಕಥಕ್ ನೃತ್ಯಶೈಲಿಯಲ್ಲೇ.  ಮಾಯಾ ರಾವ್ ಅವರಲ್ಲಿ ಕಥಕ್ ನೃತ್ಯದ ಪ್ರಾರಂಭಿಕ ಅಭ್ಯಾಸ ಶುರುವಾಯಿತು. ಆದರೂ ತರುಣದಲ್ಲೇ ಕೃಷ್ಣಮೂರ್ತಿಗೆ ಭರತನಾಟ್ಯ ನೃತ್ಯ ಕಲಿಯುವಾಸೆ ಚಿಗಿಯಿತಂತೆ, ಅದನ್ನು ಮನೆಯಲ್ಲಿ ಏಕಲವ್ಯನಂತೆ ಅಭ್ಯಾಸ ಮಾಡುತ್ತಿದ್ದರಂತೆ ಕೂಡ. ಕ್ರಮೇಣ ಕಲಿಯುವ ಅಭೀಪ್ಸೆ ಬಲಿಯಿತು. ಆಚಾರ್ಯ ಪಾಠಶಾಲೆಯಲ್ಲಿ ಇಂಟರ್  ಮೀಡಿಯೇಟ್ ಶಿಕ್ಷಣ ಮುಗಿಯುತ್ತಿದ್ದಂತೆ ತಂದೆ ರಾಜಾರಾಯರು ಮಗನ ಅತ್ಯಾಸಕ್ತಿಯನ್ನು ಗಮನಿಸಿ, ಆ ಕಾಲದ ಖ್ಯಾತ ನಾಟ್ಯದಂಪತಿಗಳಾದ ಪ್ರೊ. ಯು.ಎಸ್.ಕೃಷ್ಣರಾವ್ ಹಾಗೂ ಚಂದ್ರಭಾಗಾ ದೇವಿ ಅವರ ಬಳಿ ಕರೆದೊಯ್ದರಂತೆ. ಆಗವರು ಹದಿನಾರರ ಯುವಕ ಕೃಷ್ಣಮೂರ್ತಿಯನ್ನು ಸೀದಾ ನೃತ್ಯ ಗಂಗೋತ್ರಿ ಎನಿಸಿದ್ದ ಮದರಾಸಿನ ರುಕ್ಮಿಣೀದೇವಿ  ಅರುಂಡೇಲರ ‘ಕಲಾಕ್ಷೇತ್ರ’ಕ್ಕೆ ಕಳಿಸಿದರು. ಅವರಿಗಾಗಲೇ ಈ ಹುಡುಗನಲ್ಲಿ ಹುದುಗಿದ್ದ  ನಾಟ್ಯ ತೇಜಸ್ಸು ಗೋಚರಿಸಿರಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಯಾದ, ಭವಿಷ್ಯದ ಭರತನಾಟ್ಯದ ಪಂದನಲ್ಲೂರು ಬಾನಿಯ ವಕ್ತಾರನನ್ನು ಸರಿಯಾದ ಜಾಗಕ್ಕೇ ಸೇರಿಸಿದ ಯಶಸ್ಸು ಆ ನೃತ್ಯದಂಪತಿಗಳಿಗೆ ಸಲ್ಲಬೇಕು.

ಮದರಾಸು-ಕಲಾಕ್ಷೇತ್ರ ಹೊಸಜಾಗ-ಹೊಸ ಪರಿಸರ- ಭಾಷೆ-ಸಂಸ್ಕೃತಿ-ಊಟ-ತಿಂಡಿ ಎಲ್ಲವೂ ಭಿನ್ನ. ಮನೆಯಲ್ಲಿ ಸುಕುಮಾರನಂತೆ ಬೆಳೆದಿದ್ದ ಹುಡುಗನಿಗೆ ಗುರುಕುಲದ ಶಿಸ್ತುಬದ್ಧ ಜೀವನ ಮೊದಲಿಗೆ ಕಠಿಣವೆನಿಸಿತು. ಪ್ರಾರಂಭದ ದಿಗಿಲು ಬರುಬರುತ್ತಾ ದೂರಾಗಿ, ತಾಯಮಮತೆಯ ರುಕ್ಮಿಣಿದೇವಿ ಅವರ ಸಾನಿಧ್ಯದಲ್ಲಿ ನೆಮ್ಮದಿ-ಆತ್ಮವಿಶ್ವಾಸ ನೆಲೆಯೂರಿತು. ಎಲ್ಲರ ಬಾಯಲ್ಲಿ ‘ಅತ್ತೆ’ ಎಂದು ಕರೆಸಿಕೊಳ್ಳುತ್ತಿದ್ದ ಆಕೆ ಇವರಿಗೂ ಪ್ರೀತಿಯ ಅತ್ತೆಯಾದರು. ವಿಶೇಷ ಆಸ್ಥೆಯಿಂದ ಇವರನ್ನು ನೋಡಿಕೊಳ್ಳುತ್ತಿದ್ದ ‘ಅತ್ತೆ’ ಇಂದೂ ಅವರ ಸ್ಮೃತಿಪಟಲದಲ್ಲಿ ಅಮರ.

