ಡಾ. ಪುಸ್ತಕಂ ರಮಾ ಅವರ ಹೆಸರು ಇಂದು ಮನೆಮಾತು. ಅನುಪಮ ಸಂಗೀತ ಪ್ರತಿಭೆ ರಮಾ, ಸಂಗೀತ ಮತ್ತು ನೃತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಅಗಾಧಸೇವೆಯನ್ನು ಪರಿಗಣಿಸಿ, ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯು ಅವರಿಗೆ ಪ್ರತಿಷ್ಠಿತ ‘’ ಕಲಾಶ್ರೀ’’ ಪ್ರಶಸ್ತಿಯನ್ನು ಕೊಡಮಾಡಿದೆ. ಆಕಾಶವಾಣಿಯ `ಎ-ಟಾಪ್ ‘ ಕಲಾವಿದೆಯಾಗಿ ಮಾನ್ಯತೆ ಪಡೆದು, ಸಾವಿರಾರು, ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಈ ಬಹುಮುಖ ಪ್ರತಿಭೆಯ ಕೊಡುಗೆ ಶಾಸ್ತ್ರೀಯ ನೃತ್ಯಕ್ಷೇತ್ರಕ್ಕೂ ಸಾಕಷ್ಟು ಸಲ್ಲುತ್ತಿದೆ. ಸ್ವದೇಶ-ವಿದೇಶಗಳಲ್ಲಿ ಭರತನಾಟ್ಯ ಪ್ರಸ್ತುತಿಗಳಿಗೆ ಅತ್ಯುತ್ತಮವಾಗಿ ನೇರ ಗಾಯನ ನೀಡುತ್ತ ಬೆಂಬಲವಾಗಿರುವ ಇವರಿಂದು ನೃತ್ಯಶಾಸ್ತ್ರ ವ್ಯಾಕರಣದಲ್ಲೂ ಪರಿಣತರು. ಹೀಗಾಗಿ ರಮಾ ಅವರ ಗಾಯನಕ್ಕೆ ಅತ್ಯಂತ ಬೇಡಿಕೆ. ವಿಶ್ವಪ್ರಸಿದ್ಧ ನೃತ್ಯದಿಗ್ಗಜರಾದ ಕೇಳುಚರಣ ಮಹಾಪಾತ್ರ, ಹೇಮಮಾಲಿನಿ, ಪ್ರತಿಭಾ ಪ್ರಹ್ಲಾದ್, ಸ್ವಪ್ನಸುಂದರಿ ಮುಂತಾದವರ ನಾಟ್ಯಕ್ಕೆ ಹಾಡಿರುವ ಹಿರಿಮೆ ಅವರದು.
ಡಾ. ರಮಾ ಸ್ಥಾಪಿಸಿ, ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ, ಸಾರ್ಥಕ ಮೂರುದಶಕಗಳನ್ನು ದಾಟಿದ `ಸಂಗೀತ ಸಂಭ್ರಮ’ ಸಂಗೀತ ಸಂಸ್ಥೆ, ಕಳೆದ ಹನ್ನೆರಡು ವರ್ಷಗಳಿಂದ, ಪ್ರಖ್ಯಾತ ಹಾಗೆಯೇ ಉದಯೋನ್ಮುಖ ಕಲಾವಿದರಿಗೂ ವೇದಿಕೆ ಒದಗಿಸುತ್ತಿದೆ. ಪ್ರತಿವರ್ಷ ತಪ್ಪದೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಈ `ನಿರಂತರಂ’ ಸಂಗೀತ-ನೃತ್ಯೋತ್ಸವ ದಿನೇ ದಿನೇ ಜನಪ್ರಿಯತೆ ಪಡೆಯುತ್ತಿದೆ.
ಪ್ರಸ್ತುತ ಹೊಸವರ್ಷದ ಹೊಸ್ತಿಲಲ್ಲಿ ಈ ವೈವಿಧ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ಜನವರಿ 3 ನೇ ತಾ. ಮಲ್ಲೇಶ್ವರದ ಸೇವಾಸದನದಲ್ಲಿ ನಡೆಯಲಿವೆ. ಉದ್ಘಾಟನೆ- 5 ಗಂಟೆಗೆ. ಮುಖ್ಯ ಅತಿಥಿಗಳು- ಡಾ. ಅಶ್ವಥ್ ನಾರಾಯಣ್ ಸಿ.ಎನ್. ಉನ್ನತ ಶಿಕ್ಷಣ ಸಚಿವರು, ಐ ಟಿ ಮತ್ತು ಬಿಟಿ , ಸೈನ್ಸ್ ಅಂಡ್ ಟೆಕ್ನಾಲಜಿ -ಕರ್ನಾಟಕ ಸರ್ಕಾರ., ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್- ಖ್ಯಾತ ಭರತನಾಟ್ಯ ಕಲಾವಿದೆ, ಗುರುವಂದನ- ಡಾ. ನಾಗಮಣಿ ಶ್ರೀನಾಥ್ -ಪ್ರಖ್ಯಾತ ಸಂಗೀತ ವಿದುಷಿ.
ಅನಂತರ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮತ್ತು ಸಂಗೀತ-ನೃತ್ಯ ಪ್ರಸ್ತುತಿಗಳಿಂದ ಕೂಡಿದ ವಿವಿಧ ಮನರಂಜನಾ ಕಾರ್ಯಕ್ರಮಗಳು.
·