ಪದ್ಮಾವತಿಗೆ ಬೆಳಗ್ಗೆ ಐದಕ್ಕೆಲ್ಲ ಬಾರಿಸಿದ ಹಾಗೆ ಎಚ್ಚರವಾಗುತ್ತದೆ. ಬಲ ಮಗ್ಗುಲಾಗೆದ್ದು ಕೈ ಉಜ್ಜಿ ಕಣ್ಣಿಗೆ ನೀವಿ, ದೇವರ ಪಟಕ್ಕೆ ಕೈಮುಗಿದು ಸೀದಾ ಬಚ್ಚಲು ಮನೆಗೆ ನಡೆಯುತ್ತಾಳೆ. ಸ್ನಾನ ಮಾಡಿಕೊಂಡು ಬಂದು, ಮಡಿಯ ಸೀರೆಯನ್ನು ಕೋಲಿನ ಮೇಲೆ ಹರವಿ, ಮಡಿ ನೀರನ್ನು ಹಿಡಿದುಕೊಂಡು ಬಂದು ಮಣ್ಣಿನ ಒಲೆಯ ಮೇಲಿಟ್ಟು ಮುಂದಿನ ಕೆಲಸಗಳಿಗೆ ತೊಡಗುತ್ತಾಳೆ.
ಪದ್ಮಾವತಿ ಸ್ನಾನಕ್ಕೆ ಹೋಗುವಷ್ಟರಲ್ಲಿ ಅವಳ ಅತ್ತೆಯೂ ಎದ್ದಾಗಿರುತ್ತದೆ. ಒಲೆ ಉರಿ ಮಾಡಿ ಸೊಸೆಯ ಮಡಿನೀರು ಕಾಯಿಸಲಿಕ್ಕೆ ಹಾಕಿದ್ದ ಮಣ್ಣಿನ ಒಲೆಯೊಳಗೆ ಸ್ವಲ್ಪ ಕೆಂಡ ಹರಡಿ ಒಂದೆರಡು ಕಲ್ಲಿದ್ದಲನ್ನು ಹಾಕಿ ತಾವು ಸ್ನಾನಕ್ಕೆ ಹೊರಡುತ್ತಾರೆ.
ಪದ್ಮಾವತಿ, ತುಂಬಿಸಿ ತಂದ ಮಡಿನೀರಿನ ಪಾತ್ರೆಯನ್ನು ಮಣ್ಣಿನ ಒಲೆಯ ಮೇಲೆ ಇಡುತ್ತಾಳೆ. ಅದು ಮರುದಿನ ಬೆಳಗ್ಗೆಯ ಹೊತ್ತಿಗೆ ಕಾದು, ಕುದ್ದು ಬೆಚ್ಚಗಾಗಿರುತ್ತದೆ. ಮತ್ತೆ ಪದ್ಮಾವತಿ ಅದನ್ನು ತೆಗೆದುಕೊಂಡು ಹೋಗಿ ಸ್ನಾನ ಮಾಡಿ ಬೇರೆ ನೀರನ್ನು ತಂದು ಇಡುತ್ತಾಳೆ. ಇದು ಅವಳ ಬೆಳಗಿನ ಮೊದಲ ಕೆಲಸ. ಅನಂತರ ಎಲ್ಲರಿಗೂ ಕಾಫಿ ತಯಾರಿಸಿ ಕೊಡುವುದು, ಅಡಿಗೆ ಸಿದ್ಧಮಾಡಿ ಊಟ ಮುಗಿಸಿ ಹೊರಬರಲು ಸೂರ್ಯ ನೆತ್ತಿಯ ಮೇಲೆ ಬಂದು ಎಷ್ಟೋ ಹೊತ್ತಾಗಿರುತ್ತದೆ. ಊಟದ ಮನೆಯಲ್ಲಿ ಸ್ವಲ್ಪ ಹಾಗೇ ಅಡ್ಡಾದರೂ ಅವಳ ಆಯಾಸಗೊಂಡ ಮೈಗೆ ನಿದ್ದೆ ಹತ್ತುವುದಿಲ್ಲ.

