
ಅಂಗಶುದ್ಧ ನೃತ್ಯವನ್ನು ನೋಡಲೇ ಒಂದು ಬಗೆಯ ಚೆಂದ. ಅದಕ್ಕೆ ಶಾಸ್ತ್ರೀಯ ಚೌಕಟ್ಟು ಇರುವುದರಿಂದ ಭರತನಾಟ್ಯದಲ್ಲಿ ಪ್ರಮುಖವಾಗಿ ಇರಲೇಬೇಕಾದ ಅಂಗಶುದ್ಧತೆ, ಖಚಿತ ಹಸ್ತಮುದ್ರೆ, ಅಡವು, ಹಸ್ತವಿನಿಯೋಗ, ಆಂಗಿಕ ಚಲನೆಗಳು ಎಲ್ಲವೂ ಕರಾರುವಾಕಾಗಿ ನಿರೂಪಿತವಾದರೆ ನೃತ್ಯ ಪ್ರದರ್ಶನ ತಾನೇ ತಾನಾಗಿ ಅಚ್ಚುಕಟ್ಟಾಗಿ ರೂಪಿತಗೊಳ್ಳುತ್ತದೆ. ಹೀಗೆ ತಯಾರು ಮಾಡುವುದು ನೃತ್ಯಗುರುಗಳ ಕರ್ತವ್ಯ-ಜವಾಬ್ದಾರಿ. ಎರಡು ಗಂಟೆಗೂ ಮಿಕ್ಕಿ ರಂಗದ ಮೇಲೆ ಸತತವಾಗಿ ‘ಮಾರ್ಗಂ’ ಸಂಪ್ರದಾಯದ ಅನುಕ್ರಮಣಿಕೆಯಲ್ಲಿ ಕೃತಿಗಳನ್ನು ನೃತ್ತ-ನೃತ್ಯಾಭಿನಯದೊಂದಿಗೆ, ಭಾವಪೂರ್ಣವಾಗಿ, ಚೈತನ್ಯ-ಲವಲವಿಕೆ ಕಳೆದುಕೊಳ್ಳದೆ ನರ್ತಿಸುವ ಹೊಣೆ ಮುಖ್ಯವಾಗಿ ನರ್ತಕರದಾಗಿರುತ್ತದೆ. ಇದಕ್ಕೆ ತಿಂಗಳಾನುಗಟ್ಟಲೆ ಸೂಕ್ತ ತರಬೇತಿ ನೀಡುವ ಗುರುಗಳ ಪರಿಶ್ರಮವೂ ಅಗಣಿತ. ಹೀಗೆ ಪ್ರತಿ ‘ರಂಗಪ್ರವೇಶ’ದ ಹಿಂದೆಯೂ ಇಂಥ ಬದ್ಧತೆಯ ಒಂದು ಹಿನ್ನಲೆ ಇರುತ್ತದೆ ಎಂಬುದು ಗಮನಾರ್ಹ ಅಂಶ.


ಇಂಥ ಒಂದು ಸುಂದರ ನೋಟ ದಕ್ಕಿದ್ದು, ಇತ್ತೀಚಿಗೆ ಎ.ಡಿ.ಎ. ರಂಗಮಂದಿರದಲ್ಲಿ ನಡೆದ ನಿಷ್ಠ ಗುರು ಕೆ.ಎಸ್. ನಾಗಶ್ರೀ ಅವರ ಕಲಾಮೂಸೆಯಲ್ಲರಳಿದ ಸುಂದರ ನೃತ್ಯಶಿಲ್ಪ ನಿಖಿತಾ ಅಂಬರ್ಕರ್ ಭರತನಾಟ್ಯ ರಂಗಪ್ರವೇಶದ ಸಂದರ್ಭದಲ್ಲಿ. ಮೊದಲಿನಿಂದ ಕಡೆಯವರೆಗೂ ಬತ್ತದ ಉತ್ಸಾಹ, ತುಂಬಿದ ಲವಲವಿಕೆ, ಚೈತನ್ಯಪೂರ್ಣ ಹೊಮ್ಮಿದ ಸುಮನೋಹರ ನರ್ತನವನ್ನು ಪ್ರದರ್ಶಿಸಿ ನಿಖಿತಾ ಕಲಾರಸಿಕರಿಂದ ‘ಸೈ’ಎನಿಸಿಕೊಂಡಳು.
ವಲಚಿರಾಗ- ಆದಿತಾಳದ ಮಿಶ್ರಜಾತಿ ‘ಅಲ್ಲರಿಪು’ವಿನಿಂದ ಕಲಾವಿದೆಯ ಹಸನ್ಮುಖದ ನರ್ತನ ಶುಭಾರಂಭಗೊಂಡಿತು. ಗುರು-ಹಿರಿಯರಿಗೆ, ದೇವಾನುದೇವತೆಗಳಿಗೆ ನಮನ ಸಲ್ಲಿಸುವ ‘ಪುಷ್ಪಾಂಜಲಿ’ -ನೃತ್ತಾಮೋದದಿಂದ ಸಮರ್ಪಿತವಾಯಿತು. ಅಂಗಶುದ್ಧತೆಗೆ ಹಿಡಿದ ಕೈಗನ್ನಡಿಯಾಗಿತ್ತು ಅವಳ ಖಚಿತ ನೃತ್ತಾವೃತ ಆಂಗಿಕಾಭಿನಯ. ವೈವಿಧ್ಯಪೂರ್ಣ ಅಡವುಗಳನ್ನು ಸ್ವರಕ್ಕೆ ಹೆಣೆದ ಸಾವೇರಿ ರಾಗ-ರೂಪಕತಾಳದ ‘ಜತಿಸ್ವರ’ ದಲ್ಲಿ, ನೃತ್ಯ ವ್ಯಾಕರಣದ ಎಲ್ಲ ಆಯಾಮಗಳನ್ನೂ ಸುಲಲಿತವಾಗಿ ನಿಖಿತಾ, ಹರಿತ ಚಲನೆಗಳಲ್ಲಿ ಅಷ್ಟೇ ರಮ್ಯವಾಗಿ ನಿರೂಪಿಸಿದಳು.



