ಈ ಸಾಲಿನ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಪ್ರತಿಷ್ಠಿತ ”ಕರ್ನಾಟಕ ಕಲಾಶ್ರೀ’’ ಪ್ರಶಸ್ತಿಯನ್ನು ಪಡೆದ ವಿದುಷಿ ವಿದ್ಯಾ ರವಿಶಂಕರ್ ಅವರ ನೃತ್ಯ ಸಾಧನೆಯ ಪಯಣ ನಿಜಕ್ಕೂ ರೋಚಕ. ಅವರ ಜೀವನದ ಪ್ರತಿಯೊಂದು ಘಟ್ಟಗಳೂ ವಿಶಿಷ್ಟ.
ಕೆಲವೊಮ್ಮೆ ಗುರುಗಳ ಹೆಸರಿನ ಬಲದ ಮೇಲೆ ಶಿಷ್ಯರ ಯೋಗ್ಯತೆ-ಪ್ರತಿಭೆಯನ್ನು ಅಳೆಯುವ ಪರಿಪಾಠವಿದೆ. ಅದರಂತೆ ಮೈಸೂರು ಶೈಲಿಯ ಭರತನಾಟ್ಯ ಅಭ್ಯಾಸ ಮಾಡಿರುವ ವಿದುಷಿ. ವಿದ್ಯಾ ರವಿಶಂಕರ್ ತುಂಬ ಅದೃಷ್ಟವಂತೆ. ಕರ್ನಾಟಕದ ಹಿರಿಯ ಗುರು, ಮೈಸೂರು ಆಸ್ಥಾನ ವಿದುಷಿ ಪದ್ಮಭೂಷಣ ಡಾ. ವೆಂಕಟಲಕ್ಷಮ್ಮ ಅವರ ನೇರ ಹಾಗೂ ಕಡೆಯ ಪ್ರಧಾನ ಶಿಷ್ಯಳಾಗಿ ಸುಮಾರು ಹತ್ತುವರ್ಷಗಳ ಕಾಲ ಹಿಂದಿನ ಗುರುಕುಲದಂತೆ ಅವರ ಸೇವೆ ಮಾಡಿಕೊಂಡು ವಿದ್ಯಾರ್ಜಿಸಿ, ಹಿರಿಯ ನೃತ್ಯಕಲಾವಿದೆ ಮತ್ತು ನುರಿತ ನಾಟ್ಯಗುರುವೆನಿಸಿಕೊಂಡಿರುವುದು ವಿದ್ಯಾರ ಅಗ್ಗಳಿಕೆ.
ಮೂಲತಃ ವಿದ್ಯಾ, ಶ್ರೀರಂಗಪಟ್ಟಣದವರು. ತಾತ ಬಸರಾಳು ಶ್ರೀಕಂಠಯ್ಯ ಸಾಹಿತಿ. ತಂದೆ ಕೃಷಿಕ ಶ್ರೇಷ್ಠ ಪ್ರಶಸ್ತಿ ಪಡೆದ ಬಿ.ಎಸ್. ಅನಂತರಾಮಯ್ಯ ಮತ್ತು ತಾಯಿ ಕಮಲಮ್ಮ ಬಾಲ್ಯದಿಂದಲೂ ಮಗಳ ಮನದಲ್ಲಿ ಕಲೆಯ ಬಗ್ಗೆ ಆಸಕ್ತಿ ಬಿತ್ತಿದವರು. ಚಿಕ್ಕವಯಸ್ಸಿನಲ್ಲಿ ವಿದ್ಯಾ, ವೀಣೆ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಎರಡನ್ನೂ ಆಸಕ್ತಿಯಿಂದ ಕಲಿತರು. ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತ ಬಂದವಳಿಗೆ ಗೆಳತಿಯರೊಡನೆ ನೃತ್ಯ ಮಾಡುವುದೂ ಅಭ್ಯಾಸವಾಗಿ ಹೋಗಿತ್ತು. ಸುಪ್ತವಾಗಿದ್ದ ನೃತ್ಯದೊಲವು, ಪಿ.ಯೂ.