ರಿಸರ್ವ್ ಮಾಡಿಸಿದ್ದರಿಂದ ಅಷ್ಟು ತೊಂದರೆಯಾಗಲಿಲ್ಲ. ಕೂಲಿ ಹೋಲ್ಡಾಲು, ಪೆಟ್ಟಿಗೆಗಳನ್ನೆಲ್ಲ ಫಸ್ಟ್ ಕ್ಲಾಸ್ ಬೋಗಿಯಲ್ಲಿ ತಂದಿಟ್ಟ. ಗಡಿಯಾರ ನೋಡಿಕೊಂಡೆ. ಇನ್ನೂ ರೈಲು ಹೊರಡಲಿಕ್ಕೆ 15 ನಿಮಿಷಗಳಿವೆ.
‘ಇನ್ನು ಕೇವಲ ಕಾಲೇ ಗಂಟೆ ಅಕ್ಕ…….ಆಮೇಲೆ ನೀನು ನಮ್ಮಿಂದ ದೂರ, ಭಾಳ ದೂರ’ ಎಂದು ಸುಮ ಬಿಕ್ಕಿದಾಗ ಅವಳ ಕಣ್ಣೊರೆಸಿ ಬೆನ್ನು ಸವರಿದೆ.
ಎದುರಿಗೆ ಕೂತ ಅಮ್ಮನ ಕಣ್ಣ ಕೆರೆ ಭರ್ತಿಯಾಗಿ ಇನ್ನೇನು ಕೋಡಿ ಬೀಳುವ ಹಾಗಿತ್ತು. ಪಕ್ಕಕ್ಕೆ ತಿರುಗಿದೆ. ಅಣ್ಣನ ಮುಖದ ಗೆರೆಗಳ ತುಂಬ ದುಃಖ ಬಳುಕಾಡುತ್ತಿತ್ತು. ರಾಜೂ, ಕ್ಷಮಾ, ಕೀರ್ತಿಯ ಆಳು ಮೋರೆಗಳು. ಕಸಿವಿಸಿಯಾಯಿತು. ನನ್ನ ಅಗಲಿಕೆಗಾಗಿ ಇವರೆಲ್ಲ ದುಃಖಪಡುತ್ತಿರುವಾಗ ನನಗೇಕೆ ಇನ್ನೂ ಅಳು ಬರುತ್ತಿಲ್ಲ? ಸ್ಯಾಂಪಲ್‍ಗಾದರೂ ನಾಲ್ಕು ಹನಿ……ಛೇ ……ಛೇ….ನಿಜವಾಗ್ಲೂ ನಾನು ಕಟುಕಳು ಎಂದು ಬಯ್ದುಕೊಂಡೆ. ಮೊದಲನೇ ಸಲ ಹೆಣ್ಣು ತವರನ್ನು ಬಿಟ್ಟು ಹೋಗುವಾಗ ಹೀಗೆ ಯಾರಾದ್ರೂ ಹಾಯಾಗಿ ಕೂತಿರ್ತಾರ್ಯೇ? ಇಷ್ಟು ದಿನ ಹುಟ್ಟಿ ಬೆಳೆದ ಮನೆ, ತಂದೆ, ತಾಯಿ, ತಂಗಿ-ತಮ್ಮಂದಿರು ಇವರನ್ನೆಲ್ಲ ಬಿಟ್ಟು ಬಹು ದೂರ ಎರಡು ಸಾವಿರ ಮೈಲಿ ದೂರಕ್ಕೆ ಜಿಗಿಯುವಾಗಲೂ ಅಂತಃಕರಣ ಕದಡಬೇಡವೇ?… ಏನಿದು? ನನ್ನ ಕಣ್ಣು ತೇವ ಸಹ ಆಗ್ತಿಲ್ವಲ್ಲ? ಏನು ವಿಚಿತ್ರ ಹೆಣ್ಣು ನಾನು! ಎಂದು ಅನಿಸತೊಡಗಿತು.
ಮತ್ತೆ ಮತ್ತೆ ಗಡಿಯಾರದತ್ತ ಕಣ್ಣು ಬಗ್ಗಿತು.
‘ನಿಮಿಷಗಳು ಭಾಳ ಬೇಗ ಓಡಿ ಹೋಗ್ತಿವೆ……ಇನ್ನೇನು ರೈಲು ಹೊರಡೋ ಸಮಯಾಂತ ಹೇಗೆ ಸಪ್ಪಗಾದ್ಳು ನೋಡು ನೀತಿ’
– ಮಾವ, ಅಮ್ಮನಿಗೆ ಹೇಳುತ್ತಿದ್ದ. ಎಲ್ಲರೂ ನನ್ನ ಕಡೆ ನೋಡಿದಾಗ ಸಪ್ಪಗಿಲ್ಲದ ನನ್ನ ಮುಖವನ್ನು ಅಳುಮೋರೆ ಮಾಡಲು ಪ್ರಯತ್ನಿಸಿದೆ. ಕೆನ್ನೆಗಳನ್ನು ಜೋಲುಮಾಡಿ ಕಣ್ಣುಗಳನ್ನು ತೇಲು ಬಿಟ್ಟೆ. ಆದರೂ ಯಾರಾದರೂ ನನ್ನ ನೋಡಿದರೆ, ಖಂಡಿತ ಇದು ನಿಜವಾದ ದುಃಖ ಅಲ್ಲ ಅಂತ ಧಾರಳವಾಗಿ ಹೇಳಿಬಿಡಬಹುದಿತ್ತು. ಆದರೆ ಅವರ ದುಃಖಿತ ನೋಟಕ್ಕೆ ನಾನು ಹಾಗೇ ಕಂಡಿದ್ರೂ ಕಂಡಿರಬಹುದು. ಅಮ್ಮ ಎದ್ದು ಬಂದು ನನ್ನ ಪಕ್ಕಕ್ಕೆ ಕೂತಳು. ಅವಳ ಮಮತೆಯ ಕೈ ಬೆನ್ನಿನ ಮೇಲೆ ಈಜಾಡುತ್ತಿತ್ತು. ನನಗೆ ಏನೇನೋ ಆಯಿತು. ಬಾರದ ಅಳುವನ್ನು ಹೇಗೆ ಎಳ್ಕೊಂಡು ಬರೋದು ಅಂತ ಸಮಸ್ಯೆ! ಆದರೆ ಈ ಸಂದರ್ಭಕ್ಕೆ ನಾನು ಅನಿವಾರ್ಯವಾಗಿ ಅಳಲೇಬೇಕು. ಇನ್ನೇನು ರೈಲು ಹೊರಡೋ ಟೈಮಿಗೆ ಅಂತ ನಾಲ್ಕಾರು ಹನಿ ಕಣ್ಣೀರು, ಎರಡು ಮೂರು ಅಳು ಮೋರೆಯ ಭಾವ-ಭಂಗಿಗಳನ್ನು ರಿಸರ್ವ್ ಆಗಿಟ್ಟದ್ದು ಈಗಲೇ ಎಲ್ಲಿ ಖರ್ಚು ಆಗಿ ಹೋಗತ್ತೋ ಎಂದು ಗಾಬರಿಯಾಗಿ ಅದನ್ನು ಒಳಗೆ ದಬ್ಬುವಂತೆ ಕರ್ಚಿಫ್ ಕಣ್ಣಿಗೆ ಬಿಗಿಯಾಗಿ ಒತ್ತಿ ಮುಖವನ್ನು ಬೇರೆಡೆ ತಿರುಗಿಸಿದೆ.
ಈಗಲೇ ಖಾಲಿಯಾಗಿ ಹೋದರೆ ಮುಂದೆ ಹೊರಡೋ ಹೊತ್ನಲ್ಲಿ ಸುಮ್ನೆ ಇದ್ರೆ ಭಣ ಭಣ ಅನ್ನಿಸುತ್ತೆ ಅಂತ ಒಣಗಿದ ಕಣ್ಣುಗಳನ್ನು ಎಡಪಕ್ಕದಲ್ಲಿ ಕುಳಿತಿದ್ದ ಅವರ ಹೊಳೆಯುವ ಬೂಟನೊಳಗೆ ಇಳಿಬಿಟ್ಟೆ. ನಿಮಿಷಗಳು ಯಾಕೋ ಬಹಳ ಸೋಮಾರಿಯಾಗಿವೆ ಎನಿಸತೊಡಗಿತು. ಥತ್…….ಹತ್ತು ಹೊಡೆದು ರೈಲು ಓಡಬಾರದೇ……ಇವರೆಲ್ಲ ಕೆಳಗೆ ಧಮುಕಿ ಆದಷ್ಟು ಬೇಗ ಕೈ ಬೀಸಿ ನನ್ನನ್ನು ಬೀಳ್ಕೊಡಬಾರ್ದೇ? ಏಕೆ ಹೀಗೆ ನನ್ನನ್ನು ಹಿಂಸಿಸುತ್ತಾರೆ ಎಂದು ಬೇಸರಪಟ್ಟೆ. ಎದೆಯಗೂಡಿನಲ್ಲಿ ಮೊದಲ ಬಾರಿ ಬೇರೆ ದೂರ ರಾಜ್ಯಕ್ಕೆ ಹೊರಡುವ ಆತುರ, ಸಂಭ್ರಮವಿದ್ದರೂ ಏನೋ ಅವ್ಯಕ್ತ ಆತಂಕದ ತುಣುಕುಗಳು ಒಳಗೆ ತಲ್ಲಣಿಸುತ್ತಿದ್ದವು. ಗಂಟಲು ಕಟ್ಟಿದಂತಾಗಿತ್ತು. ಸಂಭ್ರಮವೋ, ದುಃಖವೋ ಅರಿಯದಾಗಿತ್ತು. ಈಗ ನನ್ನೊಳಗೆ ಯಾವ ಭಾವನೆ ಸ್ರವಿಸುತ್ತಿದೆ ಎಂಬುದೇ ಸಮಸ್ಯೆಯಾಗಿತ್ತು. ಸುತ್ತಲೂ ಕಾಣುವ ದುಗುಡದ ಮುಖಗಳು ಮುಜುಗರದ ಇರಿತವನ್ನು ಮುಟ್ಟಿಸಿದವು. ತಲೆಗೆ ಕಟ್ಟಿದ್ದ ಸ್ಕಾರ್ಫನ್ನು ಸರಿಯಾಗಿದ್ದರೂ ಸುಮ್ಮನೆ ಬಿಚ್ಚುವುದು ಕಟ್ಟುವುದು ಮಾಡುತ್ತಿದ್ದೆ.
