ವೆಂಕಟೇಶ ನಾಟ್ಯ ಮಂದಿರದ 53 ನೇ ವಾರ್ಷಿಕೋತ್ಸವ
ಒಂದು ನಾಟ್ಯ ಸಂಸ್ಥೆ ಐವತ್ಮೂರು ವರ್ಷಗಳನ್ನು ಯಶಸ್ವಿಯಾಗಿ ಕ್ರಮಿಸುವುದು ಸಣ್ಣ ಸಾಧನೆಯೇನಲ್ಲ. ಈ ಕೀರ್ತಿ ಬೆಂಗಳೂರಿನ ಸುಪ್ರಸಿದ್ಧ ‘ವೆಂಕಟೇಶ ನಾಟ್ಯ ಮಂದಿರ’ಕ್ಕೆ ಸಲ್ಲಬೇಕು. ಅರ್ಧ ಶತಮಾನಗಳ ಹಿಂದೆಯೇ ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಗುರು, ಕರ್ನಾಟಕ ಕಲಾಶ್ರೀ, ರಾಜ್ಯೋತ್ಸವ ಪ್ರಶಸ್ತಿ, ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ರಾಧಾ ಶ್ರೀಧರ್ ತಮ್ಮ ಈ ನೃತ್ಯಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಪ್ರತಿಭಾನ್ವಿತ ನೃತ್ಯಕಲಾವಿದರನ್ನು ರೂಪಿಸಿರುವುದು ಅವರ ಅಗ್ಗಳಿಕೆ.
ಇಂದು ವಿಶ್ವದಾದ್ಯಂತ ಇವರ ಬಾನಿಯಲ್ಲಿ ವಿಕಸಿತರಾದ ಶಿಷ್ಯರು ಪ್ರಖ್ಯಾತ ಕಲಾವಿದರಾಗಿ, ತಮ್ಮದೇ ಆದ ನೃತ್ಯಶಾಲೆಗಳ ಮೂಲಕ ನೂರಾರು ಕಲಾವಿದರನ್ನು ನೃತ್ಯಕ್ಷೇತ್ರಕ್ಕೆ ಸಮರ್ಪಿಸುತ್ತ, ಕಲಾಸೇವೆಯಲ್ಲಿ ತೊಡಗಿರುವ ಶ್ರೇಯಸ್ಸು ಗುರು ರಾಧಾ ಅವರಿಗೆ ಸಲ್ಲುತ್ತದೆ. ಕಳೆದ ಐವತ್ಮೂರು ವರ್ಷಗಳಿಂದ ನಾಲ್ಕು ತಲೆಮಾರುಗಳಿಗೆ ವಿದ್ಯಾಧಾರೆಯೆರೆಯುತ್ತ, ಇಂದೂ ಚಟುವಟಿಕೆಯ ಚಿಲುಮೆಯಾಗಿ ಕ್ರಿಯಾಶೀಲರಾಗಿರುವುದು ಇವರ ವೈಶಿಷ್ಟ್ಯ.
ವಿಶ್ವಾದ್ಯಂತ ನೂರಾರು ನೃತ್ಯಪ್ರದರ್ಶನಗಳನ್ನು ಪ್ರಸ್ತುತಪಡಿಸಿ, ಕಲಾರಸಿಕರಲ್ಲದೆ, ಮಾಧ್ಯಮ ವರ್ಗದಿಂದಲೂ ಅಪಾರ ಪ್ರಶಂಸೆ ಪಡೆದಿರುವುದು ಇವರ ಹೆಮ್ಮೆ. ವಿಶ್ವದ ಗಮನ ಸೆಳೆದ ಇವರ ನೃತ್ಯಸಂಯೋಜನೆಯ ‘ದಿ ನೆಕ್ಟರ್ ಅಂಡ್ ದಿ ಸ್ಟೋನ್’ ಸಾಕ್ಷ್ಯಚಿತ್ರ ಯುಗೊಸ್ಲೋವಿಯಾದ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡದ್ದು ನೃತ್ಯ ಇತಿಹಾಸದಲ್ಲಿ ದಾಖಲು. ಕಳೆದ ಮೂರು ದಶಕಗಳಿಂದ ಸತತವಾಗಿ, ದೇಶ-ವಿದೇಶದ ಉದಯೋನ್ಮುಖ ಮತ್ತು ಪ್ರತಿಷ್ಟಿತ ನೃತ್ಯಕಲಾವಿದರಿಗೆ ವೇದಿಕೆಯನ್ನು ನೀಡಿ, ಅವರ ಪ್ರತಿಭಾ ಪ್ರಕಾಶಕ್ಕೆ ಉತ್ತೇಜನ ನೀಡುತ್ತ ಬಂದಿರುವ ಸಂಸ್ಥೆಯ ‘’ರಸಸಂಜೆ’’ ಒಂದು ಪ್ರತಿಷ್ಟಿತ ನೃತ್ಯೋತ್ಸವವಾಗಿ ಗುರುತಿಸಲ್ಪಟ್ಟಿದೆ.
ಇವೆಲ್ಲಕ್ಕೆ ಕಳಶಪ್ರಾಯವಾಗಿ ಪ್ರತಿವರ್ಷ ಈ ಸಂಸ್ಥೆ ನಡೆಸುವ ‘ವಾರ್ಷಿಕೋತ್ಸವ’ ಸಮಾರಂಭ ತುಂಬಾ ಅರ್ಥಪೂರ್ಣವಾಗಿ ಆಯೋಜಿಸಲಾಗಿದ್ದು, ಸುಂದರ ಭರತನಾಟ್ಯ ಕಾರ್ಯಕ್ರಮಗಳೊಂದಿಗೆ, ನಿಸ್ವಾರ್ಥವಾಗಿ ದುಡಿದ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವ ಸತ್ಸಂಪ್ರದಾಯ ಬೆಳೆಸಿಕೊಂಡು ಬಂದಿದೆ.
ಇದೇ ಸಂದರ್ಭದಲ್ಲಿ ಕಳೆದ ನಲವತ್ತು ವರ್ಷಗಳಿಂದ ‘ವೆಂಕಟೇಶ ನಾಟ್ಯ ಮಂದಿರ’ದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡುತ್ತ ಬದ್ಧತೆಯಿಂದ ಸೇವೆ ಸಲ್ಲಿಸುತ್ತಿರುವ ವಿದುಷಿ. ಕುಸುಮಾ ಎನ್. ರಾವ್ ಅವರನ್ನು ಮತ್ತು ವಿದ್ವಾನ್. ಎನ್. ಗಣೇಶ್ ಅವರನ್ನು ಸನ್ಮಾನಿಸಲಾಗುವುದು.
ಸಮಾರಂಭದಲ್ಲಿ, ಶಾಸಕ ಶ್ರೀ ರವಿ ಸುಬ್ರಮಣ್ಯಂ ಮತ್ತು ಕನ್ನಡ-ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.