ಭಾರತೀಯ ಶಾಸ್ತ್ರೀಯ ನೃತ್ಯಗಳಲ್ಲೊಂದಾದ ‘ಕಥಕ್’ ನೃತ್ಯಪ್ರಕಾರವು ಉತ್ತರಭಾಗದಿಂದ ಬೆಳೆದು ಬಂದಿದ್ದು, ಲಕ್ನೊ ಘರಾನ- ಖ್ಯಾತ ಕಥಕ್ ನೃತ್ಯಪ್ರವೀಣ ಪದ್ಮವಿಭೂಷಣ ಪಂಡಿತ್ ಬಿರ್ಜು ಮಹಾರಾಜರಿಂದ ಶಾಸ್ತ್ರೀಯತೆಯನ್ನು ಉಳಿಸಿಕೊಂಡಿದ್ದು, ಪ್ರಾಯೋಗಿಕವಾಗಿ ವಿವಿಧ ಆಯಾಮಗಳಲ್ಲಿ ಪ್ರಚಲಿತವಾಗಿದೆ.
ಇಂಥ ಮಹಾನ್ ಕಲಾವಿದರ ಪ್ರಮುಖ ಶಿಷ್ಯ ಮುರಾರಿ ಶರಣ್ ಗುಪ್ತ ಅವರಲ್ಲಿ ಹದಿನೆಂಟು ವರ್ಷಗಳ ಸತತ ನೃತ್ಯಾಭ್ಯಾಸ ಮಾಡಿ ಪರಿಣತಿ ಗಳಿಸಿಕೊಂಡಿರುವ ಖ್ಯಾತ ನೃತ್ಯಗುರು ಸಿಮ್ರಾನ್ ಗೋಧ್ವಾನಿ ಅಂತರರಾಷ್ಟ್ರೀಯ ನೃತ್ಯಕಲಾವಿದೆ. ವಿಶಿಷ್ಟ ನೃತ್ಯ ತರಬೇತಿಗೆ ಹೆಸರಾದ ‘ಕೃಶಾಲಾ’ ಡಾನ್ಸ್ ಥಿಯೇಟರಿನ ಸಂಸ್ಥಾಪಕರು ಮತ್ತು ಕ್ರಿಯೇಟಿವ್ ಡೈರೆಕ್ಟರ್ ಆದ ಇವರ ಉತ್ತಮ ಶಿಕ್ಷಣದ ಎರಕದಲ್ಲಿ ರೂಪುಗೊಂಡ ಕಲಾವಿದೆ ಅನ್ವೀ ಡಾಗ. ಇತ್ತಿಚೆಗೆ ಈ ಉದಯೋನ್ಮುಖ ಕಲಾವಿದೆ ಕೋರಮಂಗಲದ ‘ಸತ್ಯ ಸಾಯಿ’ ಆಡಿಟೋರಿಯಂ ನಲ್ಲಿ ವಿದ್ಯುಕ್ತವಾಗಿ ತನ್ನ ಕಥಕ್ ರಂಗಪ್ರವೇಶ ನೆರವೇರಿಸಿಕೊಂಡು ಕಲಾರಸಿಕರ ಮೆಚ್ಚುಗೆ ಗಳಿಸಿದಳು.