ನನ್ನವರ ಬಿಸುಪಿನ ಹಸ್ತ ನನ್ನ ಸೆರಗಿನ ಒಳಗಿಂದ ಸಾಂತ್ವನ ಹೇಳುವಂತೆ ಮೆಲ್ಲನೆ ಸವರಿದಾಗ ನನ್ನೆದೆಯ ಕಸಿವಿಸಿಯನ್ನು ಅಳಿಸಿದಂತೆನಿಸಿ, ಹಾಗೇ ಆ ಕೈ ಮೇಲೆ ಒರಗಿ ಕಿಟಕಿಯ ಚೌಕಟ್ಟಿಗೆ ತಲೆಯಾನಿಸಿದೆ.
ಹಿತವಾದ ಕಂಪನ. ರೈಲಿನ ಮೆಲು ಜೋಗುಳದೊಡನೆ ಆ ಬಿಸಿ ಸ್ಪರ್ಶ ಮುದವೆನಿಸಿ ಕಣ್ಣು ಬಿಟ್ಟಾಗ ಎದುರಿಗೆ ಅದೇ ಮಂಕಾದ ತಂಗಿಯರ ಮುಖಗಳು.
ಧಡಕ್ಕನೆ ಎದ್ದು ಕೂತು ಗಡಿಯಾರ ನೋಡಿಕೊಂಡೆ. …ಇನ್ನೂ ರೈಲು ಹೊರಡಲು ಐದು ನಿಮಿಷಗಳಿವೆ!!…
‘ನೀತಿ, ಊರಿಗೆ ಹೋದ ತತ್‍ಕ್ಷಣ ಕಾಗದ ಬರಿ..ಆದಷ್ಟೂ ಹುಷಾರಾಗಿರಮ್ಮ…ಹೊಸ ಜಾಗ..ಹೊಸ ಜನ…’
-ಗದ್ಗದ ಕಂಠದಿಂದಲೇ ಅಮ್ಮ ಅವರತ್ತ ತಿರುಗಿ, ‘ಹುಷಾರು ಕಣಪ್ಪ, ನೀತಿಗೆ ಹೊಸ ಭಾಷೆ..ಹೊಸ ಜನ..ಮೊದಲೇ ಇವಳು ಅಂಜುಬುರುಕಿ, ಎಲ್ಲಕ್ಕೂ ಹೆದರುವ ಸ್ವಭಾವ..ಗಟ್ಟಿಯಾಗಿ ಒಂದು ಮಾತಾಡಿದರೂ ಅತ್ತುಬಿಡ್ತಾಳೆ..ಸುಧಾರಿಸಿಕೊಂಡು ಹೋಗಬೇಕು…ಊರಿಗೆ ಹೋದ ತತ್‍ಕ್ಷಣ ಕಾಗ್ದ ಹಾಕೋದು ಮರೀಬೇಡಪ್ಪ..’- ರೈಲಿನ ಗಂಟೆಯ ಸದ್ದಿನಲ್ಲಿ ಅಮ್ಮನ ದನಿ ಕರಗಿ ಹೊಯಿತು.
ಅವರತ್ತ ತಿರುಗಿದೆ. ನನಗಿಂತ ಅವರೇ ಹೆಚ್ಚು ದುಃಖಿತರಾಗಿದ್ದ ಹಾಗೆ ಕಂಡಿತು. ಮಂಕಾದ ಅವರ ಮುಖವನ್ನೇ ದಿಟ್ಟಿಸುತ್ತ ಕೂರುವುದು ತಮಾಷೆಯೆನಿಸಿತ್ತು. ಆದರೆ ಇದು ಅದಕ್ಕೆ ತಕ್ಕ ಸಮಯವಲ್ಲ ಎಂದು ತೆಪ್ಪಗಾಗಿ, ದೂರಾಗುತ್ತಿದ್ದ ನನ್ನ ಜನಗಳಿಗೆ ಕೈ ಬೀಸುತ್ತ ರೆಡಿಮೇಡ್ ಕಂಬನಿಗಳನ್ನು ಹೊರಜಾರಿಸಿದೆ.
ನನ್ನ ಕುರುಳುಗಳ ಮೇಲಾಡುತ್ತಿದ್ದ ಅವರ ಸ್ಪರ್ಶದ ಜೊಂಪಿನಲ್ಲಿ ಕಣ್ಮುಚ್ಚಿದೆ…ರೈಲಿನ ಝಗಾ..ಝಗ್ ..ಝಾಗಾ ಝಗ್ ಜೋಲಿಯ ತೂಗಾಟ.
ಝಗ್ಗನೆ ಎಚ್ಚರವಾಯಿತು. ಎದ್ದು ಕೂತೆ. ಕಿಟಕಿಯಾಚೆ ದೃಷ್ಟಿ ಹೊರಳಿಸಿದೆ. ಟಾರಿನ ಮಳೆ ಎನಿಸುವಷ್ಟು ಹೆಪ್ಪಗಟ್ಟಿದ ಕಾರಿರುಳು ಕತ್ತಲನ್ನು ಹೆರುತ್ತಿತ್ತು. ಯಾಕೋ ಭಯವೆನಿಸಿತು..ಸುತ್ತ ಎದೆ ನಡುಗಿಸುವ ನಿಶ್ಶಬ್ದ…ಬೆಂಗಳೂರನ್ನು ಹಿಂದೆ ತಳ್ಳಿ ನಾನು ಅದೆಷ್ಟೋ ನೂರು ಮೈಲು ಸರಿದಿದ್ದೇನೆ ಎನಿಸಿ ಅಮ್ಮ, ಅಣ್ಣ ಎಲ್ಲರೂ ನೆನಪಿಗೆ ಬಂದು ಒಮ್ಮೆಲೆ ಅತೀವ ದುಃಖ ಹೊಟ್ಟೆಯೊಳಗಿಂದ ಕಡೆದು ಬಂತು. ಬಾಯಿ ತೆಗೆದು ಒಮ್ಮೆ ಜೋರಾಗಿ ಬಿಕ್ಕಳಿಸಿದೆ ಎಂದು ತೋರುತ್ತದೆ. ತಟಕ್ಕನೆ ದೀಪ ಹಾಕಿದ ಅವರು ಎದ್ದು ನನ್ನತ್ತ ಬಗ್ಗಿದರು. ಜೋರಾಗಿ ಅಳಬೇಕೆನಿಸಿತು..’ಅಮ್ಮಾ’ಎಂದು ಎಳೆಮಗುವಿನಂತೆ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದೆ.
ಅವರು ಗಾಬರಿಯದರು- ಮುಖದಲ್ಲಿ ಗೊಂದಲ ತುಳುಕಿಸಿ, ‘ಏನಾಯ್ತು ನೀತಿ?’ ಎಂದು ನನ್ನನ್ನಪ್ಪಿ ಸಮಾಧಾನಪಡಿಸಲು ಪ್ರಯತ್ನಿಸಿದರು. ನಾನು ಅಳುತ್ತಲೇ ಇದ್ದೆ. ಅವರು ‘ಅಳಬೇಡ’ ಎಂದಷ್ಟೂ ಅಳು ನುಗ್ಗಿ ಬರುತ್ತಿತ್ತು. ಸುಮ್ಮನೆ ಮುದುರಿ ಮಲಗಿದೆ. ಮೈಮೇಲೆ ಹರಿದ ಅವರ ಕೈಯನ್ನು ಕಿತ್ತೆಸೆದೆ. ಅವರ ಪ್ರತಿಕ್ರಿಯೆಯನ್ನು ಗಮನಿಸದೆ, ರೈಲಿನ ಗೋಡೆಯ ಕಡೆ ಮಗ್ಗುಲು ಹೊರಳಿ ರೆಪ್ಪೆಗಳನ್ನು ಹೆಣೆದುಕೊಂಡೆ.
ತಲೆಯೊಳಗೆ ರಿವ್ವನೆ ಏನೇನೋ ಯೋಚನೆಗಳು ಮೇಲೆದ್ದು ಗಿರಗಿರನೆ ಸುತ್ತ ತೊಡಗಿದವು.
ನಾನು ನಮ್ಮ ಮನೆ, ಜನ, ಊರನ್ನು ತುಂಬಾ ಹಚ್ಚಿಕೊಂಡುಬಿಟ್ಟಿದ್ದೆ. ಬೆಂಗಳೂರನ್ನು ಬಿಟ್ಟು ಆಚೆ ಹೋದವಳೇ ಅಲ್ಲ. ಬಾವಿಯ ಪ್ರಪಂಚ ನನ್ನದಾಗಿತ್ತು. ಬಹುಶಃ ಮಾತುಗಳೂ ಬಾಲಿಶ ಎಂದು ಸದಾ ಅಮ್ಮನ ದೂರು.
ಮದುವೆಗೆ ಬಂದಾಗ ಸಹಜವಾಗಿ ಅಪ್ಪ ಗಂಡುಗಳನ್ನು ನೋಡುವ ಭರಾಟೆಯಲ್ಲಿದ್ದರು. ನಾನಾಗ-ಮಧ್ಯ ಪ್ರದೇಶ, ಉತ್ತರ ಪ್ರದೇಶ, ವಿದೇಶದಲ್ಲಿರುವ ಗಂಡುಗಳನ್ನು ಮಾತ್ರ ಮದುವೆಯಾಗೋದೇ ಇಲ್ಲ ಎಂದು ದಿನಕ್ಕೆ ನೂರು ಬಾರಿ ಹೇಳ್ತಿದ್ದವಳು ಅದ್ಹೇಗೆ ಇವರ ಮುಖ ನೋಡ್ತಿದ್ದ ಹಾಗೇ ಮಂತ್ರಮೋಡಿಗೆ ಒಳಗಾದವಳಂತೆ, ನನ್ನ ಪ್ರತಿಜ್ಞೆಯನ್ನು ಗಾಳಿಗೆ ತೂರಿ ಮಾಂಗಲ್ಯ ಕಟ್ಟಿಸಿಕೊಳ್ಳಲು ಇವರ ಮುಂದೆ ಕೊರಳೊಡ್ಡಿದ್ದೆ!! ..ಛೇ, ನಿಜವಾಗ್ಲೂ ನಾನು ಮೋಸ ಹೋಗಿಬಿಟ್ಟೆ..ನನ್ನ ನಿರ್ಧಾರ ಅದೇಕಷ್ಟು ಬೇಗ ಸಡಿಲವಾಯ್ತು….ಏನೇನೋ ಉಲ್ಟಾ ಪಲ್ಟಾ ಯೋಚನೆಗಳು…ಈಗ್ಲೂ ಏನಾಯಿತು…ಮುಂದಿನ ಸ್ಟೇಷನ್ನಿನಲ್ಲಿಳಿದು ಹಿಂದಕ್ಕೆ ಬೆಂಗಳೂರಿಗೆ ಹೋಗಿ ಬಿಡಬೇಕು ಎಂಬ ಅನಿಸಿಕೆ ಒತ್ತರಿಸಿ ಬಂತು.
