Image default
Dance Reviews

Kala Sindhu Academy-Samvitha Rangapravesha

ಆನಂದದ ಅನುಭೂತಿ ನೀಡಿದ ಸಂವಿತಾಳ ಮನೋಜ್ಞ ನೃತ್ಯವಲ್ಲರಿ

ಬೆಂಗಳೂರಿನಲ್ಲಿ ಪ್ರತಿನಿತ್ಯ ಒಂದಲ್ಲ ಒಂದುಕಡೆ ನೃತ್ಯ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ನಮ್ಮ ಭಾರತೀಯ ಶಾಸ್ತ್ರೀಯ ಪರಂಪರೆಯ ಪ್ರತೀಕವಾದ ಭರತನಾಟ್ಯ ಪ್ರದರ್ಶನಗಳು ಕಲಾರಸಿಕರ ಕಣ್ಮನ ತುಂಬುತ್ತ ಮನರಂಜನೆಯ ಜೊತೆಗೆ ಅನನ್ಯ ಅನುಭವವನ್ನೂ  ನೀಡುತ್ತವೆ.

ಇತ್ತೀಚಿಗೆ ಜೆ.ಪಿ.ನಗರದ ಎಂ.ಎಲ್.ಆರ್ ಕನ್ವೆಂಶನಲ್ ಹಾಲ್ ನಲ್ಲಿ ನಡೆದ ‘ಕಲಾಸಿಂಧು ಅಕಾಡೆಮಿ ಆಫ್ ಡ್ಯಾನ್ಸ್’ ನ ತಜ್ಞ ನೃತ್ಯಗುರು ಪೂರ್ಣಿಮಾ ಗುರುರಾಜ ಅವರ ವಿಶಿಷ್ಟ ತರಬೇತಿಯಲ್ಲಿ ರೂಹು ತಳೆದ ಪ್ರತಿಭಾವಂತ ಕಲಾವಿದೆ ಕು. ಸಂವಿತಾ ದೇವಪ್ರಕಾಶ್ ಸಾದರಪಡಿಸಿದ ನೃತ್ಯ ಪ್ರಸ್ತುತಿಗಳು ಹೃದಯಸ್ಪರ್ಶಿಯಾಗಿದ್ದವು.

ರಂಗಪ್ರವೇಶದ ಈ ಸಂದರ್ಭದಲ್ಲಿ ಆಯ್ದುಕೊಳ್ಳಲಾದ ಎಲ್ಲ ಕೃತಿಗಳೂ ತನ್ನದೇ ಆದ ವಿಶಿಷ್ಟತೆಯಿಂದ ನೋಡುಗರನ್ನು ಸೆಳೆದು, ಪರಿಣಾಮಕಾರಿ ಅನುಭವದ ಮುದ್ರೆಯೊತ್ತಿದವು. ಹೊಸ ಪ್ರಯೋಗಗಳಿಗೆ ಹೆಸರಾದ, ಸದಾ ಹೊಸತನಕ್ಕೆಳೆಸುವ ಅನ್ವೇಷಕ ಮನೋವೃತ್ತಿಯ ಗುರು ಪೂರ್ಣಿಮಾ ಈ ರಂಗಪ್ರವೇಶದಲ್ಲೂ ಅನೇಕ ಹೊಸ ಅಂಶಗಳಿಂದ ವಿಶಿಷ್ಟರೆನಿಸಿದರು.  ಸಣ್ಣ ವಯಸ್ಸಿನ ಕಲಾವಿದೆಯ ವಯೋಮಾನಕ್ಕೊಪ್ಪುವ ಹದವಾದ ಇಲ್ಲಿನ ನೃತ್ಯ ಸಂಯೋಜನೆಗಳು, ದೈವೀಕಾರ್ಪಣೆಯ ಭಕ್ತಿ ಪ್ರಧಾನ ಕೃತಿಗಳು ಮನದುಂಬಿ, ರಸಾನುಭವ ನೀಡಿದವು.

‘ರಂಗಾರ್ಪಣೆ’ಯ ಶುಭಾರಂಭದಲ್ಲಿ ಪ್ರಸ್ತುತಿಗೊಂಡ ‘ಸರಸ್ವತಿ’ ರಾಗದ ಸಾಂಪ್ರದಾಯಕ  ‘ಪುಷ್ಪಾಂಜಲಿ’ಯಲ್ಲಿ ತಾಳಗಳ ಜತಿಯನ್ನು ವಿಶೇಷವಾಗಿ ಹೆಣೆಯಲಾಗಿತ್ತು. ಗಾಜಿನ ಗೊಂಬೆಯಂತಿದ್ದ  ಸುಕೋಮಲ ಮೈಮಾಟದ ಕಲಾವಿದೆ, ಲಯಬದ್ಧವಾದ ತನ್ನ ಮೊದಲ ಹೆಜ್ಜೆಗಳಲ್ಲೇ  ತನ್ನ ನೃತ್ಯದ ಗುಣಮಟ್ಟವನ್ನು ಪರಿಚಯಿಸಿದಳು. ದೇವಾನುದೇವತೆಗಳು, ಗುರು-ಹಿರಿಯರಿಗೆ ಸುಮನೋಹರ- ನೃತ್ತಮಲ್ಲಿಕಾ ವರ್ಷದಿಂದ ನಮನ ಸಲ್ಲಿಸಿದಳು. ಇದರೊಂದಿಗೆ ಹಾಸುಹೊಕ್ಕಾಗಿ ಕ್ಲಿಷ್ಟ ಜತಿಗಳ ಹೆಣಿಗೆಯಿಂದ ಕೂಡಿದ ‘ಮಠ್ಯ’ ತಾಳದ ‘ಅಲ್ಲರಿಪು’ವಿನಲ್ಲಿ ಸಂವಿತಾ, ತನ್ನ ಆಕರ್ಷಕ- ಅಸ್ಖಲಿತ ಖಚಿತ ಅಡವುಗಳಿಂದ ಗಮನ ಸೆಳೆದಳು. ಅಂಗಶುದ್ಧವಾದ ನರ್ತನ ನೋಡುವುದೇ ಒಂದು ಬಗೆಯ ಆನಂದ. ಅವಳ ಹರಿತವಾದ ನೃತ್ತಗಳು, ಸುಂದರ ಹಸ್ತವಿನಿಯೋಗ, ಮುದ್ರೆಗಳು ಕಣ್ಮಿಟುಕಿಸದೆ ನೋಡುವಂತೆ ಮಾಡಿದವು. ಗುರು ಪೂರ್ಣಿಮಾರ ನಟುವಾಂಗದ ಓಘ ಕಲಾವಿದೆಯ ಲವಲವಿಕೆಯ ಪಾದರಸದ ನೃತ್ಯಕ್ಕೆ ಮತ್ತಷ್ಟು ಸ್ಫೂರ್ತಿಯನ್ನು ನೀಡಿದ್ದು ದೃಗೋಚರವಾಗಿತ್ತು.

ಕೋಲಾರ ಶೈಲಿಯ ತುಂಬಾ ವಿರಳವಾದ ಬಂಧವೆಂದರೆ ‘ಠಾಯ’. ಇಂಥ ಬಂಧಗಳನ್ನು ರಂಗಪ್ರವೇಶದಂಥ ವಿಶಿಷ್ಟ ಸಂದರ್ಭಗಳಲ್ಲಿ ಸೇರಿಸುವ ಉದ್ದೇಶವೆಂದರೆ ಇಂಥ ಅಪರೂಪದ ಬಂಧಗಳು ಹೆಚ್ಚು ಕಲಾರಸಿಕರನ್ನು ತಲುಪಲಿ ಎಂಬುದೇ ಆಗಿದೆ. ಇದರಲ್ಲಿ ಹಸ್ತಾಭಿನಯದ ಸ್ಥಾನಕಗಳು ವೈವಿಧ್ಯಪೂರ್ಣವಾಗಿರುತ್ತವೆ. ದೇಹದ ಬಾಗುವಿಕೆಯೊಂದಿಗೆ ವಿರಳ ಜತಿಗಳ ಸಂಯೋಜನೆಯನ್ನೂ ಕಾಣಬಹುದಾಗಿದೆ.  