ಅಲ್ಲಿ ಕೃಷ್ಣಮೂರ್ತಿಗೆ ಮೊದಲವರ್ಷ ಕಲಿಸಿದ್ದು ‘ಕಥಕ್ಕಳಿ’ ನೃತ್ಯವನ್ನು.!!!…ಅಲ್ಲಿ ಇವರಂತೆ ಹಲವು ಪುರುಷ ಅಭ್ಯಾಸಿಗಳಿದ್ದರು. ಭರತನಾಟ್ಯದ ಬಗ್ಗೆ ಕನವರಿಸುತ್ತಿದ ಹುಡುಗನಿಗೆ ಅಚ್ಚರಿ ಮೂಡಿತಾದರೂ ಆಗ ಕಥಕ್ಕಳಿಯ ಪ್ರಾಶಸ್ತ್ಯ ಅರಿವಾಗಲಿಲ್ಲ. ವಿಧೇಯ ವಿದ್ಯಾರ್ಥಿಗೆ ಆಯ್ಕೆಯಿರಲಿಲ್ಲ. ನಿಷ್ಠೆಯ ಸ್ವಭಾವದ ಕೃಷ್ಣಮೂರ್ತಿ ಚಂದೂ ಫಣಿಕ್ಕರ್ ಅವರ ಮಾರ್ಗದರ್ಶನದಲ್ಲಿ ಬದ್ಧತೆಯಿಂದ ಕಥಕ್ಕಳಿ ನೃತ್ಯ ಕಲಿತು ಪ್ರದರ್ಶನಗಳನ್ನು ನೀಡಲಾರಂಭಿಸಿದ ಮೇಲೆಯೇ ಅವರಿಗೆ ‘ಕಥಕ್ಕಳಿ’ಯ ಪ್ರಾಮುಖ್ಯ ಅರಿವಾದದ್ದು. ಪ್ರಾರಂಭಿಕವಾಗಿ ‘ಕಥಕ್ಕಳಿ’ ಕಲಿಯುವ ಅವಶ್ಯಕತೆ ಕೂಡಲೇ ಮನಗಂಡರು. ಪಾತ್ರಗಳ ಚಿತ್ರಣಕ್ಕೆ ಹೇಳಿ ಮಾಡಿಸಿದಂಥ, ಮುಖಭಾವಗಳನ್ನು ಸಮರ್ಪಕವಾಗಿ , ನವರಸಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಲು ಸಹಕಾರಿಯಾದ ಈ ಮಾಧ್ಯಮದ ಬಗ್ಗೆ ಅವರಲ್ಲಿ ಇಂದಿಗೂ ಅಪಾರ ಗೌರವವಿದೆ.

ಮುಂದಿನ ವರ್ಷ ಅವರಿಗೆ ಭರತನಾಟ್ಯ ಕಲಿಯುವ ಅವಕಾಶ ದೊರೆಯಿತು. ಕಲಾಕ್ಷೇತ್ರ ನೃತ್ಯದಿಗ್ಗಜರಾದ ಎನ್.ಎಸ್.ಜಯಲಕ್ಷ್ಮೀ, ಪುಷ್ಪಾಶಂಕರ್, ವಸಂತಾ ವೇದಾಂ, ಅಡಿಯಾರ್ ಲಕ್ಷ್ಮಣ್ ಮತ್ತು ಶಾರದಾ ಹಾಫ್ಮನ್ ಮುಂತಾದವರ ನುರಿತ ಗರಡಿಯಲ್ಲಿ ಹಗಲಿರುಳೂ ಪರಿಶ್ರಮಿಸಿ ವಿದ್ಯಾರ್ಜಿಸಿ, ಭರತನಾಟ್ಯ ಶೈಲಿಯಲ್ಲಿ ಪಳಗಿದರು. ಅವರ ಖಚಿತವಾದ ಪರಿಪೂರ್ಣ ನೃತ್ತಗಳನ್ನು ‘ಅತ್ತೆ’ಯೂ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದು ಅವರ ಧನ್ಯತೆಯ ಕ್ಷಣ. ಸದಾ ಪರಿಪೂರ್ಣತೆಗಾಗಿ ತುಡಿಯುತ್ತಿದ್ದ ಗುರು ರುಕ್ಮಿಣಿದೇವಿಯವರು ಯಾರೇ ತಪ್ಪು ಮಾಡಲಿ ಪ್ರತಿ ಹಂತದಲ್ಲೂ ಅವರನ್ನು ತಿದ್ದಿ ತೀಡಿ, ಸರಿಯಾಗಿ ಮಾಡುವವರೆಗೂ ಬಿಡುತ್ತಿರಲಿಲ್ಲ.

 ಕಲಾಕ್ಷೇತ್ರ ಕೇವಲ ನೃತ್ಯ ಕಲಿಕೆಯ ತಾಣವಾಗಿರಲಿಲ್ಲ. ಅಲ್ಲಿ ಸಂಗೀತ, ವೀಣೆ ಮುಂತಾದ ಎಲ್ಲ ವಾದ್ಯಗಳೂ, ಚಿತ್ರಕಲೆ, ಪೇಯಿಂಟಿಂಗ್, ಕಲಂಕಾರಿ ಮುಂತಾದ ಎಲ್ಲ ಕರಕುಶಲ ವಿದ್ಯೆಗಳನ್ನೂ ಹೇಳಿಕೊಡಲಾಗುತ್ತಿತ್ತು. ಆದ್ದರಿಂದ ಇಲ್ಲಿಗೆ ಬಂದವರಿಗೆ ಸಕಲ ಕಲೆಗಳ ಪರಿಚಯ, ತರಬೇತಿ ದೊರೆಯುತ್ತಿತ್ತು.

