










ಡಿವಿಜಿ ಜನ್ಮದಿನ -ಮಂಕುತಿಮ್ಮನ ಮಾರ್ಗ- ವಿಶಿಷ್ಟ ಪ್ರಯೋಗ
ಬೆಂಗಳೂರಿನ ಖ್ಯಾತ ನೃತ್ಯಕಲಾವಿದೆಯರು ಶ್ರೀಮತಿ ಸ್ನೇಹಾ ಕಪ್ಪಣ್ಣ ಮತ್ತು ಪದ್ಮಿನಿ ಅಚ್ಚಿ. ಇಬ್ಬರೂ ನಾಟ್ಯಗುರುಗಳೂ ಕೂಡ. ನೃತ್ಯಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿ ನಾಟ್ಯಜಗತ್ತಿನಲ್ಲಿ ಗುರುತಿಸಿಕೊಂಡವರು. ಇಬ್ಬರೂ ರಂಗನಟಿಯರು, ಅನೇಕ ಕನ್ನಡ ಧಾರಾವಾಹಿಗಳಲ್ಲಿ ನೆನಪಿನಲ್ಲುಳಿಯುವಂಥ ಪಾತ್ರಗಳನ್ನು ಅಭಿನಯಿಸಿ ಜನಪ್ರಿಯತೆ ಪಡೆದವರು. ಸದಾ ಏನಾದರೊಂದು ಹೊಸ ಪ್ರಯೋಗಗಳನ್ನು ಕಾರ್ಯಗತಗೊಳಿಸುವ ಉತ್ಸುಕರು ಅಷ್ಟೇ ಕ್ರಿಯಾಶೀಲರು ಕೂಡ.
‘ಅಚ್ಚಿ ಕ್ಲಾಸಿಕಲ್ ಡಾನ್ಸ್ ಸೆಂಟರ್’ ನೃತ್ಯಶಾಲೆಯಲ್ಲಿ ಬದ್ಧತೆಯಿಂದ ನೃತ್ಯಶಿಕ್ಷಣ ನೀಡುವ ವಿದುಷಿ. ಪದ್ಮಿನಿ ನಾಡಿನಾದ್ಯಂತ ಉತ್ತಮ ನೃತ್ಯಪ್ರದರ್ಶನಗಳಿಂದ ಹೆಸರಾದ ಪ್ರತಿಭಾವಂತೆ. ಸ್ನೇಹಾ ಕಪ್ಪಣ್ಣ ‘ಭ್ರಮರಿ ಡಾನ್ಸ್ ರೆಪರ್ಟರಿ’ ಮೂಲಕ ಜಗತ್ತಿನಾದ್ಯಂತ, ನಶಿಸಿಹೋಗುತ್ತಿರುವಂಥ ವಿಶಿಷ್ಟ ಜಾನಪದ ನೃತ್ಯಗಳನ್ನು, ತರಬೇತಿಯನ್ನು ಪ್ರಚುರಗೊಳಿಸುತ್ತಿರುವ ಚೈತನ್ಯಪೂರ್ಣೆ.