ಅಂಗಾತನಾಗಿ ಮಲಗಿ ಕಣ್ಣನ್ನು ಸೂರಿನ ಕಡೆಗೆ ಹರಿಸಿದಾಗ ಮೇಲೆ ಅಗಲವಾಗಿ ಹರವಿದ ಕೆಂಪು ಸೀರೆಯೊಳಗೆ ದೃಷ್ಟಿ ಹೂತು ಹೋಗುತ್ತದೆ. ಒಂದು ದಿನ ಆ ಸೀರೆ ಮೇಲೆ, ಈ ಸೀರೆ ಕೆಳಗೆ ಮೈಮೇಲೆ, ಮರುದಿನ ಈ ಸೀರೆ ಮೇಲೆ , ಆ ಸೀರೆ ಕೆಳಗೆ. ಸೀರೆಗಳ ಎರಡು ಕೊನೆಗಳೂ ಒಂದಾಗಿ ಅದರ ಮಧ್ಯ ತಾನು ಬಂದಿಯಾಗಿ ಅದರೊಳಗೇ ಗಿರಗಿರನೆ ಸುತ್ತುತ್ತಿರುವಂತಾಯಿತು. ಕಣ್ಣುಗಳು ಬಳಲಿ ಮುಚ್ಚಿಕೊಂಡವು. ಕಣ್ಣಿನ ತುಂಬಾ ಕೆಂಪು ಕೆಂಪು. ಬೆಳಗಿನಿಂದ ನಿಗಿನಿಗಿ ಉರಿಯುತ್ತಿರುವ ಕೆಂಡಗಳಲ್ಲೇ ಅಡಿಗೆ ಪೂರೈಸುತ್ತಿದ್ದು, ಕೆಂಪು ಸೀರೆ ಒಗೆದು, ಹರವಿ, ಉಟ್ಟು, ಅದನ್ನೇ ನೋಡಿ ನೋಡಿ ತನ್ನ ಕಣ್ಣುಗಳಿಗೂ ಅದೇ ಬಣ್ಣ ಬಂದು ಬಿಟ್ಟಿರಬೇಕೆಂದು ಅವಳ ಭಾವನೆ. ಸರಕ್ಕನೆದ್ದು ಕನ್ನಡಿಯಲ್ಲಾದರೂ ನೋಡಿಕೊಳ್ಳೋಣವೆನಿಸಿದರೂ ನಡುಮನೆಯಲ್ಲಿ ತೂಗು ಹಾಕಿದ್ದ ಕನ್ನಡಿಯ ಹತ್ತಿರ ಹೋಗಬೇಕಾದರೆ ಅಲ್ಲೇ ಮಲಗಿರುವ ಅತ್ತೆಯನ್ನು ದಾಟಿ ಹೋಗಬೇಕು ಎಂದು ನೆನೆದು ಸುಮ್ಮನಾದಳು.
ಅತ್ತೆ ತುಂಗಮ್ಮನನ್ನು ಕಂಡರೆ ಅವಳಿಗೆ ಅಂಥ ಹೆದರಿಕೆ ಏನೂ ಇಲ್ಲ.
“ಮಡಿಯಾದವಳು ಕನ್ನಡಿ ನೋಡಿಕೊಳ್ಳಲೇಬಾರದು…. ಮನೆಗೇನಾದರೂ ಅನಾಹುತ ಸಂಭವಿಸಿ ಬಿಡತ್ತೆ” ಎಂಬ ಅವರ ಮಾತಿನಲ್ಲಿ ನಂಬಿಕೆಯೂ ಇರಲಿಲ್ಲ. ಈಗ ತನಗೆ ಆಗಿರುವ ಅನಾಹುತವೇ ಸಾಲದೇನು? ಇದರ ಮುಂದೆ ಇನ್ನು ಯಾವ ಅನಾಹುತವಾದರೂ ತನ್ನ ಬದುಕು ಬದಲಾಗುವುದಿಲ್ಲ ಎಂದು ಅವಳಿಗೆ ಖಾತ್ರಿಯಾಗಿತ್ತು. ಆದರೂ ಅವಳು ಅತ್ತೆಯ ಎದುರಿಗೆ ಕನ್ನಡಿ ಹಿಡಿಯಲು ಎಂದೂ ಮುಂದಾಗಿಲ್ಲ. ಎಷ್ಟೋ ಬಾರಿ ತಾನು ಈಗ ಹೇಗಾಗಿದ್ದೀನೆಂಬ ಕುತೂಹಲಕ್ಕೆ ಕದ್ದು ಕನ್ನಡಿಯಲ್ಲಿ ಇಣುಕು ಹಾಕಿದ್ದಾಳೆ…. ಅಷ್ಟೇನೂ ಸೊರಗಿಲ್ಲ… ಯೌವನದ ಕಳೆ ಇನ್ನೂ ತುಂಬಿಕೊಂಡಿದೆ ಎನಿಸುತ್ತದೆ. ತನ್ನ ಮುಖದಲ್ಲಿ ಏನು ಕೊರತೆಯಾಗಿದೆ ಎಂದು ಕನ್ನಡಿಯನ್ನು ತುಂಬಾ ಹೊತ್ತು ದಿಟ್ಟಿಸಲು ಅತ್ತೆ ಪುರಾಣಕ್ಕೆ ಹೋದ ಸಮಯವೇ ಒಳ್ಳೆಯದು. ಹುಡುಗರು, ಮಾವನವರು ಹೊರಕ್ಕೆ ಹೋದವರು ಎಂಟು ಗಂಟೆಯ ಕಡಿಮೆ ಬರುವುದಿಲ್ಲ.
