

















ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಖ್ಯಾತ ‘ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್’ ನೃತ್ಯಶಾಲೆಯ ಗುರು, ನೃತ್ಯ ಕಲಾವಿದೆ, ನಟುವನ್ನಾರ್ ಮತ್ತು ನೃತ್ಯಸಂಯೋಜಕಿ ಡಾ. ರಕ್ಷಾ ಕಾರ್ತೀಕ್ ಉತ್ತಮ ಶಿಕ್ಷಣ ಮತ್ತು ಅಪರೂಪದ ಹೊಸಪ್ರಯೋಗಗಳಿಗೆ ಹೆಸರಾದವರು. ಅವರ ಸಮರ್ಥ ಗರಡಿಯಲ್ಲಿ ಬದ್ಧತೆಯಿಂದ ಶಿಕ್ಷಣ ಪಡೆದು ಇದೀಗ ರಂಗಪ್ರವೇಶಕ್ಕೆ ತಯಾರಾಗಿರುವ ಕು. ಅನಘಾ ಲಕ್ಷ್ಮೀ ಸಂಪತ್ ಕುಮಾರ್ ಕಳೆದ ಒಂಭತ್ತು ವರ್ಷಗಳಿಂದ ಏಕಾಗ್ರತೆಯಿಂದ ಭರತನಾಟ್ಯವನ್ನು ಕಲಿಯುತ್ತಿದ್ದಾಳೆ. ಗುರುಗಳ ಅಭಿನಯ ಪ್ರಾವೀಣ್ಯವೇ ಅವಳಿಗೆ ಸ್ಪೂರ್ತಿ. ‘ನಟನಂ’ ಶಾಲೆಯ ಎಲ್ಲ ನೃತ್ಯ ಕಾರ್ಯಕ್ರಮಗಳಲ್ಲಿ ಅವರೊಡನೆ ಉತ್ಸುಕತೆಯಿಂದ ಭಾಗವಹಿಸುವ ಇವಳು, ಇದೇ ತಿಂಗಳ 9 ಶನಿವಾರದಂದು ಸಂಜೆ 6 ಗಂಟೆಗೆ ಕೋರಮಂಗಲದ ಸೇಂಟ್. ಜಾನ್ಸ್ ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ತನ್ನ ‘ರಂಗಪ್ರವೇಶ’ ಮಾಡುತ್ತಿದ್ದಾಳೆ. ಅವಳ ಸುಮನೋಹರ ನಾಟ್ಯವನ್ನು ವೀಕ್ಷಿಸಲು ಎಲ್ಲ ಕಲಾರಸಿಕರಿಗೂ ಸುಸ್ವಾಗತ.
ಶ್ರೀಮತಿ ದೀಪಾ ಮತ್ತು ರಾಮ್ ಸಂಪತ್ ಕುಮಾರ್ ಸುಪುತ್ರಿ ಅನಘಾಗೆ ನೃತ್ಯ ಬಾಲ್ಯದ ಒಲವು. ಏಳನೆಯ ವಯಸ್ಸಿಗೇ ಡಾ. ರಕ್ಷಾ ಅವರಲ್ಲಿ ಭರತನಾಟ್ಯ ಕಲಿಯಲು ಸೇರ್ಪಡೆ. ಒಂಭತ್ತು ವರ್ಷಗಳ ಕಠಿಣಾಭ್ಯಾಸ. ಜೊತೆ ಜೊತೆಯಲ್ಲಿ ನೃತ್ಯಕ್ಕೆ ಅಗತ್ಯವಾದ ಸಂಗೀತ ಕಲಿಕೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅನಘಾ, ಗುರು ಸುಮಿತ್ರ ನಿತಿನ್ ಅವರಲ್ಲಿ ಕಲಿಯುತ್ತ ಕರ್ನಾಟಕ ಸರ್ಕಾರ ನಡೆಸುವ ಸಂಗೀತ ಪರೀಕ್ಷೆಯಲ್ಲಿ ಅತ್ಯುಚ್ಚ ಅಂಕಗಳನ್ನು ಗಳಿಸಿ ಜಯಶೀಲಳಾಗಿದ್ದಾಳೆ. ಪ್ರಸ್ತುತ ಸಂಗೀತ ವಿದ್ವಾನ್ ಬಾಲಸುಬ್ರಮಣ್ಯ ಶರ್ಮ ಅವರಲ್ಲಿ ಸೀನಿಯರ್ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದಾಳೆ. ಮಧ್ಯಮ ಪೂರ್ಣ ನೃತ್ಯಪರೀಕ್ಷೆಯನ್ನೂ ಡಿಸ್ಟಿಂಕ್ಷನ್ನಲ್ಲಿ ಪೂರೈಸಿದ್ದಾಳೆ.
ಬೆಂಗಳೂರಿನ ಇಂದಿರಾನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹತ್ತನೆಯ ತರಗತಿ ಓದುತ್ತಿರುವ ಅನಘಾ ಓದಿನಲ್ಲೂ ಮುಂದೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತೆ. ಸೈನ್ಸ್ ಮತ್ತು ಟೆಕ್ನಾಲಜಿಯಲ್ಲಿ ವಿಶೇಷ ಆಸಕ್ತಿ. ಯು.ಎಸ್.ಎ. ನಲ್ಲಿ ನಡೆದ ‘ರಿಜನರನ್ ಸೈನ್ಸ್ ಫೇರ್ ‘ನಲ್ಲಿ ಭಾರತವನ್ನು ಪ್ರತಿನಿಧಿಸಿ ‘ಗ್ರಾಂಡ್ ಅವಾರ್ಡ್’ ಪಡೆದಿರುವ ಹೆಮ್ಮೆ ಅವಳದು. ಉತ್ತಮ ವಾಗ್ಮಿಯಾದ ಇವಳು, ಭಾಷಣ ಮತ್ತು ಸೃಜನಾತ್ಮಕ ಬರವಣಿಗೆಯಲ್ಲಿಯೂ ಪರಿಶ್ರಮ ಹೊಂದಿರುವ ಪ್ರತಿಭಾವಂತೆ.
ಈಗಾಗಲೇ ನಾಡಿನಾದ್ಯಂತ ಅನೇಕ ದೇವಾಲಯಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿರುವ ಅನಘಾ, ತಿರುಮಲ ದೇವಸ್ಥಾನ, ಕಾಂಬೋಡಿಯಾ, ಬೃಹದೀಶ್ವರ ದೇವಾಲಯಗಳು ಸೇರಿದಂತೆ ಅನೇಕ ಕಡೆ ನರ್ತಿಸಿ ಅನುಭವ ಪಡೆದಿರುವುದು ಈಗ ಅವಳ ಆತ್ಮವಿಶ್ವಾಸ ಗಳಿಕೆ ಮತ್ತು ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೆ ಇಂಬು ನೀಡಿದೆ.
