ಮೈಸೂರು ಶೈಲಿ ಗುರುಪರಂಪರೆಯ ಕಡೆಯ ಕೊಂಡಿಯಂತಿರುವ ಕರ್ನಾಟಕ ಕಲಾಶ್ರೀ ಗುರು ವಿದ್ಯಾ ರವಿಶಂಕರ್ ಅವರ ಕಲಾಪ್ರಪೂರ್ಣ ಎರಕದಲ್ಲಿ ರೂಹು ತಳೆದ ಸುಂದರ ಕಲಾಶಿಲ್ಪ ವಿದುಷಿ.ವೈಷ್ಣವಿ ಬಿ.ಭಟ್ ಬಹುಮುಖ ಪ್ರತಿಭೆ. ಶ್ರೀ ಮಾತೃಕಾ ಕಲ್ಚರಲ್ ಟ್ರಸ್ಟ್ ನೃತ್ಯಶಾಲೆಯ ಖ್ಯಾತ ಗುರುವಿನ ನೆಚ್ಚಿನ ಶಿಷ್ಯೆಯಾಗಿ ಕಳೆದ 18 ವರ್ಷಗಳಿಂದ ಬದ್ಧತೆಯಿಂದ ಮೈಸೂರು ಶೈಲಿ ಭರತನಾಟ್ಯ ಸಂಪ್ರದಾಯದ ಚೌಕಟ್ಟಿನಲ್ಲಿ ನೃತ್ಯ ಕಲಾವಿದೆಯಾಗಿ ಸಾಧನೆಯ ಪಥದಲ್ಲಿ ಕ್ರಮಿಸುತ್ತಿದ್ದಾಳೆ. ಇದೇ ಶನಿವಾರ 4 ರಂದು, ಸಂಜೆ 5.30 ಗಂಟೆಗೆ ಜಯನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ವೈಷ್ಣವಿ, ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಲಿದ್ದಾಳೆ. ಈಕೆಯ ನೃತ್ಯಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕಲಾರಸಿಕರಿಗೆ ಆದರದ ಆಹ್ವಾನ.
ಬೆಂಗಳೂರಿನ ಬಿ. ಪ್ರತಿಮಾ ಮತ್ತು ಎಂ.ಪಿ ಬಾಲಚಂದ್ರ ಅವರ ಸುಪುತ್ರಿ ವೈಷ್ಣವಿ ಬಾಲಪ್ರತಿಭೆ ನಾಲ್ಕರ ಬಾಲೆಗೆ ನೃತ್ಯ ಬಾಲ್ಯದ ಒಲವು. ನಾಟ್ಯಗುರಗಳಾಗಿ ದೊರೆತವರು ಹಿರಿಯ ನೃತ್ಯ ಸಾಧಕಿ ವಿದುಷಿ ವಿದ್ಯಾ ರವಿಶಂಕರ್. ಸತತ 18 ವರ್ಷಗಳ ಆಸಕ್ತಿ- ಪರಿಶ್ರಮಗಳ ಅಭ್ಯಾಸ. ಕರ್ನಾಟಕ ಸರ್ಕಾರದ ಜ್ಯೂನಿಯರ್, ಸೀನಿಯರ್, ವಿದ್ವತ್ ಪೂರ್ವ ಮತ್ತು ಅಂತಿಮ ಎಲ್ಲ ನೃತ್ಯ ಪರೀಕ್ಷೆಗಳಲ್ಲೂ ಅತ್ಯುಚ್ಚ ಅಂಕಗಳಿಂದ ಜಯಶಾಲಿಯಾದ ಹೆಮ್ಮೆ ಅವಳದು. ಪ್ರಸ್ತುತ ಮಂಡಳಿಯ ನೋಂದಾಯಿತ ಪರೀಕ್ಷಕಿ. ರಾಜ್ಯಾದ್ಯಂತ ನೂರಾರು ಪ್ರದರ್ಶನಗಳನ್ನು ನೀಡಿರುವ ಇವಳು, ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಮತ್ತು ಹಿಂದೂಸ್ಥಾನಿ ಸಂಗೀತ ಕಲಿಯುತ್ತಿರುವ ಬಹುಮುಖ ಪ್ರತಿಭೆ. ಪ್ರಸ್ತುತ ಇಂಜಿನಿಯರಿಂಗ್ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿನಿ.
