Image default
Dance Reviews

ರಸಾನುಭವ ನೀಡಿದ ಕನ್ನಡ ಕೃತಿಗಳ ಝೇಂಕಾರ

ಸಾಮಾನ್ಯವಾಗಿ ಯಾವುದೇ ‘ರಂಗಪ್ರವೇಶ’ವಾಗಲಿ ‘ಮಾರ್ಗಂ’ ಪದ್ಧತಿಯಲ್ಲೇ ನಾಟ್ಯಪ್ರಸ್ತುತಿಯ ಅನುಕ್ರಮ ಸಾಗುತ್ತದೆ. ಪ್ರಾರಂಭದ ಪುಷ್ಪಾಂಜಲಿ, ಅಲ್ಲರಿಪು, ಜತಿಸ್ವರ ಮುಂತಾದವು  ಶುದ್ಧನೃತ್ತದ ನಾಟ್ಯಾರ್ಪಣೆಗಳು. ಇಲ್ಲಿ ಅಡವುಗಳು, ಕರಣಗಳು, ಚಾರಿಗಳು ಮತ್ತು ಅಂಗಹಾರಗಳು ನೃತ್ತದ ಮುಖ್ಯ ಅಂಗಗಳಾಗಿದ್ದು, ಅಂಗಾಂಗ ಚಲನ ವಿನ್ಯಾಸಗಳು ಪ್ರಧಾನವಾಗಿರುತ್ತವೆ. ನಂತರ ಪ್ರಸ್ತುತಿಯ ಪ್ರಧಾನ ಭಾಗ ‘ವರ್ಣ’ದ ಪ್ರಸ್ತುತಿ. ಇದರಲ್ಲಿ ಅಷ್ಟ ನಾಯಿಕೆಯರ ವಿವಿಧ ಮನಸ್ಥಿತಿಗಳು, ಹೆಚ್ಚಾಗಿ ಸ್ವೀಯಾ ನಾಯಕಿ ಭಾವಗಳ ವಿವಿಧ ಅವಸ್ಥೆಗಳನ್ನು ಕುರಿತ ಕೃತಿಗಳನ್ನು ಅಥವಾ ಭಕ್ತಿ ಪ್ರಧಾನವಾದ ಕೃತಿಗಳನ್ನು ಆರಿಸಿಕೊಳ್ಳಲಾಗುವುದು. ಹೆಚ್ಚಾಗಿ ‘ವರ್ಣಗಳು’ ತೆಲುಗು-ತಮಿಳು ಭಾಷೆಯಲ್ಲಿಯೇ ರಚಿತವಾಗಿವೆ. ಅನೂಚಾನವಾಗಿ ಬಂದ ಅವೇ ವರ್ಣಗಳನ್ನು ‘ರಂಗಪ್ರವೇಶ’ಗಳಲ್ಲಿ ಅಳವಡಿಸಿಕೊಂಡಿರುವ ಸಂಪ್ರದಾಯವನ್ನು ನಾವು ಗಮನಿಸಬಹುದು. ಆದರೆ ಈಚೀಚೆಗೆ ಕನ್ನಡದಲ್ಲಿ ವರ್ಣಗಳು ರಚಿತವಾಗಿ  ಹೊಸ ಪರಿಕಲ್ಪನೆಯಲ್ಲಿ ಪ್ರಸ್ತುತಗೊಳ್ಳುತ್ತಿರುವ ಪರಿಪಾಠ ಕಾಣಬಹುದಾಗಿದೆ. ಈ ಬೆಳವಣಿಗೆ ಆಶಾದಾಯಕ. ಈ ನಿಟ್ಟಿನಲ್ಲಿ, ಅನೇಕ ಜನ ವಾಗ್ಗೇಯಕಾರರು, ನಾಟ್ಯಾಚಾರ್ಯರು ಕನ್ನಡ ಭಾಷೆಯಲ್ಲಿ ‘ವರ್ಣ’ಗಳನ್ನು ರಚಿಸುತ್ತಿರುವುದಲ್ಲದೆ, ರಂಗಪ್ರವೇಶಗಳಲ್ಲಿ ಅಳವಡಿಸಿಕೊಂಡಿರುವುದು ತುಂಬಾ ಸಂತೋಷಕರ ಸಂಗತಿ.

