ಕಳೆದ ಒಂದೂಕಾಲು ವರ್ಷಗಳಿಂದ ಕಮ್ಲುವಿನ ಬದುಕಿನ ಶೈಲಿಯೇ ಬೇರೆಯಾಗಿಬಿಟ್ಟಿದೆ. ವಿಚಿತ್ರ ತಿರುವುಗಳು, ಹಳ್ಳ-ಕೊಳ್ಳ-ಕೊರಕಲು. ಅವಳದು ಮಾತ್ರವೇನು ಎಲ್ಲರ ಪಾಡೂ ಅದೇ ಆಗಿದೆ ಅಂತೀರೇನೋ… ಹೇಳಿ ಕೇಳಿ ಅವಳು ಅಪ್ಪಟ ಗೃಹಿಣಿ.
ಮೊದಲಾದರೆ, ಬೆಳಗಿನ ವಾಕು, ಕಾಫಿ, ತಿಂಡಿ ಅಡುಗೆ, ಗಂಡ-ಮಕ್ಕಳ ಯೋಗಕ್ಷೇಮ, ಗೆಳತಿಯರೊಂದಿಗೆ ಗಂಟೆಗಟ್ಟಲೆ ಫೋನಿನಲ್ಲಿ ಹರಟೆ, ಅವರೊಂದಿಗೆ ಭಾನುವಾರ-ರಜಾದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ಮನೆಯವರೆಲ್ಲ ಕೆಲಸಕ್ಕೆ ಹೋದಾಗ ಹೊರಗೆ ಹೋಗುವ ಪ್ರೋಗ್ರಾಂಗಳು ಒಂದೇ ಎರಡೇ?.. ಜಯನಗರ ಫೋರ್ಥ್ ಬ್ಲಾಕ್ ಕಾಂಪ್ಲೆಕ್ಸು, ಗಾಂಧೀಬಜಾರು, ಮೆಜೆಸ್ಟಿಕ್ಕಿನ ಶಾಪಿಂಗ್ ಮೋಜು-ಮಸ್ತಿ. ಕಡೆಗೆ ಯಾವುದೂ ಇಲ್ಲದಿದ್ರೆ, ಟಿವಿಯಲ್ಲಿ ಬರೋ ಹೆಣ್ಣುಮಕ್ಕಳ ದರ್ಭಾರು, ಅಸಹಜ ಖಯಾಲಿಗಳು, ಫ್ಯಾಷನ್ನು, ಇಲ್ಲವೇ ಚುಯಿಂಗ್ ಗಂ ಗೋಳುಕರೆಯ ಧಾರಾವಾಹಿಗಳನ್ನು ನೋಡುತ್ತ ತಾನೂ ಕಣ್ಣೀರು ಬಳಬಳ ಸುರಿಸುವುದು. ಒಮ್ಮೊಮ್ಮೆ ಮನಸ್ಸು ತಡೆಯದೆ, ಈಜೀಚೇರಿನ ಮೇಲೆ ಹಾಯಾಗಿ ಮೈ ಚೆಲ್ಲಿ ಕುಳಿತ ಗಂಡನನ್ನು ತಿವಿದು-
‘ ಇಲ್ನೋಡಿದ್ರಾ ಅಂದ್ರೆ, ಪಾಪ ಈ ಬಡಪಾಯಿ ಸೀತನ್ನ ಅವಳ ಅತ್ತೆ ಹೇಗೆ ಹುರಿದು ಮುಕ್ತಿದ್ದಾಳೆ ಅಂತ…’ ಎಂದು ಟಿವಿಯ ಮುಂದೆ ಪ್ರತಿಷ್ಠಾಪನೆಗೊಂಡ ಕಮಲೂ ಲೋಚಗುಟ್ಟುತ್ತಿದ್ದಳು.
ಮೊದಲೇ ಧಾರಾವಾಹಿಗಳನ್ನು ಕಂಡರೆ ಸಿಡಿದೇಳುತ್ತಿದ್ದ ಶ್ರೀಕಂಠೂಗೆ ಹೆಂಡತಿಯ ಪೆಕರು ಪ್ರಶ್ನೆ-ಪ್ರತಿಕ್ರಿಯೆಗಳನ್ನು ಕೇಳಿ ರೇಗಿಹೋಗುತ್ತಿತ್ತು.
‘ಸುಮ್ನೆ ನನ್ನ ತಲೆ ತಿನ್ನಬೇಡ ಹೋಗೇ… ಅಡುಗೆಮನೆಯಿಂದ ಏನೋ ಸೀದ ವಾಸನೆ ಬರ್ತಿದೆ, ನೋಡು ಹೋಗು’ಎಂದು ಸಬೂಬು ಹಾಕಿ ಅವಳನ್ನು ಉಪಾಯವಾಗಿ ಜಾಗ ಖಾಲಿ ಮಾಡಿಸುತ್ತಿದ್ದ.