ಶುಭಾರಂಭದಲ್ಲಿ ಅನ್ವೀ, ಬಿಂದಾದೀನ್ ಮಹಾರಾಜರು ರೂಪಕತಾಳದಲ್ಲಿ ರಚಿಸಿದ ‘ಅಷ್ಟಪದಿ’ ಯನ್ನು ಸುಂದರವಾಗಿ ನಿರೂಪಿಸಿದಳು. ಇನಿಯ ಕೃಷ್ಣನನ್ನು ಅರಸುತ್ತ ಭಗ್ನಪ್ರೇಮಿ ರಾಧೆ ಚಡಪಡಿಸುವ ಮನೋಜ್ಞ ಭಾವ-ವಿಭಾವಗಳ ರಸಪೂರ್ಣ ಚಿತ್ರಣವನ್ನು ಸೊಗಸಾಗಿ ಕಟ್ಟಿಕೊಟ್ಟಳು. ಕೃಷ್ಣನೊಡನೆ ಕಳೆದ ಉಲ್ಲಾಸಮಯ ಸಂದರ್ಭಗಳನ್ನು ನೆನೆಸಿಕೊಳ್ಳುತ್ತಾ ರಾಧೆ, ರೋಮಾಂಚಗೊಂಡು ನರ್ತಿಸುವ ಬಗೆಯನ್ನು ಕಲಾವಿದೆ ತನ್ನ ಮನಮೋಹಕ ಚಕ್ಕರುಗಳ ಜಾಲದಿಂದ, ಆಕಾಶಚಾರಿಗಳ ರಮ್ಯತೆಯಿಂದ ಅಭಿವ್ಯಕ್ತಿಸಿದಳು.
ಮುಂದಿನ ಕೃತಿ ‘ತಾಲ್ ಧಮಾರ್’- ಶುದ್ಧ ನೃತ್ತಗಳ ನೈಪುಣ್ಯವನ್ನು ಪ್ರದರ್ಶಿಸಲು ಮೀಸಲಾದದ್ದು. ಮೌಖಿಕವಾಗಿ ಕಲಾವಿದೆ ‘ಬೋಲ್ಸ್’ಗಳನ್ನು ನಿರೂಪಿಸಿ, ಆ ತಾಳ ಲಯವನ್ನು ತನ್ನ ನರ್ತನದ ಸೊಗಸಿನಲ್ಲಿ ಕರಾರುವಾಕ್ಕಾಗಿ ಪ್ರದರ್ಶಿಸುವಳು. ಕೆಲವೊಮ್ಮೆ ತಬಲಾ ಅಥವಾ ಪಕ್ವಾಜ್ ಗಳ ಬೋಲ್ ಗಳಿಗೆ ತಕ್ಕಂತೆ ತನ್ನ ನೃತ್ತ ಸಾಮರ್ಥ್ಯವನ್ನು ತೋರುವಳು. ತನ್ನೆರಡೂ ಹಸ್ತಗಳನ್ನು ಹೆಣೆದು, ನವಿರಾಗಿ ಪಾದಭೇದಗಳ ತತ್ಕಾರದಲ್ಲಿ, ಚಕ್ಕರ್ ಗಳ ಚಮತ್ಕಾರದಲ್ಲಿ ಚೈತನ್ಯಪೂರ್ಣತೆ ಯಿಂದ ರಂಗದ ತುಂಬಾ ನರ್ತಿಸುವಳು. ತನ್ನ ಲಂಗದ ಚುಂಗನ್ನು ಹಿಡಿದು, ವಾರೆನೋಟದಿಂದ ಕೊರಳನ್ನು ಲಯಬದ್ಧವಾಗಿ ಕೊಂಕಿಸುತ್ತ ಹೆಜ್ಜೆ ಹಾಕುವುದು ನೋಡಲು ತುಂಬಾ ರಮ್ಯ. ಮಿಂಚಿನ ಸಂಚಾರದ ಹೆಜ್ಜೆ ಹಾಕುತ್ತಲೇ ತಟ್ಟನೆ ನಿಂತು ಮನಮೋಹಕ ಭಂಗಿಗಳಲ್ಲಿ ತಟಸ್ಥವಾಗುವ ಪರಿ ಬೆರಗು ಹುಟ್ಟಿಸುತ್ತದೆ. ಹತ್ತೊಂಬತ್ತು ಸುತ್ತು ಅಥವಾ ಚಕ್ಕರ್ ಹಾಕುತ್ತಲೇ ವೃತ್ತ್ತ ರಚಿಸುವುದು ಇನ್ನೊಂದು ಬೆಡಗು.ಇದರಲ್ಲಿ ಅನ್ವೀ ಅತ್ಯಂತ ಯಶಸ್ವಿಯಾದಳು.
