Image default
Dance Reviews

ಮೈಸೂರು ಪರಂಪರೆಯ ಸೊಗಡು-ಸ್ವಾದದ ವೈಷ್ಣವೀ ನಾಟ್ಯಸೊಬಗು

ಪರಮಗುರು ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮನವರ ಶಾಸ್ತ್ರೀಯ ನೃತ್ಯಪರಂಪರೆ ಮೈಸೂರು ಶೈಲಿಯ ಸಾಂಪ್ರದಾಯಕ ಭರತನಾಟ್ಯ ತನ್ನದೇ ಆದ ಸೊಗಡು-ಸ್ವಾದಗಳಿಂದ ಮನಸ್ಸಿಗೆ ಹೃದ್ಯ ಅನುಭವ ನೀಡುವ ಮೆರುಗು-ವೈಶಿಷ್ಟ್ಯಗಳನ್ನು ಹೊಂದಿದೆ.

ನೃತ್ಯ ಪ್ರದರ್ಶನದ ಪೂರ್ವಾರ್ಧ ಭಾಗವು ಮೃದಂಗವಾದನದಲ್ಲಿ ಉಗ್ಗಡಿಸುವಿಕೆಯೊಂದಿಗೆ ಶುಭಾರಂಭಗೊಳ್ಳುವುದು ವಾಡಿಕೆ. ಅನಂತರ- ಪೂರ್ವರಂಗ ವಿಧಿಯ ನೃತ್ತ-ನೃತ್ಯ, ಅಭಿನಯ ಬಂಧಗಳಾದ ರಾಗ ಗಂಭೀರ ನಾಟ-ಆದಿತಾಳದ ಪುಷ್ಪಾಂಜಲಿ, ನಾಟ ರಾಗದಲ್ಲಿ ಶ್ಲೋಕಾಭಿನಯ , ಕಲ್ಯಾಣಿ ರಾಗದ ಧನ್ವಂತರಿ ಶ್ಲೋಕಾಭಿನಯ, ಆರಭಿ ರಾಗದಲ್ಲಿ ಶೃಂಗೇರಿ ಶಾರದಾಂಬೆಯ ವರ್ಣನೆಯುಳ್ಳ ಚೂರ್ಣಿಕೆ, ಹಾಗೂ ಜತಿಗಳು ವಿನಾಯಕ ಸ್ತುತಿ ಮುಂತಾದ ಎಲ್ಲ ನೃತ್ಯಬಂಧಗಳನ್ನು ಒಳಗೊಂಡ ಸಾಂಪ್ರದಾಯಿಕ ನೃತ್ಯಗುಚ್ಚವೇ ‘ಪೂರ್ವರಂಗ ವಿಧಿ’ಯ ವಿಶೇಷ.

ಪದ್ಮವಿಭೂಷಣ ಡಾ. ವೆಂಕಟಲಕ್ಷ್ಮಮ್ಮನವರ ಕಟ್ಟ ಕಡೆಯ ಶಿಷ್ಯೆ ‘ಶ್ರೀ ಮಾತೃಕ ಕಲ್ಚುರಲ್ ಟ್ರಸ್ಟ್’ನ ಕರ್ನಾಟಕ ಕಲಾಶ್ರೀ ವಿದುಷಿ. ಗುರು ವಿದ್ಯಾ ರವಿಶಂಕರ್ ಅವರ ನೆಚ್ಚಿನ ಶಿಷ್ಯೆ ವಿದುಷಿ. ವೈಷ್ಣವೀ ಭಟ್ ಅಂದು ಮೈಸೂರು ಬಾನಿಯ ಸಂಪ್ರದಾಯದ ನೃತ್ಯ ಪ್ರದರ್ಶಿಸಿ ಯಶಸ್ವಿಯಾಗಿ ರಂಗಪ್ರವೇಶಿಸಿದಳು.

