ಮೈಸೂರಿನ ಸುಂದರ ಜಗನ್ಮೋಹನ ಅರಮನೆಯ ವೇದಿಕೆಯ ಮೇಲೆ ಅಂದು ಪ್ರಭುದ್ಧಾಭಿನಯದಿಂದ ನರ್ತಿಸುತ್ತಿದ್ದ ಅಮೇರಿಕಾದ ಕ್ಯಾಲಿಫೋರ್ನಿಯಾದ ಚೈತ್ರ ಸತ್ಯನಾರಾಯಣ ಅವರಿಗೆ ‘ರಂಗಪ್ರವೇಶ’ದ ಸಂಭ್ರಮ. ಅಲ್ಲಿನ ‘ವಿದ್ಯಾ ಡಾನ್ಸ್ ಅಕಾಡೆಮಿ’ಯ ಖ್ಯಾತ ನೃತ್ಯಗುರು ವಿದ್ಯಾಲತಾ ಜೀರಗೆ ಅವರ ಸಮರ್ಥ ಗರಡಿಯಲ್ಲಿ ರೂಪುಗೊಂಡ ಚೈತ್ರ ಅಂದು ಪ್ರಸ್ತುತಪಡಿಸಿದ ಕೃತಿಗಳೆಲ್ಲ ಕಲಾರಸಿಕರ ಮನಸೂರೆಗೊಂಡವು. ಅವಳ ದ್ರವೀಕೃತ ಚಲನೆಗಳ ಚೇತೋಹಾರಿ ಸುಂದರ ನೃತ್ಯ ಎಲ್ಲರ ಗಮನ ಸೆಳೆದಿತ್ತು.
ಕಡಲಾಚೆಯ ಪ್ರತಿಭೆಯಾಗಿ ಮಿಂಚುತ್ತಿರುವ ಚೈತ್ರಾ ಸತ್ಯನಾರಾಯಣ, ಕಳೆದೆರಡು ದಶಕಗಳಿಂದ ನಿಷ್ಠೆಯಿಂದ ನೃತ್ಯ ಸಾಧನೆಯಲ್ಲಿ ತೊಡಗಿಕೊಂಡವರು. ಮೈಸೂರಿನ ಬಿ.ಸತ್ಯನಾರಾಯಣ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರಿ ಚೈತ್ರ ಬಾಲ್ಯದಿಂದಲೂ ನೃತ್ಯಾಸಕ್ತಳು. ತಪ್ಪುಹೆಜ್ಜೆಗಳಲ್ಲೇ ಮಗಳ ನೃತ್ಯದ ಒಲವನ್ನು ಗುರುತಿಸಿದ ಅವಳ ಹೆತ್ತವರು, ಭರತನಾಟ್ಯ ಕಲಿಯಲು ಪ್ರೀತಿ ವೆಂಕಟರಾಮು ಮತ್ತು ವಿದ್ಯಾ ವೆಂಕಟರಾಮು ಅವರ ಬಳಿ ಅವಳ ಏಳನೆಯ ವಯಸ್ಸಿನಲ್ಲಿ ಸೇರಿಸಿದರು. ಬಹು ಆಸಕ್ತಿಯಿಂದ ನೃತ್ಯಾಭ್ಯಾಸ ಮಾಡಿದ ಚೈತ್ರ, ಚಿಕ್ಕವಯಸ್ಸಿನಲ್ಲೇ, ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ಅತ್ಯುಚ್ಛ ಅಂಕಗಳಿಂದ ಡಿಸ್ಟಿಂಕ್ಷನ್ ಪಡೆದು ತೇರ್ಗಡೆ ಹೊಂದಿದಳು.
‘ಪುಷ್ಕರಣಿ’ ಶಾಲೆಯಲ್ಲೂ ಎಲ್ಲ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬಹುಮಾನ ಪಡೆಯುತ್ತಿದ್ದವಳು. ಜೊತೆಗೆ ಅವಳು, ಕ್ರೀಡಾಪಟು ಕೂಡ. ಷೆಟಲ್ ಬ್ಯಾಡ್ಮಿಂಟನ್ ನಲ್ಲಿ ರಾಜ್ಯಮಟ್ಟ ಹಾಗೂ ಥ್ರೋಬಾಲ್ ನಲ್ಲಿ ರಾಷ್ಟ್ರೀಯಮಟ್ಟದಲ್ಲಿ ಬಹುಮಾನಗಳನ್ನು ಗಳಿಸಿದ ಪ್ರತಿಭಾವಂತೆ.
ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಳು. ನಂತರವೂ ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದಳು. ಮುಂದೆ- ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾಕ್ಕೆ ತೆರಳಿ ಅಲ್ಲಿ, ಮೆರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ಎಂ.ಎಸ್. ಉನ್ನತಪದವಿಯನ್ನು ಪಡೆದುಕೊಂಡಿದ್ದು ಅವಳ ಹಿರಿಮೆ. ಕ್ಯಾಲಿಫೋರ್ನಿಯಾದ ಆಲ್ಟೆರ, ಮಾರ್ವೆಲ್ ಮುಂತಾದ ಸಂಸ್ಥೆಗಳಲ್ಲಿ ಕೆಲಕಾಲ ಉದ್ಯೋಗ ಮಾಡಿ, ಅನಂತರ ಪ್ರಾಡಕ್ಟ್ ಮೇನೇಜರ್ ಸಂದೀಪ್ ಬಲಿಜೆಪಲ್ಲಿ ಅವರನ್ನು ವಿವಾಹವಾದರು. ವಿವಾಹಾನಂತರವೂ ಚೈತ್ರಳ ಅಂತರಂಗದಲ್ಲಿ ನೃತ್ಯಸಾಧನೆಯ ಬಯಕೆ ತುಡಿಯುತ್ತಲೇ ಇತ್ತು.
ಅಮೆರಿಕಕ್ಕೆ ಹೋದ ನಂತರ ಚೈತ್ರಾ, ಕ್ಯಾಲಿಫೋರ್ನಿಯಾದಲ್ಲಿ ಅದಾಗಲೇ ‘ವಿದ್ಯಾ ಡಾನ್ಸ್ ಅಕಾಡೆಮಿ’ ಎಂಬ ತಮ್ಮದೇ ಆದ ನೃತ್ಯಸಂಸ್ಥೆಯಲ್ಲಿ ಬದ್ಧತೆಯಿಂದ ಭರತನಾಟ್ಯ ಕಲಿಸುತ್ತಿದ್ದ ಉತ್ತಮ ನಾಟ್ಯಗುರುವಾಗಿ ಸುಪರಿಚಿತರಾಗಿದ್ದ ಬೆಂಗಳೂರಿನ ನೃತ್ಯಪ್ರತಿಭೆ ವಿದ್ಯಾ ಜೀರಗೆ ಅವರ ಬಳಿ ಹೆಚ್ಚಿನ ನೃತ್ಯ ಕಲಿಕೆಗೆ ಸೇರಿದರು. ಪರಿಪಕ್ವ ನೃತ್ಯಾಭಿನಯಕ್ಕೆ ಹೆಸರಾಗಿದ್ದ ವಿದ್ಯಾಲತಾ ಅವರ ಬಳಿ ಉತ್ತಮ ಶಿಕ್ಷಣ ದೊರೆಯಿತು. ನೃತ್ಯಾಭಿನಯ ಕರಗತಗೊಳಿಸಿಕೊಳ್ಳುತ್ತ ಚೈತ್ರಳ ನೃತ್ಯಾಸಕ್ತಿ ಅಧಿಕವಾಗಿ, ಪರಿಶ್ರಮ ಹಾಗೂ ಬದ್ಧತೆಗಳಿಂದ ಕಲಿಕೆಯ ಹಾದಿಯಲ್ಲಿ ಕ್ರಮಿಸತೊಡಗಿದಳು.
ವಿದ್ಯಾ ಅವರು ಸ್ಥಾಪಿಸಿದ, ನೃತ್ಯ ಪ್ರದರ್ಶನ ಕಾರ್ಯಕ್ರಮ ಮತ್ತು ನೃತ್ಯ ಸಂಬಂಧಿತ ಚಟುವಟಿಕೆಗಳಿಗಾಗಿ ಮುಡಿಪಾಗಿದ್ದ ‘ಸ್ಮರಣ್ ಪರ್ಫಾರ್ಮಿಂಗ್ ಆರ್ಟ್ಸ್’ ಮೂಲಕ ನೂರಾರು ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ದೊರೆತು ಅಪಾರ ಪ್ರೋತ್ಸಾಹ ದೊರೆಯುತ್ತಿತ್ತು. ಇದರೊಳಗೆ ಒಂದಾಗಿ ಹೆಜ್ಜೆ ಹಾಕುತ್ತಿರುವ ಚೈತ್ರಳ ನೃತ್ಯಪಯಣ ಸುಮಾರು ಒಂದು ದಶಕವನ್ನು ದಾಟಿದೆ.
ಗುರು ವಿದ್ಯಾಲತಾ ಅವರ ‘ಸ್ಮರಣ್ ಪರ್ಫಾರ್ಮಿಂಗ್ ಆರ್ಟ್ಸ್’ ನಿಂದ ಆಯೋಜಿಸುವ ಎಲ್ಲ ಉತ್ಸವಗಳಲ್ಲಿ ಮತ್ತು ಪ್ರತಿವರ್ಷ ನಡೆಯುವ ವಾರ್ಷಿಕೋತ್ಸವದ ಎಲ್ಲ ನೃತ್ಯರೂಪಕಗಳಲ್ಲಿ ಚೈತ್ರ ಪ್ರಧಾನ ಪಾತ್ರಗಳಲ್ಲಿ ಪಾಲ್ಗೊಳ್ಳುತ್ತಿರುವುದು ಅವಳ ನೃತ್ಯಾಸಕ್ತಿಗೆ ದ್ಯೋತಕ. ಜೊತೆ ಜೊತೆಗೆ ಅನೇಕ ನೃತ್ಯೋತ್ಸವಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅದೃಷ್ಟವೂ ಅವಳದಾಗಿತ್ತು.
