ನೃತ್ಯ ವೀಕ್ಷಣೆ ಒಂದು ದೈವಿಕ ಸೌಂದರ್ಯಾನುಭವ, ರಸಭಾವ ಸ್ರೋತ. ಹೃದಯಸ್ಪರ್ಶಿಸುವ ಭರತನಾಟ್ಯದ ಸೊಗಡಿನಲ್ಲಿ ಅಂಥ ಆಕರ್ಷಣೆ. ಲಯ-ತಾಳಗಳಿಂದೊಡಗೂಡಿದ ಪ್ರತಿ ಕಲಾವಿದರ ನೃತ್ತಾಭಿನಯವೂ ಹೊಸದೇ. ವೈವಿಧ್ಯಪೂರ್ಣವಾಗಿರುವ ವಿವಿಧ ನೃತ್ಯ ಪರಂಪರೆಗಳೆಲ್ಲವೂ ತಮ್ಮದೇ ಆದ ರೀತಿಯಿಂದ ವಿಶಿಷ್ಟ. ಜತಿಗಳ ನಿರ್ವಹಣೆ, ನೃತ್ತಗಳ ವಿನ್ಯಾಸ ರಚನೆಯ ಕೌಶಲ, ನೃತ್ಯ ಸಂಯೋಜನೆಯ ಹೊಸ ವೈಖರಿಗಳಿಂದ ಪ್ರತಿ ಕೃತಿಯ ನಿರೂಪಣೆಯೂ ತಮ್ಮದೇ ಆದ ‘ಬಾನಿ’ಗಳ ಅಸ್ಮಿತೆಯನ್ನು ಹೊರಸೂಸುತ್ತವೆ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ.
ಇಂಥದೇ ಒಂದು ಅಪೂರ್ವ ಅನುಭವಕ್ಕೆ ಸೇರ್ಪಡೆ ಇತ್ತೀಚಿಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ನಡೆದ ಅವಳೀ ಸಹೋದರಿಯರ ಸುಂದರ ‘ರಂಗಪ್ರವೇಶ’. ‘ಕೈಲಾಸ ಕಲಾಧರ ಕಲ್ಚುರಲ್ ಅಂಡ್ ಚಾರಿಟಬಲ್ ಟ್ರಸ್ಟ್’ ಸ್ಥಾಪಕಿ ಬಹುಮುಖ ಪ್ರತಿಭೆಯ ಭರತನಾಟ್ಯ ಗುರು-ಕಲಾವಿದೆ ಜಯಲಕ್ಷ್ಮೀ ಜಿತೇಂದ್ರ ಭಾಗವತ ಅವರ ಶಿಷ್ಯೆಯರಾದ ಶ್ರೀಜನಿ ಸತೀಶ್ ಕುಮಾರ್ ಮತ್ತು ಸುಹಾನಿ ಸತೀಶ್ ಕುಮಾರ್ ಅವಳಿ ಸೋದರಿಯರು, ಭರತನಾಟ್ಯದಲ್ಲಿ ಸಮರ್ಥ ತರಬೇತಿ ಪಡೆದು ‘’ನೃತ್ಯ ಪಂಕಜ’’ ಶೀರ್ಷಿಕೆಯಲ್ಲಿ ಮನೋಜ್ಞ ನೃತ್ಯಗಳ ಪ್ರದರ್ಶನ ನೀಡುವ ಮೂಲಕ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿದರು. ಈ ‘ನೃತ್ಯ ಪಂಕಜ’- ಪ್ರಸ್ತುತಿ ಸಂಪೂರ್ಣ ‘ಕೃಷ್ಣ ಕೇಂದ್ರಿತ’ವಾಗಿತ್ತು ಎಂಬುದು ತುಂಬಾ ವಿಶಿಷ್ಟ ಹಾಗೂ ಅಷ್ಟೇ ಗಮನಾರ್ಹವಾಗಿತ್ತು. ಪ್ರಸ್ತುತಿಯ ಕೃತಿಗಳ ಆಯ್ಕೆ ಬಹು ಸೂಕ್ತವಾಗಿದ್ದು, ಕಲಾವಿದೆಯರ ನೃತ್ತ-ನೃತ್ಯಾಭಿನಯ ಪ್ರತಿಭೆಯನ್ನು ಸಮರ್ಥವಾಗಿ ಅನಾವರಣಗೊಳಿಸಿದ್ದವು.

