‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬ ಗಾದೆಗೆ ಅನುಗುಣವಾಗಿ ಹದಿಹರೆಯದ ಈ ಪ್ರತಿಭಾನ್ವಿತ ಭರತನಾಟ್ಯ ಕಲಾವಿದೆ ಬೆಂಗಳೂರಿನ ಟಿ.ಎಂ. ಮೇಘನಾ ಬಾಲಪ್ರತಿಭೆ. ಬಹು ಚಿಕ್ಕ ವಯಸ್ಸಿನಿಂದಲೇ ವರ್ಷವಿಡೀ ಒಂದಲ್ಲ ಒಂದೆಡೆ ನೂರಾರು ನೃತ್ಯ ಪ್ರದರ್ಶನಗಳನ್ನು ನೀಡುತ್ತಲೇ ಬಂದಿರುವುದು ಇವಳ ವಿಶೇಷತೆ. ಕಳೆದೊಂದು ದಶಕದಿಂದ ಭರತನಾಟ್ಯದಲ್ಲಿ ಉತ್ತಮ ಶಿಕ್ಷಣ ಪಡೆಯುತ್ತ, ಇತ್ತೀಚೆಗೆ ತಾನೇ ಬಹು ಯಶಸ್ವಿಯಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಂಡು ಕಲಾರಸಿಕರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದಳು.
ರಂಗದ ಮೇಲೆ ನಿರಾಯಾಸವಾಗಿ ಎರಡು ಗಂಟೆಗಳ ಕಾಲ ಲವಲವಿಕೆಯಿಂದ ನರ್ತಿಸಿದ ಮೇಘನಾ, ತಾನೊಬ್ಬ ಭರವಸೆಯ ಕಲಾವಿದೆ ಎಂಬುದನ್ನು ಸಾಬೀತುಪಡಿಸಿದಳು. ಅಂಗಶುದ್ಧಿಯ ಅವಳ ಸುಮನೋಹರ ನೃತ್ಯ ಪ್ರೇಕ್ಷಕರ ಕಣ್ತುಂಬಿತು. ವಿವಿಧ ಯೋಗಭಂಗಿಗಳಲ್ಲಿ ಚೇತೋಹಾರಿ ನೃತ್ಯ ಪ್ರದರ್ಶನ ನೀಡಿದ ಈ ನೃತ್ಯಕಲಾವಿದೆ ಮೇಘನಾ, ಶ್ರೀ ಲಲಿತಾ ಕಲಾನಿಕೇತನದ ನಾಟ್ಯಗುರು ವಿದುಷಿ. ರೇಖಾ ಜಗದೀಶ್ ಅವರ ಗರಡಿಯಲ್ಲಿ ರೂಹುಗೊಂಡವಳು. ತನ್ನ ಏಳರ ಬಾಲ್ಯದಲ್ಲೇ ನೃತ್ಯ ಕಲಿಯಲು ಪ್ರಾರಂಭಿಸಿದ ಇವಳು, ಬೆಂಗಳೂರಿನವರಾದ ಟಿ. ಮಯೂರ್ ಮತ್ತು ವಿ.ಎನ್. ವಾಣಿ ದಂಪತಿಗಳ ಪುತ್ರಿ. ಹೆತ್ತವರ ತುಂಬು ಪ್ರೋತ್ಸಾಹ-ಸಹಕಾರಗಳಿಂದ, ನಾಟ್ಯಾಭ್ಯಾಸವನ್ನು ಮೇಘನಾ, ತುಂಬು ಆಸಕ್ತಿ, ಪರಿಶ್ರಮ-ಬದ್ಧತೆಗಳಿಂದ ನಡೆಸಿಕೊಂಡು ಬರುತ್ತಿದ್ದಾಳೆ. ನೃತ್ಯದ ಬಗ್ಗೆ ಅಮಿತವಾದ ಒಲವುಳ್ಳ ಇವಳು, ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ಉತ್ತಮಾಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾಳೆ. ಜೊತೆಗೆ, ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ನಡೆಸುವ ಪ್ರಾಥಮಿಕ, ಪ್ರವೇಶಿಕಾ ಪ್ರಥಮ, ಪ್ರವೇಶಿಕಾ ಪೂರ್ಣ, ಮಧ್ಯಮ ಪ್ರಥಮ ಮತ್ತು ಮಧ್ಯಮ ಪೂರ್ಣ ಪರೀಕ್ಷೆಗಳನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದ ವಿಶೇಷತೆ ಇವಳದು. ಮುಂದಿನ ಹಂತ- ವಿಶಾರದಾ ಪ್ರಥಮಕ್ಕೆ ತಯಾರಾಗುತ್ತಿರುವುದು ಅವಳ ನೃತ್ಯಾಭ್ಯಾಸದ ಆಸಕ್ತಿಗೆ ದ್ಯೋತಕ.