ಆದರೆ, ಈ ಸೀನುಗಳೆಲ್ಲ ಈಗಿಲ್ಲ ಬಿಡಿ. ಈಗೆಲ್ಲ ಉಲ್ಟಾ ಪಲ್ಟಾ ಆಗ್ಹೋಗಿದೆ. ಮನೆಯವರೆಲ್ಲರ ಏನು ಬಂತು, ಇಡೀ ಪ್ರಪಂಚದವರ ದಿನಚರಿಗಳೇ ಗೋತಾ ಹೊಡೆದಿವೆ. ಈ ಥರ ಗ್ರಹಣದ ಗ್ರಹಚಾರದ ಕಾಲ ಬರತ್ತೆ ಅಂತ ಯಾರು ನಿರೀಕ್ಷಿಸಿದ್ದರು?!!..ಎಲ್ಲಾ ಅಯೋಮಯ…ಏನಾಗ್ತಿದೆ ಅಂತಲೇ ಗೊತ್ತಾಗುತ್ತಿಲ್ಲ… ಸದಾ ಟಿವಿ ಅಂದರೆ ಸಿಡಿಮಿಡಿಗುಟ್ಟುತ್ತಿದ್ದ , ಸೋಮಾರಿಗಳ ಪೆಟ್ಟಿಗೆ ಅಂತ ದೂಷಿಸುತ್ತಿದ್ದ ಶ್ರೀಕಂಠೂಗೆ ಈಗ ಸದಾ ಟಿವಿಗೆ ಅಂಟಿ ಕುಳಿತುಕೊಳ್ಳೋ ಹೊಸ ಚಟ ಬೆಳೆದುಬಿಟ್ಟಿದೆ!!..
‘ತಡಿಯೇ, ಮನುಷ್ಯನ ಬದುಕನ್ನ ಅಡ್ಡಡ್ಡ ನುಂಗ್ತಿರೋ ಈ ದರಿದ್ರ ಖಾಯಿಲೆ ಹಾವಳಿ ಬಗ್ಗೆ ಸ್ವಲ್ಪ ತಿಳ್ಕೊಳ್ಳೋಣ ಇರೇ, ಎಷ್ಟು ಎಚ್ಚರಿಕೆಯಾಗಿರಬೇಕು ಅನ್ನೋ ಮಾಹಿತಿ ಬರ್ತಿದೆ…ಸೋಂಕಿತರ- ಸತ್ತವರ ಲೆಕ್ಕ..ಲೆಕ್ಕ ಕೊಡ್ತಾ ಇದ್ದಾರೆ..ನಿನ್ನೆಗಿಂತ ಎಷ್ಟು ಕಡಿಮೆ ಅಥವಾ ಜಾಸ್ತಿ ಆಗಿದೆಯೋ ನೋಡೋಣ, ತಾಳು ’ -ಎಂದು ಮಗ್ಗುಲಲ್ಲಿ ಕುಳಿತು, ಧಾರಾವಾಹಿ ಹಾಕಲು ಪೀಡಿಸಿದ ಕಮಲೂನ ಅಮ್ಮರಿಸಿ, ಯಾರೋ ತನ್ನ ಕೊರಳಮುಕ್ಕುತ್ತಿದ್ದಾರೆಂಬಂತೆ ಉಸಿರುಗಟ್ಟಿ ಮುಖವನ್ನು ಸೀರಿಯಸ್ ಮಾಡಿಕೊಂಡು, ಕೊಕ್ಕರೆ ಕುತ್ತಿಗೆಯನ್ನು ಟಿವಿ ಪರದೆಗೆ ಕಣ್ಣು ಸಿಕ್ಕಿಸಿಯೇ ಬಿಟ್ಟಿದ್ದ ಶ್ರೀಕಂಠೂ, ಇಡೀ ದಿನ .
ಕಮಲೂಗೋ ಥಕಪಕ ಕುಣಿಯುವಂಥ ಅಸಹನೆ.
‘ಸಾಕು ಟಿವಿ ಆರಿಸ್ರೀ .. ಅದೇನು ಅವನು ಒಂದೇ ಸಮನೆ ಗಂಟಲು ಕೀರುಕೊಳ್ತಿದ್ದಾನೆ ಮರಣ ಮೃದಂಗ, ರಣಕೇಕೆ, ಮಹಾ ಮಾರಿ.. ಸಾವಿನ ಸರಮಾಲೆ ಅಂತ…ನಾಳೆ ಹೋಗೋರನ್ನ ಈ ಟಿವಿಯವರು ಇವತ್ತೇ ಯಮಲೋಕಕ್ಕೆ ಪಾರ್ಸಲ್ ಮಾಡಿಬಿಡ್ತಾರೆ…ತಲೆ ಕೆಟ್ಟುಹೋಗಿದೆ…ದಿನವಿಡೀ ಉಚ್ಛ ಸ್ಥಾಯಿಯ ಒಂದೇ ರಾಗ…ಏನಾದರೂ ಒಂದು ಸ್ವಲ್ಪ ಸಿಕ್ಕಿ ಬಿಟ್ರೆ ಸಾಕು ಇವರಿಗೆ, ಸುದ್ದಿಯ ಮೃಷ್ಟಾನ್ನ ಹೊಡೆದು ಬಿಡ್ತಾರೆ, ಅದೂ ತಮಟೆ ಹೊಡೆದು ಸಾವಿರ ಸಲಾ ಸಾರೋದು ಬೇರೆ..ಥೂ ರಣಹದ್ದುಗಳು…ಏನಾದರೂ ವಿಷಯ ಸಿಕ್ಕರೆ ಸಾಕು ಕುಕ್ಕಿ ಕುಕ್ಕೀ ಸೀಳಿಬಿಡ್ತಾರೆ..’
ಹಲ್ಲು ಕಟಕಟನೆ ಕಡಿದಳು.
‘ಟಿ ಆರ್ ಪಿ ರೋಗಾಮ್ಮಾ ಅವರಿಗೆ…ಎಷ್ಟು ಸೋಂಕು ಹೆಚ್ಚಾದರೆ, ಸಾವು-ನೋವು ಸಂಭವಿಸಿದ್ರೆ ಅಷ್ಟು ಬಗೆ ಬಗೆಯ ಕಥೆ ಹೆಣೆದು ರೋಚಕವಾಗಿ ತೋರಿಸೋ ಹುಕಿ ಅವರಿಗೆ..ಬೆಂಕಿ ಹತ್ತಿರೋ ಮನೆಯ ಗಳಾ ಹಿರ್ಕೊಂಡ್ರಂತೆ ಅನ್ನೋ ಗಾದೆ ಹಾಗೇ ’-ಮಗ ಒಗ್ಗರಣೆ ಹಾಕಿದ.