ಡಾ. ಅಶ್ವಿನಿ ಬಾಲಕೃಷ್ಣ ಮತ್ತು ಎನ್. ಸತೀಶ್ ಕುಮಾರ್ ಅವರ ಪುತ್ರಿಯರಾದ ಇವರು ಶುಭಾರಂಭದಲ್ಲಿ ವಲಚಿ ರಾಗದ ಆದಿತಾಳದ ‘ಪುಷ್ಪಾಂಜಲಿ’ಯಿಂದ ನೃತ್ಯಾರ್ಪಣೆಗೆ ತೊಡಗಿಕೊಂಡರು. ಸಂಪ್ರದಾಯದಂತೆ ಮೊದಲಿಗೆ ಗುರು-ಹಿರಿಯರಿಗೆ, ದೇವಾನುದೇವತೆಗಳಿಗೆ, ನೃತ್ಯ ಪ್ರಸ್ತುತಿಯನ್ನು ಪ್ರೀತಿಯಿಂದ ವೀಕ್ಷಿಸುವ ಸಭಾಸದನರಿಗೆ ತಮ್ಮ ಸುಮನೋಹರ ನೃತ್ತಾಂಜಲಿಯ ಮೂಲಕ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು. ನಂತರ ನಾಟ ರಾಗ-ಆದಿತಾಳದ ‘ಗಣೇಶ ಕೌತ್ವಂ’ – ಕೃತಿಯಲ್ಲಿ ಪ್ರಥಮ ವಂದಿತ ಗಣಪನಿಗೆ, ಅವನ ಗುಣ-ವಿಶೇಷಗಳನ್ನು ಸ್ತುತಿಸುತ್ತ, ಅವನ ವಿವಿಧ-ವಿಶಿಷ್ಟ ರೂಪವನ್ನು ತಮ್ಮ ರಮ್ಯವಾದ ಆಂಗಿಕಾಭಿನಯದ ಸೌಂದರ್ಯದಲ್ಲಿ ಕಟ್ಟಿಕೊಟ್ಟರು.
ಮುಂದೆ- ನಟರಾಜನ ದಿವ್ಯ ಸೌಂದರ್ಯ-ಗುಣಾತಿಶಯಗಳನ್ನು ದೃಶ್ಯಾತ್ಮಕವಾಗಿ ಕಣ್ಮುಂದೆ ತಂದು ನಿಲ್ಲಿಸಿದ ‘ಶಂಕರ..ಪರಮೇಶ್ವರ…ಶಶಿಶೇಖರ’ನ ಬಗೆಗಿನ ಭಕ್ತಿ ತಾದಾತ್ಮ್ಯತೆಯನ್ನು ಕಲಾವಿದೆಯರು ರಸಭಾವದಿಂದ ಹೃದಯಸ್ಪರ್ಶಿಯಾಗಿ ನಿರೂಪಿಸಿದರು. ವಿದುಷಿ. ಭಾರತಿ ವೇಣುಗೋಪಾಲ್ ಅವರ ಭಾವಪೂರ್ಣ ಗಾಯನ ‘ಕರ ಪಿಡಿದು ಪಾಲಿಸೈ’ -ಎಂಬ ಭಕ್ತ್ಯಾತಿಶಯದ ಮೊರೆಗೆ ಮೂರ್ತ ರೂಪಗೊಡುವಂತೆ ಅವಳಿ ಸೋದರಿಯರು ಬಹು ಸೊಗಸಾಗಿ ಅಭಿವ್ಯಕ್ತಿ ನೀಡಿದರು. ರಾಗಮಾಲಿಕೆಯ ‘ಶಬ್ದ’-ವನ್ನು ಅಚ್ಚುಕಟ್ಟಾಗಿ ನಿರೂಪಿಸಿ ತಮ್ಮ ಅಂಗಶುದ್ಧ ನರ್ತನದಿಂದ ಮನೋಹರ ಭಂಗಿಗಳಿಂದ ನೋಡುಗರನ್ನು ಸೆರೆ ಹಿಡಿದರು.
ನೃತ್ಯಪ್ರಸ್ತುತಿಯ ಘನವಾದ ಹಂತ ‘ವರ್ಣ’- ನೃತ್ತ-ನೃತ್ಯಗಳ ಹದವಾದ ಸಮರಸ ಸಂಗಮ. ನೃತ್ಯದ ಆತ್ಮವನ್ನು ಪ್ರಕಾಶಗೊಳಿಸುವ ಗಾಯನ-ವಾದ್ಯಗಳ ಮೇಳದ ಪಾತ್ರ ನಾಟ್ಯಪ್ರಸ್ತುತಿಯಲ್ಲಿ ಅತ್ಯಂತ ಪ್ರಮುಖವಾದುದು. ‘ವರ್ಣ’- ಕ್ಲಿಷ್ಟವಾದ ಮತ್ತು ದೀರ್ಘ ಬಂಧ, ಕಲಾವಿದೆಯ ನೃತ್ತನೈಪುಣ್ಯ, ಅಭಿನಯದ ಪಾಕ, ದೈಹಿಕ ಚೈತನ್ಯ, ತಾಳ-ಲಯಜ್ಞಾನಗಳ ಸಾಮರ್ಥ್ಯ ಮತ್ತು ನೆನಪಿನ ಶಕ್ತಿಗೆ ಸವಾಲು ನೀಡುವಂಥದು. ನೃತ್ಯ ವ್ಯಾಕರಣದ ಎಲ್ಲ ಆಯಾಮಗಳೂ ಇದರಲ್ಲಿ ವ್ಯಕ್ತ. ಜೊತೆಗೆ ಅಷ್ಟೇ ಚೈತನ್ಯವನ್ನು ಬಯಸುವ ‘ವರ್ಣ’ ದಲ್ಲಿ ಕಲಾವಿದರು ‘ಸೈ’ ಎನಿಸಿಕೊಂಡರೆ ಮುಂದಿನ ಪ್ರಸ್ತುತಿಗಳು ಆತ್ಮವಿಶ್ವಾಸದಿಂದ ತುಂಬಿ ಗೆಲುವಿನ ಹಾದಿ ನಿರ್ಮಿಸುತ್ತದೆ.