ಕಾಲೇಜಿನ ದಿನಗಳಲ್ಲಿ ಜಂಭ ಕೊಚ್ಚಿಕೊಳ್ಳುತ್ತಿದ್ದುದು ನೆನಪಾಯಿತು. ನನಗೆ ಬಹುತೇಕ ಬರುತ್ತಿದ್ದುದೆಲ್ಲ ಹೊರರಾಜ್ಯಗಳ ಗಂಡುಗಳೇ.
‘ ನಾನಂತೂ ಮಧ್ಯಪ್ರದೇಶಕ್ಕೆ ಹೋಗಲ್ಲ..ಎಷ್ಟಾದರೂ ಅದು ನಮ್ಮ ಮೈಸೂರು ಸೀಮೆ ಹಾಗೆ ಬರುತ್ಯೇ?..ಇಲ್ಲಿ ಹವಾ..ದೇಶ..ಜನ ಎಲ್ಲರನ್ನೂ ಬಿಟ್ಟು ಹೋಗೋದೂಂದ್ರೆ ಕನಸು..ಅಷ್ಟೂ ಅಲ್ಲಿ ಕೆಲಸ ಮಾಡೋನೇ ಒಬ್ನು ನನ್ನ ಒಪ್ಕೊಂಡ್ರೂ ಅಂದುಕೊಂಡ್ರೂ , ನಾನು ಅವರಿಗೆ ಬೇಕೂಂತಿದ್ರೆ ಅವರು ಕೆಲಸ ಬಿಟ್ಟು ಇಲ್ಲಿಗೆ ಬರ್ಲಿ…….. ನಾ ಅಂತೂ ಜಪ್ಪಯ್ಯಾಂದ್ರೂ ಅಲ್ಲಿಗೆ ಮಾತ್ರ ಕಾಲಿಡಲ್ಲ’-ಎಂದು ದೃಢವಾಗಿ ನುಡಿಯುತ್ತಿದ್ದೆ.
‘ಹೂಂ ಹೂಂ……ನಿನ್ನ ಪತಿರಾಯ ಆಗೋನು ನಿನ್ನ ಮುದ್ದು ಮುಖ ನೋಡಿದ ಮೇಲೆ ಅಲ್ಲಿನ ಕೆಲಸಕ್ಕೆ ರಾಜಿನಾಮೆ ಕೊಟ್ಟ ಹಾಗೇ……’ ಎಂದು ಉಮಾ ಹಾಸ್ಯ ಮಾಡಿದ್ದಳು.
ನಾವು ಗೆಳತಿಯರೆಲ್ಲ ಒಟ್ಟಿಗೆ ಕೂತು ‘ಕಸ್ತೂರಿ’ಯಲ್ಲಿ ಬರುತ್ತಿದ್ದ ಡಕಾಯಿತರ ಕಥೆ ಓದಿ ಚರ್ಚೆ ನಡೆಸುತ್ತಿದ್ದೆವು.
“ ಶಿವಪುರಿ, ಚಂಬಲ್, ರೀವಾ ಆ ಕಡೆ ಎಲ್ಲ ಇರೋರು ನಿಜವಾಗ್ಲೂ ಪಾಪ ಮಾಡಿರಬೇಕಲ್ವಾ?……. ಇಲ್ಲದಿದ್ರೇಕೆ ಅಂಥ ನರಕದಲ್ಲಿ ಇದ್ದು ಒದ್ದಾಡಿ ಸಾಯಬೇಕು” ಅಂದಿದ್ದೆ. “ನಾನೇನಾದ್ರೂ ಅಲ್ಲಿದ್ದಿದ್ರೆ ಆ ಡಕಾಯಿತ ಪಿಸ್ತೂಲ್ ತೆಗೆಯೋದೂ ಬೇಡ; ಹಾಗೆ ಅವನು ನೋಡುತ್ತಿದ್ದ ಹಾಗೇ ಹಾರ್ಟ್ ಫೈಲ್ಯೂರ್ ಆಗಿ ಸತ್ತ್ಹೋಗ್ತಿದ್ದೆ…… ನೆನೆಸಿಕೊಂಡ್ರೆ ಮೈಯೆಲ್ಲ ತಣ್ಣಗಾಗುತ್ತೆ,…… ಅದಕ್ಕೇಪ್ಪ ನಾನಂತೂ ಸತ್ತರೂ ಆ ಕಡೆ ಹೋಗಲ್ಲ” ಎಂದಿದ್ದೆ.
ಆಗ ಸವಿತ-“ಅಕಸ್ಮಾತ್ ನಿನ್ನ ಗಂಡ ಆಗೋನು ಅಲ್ಲೇ ಡಾಕ್ಟ್ರೋ, ಎಂಜಿನಿಯರ್ರೋ ಆಗಿದ್ರೆ……’ ಎಂದು ಕೇಳಿದಾಗ ನಾನು ಹೌಹಾರಿ –
‘ಸದ್ಯ ನಾನು ಅಂಥ ವರಮಹಾಶಯನಿಗೆ ದೂರದಿಂದ್ಲೇ ಕೈ ಮುಗಿದುಬಿಡ್ತೀನಿ’ ಎಂದು ಜಂಭ ಕೊಚ್ಚಿದ್ದೆ. ಆಗ ಉರುಳಿದ ಮಾತುಗಳು ಈಗ ಹಾಸ್ಯ ಮಾಡಿದವು. ಜಬ್ಬಲ್‍ಪುರದ ಹುಡುಗ ಎಂದು ತಿಳಿದೂ ಇವರ ಮುಂದೇಕೆ ನಾನು ವಧುಪರೀಕ್ಷೆಗೆ ಕುಳಿತೆ? ಎಂದು ಕೈ ಕಚ್ಚಿಕೊಳ್ಳುವಂತಾಯಿತು. ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದ ಸಮಾಚಾರ ನನ್ನದಲ್ಲವೇ ಎಂಬ ಪ್ರಶ್ನೆ. ಕತ್ತಲಾಳದಲ್ಲಿ ಮುದುರಿ ಬಿದ್ದಿದ್ದ ನನಗೆ, ಡಕಾಯಿತ ಮಂಗಲ್ ಸಿಂಗ್, ಮಾಚಕುಂಡ, ಪುತ್ಥಲಿಬಾಯಿ ಹೆಸರುಗಳು ಜ್ಞಾಪ್ಕ ಬರುತ್ತಿದ್ದ ಹಾಗೆ ಕೈಕಾಲು ಕೊರಡಾದ ಹಾಗೆ ಆಯಿತು. ಕತ್ತಿನಲ್ಲಿರುವ ಬಂಗಾರದ ಸರ ಫಳ ಫಳ ಹೊಳೆಯುತ್ತಿದೆಯೇನೋ ಎಂಬ ಅಂಜಿಕೆ. ಮೈತುಂಬ ಮಂಜಿನ ಪ್ರವಾಹ. ಉಸಿರು ಕಟ್ಟುವ ಗಾಬರಿಯಿಂದ ಎದ್ದು ಕೂತು ಅವರನ್ನೆಬ್ಬಿಸಿ ‘ಅಲ್ಲಿ ತುಂಬಾ ಡಕಾಯಿತರ ಕಾಟವೇನು?’ ಎಂದು ಪ್ರಶ್ನಿಸಿದೆ.
ನಿದ್ದೆಯ ಮಂಪರಿನಲ್ಲಿದ್ದ ಅವರಿಗೆ ತಬ್ಬಿಬ್ಬಾಯಿತು. ‘ಆ್ಞ ಆ್ಞ’ ಎಂದು ಕಣ್ಣುಜ್ಜಿಕೊಳ್ಳುತ್ತ ನನ್ನ ಮಾತು ಕೇಳಿ ಸರಿಯಾಗಿ ಕೂತು- ‘ಇನ್ನೂ ಬೆಳಗಾಗಿಲ್ಲ……. ಏನಾದ್ರೂ ಕೆಟ್ಟ ಕನಸು ಕಂಡೆ ಏನು?……ಅಲ್ಲೇನೂ ಡಕಾಯಿತ್ರೂ ಇಲ್ಲ ಯಾರೂ ಇಲ್ಲ. ಈಗ ಧೈರ್ಯವಾಗಿ ಮಲಕ್ಕೋ, ದುಡ್ಡು ದೋಚಕ್ಕೆ ನಮ್ಮ ದೇಶ ಬಿಟ್ಟು ಅಲ್ಲಿಗೆ ಹೋಗಿರೋ ನಾವೇ ಡಕಾಯಿತ್ರು ತಿಳೀತಾ……. ನನ್ನ ಕಂಡ್ರೆ ನಿಂಗೆ ಹೆದರಿಕೇನಾ?’ ಎಂದು ಕೇಳಿದರು. ನಾನು ತಲೆಯಾಡಿಸಿದೆ.
‘ಮತ್ತೆ ಮಲಗು…… ಡಕಾಯಿತರೂ ನಮ್ಮ ಥರಾನೇ ಮನುಷ್ಯರು…… ನಾವು ಒಂದು ದಾರಿ ಹಿಡಿದ್ರೆ ಅವರೊಂದು ದಾರಿ ಹಿಡಿದಿರ್ತಾರಷ್ಟೇ …ಎಲ್ಲಾ ಹೊಟ್ಟೆ ಪಾಡಿಗೆ’ ಎಂದವರು ಮೆಲುನಗು ನಕ್ಕು ನನಗೆ ಸಮಾಧಾನ ಹೇಳಿದಾಗ, ಅವರ ಮಾತನ್ನು ನುಂಗುತ್ತ ನಾನು ಸುಮ್ಮನೆ ಮಲಗಿದೆ.
