



ಅಂತರರಾಷ್ಟ್ರೀಯ ಖ್ಯಾತಿ ಪಡೆದ ‘’ ಅಭಿನವ ಡಾನ್ಸ್ ಕಂಪೆನಿ’ಯ ಕಥಕ್ ನೃತ್ಯಗುರು ದಂಪತಿ ನಿರುಪಮಾ ಹಾಗೂ ಟಿ.ಡಿ.ರಾಜೇಂದ್ರ ಅವರ ನುರಿತ ಗರಡಿಯಲ್ಲಿ ತಯಾರಾದ ಕಲಾಶಿಲ್ಪ ಕು. ಭಾವನಾ ಪರಾಶರ್ ಪ್ರತಿಭಾವಂತೆ. ಬಾಲ್ಯದಿಂದಲೇ ನೃತ್ಯದ ಒಲವುಳ್ಳ ಭಾವನಾ, ಕಳೆದ ಹತ್ತು ವರ್ಷಗಳಿಂದ ಬದ್ಧತೆಯಿಂದ ನಿರುಪಮಾ ರಾಜೇಂದ್ರ ದಂಪತಿಗಳಲ್ಲಿ ಕಥಕ್ ನೃತ್ಯವನ್ನು ಅತ್ಯಾಸಕ್ತಿಯಿಂದ ಕಲಿಯುತ್ತಿದ್ದಾಳೆ. ಅವಳ ಕಲಾನೈಪುಣ್ಯದ ಸಾಕ್ಷಾತ್ಕಾರಕ್ಕಾಗಿ ವಿದ್ಯುಕ್ತವಾಗಿ ಭಾವನಾ, ದಿ. 12 ಶನಿವಾರ ಸಂಜೆ 6 ಗಂಟೆಗೆ ಕೋರಮಂಗಲದಲ್ಲಿರುವ ಕಲಾದ್ವಾರಕ ಮಂದಿರದಲ್ಲಿ ರಂಗಪ್ರವೇಶ ಮಾಡಲಿದ್ದಾಳೆ.
ಬೆಂಗಳೂರಿನ ಬಿ.ಸಿ. ನಂಜುಂಡಸ್ವಾಮಿ ಮತ್ತು ಎಂ.ಶ್ರೀಕೃಪಾ ಅವರ ಪ್ರೀತಿಯ ಪುತ್ರಿ ಭಾವನಾ, ಸಣ್ಣವಯಸ್ಸಿನಲ್ಲೇ ನೃತ್ಯ ಕಲಿಯುವತ್ತ ಆಸಕ್ತಿ ತೋರಿದ ಕಾರಣ ಮಗಳನ್ನು ಹೆತ್ತವರು ಪ್ರಸಿದ್ಧ ನೃತ್ಯಗುರುಗಳಾದ ನಿರುಪಮಾ-ರಾಜೇಂದ್ರ ಅವರಲ್ಲಿ ನೃತ್ಯ ಕಲಿಯಲು ಸೇರಿಸಿದರು. ಭಾವನಾ, ಪರಿಶ್ರಮದಿಂದ ನೃತ್ಯದ ಎಲ್ಲ ಆಯಾಮಗಳನ್ನೂ ಮೈಗೂಡಿಸಿಕೊಳ್ಳುತ್ತ ಬಂದಳು. ಜೊತೆಯಲ್ಲಿ ಓದುತ್ತಿದ್ದ ಜನಕ ವಿದ್ಯಾಲಯದಲ್ಲಿ ಮತ್ತು ಕಾಲೇಜಿನಲ್ಲಿ ಎಲ್ಲ ನೃತ್ಯ ಸ್ಪರ್ಧೆಗಳಲ್ಲೂ ಬಹುಮಾನಗಳನ್ನು ಪಡೆದವಳು ಮತ್ತು ನಿರಂತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡವಳು. ಮುಂದೆ- ಬೆಂಗಳೂರಿನ ಪಿ.ಇ.ಎಸ್. ಸೌತ್ ಕ್ಯಾಂಪಸ್ ನಿಂದ ಕಂಪ್ಯೂಟರ್ ಅಪ್ಲಿಕೇಷನ್ ವಿಷಯದಲ್ಲಿ ಪದವಿ ಪಡೆದಳು. ಅನಂತರ ಜೈನ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಹೆಮ್ಮೆ ಅವಳದು.
ನೃತ್ಯವನ್ನೇ ಜೀವನದ ಉಸಿರಾಗಿಸಿಕೊಂಡಿರುವ ಭಾವನಾಳ ಪ್ರಿಯ ಹವ್ಯಾಸ ‘ರೂಪದರ್ಶಿ’ ಯಾಗಿ ತೊಡಗಿಸಿಕೊಳ್ಳುವುದು. ಕಥಕ್ ನೃತ್ಯಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು ಹೊತ್ತ ಈ ಯುವಕಲಾವಿದೆ, ಇದರೊಡನೆ ‘ಕರಣ‘ಗಳ ಬಗ್ಗೆಯೂ ಗುರು ನಿರುಪಮಾ ಅವರಲ್ಲಿ ವಿಶೇಷ ತರಬೇತಿ ಪಡೆದಿದ್ದಾಳೆ. ಅಭಿನವ ಡಾನ್ಸ್ ಕಂಪೆನಿ ಆಯೋಜಿಸಿದ ಪಂಡಿತ್ ಬಿರ್ಜು ಮಹಾರಾಜ್ ಮತ್ತು ಗುರು ಕುಮುದಿನಿ ಲಖಿಯಾ ಅವರ ಕಾರ್ಯಾಗಾರಗಳಿಂದ ವಿಶೇಷ ನೃತ್ಯಜ್ಞಾನ ಪಡೆದಿರುವ ಅದೃಷ್ಟವಂತೆ. ‘ಅಭಿನವ ಡಾನ್ಸ್ ಕಂಪೆನಿ’’ಯ ಭಾಗವಾಗಿರುವ ಭಾವನಾ , ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿತವಾದ ಕಂಪೆನಿಯ ಎಲ್ಲ ಪ್ರಮುಖ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅಗ್ಗಳಿಕೆ ಇವಳದು.
ವೇದಿಕೆಯ ಮೇಲೆ ಸುಂದರವಾಗಿ ನರ್ತಿಸುವ ಭಾವನಾ ಭರವಸೆಯ ಉದಯೋನ್ಮುಖ ಕಲಾವಿದೆಯಾಗಿದ್ದು ಇವಳ ರಂಗಪ್ರವೇಶದಲ್ಲಿ ಈಕೆಯ ನೃತ್ಯವೈಭಾವವನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಆದರದ ಸುಸ್ವಾಗತ.