ಅಭಿನಯಕ್ಕೆ ಮೊದಲ ಅವಕಾಶ ನೀಡುವ ‘ಶಬ್ದಂ’ -ನಲ್ಲಿ ರಾಗಮಾಲಿಕೆ- ಮಿಶ್ರಚಾಪು ತಾಳದಲ್ಲಿ, ಶ್ರೀಕೃಷ್ಣನ ಲೀಲಾ ವಿನೋದದ ಸ್ಮರಣೀಯ ಘಟನೆಗಳು, ಅವನ ಅಪೂರ್ವ ಸೌಂದರ್ಯ-ವೈಶಿಷ್ಟ್ಯಗಳು, ಅವನಮೋಹಕ ಮುರಳೀಗಾನದ ಚುಂಬಕ ಶಕ್ತಿಯ ವರ್ಣನೆಯು ಕಲಾವಿದೆಯ ಸೌಮ್ಯಾಯಾಭಿನಯದ ಸೊಗಡಿನಲ್ಲಿ ಆಕರ್ಷಕ ನೃತ್ತಮೇಳದಲ್ಲಿ ಬಿಂಬಿತವಾದವು.
ಮುಂದಿನ ಭಾಗ ನಾಟ್ಯದ ಪ್ರಧಾನ ಹಂತ. ರಾಗ-ಭಾವ ತಾಳಗಳ ಉತ್ಕೃಷ್ಟತೆಯನ್ನು ‘ವರ್ಣ’ದಲ್ಲಿ ಕಾಣಬಹುದು. ಖರಹರಪ್ರಿಯ ರಾಗ-ಆದಿತಾಳದಲ್ಲಿ ಶ್ರೀಮತಿ ಭಾರತೀ ವೇಣುಗೋಪಾಲ್ ರಚಿಸಿ, ಸಂಗೀತ ಸಂಯೋಜಿಸಿದ ಭಕ್ತಿಪ್ರಧಾನ ವರ್ಣ ಕೃತಿಗೆ ಜಿ.ಎಸ್. ನಾಗರಾಜ್ ಜತಿಗಳನ್ನು ರಚಿಸಿದ್ದು, ಗುರು ನಾಗಶ್ರೀ ನೃತ್ಯ ಸಂಯೋಜಿಸಿದ್ದರು.