ಬೆಳಿಗ್ಗೆ ಎದ್ದಾಗಲೂ ನನ್ನ ಮುಖ ಮಂಕಾಗಿತ್ತು. ಮೌನವಾಗಿ ಕಿಟಕಿಯಲ್ಲಿ ಮುಖ ಇಟ್ಟಿದ್ದೆ. ಎದುರಿಗೆ ಕುಳಿತ ದಂಪತಿಯೊಡನೆ ಇವರು ಹಿಂದಿಯಲ್ಲಿ ಮಾತಿಗೆ ತೊಡಗಿದ್ದರು. ಎದುರಿಗೆ ಕುಳಿತಿದ ಆ ಸಿಖ್ ಗಂಡಸಿನ ಧಾಡಿಯನ್ನೇ ರೆಪ್ಪೆ ಹುಯ್ಯದೆ ದಿಟ್ಟಿಸಿದೆ. ಅವನ ಪೊದೆಯ ಮೀಸೆ-ಗಡ್ಡಗಳ ಸಂಗಮ ಕಂಡು ಎದೆಯಲ್ಲಿ ಹೆದರಿಕೆಯ ಝರಿ ಪ್ರಾರಂಭ. ಇವನನ್ನು ಕುದುರೆ ಮೇಲೆ ಕೂಡಿಸಿ ಕೈಗೊಂದು ಪಿಸ್ತೂಲ್ ಕೊಟ್ರೆ, ಥೇಟ್ ಡಕಾಯತ! ಮಾರ್ವಾಡಿ ಹೆಂಗಸಲ್ಲದ ನಾನು, ಅವನು ನನ್ನ ಮುಖ ಎಲ್ಲಿ ನೋಡಿ ಬಿಡ್ತಾನೋ ಎಂದು ಹೆದರಿ ಗಾಬರಿಯಿಂದ ಮುಖದ ಮೇಲೆ ಸೆರೆಗೆಳೆದುಕೊಂಡೆ.
ಡಾಕುಗಳು ರಾತ್ರಿ ಮಾತ್ರ ದರೋಡೆ ಮಾಡ್ತಾರೆ; ಬೆಳಿಗ್ಗೆ ಎಲ್ಲ ಸಾಮಾನ್ಯರಂತೆ ವೇಷ ಬದಲಾಯಿಸ್ಕೊಂಡು ತಿರುಗುತ್ತಿರುತ್ತಾರಂತೆ. ಯಾರೋ ಹೇಳಿದ ನುಡಿ ಎದೆಯಲ್ಲಿ ಅಂಬೆಗಾಲಿಟ್ಟು ನಿಲ್ಲುತ್ತಿತ್ತು. ಹಾಗಾದರೆ ಇವನೂ ಆ ಗುಂಪಿನವರಲ್ಲಿ ಒಬ್ಬ ಇರಬಹುದು ಎಂಬ ಕಲ್ಪನೆ ಮೈ ನಡುಗಿಸಿತು. ‘ಥೂ ಇಂಥವನ ಜೊತೆ ಇವರಿಗ್ಯಾಕೆ ಮಾತು’ ಎಂದು ಮನಸ್ಸಿನಲ್ಲೇ ಇವರನ್ನು ಸಿಡುಕಿಕೊಂಡೆ, ಹಾಗೆ ಜೋರಾಗಿ ಹೇಳಲಾರದೆ ಮಿಡುಕಿದೆ.
ರಾತ್ರಿ ಮೆಲ್ಲಗೆ ಅವರಲ್ಲಿ ಬಾಯಿ ಬಿಚ್ಚಿದೆ. ‘ಈ ದೇಶದಲ್ಲಿ ಜನ, ಮೇಲೆ ಭಾಳ ಒಳ್ಳೆ ಮಾತು ಆಡ್ಕೊಂಡು ಒಳಗೇ ಮಸಲತ್ತು ಮಾಡ್ತಾರಂತೆ ಹೌದಾ?’ ಎಂದೆ.
‘ನಿನಗ್ಯಾರು ಇಲ್ಲಸಲ್ಲದೆಲ್ಲ ಹೇಳಿರೋದು? ನಾನು ಅವರ ಮಧ್ಯೇನೆ ಏಳೆಂಟು ವರ್ಷಗಳಿಂದ ಬದುಕ್ತಿಲ್ವೇ?….. ನಮ್ಮಂಥ ಸಾವಿರಾರು ಜನರಿಗೆ ಅನ್ನ ಕೊಟ್ಟು ಬಾಳಿಸ್ತಿರೋ ಪ್ರದೇಶ…. ಇಲ್ಲೀ ಜನರಷ್ಟು ನಯ, ಸ್ನೇಹ ನಮ್ಮೋರಲ್ಲಿ ಇಲ್ವೇ ಇಲ್ಲ.. ನೀ ಸುಮ್ನೆ ತಪ್ಪು ತಿಳ್ಕೊಂಡು ತಲೆ ಕೆಡಿಸಿಕೊಳ್ಳಬೇಡ… ಧೈರ್ಯವಾಗಿದ್ದು, ನಾಲ್ಕು ದಿನ ನೋಡು…. ಆಮೇಲೆ ನೀನೇ ಇವರನ್ನ ಹೊಗಳ್ತೀಯ ’ ಎಂದು ನನ್ನ ಮನಸ್ಸಿನಲ್ಲಿ ನೆಟ್ಟು, ತಲೆಯೆತ್ತುತ್ತಿದ್ದ ಭಯದ ಸಸಿಯನ್ನು ಕೀಳಲು ಅವರು ಪ್ರಯತ್ನಿಸಿದರೂ ನನ್ನ ಮನದ ತುಂಬಾ ಅದೇ ಭೀತಿ ಆಕಾರ ತಳೆದು ಹೊಯ್ದಾಡುತ್ತಿದ್ದವು.
ಎರಡು ದಿನಗಳ ಪ್ರಯಾಣ. ಇಟಾರ್ಸಿ ಬಂತು. ಅಲ್ಲಿಂದ ಅಮ್ಲಾಯಿಗೆ ಹೋಗುವ ರೈಲಿನಲ್ಲಿ ಕೂತೆವು. ದಾರಿ ಉದ್ದಕ್ಕೂ ಇವರು ಧೈರ್ಯ ತುಂಬುತ್ತಿದ್ದರು. ‘ನನಗೆ ಈಗ ವರ್ಗವಾಗಿರೋ ಊರು ಚಚಾಯಿ ಅಂತ.. ಮನೇ ಸಿಗುವವರೆಗೂ ರೆಸ್ಟ್ ಹೌಸಿನಲ್ಲಿರೋಣ. ಅಲ್ಲಿ ಡಕಾಯಿತ ಗಿಕಾಯಿತರ ಯಾರ ಕಾಟವೂ ಇರಲ್ಲ..ಹಾಯಾಗಿ ನೆಮ್ಮದಿಯಿಂದ ಇರಬಹುದು. ಇನ್ನೊಂದು ಸಲ ನೀನು ಹೆದರಿಕೆ ಗಿದರಿಕೆ ಅಂದ್ರೆ ನಾ ನಿಜವಾಗ್ಲೂ ಕೋಪ ಮಾಡ್ಕೋತೀನಿ ನೋಡು’ ಎಂದು ಅವರು ಹುಸಿಗೋಪದ ನೋಟವೆರಚಿ ಭರವಸೆ ನೀಡುವಂತೆ ನನ್ನ ಕೈಯನ್ನು ಗಟ್ಟಿಯಾಗಿ ಅದುಮಿದರು.
ನಾನು ಕಣ್ಣುಗಳನ್ನು ಬಟ್ಟಲಾಗಿ ಮಾಡಿಕೊಂಡು ಸುತ್ತ ತೆರೆದುಕೊಳ್ಳುತ್ತಿದ್ದ ಹಸಿರು ಮಡಿಲಿನ ಸುಂದರ ಹೊಸ ಜಾಗಗಳನ್ನು ಕುತೂಹಲದಿಂದ ನೋಡುತ್ತ ಇದ್ದೆ.
‘ಅಮ್ಲಾಯಿ ಸಣ್ಣ ಹಳ್ಳಿ…… ಅಲ್ಲಿಂದ ಚಚೈಗೆ ಮೂರೂವರೇ ಮೈಲಿ.. ನನ್ನ ಟೆಲಿಗ್ರಾಂ ಸೇರಿದ್ರೆ ಅಲ್ಲಿಗೆ ನಮ್ಮ ಆಫೀಸಿನ ಜೀಪ್ ಬಂದಿರತ್ತೆ…..ಇಲ್ಲದಿದ್ರೆ ನಾವು ಬಸ್ಸಿನಲ್ಲಿ ಹೋಗಬೇಕು’ -ಅಂದರು.
ಅವರು ಹೇಳಿದ ಹಾಗೇ ಜೀಪು ನಮ್ಮನ್ನು ಕರೆದೊಯ್ಯಲು ಅಲ್ಲಿಗೆ ಬಂದಿತ್ತು.
ಜೀಪಿನಲ್ಲಿ ಕೂತು ದೂರದ ಗುಡ್ಡದ ಮೇಲೆ ಸಣ್ಣದಾಗಿ ಕಾಣುತ್ತಿದ್ದ ಬಿಳಿ ಕಟ್ಟಡ ರೆಸ್ಟ್ ಹೌಸಿನ ಕಡೆ ನೋಡಿದೆ. ‘ಅದೇ ನೋಡು’ ಎಂದು ತೋರಿದರು. ಮಣ್ಣು ಕಲ್ಲುಗಳ ದಾರಿಯ ಮೇಲೆ ಜೀಪು ಎತ್ತಿ ಎತ್ತಿ ಹಾಕಿದಾಗ ಅವರ ಭುಜಗಳು ನನ್ನ ಭುಜವನ್ನು ತಿಕ್ಕಾಡಿದಾಗ ಅವರ ತುಂಟ ನೋಟ ಎದುರಿಸಲಾಗದೆ ಬ್ಯಾಗಿನಿಂದ ಪುಸ್ತಕವೊಂದನ್ನು ಎಳೆದುಕೊಂಡೆ.
ರಸ್ತೆಯ ಎರಡೂ ಕಡೆ ಸಾಲು ಮರಗಳು. ಮಧ್ಯ ಕಡಿದು ಮಾಡಿರುವ ಕೊಂಕಾದ ಕಿರಿದಾದ ರಸ್ತೆ. ಪುಸ್ತಕದಲ್ಲಿನ ಅಕ್ಷರಗಳು ತೂರಾಡುತ್ತಿದ್ದವು. ಕೈ ಮೈ ಮೇಲೆ, ಪುಸ್ತಕದಲ್ಲಿ ನೆರಳು ಬೆಳಕಿನ ಪೊಪ್ಪಳಿ ಪೊಪ್ಪಳಿಗಳು . ಜೋಕಾಲಿ ಆಡಿದಂಥ ಅನುಭವ. ಓದಲಾಗಲಿಲ್ಲ ಪುಸ್ತಕ ಮುಚ್ಚಿದೆ. ಕೈ ಮೈಲೆಲ್ಲ ಕಪ್ಪು- ಹಳದಿ ಪಟ್ಟೆ ಪಟ್ಟೆ.