 ಆಕೆ ರಂಗಪ್ರವೇಶಿಸಿದ ಪ್ರಥಮ ಹೆಜ್ಜೆಯೇ ನಗುಮೊಗದ ಮೆರುಗಿನೊಂದಿಗೆ ಆಕರ್ಷಿಸಿತು. ರಂಗಾಧಿದೇವತೆಗಳಿಗೆ ಭಕ್ತಿಪೂರ್ವಕವಾಗಿ ನೃತ್ತಮಾಲೆಯನ್ನರ್ಪಿಸುವ ಮೂಲಕ ‘ಪುಷ್ಪಾಂಜಲಿ’ ನಿರೂಪಿಸಿದಳು. ಮಾಟವಾದ ಅಂಗಸೌಷ್ಟವ ಹೊಂದಿದ್ದ ವೈಷ್ಣವಿ ವಿಘ್ನವಿನಾಯಕನನ್ನು ಅಂಗಶುದ್ಧ ಆಂಗಿಕಾಭಿನಯದಲ್ಲಿ ‘ಕವಿತ್ವಂ’ ಗೆ ಅರ್ಥಪೂರ್ಣವಾಗಿ ಹೆಜ್ಜೆ ಜೋಡಿಸುತ್ತ ಅಭಿನಯವಾದಳು. ದೃಷ್ಟಿ ಭೇದ-ಗ್ರೀವ ಭೇದಗಳ ಸೌಂದರ್ಯದಿಂದ ಅವಳ ನೃತ್ಯ ಅಚ್ಚುಕಟ್ಟನ್ನು ಪಡೆಯಿತು. ಶ್ಲೋಕವನ್ನು ಅಷ್ಟೇ ಸೂಕ್ಷ್ಮದ ವಿವರಗಳ ನಿರೂಪಣೆಯಲ್ಲಿ ಬಿಂಬಿಸಿದಳು.

ಕೋಲಾರ ಪದ್ಧತಿಯ ಒಂದು ವಿಶೇಷ ನೃತ್ಯಬಂಧ ‘ಠಾಯ’’ ವನ್ನು ಪ್ರಯೋಗಿಸುವ ಪ್ರಯತ್ನ ವಿದ್ಯಾ ಅವರದು. ಕೋಲಾರ ಸಂಪ್ರದಾಯದಲ್ಲಿ ವಿಶೇಷ ಪ್ರಚಲಿತವಾಗಿದ್ದ ‘ಠಾಯ’ ಗಳು ಅಪರೂಪದ ಬಂಧಗಳಾಗಿದ್ದವು. ಅದರಲ್ಲಿ  ‘ಬ್ರಹ್ಮ ಠಾಯ’ ವಿಶೇಷ ನೃತ್ಯಬಂಧ. ಇವು ಹಿಂದೆ ದೇವಾಲಯಗಳಲ್ಲಿ ನರ್ತಿಸಲ್ಪಡುತ್ತಿದ್ದಂಥ ದೈವೀಕ ರಸಾನುಭವ ಉಂಟುಮಾಡುವ ವಿಶೇಷ ನೃತ್ಯಬಂಧ . ಕಲಾವಿದೆ ವೈಷ್ಣವಿ , ಅಂದು ಪ್ರಸ್ತುತಿಪಡಿಸಿದ ರೇವತಿರಾಗದ, ಮಿಶ್ರಛಾಪು ತಾಳದ ಬ್ರಹ್ಮದೇವನಿಗೆ ಸಮರ್ಪಿತವಾದ ‘ಬ್ರಹ್ಮ ಠಾಯ’ ಆಧ್ಯಾತ್ಮಿಕ ನೆಲೆಯಲ್ಲಿ ದಿವ್ಯಾನುಭೂತಿಯನ್ನು ನೀಡಿತು. ವೇದಪಠಣದ ನಾದ ಕರ್ಣಾನಂದಕರವಾಗಿ,  ಮಂದ್ರಸ್ಥಾಯಿಯಿಂದ ತಾರಕ ಅತಿ ತಾರಕ್ಕೇರುವ ನಾದ-ನಾಟ್ಯ ಸೌಂದರ್ಯವನ್ನು ಅನುಭವಿಸಿಯೇ ತಿಳಿಯಬೇಕು. ಪದ್ಮಸಂಭವನ ಉದಯ, ರೂಪ-ವೈಶಿಷ್ಟ್ಯಗಳನ್ನು ಮೃದುವಾದ ಚಲನೆಗಳ ಸುಂದರ ವಿನ್ಯಾಸದೊಂದಿಗೆ ಕಲಾವಿದೆ ತನ್ನ ವರ್ಚಸ್ವೀ ಅಭಿನಯದಲ್ಲಿ ಅಭಿವ್ಯಕ್ತಿಸಿದ್ದು ವಿಶೇಷ. ಆಕೆಯ ಕಲಾತ್ಮಕ ಆಂಗಿಕಾಭಿನಯ ಮನೋಜ್ಞತೆಯ ಹೊಳಪಿನಲ್ಲಿ  ಸೊಗ ಬೀರಿದವು.