ಸಿ ಓದಲು ಮೈಸೂರಿಗೆ ಬಂದನಂತರ ಆಕಾಂಕ್ಷೆಯಾಗಿ ಬೆಳೆದು, ಸುಮಾರು ಹದಿನಾರರ ವಯಸ್ಸಿನಲ್ಲಿ ವಿದುಷಿ ಮೀನಾಕ್ಷಿ ಹಾಗೂ ನಾಟ್ಯಾಚಾರ್ಯ ವಿಷ್ಣುದಾಸ ಅವರಲ್ಲಿ ಪ್ರಾರಂಭಿಕ ನೃತ್ಯಾಭ್ಯಾಸವಾಯಿತು. ಕರ್ನಾಟಕ ಸರ್ಕಾರದ ಜ್ಯೂನಿಯರ್ ನೃತ್ಯಪರೀಕ್ಷೆಯ ನಂತರ ವಿದ್ಯಾ, ಡಾ. ವೆಂಕಟಲಕ್ಷಮ್ಮನವರ ಸಮರ್ಥ ಗರಡಿಯಡಿ ಬಂದು ಶುದ್ಧ ‘ಮೈಸೂರು ಶೈಲಿ’ಯ ಸೊಗಡಿನ ಭರತನಾಟ್ಯ ತರಬೇತಿ ಪಡೆದರು. ಸುಮಾರು ಹತ್ತು ವರ್ಷಗಳು ಸತತ ಪರಿಶ್ರಮದ ವಿದ್ಯಾರ್ಜನೆ, ಅನಂತರ ವೆಂಕಟಲಕ್ಷಮ್ಮನವರ ಮೊಮ್ಮಗಳು ಪ್ರೊ. ಶಕುಂತಲಾ ಅವರಲ್ಲಿ ಕಲಿಕೆ ಮುಂದುವರಿಕೆ. ಕರ್ನಾಟಕ ಸರ್ಕಾರದ ‘ವಿದ್ವತ್’ ನೃತ್ಯಪರೀಕ್ಷೆಯಲ್ಲಿ ಅತ್ಯುಚ್ಚ ಅಂಕಗಳಿಂದ ಜಯಶೀಲರಾಗಿ ಅಂಗಶುದ್ಧಿಯ ನರ್ತನ, ಅಭಿನಯ ಪರಿಣತಿಯ ಅನೇಕ ಏಕವ್ಯಕ್ತಿ ನೃತ್ಯಪ್ರದರ್ಶನಗಳಿಂದ ಗಮನಾರ್ಹರಾದರು.
ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಗುರುಗಳ ಸಾನಿಧ್ಯದಲ್ಲಿ ವಿದ್ಯಾರ ‘ರಂಗಪ್ರವೇಶ’ ನಡೆದುದೊಂದು ವಿಶೇಷ. ಹೀಗೆ ಕಳೆದ ಮೂವತ್ತೈದು ವರ್ಷಗಳಿಂದ ನಾಟ್ಯರಂಗದಲ್ಲಿ ಹೆಸರಾಂತ ಗುರುವಾಗಿ, ನೃತ್ಯ ಕಲಾವಿದೆ-ಸಂಯೋಜಕಿಯಾಗಿ ಮೈಸೂರುಶೈಲಿಯ ಭರತನಾಟ್ಯವನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ಹೆಮ್ಮೆ ಇವರಿಗಿದೆ. ದೀರ್ಘಾನುಭವ ಸಹಜವಾಗಿ ನೃತ್ಯಪರಿಪಾಕದಲ್ಲಿ ಪಕ್ವತೆ, ಪ್ರೌಢಿಮೆಗಳ ಸಾಧಕತೆಗೆ ಪೂರಕವಾಗಿದೆ. ವೆಂಕಟಲಕ್ಷಮ್ಮನವರ ಗುರುಗಳಾಗಿದ್ದ, ಮೈಸೂರು ಶೈಲಿ ಭರತನಾಟ್ಯ ಪರಂಪರೆಯ ಆದ್ಯ ಪ್ರವರ್ತಕಿಯಾದ ನಾಟ್ಯ ಸರಸ್ವತಿ ‘ಜಟ್ಟಿ ತಾಯಮ್ಮ’ನವರ ಸ್ಮರಣಾರ್ಥವಾಗಿ ಶ್ರ್ರೀರಂಗಪಟ್ಟಣದಲ್ಲಿ ಮೂವತ್ತು ವರುಷಗಳ ಹಿಂದೆಯೇ ‘ಶ್ರೀ ಮಾತೃಕಾ ನೃತ್ಯಶಾಲೆ’ ಸ್ಥಾಪಿಸಿ ನೂರಾರು ಮಕ್ಕಳಿಗೆ ನಾಟ್ಯಶಿಕ್ಷಣ ನೀಡುತ್ತಿದ್ದು, ಬೆಂಗಳೂರಿನಲ್ಲೂ ಶಾಲೆ ನಡೆಸುತ್ತಿದ್ದಾರೆ ವಿದ್ಯಾ. ಅಂಧ ಮಕ್ಕಳಿಗೆ, ಆರ್ಥಿಕ ದುರ್ಬಲ ನೃತ್ಯಾಕಾಂಕ್ಷಿಗಳಿಗೆ ವಿದ್ಯಾ, ಆದ್ಯತೆಯ ಮೇಲೆ ನೃತ್ಯ ಕಲಿಸುತ್ತಾರೆ. ಟ್ರಸ್ಟ್ ವತಿಯಿಂದ ನೇತ್ರದಾನ ಅಭಿಯಾನ, ಆರೋಗ್ಯ ತಪಾಸಣೆ,ಹಸಿರು ಸಂರಕ್ಷಣೆ, ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವುದು ಶ್ಲಾಘನೀಯ.
