
ಬೆಂಗಳೂರಿನ ಖ್ಯಾತ ‘’ಶಿವಪ್ರಿಯ’’ ನೃತ್ಯಶಾಲೆಯು ನಿರಂತರವಾಗಿ ಉತ್ತಮ ಕಲಾಭ್ಯಾಸಿಗಳನ್ನು ರೂಪಿಸುತ್ತ ನಡುನಡುವೆ ವಿಶಿಷ್ಟವಾದ ಹಲವಾರು ನೃತ್ಯರೂಪಕಗಳನ್ನು ನಿರ್ಮಿಸಿ, ಸ್ಮರಣೀಯ ಪ್ರದರ್ಶನ ನೀಡುತ್ತ ಬರುತ್ತಿದೆ. ಶಿವಪ್ರಿಯದ ಎಲ್ಲ ನೃತ್ಯರೂಪಕಗಳ ಪರಿಕಲ್ಪನೆ-ನಿರ್ದೇಶನ ಮತ್ತು ಪ್ರದರ್ಶನದ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುವ ಡಾ. ಸಂಜಯ್ ಶಾಂತಾರಾಂ ಈ ಎಲ್ಲ ಯಶಸ್ವೀ ನಿರ್ಮಾಣಗಳ ರೂವಾರಿ. ಇದೇ ತಿಂಗಳ 14 ಭಾನುವಾರದಂದು ವಯ್ಯಾಲಿಕಾವಲ್ ನ ‘ಚೌಡಯ್ಯ ಮೆಮೋರಿಯಲ್ ಹಾಲ್’ನಲ್ಲಿ ಸಂಜೆ 5.30 ಗಂಟೆಗೆ ಮಹಾಮಹಿಮ ‘’ಅಯ್ಯಪ್ಪ’ನ ನೃತ್ಯರೂಪಕ ಮನರಂಜಿಸಲಿದೆ.

ಇದರ ನೃತ್ಯವನ್ನು ಸಂಯೋಜಿಸಿರುವ ‘ಶಿವಪ್ರಿಯ’ ದ ಕಲಾತ್ಮಕ ನಿರ್ದೇಶಕ ಅಂತರರಾಷ್ಟ್ರೀಯ ನೃತ್ಯಕಲಾವಿದ-ನೃತ್ಯಗುರುವಾಗಿ ಪ್ರಸಿದ್ಧಿ ಪಡೆದಿರುವ ಬಹುಮುಖ ಪ್ರತಿಭೆ ಡಾ.ಸಂಜಯ್ . ಒಬ್ಬ ನೃತ್ಯ ಕಲಾವಿದ, ಗುರುವಾಗಿ ನೃತ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದಕ್ಕಿಂತ ವಿಶೇಷವಾಗಿ ತಮ್ಮ ಅಸ್ಮಿತೆಯನ್ನು ಮೆರೆದಿರುವ ಡಾ. ಸಂಜಯ್, ನೃತ್ಯ ಪ್ರಸ್ತುತಿಯ ಆಯಾ ಸಂದರ್ಭ-ಸನ್ನಿವೇಶಗಳಿಗನುಗುಣವಾಗಿ ಅನೇಕ ಉತ್ತಮ ಕೃತಿಗಳನ್ನು ರಚಿಸುವ ವಾಗ್ಗೇಯಕಾರ, ಹಾಗೂ ತಮ್ಮ ಶಿಷ್ಯರ ರಂಗಪ್ರವೇಶಗಳಲ್ಲಿ ನಟುವಾಂಗ ಮತ್ತು ಗಾಯನ ಎರಡನ್ನೂ ಏಕಕಾಲದಲ್ಲಿ ನಿರ್ವಹಿಸುವುದು ವಿಶೇಷವೇ ಸರಿ.
