Image default
Dance Reviews

ಕಣ್ಮನ ಸೆಳೆದ ವೈವಿಧ್ಯಪೂರ್ಣ ‘ತಾಳ್-ತರಂಗ್ ’

ಚಳಿಗಾಲದ ಒಂದು ಮುದವಾದ ಸುಂದರ ಸಂಜೆ- ವಿಶಿಷ್ಟ ವೇದಿಕೆ- ಅನೇಕ  ಪ್ರತಿಭಾನ್ವಿತ ಕಲಾವಿದರ ಸಮಾಗಮ- ವೈವಿಧ್ಯ ಬಗೆಯ ಶೈಲಿಯ ಮನರಂಜನಾ ನೃತ್ಯ ಕಾರಂಜಿ !!.. ಇಂಥ ಸಮ್ಮೋಹನ ಕಾರ್ಯಕ್ರಮವನ್ನು ಆಯೋಜಿಸಿದವರು ‘ನೃತ್ಯ ದರ್ಪಣ’ದ ರೂವಾರಿ- ಪ್ರಯೋಗಶೀಲ ಖ್ಯಾತ ಕಥಕ್ ನಾಟ್ಯಗುರು ವೀಣಾ ಭಟ್.

ಹೊಸ ಪರಿಕಲ್ಪನೆಯ ನವಪ್ರಯೋಗ- ರಂಗದ ಮೇಲೆ ಸಾಕ್ಷಾತ್ಕಾರಗೊಂಡ ವರ್ಣರಂಜಿತ ವಸ್ತ್ರ ವೈಭವ, ನಯನ ಮನೋಹರ ನೃತ್ಯ ಚಲನೆಗಳು, ಕಿವಿ ತುಂಬಿದ ಸುಶ್ರಾವ್ಯ ಗಾನದೌತಣ. ಎಲ್ಲ ಬಗೆಯ ಅಭಿರುಚಿಯನ್ನೂ ತಣಿಸುವ ವಿವಿಧ ಬಗೆಯ ಮನರಂಜನೆ. ಸರ್ವ ಪ್ರದರ್ಶಕ ಕಲಾಪ್ರಕಾರಗಳನ್ನು ಸಂಘಟಿಸುವ ಮತ್ತು ಬೆಸೆಯುವ ಪ್ರಯತ್ನ. ಉದಯೋನ್ಮುಖ ಪ್ರತಿಭೆ-ಕಲಾವಿದರನ್ನು ಬೆಳಕಿಗೆ ತರುವುದು ಮತ್ತು ಅವರನ್ನು ಪ್ರೋತ್ಸಾಹಿಸಿ ವೇದಿಕೆಯನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ‘ನೃತ್ಯ ದರ್ಪಣ’ದ ಸದಾಶಯ. ಇದರ ಬೆನ್ನ ಹಿಂದಿನ ಶಕ್ತಿ ಭರತನಾಟ್ಯ ಮತ್ತು ಕಥಕ್ ಎರಡರಲ್ಲೂ ಸಿದ್ಧಿ ಸಾಧಿಸಿರುವ ಗುರು ವೀಣಾ ಭಟ್.

ಹೊಸ ಪರಿಕಲ್ಪನೆಗಳ ಸಾಕಾರದಲ್ಲಿ ‘ಕಥಕ್ ‘ ನೃತ್ಯಪ್ರಸ್ತುತಿಯನ್ನು ಅರಳಿಸುವ, ಬೆಳೆಸುವ ನಿಟ್ಟಿನಲ್ಲಿ ನಿರಂತರ ಹೊಸಪ್ರಯೋಗಗಳಲ್ಲಿ ತೊಡಗಿಕೊಂಡ ಇವರ ವಿಶಿಷ್ಟ ಪರಿಕಲ್ಪನೆಯ ಎಂಟನೆಯ ವಾರ್ಷಿಕೋತ್ಸವ  ‘‘ತಾಳ್ ತರಂಗ್ -21 ಇತ್ತೀಚೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಕಲಾರಸಿಕರಿಗೆ ಭರಪೂರ ಮನರಂಜನೆ ನೀಡಿತು.   