ವಿದ್ಯಾಭ್ಯಾಸದಲ್ಲೂ ಮುಂದಿದ್ದ ವಿದ್ಯಾ, ಮೈಸೂರು ವಿಶ್ವವಿದ್ಯಾನಿಲಯದಿಂದ ಬಿಕಾಂ, ಎಲ್.ಎಲ್.ಬಿ.ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿಗಳನ್ನು ಗಳಿಸಿದ್ದಾರೆ.
ದೇಶಾದ್ಯಂತ ತಮ್ಮ ಶಿಷ್ಯತಂಡದೊಂದಿಗೆ ಅನೇಕ ನೃತ್ಯಪ್ರದರ್ಶನಗಳನ್ನು ನೀಡಿ , ದಸರಾ, ಹೊಯ್ಸಳ ಸಾಮ್ರಾಜ್ಯೋತ್ಸವ, ಕದಂಬೋತ್ಸವ, ಹಂಪಿ, ಮಹಾ ಮಸ್ತಕಾಭಿಷೇಕ, ಪಂಚಲಿಂಗದರ್ಶನ, ಅದಮ್ಯ ಚೇತನ ಮುಂತಾದ ಅನೇಕ ಪ್ರತಿಷ್ಠಿತ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡ ಹೆಮ್ಮೆ ಅವರದು. ಜೊತೆಗೆ ಶ್ರೀ ರಮಣ ಮಹರ್ಷಿ ಅಕಾಡೆಮಿ ಆಫ್ ಬ್ಲೈಂಡ್ ಸಂಸ್ಥೆಯ ಅಂಧಮಕ್ಕಳಿಗೆ ನಾಟ್ಯಶಿಕ್ಷಣ ನೀಡಿ, ಸಾವಿರದ ಇನ್ನೂರು ಹಿರಿ-ಕಿರಿಯ ಕಲಾವಿದರನ್ನು ಒಳಗೊಂಡ ಕೂಚಿಪುಡಿ ನೃತ್ಯದ ‘ತರಂಗಂ ’ ನೃತ್ಯ ಪ್ರದರ್ಶನವನ್ನು ಸಂಯೋಜಿಸಿ ‘ಗಿನ್ನಿಸ್ ವರ್ಲ್ಡ್ ರೆಕಾರ್ಡ್’ ದಾಖಲೆ ಮಾಡಿರುವುದು ಅಗ್ಗಳಿಕೆಯೇ ಸರಿ.