ಕಮ್ಲೂ ಮುಖ ಕಿವುಚಿಕೊಂಡಳು.
ಮೊದಮೊದಲು ದೇಶದ ಸಮಸ್ಯೆ ತನ್ನ ತಲೆಯ ಮೇಲೆಯೇ ಹೊತ್ತವಳಂತೆ ಅವಳೂ ಗಂಭೀರವಾಗಿ ವಾರ್ತಾಶ್ರವಣಕ್ಕೆ ಕರ್ಣದಾನ ಮಾಡಿದ್ದು ನಿಜಾನೇ.. ಲಬ್ ಡಬ್ ಎನ್ನುವ ಎದೆಯನ್ನು ನೀವಿಕೊಳ್ಳುತ್ತ ತುಟಿಯ ಮೇಲೆ ಬೆರಳು ಒತ್ತಿಕೊಳ್ಳುತ್ತ –
‘ಇದೇನು ಬಂತ್ರೀ ಕೆಟ್ಟ ಕಾಲ..ಹೊರಗೆ ವಾಕಿಂಗ್ ಅಂತ ಹೋಗೋ ಹಾಗಿಲ್ಲ, ನಮ್ಮ ಆರೋಗ್ಯಗಳು ನೆಗೆದು ಬಿತ್ತು.. ನೆಂಟರು ಇಷ್ಟರು ಅಂತ ಅವರಿವರ ಮನೆಗಳಿಗೆ ಹೋಗೋ ಹಾಗೂ ಇಲ್ಲ, ಅವರೂ ಬರೋಹಾಗಿಲ್ಲ, ಒಬ್ಬರ ಮುಖ ಇನ್ನೊಬ್ಬರು ನೋಡೋ ಹಾಗಿಲ್ಲದ ಇದು ನಿಜವಾಗಿ ಕಲಿಗಾಲ, ಅಲ್ಲಲ್ಲ… ಈ ಅಂಟುರೋಗಾನ ಚರಪು ಹಂಚಿದ ಹಾಗೇ ಪ್ರಪಂಚದ ತುಂಬಾ ಅಂಟಿಸಿಕೊಂಡು ಬಂದ ಚೀನಿಗಳ ಲೀಲಾವಿನೋದ… ಇದ್ಯಾವತ್ತು ಮುಗಿಯತ್ತೋ…’ ಎಂದು ಪೇರುಸಿರನ್ನು ಸೊರಬುಸ ಹೊರಗೆ ಹುಯ್ದು, ಮತ್ತೆ ತನ್ನ ಉಪನ್ಯಾಸವನ್ನು ಮುಂದುವರಿಸುತ್ತಾ- ‘ಅದ್ಹೇಗೆ ರೀ, ಖೈದಿಗಳ ಥರ ಎಷ್ಟು ಕಾಲಾಂತ ನಾವು ಈ ನಾಲ್ಕುಗೋಡೆಗಳ ಸೆರೆಯಲ್ಲೇ ಕೊಳೀತಾ ಕೂತುಕೊಳೋದು..ನನಗಂತೂ ಬೋರೋ ಬೋರು..ಮೈ ಕೈ ಪರಚಿಕೊಳ್ಳೋ ಹಾಗಾಗಿದೆ..’
ಎಂದು ಮತ್ತೆ ಹೋಲ್ ಸೇಲಾಗಿ ನಿಟ್ಟುಸಿರು ಕಕ್ಕಿದ ಕಮಲೂಗೆ ತುದಿ ಮೊದಲಿಲ್ಲದ ಈ ವನವಾಸ ತಲೆಚಿಟ್ಟು ಹಿಡಿದುಹೋಗಿತ್ತು.
‘ ನಿಂಗೊಬ್ಬಳಿಗೆ ಅಂದುಕೊಂಡ್ಯೇನೇ ಮಾರಾಯ್ತಿ ಈ ಶಿಕ್ಷೆ … ಎಲ್ಲರಿಗೂ ಆಗಿದ್ದೇ ನಮಗೂ…ದಿನ್ ದಿನ ಸಾವಿರಾರು ಜೀವಗಳು ಎಗರಿ ಹೋಗ್ತಿವೆ , ಇವಳಿಗೆ ಜೀವನ ಬೋರಂತೆ… ಮನೆಯೊಳಗೆ ಇಷ್ಟು ಸೇಫ್ ಆಗಿದ್ದಿಯಲ್ಲ, ನಿನ್ನ ಪುಣ್ಯ…ಜೀವದೊರಸೆ ಇರಬೇಕೂಂದ್ರೆ ಮನೆಯಲ್ಲೇ ಬಿದ್ದಿರಬೇಕು ತಿಳ್ಕೋ..ಸದ್ಯದ ಪರಿಸ್ಥಿತೀಲಿ ಇದಕ್ಕೆ ಮೀರಿ ಬಯಸಿದರೆ ಅದು ದುರಾಸೆ. ಅದೇ ಮೊದಮೊದಲು ನೀನು, ರೀ, ಒಂಥರಾ ಛೇಂಜು, ಮೊದಲಿನ ಧಾವಂತ ಇಲ್ಲ..ಹೊರಗೆ ಕಿವಿಗಡಚಿಕ್ಕೋ ಶಬ್ದಗಳಿಲ್ಲ..ಧೂಳಿಲ್ಲದ ಸ್ವಚ್ಛ ಪರಿಸರ, ಬೆಳಗಿನ ಝಾವ ಹಕ್ಕಿ-ಪಕ್ಷಿಗಳ ಕಲರವ, ಖುಷಿಯಾಗತ್ತೆ ಅಂತ ಸಂತೋಷದಿಂದ ಸಡಗರಿಸಿದೆ..ಕಣ್ಣು ಮಿನುಗಿಸಿದೆ..ಈಗೇನು ಇದ್ದಕ್ಕಿದ್ದ ಹಾಗೇ ಪ್ಲೇಟ್ ಛೇಂಜು..’