ಗುಡ್ಡದ ಸೊಂಟದಲ್ಲಿ ಜೀಪು ಓಡುತ್ತಿರುವಾಗ ಪಕ್ಕದಲ್ಲಿ ದಟ್ಟ ಪೊದೆ, ಮರ-ಗಿಡಗಳು. ಆ ಕಾಡಿನ ಮಧ್ಯೆಯೇ ಡಕಾಯಿತರ ಕಾರ್ಯಸ್ಥಾನವಿರಬಹುದೇ? ಎಂಬ ಶಂಕೆ. ಮತ್ತೆ ಡಕಾಯಿತರ ನೆನಪು ತಲೆಯಲ್ಲಿ ನುಗ್ಗಿದೊಡನೆ ಅವರು ಬಯ್ಯುತ್ತಾರೆಂದು ನೆನೆದು ಅದನ್ನು ಹಿಂಡಿ ಒಳಗೆ ತಳ್ಳಿ ಅವರತ್ತ ಕಳ್ಳನೋಟ ಹರಿಸಿದೆ. ಅವರ ಮುಖದಲ್ಲಿ ಯಾವ ಕೋಪದ ನೆರಳೂ ಕಾಣಲಿಲ್ಲ. ನಿರಾಳವಾಗಿ ಉಸಿರು ಚೆಲ್ಲಿ ದೃಷ್ಟಿಯನ್ನು ಹೊರನೆಟ್ಟೆ.
‘ನೋಡು ಇದು ಸರೈ ಮರ, ಇದು ಸಾಜ, ಇದು ಸಾಗ್ವಾನಿ, ಬಿಲ್ಮ…’ ಏನೇನೋ ಹೇಳುತ್ತಿದ್ದರು. ಅವರ ಮಾತೊಂದೂ ನನ್ನ ಕಿವಿಯಲ್ಲಿಳಿಯಲಿಲ್ಲ. ದೂರದ ದಟ್ಟಕಾಡಿನ ಒಳಗೆ ಏನಿರಬಹುದು? ಎಂದು ಊಹಿಸುತ್ತಿದ್ದೆ.
ಜೀಪು ಗುಡ್ಡದ ನೆತ್ತಿಯ ಮೇಲೆ ಬಂದು ನಿಂತಿತು. ಹೊಸ ನೆಲದಲ್ಲಿ ಪಾದ ಊರುವಾಗ ಏನೋ ಕಚಗುಳಿ. ಹಗುರ ಹೆಜ್ಜೆಗಳನ್ನು ಊರುತ್ತ ಅತ್ತಿಂದಿತ್ತ ಓಡಾಡಿದೆ. ಯಾವುದೋ ನದಿಯೊಂದು ಗುಡ್ಡದ ಬುಡದಲ್ಲಿ ಸಣ್ಣದಾಗಿ ದಾರದಂತೆ ಕಾಣುತ್ತಿತ್ತು. ಕೆಳಗೆ ಸ್ವಲ್ಪ ದೂರದಲ್ಲಿ ಹಲವು ಮನೆಗಳು ಕಾಣಿಸಿದವು. ಎಲ್ಲೆಲ್ಲೂ ಹಸಿರು ಮರಗಳ ಗುಂಪು.
‘ಬಾ ಒಳಗೆ ಹೋಗೋಣ ನೀತಿ’
ಮೆಲ್ಲನೆ ಅವರನ್ನು ಹಿಂಬಾಲಿಸಿದೆ. ರೆಸ್ಟ್ ಹೌಸಿನ ದೊಡ್ಡ ಮುಂಬಾಗಿಲ ಬಳಿ ಇದ್ದ ಗೂರ್ಖ- ‘ನಮಸ್ತೆ ಸಾಬ್’ ಎಂದು ಹಣೆಯ ಮೇಲೆ ಅಂಗೈ ಇಟ್ಟು ನಮಸ್ಕರಿಸಿದ.ಅವನ ಗುಳಿ ಬಿದ್ದ ಕಣ್ಣುಗಳನ್ನು ನೋಡಿ ಎದೆ ಝಗ್ ಎಂದಿತು. ಅವನ ಕ್ರೂರದೃಷ್ಟಿ ನನ್ನ ದೇಹವನ್ನು ನೆಕ್ಕುತ್ತಿರುವಂತೆ ಭಾಸ. ಮೆಲ್ಲನೆ ದೃಷ್ಟಿ ತಗ್ಗಿಸಿ ಒಳ ನಡೆದೆ.
ದೊಡ್ಡ ಕೋಣೆಯಲ್ಲಿ ಲಗೇಜ್ ಇಡಿಸಿದರು. ಉದ್ದನೆ ನಿಲುಗನ್ನಡಿಯ ಮುಂದೆ ಕೂತು ಕೋಣೆಯನ್ನು ವೀಕ್ಷಿಸಿದೆ. ನಡುಮನೆಗೆ ಸೇರಿದಂತೆ ಗೋಡೆಯೊಂದು ಬಿಟ್ಟರೆ ಮೂರೂ ಕಡೆಯೂ ದೊಡ್ಡ ದೊಡ್ಡ ಗಾಜಿನ ಕಿಟಕಿಗಳು. ಗಾಜಿನ ಮನೆಯೇ ಎಂದುಕೊಂಡೆ.
ಅಡಿಗೆಯವನು ತಂದಿಟ್ಟ ದಪ್ಪ ದಪ್ಪ ಚಪಾತಿ ಜೊತೆ ಬೇಯಿಸಿದ ಆಲೂಗಡ್ಡೆಯನ್ನು ನೆಂಚಿಕೊಂಡು ಬಾಯಿ ತುಂಬ ತುರುಕಿಕೊಂಡು ತಿನ್ನುತ್ತಿದ್ದ ಅವರ ಉಬ್ಬಿದ ಕೆನ್ನೆಗಳನ್ನು ನೋಡಿ ಕಿಲ ಕಿಲ ಎಂದು ನಕ್ಕೆ.
‘ಬಾ…..ನೀನೂ ತಿನ್ನು…….ಇದು ಬಿಟ್ರೆ ಆಮೇಲೇನೂ ಸಿಗಲ್ಲ…..ಅಲ್ಲಿ ಹಾಗೆ ದೋಸೆ, ಇಡ್ಲಿ ಏನು ಇಲ್ಲ- ಸದ್ಯ ಏಕಾದಶಿಯಾದೀತು ಬಾ……. ಇದೇ ಎಲ್ಲ ಅಂದ್ಕೊಂಡು ಹೊಟ್ಟೆಗೆ ತುರುಕಿಕೊಳ್ಳಬೇಕು’ ಎಂದು ಅವರು ಹೇಳಿದಾಗಲೂ ನನಗೆ ಅದನ್ನು ಮುಟ್ಟಬೇಕು ಎನಿಸಲಿಲ್ಲ. ಬೆಳಿಗ್ಗೆ ಮಾಡಿದ ಊಟ ಎಂದೋ ಕರಗಿ ಹೊಟ್ಟೆ ತಾಳ ಹಾಕುತ್ತಿತ್ತು. ಆದರೂ ಎದುರಿಗೆ ನಿಂತಿದ್ದ ಅಡಿಗೆಯವನ ಕೆಂಪುಮೋರೆಯನ್ನು ಕಂಡ ಮೇಲೆ ಏನೂ ತಿನ್ನಬೇಕೆನಿಸಲಿಲ್ಲ.
‘ಕನ್ಸಾಮ, ರೋಟಿ ದೇದೋ” ಎಂದು ಅಡುಗೆಯವನಿಗೆ ನನಗೆ ಬಡಿಸಲು ಹೇಳಿದರು. ನಾನು ತಿಂದ ಶಾಸ್ತ್ರ ಮಾಡಿದೆ.
‘ಬಾ ಹಾಗೇ ಒಂದು ರೌಂಡ್ ಹೋಗ್ಬಿಟ್ಟು ಬರೋಣ’ ಎಂದರು. ಮೇಲೆದ್ದೆ.
ಮತ್ತೆ ಆ ಗೂರ್ಖ ರಾಮ್‍ಬಾಲಿಯ ದರ್ಶನ! …ಎದೆಯಲ್ಲಿ ರೈಲಿನ ಗಾಲಿಗಳು ಉರುಳುತ್ತಿರುವ ಹಾಗಾಯಿತು. ಎಂಟು ಗಂಟೆಯ ಛಳಿಯಲ್ಲೂ ಮೊಣಕೈ, ಮುಂಗೈಗಳು ಒದ್ದೆಯಾದವು. ಅವನ ಗಡಸು ಮುಖ, ಹೆದರಿಸುವ ಕಂಗಳ ಬಗ್ಗೆ ಇವರಲ್ಲಿ ಹೇಳೋಣವೆಂದು ಬಾಯ್ತೆರೆದವಳಿಗೆ ಅವರ ಪ್ರತಿಕ್ರಿಯೆ ಗೊತ್ತಿದ್ದರಿಂದ ತೆಪ್ಪಗೆ ಹೊರಟೆ.
ಸಂಜೆಯಲ್ಲಿ ಕಂಡ ಕಣ್ಮನ ಸೂರೆಗೊಂಡ ಹಸಿರು ರಾಶಿ ಕಪ್ಪಾಗಿ ಮುಖಕ್ಕೆ ಅಪ್ಪಳಿಸಿ ಬರುತ್ತಿತ್ತು. ರೆಸ್ಟ್ ಹೌಸ್ ಸುತ್ತಲೂ ಒಂದು ಸುತ್ತು ಬಂದು ಅಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತೆವು. ಬೆನ್ನ ಮೇಲೆ ಯಾವುದೋ ಕಣ್ಣುಗಳು ಚುಚ್ಚುತ್ತಿರುವಂತೆ ಅನಿಸಿ ಗಕ್ಕನೆ ಹಿಂತಿರುಗಿ ನೋಡಿದೆ. ಅದೇ ಗೋಲಿಕಣ್ಣುಗಳು….ರಾಮ್ ಬಾಲಿ ನಮ್ಮನ್ನು ಹಿಂಬಾಲಿಸುತ್ತಿರುವ ಗುಮಾನಿ ಎದ್ದಿತು. ತುಟಿ ಬಿಚ್ಚದೆ, ಅವರು ನಡೆದ ಕಾಡ ಹಾದಿಯಲ್ಲಿ ಹೆಜ್ಜೆಯಿರಿಸಿದೆ.