ಕಲಾವಿದೆ ಸಂವಿತಾ, ಅಂದು ಪ್ರಸ್ತುತಿಪಡಿಸಿದ ರೇವತಿರಾಗದ, ಮಿಶ್ರಛಾಪು ತಾಳದ ಬ್ರಹ್ಮದೇವನಿಗೆ ಸಮರ್ಪಿತವಾದ ‘ಬ್ರಹ್ಮ ಠಾಯ’ ಆಧ್ಯಾತ್ಮದ ನೆಲೆಯಲ್ಲಿ ದಿವ್ಯಾನುಭೂತಿ ನೀಡಿತು. ವೇದಪಠಣ ಮಂದ್ರಸ್ಥಾಯಿಯಿಂದ ತಾರಕ ಅತಿ ತಾರಕ್ಕೇರುವ ಸೌಂದರ್ಯವನ್ನು ಅನುಭವಿಸಿಯೇ ತಿಳಿಯಬೇಕು. ಪದ್ಮಸಂಭವನ ಉದಯ, ರೂಪ-ವೈಶಿಷ್ಟ್ಯಗಳನ್ನು ಮೃದುವಾದ ಚಲನೆಗಳ ಸುಂದರ ವಿನ್ಯಾಸದೊಂದಿಗೆ ಅಭಿವ್ಯಕ್ತಿಸಲಾಯಿತು. ಕಲಾವಿದೆಯ ಕಲಾತ್ಮಕ ಆಂಗಿಕಾಭಿನಯ ಸೊಗ ಬೀರಿದವು.

ಮುಂದೆ- ಪ್ರಸ್ತುತಿಯ ಹೃದಯಭಾಗ ಅಷ್ಟೇ ಹೃದ್ಯವಾದ ಭಾಗವೂ ಆದ ‘ವರ್ಣ’ ನೃತ್ಯ ವ್ಯಾಕರಣದ ಎಲ್ಲ ಅಂಶಗಳನ್ನೂ ಒಳಗೊಂಡಿರುತ್ತದೆ. ಕ್ಲಿಷ್ಟ ಜತಿಗಳಿಂದೊಡಗೂಡಿದ ದೀರ್ಘ ಬಂಧ. ಕಲಾವಿದರಿಗೆ ಉತ್ತಮ ಸ್ಮರಣಶಕ್ತಿ, ತಾಳ-ಲಯಜ್ಞಾನ ‘ವರ್ಣ’ದ ಪ್ರಸ್ತುತಿಯಲ್ಲಿ ಅತ್ಯಗತ್ಯ. ಅವರ ಸಾಮರ್ಥ್ಯಕ್ಕೆ ಸವಾಲೊಡ್ಡುವ ಈ ಬಂಧದ ನಿರ್ವಹಣೆ ಅಷ್ಟೇನು ಸರಾಗವಲ್ಲ.  