 ಪದಂ ಮತ್ತು ಜಾವಳಿಗಳ ಜೀವಂತ ಭಂಡಾರವೆನಿಸಿದ್ದ ಅಂದಿನ ಖ್ಯಾತ ನೃತ್ಯ ಕಲಾವಿದೆ ಮೈಲಾಪುರ ಗೌರಿ ಅಮ್ಮಾಳರಲ್ಲಿ ಸಾಂಪ್ರದಾಯಕ ನೃತ್ಯಾಭಿನಯವನ್ನೂ ಕರಗತ ಮಾಡಿಕೊಂಡರು ಕೃಷ್ಣಮೂರ್ತಿ. ಕಲಿಯಲು ವಿಪುಲ ಅವಕಾಶ ಆ ಗುರುಕುಲದಲ್ಲಿ. ಪರಿಣತ ಕಲಾವಿದರ ತಂಡವೇ ಅಲ್ಲಿ ಬೀಡುಬಿಟ್ಟಿತ್ತು. ಸುತ್ತಲೂ ಸಂಗೀತ ದಿಗ್ಗಜರಾದ ಟೈಗರ್ ವರದಾಚಾರ್, ಪಾಪ ನಾಸಂ ಶಿವಂ, ಶಮ್ಮನಗುಡಿ, ಮೈಸೂರು ವಾಸುದೇವಾಚಾರ್ ಮುಂತಾದ ಸಂಗೀತಕೋವಿದರು, ವಾಗ್ಗೇಯಕಾರರ ವಲಯವೇ ಸುತ್ತುವರಿದಿದ್ದರಿಂದ ಕಲಾ ಸರಸ್ವತಿಯ ಸಾಂಗತ್ಯ. ಹೀಗಾಗಿ ಅವರ ಭಾಗ್ಯಕ್ಕೆ ಎಣೆಯೇ ಇರಲಿಲ್ಲ. ಪ್ರಸಿದ್ಧ ನೃತ್ಯಗುರು ಇ. ಕೃಷ್ಣ ಅಯ್ಯರ್ ‘ಹೆಣ್ಣುಮಕ್ಕಳು ಮದುವೆ ಮಾಡಿಕೊಂಡು ಹೋದನಂತರ ನೃತ್ಯ ಬಿಟ್ಟುಬಿಡುತ್ತಾರೆ, ಪುರುಷರಿಂದಲೇ ನೃತ್ಯಕಲೆ ವೃದ್ಧಿ ‘ ಎಂದು ಇವರಿಗೆ ಅಮಿತ ಪ್ರೋತ್ಸಾಹ ನೀಡಿದರು. ವರ್ಷಗಟ್ಟಲೆ ಅಡವುಗಳ ಅಭ್ಯಾಸ, ಸಂಗೀತದಲ್ಲಿ ಪರಿಶ್ರಮ, ತಾಳ-ಲಯಗಳ ಬಗ್ಗೆ ಆಳವಾದ ಜ್ಞಾನ-ನೃತ್ಯ ಕಲಿಕೆಗೆ ಯಾವುದೇ ನಿರ್ದಿಷ್ಟ ಸಮಯಾವಧಿ ಇಲ್ಲದ್ದರಿಂದ ಬೆಳಗಿನಿಂದ ಬೈಗಿನವರೆಗೂ ನೃತ್ಯಾಭ್ಯಾಸವೊಂದೇ, ಅದರಲ್ಲೇ ನಲಿವು- ಸಾರ್ಥಕ್ಯ ಭಾವ. ಅಂಗಶುದ್ಧಿ ನಾಟ್ಯ ಅವರ ಧ್ಯೇಯ. ನಟುವಾಂಗ ಕಲಿಕೆಯೂ ಜೊತೆ ಜೊತೆಯಲ್ಲೇ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯೇ ಕಲಾಕ್ಷೇತ್ರದ ಪರಮ ಗಂತವ್ಯ. ಇಂಥ ಒಂದು ದೈವೀಕ ಕಲಾಮೂಸೆಯಲ್ಲರಳಿದ ಕೃಷ್ಣಮೂರ್ತಿ ಅವರಿಗೆ, ನೇರ ಗುರು ರುಕ್ಮಿಣಿ ಅವರ ಮೌಲಿಕ ತರಬೇತಿಯ ಸುಪರ್ದಿಯಲ್ಲಿ ವಿಕಸನಗೊಂಡ ಧನ್ಯತಾಭಾವ ಇಂದಿಗೂ ಅದು ನೆನಪಿನಲ್ಲಿ ಚಿರಾಯು.