ಮುಂದೆ- ‘ದೀವಾನಿ-ಮಸ್ತಾನಿ’ಯಲ್ಲಿ ಅನ್ವೀ, ತನ್ನ ಮೂವರು ಸಖಿಯರಾದ ಪರಿಧಿ, ಉರ್ವಿ ಮತ್ತು ಉಷಿಕಾ ಜೊತೆ ಉಲ್ಲಾಸಮಯ ಲಹರಿಯಲ್ಲಿ ನರ್ತಿಸುತ್ತ, ವರ್ಣರಂಜಿತ ಲಂಗಗಳನ್ನು ದೊಡ್ಡ ಛತ್ರಿಯಂತೆ ಅರಳಿಸುತ್ತ ಚಕ್ಕರ್ ತಿರುಗುವ ಬಗೆ ಮೋಡಿ ಮಾಡಿತು. ಮೆಲುವಾಗಿ ಆರಂಭವಾಗುವ ಹೆಜ್ಜೆ-ಗೆಜ್ಜೆಗಳ ಮೇಳ ಕ್ರಮೇಣ ವೇಗವಾಗುವ, ಸಂಕೀರ್ಣ ಪಾದಭೇದಗಳ ಪ್ರದರ್ಶನದೊಂದಿಗೆ ನೋಡುಗರಿಗೆ ಆಹ್ಲಾದ ನೀಡಿತು.
ಅನಂತರ ‘ತರಾನಾ’ ವನ್ನು ಅನ್ವೀ ಸಾಕಾರಗೊಳಿಸಿದಳು. ಹನ್ನೆರಡನೆಯ ಶತಮಾನದಲ್ಲಿ, ಅಮೀರ್ ಖುಸೃವಿನಿಂದ ಸಂಶೋಧಿಸಲ್ಪಟ್ಟ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಶೈಲಿಯ ವೈಶಿಷ್ಟ್ಯವುಳದ್ದು. ‘ತರಾನಾ’ ಪರ್ಷಿಯನ್ ಪದ. ಆನಂದ ಭಾವದಿಂದ ಹಿಡಿದು ಶೋಕರಸದವರೆಗೂ ಲಯವು, ವಿವಿಧ ಸಮ್ಮಿಶ್ರ ಸಂಕೀರ್ಣ ಭಾವಗಳನ್ನು ಅಭಿವ್ಯಕ್ತಗೊಳಿಸುವುದು. ಅದರಂತೆ ‘ತರಾನಾ’ – ‘ತ’ ಎಂದರೆ ತಾಳ, ‘ರ’ ಎಂದರೆ ರಾಗ ಮತ್ತು ‘ನ’ ಎಂದರೆ ನರ್ತನವನ್ನು ಧ್ವನಿಸುತ್ತದೆ. ಕಲಾವಿದೆ ಅಭಿನಯಿಸಿದ ಕೃತಿಯ ಮೂಲ ಸಂಯೋಜನೆ ( ತೀನ್ ತಾಲ್- 16 ಬೀಟ್ ವೃತ್ತ) ಪಂಡಿತ್ ಬಿರ್ಜು ಮಹಾರಾಜ್ ಅವರದು.
ಹಸ್ನ್ಮುಖದಲ್ಲಿ ಕಲಾವಿದೆ ಮಂದ್ರಸ್ಥಾಯಿಯಲ್ಲಿ ನುಣುಪಾಗಿ ಹೆಜ್ಜೆಗಳನ್ನಿರಿಸುತ್ತ, ರಂಗಪ್ರವೇಶಿಸಿ, ಕ್ರಮೇಣ ವೇಗವನ್ನು ಪಡೆದುಕೊಳ್ಳುತ್ತ ನರ್ತಿಸತೊಡಗಿದಳು. ಗುರು ಸಿಮ್ರನ್ ಉತ್ಸಾಹಪೂರ್ಣವಾಗಿ ‘ಪಡಂತ್’ ( ನಟುವಾಂಗ) ಅನ್ನು ನಿರ್ವಹಿಸುತ್ತಿದ್ದರೆ, ಗಾಯಕ ಗಣೇಶ್ ದೇಸಾಯಿ ಸುಶ್ರಾವ್ಯ ಕಂಠದಲ್ಲಿ ಸ್ವರಗಳನ್ನು ನಿರೂಪಿಸುತ್ತಿದ್ದರು. ಅದಕ್ಕನ್ವಯ ಅನ್ವೀ, ಬಹು ಸುಂದರವಾಗಿ ತತ್ಕಾರಗಳನ್ನು ಮೂಡಿಸಿ, ರಂಗಕ್ರಮಣದಲ್ಲಿ ಚಕ್ಕರ್ ಗಳನ್ನು ನಿರ್ವಹಿಸಿ ತನ್ನ ಸಾಮರ್ಥ್ಯವನ್ನು ಸಾಕ್ಷೀಕರಿಸಿದಳು. ವಿಶೇಷವೆಂದರೆ, ಅವಳು ಚಕ್ಕರ್ಗಳನ್ನು ಹಾಕಿಕೊಂಡೇ ರಂಗದಿಂದ ನಿಷ್ಕ್ರಮಿಸಿದಳು.