ಸಂವಿತಾ ಅಂದು ಪ್ರಸ್ತುತಪಡಿಸಿದ ಸಾವೇರಿ ರಾಗ-ಶ್ರೀ ಹೆಚ್.ಕೆ.ನಾರಾಯಣ ವಿರಚಿತ ಕನ್ನಡ ಭಾಷೆಯ ‘ವರ್ಣ’ -ಕೃಷ್ಣ ಕೇಂದ್ರಿತವಾಗಿತ್ತು. ‘ ಮಾಧವನ ಕರೆತಾರೆ…’ ಎಂದು ನಾಯಕಿ ತನ್ನಿನಿಯ ಕೃಷ್ಣನ ಬರುವಿಕೆಗಾಗಿ ಹಂಬಲಿಸಿ- ಹಾತೊರೆದು ಅವನ ಕಾಣದೆ ವಿರಹಭಾವದಿಂದ ಬಳಲಿ ನಿರಾಶೆ ಹೊಂದುವ ಮನನೀಯ ಭಾವಸಾಂದ್ರತೆ ಮನಮುಟ್ಟುತ್ತದೆ. ಪ್ರಾರಂಭದಲ್ಲಿ ಕೃಷ್ಣ ಕರ್ಣಾಮೃತ ಮತ್ತು ಅಮರಶತಕದ ಶ್ಲೋಕಗಳನ್ನು ಅಳವಡಿಸಿಕೊಳ್ಳಲಾಗಿತ್ತು. ವಿರಹತಪ್ತ ನಾಯಕಿಯ ಮಾನಸಿಕ ವಿಪ್ಲವ- ತಾಕಲಾಟಗಳನ್ನು ಬಿಂಬಿಸುವಂತೆ ಅಭಿವ್ಯಕ್ತವಾದ ಮಿಂಚಿನ ಸಂಚಾರದ ನೃತ್ತಗಳ ಕಾರಂಜಿ ಆಕೆಯ ನೋವಿನ ಉಲಿವನ್ನು ಪ್ರತಿಬಿಂಬಿಸಿದವು. ವಿರಹದ ಸ್ಥಾಯೀ-ಸಂಚಾರೀ ಭಾವಗಳು ಆರ್ಭಟವಿಲ್ಲದ ನವಿರಾದ ಅಂಗಚಲನೆಯ ನಡೆ,  ಸೌಮ್ಯಾಭಿವ್ಯಕ್ತಿಯ ಮುಖಭಾವದ ಗೆರೆಗಳಲ್ಲಿ  ಸ್ಫುರಿಸಿದವು. ‘ಎತ್ತ ಪೋದನೆ ಗೆಳತಿ ಇತ್ತ ಬಾರದೇ’- ಎನ್ನುತ್ತಾ ತನ್ನನ್ನು ಮರೆತನೇ ಇನಿಯಾ ಎಂದು ಕೊರಗುವ ಅವಳ ನೆನಪಲ್ಲಿ ಶ್ರೀಕೃಷ್ಣನ ಸ್ನೇಹಮಯ, ಕರುಣಾರ್ದ್ರ ಸ್ವಭಾವಗಳನ್ನು ಕಟ್ಟಿಕೊಡುವ ಚಿತ್ರಗಳು ಕಣ್ಮುಂದೆ ಬರುತ್ತವೆ. ದ್ರೌಪದಿಗೆ ಅಕ್ಷಯವಸ್ತ್ರ ಕರುಣಿಸುವ ಮತ್ತು ಅರ್ಜುನನಿಗೆ ಸಾರಥಿಯಾಗಿ ಸ್ನೇಹ ತೋರುವ, ವಿಶ್ವರೂಪ ತೋರಿ ಗೀತೋಪದೇಶ ಮಾಡುವ ಶ್ರೀಕೃಷ್ಣನ ದಿವ್ಯಗುಣಗಳ ಸಾಕ್ಷಾತ್ಕಾರದ ಸಂಚಾರಿ ಕಥಾನಕಗಳ ದೃಶ್ಯಗಳು ತೆರೆದುಕೊಳ್ಳುತ್ತವೆ.  

ಶ್ರೀ ಮಧ್ವಾಚಾರ್ಯರು ದ್ವಾರಕಿಯಿಂದ ಶ್ರೀಕೃಷ್ಣನನ್ನು ಉಡುಪಿಗೆ ತಂದು ಪ್ರತಿಷ್ಟಾಪನೆ ಮಾಡಿದ ಪ್ರಕರಣವನ್ನು ಈ ಸನ್ನಿವೇಶದಲ್ಲಿ ಜಾಣ್ಮೆಯಿಂದ ಅಳವಡಿಸಿರುವ ಗುರು ಪೂರ್ಣಿಮಾ, ನಾಯಕಿಯ ನೋವಿನ ಪದರಗಳಿಗೆ ಇನ್ನಷ್ಟು ಅರ್ಥ ತುಂಬಿದ್ದಾರೆ. ಜೀವಾತ್ಮ-ಪರಮಾತ್ಮ ಪರಿಕಲ್ಪನೆಯ ದ್ವೈತಭಾವವನ್ನು ಸಂಕೇತಿಸುವ ನಾಯಕಿಯ ಹುಡುಕಾಟದ ಮಜಲುಗಳನ್ನು ಸಂವಿತಾ ಬಹು ಮಾರ್ಮಿಕವಾಗಿ ಅಭಿನಯಿಸಿದಳು. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ ಕಲಾವಿದೆ, ಇನಿಯನ ಕಲ್ಲುಮನಸ್ಸನ್ನು ಕಂಡು ಕಡುನೊಂದ ನಾಯಕಿಯ ಪಾಲಿಗೆ ಕೃಷ್ಣಮೂರ್ತಿ ನಿಜವಾಗಿ ಕಲ್ಲಾಗಿಯೇ ಹೋದ ಭಾವವನ್ನು ಸೊಗಸಾಗಿ ಧ್ವನಿಸಿದಳು.    