ಸತತ ಹದಿನಾಲ್ಕು ವರ್ಷಗಳ ಕಾಲ, ದೀರ್ಘಾವಧಿಯ ತಪಸ್ಸಿನಂತೆ ಧ್ಯಾನಸ್ಥರಾಗಿ ಭರತ ನಾಟ್ಯವನ್ನು ಕಣಕಣವಾಗಿ ಅರಗಿಸಿಕೊಂಡ ಕೃಷ್ಣಮೂರ್ತಿ ದೃಢ ಸಂಕಲ್ಪದಿಂದ ತಮ್ಮ ಗುರಿ ಸಾಧಿಸಿದರು. ಹೊರಗಿನ ಪ್ರಪಂಚದ ಗೊಡವೆಯೇ ಇಲ್ಲದೆ, ವರ್ಷಾನುಗಟ್ಟಲೆ ಪಂದನಲ್ಲೂರು ಬಾನಿಯಲ್ಲಿ ನುರಿತು, ಪರಿಪೂರ್ಣತೆಯ ಪ್ರತೀಕವಾಗಿ ಬೆಳೆದರು ಎಂದರೆ ಉತ್ಪ್ರೇಕ್ಷೆಯಲ್ಲ. ಅದೇ ತಾನೇ ಕೇಂದ್ರ ಸರ್ಕಾರವು ಸ್ಥಾಪಿಸಿದ ಪ್ರಪ್ರಥಮ ಸ್ಕಾಲರ್ಷಿಪ್ ಮತ್ತು ಪುರುಷ ನರ್ತಕ ಪ್ರಶಸ್ತಿಯೂ  ಕೃಷ್ಣಮೂರ್ತಿ ಅವರಿಗೆ ದೊರೆತದ್ದು ಅವರ ಹಿರಿಮೆ-ಹೆಗ್ಗಳಿಕೆ.

ವೃತ್ತಿಪರ ನೃತ್ಯಕಲಾವಿದರಾಗಿ ಹೊರಹೊಮ್ಮಿದ ಕೃಷ್ಣಮೂರ್ತಿ ಭರತನಾಟ್ಯದಲ್ಲಿ ಸಂಪೂರ್ಣ ವಿದ್ವತ್ತನ್ನು ಗಳಿಸಿದ ನಂತರ ಅವರು ಕಲಾಕ್ಷೇತ್ರದಲ್ಲೇ ನೃತ್ಯಶಿಕ್ಷಕರಾಗಿ ಸಮರ್ಪಣಾ ಮನೋಭಾವದಿಂದ ಮುಂದುವರಿದರು. ಈ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ರುಕ್ಮಿಣೀ ಅರುಂಡೆಲ್ ಅವರೊಡನೆ ಆಕೆಯ ವಿವಿಧ ನೃತ್ಯರೂಪಕಗಳಲ್ಲಿ, ಏಕವ್ಯಕ್ತಿ ಪ್ರಸ್ತುತಿಯಾಗಿ, ಸಮೂಹ ನೃತ್ಯಗಳಲ್ಲಿ ಭಾಗವಹಿಸುತ್ತ ಅಸಂಖ್ಯಾತ ನೃತ್ಯ ಪ್ರದರ್ಶನಗಳನ್ನು ನೀಡಿದ್ದು ಅವರ ಅಗ್ಗಳಿಕೆ. ನೃತ್ಯವನ್ನೇ ಹಾಸಿ ಹೊದ್ದು ಉಸಿರಾಡುತ್ತಿದ್ದ ಅವರಿಗೆ ನೃತ್ಯವೇ ಸರ್ವಸ್ವವಾಯಿತು. ಹೀಗಾಗಿ ನಲವತ್ತು ವರ್ಷಗಳ ಕಾಲ ನಿಸ್ವಾರ್ಥವಾಗಿ ಇನ್ನಿತರ ಯಾವ ಲೌಕಿಕ ಆನಂದ-ಬಂಧನಗಳಿಗೂ ಸಿಲುಕದೆ, ನರ್ತನದ ದೈವೀಕ ಸಂಭ್ರಮದ ಜೀವನದಲ್ಲಿ ಕಳೆದುಹೋದುದ್ದು,  ವಿಧ್ಯಾರ್ಥಿಗಳ ಜನಪ್ರಿಯ ‘ಕಿಟ್ಟು ಸರ್’ ಅವರ ವೈಶಿಷ್ಟ್ಯ- ಆವರು ಗಳಿಸಿದ ಖ್ಯಾತಿ ಎಂದೂ ಕ್ಷೀಣಿಸದ ಆಸ್ತಿ!!!..

ಮುಂದೆ- ಕೃಷ್ಣಮೂರ್ತಿ ಅವರ ಬದುಕಿನ ಎರಡನೆಯ ಅಧ್ಯಾಯ ಬೆಂಗಳೂರಿನಲ್ಲಿ ಆರಂಭವಾಯಿತು. 1986 ರಲ್ಲಿ ರುಕ್ಮಿಣೀದೇವಿಯವರು ಅಸ್ತಂಗತರಾದಾಗ ಕಲಾಕ್ಷೇತ್ರ, ಕೃಷ್ಣಮೂರ್ತಿ ಅವರ ಪಾಲಿಗೆ ಬರಿದೋ ಬರಿದು.. ಶೂನ್ಯತಾ ಭಾವ, ಹೃದಯ ಭಾರ. 1991 ರಲ್ಲಿ ಕೃಷ್ಣಮೂರ್ತಿ ಅವರು ಕಲಾಕ್ಷೇತ್ರ ತೊರೆದು, ತಮ್ಮ ತವರೂರು ಬೆಂಗಳೂರಿಗೆ ಮರಳಿದರು. ಆಗ ಅವರಿಗೆ ಒತ್ತಾಸೆಯಾದವರು ಅವರ ಅಕ್ಕ ರುಕ್ಮಾ ನಾರಾಯಣ್. ಇಡೀ ಜೀವನವನ್ನು ನೃತ್ಯಕ್ಷೇತ್ರಕ್ಕೆ ಸಮರ್ಪಿಸಿಕೊಂಡ ಅವರಿಗೆ ದಿಕ್ಸೂಚಿಯಾದವರು ಈ ಅಕ್ಕನವರೇ. ಅವರ ಬಾಳು ಸಾರ್ಥಕವಾಗಿ ಕಳೆಯಲು ಪ್ರೇರಕರಾಗಿ, ಕಲಾಕ್ಷೇತ್ರಕ್ಕೆ ಪರ್ಯಾಯವಾಗಿ ‘ಕಲಾಕ್ಷಿತಿ’ಯನ್ನು ನಿರ್ಮಿಸಲು ಕಾರಣೀಭೂತರಾಗಿ,  ರಾಜಧಾನಿಯ ನೃತ್ಯಾಸಕ್ತರಿಗೆ ಶುದ್ಧವಾದ ಕಲಾಪರಿಸರವನ್ನು ರೂಪಿಸಲು ನೆರವಾದರು.