ಕೆಲವು ನಾಟ್ಯ ಗುರುಗಳು ಇಡೀ ಕಾರ್ಯಕ್ರಮವನ್ನು ಕನ್ನಡದ ಕೃತಿಗಳೇ ಝೇಂಕರಿಸುವಂತೆ ‘ರಂಗಪ್ರವೇಶ’ಗಳನ್ನು ಕನ್ನಡ ಕೃತಿಗಳಿಂದ ಶೋಭೆಗೊಳಿಸುತ್ತಿರುವುದು ಹೆಮ್ಮೆಯ ವಿಚಾರ. ಇತ್ತೀಚಿಗೆ ನಗರದ ‘ಕೃಷ್ಣದೇವರಾಯ ಸಭಾಂಗಣ’ದಲ್ಲಿ ನಡೆದ ‘ಸಾಧನ ಸಂಗಮ’ ನೃತ್ಯಶಾಲೆಯ ಗುರು ಜ್ಯೋತಿ ಪಟ್ಟಾಭಿರಾಮ್ ಶಿಷ್ಯೆ ಸುಮನಾ ನಾಗರಾಜ್ ರಂಗಪ್ರವೇಶದಲ್ಲಿ ಗುರು ಜ್ಯೋತಿ ರಚಿಸಿದ ‘ಎಲೈ ಹಂಸವೇ ಎನ್ನ ಹಸಿತವದನ ಮದನರೂಪನ ಎಲ್ಲೂ ಕಾಣೆನೇ…’ ಎಂಬ ಕನ್ನಡದ ‘ವರ್ಣ’ ಗಮನಾರ್ಹವಾಗಿತ್ತು. ಪ್ರತಿಬಾರಿಯೂ ಅವರು ತಮ್ಮ ಶಿಷ್ಯರ ನೃತ್ಯ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯ ಕೃತಿಗಳಿಗೇ ಒತ್ತು ನೀಡುವುದು ಸ್ತುತ್ಯಾರ್ಹ ಸಂಗತಿ.

ಗುರು ಸಾಧನಶ್ರೀ ಅವರ ಉತ್ತಮ ತರಬೇತಿಯಿಂದ ರೂಪುಗೊಂಡ ಸುಮನಳ ‘ನೃತ್ಯ ಸೋಪಾನ’ ಶೀರ್ಷಿಕೆಯ ರಂಗಪ್ರವೇಶ ಕಾರ್ಯಕ್ರಮ, ದೇವಾಲಯದ  ವಿಶಿಷ್ಟ ನೃತ್ಯ ಸಂಪ್ರದಾಯದ ಸುಂದರ ’ಮಲ್ಲಾರಿ’ಯೊಂದಿಗೆ ಪ್ರಾರಂಭವಾಯಿತು. ಮೆರವಣಿಗೆಯಲ್ಲಿ ವಾದ್ಯಮೇಳ, ನಾದಸ್ವರಗಳೊಂದಿಗೆ ನರ್ತಕಿಯರು ಬೀದಿಗಳಲ್ಲಿ ನೃತ್ಯ ಮಾಡಿಕೊಂಡು ಸಾಗುತ್ತಿದ್ದ ಅಪರೂಪದ ದೃಶ್ಯವನ್ನು ತನ್ನ ಆತ್ಮವಿಶ್ವಾಸದ ನೃತ್ತಾಮೋದದ ಮನೋಲ್ಲಾಸದ ಭಂಗಿಗಳಲ್ಲಿ  ಮನೋಹರವಾಗಿ ಕಟ್ಟಿಕೊಟ್ಟಳು ಕಲಾವಿದೆ.

        ಅನಂತರ- ಪರಿಣಾಮಕಾರಿ ಸಂಚಾರಿಗಳಿಂದ ಗಮನ ಸೆಳೆದ ‘ಅಭಯದಾತ್ರಿ’-ದೇವೀಕೃತಿಯನ್ನು ಸಾದರಪಡಿಸುವಲ್ಲಿ ಸುಮನಳ ಅಭಿನಯ ಪ್ರತಿಭೆ ಎದ್ದುಕಂಡಿತು.