ಸದಾ ಹೊಸಪ್ರಯೋಗ-ಪರಿಕಲ್ಪನೆಗಳಿಗಾಗಿ ತುಡಿಯವ ವಿದ್ಯಾ ಅವರ ಪ್ರಸಿದ್ಧ ನೃತ್ಯರೂಪಕಗಳೆಂದರೆ, ಕನ್ನಡ ಕವಿಗಳು ಕಂಡ ಗೋಮಟೇಶ್ವರ, ಪಂಪನ ಪೆಂಪು, ಸೀತಾ ಪರಿಣಯಂ, ದಶಾವತಾರ, ಭಸ್ಮಮೋಹಿನಿ, ಸಮನ್ವಯ,(ಭರತನಾಟ್ಯ ಮತ್ತು ಕಲರಿಪಯಟು ಸಮರಕಲೆಯ ಸಂಯೋಜನೆ) ಕನ್ನಡನುಡಿ ಗೆಜ್ಜೆ, ಜನಪದ ನೃತ್ಯ ಸೊಗಡು, ನವದುರ್ಗೆ ಮುಂತಾದ ಒಟ್ಟು ಇಪ್ಪತ್ತಕ್ಕೂ ಹೆಚ್ಚು ನೃತ್ಯರೂಪಕಗಳನ್ನು ಸಂಯೋಜಿಸಿ, ಪ್ರಸ್ತುತಿಪಡಿಸಿರುವರಲ್ಲದೆ, ದೂರದರ್ಶನದಲ್ಲೂ ಅನೇಕ ನೃತ್ಯರೂಪಕಗಳನ್ನು ಪ್ರದರ್ಶಿಸಿದ ಖ್ಯಾತಿ. ಜೊತೆಗೆ ಅನೇಕ ಸಂವಾದ ಮತ್ತು ಚರ್ಚೆಗಳಲ್ಲಿ ಭಾಗವಹಿಸಿದ, ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ, ಸ್ಪರ್ಧೆಗಳಿಗೆ ತೀರ್ಪುಗಾರರಾದ ವಿಪುಲಾನುಭವ. ಅನೇಕ ನೃತ್ಯಸಂಸ್ಥೆಗಳಿಗೆ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿರುವ ವಿದ್ಯಾ ಅವರ ಪ್ರತಿಭೆಯನ್ನು ಗುರುತಿಸಿ ಅನೇಕ ಪ್ರತಿಷ್ಟಿತ ಪ್ರಶಸ್ತಿಗಳು ಅವರನ್ನು ಹಿಂಬಾಲಿಸಿವೆ.
ಮಂಡ್ಯ ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆಯ ‘’ಕೆಂಪೇಗೌಡ’’ ಪ್ರಶಸ್ತಿ, ಬಸವನಗುಡಿ ರತ್ನ ಪ್ರಶಸ್ತಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ‘’ಕಿತ್ತೂರು ಚೆನ್ನಮ್ಮ’’ ಪ್ರಶಸ್ತಿ, ಆರ್ಯಭಟ ಅಂತರರಾಷ್ಟ್ರೀಯ ಸಾಂಸ್ಕೃತಿಕ ಪ್ರಶಸ್ತಿಗಳು ಲಭಿಸಿವೆ. ಇದೀಗ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿ ” ಕರ್ನಾಟಕ ಕಲಾಶ್ರೀ” ಪ್ರಶಸ್ತಿ ಅವರ ಕೀರ್ತಿ ಮುಕುಟಕ್ಕೇರಿದೆ. ವಿದ್ಯಾ ಅವರ ಎಲ್ಲ ನೃತ್ಯ ಚಟುವಟಿಕೆಗಳಿಗೆ ತುಂಬು ಪ್ರೋತ್ಸಾಹ ನೀಡುತ್ತಿರುವ ಅವರ ಪತಿ ರವಿಶಂಕರ್ ಅಭಿನಂದನೀಯರು.
*********************************
4 comments
ಒಳ್ಳೆಯ ಲೇಖನ. ನೃತ್ಯವು ಬ್ರಹ್ಮನನ್ನೂ ಮೆಚ್ಚಿಸುವುದು. ದೈವಕಲೆ. ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುವೆ.
ನಿಮ್ಮ ವಿಶ್ವಾಸಪೂರ್ವಕ ಆಶೀರ್ವಚನ- ಹಾರೈಕೆಗೆ ಕೃತಜ್ಞತೆಗಳು.
ಅನಂತ ಕೃತಜ್ಞತೆಗಳು. ನಿಮ್ಮ ಹಾರೈಕೆಯ ನುಡಿ ನನ್ನ ಸಾಹಿತ್ಯರಚನೆಗೆ ಸ್ಫೂರ್ತಿ. ನನ್ನ utube ಚಾನಲ್ ನಲ್ಲಿರುವ ಕೃತಿಗಳನ್ನು ನೋಡಿ-ಕೇಳಿ ಲೈಕ್, ಶೇರ್ ಮತ್ತು ಸಬ್ಸ್ಕ್ರೈಬ್ ಮಾಡಿ ಎಂದು ಕೋರುತ್ತೇನೆ.
ಅನೇಕ ವಂದನೆಗಳು ಸರ್.