ವಿಶ್ವವನ್ನೇ ಆವರಿಸಿ ಜನಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದ ಕರೋನಾ ಮಹಾಪಿಡುಗು ಆವರಿಸಿದ ಜಡದಿನಗಳಲ್ಲಿ ಈ ಗೆಳತಿಯರಿಗೆ ಏನಾದರೊಂದು ಹೊಸತನ್ನು ಆಗು ಮಾಡುವ ಚಿಂತನೆ. ರಂಗದ ಮೇಲೆ ಪ್ರದರ್ಶನಗಳನ್ನು ನೀಡಲು ಸಾಧ್ಯವಾಗದ ಕಾಲಾವಧಿಯಲ್ಲಿ, ಕಾಲವನ್ನು ವ್ಯರ್ಥ ಬೀಳುಗೊಡದೆ ಹೊಸಚಿಂತನೆಗಳು ನಡೆದಿತ್ತು. ಭರತನಾಟ್ಯ ಸಂಪ್ರದಾಯದಲ್ಲಿದ್ದ ಕನ್ನಡ ರಚನೆಗಳ ಕೊರತೆ ಈಗಾಗಲೇ ಇವರ ಗಮನಕ್ಕೆ ಬಂದಿತ್ತು. ಈ ದಿಸೆಯಲ್ಲಿ ಕನ್ನಡ ಕೃತಿಗಳನ್ನು ನೃತ್ಯಕ್ಕೆ ಸಂಯೋಜಿಸುವ ಆಲೋಚನೆ ಬಂದಂತೆ, ಸಾಹಿತ್ಯ ದಿಗ್ಗಜ ಡಾ. ಡಿ.ವಿ.ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ ಅವರ ಕಣ್ಣಿಗೆ ಎದ್ದುಕಂಡಿತು. ಜೀವನದ ಎಲ್ಲ ಆಯಾಮಗಳ ಮೇಲೂ ಕ್ಷಕಿರಣ ಬೀರುವ ಈ ಅಪೂರ್ವ ಕೃತಿಯ ಕೆಲ ಪದ್ಯಗಳನ್ನು ಭರತನಾಟ್ಯದ ‘ಮಾರ್ಗ’ ಪದ್ಧತಿಗೆ ಅಳವಡಿಸುವ ಆಲೋಚನೆ ಚಿಗಿತಂತೆ ತಯಾರಾಯಿತು ಈ ‘ಮಂಕುತಿಮ್ಮನ ಮಾರ್ಗ’ ನೃತ್ಯ ಕಾರ್ಯಕ್ರಮ. ಕಲಾವಿದೆದ್ವಯರು ಈ ಹೊಸಪ್ರಯೋಗದ ಪರಿಕಲ್ಪನೆ, ನೃತ್ಯಸಂಯೋಜನೆ, ವಿನ್ಯಾಸವನ್ನು ರೂಪುಗೊಳಿಸಿ ಶುದ್ಧ ಭರತನಾಟ್ಯ ಶೈಲಿಯಲ್ಲಿ ಪ್ರದರ್ಶನಕ್ಕೆ ಇದೀಗ ಅಣಿಮಾಡಿದ್ದಾರೆ. ಈ ಪ್ರಸ್ತುತಿಯಲ್ಲಿ ಯಾವುದೇ ಪೌರಾಣಿಕ ಸಂಚಾರಿ ಕಥನಗಳಿಲ್ಲದೆ ಸಾಮಾಜಿಕ ಆಯಾಮದ ವಿವಿಧ ಸಮಸ್ಯೆ, ವಿಚಾರಗಳನ್ನು ಅಳವಡಿಸಿಕೊಂಡಿರುವುದು ಗಮನಾರ್ಹ.
ಮಂಕುತಿಮ್ಮನ ಕಗ್ಗದ ಪದ್ಯಗಳಲ್ಲಿ ಒಂದೇ ಚಿಂತನೆಯಿರುವ ಬೇರೆ ಬೇರೆ ಗುಚ್ಚಗಳನ್ನು ವಿಷಯಾಧಾರಿತವಾಗಿ ಆಯ್ದುಕೊಂಡು, ಅದನ್ನು ಮಾರ್ಗ ಸಂಪ್ರದಾಯದ ಕೃತಿಗಳನ್ವಯ ಹೊಂದಿಸಿ, ಸಂಗೀತತಜ್ಞ ಶ್ರೀವತ್ಸ ಅವರ ಸಂಗೀತ ಸಂಯೋಜನೆಯಲ್ಲಿ ಇದೇ 17 ಗುರುವಾರ ಜೆ.ಎಸ್.ಎಸ್. ಆಡಿಟೋರಿಯಂ ನಲ್ಲಿ ಸಂಜೆ 6. 30 ಕ್ಕೆ ಡಿವಿಜಿ ಅವರ ಹುಟ್ಟುಹಬ್ಬದ ಪ್ರಶಸ್ತ ದಿನದಂದು ಪ್ರದರ್ಶಿಸಲಾಗುತ್ತಿದೆ. ಈ ನೂತನ ಪ್ರಯೋಗವನ್ನು ಸಾಕ್ಷೀಕರಿಸಲು ಎಲ್ಲ ಆಸಕ್ತರಿಗೂ ಸುಸ್ವಾಗತ.