‘ರಾಮ ಭಾನುಕುಲಾಂಬುಧಿ ಸೋಮ..’ ಎಂಬುದಾಗಿ ಶ್ರೀರಾಮನ ದಿವ್ಯವ್ಯಕ್ತಿತ್ವ, ಗುಣಾತಿಶಯ-ಮಹಿಮೆಗಳನ್ನು ವರ್ಣಿಸುವ ಕೃತಿಯ ಸಾರಸರ್ವಸ್ವವನ್ನು ಬಿಂಬಿಸುವಂತೆ ಕಲಾವಿದೆ ತನ್ನ ಪರಿಣತ ಅಭಿನಯದಿಂದ-ಭಕ್ತಿ ಪಾರಮ್ಯದಿಂದ ಸಾಕಾರಗೊಳಿಸಿದಳು. ನಡುನಡುವೆ ನಾಗಶ್ರೀ ಅವರ ಲಯಬದ್ಧ-ಶಕ್ತಿಶಾಲಿ ನಟುವಾಂಗದ ಕೊನ್ನಕೋಲುಗಳಿಗೆ ಅಷ್ಟೇ ಗರಿಗರಿಯಾದ ಹೊಳಪಿನ ಕ್ಲಿಷ್ಟ ನೃತ್ತಗಳನ್ನು ಬೆಸೆದು ನಿರೂಪಿಸಿದ ಗರಿಮೆ ಕಲಾವಿದೆಯದು. ಆಕೆಯ ನೃತ್ತಾಭಿನಯ ಲಾಸ್ಯಭರಿತವಾಗಿದ್ದು ಕಲಾತ್ಮಕತೆಯ ಮೆರುಗನ್ನು ಪಡೆದುಕೊಂಡಿತ್ತು. ಯಾಂತ್ರಿಕವೆನಿಸದ ಜತಿಗಳ ರಂಗು ಪಡೆದು, ಇಡೀ ರಂಗವನ್ನು ಬಳಸಿಕೊಂಡು ಸೊಬಗಿನಿಂದ ನರ್ತಿಸಿದಳು. ಕಲಾವಿದೆಯ ನಿಷ್ಕ್ರಮಣ ಬಹು ವಿಶಿಷ್ಟವಾಗಿತ್ತು.




ಶ್ರೀ ಹೆಚ್. ಆರ್. ಕೇಶವಮೂರ್ತಿ ನೃತ್ಯ ಸಂಯೋಜಿಸಿದ ದಾಸಶ್ರೇಷ್ಠ ಪುರಂದರದಾಸರ ದೇವರನಾಮ ‘ಆಡಿದನೋ ರಂಗ…’ ನ ಕಾಳಿಂಗಮರ್ಧನ, ಗೋವರ್ಧನ ಗಿರಿಧಾರಿ ಮುಂತಾದ ಸಾಹಸದ ಗಾಥೆಯನ್ನು ನಿಖಿತಾ, ಕಣ್ಮುಂದೆ ಕಟ್ಟುವಂತೆ ತನ್ನ ಮುದವಾದ ಅಭಿನಯದಿಂದ, ಶಕ್ತಿಶಾಲಿಯಾದ ಚಲನೆಗಳಿಂದ, ಹಾವಿನ ಹರಿತದಂಥ ಲೀಲಾಜಾಲ ಮಂಡಿ ಅಡವುಗಳ ಚಮತ್ಕಾರದಿಂದ, ಸುಮನೋಹರ ಭಂಗಿಗಳಿಂದ ಸೊಗಯಿಸಿದಳು.
ಮುಂದೆ- ಪೂರ್ವೀಕಲ್ಯಾಣಿ- ಆದಿತಾಳದ ‘ಹಂಪೆ ವಿರೂಪಾಕ್ಷ ದೇವ’ನ ಮಹಿಮೆಯನ್ನು ಬಣ್ಣಿಸುವ ‘ಪ್ರಣಯಾಮಿ ಪಂಪ ಪುರಪತೇ’ -ಕೃತಿ ದವೀಕಾನಂದ ನೀಡುವಲ್ಲಿ ಸಫಲವಾಯಿತು. ಆದಿ ಮಧ್ಯಂತರ ರಹಿತ ವಿರೂಪಾಕ್ಷನನ್ನು ಕಟ್ಟಿಕೊಟ್ಟ ಭಂಗಿಗಳು ಆಕರ್ಷಕವಾಗಿದ್ದವು. ಬಿಲಹರಿ ರಾಗ- ಆದಿತಾಳದ ‘ತಿಲ್ಲಾನ’- ಪಾದಭೇದಗಳ ಸೌಂದರ್ಯ ಬೀರುತ್ತ ಹರಿತವಾದ ನೃತ್ತ ಮೇಳದಲ್ಲಿ ವರ್ಚಸ್ಸು ಪಡೆಯಿತು. ಮಾತೆ ತ್ರಿಪುರ ಸುಂದರಿಯ ಆರಾಧನಾ ಭಾವದ ಮಿಂಚು ಕಲಾವಿದೆಯ ಅಭಿನಯದಲ್ಲಿ ಕಂಗೊಳಿಸಿತು.



ನಿಖಿತಳ ನೃತ್ಯದ ಸೊಬಗನ್ನು ಎತ್ತಿಹಿಡಿದ ವಾದ್ಯ ಮೇಳ- ಗಾಯನ ಭಾರತಿ ವೇಣುಗೋಪಾಲ್, ಮೃದಂಗ -ಜಿ. ಎಸ್. ನಾಗರಾಜ್, ಪಿಟೀಲು- ಸಿ. ಮಧುಸೂದನ್, ಕೊಳಲು- ಸ್ಕಂಧಕುಮಾರ್ ಮತ್ತು ನಟುವಾಂಗ- ಗುರು ಕೆ.ಎಸ್. ನಾಗಶ್ರೀ .
*****************