ಸೋದರಿಯ ಪ್ರೋತ್ಸಾಹ-ನೆರವುಗಳನ್ನು ಸ್ಮರಿಸುವ ಕೃಷ್ಣಮೂರ್ತಿಗಳು ತಾವು ಬೆಂಗಳೂರಿನಲ್ಲಿ ಕಲಾಕ್ಷಿತಿ ಸಂಸ್ಥೆಯನ್ನು ಸ್ಥಾಪಿಸಲು ಶ್ರೀಮತಿ ರುಕ್ಮಿಣೀದೇವಿ ಅರುಂಡೇಲ್ ಅವರೇ ಮುಖ್ಯ ಪ್ರೇರಣೆ ಎಂದು ಕೃಷ್ಣಮೂರ್ತಿ ಕೃತಜ್ಞತೆಯಿಂದ ನೆನೆಯುತ್ತಾರೆ. ಗುರುಗಳಿಂದ ಕಲಿತ ವಿದ್ಯೆಯನ್ನು ಇಂದಿನ ಪೀಳಿಗೆಗೆ ಧಾರೆ ಎರೆಯುವುದೇ ತಮ್ಮ ಜೀವನ ಧ್ಯೇಯ…ಕರ್ತವ್ಯವೆನ್ನುತ್ತಾರೆ.  ಪರಂಪರಾನುಗತವಾಗಿ ಬೆಳೆದು ಬಂದಿರುವ ಮಾರ್ಗದಲ್ಲೇ ಮುಂದುವರಿಯಲು ಇಚ್ಚಿಸುವ, ಈ ಬಗ್ಗೆ  ಖಚಿತ ಅಭಿಪ್ರಾಯ ಇವರದಾದರೂ ಪ್ರಾಯೋಗಿಕ ಪ್ರಯತ್ನಗಳಿಗೆ ತಮ್ಮ ಆಕ್ಷೇಪವಿಲ್ಲ ಎನ್ನುತ್ತಾರೆ ಕೂಡ.

 ‘ದೈವಭಕ್ತಿ ಮತ್ತು ಗುರು ಭಕ್ತಿ ಇಲ್ಲದೆ ಈ ಪವಿತ್ರವಾದ ವಿದ್ಯೆ ಖಂಡಿತಾ ಒಲಿಯುವುದಿಲ್ಲ’ ಎಂಬ ದೃಢವಾದ ನಂಬಿಕೆ ಅವರದು. ಕಲಾ ಉತ್ಕೃಷ್ಟತೆಯ ಬಗ್ಗೆಯೇ ಹೆಚ್ಚಿನ ಒತ್ತನ್ನು ನೀಡುವ ಈ ಕರ್ಮಯೋಗಿ, ತಮ್ಮ ನೃತ್ಯಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಭರತನಾಟ್ಯದ ಸೂಕ್ಷ್ಮ ಅಂಶಗಳಲ್ಲಿ ಉತ್ತಮ ತರಬೇತಿ ಪಡೆದು ಅದರ ಸಾರಸರ್ವಸ್ವವನ್ನು ಸರಿಯಾಗಿ ಗ್ರಹಿಸುವಂತೆ ಅತೀವ ಎಚ್ಚರ-ಗಮನ ಕೊಡುತ್ತಾರೆ. ತಾವು ಕಲಿತ ಪದ್ಧತಿಗೆ ಲವಲೇಶವೂ ಚ್ಯುತಿ ಬಾರದಂತೆ ಅದರ ಮೂಲರೂಪ ಉಳಿಸಿಕೊಳ್ಳುವತ್ತ ನಿಗಾ ವಹಿಸುತ್ತ ಬಂದಿರುವುದು ಇವರ ವಿಶೇಷ. ಈ ನಿಟ್ಟಿನಿಂದ ಇಂದು ಕಲಾಕ್ಷಿತಿಯಲ್ಲಿ ತರಬೇತಿಗೊಳ್ಳುವುದು ವಿದ್ಯಾರ್ಥಿಗಳಿಗೆ ಅತ್ಯಂತ ಪ್ರತಿಷ್ಠೆ ಮತ್ತು ಹೆಗ್ಗಳಿಕೆಯ ಸಂಗತಿ.   