ಶುಭಾರಂಭಕ್ಕೆ- ಶುಭಾರಂಭಕ್ಕೆ- ಅತ್ಯಂತ ಭಾವಪೂರ್ಣವಾಗಿ ಹಾಡಿದ ಸಿಂಚನಾ ಮೂರ್ತಿ, ಸಿತಾರ್-   ಸುಬ್ರಹ್ಮಣ್ಯ ಹೆಗಡೆ, ತಬಲಾ- ಶೌರಿ ಶಾನಭಾಗ್ , ಕೊಳಲು- ಸುನೀಲ್ ದೇವಾಡಿಗ, ರಿದಂ ಪ್ಯಾಡ್- ರೇಣು ಆಚಾರ್ಯ, ಜಮ್ಭೆ- ರಾಹುಲ್ ಶಿವಕುಮಾರ್ ಅವರ ಕರ್ಣಾನಂದಕರ ವಾದ್ಯಗೋಷ್ಠಿ ಮನಸ್ಸನ್ನು ಮುದಗೊಳಿಸಿತು. ಅನಂತರ ನಮ್ಮ ಪ್ರಾಚೀನ ಜಾನಪದ ಕಲೆಯಾದ ಕಂಸಾಳೆಯ ಪದ-ಕುಣಿತವನ್ನು ಸೊಗಸಾಗಿ ಹೆಬ್ಬಣಿ ಮಾದಯ್ಯನವರ ತಂಡ ವಿವಿಧ ವಿನ್ಯಾಸಗಳಲ್ಲಿ ಸಾದರಪಡಿಸಿ ಮೋಡಿ ಮಾಡಿದರು.

ಕಥಕ್ ವೇಷಭೂಷಣದ ವೈಶಿಷ್ಟ್ಯ ಬೆಳೆದು ಬಂದ ಬಗೆಯನ್ನು ವಿವಿಧ ವೇಷಗಳ ‘ರೂಪಾಂತರ’ದೊಂದಿಗೆ ರಂಗದ ಮೇಲೆ ವೀಣಾ ಅವರ ಪರಿಕಲ್ಪನೆಯ ಮೊಗಲ್ ಮತ್ತು ಹಿಂದೂ ಸಂಪ್ರಾದಾಯಗಳಲ್ಲಿ ಹುಟ್ಟಿದ-ಬೆಳೆದು ಬಂದ ಪರಿ ಮತ್ತು ರೂಪಾಂತರಗೊಂಡ ಕುತೂಹಲಕಾರಿ ಅನ್ವೇಷಣೆಯನ್ನು ರೂಪದರ್ಶಿಯರು ಆಕರ್ಷಕ ಉಡುಪುಗಳೊಂದಿಗೆ ಕಥಕ್ ವಸ್ತ್ರಾಲಂಕಾರದ ಸೊಬಗಿನ ಪ್ರದರ್ಶನ ಯಾನವನ್ನು ಪ್ರಾತ್ಯಕ್ಷಿಕೆ ನೀಡಿತು.

ಹಿಂದೆಯೇ ಭರತನಾಟ್ಯದ  ನೃತ್ಯದೌತಣವನ್ನು ಉಣಬಡಿಸಿದ ಕಲಾವಿದೆ ಐಶ್ವರ್ಯ ‘ಬ್ರೋಚೆವಾರೆವರುರ’ ಭಕ್ತಿ ಕೀರ್ತನೆಯನ್ನು ಪ್ರಸ್ತುತಗೊಳಿಸಿ, ತನ್ನ ಸುಂದರ ಅಭಿನಯ, ಚುರುಕಾದ   ಅಂಗಿಕಾಭಿನಯಗಳಿಂದ, ಪಾದಭೇದದ ಸೌಂದರ್ಯದಿಂದ ಆಕರ್ಷಿಸಿದಳು.