ರಾತ್ರಿ ಹಿಂತಿರುಗುವುದರಲ್ಲಿ ರೆಸ್ಟ್ ಹೌಸಿನ ತುಂಬ ಕಲಕಲ ನಿನಾದ..
‘ಎಗ್ಸಿಕ್ಯುಟವ್ ಎಂಜಿನಿಯರ್ ಕುಲಶ್ರೇಷ್ಠ್ ಅವನ ಫ್ಯಾಮಿಲಿ ಬಂದಿರಬೇಕು’ ಎಂಡು ತಮ್ಮಲ್ಲೇ ಗುನುಗುನಿಸಿಕೊಂಡು ಸಂತಸದಿಂದ ಮೆಟ್ಟಿಲುಗಳ ಮೇಲೆ ಕುಪ್ಪಳಿಕೆಯ ಹೆಜ್ಜೆಯಿರಿಸಿ ಒಳನಡೆದರು.
ಗುಜ್ಜಾರಿ ಹೆಂಗಸು ಅಡ್ಡಡ್ಡಕ್ಕೆ ಬಳುಕುತ್ತ ಬಂದು ಹಲ್ಕಿರಿದು ‘ನಮಸ್ತೆ ಬೆಹೆನ್’ ಎಂದಳು. ಯಾಂತ್ರಿಕವಾಗಿ ಕೈ ಮುಗಿದೆ. ನನ್ನ ಸುತ್ತ ಅವಳ ಏಳು ಮಕ್ಕಳು ಪ್ರದಕ್ಷಿಣೆ ಹಾಕುತ್ತಿದ್ದರು. ಮಾತು ಬರುತ್ತಿದ್ದರೂ ಇಬ್ಬರೂ ಮೂಕರಾಗಿ ನಿಲ್ಲಬೇಕಾಯಿತು. ಅವಳ ತುಂಟಮಕ್ಕಳಲ್ಲಿ ಇಬ್ಬರು ಹೋಗಿ ಅವರ ತಂದೆಯ ಭುಜವನ್ನು ಎಳೆಯುತ್ತ ಏನೋ ಕೇಳುತ್ತಿದ್ದರು. ಇನ್ನೊಂದು ಹುಡುಗಿ ತಾಯಿಯ ಬೊಜ್ಜಿನ ನೆರಿಗೆಯನ್ನು ತಿವಿಯುತ್ತಿದ್ದಳು. ಇನ್ನಿಬ್ಬರು ಹುಡುಗರು ಮೂಲೆಯಲ್ಲಿದ್ದ ಗುಂಡುಮೇಜಿನ ಮೇಲೆ ಹತ್ತಿ ನಿಂತು ‘ದಬದಬೇ’ ಕುಣಿಯುತ್ತಿದ್ದರು. ಇನ್ನೊಂದು, ಕಿಟಕಿ ಬಾಗಿಲುಗಳನ್ನು ‘ಪಟಪಟ’ ಹಾಕಿ ತೆಗೆದು ಅಲ್ಲಾಡಿಸುತ್ತಿತ್ತು. ಕ್ಷಣಾರ್ಧದಲ್ಲಿ ನಡುಮನೆ ಅವಳ ಮಕ್ಕಳ ಅಸಾಧ್ಯ ಗಲಾಟೆಯ ದನಿಯಿಂದ ತುಂಬಿಹೋಗಿತ್ತು.!…ನಂಗೆ ಹಿಂದಿ ಬರದು…ಅವಳಿಗೆ ಇಂಗ್ಲೀಷ್ ಬರದು. ಸುಮ್ಮನೆ ಮಿಕಿ ಮಿಕಿ ಮುಖ ನೋಡುತ್ತಿದ್ದೆವು. ಆ ಕೊರತೆಯನ್ನು ಪರಸ್ಪರ ನಗುವಿನ ಮುಖಭಾವದಿಂದ ರಮಿಸಲು ಪ್ರಯತ್ನಿಸಿದೆವು.
ಏನೋ ನೆಪ ಮಾಡಿ ರೂಮಿಗೆ ಹೋಗಿ ಕುಕ್ಕರಿಸಿಕೊಂಡೆ. ಸಂದಿಸಂದಿಯಿಂದಲೂ ಹುಡುಗರ ಕಿರುಚಾಟದ ದೊಂಬಿ ದನಿ. ಲೋಟ ಉರುಳಿಸಿದ ಸದ್ದು-ಕಚ್ಚಾಟ, ಚಾಡಿ, ಅಳು, ಕಿವಿಯಲ್ಲಿ ಬೆರಳು ಅದ್ದಿ ಮಲಗಿದೆ. ಪ್ರಯಾಣದ ಆಯಾಸದಿಂದ ನಿದ್ದೆ ನುಗ್ಗಿ ಬರುತ್ತಿದ್ದರೂ ಬಡಿದೇಳಿಸುವ ‘ಧಡಂ ಧುಡುಂ’ ಸದ್ದುಗಳು….
‘ಅರೆ ಟಿಲ್ಲು, ಬಬ್ಲೂ, ಡಬ್ಲೂ, ಗಬ್ಲೂ, ಗುಡಿಯಾ….’ ಕೀರಲುದನಿಯಲ್ಲಿ ಉದ್ದವಾಗಿ ಕೂಗಿಕೊಳ್ಳುತ್ತಿದ್ದಳು ಆ ಹೆಂಗಸು.
‘ಥೂ ಎಲ್ಲಿಯ ದರಿದ್ರದವು.. ಒಳ್ಳೇ ಕಾಟ ಆಯ್ತಲ್ರೀ’ ಎಂದು ಗೊಣಗಾಡಿದೆ.
‘ಷ್…ಸುಮ್ನಿರು..ಅವರು ನಾಳೆಯವರೆಗೂ ಇಲ್ಲೇ ಇರ್ತಾರೆ’ ಎಂದಾಗ ಗತ್ಯಂತರವಿಲ್ಲದೆ, ಗಟ್ಟಿಯಾಗಿ ಮುಸುಕು ಹೊದ್ದು ಮಲಗಿದೆ.
ಬೆಳಿಗ್ಗೆ ಊಟದ ಮೇಜಿನ ಸುತ್ತಲೂ ಆ ಮಕ್ಕಳು, ತಾಯಿಯ ಹತೋಟಿಗೆ ಬಾರದೆ ಮಂಗಗಳ ಥರ ಕುಣಿದಾಟ ನಡೆಸಿದ್ದವು.
ಊಟ ಮುಗಿಸಿ, ಹೊರಗೆ ಇವರೊಡನೆ ಹುಲ್ಲುಹಾಸಿನ ಮೇಲೆ ಕೂತಿದ್ದೆ. ಹತ್ತು ನಿಮಿಷದಲ್ಲೇ ರಾಮ್ ಬಾಲಿ ಓಡುತ್ತ ಬಂದ. ಹಿಂದಿಯಲ್ಲಿ ಇವರಿಗೇನೋ ಹೇಳಿದ. ಅವರು ನನ್ನತ್ತ ತಿರುಗಿ-‘ನೀತಿ, ಎಸ್.ಇ.ಯಿಂದ ಪೋನ್ ಬಂದಿದೆಯಂತೆ, ನಾಳೆ ಡ್ಯೂಟಿಗೆ ರಿಪೋರ್ಟ್ ಮಾಡಿ ಕೊಂಡ್ರಾಯಿತು ಅಂತಿದ್ದೆ… ಈಗಲೇ ಅರ್ಜೆಂಟಾಗಿ ಬಂದು ನನ್ನ ನೋಡಿ ಅಂತ ಹೇಳಿ ಕಳುಹಿಸಿದ್ದಾರಂತೆ’ ಎಂದು ನನ್ನನ್ನೆಬ್ಬಿಸಿ ರೂಮಿನವರೆಗೂ ಕರೆತಂದು ಬಿಟ್ಟು,
‘ಧೈರ್ಯವಾಗಿರು…..ಏನೂ ಹೆದ್ರಿಕೆ ಇಲ್ಲ, ಇಲ್ಲಿರೋ ಜನರೆಲ್ಲ ಒಳ್ಳೋರು…… ಮಿಸೆಸ್ ಕುಲಶ್ರೇಷ್ಠ ಅವಳ ಪರಿವಾರ ಇರೋದ್ರಿಂದ ಚೂರೂ ಯೋಚ್ನೆ ಇಲ್ಲ. ಏನೇನೋ ಕಲ್ಪನೆ ಮಾಡಿಕೊಂಡು ಹೆದರಿಬಿಡಬೇಡ… ಬೋರ್ ಆದರೆ ನಿನ್ನ ಸಂಗಾತಿ ಕಥೆ ಪುಸ್ತಕಗಳು ಇದ್ದೇ ಇವೆಯಲ್ಲ..ಓದ್ತಿರು, ಬೇಗ ಬಂದು ಬಿಡ್ತೀನಿ’ ಎಂದು ನಕ್ಕು ನನ್ನವರು, ನನ್ನ ಕೆನ್ನೆ ತಟ್ಟಿ ನನ್ನ ಉತ್ತರಕ್ಕೂ ಕಾಯದೆ ಜೀಪ್ ಹತ್ತಿಯೇ ಬಿಟ್ಟರು. ಏಕಾಏಕಿ ನನ್ನನ್ನು ಹೀಗೆ ಬಿಟ್ಟುಹೋದ ಅವರ ಮೇಲೆ ಸಿಟ್ಟು ಉಕ್ಕಿ ಹರಿಯಿತು…ನನ್ನ ಮೊಂಡಾಟ ಆಲಿಸಲು ಅಲ್ಲಿ ಯಾರೂ ಇರದ್ದರಿಂದ ಅಸಹಾಯಕತೆಯಿಂದ ಮೆತ್ತಗಾಗಿ ಮಂಚದ ಮೇಲೆ ಹೋಗಿ ಬಿದ್ದುಕೊಂಡೆ.