ಮುಂದೆ- ‘ಶ್ರೀಚಕ್ರರಾಜ ಸಿಂಹಾಸನೇಶ್ವರಿ ಶ್ರೀ ಲಲಿತಾಂಬಿಕೆ’ ಯನ್ನು ದೈವೀಕವಾಗಿ ಸಾಕ್ಷಾತ್ಕರಿಸಿದ ಕಲಾವಿದೆ, ಭಕ್ತ್ಯಾತಿಶಯದಿಂದ ಅಖಿಲಾಂಡೇಶ್ವರಿಗೆ ಸಮರ್ಪಿಸಿಕೊಂಡ ನರ್ತನದ ಬಗೆ ಭಕ್ತಿಪೂರಿತವಾಗಿ ಹೃದಯಸ್ಪರ್ಶಿಯಾಗಿತ್ತು. ದೈನ್ಯತೆ-ಕರುಣಾರ್ದ್ರ ಭಾವಗಳು ಕೋಡಿಗೊಂಡವು. ಗಾಯಕ ಶ್ರೀವತ್ಸರ ಮೋಡಿಗೈದ ಭಾವಪೂರ್ಣ ಧ್ವನಿ ಮನವನ್ನಾವರಿಸಿ ಕಲರವಿಸಿತು. ದೇವಿಯ ಅಪೂರ್ವ ಭಾವ- ಭಂಗಿಗಳು ಅನ್ಯಾದೃಶವಾಗಿದ್ದವು.

ಕನ್ನಡ ಕವಿಗಳ ಕೃತಿಗಳಿಗೆ ಆದ್ಯತೆ ನೀಡುವ, ಅವುಗಳ ಮಾಧುರ್ಯವನ್ನು ಕಲಾರಸಿಕರು ಆಸ್ವಾದಿಸಲು ಅನುವಾಗುವಂತೆ ಭಾವಗೀತೆಗಳನ್ನು ನೃತ್ಯಕ್ಕೆ ಅಳವಡಿಸುವ ಉತ್ತಮ ಪರಿಪಾಠ ಪೂರ್ಣಿಮಾ ಅವರದು. ನೃತ್ಯ ಮಾಧ್ಯಮದಲ್ಲಿ ಕಾವ್ಯಮಾಧುರ್ಯ ನಲಿಯುವ, ಮನಂಬುಗುವ ಅಪರೂಪದ ಅವಕಾಶವನ್ನು ಕಲ್ಪಿಸಿಕೊಟ್ಟ ಕಾವ್ಯಪ್ರೀತಿಯ ಪೂರ್ಣಿಮಾರ ಸೃಜನಾತ್ಮಕತೆ ಉಳಿದವರಿಗೆ ಒಂದು ಮಾದರಿ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಕನ್ನಡದ ಪ್ರೀತಿಯ ಭಾವಕವಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರು ಕೃಷ್ಣ-ರಾಧೆಯರ ಒಲವಿನ ಸಂಗಮದ ಶೃಂಗಾರದ ಭಾವನೆಗಳನ್ನು ಪ್ರತಿಮಾತ್ಮಕವಾಗಿ ಕಟ್ಟಿಕೊಡುವ ಸುಂದರ ಭಾವಗೀತೆಯನ್ನು ಸಂವಿತಾ ಅಷ್ಟೇ ನವಿರಾಗಿ ತನ್ನ ಸುಮನೋಹರ ಅಭಿನಯದಿಂದ ದೃಶ್ಯಾತ್ಮಕವಾಗಿ ಚಿತ್ರಿಸಿದಳು.