ಅಮೆರಿಕಾದ ಖ್ಯಾತ ‘ಅಕ್ಕ’ ಸಮ್ಮೇಳನ, ಸ್ಪ್ರಿಂಗ್ ಇಂಡಿಯಾ ಫೆಸ್ಟಿವಲ್, ಸ್ಮರಣ ಡಾನ್ಸ್ ಫೆಸ್ಟಿವಲ್, ಹಾಗೂ ಅಮೇರಿಕಾದ ವಿವಿಧೆಡೆಗಳಲ್ಲಿ ನಡೆದ ಪ್ರಹ್ಲಾದ ಚರಿತಂ, ರೂಪ-ವಿರೂಪ, ತಾಂಡವ ಇನ್ನಿತರ ನೃತ್ಯರೂಪಕಗಳಲ್ಲಿ ನರ್ತಿಸಿದ ಧನ್ಯತೆ ಅವಳದು. ಇವಳ ಪುಟ್ಟ ಕೂಸು ‘ವಿವಾನ್’ ಕೂಡ ಪ್ರಹ್ಲಾದನಾಗಿಇವಳೊಂದಿಗೆ ಅಭಿನಯಿಸಿರುವುದು ವಿಶೇಷ ಸಂಗತಿ.
ಜೊತೆಗೆ ಸ್ಯಾನ್ಫ್ರ್ಯಾನ್ಸಿಸ್ಕೋ ಬೇ ಏರಿಯಾದಲ್ಲಿ ಶ್ರೀಮತಿ ರುಕ್ಮಿಣಿ ವಿಜಯಕುಮಾರ್ ಮತ್ತು ಶೆರ್ಪ ಉನ್ನಿಕೃಷ್ಣನ್ ಮುಂತಾದ ಅನೇಕ ನೃತ್ಯತಜ್ಞರು ನಡೆಸಿಕೊಟ್ಟ ಕಾರ್ಯಾಗಾರಗಳಲ್ಲಿ ಭಾಗವಹಿಸಿ ವಿವಿಧ ನೃತ್ಯ ಶೈಲಿಯ ವಿಶಿಷ್ಟ ಆಯಾಮಗಳ ಬಗ್ಗೆ ಚೈತ್ರಾ ಅರಿವು ಸಂಪಾದಿಸಿದ್ದಾಳೆ.
ಭಾರತ ಮತ್ತು ಅಮೇರಿಕಾದಲ್ಲಿ ಹಲವಾರು ಸಂಸ್ಥೆಗಳ ಸಹಾಯಾರ್ಥವಾಗಿ ನಡೆದ ಅನೇಕ ನೃತ್ಯ ಪ್ರದರ್ಶನಗಳಲ್ಲಿ ಕೂಡ ಭಾಗಿಯಾಗಿದ್ದಾಳೆ ಚೈತ್ರಾ . ಇನ್ನೂ ಅನೇಕಾನೇಕ ಸಂಘ-ಸಂಸ್ಥೆಗಳೊಡನೆ ಒಡನಾಟವಿಟ್ಟುಕೊಂಡಿರುವ ಚೈತ್ರಾ, ವಿಶ್ವದಾದ್ಯಂತ ಚಾರಿಟಿ ನೀಡುವ ಖ್ಯಾತ ಸಂಸ್ಥೆಯೊಂದರ ಸಕ್ರಿಯ ಸ್ವಯಂಸೇವಕಿಯಾಗಿಯೂ ತೊಡಗಿಕೊಂಡಿದ್ದು, ಮಕ್ಕಳ ನೃತ್ಯ ಸ್ಪರ್ಧೆಯ ಸಮಿತಿಯ ಭಾಗವಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ಅವಳದು.
ಎಂಜಿನಿಯರ್ ಪತಿ ಸಂದೀಪ್ ಅವರ ತುಂಬು ಪ್ರೋತ್ಸಾಹದಿಂದ ಚೈತ್ರಾ ತನ್ನ ಉದ್ಯೋಗ, ಮನೆ, ಮಕ್ಕಳು (ವಿವಾನ್ ಮತ್ತು ಧ್ರುವ ಇಬ್ಬರು ಗಂಡುಮಕ್ಕಳು) ಸಂಸಾರದೊಡನೆ ನೃತ್ಯಸೇವೆಯನ್ನೂ ಸಮರಸದಿಂದ ತೂಗಿಸಿಕೊಂಡು ಹೋಗುತ್ತ, ನೃತ್ಯಪಯಣದ ಹಾದಿಯಲ್ಲಿ ಸಾಗುತ್ತಿರುವ ಇವಳು, ಭರವಸೆ ಹುಟ್ಟಿಸುವ ಕಲಾವಿದೆಯಾಗಿದ್ದಾಳೆ.
*****************************