ಇದುವರೆಗೂ ಹನುಮಾನ್, ಶಂಕರಿ, ಪ್ರಹ್ಲಾದ ಚರಿತಂ, ಕರ್ನಾಟಕ ಕ್ಷೇತ್ರ ವೈಭವ, ಕೆಂಪೇಗೌಡ, ರಾಜಾಸಿಂಹ, ರೂಪ-ವಿರೂಪ, ಮತ್ಸಕನ್ಯ, ಅಪೂರ್ವ ಭಾರತಂ ಮುಂತಾದ ಹಲವಾರು ಪುರಾಣಿಕ, ಚಾರಿತ್ರಿಕ, ಜಾನಪದ ಸೊಗಡಿನ ನೃತ್ಯರೂಪಕಗಳನ್ನು ಅರ್ಪಿಸಿರುವ ಇವರ ನೂತನ ಕೊಡುಗೆ’’ ಶಿವಪುತ್ರ ಅಯ್ಯಪ್ಪ’’ ಸುಂದರ-ಮನೋಹರ ನೃತ್ಯರೂಪಕ.

ಕರ್ಣಾನಂದಕರ ಸಂಗೀತ, ನಯನ ಮನೋಹರ ವೈಭವಪೂರ್ಣ ಹೃದಯಸ್ಪರ್ಶೀ ನೃತ್ಯನಾಟಕ. ಕಲಾರತ್ನ ಡಾ.ಸಂಜಯ್ ಶಾಂತಾರಾಂ ಅವರ ಪರಿಕಲ್ಪನೆಯ ‘ಅಯ್ಯಪ್ಪ’ನ ಭಕ್ತ್ಯಾತ್ಮಕ ಪ್ರಸಿದ್ಧ ಕಥೆ. ಘೋರ ರಕ್ಕಸ ಮಹಿಷಾಸುರನ ಸಹೋದರಿ ಮಹಿಷಿ ಉಂಟುಮಾಡುವ ಅಲ್ಲೋಲ ಕಲ್ಲೋಲ ಹಿಂಸಾತ್ಮಕ ಘಟನೆಗಳನ್ನು ದಮನಿಸಿ, ಆಕೆಯನ್ನು ಕೊಂದು ನಿಷ್ಕಂಟಕವಾಗಿಸುವ, ‘ಅಯ್ಯಪ್ಪ’ನ ಜನ್ಮಸ್ವಾರಸ್ಯದ ಸುತ್ತ ಬಿಚ್ಚಿಕೊಳ್ಳುವ ಕಥೆ. ಹನ್ನೆರಡರ ಬಾಲಕ ಈ ಅಯ್ಯಪ್ಪನ ಧೈರ್ಯ-ಶೌರ್ಯ-ಮಹಿಮೆಗಳನ್ನು ಬಿತ್ತರಿಸುವ ಕಥಾಹೂರಣವನ್ನು ಹೊಂದಿರುವ ವಿಶಿಷ್ಟ ಸಂಗೀತಮಯ-ನೃತ್ಯರೂಪಕವಿದು.
ಇದರ ಸಾಹಿತ್ಯವನ್ನು ಶ್ರೀ ವಿ. ಗೋಪಾಲ್ ಮತ್ತು ಸಂಗೀತವನ್ನು ಶ್ರೀ ಪ್ರವೀಣ್ ಡಿ. ರಾವ್ ನೀಡಿದ್ದಾರೆ. ಡಾ. ಸಂಜಯ್ ನೃತ್ಯ ಸಂಯೋಜಿಸಿರುವ ನಾಟಕೀಯ ತಿರುವುಗಳುಳ್ಳ ಈ ನೃತ್ಯರೂಪಕವನ್ನು ಶಿವಪ್ರಿಯದ ನೂರಾರು ನೃತ್ಯ ಕಲಾವಿದರು ಪ್ರದರ್ಶಿಸಿ ಕಲಾರಸಿಕರನ್ನು ರಂಜಿಸಲಿದ್ದಾರೆ.
ರಾಜ್ಯೋತ್ಸವದ ಪ್ರಯುಕ್ತ, ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಸಹಯೋಗದೊಂದಿಗೆ ‘ಶಿವಪ್ರಿಯ’ ಈ ಸಹಾಯಾರ್ಥ ಕಾರ್ಯಕ್ರಮವನ್ನು ಆಯೋಜಿಸಿದೆ. ಸಂಪರ್ಕ- 96321 41418 .