ಕಳೆದ ಹತ್ತುವರ್ಷಗಳಿಂದ ನೃತ್ಯಶಿಕ್ಷಣ ಪಡೆಯುತ್ತಿರುವ ಜೊತೆಗೆ ಮೇಘನಾ, ಸಂಗೀತವನ್ನೂ ಕಲಿಯುತ್ತ, ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಜ್ಯ ಪರೀಕ್ಷೆಯಲ್ಲಿ ಜ್ಯೂನಿಯರ್ ಗ್ರೇಡ್ ನಲ್ಲಿ ವಿಜೇತಳಾಗಿದ್ದಾಳೆ. ಜೊತೆಗೆ, ಕುಚಿಪುಡಿ ನೃತ್ಯಗುರು ಡಾ. ವೀಣಾ ಮೂರ್ತಿ ವಿಜಯ್ ಅವರಲ್ಲಿ ‘ಕುಚಿಪುಡಿ’ ನೃತ್ಯ ಪ್ರಕಾರದಲ್ಲೂ ಶಿಕ್ಷಣ ಪಡೆಯುತ್ತಿರುವ ಈ ಬಹುಮುಖ ಪ್ರತಿಭೆ, ಅನೇಕ ಕೂಚಿಪುಡಿ ನೃತ್ಯ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾಳೆ. .
ನೃತ್ಯದಷ್ಟೇ ವಿದ್ಯಾಭ್ಯಾಸದಲ್ಲೂ ಮುನ್ನಡೆ ಸಾಧಿಸುತ್ತಿರುವ ಮೇಘನಾ, ತನ್ನ ಪ್ರಾಥಮಿಕ ಶಿಕ್ಷಣವನ್ನು ‘ಶ್ರೀ ವಾಣಿ ಎಜುಕೇಷನ್ ಸೆಂಟರ್’ನಲ್ಲಿ ಮುಗಿಸಿದ್ದು, ಪ್ರಸ್ತುತ ನ್ಯಾಷನಲ್ ಕಾಲೇಜಿನಲ್ಲಿ ಎರಡನೆಯ ವರ್ಷದ ಪಿ.ಯೂ.ಸಿ. ಓದುತ್ತಿದ್ದಾಳೆ. ಜಾನಪದ ಮತ್ತು ಪಾಶ್ಚಾತ್ಯ ನೃತ್ಯವನ್ನೂ ಕಲಿತಿರುವ ಇವಳು, ಶಾಲಾ- ಕಾಲೇಜಿನ ಎಲ್ಲ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾಳೆ. ಅಬಾಕಸ್( ಗಣಿತದಲ್ಲಿ ಬೌದ್ಧಿಕ ಶಕ್ತಿ ವೃದ್ಧಿಯ ಪರೀಕ್ಷೆ) ನಲ್ಲಿ ಕೂಡ ತರಬೇತಿ ಹೊಂದಿದ್ದಾಳೆ. ಇವಳು ಉತ್ತಮ ಕ್ರೀಡಾಪಟು ಕೂಡ. ಕರಾಟೆ ಕಲಿತಿರುವ ಜೊತೆಗೆ ಟೈಕ್ವೊಂಡೋ ನಲ್ಲಿ ಬ್ಲೂ ಬೆಲ್ಟ್ ಮತ್ತು ಎನ್.ಸಿ.ಸಿ. ಏರ್ ವಿಂಗ್ ನಲ್ಲಿ ‘’ ಎ’’ ಸರ್ಟಿಫಿಕೇಟ್ ಪಡೆದ ವೈಶಿಷ್ಟ್ಯ ಇವಳದು.
ಅನೇಕ ನೃತ್ಯ ಶಿಬಿರಗಳಲ್ಲಿ ಭಾಗವಹಿಸಿರುವ ಮೇಘನಾ, ಕೊಲ್ಕತ್ತಾದ ಭಂಗ್ಯ ಸಂಗೀತ್ ಪರಿಷದ್ ನಡೆಸುವ ಪಾಶ್ಚಾತ್ಯ ನೃತ್ಯ ಪರೀಕ್ಷೆಯಲ್ಲಿ ಉನ್ನತದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜನೆಯ `ಚಿಗುರು’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭವ.