ಪ್ರಸ್ತುತಿಯ ವಿಶೇಷ ನೃತ್ಯಬಂಧ ‘ವರ್ಣ’ ಪ್ರಸ್ತುತಿಯ ಹೃದಯಭಾಗ. ಕಲಾವಿದೆಯ ಪ್ರತಿಭೆಯನ್ನು ಒರೆಗೆ ಹಚ್ಚುವ, ಅಪಾರ ಸಾಮರ್ಥ್ಯ-ತಾಳ-ಲಯಜ್ಞಾನಗಳನ್ನು ಬೇಡುವ ಕ್ಲಿಷ್ಟಕರವಾದ ದೀರ್ಘ ಬಂಧ. ಗಾಯಕಿ ಭಾರತಿ ವೇಣುಗೋಪಾಲ್ ಕನ್ನಡಭಾಷೆಯಲ್ಲಿ ರಚಿಸಿದ ‘ಪದವರ್ಣ’ವನ್ನು ಆಕೆಯೇ ಬಹು ಭಾವಪೂರ್ಣವಾಗಿ ಹಾಡಿದ್ದು ನಿಜಕ್ಕೂ ವಿಶೇಷವಾಗಿತ್ತು.

ಮುಗ್ಧ ನಾಯಕಿಯ ಅಕಳಂಕ ಭಾವಸಾಗರ ‘ಪ್ರಾಣನಾಥ ಜಗನ್ಮೋಹನ ಶೃಂಗಾರ ಶೇಖರ’ ನಿಗೆ ಸಮರ್ಪಿತವಾದ ಸೌಮ್ಯಾಭಿನಯದ ಭಕ್ತಿಪ್ರಧಾನ ಅಭಿವ್ಯಕ್ತಿ ಅದಾಗಿತ್ತು. ವೈಷ್ಣವಿಯ ಅಂಗಶುದ್ಧಿಯ ನರ್ತನ ಲೀಲಾಜಾಲವಾಗಿ ಸಾಗಿತು. ತನ್ನ ಮನದೊಡೆಯ ಶ್ರೀಕೃಷ್ಣನನ್ನು ಸ್ವಾಗತಿಸಲು ನಡೆಸುವ ಸಂಭ್ರಮದ ಸಿದ್ಧತೆ, ಅಲಂಕಾರದ ವಿವರಗಳು ನವಿರಾಗಿ ಅಷ್ಟೇ ಸೂಕ್ಷ್ಮ ಅಭಿನಯದಲ್ಲಿ ಸಾಕಾರಗೊಂಡವು. ಪ್ರಾಣನಾಥ ಕೃಷ್ಣನ ವರ್ಣನೆ-ಮಹಿಮೆ-ಸಾಹಸಗಳ ಮುದವಾದ ವರ್ಣನೆ ನಾಯಕಿಗೆ ತಂದ ಧನ್ಯತಾಭಾವ ಸುವ್ಯಕ್ತವಾದವು. ಗೋಪಾಲನ ತುಂಟತನ, ನಲಿದಾಟ-ರಾಸಲೀಲೆಗಳನ್ನು ನೆನೆದು ನಾಯಕಿ, ಶೃಂಗಾರಭಾವದಲ್ಲಿ ಮಿಂದು ಲಜ್ಜೆ-ರೋಮಾಂಚಗೊಂಡು ರಂಗದ ತುಂಬಾ ಉಲ್ಲಸತೆಯಿಂದ ನಲಿದಾಡುವ ದೃಶ್ಯ ನಯನಮನೋಹರ. ಪ್ರೇಮನಿವೇದನೆಯ ಸರಸ ಸನ್ನಿವೇಶಗಳಲ್ಲಿ ಪ್ರದರ್ಶಿಸಿದ ಭಾವ-ಭಂಗಿಗಳು ಅನುಪಮ. ಗುರು ವಿದ್ಯಾ ಅವರ ನಟುವಾಂಗದ ಝರಿ ನಡುನಡುವೆ ಅವ್ಯಾಹತವಾಗಿ ಹರಿದು ಕಲಾವಿದೆಯ ಶಾಂತ ಸಲಿಲದಂಥ ನೃತ್ತಸಂಭ್ರಮಕ್ಕೆ ಇಂಬು ನೀಡಿದವು.   