ಆಡುಭಾಷೆಯ ಸರಳ ಕನ್ನಡ ಪದಗಳಲ್ಲಿ ಮುದಗೊಳ್ಳುವಂತೆ ಜ್ಯೋತಿಯವರು ರಚಿಸಿದ ‘ಪದವರ್ಣ’ವನ್ನು ಸುಮನಾ ತನ್ನ ಸುಮನೋಹರ ಆಂಗಿಕಾಭಿನಯದ ಮೋಡಿಯಲ್ಲಿ ಸುಲಲಿತವಾಗಿ ಪ್ರಸ್ತುತಿಪಡಿಸಿದಳು. ಹಂಸಸಖಿಯ ಮೂಲಕ ತನ್ನ ಪ್ರೇಮ ಸಂದೇಶವನ್ನು ಕಳಿಸುವ ಪ್ರೇಮಿಯ ನವಿರುಕಲ್ಪನೆಯನ್ನು ಕಲಾವಿದೆ, ಸುಮನೋಹರ-ಆಕರ್ಷಕ ನೃತ್ಯವಲ್ಲರಿಯಿಂದ ಸಾಕಾರಗೊಳಿಸಿದಳು. ಕವಿತ್ವಂನೊಂದಿಗೆ ಮಿಳಿತಗೊಂಡ ಸಾಧನಶ್ರೀಯ ನಟುವಾಂಗ ಹೊಸ ಆಯಾಮದಲ್ಲಿ ರಂಜಿಸಿತು. ಲೋಕಧರ್ಮೀಯ ಆಯಾಮದಲ್ಲಿ ಸಾದರಗೊಂಡ ಪ್ರಸ್ತುತಿಯಲ್ಲಿ ಹಂಸದ ನೆಪದಲ್ಲಿ ತಾನೇ ಪಕ್ಷಿನೋಟದಲ್ಲಿ ದೃಶ್ಯಗಳನ್ನು ಅನಾವರಣಗೊಳಿಸಿ, ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ ಸುಮನಳ ಅರಳುಗಣ್ಣುಗಳ ಸುಂದರಾಭಿನಯ ಮನಸೆಳೆಯಿತು.  

ಡಿವಿಜಿ ಅವರ ಅಂತಃಪುರ ಗೀತೆಯಲ್ಲಿ ‘ಏನೇ ಶುಕಭಾಷಿಣಿ… ಸುದ್ದಿ ಏನೇ ಮನೋಲ್ಲಾಸಿನಿ ..’ ಎಂದು ಕವಿ, ಮದನಿಕೆಯ  ಭಾವಕೋಶದ ರಮ್ಯ-ಕೋಮಲಭಾವನೆಗಳಿಗೆ ಧ್ವನಿಯಾಗುತ್ತಾರೆ.

ಅಂತ್ಯದಲ್ಲಿ ಚೇತೋಹಾರಿಯಾಗಿ ಮೂಡಿಬಂದ ಸುಂದರ ನೃತ್ತಗತಿ, ಲಯಬದ್ಧ ಪಾದಚಲನೆ, ಆಕರ್ಷಕ ಭಂಗಿಗಳ ಸಮಾಗಮವಾಗಿದ್ದ ‘’ತಿಲ್ಲಾನ’’ದೊಂದಿಗೆ ಪ್ರಸ್ತುತಿ ಸಂಪನ್ನವಾಯಿತು.

            ***********************************

                                                                 

Related posts

ವಿದ್ಯಳ ಹೃದಯಸ್ಪರ್ಶೀ ನರ್ತನ ನೈಪುಣ್ಯ

YK Sandhya Sharma

ಚೈತ್ರಳ ಮನೋಜ್ಞ ಅಭಿನಯದ ಮನೋಹರ ನೃತ್ಯ

YK Sandhya Sharma

ಹರ್ಷಿತಳ ಕಣ್ಮನ ತುಂಬಿದ ಆಹ್ಲಾದಕರ ‘ಕಥಕ್’ ವಿಲಾಸ

YK Sandhya Sharma

2 comments

Vasuki March 9, 2022 at 6:08 pm

ನಿಮ್ಮ ವಿಮರ್ಶೆ ಇಷ್ಟು ಹೃದ್ಯವಾಗಿರಬೇಕಾದರೆ ನೃತ್ಯ ಪ್ರದರ್ಶನ ಇನ್ನೆಷ್ಟು ಅಮೋಘವೋ ಎನಿಸುತ್ತದೆ. ಬರಹ ಚೆನ್ನಾಗಿದೆ.

Reply
YK Sandhya Sharma March 11, 2022 at 6:45 pm

ವಾಸುಕಿ ಅವರೇ, ನಿಮ್ಮ ಮೆಚ್ಚುಗೆಗೆ ವಿನಮ್ರ ನಮನಗಳು. ನಿಮ್ಮ ಲೇಖನ ಪ್ರೀತಿ ಸದಾ ಹೀಗೇ ಇರಲಿ.

Reply

Leave a Comment

This site uses Akismet to reduce spam. Learn how your comment data is processed.