ಮುಂದಿನ ಪ್ರಸ್ತುತಿ- ‘ದುರ್ಗಾ ಸ್ತುತಿ’ ತಾಳ ಅಷ್ಟಮಂಗಳದೊಡನೆ ಮಿಳಿತವಾಗಿತ್ತು. ದುಷ್ಟಶಕ್ತಿಗಳ ವಿನಾಶ ಮಾಡುವ ಮಾತೃಸ್ವರೂಪಿಣಿ ದುರ್ಗಾ ಮಾತೆ, ಸಜ್ಜನರನ್ನು ಕಾಪಾಡುವ ಕರುಣಾಮಯಿ. ಇಂಥ ದೇವಿಯನ್ನು ಮನದುಂಬಿ ಸ್ತುತಿಸುವ ಯತ್ನವನ್ನು ಕಲಾವಿದೆ ಭಾವಪೂರ್ಣವಾಗಿ ಅಷ್ಟೇ ತನ್ಮಯತೆಯಿಂದ ನಿರ್ವಹಿಸಿದಳು. ಮನೋಹರವಾದ ನೃತ್ತಗಳಿಂದ ಆರಂಭವಾದ ಪ್ರಸ್ತುತಿ ‘ಜೈ ದುರ್ಗೇ ಭವಾನಿ…’ ಲೀಲಾಜಾಲವಾಗಿ ಸಾಗಿತು. ನಡುನಡುವೆ ಮೂಡಿಬಂದ ಸಿಮ್ರನ್ ಅವರ ‘ಪಡಂತ್’ ಗಳಿಗೆ ಹೆಜ್ಜೆಹಾಕುತ್ತ, ಕಲಾವಿದೆ, ದೇವಿಯ ಮಹಿಷಾ ಸುರಮರ್ಧಿನಿಯ ಉಗ್ರರೂಪದೊಂದಿಗೆ ಆಕೆಯ ನಿತ್ಯ ಪ್ರಸನ್ನ-ಸೌಮ್ಯ ಶಾಂತಮೂರ್ತಿಯನ್ನೂ ಪ್ರಕಟಪಡಿಸಿದಳು. ಈ ದೈವೀಕ ನೃತ್ಯ ಸುಂದರವಾಗಿ ಮೂಡಿಬಂದು ಮನಸೆಳೆಯಿತು.