ಕಲಾಕ್ಷಿತಿ ಸಂಸ್ಥೆಯು,  ಸ್ಥಾಪನೆಯಾದಂದಿನಿಂದ  ಇಲ್ಲಿಯವರೆಗೆ ಸತತವಾಗಿ ಮೂರು ದಶಕಗಳ ಕಾಲ ಪರಿಶುದ್ಧ ‘ಪಂದನಲ್ಲೂರು ಬಾನಿ’ಯ ನೃತ್ಯತಾವರೆಗಳನ್ನು ಪ್ರಪ್ಹುಲಿಸಲು ಅನುಕ್ಷಣ ಶ್ರಮಿಸುತ್ತಿದೆ ಎಂದರೆ ಅದಕ್ಕೆ ಕಿಟ್ಟು ಸರ್ ಅವರ ಸರ್ವ ಸಮರ್ಪಣಾಭಾವವೇ ಕಾರಣ.  

ದೇಶ-ವಿದೇಶಗಳಲ್ಲಿ ರುಕ್ಮಿಣಿದೇವಿಯವರ ಈ ನೇರಶಿಷ್ಯನ ಪ್ರತಿಭೆಯ ಪ್ರದರ್ಶನಗಳು ಅಸಂಖ್ಯ ನಡೆದಿರುವುದಲ್ಲದೆ, ಅವರು ಭಾಗವಹಿಸಿದ ನೃತ್ಯರೂಪಕಗಳ ಸಂಖ್ಯೆಯೂ ಅಗಣಿತ. ಶಬರಿ ಮೋಕ್ಷಂ, ಕಣ್ಣಪ್ಪಾರ್ ಕೊರವಂಜಿ, ರುಕ್ಮಿಣೀ ಕಲ್ಯಾಣಂ, ಚೂಡಾಮಣಿ ಪ್ರದಾನಂ, ಆಂಡಾಳ್  ಚರಿತಂ, ಸೀತಾ ಸ್ವಯಂವರಂ, ಪುರಂದರದಾಸ ಮುಂತಾದ ನೃತ್ಯರೂಪಕಗಳಲ್ಲಿ ಇವರದು ಸ್ಮರಣೀಯ ಪಾತ್ರಗಳು.

ನೊಬೆಲ್ ಪ್ರಶಸ್ತಿ ವಿಜೇತ ಸರ್. ಸಿ.ವಿ ರಾಮನ್ ಅವರ ಸಮಕ್ಷಮ ವರ್ಲ್ಡ್ ಕಲ್ಚರ್ ನಲ್ಲಿ ಹಾಗೂ ಬೆಂಗಳೂರಿನ ಗಾಯನ ಸಮಾಜದಲ್ಲಿ ಯುವ ಕೃಷ್ಣಮೂರ್ತಿ 1968 ರಲ್ಲಿ ‘ಅರಂಗೇಟ್ರಂ’  ಮಾಡಿದ್ದು ಇವರ ಜೀವನದ ಎರಡು ವಿಶೇಷ ಸಂದರ್ಭಗಳು.

ಯಾವುದೇ ಪ್ರಚಾರವನ್ನು ಬಯಸದ ಇವರು ಇಂದಿಗೂ ಎಲೆಮರೆಯ ಕಾಯಂತೆಯೇ ತಮ್ಮ ತಪೋವನದಲ್ಲಿ ಶಾಂತ ಜೀವನ ನಡೆಸುತ್ತಿದ್ದಾರೆ. ನಿಜವಾದ ಕಲೆಯ ಬೆಲೆಯನ್ನು ಬಲ್ಲವರಿಗೆ ಮಾತ್ರ ಇವರ ವಿದ್ವತ್ತು ಮತ್ತು ವ್ಯಕ್ತಿತ್ವದ ಔನ್ನತ್ಯ ಅರಿವಾಗುವುದು.  

ಒಬ್ಬ ವಿದ್ಯಾರ್ಥಿ ನೃತ್ತ-ನೃತ್ಯ-ಅಭಿನಯಗಳೆಲ್ಲದರ ಮೇಲೆ ಪ್ರಾವೀಣ್ಯ ಸಾಧಿಸಿದ ಮೇಲೆಯೇ ಅಂದರೆ ಸುಮಾರು ಹತ್ತಾರು ವರ್ಷಗಳು ಅಭ್ಯಾಸ ಮಾಡಿ ಪರಿಶ್ರಮಿಸಿದ ನಂತರವೇ ಇಲ್ಲಿ  ‘ರಂಗಪ್ರವೇಶ’ದ ವಿಧಿ. ಅದನ್ನು ನಿರ್ಧರಿಸುವವರು ಗುರುಗಳೇ. ಅದಕ್ಕೆ ಮುನ್ನ ವಿದ್ಯುಕ್ತವಾಗಿ ‘ಗೆಜ್ಜೆಪೂಜೆ’. ನೃತ್ಯಕಲಾವಿದರ ನಕ್ಷತ್ರ-ಶುಭಮೂಹೂರ್ತ ಎಲ್ಲವನ್ನೂ ಕೂಲಂಕಷ ವಿಚಾರಿಸಿ, ಹೊಂದಿದ ಶುಭಮುಹೂರ್ತದಲ್ಲಿ ಕಲಾಕ್ಷಿತಿಯಲ್ಲಿ ಪ್ರಭಾತದಲ್ಲೇ ಅತ್ಯಂತ ಶ್ರದ್ಧೆಯಿಂದ ರುದ್ರ, ಹವನ-ಹೋಮ, ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಗೆಜ್ಜೆಗೂ ದೈವೀಕ ಆಯಾಮದಲ್ಲಿ ಪೂಜೆ ಸಲ್ಲಿಕೆ- ಗುರುಗಳಿಂದ ಆಶೀರ್ವಾದಪೂರ್ವಕವಾಗಿ ನೀಡಿಕೆ. ಅನಂತರ ಗೆಜ್ಜೆಪೂಜೆಯ ಕಲಾವಿದರು ಕನಿಷ್ಠ ಎರಡು ಕೃತಿಗಳನ್ನಾದರೂ ಆ ಸಂದರ್ಭದಲ್ಲಿ ನರ್ತಿಸುವುದು ವಾಡಿಕೆ. ಜನಸಮೂಹದ ಮುಂದೆ ಪ್ರದರ್ಶನ ನೀಡುವ ಭೀತಿ ನಿವಾರಣೆಯ ಕಾರಣವೂ ಇದಕ್ಕಿರಬಹುದು.

