ಬೆಂಗಳೂರಿನಲ್ಲಿ ‘ಕೊರೊನಾ’ ಕಾರ್ಮೋಡ ಕೊಂಚ ಸರಿದನಂತರ ಸಾಂಸ್ಕೃತಿಕ ಚಟುವಟಿಕೆಗಳು ಮೆಲ್ಲನೆ ಆರಂಭವಾಗಿವೆ. ಕಲಾರಸಿಕರಿಗೋ ಸಂಗೀತ-ನೃತ್ಯಾದಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಸದವಕಾಶವನ್ನು ಖ್ಯಾತ ‘ಸಂಗೀತ ಸಂಭ್ರಮ’ ಸಂಸ್ಥೆಯ ನಿರಂತರ ಸಂಗೀತ-ನೃತ್ಯೋತ್ಸವ ಇತ್ತೀಚಿಗೆ ಕಲ್ಪಿಸಿತ್ತು.
ಪ್ರತಿವರ್ಷ ನಿರಂತರ ನಡೆಸಿಕೊಂಡು ಬರುತ್ತಿರುವ ‘ಸಂಗೀತ-ಸಂಭ್ರಮ’ ಸಂಸ್ಥೆಯು, ಮಲ್ಲೇಶ್ವರದ ‘ಸೇವಾಸದನ’ ದಲ್ಲಿ ವರ್ಣರಂಜಿತ-ವೈವಿಧ್ಯಪೂರ್ಣ ಸುಂದರ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಯಶಸ್ವಿಯಾಗಿ ನಡೆದ ಈ ‘ರಸೋಲ್ಲಾಸ’ ಕಾರ್ಯಕ್ರಮದ ಶುಭಾರಂಭದಲ್ಲಿ ಗಾನರಸಾಮೃತ ಕರ್ನಾನಂದಕರವಾಗಿ ಹೃನ್ಮನ ತಣಿಸಿದರೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರತಿಭೆಗಳನ್ನು ಆಯ್ಕೆ ಮಾಡಿ ಅವರ ಕೊಡುಗೆಯನ್ನು ಸ್ಮರಿಸಿ ಸಂಸ್ಥೆಯ ಮುಖ್ಯಸ್ಥೆ ಪುಸ್ತಕಂ ರಮಾ ಪುರಸ್ಕರಿಸಿದ ದೃಶ್ಯ ಮನನೀಯವಾಗಿತ್ತು. ಅಂದಿನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭರತನಾಟ್ಯ ಕಲಾವಿದೆ ಪದ್ಮಶ್ರೀ ಪುರಸ್ಕೃತೆ ಪ್ರತಿಭಾ ಪ್ರಹ್ಲಾದ್ ಆಗಮಿಸಿದ್ದರು. ಪ್ರಖ್ಯಾತ ಸಂಗೀತ ವಿದುಷಿ ನಾಗಮಣಿ ಶ್ರೀನಾಥ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಸಕ್ರಿಯ ಪರಿಸರವಾದಿ ಶ್ರೀಮತಿ ರೇವತಿ ಕಾಮತ್, ಆಗಮ ಪ್ರವೀಣ ಶ್ರೀಧರ ಹಯಗ್ರೀವ ಭಟ್ಟರ್, ರಂಗಭೂಮಿಯ ಹಿರಿಯ ಕಲಾವಿದ ಎಂ.ಎಸ್. ಶ್ರೀರಾಮುಲು, ಕೊಳಲುವಾದಕ ಹೆಚ್.ಎಸ್. ವೇಣುಗೋಪಾಲ್, ವಯೊಲಿನ್ ವಾದಕರು ಜೆ.ಕೆ.ಶ್ರೀಧರ್, ಭರತನಾಟ್ಯ ಕಲಾವಿದ ಡಾ. ಶ್ರೀಧರ್, ಸೌಂಡ್ ಇಂಜಿನಿಯರ್ ಬಿ. ಓಂಕಾರ ಮೂರ್ತಿ – ಅವರನ್ನು ಸನ್ಮಾನಿಸಲಾಯಿತು.