ಅಂತ ಹೆಂಡತಿಯನ್ನು ಕಿಚಾಯಿಸಿದ ಶ್ರೀಕಂಠೂ.
ಕಮ್ಲೂ ಮುಖವನ್ನು ಹರಳೆಣ್ಣೆ ಕುಡಿದ ಹಾಗೇ ವಕ್ರ ಮಾಡಿ –‘ನೀವೇನು ಗಂಡಸರು ಕೂತಲ್ಲೇ ಎಲ್ಲ ಮಾಡಿಸಿಕೊಳ್ತೀರಾ, ನಮ್ಮ ಪಾಡು ಹೇಳಿ’- ಎಂದು ಧುಮುಗುಟ್ಟಿಕೊಂಡು, ನೆಲ ಅದುರುವ ಹಾಗೆ ಹೆಜ್ಜೆಯನ್ನು ಝಾಡಿಸಿ ಇಡುತ್ತ ಸೆರಗು ಬಿಗಿದುಕೊಂಡು ಅಡುಗೆಮನೆಗೆ ನುಗ್ಗಿದಳು.
‘ಸ್ವಲ್ಪ ಹೊತ್ತು ಆ ದರಿದ್ರ ಟಿವಿ ಆರಿಸಿ, ನೆಮ್ಮದಿಯಾಗಿರೋಣ ’-ಅಲ್ಲಿಂದಲೇ ಫಾರ್ಮಾನು ಹೊರಡಿಸಿ, ಎಲ್ಲರಿಗೂ ಕೇಳುವಂತೆ ತನ್ನ ಸ್ವಗತಾನ ಶುರು ಹಚ್ಚಿಕೊಂಡಳು ಕಮಲೂ :
‘ ಅಯ್ಯೋ ದೇವರೇ, ವಾರ-ದಿನಗಳೇ ಗೊತ್ತಾಗುತ್ತಿಲ್ಲವಲ್ಲಪ್ಪ..ದಿನಾ ಒಂದೇ ಪಾಡು….ನಾನು ಈ ಮನೇಲಿ ಕಸ-ಮುಸುರೆ ಮಾಡೋ ಒಕ್ಕಲುಗಿತ್ತಿಯಿಂದ ಹಿಡಿದು, ಬಗೆಬಗೆಯಾಗಿ ನಿಮ್ಮಗಳ ಜಿಹ್ವಾ ಚಾಪಲ್ಯ ತೀರಿಸೋ ಅಡುಗೆಯವಳು, ಸಪ್ಲೈಯರ್ರು, ಕ್ಲೀನರ್ರು, ಮನೆಯ ಸಮಸ್ತ ಕೇರ್ ಟೇಕರ್ರು ಎಲ್ಲಾ ಅಗಿಬಿಟ್ಟಿದ್ದೀನಿ…ಒಟ್ಟಿನಲ್ಲಿ ನಿಮ್ಮಗಳ ಬಯಕೆ-ಆರ್ಡರ್ಗಳನ್ನೆಲ್ಲ ಪಾಲಿಸೋ ಹೋಸ್ಟೂ…ಹೂಂ..ಇನ್ನೂ ಏನೇನೋ ಅವತಾರ ಎತ್ತಬೇಕೋ.. ಕರ್ಮಖಾಂಡ..ಈ ಕರೋನಾ ಅನ್ನೋ ಮಹಾಮಾರಿ, ಅಲ್ಲಲ್ಲ…..ಇದು ಕ್ರೂರ ರಾಕ್ಷಸ ಖಾಯಿಲೆ…ಇದಕ್ಕೂ ಉಟ್ಟುಕೊಳ್ಳಕ್ಕೆ ನಮ್ಮ ಸೀರೆಯೇ ಬೇಕಿತ್ತಾ…ಎಲ್ಲದಕ್ಕೂ ಶನೇಶ್ವರನೇ ಹೊಣೆಯಂತೆ, ನಾವು ತಾನೇ ಹಾಗೆ ಬಿಟ್ಟಿ ಸಿಕ್ಕಿರೋದು…ಮನೇಲೂ ಎಲ್ಲ ಜವಾಬ್ದಾರಿಗಳೂ ನಮ್ಮ ತಲೆಗೇ ಕಟ್ಟಿರೋದು…ಎಲ್ಲಿದೇರೀ ನಾವೇ ಎಲ್ಲಾ ಕೆಲ್ಸ ಮಾಡಬೇಕೂಂತ ರೂಲ್ಸೂ..ಈ ವ್ಯವಸ್ಥೆ ಅಥವಾ ಶಾಸನ ಮಾಡಿದೋನು ನನ್ನ ಕೈಗೆ ಸಿಗಲಿ ಬುದ್ಧಿ ಕಲಿಸ್ತೀನಿ…ಗಂಡ ಹೆಂಡ್ತಿ ಇಬ್ಬರೂ ಆಫೀಸಿಗೆ ಹೋಗಿ ಬಂದು, ಮನೆಗೆ ಬಂದವನೇ ಗಂಡ ಹಾಯಾಂತ ಸೋಫಾದ ಮೇಲೆ ಮಹಾರಾಜನ ಹಾಗೇ ಪೋಸ್ ಕೊಡಬೇಕಂತೆ, ಈ ಹೆಂಡ್ತೀ ಅನ್ನಿಸಿಕೊಂಡ ಬಡಪ್ರಾಣಿ ಬಂದವಳೇ ಬಚ್ಚಲುಮನೆಗೂ ಹೋಗದೆ, ಯಾಕೆ ಓಡಿಹೋಗಿ ಕಾಫಿ ಸೋಸಿ ತಂದು, ಹಬೆಯಾಡೋ ಬಿಸಿಬಿಸಿ ಸ್ಟ್ರಾಂಗ್ ಕಾಫೀ ಲೋಟಾನ ಗಂಡನ ಕೈಗೆ ಇಡಬೇಕು ಅಂತ ಯಾವೋನು, ಯಾಕೆ ಕಾನೂನು ಮಾಡಿದ…ಗಂಡ ಅನ್ನಿಸಿಕೊಂಡ ಪುಣ್ಯಾತ್ಮ, ಟಿವಿ ನೋಡ್ತಾ ಲೋಟ ಬಾಯಿಗಿಟ್ಟುಕೊಂಡ್ರೆ, ನಾವು ಕುಕ್ಕರ್ ಜೋಡಿಸಕ್ಕೆ ಅಡುಗೆಮನೆಗೆ ಧೋಡಾಯಿಸಬೇಕಾ…?? ರುಚಿರುಚಿಯಾಗಿ ಮಾಡಿ ಬಡಿಸಿ, ಸರ್ವೊತ್ತಿನಲ್ಲಿ ನಾವು ಉಳಿದಷ್ಟನ್ನೇ ಬಾಚಿ ಉಣಬೇಕು, ಇಲ್ಲ ಈ ತುಟ್ಟೀಕಾಲದಲ್ಲಿ ದಂಡವಾಗತ್ತಲ್ಲ ಅಂತ ಹೊಟ್ಟೆ ಕೆಡಿಸಿಕೊಂಡು ಉಳಿದಿದ್ದೆಲ್ಲವನ್ನೂ ನುಂಗೋದು ನಮ್ಮ ಕರ್ಮ..ಇಷ್ಟರ ಮೇಲೆ ಡುಮ್ಮಿ ಅಂತ ಬೇರೆ ನಿಮ್ಮಗಳ ಕೈಲಿ ಹಂಗಿಸಿಕೊಳ್ಳೋದು, ಬೇಕಾ ಈ ದುರವಸ್ಥೆ ನಮಗೆ..’
ಅವಳ ಮಾತಿನ ರೂಟು ಎಲ್ಲಿಂದೆಲ್ಲಿಗೋ ಹೊರಳಿ, ಗಂಟೆಗಟ್ಟಲೆ ಒರಲಿಕೊಂಡ ಕಮ್ಲೂವಿನ ಮೋನೋ ಆಕ್ಟಿಂಗ್ ನೋಡಲು ಅಲ್ಲಿ ಯಾರೂ ಇರಲಿಲ್ಲ. ಬರೀ ಕಂಠ ಶೋಷಣೆ.. ಮಕ್ಕಳೆಲ್ಲ ಕೋಣೆಗಳನ್ನು ಸೇರಿ ವರ್ಕ್ ಫ್ರಂ ಹೋಂ ಎಂದು ಕಂಪ್ಯೂಟರ್-ಲ್ಯಾಪ್ ಟಾಪ್ ಗಳ ಮುಂದೆ ಧ್ಯಾನಾರೂಢರಾಗಿದ್ದಾರೆ!!
ಕಮ್ಲೂ ಮನಸ್ಸಿನಲ್ಲೇ ದೊಡ್ಡ ಭಾಷಣ ಬಿಗಿಯುತ್ತ ಆಶ್ಚರ್ಯಚಕಿತಳಾಗಿ ಯೋಚಿಸುತ್ತಿದ್ದಳು:
ಇದ್ದಕ್ಕಿದ್ದ ಹಾಗೇ ಎಲ್ಲ ಧಿಡೀರನೆ ಬದಲು!!…ಹೋದವರ್ಷ ಮಾರ್ಚ್ 8 ಮನೆಯಿಂದ ಆಚೆ ಕಾಲಿಟ್ಟಿದ್ದೇ ಕೊನೆಯಾಗಿ ಹೋಯಿತು. ನಾಲ್ಕುಗೋಡೆಯೊಳಗೆ ಬದುಕು ಬಂದಿ. ವಾಕೂ ಇಲ್ಲ-ಗೀಕೂ ಇಲ್ಲ. ಹತ್ತುಮನೆ ಸುತ್ತಿ ಎಲ್ಲಿಂದಲಾದರೂ ಕರೋನಾ ತಂದು ಹಚ್ಚಿಬಿಟ್ಟಾಳೆಂದು ಯಾರೋ ಬೆದರಿಸಿದ್ದರಿಂದ ಕೆಲಸದವಳನ್ನು ಬಿಡಿಸಿದ್ದಾಗಿತ್ತು. ಕಳೆದೆರಡು ತಿಂಗಳುಗಳಿಂದ ಈ ಮನೆಯಲ್ಲಿ ನಾನು ಬರೀ ಸೌಟು, ಕಸಬರಿಕೆ ಎರಡೇ ಆಗಿದ್ದೇನೆ, ಎಂದರೆ ನಂಬುತ್ತಿರಾ?…ನಿಜವಾಗಿ ಹೇಳ್ತೀನಿ, ನಾನು ಸರಿಯಾಗಿ ಕನ್ನಡಿ ನೋಡಿಕೊಂಡು ತಿಂಗಳಾನುಗಟ್ಟಳೆಯೇ ಆಗಿಹೋಗಿವೆ . ಸ್ನಾನ ಆದ ಮೇಲೆ ನೇರವಾಗಿ ನನ್ನ ಕೈಗಳು ನೈಟಿಗಳಿಗೇ ಹೋಗುವುದು. ಸೀರೆ ಉಡುವುದು ಪ್ರಯಾಸ..ಅಷ್ಟಕ್ಕೂ ಮನೆಯಲ್ಲಿ ನನ್ನ ಯಾರು ನೋಡಬೇಕು, ಆಕ್ಷೇಪಣೆ ಮಾಡೋರು ತಾನೇ ಯಾರು..