 ರಂಗಪ್ರವೇಶಗಳಲ್ಲಿ ಹೊಲಿದ ಉಡುಪುಗಳನ್ನು ಧರಿಸುವುದು ವರ್ಜ್ಯ. ಸೀರೆಯನ್ನು ಮೂರು ಹಂತಗಳಲ್ಲಿ ಕಲಾತ್ಮಕವಾಗಿ ಮಡಿಚಿ ಉಟ್ಟುಕೊಳ್ಳುವ ಸಂಪ್ರದಾಯ ಇಂದಿಗೂ ಚಾಚೂ ತಪ್ಪದೆ ನಡೆದುಕೊಂಡು ಬಂದಿದೆ. ಸರಳವಾದ ಆಭರಣಗಳು, ಮೊಗ್ಗಿನ ಜಡೆ ( ಪಟ್ಟೆ) , ಸೂರ್ಯ-ಚಂದ್ರ ಧರಿಸುವುದು ಕಡ್ಡಾಯವೇನಲ್ಲ. ಇಲ್ಲಿ ಕಲಾಪ್ರದರ್ಶನ, ವಿಧಿ-ವಿಧಾನಗಳಿಗೆ ಆದ್ಯತೆ ನೀಡಲಾಗುವುದೇ ಹೊರತು ಆಡಂಬರ-ಅನಗತ್ಯ ವೆಚ್ಚಗಳಿಗಲ್ಲ. ತನಗೆ ತಾನೇ ಅವುಗಳಿಗೆ ಕಡಿವಾಣ ಬೀಳುವುದು ಸ್ವಾಗತಾರ್ಹ ಸಂಗತಿ. ಮೂವತ್ತಕ್ಕೂ ಹೆಚ್ಚಿನ ರಂಗಪ್ರವೇಶಗಳು ಇಲ್ಲೇ ಕಲಾಕ್ಷಿತಿಯ ಆವರಣ-ವೇದಿಕೆಯ ಮೇಲೆಯೇ ಯಶಸ್ವಿಯಾಗಿ ನಡೆದಿವೆ. ಕೆಲವು ಹೊರಗಿನ ಕಲಾಮಂದಿರಗಳಲ್ಲೂ ಬಹು ಸರಳವಾಗಿ ನಡೆದಿವೆ. ಸರಳತೆಯೇ ಕಲಾಕ್ಷಿತಿಯ ಧ್ಯೇಯ-ಸದಾಶಯ.  

ಅನುಕೂಲವಂತರ ಕುಟುಂಬದಲ್ಲಿ ಜನಿಸಿದ್ದರೂ ಕಲಾಸಾಧನೆಗಾಗಿ ಕೃಷ್ಣಮೂರ್ತಿ ಅವರು ಕಲಾಕ್ಷೇತ್ರದಂಥ ತಪೋವನ ಸೇರಿ, ಅಪಾರ ದೇಹಶ್ರಮದ ನೃತ್ಯಸಾಧನೆಗೈದು, ಬ್ರಹ್ಮಚಾರಿಯಾಗಿದ್ದುಕೊಂಡು ಇಡೀ ಜೀವನವನ್ನು ಕಲಾಸೇವೆಯಲ್ಲಿ ಕಳೆದವರು.