ಮುಂದೆ ಮಿಶ್ರ ಕಮಾಚ್ ರಾಗ-ಏಕತಾಳದಲ್ಲಿ ಪ್ರಸ್ತುತವಾದ ‘ಗರಜ್ ಗರಜ್’ -ಪ್ರಕೃತಿಯ ಪ್ರತಿಯೊಂದು ಚಲನವಲನಗಳಲ್ಲಿ, ಪಶು-ಪಕ್ಷಿಗಳ ನಿನಾದದಲ್ಲಿ, ಸುಂದರ ನಡೆ-ನರ್ತನಗಳಲ್ಲಿ ಒಂದಾಗಿ ಹೋದ ಬದುಕಿನ ನಲಿವುಗಳನ್ನು ಎತ್ತಿ ಹಿಡಿಯುವ ಪ್ರಯತ್ನವಾಗಿತ್ತು. ನವಿಲು ಗರಿ ಬಿಚ್ಚಿ ನರ್ತಿಸುವ ಸೊಬಗು, ಶ್ರುತಿ ಹಿಡಿದಂತೆ ಬಿಡದೆ ಸುರಿವ ಮಳೆಯ ತಾಳ-ಲಯಗಳ ಸುಖಾನುಭವದಲ್ಲಿ ಸಂತಸವನ್ನು ಅನುಭವಿಸುವ ಮನಸ್ಥಿತಿ, ಸಂತೋಷಾಭಿವ್ಯಕ್ತಿವನ್ನು ಪ್ರಸ್ತುತಪಡಿಸುವ ಈ ಗೀತೆ ಸಾಂಪ್ರದಾಯಕ ಸಡಗರದ ಹಾಡು. ಇದರಲ್ಲಿ ಅನ್ವಿಯ ಸಂಗಡಿಗರಾಗಿ ಪರಿಧಿ, ಉರ್ವಿ, ಉಷಿಕಾ ಆಮೋದದಿಂದ ನರ್ತಿಸಿದರು.
ಅನಂತರ ಅನ್ವೀ, ಉಲ್ಲಾಸಕರ ‘ಸಂಜಾವಾನ್’ -ಹಿಂದೀ ಹಾಡಿಗೆ ಸಂತಸದಿಂದ ಹೆಜ್ಜೆ ಹಾಕುತ್ತ ಸಂತಸಾಭಿವ್ಯಕ್ತಿಯ ವಿವಿಧ ಆಯಾಮವನ್ನು ತನ್ನ ಕಣ್ಣೋಟ-ಆಂಗಿಕ ಚಲನೆಯ ಮೂಲಕ ಸಾಂಕೇತಿಕವಾಗಿ ತೋರಿದಳು. ಅನಂತರ ಅಭಿನಯ ಮತ್ತು ನೃತ್ತಗಳು ಒಂದರೊಳಗೊಂದು ಹೆಣೆದುಕೊಂಡು ಅಭಿವ್ಯಕ್ತಿಸಿದ ಶ್ರೀಕೃಷ್ಣನ ಲೀಲಾ ವಿನೋದದ ಅನೇಕ ಘಟನಾವಳಿಗಳು ‘ಗತಭಾವ’ (ಸಂಚಾರಿ)ದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದು, ಅನ್ವಿಯ ಅಭಿನಯ ಹೃದಯಸ್ಪರ್ಶಿಯಾಗಿತ್ತು. ಮೃದುತ್ವ, ರಮ್ಯತೆಯ ಮೇಲುನಡೆ ಹೊಂದಿರುವ ಕಥಕ್, ಅಷ್ಟೇ ಅತ್ಯಂತ ವೇಗದ ತತ್ಕಾರಗಳಿಂದಲೂ ರಂಜಿಸುತ್ತದೆ. ಅನಂತರ ಪ್ರದರ್ಶಿಸಿದ ಶೃಂಗಾರ ರಸಾಭಿವ್ಯಕ್ತಿಯ ‘ತುಮರಿ’ ವಿಶೇಷವಾಗಿ ಮನಸೆಳೆಯಿತು. ಧ್ರುತ್ ಲಯದ ‘ತುಕಡಾ’ಗಳು, ‘ಲಡಿ’ ಗಳು ಕಲಾವಿದೆಯ ಸುಂದರ ನರ್ತನದಲ್ಲಿ ಮಿಳಿತವಾದ ನಿರಂತರ ಚಕ್ಕರ್ ಗಳ ಸಮ್ಮಿಲನ ಕಣ್ಮನ ತುಂಬಿತು.
*****************
- ವೈ.ಕೆ.ಸಂಧ್ಯಾ ಶರ್ಮ
`
2 comments
ನೋಡ ಬೇಕಾದ ನೃತ್ಯ ಪ್ರಕಾರ.
ಧನ್ಯವಾದಗಳು.