ಚೆನ್ನಾಗಿ ನಿದ್ದೆ ಹತ್ತಿತು…ಅದೆಷ್ಟೋ ಹೊತ್ತಾಗಿರಬೇಕು…ಸುತ್ತ ಕವಿದ ನೀರವ ಗಮನಕ್ಕೆ ಬಂತು…ಕಣ್ಣುಜ್ಜುತ್ತ ಹೊರಗೆ ಬಂದು ನೋಡಿದೆ. ಯಾರೂ ಇಲ್ಲ!… ನಡುಮನೆಗೆ ಸೇರಿದ ಇನ್ನಿತರ ಕೋಣೆಗಳಲ್ಲೂ ಇಣುಕು ಹಾಕಿ ನೋಡಿದೆ. ಆಶ್ಚರ್ಯ!…ಒಂದು ನರಪಿಳ್ಳೆಯೂ ಇಲ್ಲ!!..ಅಚ್ಚರಿಯ ಜೊತೆಗೆ ಸಣ್ಣ ಭಯವೂ ತೆವಳಿತು.
ಅರೇ, ಎಲ್ಲಿ ಹೋದರು ಅವರೆಲ್ಲ?…ಹುಚ್ಚಿಯಂತೆ ಇಡೀ ರೆಸ್ಟ್ ಹೌಸ್ ತಲಾಶ್ ಮಾಡಿದೆ. ಇಲ್ಲಿ ಆ ಸಂಸಾರ ಇದ್ದದ್ದೇ ಸುಳ್ಳೇನೋ ಎನಿಸುವಂಥ ಎದೆ ಗುದ್ದುವ ನಿಶ್ಶಬ್ದ..
ರಾತ್ರಿ ಅವರು ಹೇಳಿದ ಮಾತು ನೆನಪಿಗೆ ಬಂತು – ‘ ಕುಲಶ್ರೇಷ್ಟ್ಗೆ ನಮಗಿಂತ ತುಂಬ ಬೇಗನೆ ಕ್ವಾಟರ್ಸ್ ಸಿಕ್ಕರೂ ಸಿಗಬಹುದು.’
‘ ಓ ಮಲಗಿದ ನನ್ನನ್ನು ಏಕೆ ಎಬ್ಬಿಸುವುದೆಂದು ಪಾಪ ಅವರು ನನಗೆ ಹೇಳದೇನೇ ಹಾಗೇ ಹೊರಟು ಹೋಗಿರಬೇಕು… ಬಾಗಿಲು ಹಾಕಿಕೊಂಡು ಮಲಗಿದ ನನಗೆ ಹೇಗೆ ತಾನೇ ಅವರು, ಯಾವ ಭಾಷೆಯಲ್ಲಿ ಹೇಳಿ ಹೋಗಲು ಸಾಧ್ಯ..ಬಾಗಿಲು ತಟ್ಟಿದರೆ ಸರಿ ಹೋಗಲ್ಲವೆಂದು ಹಾಗೇ ಹೊರಟು ಹೋಗಿದ್ದಾರೆ’ ಎಂದು ನಾನೇ ತರ್ಕಿಸಿದೆ. .
ರಾತ್ರಿ ದಟ್ಟವಾಗುತ್ತ ಬಂದಿತ್ತು. ಇವರು ಬರುವ ಸುಳಿವೇ ಇರಲಿಲ್ಲ. ರಾತ್ರಿಯ ಜೊತೆ ಮೌನದ ಹೆಪ್ಪೂ ನಡೆದಿತ್ತು. ಮನದಲ್ಲಿ ಏನೇನೋ ಆಲೋಚನೆಗಳು…ಇಲ್ಲಿ ಬೇರೆ ಯಾರೂ ಹೆಂಗಸರೇ ಇಲ್ವೇ?.. ಕೆಲಸದವಳೂ ? ಎಂದುಕೊಳ್ಳುತ್ತಾ, ಒಂದು ಹೆಜ್ಜೆ ಮೇಲೆತ್ತಿದ್ದೆನಷ್ಟೇ. ಎದುರಿಗೆ ರಾಮ್ ಬಾಲಿಯ ಗೋಲಿ ಕಣ್ಣುಗಳು ಕಂಡವು. ನನಗೆ ಬಾರದ ಭಾಷೆಯಲ್ಲಿ ಅವನನ್ನು ಹೇಗೆ ತಾನೇ ಪ್ರಶ್ನಿಸಲಿ ಎಂಬ ಭಾಷಾ ಸಮಸ್ಯೆ ಅಡ್ಡ ನಿಂತಿತು.
ಅವನು ಮುಂದಡಿ ಇಡದಂತೆ ಎದುರಿಗೆ ಗೋಡೆಯಂತೆ ಅಡ್ಡ ನಿಂತಿದ್ದ. ಅವನ ಬಿರುನೋಟ ನನ್ನ ಇಡೀ ದೇಹವನ್ನು ನುಂಗುವಂತೆ ಆವರಿಸಿತ್ತು. ಅವನ ಪರಿಪುಷ್ಟ ಗೂಳಿಯಂಥ ತುಂಬಿದ ಎದೆ ನನ್ನತ್ತ ಹಾಯ್ದಂತಾಗಲು ನಾನು ತೆಳ್ಳಗೆ ನಡುಗುತ್ತ, ಸರ್ರನೆ ಓಡಿಹೋಗಿ ರೂಮಿನ ಬಾಗಿಲು ಹಾಕಿಕೊಂಡೆ. ಏದುಸಿರು ಮೇಲೆ ಕೆಳಗೆ ಸಶಬ್ದವಾಗಿ ಆಡತೊಡಗಿತು.
ನಡುಗುವ ಕೈ ಕಾಲುಗಳು ಸಮಸ್ಥಿತಿಗೆ ಬರಲು ಹತ್ತು ನಿಮಿಷಗಳೇ ಬೇಕಾಯಿತು. ಬಾಗಿಲಿಗಿದ್ದ ದಪ್ಪ ಅಷ್ಟೇ ಉದ್ದವಾದ ಮೂರು ಚಿಲಕಗಳನ್ನೂಸರಸರನೆ ಹಾಕಿ, ಕಿಟಕಿ ಕಡೆ ಬಂದು ಬೇಗ ಬೇಗ ಎಲ್ಲ ಕಿಟಕಿಗಳನ್ನೂ ಮುಚ್ಚುವಷ್ಟರಲ್ಲಿ ಕೈ ಸೋತು ಹೋಯಿತು. ಅಬ್ಬಾ!…ವಿಶಾಲವಾದ ಈ ಕೋಣೆಗೆ ಎಷ್ಟೊಂದು ಬಾಗಿಲುಗಳು!.. ಆದರೆ ಭದ್ರತೆ ?.. ನನ್ನ ಕೋಮಲ ಕೈಗಳ ಹೊಡೆತಕ್ಕೆ ಒಡೆದು ಬೀಳುವಷ್ಟು ದುರ್ಬಲ ಕಿಟಕಿಯ ಗಾಜುಗಳು….ಪರದೆಗಳನ್ನು ಎಳೆದೆಳೆದು ಮುಚ್ಚಿದೆ… ಆದರೂ ಸಮಾಧಾನವಿಲ್ಲ…
ಮೆಲ್ಲನೆ ಪರದೆಯನ್ನು ತುಸು ಸರಿಸಿದ ನನ್ನ ದೃಷ್ಟಿ , ಗಾಜಿನ ಆಚೆ ನುಸುಳಿತು.
ಹೃದಯ ಅಲುಗಾಡಿದಂತಾಯಿತು…ಹುಲ್ಲಿನ ಮೇಲೆ ನೆಲದಿಂದ ನನ್ನುದ್ದ ಕುಳಿತಿದ್ದ ಒಂದು ಬಿಳೀ ಗಡವ ಪ್ರಾಣಿ ಭಯ ಎರಚುತ್ತ ನನ್ನನ್ನೇ ನುಂಗುವಂತೆ ನೋಡುತಿತ್ತು. ಮೈತುಂಬ ಮಾಸಲು ಬಿಳೀಬಣ್ಣದ , ಕೂದಲಿನ ದಟ್ಟ ಕಾಡು. ಹಿಂಗಾಲುಗಳ ಮೇಲೆ ಆ ಪ್ರಾಣಿ ಕುಳಿತುಕೊಂಡಿತ್ತು.
ನಾನೂ ಎವೆಯಿಕ್ಕದೆ ದಿಟ್ಟಿಸಿದೆ. ಅದು ಒಮ್ಮೆ ತಲೆ ಎತ್ತಿತು. ಮುಷ್ಯ ಹೀಗೆ ಇರುತ್ತದೆ ಎಂದು ಯಾವುದೋ ಪುಸ್ತಕದಲ್ಲಿ ಓದಿದ ನೆನಪು. ಕಡುಗಪ್ಪು ಮುಖ, ಬಿರಿದ ಮೂಗು, ಗಡ್ಡ, ಕಣ್ಣಿನ ಮೇಲೆ ಇಳಿಬಿದ್ದ ಪೊದೆ ಹುಬ್ಬು, ವಿಕಾರ ಮುಖ ನೋಡುತ್ತಿದ್ದಂತೆ ರಾಮ್ ಬಾಲಿಯೇ ಎದುರಿಗೆ ಬಂದು ನಿಂತಂತಾಗಿ, ಎದೆಯ ತುಂಬ ಸರಸರ ಶಬ್ದ. ಹೃದಯ ಹಾರಿತು!!..
ಓದಿ ಹೋಗಿ ಧೊಪ್ಪನೆ ಹಾಸಿಗೆಗೆ ಕವುಚಿ ಬಿದ್ದು, ದಪ್ಪನೆಯ ರಗ್ಗನ್ನು ಹೊದ್ದು ಶವದಂತೆ ಮಲಗಿದೆ. ಎದೆಯಲ್ಲಿ ಗಡಿಯಾರದ ಹತ್ತು ಸದ್ದು ರಿಂಗಣಗುನಿಸಿತು. ಢಣ್ ಢಣ್ ……ನಂತರ ಸ್ಮಶಾನ ಮೌನ… ನಿನ್ನೆ ರಾತ್ರಿ ಇಡೀ ಬಿಲ್ಡಿಂಗ್ ಹಾರಿಹೋಗುವಂಥ ಮಕ್ಕಳ ಗಲಾಟೆಯ ಚಿಟಿ ಚಿಟಿ … ಆದರೀಗ ಅವೆಲ್ಲ ಸುಳ್ಳು ಅನ್ನುವಂತೆ ಗಡಚಿಕ್ಕುವ ಮೌನ ಎದೆ ಬಿರಿಸುತ್ತಿದೆ…. ಮನಸ್ಸು ಗುಬ್ಬಳಿಸಿತು..ಛೆ..ಆ ಮಕ್ಕಳಾದರೂ ಇದ್ದಿದ್ರೆ……
ನಿನ್ನೆ ಅವರ ಗಲಾಟೆಯನ್ನು ನನ್ನ ಕಿವಿಗಳು ಕೇಳಿದ್ದು ನಿಜವೇ ಎಂದು ಅನುಮಾನ ಬರುವಷ್ಟು ಸಾಯಿಸುವ ನಿಡು ಮೌನ ಬೆಳೆಯುತ್ತಿದೆ. ಅವರ ಗಲಾಟೆ ನೆನೆಸಿಕೊಂಡರೂ ನೆನಪಿಗೆ ಬಾರದಷ್ಟು ದಟ್ಟ ಮೌನ. ಉಸಿರಿನಿಂದ ರಗ್ಗು ಏರಿಳಿತವಾಗುವುದನ್ನು ಕಂಡು ತನಗೇ ಏನೋ ಶಂಕೆ.