ಇಷ್ಟೂ ದಿನಗಳೂ ನೈಟಿಗಳೇ ನನ್ನ ಮೈಯನ್ನು ಕವಚಗಳಂತೆ ಅಂಟಿಕೊಂಡು ಬಿಟ್ಟಿವೆ. ದಿನಾ ಮುಂದೆಲೆ ತಿದ್ದಿಕೊಳ್ಳುವುದು ಬಿಟ್ಟರೆ ಹೆರಳು ಹಾಕಿಕೊಳ್ಳಲು ಬೇಜಾರು. ಮನೆಗ್ಯಾರು ಬರಲ್ಲ ಅನ್ನೋ ಧೈರ್ಯದ ಮೇಲೆ ಹಣೆಗಿಲ್ಲ, ಕುತ್ತಿಗೆಗಿಲ್ಲ…ಕೈ ಕೂಡ ಬಳೆಗಳ ಗೊಡವೆ ಕಳಚಿ, ಎಲ್ಲ ಖಾಲಿ ಖಾಲಿ.ಏನೋ ಒಂಥರಾ ಹಗುರ…ಪೌಡರ್ರು, ಕಣ್ಣು ಕಪ್ಪು, ಬಿಂದಿಗಳು ಯಾವ ಮೂಲೆ ಸೇರಿವೆಯೋ…ರಾಶಿ ರಾಶಿ ಸೀರೆಗಳು, ಹರಳಿನ ಬ್ರೋಚು, ಬಳೆ-ಸರಗಳು ಬೀರುವಿನಲ್ಲಿ ತಮ್ಮ ಅಸ್ತಿತ್ವ ಮರೆತು ತೆಪ್ಪಗೆ ಬಿದ್ದುಕೊಂಡಿವೆ.
ಓ… ನನ್ನ ಅವತಾರ ನೋಡಿದ್ರೆ ನನಗೇ ಭಯ ತರಿಸತ್ತೆ. ಅಂದರೆ ಗಂಡ-ಮಗನಿಗೆ ಹೇಗೋ…ದೇವರೇ ಗತಿ….ನನ್ನ ಫ್ಯಾನ್ಸಿ ಡ್ರೆಸ್, ಪೇಟಿಕೋಟ್ ಮೇಲೆ ಕಮೀಜೋ ಅಥವಾ ನಿಲುವಂಗಿ ತಗುಲಿಹಾಕಿಕೊಳ್ಳೋ ಬೆದರುವೇಷ ಕಂಡು ನಮ್ಮವರಿಗೆ ಒಳಗೇ ಮುಜುಗರ. ನಾವು ಮಾವಳ್ಳಿಯಲ್ಲಿದ್ದಾಗ ಹೀಗೇ ಹೆಂಗಸರು ನಲ್ಲಿ ಹತ್ರ ನೀರಿಗೆ ನಿಂತಿರೋರು…ಇದು ಯೂನಿವರ್ಸಲ್ ಯೂನಿಫಾರಂ ಆಗೋಗಿದೆ ಅಂತ ಮುಖ ಹುಳ್ಳಗೆ ಮಾಡ್ತಾರೆ…ಲಕ್ಷಣವಾಗಿ ಸೀರೆ ಉಡಬಾರ್ದಾ ಎನ್ನೋ ಅವರ ಅಂಬೋಣಕ್ಕೆ ನಾನು, ‘ಯಾಕೋ ಸ್ಫೋರ್ತೀನೆ ಇಲ್ಲಾರಿ’ ಅಂತ ಅವರ ಬಾಯಿ ಬಡಿದುಬಿಡ್ತೀನಿ…ಆದರೆ ಅವರು ಮಾತ್ರ, ಪ್ರತಿದಿನ ಮೊದಲಿನಂತೆಯೇ ದಿನಾ ನೀಟಾಗಿ ಶೇವು, ಸ್ನಾನ, ವ್ಯಾಯಾಮ, ಇಸ್ತ್ರೀ ಷರಟು, ದಿರಿಸು ಎಲ್ಲವೂ ಶಿಸ್ತುಬದ್ಧ…

ಈ ಕೊರೋನಾ ಎಂಬ ‘ಅತಿಥಿ’ ಪಿಡುಗು (ಎಂದಿದ್ರೂ ಹೊರಗೆ ತೊಲಗಲೇಬೇಕಲ್ಲ) ಅಯಾಚಿತವಾಗಿ ವಕ್ರಿಸಿದ ಹೊಸದರಲ್ಲಿ ಎಲ್ಲವೂ ಹೊಸ ಹೊಸ ಥರ ಅನುಭವ …ಯದ್ವಾತದ್ವಾ ಬದಲಾವಣೆ… ಹೊರೆಗೆಲಸದಲ್ಲೂ ಒಂದು ನಮೂನೆ ಉತ್ಸಾಹ… ಮಗ ಚಿನ್ನದಂಥವನು ಮುಂಚೆ. ಸ್ವಿಗ್ಗಿ, ಜೊಮ್ಯಾಟೋ, ಡೋನ್ಜೋ ಅಂಬೋ ಆಶು ಸೂಪರ್ಮ್ಯಾನಗಳಿಂದ ಬಗೆ ಬಗೆಯ ಖಾದ್ಯಗಳನ್ನು ತರಿಸಿಕೊಳ್ಳುತ್ತಿದ್ದ ಭೂಪ, ನನಗೆಂದೂ ತೊಂದರೆ ಕೊಡದವನು, ನನ್ನ ಊಟ-ತಿಂಡಿಯನ್ನು ನಿರೀಕ್ಷಿಸದವನು, ಭಾನುವಾರಗಳಂದು ಮತ್ತು ನಾನು ಮನೆಯಲ್ಲಿಲ್ಲದಾಗ ಮನೆಯವರಿಗೆಲ್ಲ ಊಟ-ತಿಂಡಿ ಎಲ್ಲ ವ್ಯವಸ್ಥೆಗಳನ್ನೂ ಸೂಪರ್ರಾಗಿ ಮಾಡುತ್ತಿದ್ದ ನನ್ನ ಫೇವರೆಟ್ ಈ ಸುಪುತ್ರ , ಈಗ ಮನೆಯಿಂದಲೇ ಕೆಲಸ ಮಾಡುವ ಈ ದಿನಗಳಲ್ಲಿ ನನ್ನನ್ನು ಹೈರಾಣು ಮಾಡುತ್ತಿದ್ದಾನೆ ಕಣ್ರೀ !!..