ಮೈಸೂರಿನ ವೈಣಿಕ ವಿದ್ವಾನ್ ಆರ್.ಎನ್. ದೊರೆಸ್ವಾಮಿ ರಚನೆಯ ‘ಕೈಲಾಸಪತೆ ಗೌರೀಪತೆ’ – ಪರಶಿವನ ಮಹಿಮಾಧಿಕ್ಯವನ್ನು ಹಲವು ಸಂಚಾರಿ-ಕಥಾನಕಗಳ ಮೂಲಕ ನಾಟಕೀಯ ಅಂಶಗಳಿಂದ ಕೂಡಿದ ಸುಂದರ ದೃಶ್ಯಾವಳಿಯನ್ನು ವೈಷ್ಣವಿ ಪ್ರದರ್ಶಿಸಿದಳು.  ರಾವಣನ ಅಚಲವಾದ ತಪಸ್ಸು, ಕರುಳನ್ನು ವೀಣೆ ಮಾಡಿಕೊಂಡು ಸಾಮಗಾನ ನುಡಿಸಿ ಶಿವನನ್ನು ಸಾಕ್ಷಾತ್ಕರಿಸಿಕೊಂಡ ಅನುಪಮ ಸನ್ನಿವೇಶ ಪ್ರಭಾವಶಾಲಿಯಾಗಿ ಮೂಡಿಬಂತು. ಗಂಗಾವತರಣದ ಸಂಚಾರಿಯೂ ಅಷ್ಟೇ ಮೋಹಕವಾಗಿತ್ತು. ಕಲಾವಿದೆಯ ಆಕಾಶಚಾರಿ-ಮಂಡಿ ಅಡವುಗಳ ಪ್ರದರ್ಶನ, ಅಂಗಶುದ್ಧ ನೃತ್ತಮಂಜರಿ ಅವಳ ನೃತ್ಯ ಪ್ರಾವೀಣ್ಯವನ್ನು ಅನಾವರಣಗೊಳಿಸಿದವು.