ಕವಿಯ ಸಮ್ಮುಖ ಪ್ರಸ್ತುತಿಗೊಳಿಸಿದ್ದು ವಿಶೇಷ. ಪ್ರಕೃತಿ-ಪುರುಷನ ಭಾವಸಂಗಮ ಕನಸಿನ ಲೋಕಕ್ಕೆ ಕರೆದೊಯ್ದಿತು. ಕೃಷ್ಣ-ರಾಧೆಯರ ಮಿಲನಕ್ಕಾಗಿ ಪ್ರಕೃತಿಯೇ ಸಖಿಯಂತೆ ರಾಯಭಾರತ್ವ ವಹಿಸಿದ್ದ ‘ನೀಲಿ ಬಾನಿನಲಿ ತೂಗುತಿಹ…’ ಭಾವಸ್ಪಂದನ ಮುರಳೀಗಾನದಲ್ಲಿ ತೇಲುತ್ತ, ಧೂಮ್ರಲೀಲೆಯ ಮೋಡದ ಹಿನ್ನಲೆಯಲ್ಲಿ ಭ್ರಾಮಕ ವಾತಾವರಣವನ್ನು ಸೃಜಿಸಿತ್ತು. ಕತ್ತಲು-ಬೆಳಕಿನಾಟದಲ್ಲಿ ಮೂಡಿಬಂದ ನವಿರಾದ ಅಭಿನಯ, ‘ಬೀಸುವ ಗಾಳಿಗೆ ಸಾವಿರ ಕೊಳಲು, ವೇಣುವನದ ಬಯಲಿನಲಿ …’ ತಾದಾತ್ಮ್ಯದಲ್ಲಿ ಅನುರಣಿಸಿ ‘ಚಂದ್ರದೋಣಿ’ಯಲ್ಲಿ ಹುಟ್ಟು ಹಾಕುತ್ತ ಕಲಾವಿದೆ, ವಿಸ್ಮಯದ ಮಿದು ನಡೆಯಲ್ಲಿ ನಿಷ್ಕ್ರಮಿಸಿದ್ದು ಮುದನೀಡಿತ್ತು.

ತಂಜಾವೂರು ಮರಾಠಿ ಅನುಬಂಧದೊಂದಿಗೆ ಸಂಯೋಜಿಸಲಾದ ಶುದ್ಧ ನೃತ್ತಕ್ಕೆ ಪ್ರಾಧಾನ್ಯ ನೀಡುವ ಲಯಪ್ರಧಾನ ಬಂಧ ಬಿಲಹರಿ ರಾಗದ ವಿಶೇಷ ‘ತಿಲ್ಲಾನ’ವನ್ನು ಸಂವಿತಾ, ಜಾಣ್ಮೆಯಿಂದ ಹೆಣೆಯಲಾಗಿದ್ದ  ಕೊರಕು, ಮುಕ್ತಾಯಗಳೊಂದಿಗೆ ಮನಮೋಹಕವಾಗಿ ನಿರೂಪಿಸಿ ತನ್ನ ನೃತ್ಯ  ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು.

ಸಂವಿತಳ ಚೇತೋಹಾರಿ ನೃತ್ಯಕ್ಕೆ ಪ್ರಜ್ವಲ ಪ್ರಭಾವಳಿ ರೂಪಿಸಿದ ಮುಮ್ಮೇಳದಲ್ಲಿ ಗಾಯನ- ಶ್ರೀವತ್ಸ, ಕೊಳಲು- ನರಸಿಂಹಮೂರ್ತಿ, ಮೃದಂಗ- ಶ್ರೀಹರಿ ರಂಗಸ್ವಾಮಿ, ವೀಣೆ-ಗೋಪಾಲ್ ಮತ್ತು ನಟುವಾಂಗ ಗುರು- ಪೂರ್ಣಿಮಾ ಗುರುರಾಜ ಮುಖ್ಯ ಪಾತ್ರ ವಹಿಸಿದ್ದರು.

                              *******************                   

Related posts

‘ಶ್ರೀರಾಮಾಯಣ ದರ್ಶನ’ದ ದಿವ್ಯಾನುಭೂತಿಯ ಸುಂದರ ದೃಶ್ಯಕಾವ್ಯ

YK Sandhya Sharma

ರಸಾನುಭವ ನೀಡಿದ ಮಧುಶ್ರೀ ನರ್ತನ

YK Sandhya Sharma

‘ರಸಾನಂದ’ದ ಚೇತೋಹಾರಿ ನೃತ್ಯಗಳ ಸರಮಾಲೆ

YK Sandhya Sharma

Leave a Comment

This site uses Akismet to reduce spam. Learn how your comment data is processed.