ನಿಜವಾಗಿ, ನನ್ನ ನಂಬಿ.. ಲಾಕ್ ಡೌನ್ ಹೊರಗಗಾದರೆ, ಒಳಗೆ ಫುಲ್ಲು ವರ್ಕ್ ಲೋಡು!!..ಬೆಳಗಿನ ನನ್ನ ಸವಿನಿದ್ದೆಗೆ ದೊಡ್ಡ ಕನ್ನ!…. ‘ವರ್ಕ್ ಫ್ರಂ ಹೋಂ’ ಎಂದು ಮನೆಯಿಂದಲೇ ಕೆಲಸ ಮಾಡುವ ನನ್ನ ಈ ಮಗ ಐದುನಿಮಿಷ ಬ್ರೇಕ್ ತೊಗೊಂಡು ಬೆಳಗಿನ ಜಾವ ಆರಕ್ಕೆಲ್ಲ ಮಹಡಿಯಿಂದ ದುಬುದುಬು ಕೆಳಗಿಳಿದು ಬರುತ್ತಾನೆ. ಸೂರ್ಯ ಕಣ್ರೆಪ್ಪೆ ತೆಗೆಯೋದರಲ್ಲೇ ಹಬೆಯಾಡೋ ಸ್ಟ್ರಾಂಗ್ ಕಾಫಿ ಕೈಗಿಡಬೇಕು.. ಅನಂತರ ಅವನಿತ್ತ ಮೆನುವಿನ ಪ್ರಕಾರದ ವರೈಟಿ ತಿಂಡಿಗಳು, ಊಟ ಎಲ್ಲಾ ಟೈಮ್ ಟೈಮಿಗೆ. ಇಪ್ಪತ್ತರ ತರುಣಿಯಂತೆ ನಾನು ಮನೆ ಪೂರಾ ಬಾಲ್ ಡಾನ್ಸ್.!!
ಓ…ಅವನ ಗೊಣಗಾಟ ಕೇಳಿದ್ದೀರಾ… ಏನು ತಿಂಡಿ…ನಿನ್ನ ಓಬಿರಾಯನ ಕಾಲದ ತಿಂಡಿಗಳು ಬೇಡ…ಏನಾದರೂ ಇಂಟರೆಸ್ಟಿಂಗ್ ಅಂಥದ್ದು ಮಾಡು, ಅನ್ನ ಬೇಡ, ದಿನಾ ಚಪಾತಿಯೂ ಬೇಡ, ಪಲ್ಯ ಕೂಡದೇ ಕೂಡದು, ಗ್ರೇವಿ, ಪನ್ನೀರ್, ಚೀಸ್, ಕಾಜು ಕರಿಗಳು, ನಾರ್ತ್ ಇಂಡಿಯನ್ ಡಿಶಸ್, ಪಾಸ್ತಾ, ನೂಡಲ್ಸ್ ಇನ್ನೂ ಏನೇನೋ.. ತುಂಬಾ ಗೋಗರೆದು ಅವನಿಗೆ ಅನ್ನ ತಿನ್ನಿಸಲು ಒಪ್ಪಿಸಿದಾಗ, ಅವನಿಗೆ, ದಿನಾ ಅದರ ಜೊತೆ ನೆಂಚಿಕೊಳ್ಳಲು ಹಪ್ಪಳ -ಸಂಡಿಗೆ ಕರಿಯಬೇಕು, ಅದೂ ಬೋರು, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಶಂಕರಪೋಳಿ, ಬೋಂಡ -ಪಕೋಡ ಅಬ್ಬಬ್ಬಾ…ಎಷ್ಟು ಥರ ಆಗಿಹೋಯ್ತು, ತಿಂಗಳಿಗೆ ಆರೇಳು ಪ್ಯಾಕೆಟ್ ಎಣ್ಣೆ ಢಮಾರ್….ಫೇಸ್ ಬುಕ್ಕಿನ ಗೆಳತಿಯರು, ದಿನಾ ಅಲ್ಲಿ ಪೋಸ್ಟ್ ಹಾಕೋ ತಿಂಡಿಗಳನ್ನೆಲ್ಲಾ ನೋಡಿ ಮಾಡಿ ಹಾಕಿದ್ದೀನಿ ಮಾರಾಯ್ರೇ.. ಪಾಪಾ ಅವನ ನೆಪದಿಂದ ನಾವೂ ತಿಂದಿದ್ದೇವೆ ಅನ್ನಿ. ಇವೆಲ್ಲ ಊಟ ಆದ್ಮೇಲೆ ಉಂಡ ಬಾಯಿಗೆ ಒಗ್ಗರಣೆ ಕುರುಕುಗಳು. ಸಂಜೆ ಟೈಮ್ ಪಾಸ್ ಕರುಂ-ಕುರುಂ ತಿಂಡಿಗಳು