ರಾಗಮಾಲಿಕೆಯ ರಾಗದಲ್ಲಿ ವಿದ್ವಾನ್ ಶ್ರೀ ಬಾಲಸುಬ್ರಹ್ಮಣ್ಯ ಶರ್ಮ ಅವರ ರಚನೆಯ ‘ವರ್ಣ’ವನ್ನು ಈ ಉದಯೋನ್ಮುಖ ಕಲಾವಿದೆಯರು, ಹಸನ್ಮುಖದ ಲವಲವಿಕೆ-ಚೈತನ್ಯ ಸ್ಫುರಣೆಯೊಂದಿಗೆ ಕೃಷ್ಣನ ಕುರಿತ ‘ನೀಲಮೇಘ ಶ್ಯಾಮಸುಂದರನ ಕರೆತಾರೆ…’- ಎಂಬ ಭಕ್ತಿ-ಶೃಂಗಾರರಸಪೂರಿತ ಕೃತಿಯನ್ನು ಪರಿಣಾಮಕಾರಿಯಾಗಿ ಒಡಮೂಡಿಸಿದರು. ಮನದಿನಿಯ ಕೃಷ್ಣನ ವಿರಹತಾಪವನ್ನು ಸಹಿಸದ ನಾಯಕಿ, ಅವನಿಲ್ಲದೆ ಬದುಕಿರಲಾರೆ ಎಂಬ ಅಗಲಿಕೆಯ ತೀವ್ರ ನೋವನ್ನು, ತನ್ನ ವಿರಹವೇದನೆಯನ್ನು ಬಗೆ ಬಗೆಯಾಗಿ ಸಖಿಯಲ್ಲಿ ತೋಡಿಕೊಳ್ಳುತ್ತ, ಅವನನ್ನು ಕೂಡಲೇ ಕರೆತರಲು ಬಿನ್ನವಿಸುವ ಸನ್ನಿವೇಶ. ನರ್ತಕಿಯರು ತಮ್ಮ ಅಭಿನಯ ಪ್ರತಿಭೆಯನ್ನು ಹೊರ ಚೆಲ್ಲುವುದರೊಂದಿಗೆ, ನೃತ್ತಗಳ ಸಾಮರ್ಥ್ಯವನ್ನೂ ಸರಿಸಮವಾಗಿ ಪ್ರದರ್ಶಿಸಿದರು. ನಡುನಡುವೆ ಕಾಣಿಸಿಕೊಳ್ಳುತ್ತಿದ್ದ ನವನವೀನ ನೃತ್ತ ಲಾಸ್ಯ, ಝೇಂಕಾರ ನೋಡುಗರಲ್ಲಿ ಸಂಚಲನ ಮೂಡಿಸುವಷ್ಟು ಶಕ್ತವಾಗಿತ್ತು. ಗುರು ಜಯಲಕ್ಷ್ಮೀ ಅವರ ಉತ್ಸಾಹಭರಿತ, ಕಂಚಿನ ಕಂಠದ ‘ನಟುವಾಂಗ’ ಕಲಾವಿದೆಯರಿಗೆ ಸ್ಫೂರ್ತಿ ಚೇತನ ಧಾರೆ ಎರೆದಿತ್ತು. ಸಣ್ಣ ಸಂಚಾರಿಗಳಲ್ಲಿ ತೆರೆದುಕೊಂಡ ಶ್ರೀಕೃಷ್ಣನ ಸಾಹಸ-ಮಹಿಮೆಗಳ ಸುಂದರ ಚಿತ್ರಣಗಳು ಅಪ್ಯಾಯಮಾನವಾಗಿದ್ದವು. ಹೊಸ ವಿನ್ಯಾಸದ ಜತಿಗಳು ಅಷ್ಟೇ ಆಕರ್ಷಕವಾಗಿದ್ದವು. ತನ್ನಿಷ್ಟ ದೈವ ಕೃಷ್ಣನೆಡೆಗಿನ ಅಸೀಮ ಭಕ್ತಿ-ಪ್ರೇಮಗಳಿಗೆ ಸಾಕ್ಷಿಯಾದ ನಾಯಕಿಯ ಪ್ರಣಯ ನಿಷ್ಠೆ, ನರ್ತಕಿಯರಿಬ್ಬರ ಸಾಮರಸ್ಯದ ಪೂರಕ ಅಭಿನಯದೊಡನೆ, ನಡುನಡುವೆ ಮಿಡಿದ ನೃತ್ತವಲ್ಲರಿಯಿಂದ ನಾಟ್ಯ ಸೊಗಯಿಸಿತು.