ಕನ್ನಡ ಕಣ್ವ ಬಿ.ಎಂ.ಶ್ರೀ ಅವರ ‘ಕರುಣಾಳು ಬಾ ಬೆಳಕೇ’ ಭಾವಪೂರ್ಣ ಕವನಕ್ಕೆ ಜೀವ ನೀಡಿ ರಸಪೂರ್ಣವಾಗಿ ಅಭಿನಯಿಸಿ, ಜ್ಞಾನ ದೀವಿಗೆಯನ್ನು ಬೆಳಗಿಸಿ, ಅಮೂರ್ತ ಭಾವನೆಗಳಿಗೆ ಸಾಕ್ಷಿಯಾಗಿಸಿದವರು ವೀಣಾ ಭಟ್ ಮತ್ತು ತಂಡ. ಗುರು ರೋಹಿಣಿ ಭಾಟೆ ಮತ್ತು ಮಾಯಾರಾವ್ ಅವರ ಶಿಷ್ಯೆ ರೇಷ್ಮಾ ಅನಂತಪುರ್ಕರ್ ಅವರೊಂದಿಗೆ ವೀಣಾ ‘ವಿಷ್ಣು ವಂದನೆ’ಯನ್ನು ಪರಿಣಾಮಕಾರಿಯಾಗಿ ಅರ್ಪಿಸಿ, ಅನಂತರ ತಮ್ಮ ಶಿಷ್ಯರೊಡಗೂಡಿ ಪಂಡಿತ್ ಬಿರ್ಜು ಮಹಾರಾಜರ ಸಂಯೋಜಿತ ‘ಚತುರಂಗ್’ ಅನ್ನು ಅದ್ಭುತವಾಗಿ ನಿರೂಪಿಸಿದರು. ಸೂಫಿ ಶೈಲಿಯ ಭಕ್ತಿ ಸಂಚಾರದಲ್ಲಿ ರಸಿಕರನ್ನು ತಮ್ಮೊಡನೆ ರಸಯಾನದಲ್ಲಿ ಕರೆದೊಯ್ದವರು ಪಂಡಿತ್ ಬಿರ್ಜು ಮಹಾರಾಜ್ ಮತ್ತು ರೇಣು ಶರ್ಮ ಅವರ ಶಿಷ್ಯ ಪ್ರಖ್ಯಾತ ಕಥಕ್ ನರ್ತಕ ಸುನಿಲ್ ಸುಂಕರ. ಪಂಡಿತ್ ಬಿರ್ಜು ಮಹಾರಾಜ್ ಮತ್ತು ರೇಣು ಶರ್ಮ ಅವರ ಶಿಷ್ಯ ಪ್ರಖ್ಯಾತ ಕಥಕ್ ನರ್ತಕ ಸುನಿಲ್ ಸುಂಕರ. ಅನಂತರ ನಿರುಪಮಾ ರಾಜೇಂದ್ರ ಅವರ ಶಿಷ್ಯೆ ಅಮಿತಾ ಮಾಥುರ್, ‘ಆವತ್ ಶ್ಯಾಂ’ – ಕಥಕ್ ಶೈಲಿಯ ತುಮ್ರಿಯನ್ನು  ಸುಂದರವಾಗಿ ಪ್ರಸ್ತುತಪಡಿಸಿದರು.