ಸದಭಿರುಚಿಯ ಸಭಿಕರು ಕಿಕ್ಕಿರಿದಿದ್ದ ಸೇವಾಸದನದಲ್ಲಿ ಕಲಾ ವಾತಾವರಣ ನೆಲೆಸಿತ್ತು. ವಾಶಿಂಗ್ಟನ್ ನಲ್ಲಿ ನೆಲೆಸಿರುವ ಯುವ ಸಂಗೀತಗಾರ ನಕುಲ್ ಸುಂದರಂ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತದ ಸುಧೆ ಮತ್ತು ಲೂಯಿಸ್ವಿಲ್ಲೆ – ಕೆಂಟಕಿಯಲ್ಲಿರುವ ಶ್ರೀರಂಗ ಐಯ್ಯರ್ ಅವರ ಪಾಶ್ಚಾತ್ಯ ವಯೊಲಿನ್ ನಿನಾದ ವಿವಿಧ ಆಯಾಮಗಳಲ್ಲಿ ಪ್ರಸ್ತುತಗೊಂಡು ಮೆಚ್ಚುಗೆಯ ಚಪ್ಪಾಳೆ ಪಡೆಯಿತು.
ಅನಂತರ- ಮುದ್ರಿಕಾ ಫೌಂಡೇಶನ್ ನಾಟ್ಯಗುರು ಮಿನಾಲ್ ಪ್ರಭು ಅವರ ಶಿಷ್ಯೆಯರು ಭರತನಾಟ್ಯದ ಸೊಗಡನ್ನು ಉಣಿಸಿದರು. ಅನಂತರ- ಲೂಯಿಸ್ವಿಲ್ಲೆ – ಕೆಂಟಕಿಯಲ್ಲಿರುವ ಭರತನಾಟ್ಯ ಕಲಾವಿದೆ ಕು. ಶ್ಯಾಮ ಅಯ್ಯರ್ ‘ ನನ್ನು ಬ್ರೊವು ಲಲಿತಾ’ – ಸುಮಾರು ಮುಕ್ಕಾಲು ಗಂಟೆಯ ಬಹು ಅರ್ಥಪೂರ್ಣವಾದ ಅಷ್ಟೇ ಗಾಢ ಚಿಂತನೆಗೆ ಹಚ್ಚಿದ ಏಕವ್ಯಕ್ತಿ ಪ್ರದರ್ಶನದ ಸುಮನೋಹರ ನೃತ್ಯರೂಪಕವನ್ನು ತಮ್ಮ ಪ್ರೌಢ ಅಭಿನಯದಿಂದ ಸಾದರಗೊಳಿಸಿ ವಿಶಿಷ್ಟ ಅನುಭವ ನೀಡಿದರು. ಅಂತ್ಯದಲ್ಲಿ ಅಮೇರಿಕಾದ ಕಾವೇರಿ ನಾಟ್ಯಯೋಗದ ಪ್ರಸಿದ್ಧ ಕಲಾವಿದ ಡಾ. ಶ್ರೀಧರ್ ಮತ್ತು ಸೌಂದರ್ಯ ಶ್ರೀವತ್ಸ ಅವರಿಂದ ಸೊಗಸಾದ ‘ಆಂಡಾಳ್’ ನೃತ್ಯನಾಟಕ ಪ್ರದರ್ಶಿತವಾಯಿತು.
ಪ್ರತಿವರ್ಷ ‘ನಿರಂತರಂ’ ಆಯೋಜಿಸುವ ಹೊಸ ಪರಿಕಲ್ಪನೆಯ ಸಂಗೀತ-ನೃತ್ಯ ಕಾರ್ಯಕ್ರಮಗಳು ಜನಾದರಣೀಯವಾಗಿ ಸ್ವತಃ ವಿಶ್ವಮಾನ್ಯ ಸಂಗೀತಕಾರ್ತಿಯಾಗಿ ಹೆಸರು ಮಾಡಿರುವ ಕಂಚಿನ ಕಂಠದ ಗಾಯಕಿ ಪುಸ್ತಕಂ ರಮಾ ಅವರ ಕಲಾ ಕೊಡುಗೆಗೆ ಸಾಕ್ಷಿ ನೀಡುತ್ತವೆ.
**********************