ಮೈಸೂರು ಪರಂಪರೆಯಲ್ಲಿ ಜಾವಳಿಗಳ ಸ್ಥಾನ ಬಹು ವಿಶಿಷ್ಟ. ವಿರಹಾರ್ತ ನಾಯಕಿಯ ತುಮುಲಗಳಿಗೆ ದನಿಗೊಡುವ ‘ಸ್ವಾಮಿ ಇಂಟಿಕಿರಾದು..’ಎಂಬ ‘ಜಾವಳಿ’ ಭಾವಪೂರ್ಣ ಅಭಿನಯದಿಂದ ಗಮನ ಸೆಳೆಯಿತು. ನೊಂದ ಆಕೆಯ ಮಂದಗತಿಯ ಮೃದುಚಲನೆಗಳು, ಹತಾಶೆ-ನಿರಾಶೆಯ ಭಾವಗಳ ಸಾಂದ್ರತೆ ಮನಮುಟ್ಟಿತು. ಪ್ರತಿ ಚರಣದ ಅಂತ್ಯದಲ್ಲಿ ‘ಜಾರಡವು’ ಅಳವಡಿಸಿರುವ ಪದ್ಧತಿ ಸೊಗಸೆನಿಸಿತು.

ಅನಂತರ- ಡಾ.ಡಿ.ವಿ ಗುಂಡಪ್ಪನವರ ‘ಅಂತಃಪುರದ ಗೀತೆಗಳಿಂದ ಆಯ್ದ ಸುಮನೇಶ ರಂಜಿನಿ ರಾಗ -ಆದಿತಾಳದಲ್ಲಿ ‘ಧೃತ ನಾದವೀಣೆ’ ನುಡಿಸುವ ಲಲನೆಯ ಸಂತಸ-ಸಂಭ್ರಮದ ಉತ್ಸಾಹದ ಹೆಜ್ಜೆಗಳು, ಲಹರಿಯ ನರ್ತನ, ಬಾಗು-ಬಳುಕುಗಳು ರಮ್ಯವಾಗಿ ವ್ಯಕ್ತವಾದವು. ಕಲಾತ್ಮಕ ನೃತ್ಯ ಸಂಯೋಜನೆಯ ಗೀತೆಯ ಸುಮನೋಹರ ಅಭಿನಯ ಮುದಗೊಳಿಸಿತು.

ಶ್ರೀ ರಾಮನಾಥ ಅಯ್ಯಂಗಾರ್ ರಚನೆಯ ಪರಾಸ್ ರಾಗದ  ‘ತಿಲ್ಲಾನ’ ದಲ್ಲಿ ಧ್ರುತಗತಿಯ ಜತಿಗಳು ಉತ್ಸಾಹಭರಿತವಾಗಿ ಸಾಗುತ್ತ,  ಶೊಲ್ಲುಕಟ್ಟುಗಳ ಇಂಪಾದ ತಾನ, ಪಂಚನಡೆಗಳು,  ಮೈಯಡವು, ಶಿಲ್ಪಭಂಗಿಗಳು ಸುಮನೋಹರವಾಗಿ ಸಾಕಾರಗೊಂಡವು. ಮಂಗಳದೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು.

ಸಂಗೀತಮೇಳದಲ್ಲಿ ಗಾಯನ-ವಿ.ಭಾರತಿ ವೇಣುಗೋಪಾಲ್, ಮೃದಂಗ-ವಿ.ಮೈಸೂರು ದಾಸಪ್ಪ, ವೀಣೆ-ವಿ.ಗೋಪಾಲ್, ಕೊಳಲು- ವಿ.ವಿವೇಕ್ ಕೃಷ್ಣ, ನಟುವಾಂಗ ಗುರು ವಿದ್ಯಾ ರವಿಶಂಕರ್ ಸಹಕರಿಸಿದ್ದರು.                         ************ 

Related posts

ಮುದಗೊಳಿಸಿದ ವಿಶ್ರುತಿ ಆಚಾರ್ಯಳ ಆಹ್ಲಾದಕರ ಕಥಕ್ ನೃತ್ಯ

YK Sandhya Sharma

Guru Naman to Kathak expert Chitra Venugopal

YK Sandhya Sharma

Ramya Sabhapathi Rangapravesha Review article

YK Sandhya Sharma

Leave a Comment

This site uses Akismet to reduce spam. Learn how your comment data is processed.