 ಇವರನ್ನು ಅಪ್ಪಟ ಪ್ರತಿಭೆಯನ್ನು ಗುರುತಿಸಿ, ಅನೇಕ ಪ್ರಶಸ್ತಿ-ಪುರಸ್ಕಾರಗಳು ಹಿಂಬಾಲಿಸಿಕೊಂಡು ಬಂದಿವೆ. ಕರ್ನಾಟಕ ಸರ್ಕಾರದ ‘’ಕಲಾಶ್ರೀ’’ ಪ್ರಶಸ್ತಿ, ಬೆಂಗಳೂರು ಗಾಯನ ಸಮಾಜದಿಂದ ‘ವರ್ಷದ ಕಲಾವಿದ -2000 ಪ್ರಶಸ್ತಿ’, ನಾಟ್ಯ ತಪಸ್ವಿ, ಸಂಗೀತ ಸುಮಲತಾ ನಾಟ್ಯ ರಸಋಷಿ, ಪುರವಂಕರ ಸಂಗೀತ ಪ್ರಶಸ್ತಿ, ‘ಅಟೆಂಡೆನ್ಸ್ ರುಕ್ಮಿಣೀ ದೇವಿ ಪ್ರಶಸ್ತಿ’, ಕರ್ನಾಟಕ ಸರ್ಕಾರದ ‘ಹಿರಿಯ ನಾಗರೀಕ’ ಮನ್ನಣೆ, ಪು’ರಂದರ ಪ್ರಶಸ್ತಿ’, ಎಲ್ಲಕ್ಕೂ ಕಳಶಪ್ರಾಯವಾಗಿ ರಾಜ್ಯ ಸರ್ಕಾರದ ‘ರಾಜ್ಯೋತ್ಸವ ಪ್ರಶಸ್ತಿ’ ಮತ್ತು ಜಿನಿವಾ ವಿಶ್ವವಿದ್ಯಾನಿಲಯದಿಂದ ಡಾಕ್ಟೋರೇಟ್ ಪದವಿ ಪ್ರದಾನವಾಗಿದೆ.

ಸದಾ ಕ್ರಿಯಾಶೀಲರಾದ, ಕೃಷ್ಣಮೂರ್ತಿ ಅವರು ಈ ಇಳಿವಯಸ್ಸಿನಲ್ಲೂ ಸುಮ್ಮನೆ ಕೂಡದೇ ಅನೇಕ ಹೊಸ ಹೊಸ ನೃತ್ಯ ಸಂಯೋಜನೆಗಳನ್ನು ಮಾಡುವುದರಲ್ಲಿ ನಿರತರು. ಪ್ರೊ. ಎಂ.ಆರ್.ಕೆ ಅವರು ಸಂಯೋಜಿಸಿರುವ ಅನೇಕ ಸುಂದರ ಸಂಯೋಜನೆಗಳಲ್ಲಿ ಪ್ರಮುಖವಾದವುಗಳೆಂದರೆ- ಕರ್ನಾಟಕ ಶಾಸ್ತ್ರೀಯ ಸಂಗೀತದೊಂದಿಗೆ ಹಿಂದೂಸ್ತಾನೀ ಸಂಗೀತವನ್ನು ಬೆಸೆದ ಪಂಚಕನ್ಯಾ ದೇವೀಸ್ತುತಿ, ಶ್ರೀಕೃಷ್ಣ ದೀಪಿಕಾ, ಯುಗಾದಿ ವೈಭವ, ರಸವಿಲಾಸ, ವಚನ ವಲ್ಲರಿ, ಗೋಕುಲ ನಿರ್ಗಮನ ಮತ್ತು ಅಕ್ಕ ಮಹಾದೇವಿ ಮುಂತಾದವು.  

ಕಲಾಕ್ಷಿತಿ ತಂಡವು ನಾಡಿನ ಎಲ್ಲ ಪ್ರತಿಷ್ಠಿತ ನೃತ್ಯೋತ್ಸವ, ವೇದಿಕೆಗಳು , ದೇವಾಲಯಗಳಲ್ಲಿ ಮತ್ತು ಅಂತರರಾಷ್ಟ್ರೀಯ ಪ್ರತಿನಿಧಿಗಳ ಸಮ್ಮುಖದಲ್ಲಿ ಅನೇಕಾನೇಕ ನೃತ್ಯಪ್ರದರ್ಶನಗಳನ್ನು ನೀಡಿರುವುದು ಹೆಗ್ಗಳಿಕೆಯ ಸಂಗತಿ. ದೇಶ-ವಿದೇಶಗಳಲ್ಲೂ ಕಲಾಕ್ಷಿತಿಯ ಖ್ಯಾತಿಯನ್ನು ಮನಗಂಡ ಪ್ರಮುಖ ಸಂಸ್ಥೆಗಳು ತಪ್ಪದೆ ಆಹ್ವಾನಿಸುವ ಗೌರವ, ಸಂಸ್ಥೆಯ ಹಾಗೂ ಗುರುಗಳ ಅನನ್ಯತೆಯನ್ನು ಸಾರಿ ಹೇಳುತ್ತವೆ. ಭಾರತೀಯ ನೃತ್ಯ ಇತಿಹಾಸದಲ್ಲಿ ‘ಕಲಾಕ್ಷಿತಿ’ ಸಂಸ್ಥೆಯು ಒಂದು ಭದ್ರವಾದ ಹಾಗೂ ಶಾಶ್ವತವಾದ ಉನ್ನತ ಸ್ಥಾನವನ್ನು ಗಳಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ.  

                      ***********************   ವೈ.ಕೆ.ಸಂಧ್ಯಾ ಶರ್ಮ

Related posts

ಕಥಕ್ ನೃತ್ಯ ಸಾಧಕ ಹರಿ

YK Sandhya Sharma

ಉತ್ಸಾಹೀ ನೃತ್ಯಪ್ರತಿಭೆ ನಾಗಶ್ರೀ ಶ್ರೀನಿವಾಸ್

YK Sandhya Sharma

ಉದಯೋನ್ಮುಖ ಕಥಕ್ ನೃತ್ಯ ಕಲಾವಿದೆ ಶ್ರುತಿ ಗುಪ್ತ

YK Sandhya Sharma

Leave a Comment

This site uses Akismet to reduce spam. Learn how your comment data is processed.