ನಾಡಿನ ಎಲ್ಲ ಪ್ರಮುಖ ದೇವಾಲಯಗಳಲ್ಲಿ ನೃತ್ಯ ಪ್ರದರ್ಶನ ಮಾಡಿರುವ ಇವಳು, ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲೂ ತನ್ನ ಕಲಾಪ್ರದರ್ಶನ ಮಾಡಿದ್ದಾಳೆ. ದೆಹಲಿ, ಕಾಶಿ, ಮಥುರಾ,ಪುಣೆ, ತಿರುಪತಿ, ಗೋವಾ, ಕಾಂಚೀವರಂ, ತ್ರಿಚಿ, ಈರೋಡ್, ಕೊಯಮತ್ತೂರು, ಮಧುರೈ, ತಿರುವನಂತಪುರ, ಚಿದಂಬರಂ, ವೆಲ್ಲೂರು, ಹೈದರಾಬಾದ್, ಚತ್ತೀಸ್ಗಡ, ಮಂತ್ರಾಲಯ, ಹಾಸನ, ಬೇಲೂರು, ಹೊರನಾಡು, ಧರ್ಮಸ್ಥಳ, ಮೈಸೂರು, ಮೇಲುಕೋಟೆ, ಉಡುಪಿ ಮುಂತಾಗಿ, ದೇಶಾದ್ಯಂತ ಎಲ್ಲೆಡೆ ನೂರಾರು ನೃತ್ಯ ಪ್ರದರ್ಶನಗಳನ್ನು ನೀಡಿರುವುದಲ್ಲದೆ, ಅನೇಕ ಪ್ರತಿಷ್ಠಿತ ನೃತ್ಯೋತ್ಸವಗಳಲ್ಲಿ ಭಾಗಿಯಾಗಿದ್ದಾಳೆ. ನೇಪಾಳ , ಶ್ರೀ ಲಂಕಾ ಮುಂತಾದ ಹೊರದೇಶಗಳಲ್ಲೂ ಅನೇಕ ನೃತ್ಯ ಕಾರ್ಯಕ್ರಮ ನೀಡಿದ ಹಿರಿಮೆ ಇವಳದು.
ಇಷ್ಟು ಕಿರಿಯ ವಯಸ್ಸಿನಲ್ಲಿಯೇ ಮೇಘನಾ, ತನ್ನ ಕಲಾಪ್ರತಿಭೆಗೆ ನೂರಾರು ಪ್ರಶಸ್ತಿ ಗೌರವಗಳನ್ನು ಪಡೆದಿರುವುದು ಅವಳ ಅಗ್ಗಳಿಕೆಯೇ ಸರಿ. ನಾಟ್ಯ ಕುಸುಮಾಂಜಲಿ, ಕರ್ನಾಟಕ ಕಲಾ ರತ್ನ, ಕರುನಾಡ ಪದ್ಮಶ್ರೀ, ಕರ್ನಾಟಕ ಚೇತನ, ನೃತ್ಯ ಕಲಾಸಿರಿ, ಕರ್ನಾಟಕ ಬಾಲ ನಿಧಿ, ನೃತ್ಯ ಮನಜರಿ, ಕಲಾವರ್ಶಿನಿ, ಬೆಳ್ಳಿ ಚುಕ್ಕಿ, ಸ್ಟಾರ್ ಅವಾರ್ಡ್, ಕದಂಬ, ನಾಟ್ಯ ಚೂಡಾಮಣಿ, ಕಲಾ ಚಿನ್ಮಯಿ, ಶ್ರೀ ಗುರು ರಾಘವೇಂದ್ರ ಪುರಸ್ಕಾರ, ಅಬ್ದುಲ ಕಲಾಮ್ ಪ್ರಶಸ್ತಿ, ಡಾ. ರಾಜಕುಮಾರ್ ಸದ್ಭಾವನಾ ಪ್ರಶಸ್ತಿ ಮುಂತಾದ ಅಸಂಖ್ಯಾತ ಪುರಸ್ಕಾರಗಳಿಗೆ ಮೇಘನಾ ಭಾಜನಳಾಗಿರುವುದು ನಿಜಕ್ಕೂ ಅತಿಶಯ.
ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್, ಗ್ರೀನ್ ಇನ್ನೊವೇಟರ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮುಂತಾದ ಅನೇಕ ದಾಖಲೆಗೆ ಸೇರಿದ ಹೆಮ್ಮೆ ಇವಳದು.
******