ಮುಂದೆ- ಒಂದು ಹೊಸಬಗೆಯ ನೋಟ ಅನಾವರಣ ಮಾಡಿದ ಸಶಕ್ತ ಯುವ ಕಲಾವಿದರ ತಂಡ ‘ಪರಿಭ್ರಮಣ’ ರೂಪಕವನ್ನು ಅದ್ಭುತ ಚೈತನ್ಯದ ಆಂಗಿಕ ಸಾಧನೆ- ಚಕಮಕಿಯ ಚಲನೆ- ಮೂಕಾಭಿನಯ ( ಎಮೊಟಿಕಾನ್ಸ್ – ಎಸ್. ವಿನೋದ್ ) ಮತ್ತು ಕಳರಿಪಯಟು (ತೇಜೇಶ್ ಕುಮಾರ್ ಎಂ. ಸಮಕಾಲೀನ ನೃತ್ಯ ಮತ್ತು ಬೆಳಕು ತಜ್ಞ ಕೂಡ) ವಿನ ವಿವಿಧ ಆಯಾಮಗಳಲ್ಲಿ ಹಿರಿದಾದ ಅರ್ಥವನ್ನು ಸ್ಫುರಿಸಿ ಒಂದು ಚಲನಶೀಲ ನಾಟಕವನ್ನು ಕಟ್ಟಿಕೊಟ್ಟಿತು. ಅಂಧಕಾರದ ಪೊರೆ ಹರಿಸುತ್ತ, ಉತ್ತಮ ಜೀವನ ಶಾಶ್ವತ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತ ಸಾಗಿದ ‘ಪರಿಭ್ರಮಣ’ದ ಕಲಿಯುಗದಿಂದ ಸಾಗಿದ ಸತ್ಯಯುಗದವರೆಗಿನ ಅಂತರ್ಪಯಣ ಬಹು ಪರಿಣಾಮಕಾರಿಯಾಗಿ ಮೂಡಿಬಂತು. ಹೊಸ ದಿಗಂತದ ಜ್ಞಾನದ ಅನ್ವೇಷಣೆ ಸ್ತುತ್ಯಾರ್ಹ ಪ್ರತಿಭಾ ಪ್ರದರ್ಶನ. ಈ ಹೊಸ ಪರಿಕಲ್ಪನೆಯ ರೂಪಕ ಇಡೀ ಕಾರ್ಯಕ್ರಮದ ಕನ್ನಡಿಯಾಗಿ, ಅದರ ಒಳ ಹೂರಣ, ಆಂತರ್ಯವನ್ನು ಧ್ವನಿಸಿತು.  

ಅನಂತರ ದೈವ ಕರುಣೆಯ ಪ್ರಾರ್ಥನೆ- ಯುವ ಕಲಾವಿದೆ ನವ್ಯಭಟ್ ಅವರ ಸುಂದರ ಪ್ರಸ್ತುತಿ. ಅಂತ್ಯದಲ್ಲಿ ದಿವ್ಯ ಪ್ರಣಯಿಗಳಾದ ರಾಧಾ-ಮಾಧವರ ಆದರ್ಶ ಪ್ರೇಮ- ರಸಲೋಕವನ್ನು ಬಿಂಬಿಸುವ ಜಯದೇವನ ಶೃಂಗಾರ ಕಾವ್ಯ – ‘ಗೀತ ಗೋವಿಂದ’ದ ‘ಅಷ್ಟಪದಿ’ಯ ‘ನೃತ್ಯರೂಪಕ’ ಗಂಧರ್ವಲೋಕಕ್ಕೆ ಕರೆದೊಯ್ದಿತು. ನವಿರು ಸನ್ನಿವೇಶಗಳು -ಸುಕೋಮಲ ಭಾವನೆಗಳ ರೋಮಾಂಚಕ ಲೀಲಾ ವಿನೋದ, ಪುಳಕಗೊಳಿಸುವ ಹೃನ್ಮನ ಸೆಳೆದ ನೃತ್ಯಸಿಂಚನ  ನೆರೆದಿದ್ದ ಕಲಾರಸಿಕರ ಮನಸ್ಸನ್ನು ಸೂರೆಗೊಂಡಿತು.

Related posts

Vaishnavi Natyashala- Padmini Priya Annual Dance Festival

YK Sandhya Sharma

ರಸಾನುಭವ ನೀಡಿದ ಮೋನಿಷಾ ಮೋಹಕ ನೃತ್ಯ

YK Sandhya Sharma

ರಸಾನುಭವ ನೀಡಿದ ಕನ್ನಡ ಕೃತಿಗಳ ಝೇಂಕಾರ

YK Sandhya Sharma

Leave a Comment

This site uses Akismet to reduce spam. Learn how your comment data is processed.