ಅನಂತರ ಕೀರವಾಣಿ ರಾಗದ ಶ್ರೀ ವಾದಿರಾಜರ ಕೀರ್ತನೆಯನ್ನು ಕಲಾವಿದೆಯರು ಮನೋಹರವಾಗಿ ಸಾಕಾರಗೊಳಿಸಿದರು. ಕೃತಿಯ ನಡುವೆ ಬರುವ ಸಂಚಾರಿ ಕಥಾನಕಗಳು ಅಷ್ಟೇ ಹೃದ್ಯವಾಗಿದ್ದವು. ಅನಂತರ-ದೈವೀಕ ನೆಲೆಯಲ್ಲಿ ಅರ್ಪಿತವಾದ ಕಮಲ ಮನೋಹರಿ ರಾಗದಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರು ರಚಿಸಿದ ‘ಕಂಜದಳಾಯತಾಕ್ಷಿ’ ದೇವಿಯ ರೂಪ-ಲಾವಣ್ಯಗಳನ್ನು ತಮ್ಮ ರಮ್ಯ ಆಂಗಿಕಗಳಿಂದ ಕಲಾವಿದೆಯರು ಸುಂದರವಾಗಿ ಕಟ್ಟಿಕೊಟ್ಟರು. ಡಿವಿಜಿ ವಿರಚಿತ ಅಂತಃಪುರ ಗೀತೆಯ ‘ಏನೀ ಮಹಾನಂದವೇ’- ಭಾವುಕತೆಯ ಆನಂದಾತಿಶಯ ಸಂಭ್ರಮವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತ, ಶಿಲಾಬಾಲಿಕೆಯರ ವಿವಿಧ ಮನೋಹರ ಭಂಗಿಗಳನ್ನು ಕಡೆದಿರಿಸಿದರು. ದೇವ ಚೆನ್ನಕೇಶವನು ಬಾಲಿಕೆಯರ ನೃತ್ಯಸೇವೆಯಿಂದ ಸಂಪ್ರೀತನಾಗಿ ಸಾಕ್ಷಾತ್ಕಾರಗೊಳ್ಳುವಂತೆ ಭಾಸವಾಯಿತು.
ಅಂತ್ಯದಲ್ಲಿ- ರಂಗಾಕ್ರಮಣ, ಪಾದಭೇದ, ಭ್ರಮರಿ, ವಿವಿಧ ವಿಶಿಷ್ಟ ಅಡವುಗಳಿಂದ ಕಲಾವಿದೆಯರು ಪರಾಸ್ ರಾಗ-ಆದಿತಾಳದ ತಿಲ್ಲಾನದೊಂದಿಗೆ ಪ್ರಸ್ತುತಿಯನ್ನು ಸಂಪನ್ನಗೊಳಿಸಿದರು. ಪುರಂದರದಾಸರ ‘ಕೃಷ್ಣ’ ಸ್ತುತಿಯ ‘ಮಂಗಳ’, ಕಾರ್ಯಕ್ರಮದ ಶೋಭೆಯನ್ನು ಎತ್ತಿ ಹಿಡಿಯಿತು.
ನೃತ್ಯಗಳಿಗೆ ಜೀವತುಂಬಿದ ಸಂಗೀತ ಸಹಕಾರದಲ್ಲಿ- ಗಾಯನ ಭಾರತಿ ವೇಣುಗೋಪಾಲ್, ಮೃದಂಗ-ವಿನೋದ್ ಶ್ಯಾಂ ಆನೂರು, ವಯೊಲಿನ್-ಮಧುಸೂದನ್, ಕೊಳಲು ನರಸಿಂಹಮೂರ್ತಿ ಮತ್ತು ನಟುವಾಂಗದಲ್ಲಿ ಗುರು ಜಯಲಕ್ಷ್ಮೀ ಜಿತೇಂದ್ರ ಭಾಗವತ ಅವರ ಪಾತ್ರಗಳು ಹಿರಿದಾಗಿತ್ತು.
****************************
ವೈ.ಕೆ.ಸಂಧ್ಯಾ ಶರ್ಮ