‘ಢಣ್’ ಹತ್ತೂವರೆಯೂ ಹೊಡೆದು ಬಿಟ್ಟಿತು.. ಹೊಸದಾಗಿ ಮದುವೆಯಾದ ಹೆಂಡತಿ ಒಬ್ಬಳನ್ನೇ ಬಿಟ್ಟು ಹೋಗಿದ್ದಾರಲ್ಲ. ಇವರೆಂಥ ಗಂಡಸು! ತಿಳುವಳಿಕೆ ಇಲ್ಲದ ಮನುಷ್ಯ..’ ಎಂದು ಇನ್ನೂ ಬಾರದ ಅವರ ಮೇಲೆ ಉರಿ ಕಾರಿದೆ. ಬರಲಿ… ಮಾಡ್ತೀನಿ….ಅವರೆಷ್ಟೇ ವಿರೋಧಿಸಿದರೂ, ಕೇಳಿಕೊಂಡರೂ ನಾಳೇನೆ ನಾನು ಬೆಂಗಳೂರಿಗೆ ಹೊರಟು ಬಿಡ್ತೀನಿ,…ಎಂಥ ಬೇಜವಾಬ್ದಾರಿ ಮನುಷ್ಯ’ ಎಂದು ಕೋಪದಿಂದ, ದುಃಖದಿಂದ ಗುನುಗುನಿಸಿದೆ.
ಗಾಳಿಯ ಭರತಕ್ಕೆ ಮರಗಳ ‘ಸುಯ್’ ಮೊರೆತ… ಬಾಗಿಲು-ಕಿಟಕಿಗಳ ಗಾಜುಗಳು ಬಡಿದುಕೊಳ್ಳುತ್ತಿವೆ. ಇಡೀ ರೆಸ್ಟ್ ಹೌಸಿಗೆಲ್ಲ ನಾನೊಬ್ಬಳೇ..ಇಲ್ಲಾ… ಆ ಅಡಿಗೆಯವ ಮತ್ತು ರಾಮ್ ಬಾಲಿ ಮೂರೇ ಜನ! ಹಾಗೆಂದು ನೆನೆದು ಮತ್ತೆ ಉಸಿರು ವೇಗವಾಯಿತು. ನಾಲಗೆಯನ್ನು ಬಿಸಿಲಿಗೆ ಒಣಗಿ ಹಾಕಿದ ಹಾಗಾಯಿತು. ನೀರು ಬೇಕೆನಿಸಿತು. ಆದರೆ ಅಲುಗಾಡಲೂ ಸಹ ಹುಚ್ಚು ಭಯ. ಬಲವಂತವಾಗಿ ಕಣ್ಣು ಮುಚ್ಚಲೆತ್ನಿಸಿದೆ.
ಹನ್ನೊಂದು ಹೊಡೆಯಿತು.. ಗಾಳಿಗೆ ಗಾಜಿನ ಬಾಗಿಲು ಇನ್ನೂ ಹೊಡೆದುಕೊಳ್ಳುತ್ತಲೇ ಇತ್ತು.
‘ಥುತ್- ಉಳಿದ ರೂಮಿನ ಬಾಗಿಲುಗಳನ್ನು ಹಾಕೇ ಇಲ್ವೇನೋ?’ ಎಂದು ಗೊಣಗಿಕೊಳ್ಳುತ್ತ ಹೆಚ್ಚುತ್ತಿದ್ದ ಭಯವನ್ನು ನಿದ್ದೆಯಲ್ಲಿ ತುರುಕಲು ಪ್ರಯತ್ನಿಸುತ್ತಾ ಕಂಬಳಿಯ ಗುಪ್ಪೆಯಾದೆ. ಕಣ್ಣು ಮುಚ್ಚಿದರೆ ದೊಡ್ಡ ಗೋಲಿಕಣ್ಣುಗಳ ಉರಿನೋಟ ಮೈಯನ್ನೆಲ್ಲ ಸುಟ್ಟು ಹಾಕಿತು. ನಿಲ್ಲದ ಹೊರಳಾಟ.
ಫಳಾರನೆ ಗಾಜು ಒಡೆದ ಸದ್ದು. ರೂಮಿನ ತುಂಬ ಕಿಟಕಿ ಬಾಗಿಲುಗಳ ಗಾಜಿನ ಚೂರುಗಳು ಚೆಲ್ಲಿದ್ದವು. ಮೆಲ್ಲನೆ ರಾಮ್ ಬಾಲಿ ಕಿಟಕಿಯಿಂದ ಒಳಗಿಳಿದು ಬಂದ. ಅವನ ಒರಟು ಹೆಜ್ಜೆಯ ಸಪ್ಪಳ, ಕಮಟು ವಾಸನೆ, ಅವನ ಮುಷ್ಯದ ರೂಪ ಕಂಡು ನನ್ನ ದನಿ ಹೂತುಹೋಯಿತು.
ಬೆಳಗ್ಗೆ ಅವನೇ, ಇವರನ್ನು ನನ್ನಿಂದ ದೂರ ಮಾಡಲು ಪೋನ್ ಬಂದಿದೆ ಎಂದು ಹೇಳಿದ್ದು ಸುಳ್ಳು ಎಂದು ಹೊಳೆದು ಹೋಯಿತು. ನನ್ನ ಕಣ್ಣುಗಳ ಶಕ್ತಿ ಸೋರಿ, ಕೈಕಾಲುಗಳು ಲಕ್ವ ಹೊಡೆದಂತೆ ಸುರುಟುಕೊಂಡು ನಿಶ್ಚೇಷ್ಟಿತವಾಗಿ ಬಿದ್ದುಬಿಟ್ಟವು.
ಏನಾಯಿತು ಎಂದು ಗೊತ್ತಾಗುವಷ್ಟರಲ್ಲಿ, ಅವನು ನನ್ನ ಬಳಿ ಹಾರಿ ಒರಟಾಗಿ ರಗ್ಗು ಕಿತ್ತು, ಬಗ್ಗಿ, ತನ್ನ ಬಲಿಷ್ಠ ರೋಮದ ಕೈಗಳಿಂದ ನನ್ನನ್ನು ಬಲವಾಗಿ ಅಪ್ಪಿಕೊಂಡ. ಉಸಿರು ಸಿಕ್ಕಿ ಹಾಕಿಕೊಂಡಿತು. ಕೊಸರಾಡಿದೆ. ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಜೋರಾಗಿ ಅವನನ್ನು ತಳ್ಳಿ ಕಿಟಾರನೆ ಕಿರುಚಿದೆ.
ಹೊರಗೆ ಜೀಪಿನ ಸದ್ದಾಯಿತು. ಧಡ ಧಡ ಮೆಟ್ಟಿಲನ್ನು ಹತ್ತುವ ಬೂಟು ಕಾಲಿನ ಶಬ್ದ. ರೂಮಿನ ಬಾಗಿಲು ತಟ್ಟಿದರು. ಮೆಲ್ಲನೆದ್ದು ಚಿಲಕ ಸರಿಸಿದೆ.
ಅವರ ಜೊತೆ ರಾಮ್‍ಬಾಲಿ, ಅಡಿಗೆಯವ ಎಲ್ಲರೂ ಒಟ್ಟಿಗೆ ಒಳ ನುಗ್ಗಿದರು.
‘ಕ್ಯಾ ಬಾಯಿ’ ಎಂದು ಅಡಿಗೆಯವ ಗಾಬರಿಯಿಂದ ಪ್ರಶ್ನಿಸಿದಾಗ, ನನ್ನ ತೋಳುಗಳಲ್ಲಿ ಹರಿಯುತ್ತಿದ್ದ ರಾಮ್ ಬಾಲಿಯ ಅಸಹ್ಯ ಸ್ಪರ್ಶವನ್ನು ಒರೆಸಿಕೊಳ್ಳುತ್ತ ಓಡಿ ಬಂದು ಅವರ ಎದೆಯಲ್ಲಿ ಮುಖ ಹುದುಗಿಸಿ ರಾಮ್ ಬಾಲಿಯತ್ತ ಬೆರಳು ತೋರಿಸಿ ಬಿಕ್ಕಿದ್ದೆ.
ನನ್ನ ಅಸ್ತವ್ಯಸ್ತವಾಗಿದ್ದ ಸೀರೆ, ಕೂದಲನ್ನು ಸರಿಪಡಿಸುತ್ತ ಅವರು ನನ್ನನ್ನು ಮಂಚದ ಮೇಲೆ ಕೂಡಿಸಿ, ಕೋಪದಿಂದ ತಮ್ಮ ಸೊಂಟದ ಬೆಲ್ಟ್ ಬಿಚ್ಚಿ ರಾಮ್ ಬಾಲಿಗೆ ರಪರಪನೆ ಬಡಿಯತೊಡಗಿದರು. ಬೂಟು ಕಾಲಿನಿಂದ ಅವನನ್ನು ಬಲವಾಗಿ ಝಾಡಿಸುತ್ತಿದ್ದರು.
ನನ್ನ ಮೈಯಲ್ಲಿ ತರಗೆಲೆ ನಡುಕ. ಅಳು ನಿಲ್ಲಿಸಿ ಮೆಲ್ಲನೆ ಎದುರಿನ ಕಿಟಕಿಗಳ ಕಡೆ ಕಣ್ಣು ಹೊರಳಿಸಿದಾಗ ಎದೆ ಹಾರುತ್ತದೆ!… ಮೊದಲಿನ ಹಾಗೆಯೇ ನೀಟಾಗಿದ್ದ, ಒಡೆಯದಿದ್ದ ಕಿಟಕಿಯ ಗಾಜುಗಳು ನನ್ನನ್ನು ಗುದ್ದುತ್ತಿರುವಂತೆ ಭಾಸವಾಯಿತು.
*********************