ಪ್ರತಿಭಾನ್ವಿತೆಯಾದ ವೈಷ್ಣವಿ, ಕರ್ನಾಟಕ ಸಂಗೀತವನ್ನು ಗುರು ವಿದ್ಯಾ ಅವರಲ್ಲಿ, ಸುಗಮ ಸಂಗೀತವನ್ನು ನರಹರಿ ದೀಕ್ಷಿತರಲ್ಲಿ ಮತ್ತು ಹಿಂದೂಸ್ಥಾನೀ ಸಂಗೀತವನ್ನು ಸರಸ್ವತಿ ಹೆಗಡೆ ಅವರಲ್ಲಿ ಅಭ್ಯಾಸ ಮಾಡುತ್ತಿರುವ ವೈಶಿಷ್ಟ್ಯ ಇವಳದು. ಓದಿನಲ್ಲೂ ಮಹಾ ಚುರುಕು. ಪ್ರಾಥಮಿಕ ಶಿಕ್ಷಣ ಪ್ರಾರ್ಥನಾ ಶಾಲೆ, ಪ್ರೌಢ ಶಿಕ್ಷಣ ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ ಉನ್ನತಶ್ರೇಣಿಯಲ್ಲಿ ತೇರ್ಗಡೆ. ಪಿಯೂಸಿಯಲ್ಲೂ ಅತ್ಯುತ್ತಮಾಂಕಗಳು. ಶಾಲಾ-ಕಾಲೇಜುಗಳಲ್ಲಿ ಸಂಗೀತ-ಭರತನಾಟ್ಯ, ಸಮೂಹ ನೃತ್ಯ, ಯೋಗ, ಹಗ್ಗದ ಮಲ್ಲಕಂಭ, ನಾಟಕ, ಕಂಸಾಳೆ, ಆಶುಭಾಷಣ, ವೇಷಭೂಷಣ ಮುಂತಾದ ವಿವಿಧ ಎಲ್ಲ ಸ್ಪರ್ಧೆಗಳಲ್ಲೂ ಬಹುಮಾನ ಸೂರೆ. ವಿದ್ಯಾಭ್ಯಾಸಕ್ಕೆ ಪೂರಕವಾದ ಹಲವಾರು ಗಣಿತ, ವಿಜ್ಞಾನ ಸ್ಪರ್ಧೆಗಳಲ್ಲಿ ಪ್ರಪ್ರಥಮ ಸ್ಥಾನ, ಚಿನ್ನದ ಪದಕಗಳನ್ನು ಗಳಿಸಿರುವುದು ಇವಳ ವೈಶಿಷ್ಟ್ಯ.
ಪ್ರಸ್ತುತ ಡಾ. ಅಂಬೇಡ್ಕರ್ ಇನ್ಸ್ಟಿಟ್ಯುಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿದ್ಯಾರ್ಥಿನಿ. ವಿವಿಧ ಖ್ಯಾತ ತಾಂತ್ರಿಕ ಸಂಸ್ಥೆಗಳಲ್ಲಿ ವಿಶೇಷ ತರಬೇತಿ ಪಡೆದಿರುವ ಇವಳು, ಇಂಗ್ಲೆಂಡಿನಲ್ಲಿ ಬಯೋ ಮೆಡಿಕಲ್ ಇಂಜಿನಿಯರಿಂಗ್ ನಲ್ಲಿ ಉನ್ನತ ವಿದ್ಯಾಭ್ಯಾಸ ಮುಂದುವರೆಸಲು ದಾಖಲಾತಿ ಹೊಂದಿರುವುದು ಇವಳ ಅಗ್ಗಳಿಕೆ.
ಸದಾ ಲವಲವಿಕೆಯ ಕಾರಂಜಿಯಾಗಿರುವ ವೈಷ್ಣವಿ, ಶ್ರೀ ಮಾತೃಕ ಶಾಲೆಯ ಎಲ್ಲ ನೃತ್ಯರೂಪಕಗಳಲ್ಲಿ ಪ್ರಮುಖಪಾತ್ರ ವಹಿಸಿ ಮೆಚ್ಚುಗೆ ಗಳಿಸಿದ್ದಾಳೆ. 2008 ರಲ್ಲಿ ಮಕ್ಕಳ ಹಬ್ಬದಿಂದ ಹಿಡಿದು ಕಲಾ ಪ್ರತಿಭೋತ್ಸವ, ದಸರಾ ಮಹೋತ್ಸವ , ಶ್ರೀರಂಗಪಟ್ಟಣ, ಗಿನ್ನಿಸ್ ದಾಖಲೆ ಪಡೆದ ಕೂಚಿಪುಡಿ ನೃತ್ಯ ‘ತರಂಗಂ’, ನವದೆಹಲಿ ಮುಂತಾದ ಪ್ರತಿಷ್ಠಿತ, ಅನೇಕ ಪ್ರಮುಖ ಉತ್ಸವಗಳಲ್ಲಿ 2022 ರವರೆಗೆ ನಿರಂತರ ವಿವಿಧ ವೇದಿಕೆಗಳಲ್ಲಿ ನೃತ್ಯಪ್ರದರ್ಶನ ನೀಡಿದ ಸುಯೋಗ ಅವಳದು. ವಯಸ್ಸು ಚಿಕ್ಕದಾದರೂ ವೈಷ್ಣವಿಯ ನೃತ್ಯ ಮುನ್ನಡೆ-ವಿದ್ಯಾ ಮುನ್ನಡೆ ಹಿರಿದಾಗಿದ್ದು, ಸಾಧನೆಯ ಕನಸು ಹೊತ್ತಿರುವ ಭರವಸೆಯ ಕಲಾವಿದೆ ಇವಳು.