ಬೇರೆ. ಜನ್ಮೇಪಿ ಇಷ್ಟು ವೆರೈಟಿಸ್ ಮಾಡಿಲ್ಲಪ್ಪ ನಾನು. ನಮ್ಮವರು ಯು ಟ್ಯೂಬ್ ನಲ್ಲಿ ಇಪ್ಪತ್ತೆಂಟು ಪಾಕ ಪ್ರವೀಣರ ಪ್ರೋಗ್ರಾಮ್ಸ್ ಹಾಕಿ, ನಾನು ಅವುಗಳ ನೋಟ್ಸ್ ಬೇರೆ ತೊಗೊಳೋ ಹಾಗೇ ಪುಸಲಾಯಿಸ್ತಾರೆ. ಹೊಸದರಲ್ಲಿ ಗೋಣಿ ಎತ್ತೆತ್ತಿ ಒಗೆದರಂತೆ ಅನ್ನೋಹಾಗೆ ನನ್ನ ಪತಿರಾಯ, ಪಾಪ ಮಗರಾಯ ಹೇಳಿದ ತಿಂಡಿಗಳನ್ನು ತಯಾರಿಸುವಾಗ ಅರ್ಧ ಕೆಲಸಗಳಿಗೆ ತಮ್ಮ ಕೈಯೂ ಜೋಡಿಸ್ತಾರೆ. ಅವರೇ ತಿಂಡಿ ಮಾಡ್ತೀನಿ ಅಂತ ಅಡುಗೆ ಕಟ್ಟೆ ತುಂಬಾ ಪದಾರ್ಥ, ಹಿಟ್ಟುಗಳನ್ನು, ಎಣ್ಣೆಯನ್ನು ಚೆಲ್ಲಾಡಿ ಗಬ್ಬು ಎಬ್ಬಿಸಿರುತ್ತಾರೆ. ಜೊತೆಗೆ ಹೆಜ್ಜೆ ಹೆಜ್ಜೆಗೂ ನನ್ನ ಕೂಗುತ್ತ, ಅದೆಲ್ಲಿದೆ, ಇದು ಎಲ್ಲಿದೆ ಅಂತ ಪ್ರಾಣ ಹಿಂಡುವ ಅವರ ಪ್ರಯೋಗಗಳಿಗೆ ಬಲಿಪಶು ಆಗೋ ಬದಲು ‘ನಾನೇ ಎಲ್ಲ ಮಾಡ್ತೀನಿ ಅಡುಗೆಮನೆಯಿಂದ ಈಚೆ ಬನ್ರೀ’- ಎಂದರೆ,

‘ಹೌದ್ಹೌದು ನಾನು ಚೆನ್ನಾಗಿ ಮಾಡ್ತೀನಿ ಅಂತ ನಿಂಗೆ ಹೊಟ್ಟೆಕಿಚ್ಚು’ ಅಂತ ದೂರೋದು ಬೇರೆ. ಇಷ್ಟಾದರೂ, ಪಾಪ, ಗಂಡ-ಮಗನ್ನ ಪೂರ್ತಿ ಕೆಟ್ಟವರು ಅಂತಾನೂ ಹೇಳಕ್ಕಾಗಲ್ಲ ಅನ್ನಿ…ನಾನೇ ಬಲು ನಚ್ಚು ಸ್ವಭಾವದೋಳು ಅಂದ್ಕೋತೀನಿ…ಅವರು ಅಡುಗೆಮನೆಗೆ ಬಂದರೆ ಎದೆ ಹೊಡ್ಕೊಳತ್ತೆ, ಏನು ಹಾವಳಿ ಮಾಡ್ತಾರೋ ಅಂತ…ಆಮೇಲೆ ಎಲ್ಲ ಒಪ್ಪ ಮಾಡೋರು ಯಾರ್ಹೇಳಿ…ಅಡುಗೆಮನೆ ನನ್ನ ಸಾಮ್ರಾಜ್ಯ..ಯಾರು ಅದನ್ನು ಆಳಲು ಬಂದ್ರೂ, ಅತಿಕ್ರಮಿಸಿದರೂ ಸಹಿಸಲಾರೆ…ನಿನ್ನ ಹಣೇಬರ ನೀನೇ ಒದ್ದಾಡು ಅಂತ ಪಾಕಶಾಲೆಯಿಂದ ಗಂಡನ ನಿರ್ಗಮನ ಕೂಡ ಒಂಥರಾ ನೆಮ್ಮದಿ ತರತ್ತೆ. ಇಂಥ ನಾನು ವಿಚಿತ್ರ ಪ್ರಾಣೀನೋ, ಸಹಜ ಬುದ್ಧಿಯ ಸಾಮಾನ್ಯ ಹೆಂಗಸೋ?!!..’-ಎಂದು ದ್ವಂದ್ವದಿಂದ ಒದ್ದಾಡುತ್ತಾಳೆ .
-ಎಂಬಲ್ಲಿಗೆ ಸಂಸಾರವೆಂಬ ಗಿರಿಧಾರಿಣಿ ಕಮ್ಲೂ ಎಂಬ ಸದ್ಗೃಹಿಣಿಯ ವೃತ್ತಾಂತಂ ಸಂಪೂರ್ಣಂ.
********************
3 comments
Nice presentation
Thank you very much Sir.
Thank you very much Dr. Sanjeev Reddy sir.