ಮುಂಬಾಗಿಲು ಭದ್ರಪಡಿಸಿ ಕನ್ನಡಿಯ ಮುಂದೆ ನಿಂತರೆ ಹೊರಗೆ ಬಾಗಿಲ ಸಪ್ಪುಳವಾದಾಗಲೇ ಅವಳು ಕದಲುತ್ತಿದ್ದುದು. ಉಬ್ಬಿದ ಕೆನ್ನೆಗಳಲ್ಲಿ ಹೊಳಪು, ಮಾಟವಾದ ಪುಟ್ಟ ಬಾಯಲ್ಲಿ ಮಿಣಿ ಮಿಣಿ ಮಿಂಚುವ ಹಲ್ಲುಗಳು ಏತಕ್ಕಾಗಿ ಎನಿಸಿ ಒಮ್ಮೆಲೆ ನಿರಾಸೆ ಉಕ್ಕಿದರೂ ಆಧಾರವಿಲ್ಲದ ಮುಂದಿನ ಯಾವುದೋ ಅವ್ಯಕ್ತ ಆಸೆ, ಸುಖದ ಕನಸು ಮುಲುಕಾಡುತ್ತದೆ. ಒಳಗೆ ಭರವಸೆಯ ಪಸೆ.
ನಾಲ್ಕಾರು ಭಂಗಿಗಳಲ್ಲಿ ನಿಂತು ತನ್ನ ತಲೆಯ ಮೇಲಿನ ಸೆರಗನ್ನು ವಾರೆಯಾಗಿ, ಅರ್ಧ, ಪೂರ್ತಿ ಮುಚ್ಚುವ ಹಾಗೇ ಹಲವಾರು ರೀತಿ ಹೊದ್ದು ಯಾವ ಥರ ಇದ್ದರೆ ಚೆಂದ ಅಂದುಕೊಳ್ಳುತ್ತಾಳೆ. ಒಮ್ಮೆ ತಲೆಯಿಂದ ಸೆರಗು ತೆಗೆದು ಹೀಗಿದ್ದರೆ ಹೇಗೆ ಎಂದು ನೋಡಿ ತನ್ನ ಅಸಹ್ಯ ಕುರೂಪವನ್ನು ಕಂಡು ಗಾಬರಿಯಾಗಿ ತಕ್ಷಣ ತಲೆಯ ಮೇಲೆ ಬಟ್ಟೆ ಎಳೆದುಕೊಂಡಳು. ಬ್ರಷ್ಷಿನಂತೆ ಒರಟಾಗಿ ಮುಕ್ಕಾಲಂಗುಲ ಬೆಳೆದ ದಟ್ಟ ಕಪ್ಪನೆಯ ಕೂದಲುಗಳು ವಿಚಿತ್ರವಾಗಿ, ಜೊತೆಗೆ ಏನೋ ಭಯವನ್ನು ತುಂಬಿಸಿಟ್ಟುಕೊಂಡ ಹಾಗೆ ಅವಳಿಗೆ ಭಾಸವಾದವು. ಈಚೆಗೆ ಹಲವು ದಿನಗಳಿಂದ ನುಣ್ಣನೆ ಅವುಗಳ ಮೇಲೆ ಬೆರಳಾಡಿಸಿಯಷ್ಟೇ ಗೊತ್ತು. ಮತ್ತೆ ಮತ್ತೆ ಆಡಿಸಿಕೊಂಡಾಗ ಅದರ ಮುಳ್ಳುಗಳ ಚುಚ್ಚುವಿಕೆ ಹಾಯೆನಿಸುತ್ತಿತ್ತು. ಆದರೆ ಅದು ನೋಡಲು ಇಷ್ಟು ಭಯಂಕರ ಎನಿಸಿರಲಿಲ್ಲ ಆಗ.

ಮಧ್ಯಾಹ್ನ ಅಂದುಕೊಂಡದ್ದನ್ನು ಪರೀಕ್ಷಿಸಲು ಅವಳು ತನ್ನ ಕಣ್ಣುಗಳನ್ನು ಕನ್ನಡಿಯಲ್ಲಿ ನೋಡಿಕೊಂಡಳು. ರಕ್ತದಲ್ಲಿ ಅದ್ದಿ ತೆಗೆದ ಹಾಗಿದ್ದವು.!!!… ಸಣ್ಣಗೆ ಉರಿಯುತ್ತಿರುವುದು ಈಗ ಅನುಭವಕ್ಕೆ ಬಂದಿತು. ತಟಕ್ಕನೆ, ಮೇಲೆ ಹರವಿದ್ದ ಕೆಂಪುಸೀರೆಯ ಬಣ್ಣವೇನಾದರೂ ಮೆತ್ತಿಕೊಂಡು ಬಿಟ್ಟೀತೋ ಎಂದೂ ಅನಿಸದೇ ಇರಲಿಲ್ಲ. ಯೋಚನೆಯಲ್ಲಿ ಮುಳುಗಿಕೊಂಡ ಮನಸ್ಸು, ಆಮೇಲೆ ಉಷ್ಣ, ಹೊಗೆಯಲ್ಲಿ ಕೆಲಸ ಮಾಡಿದ್ದರಿಂದ ಇರಬಹುದು ಎಂದು ಏನೋ ಕಾರಣ ಹುಡುಕಿಕೊಂಡು, ಕದ ತಟ್ಟಿದ ಸದ್ದು ಕೇಳಿ ಓಡಿ ಹೋಗಿ ಬಾಗಿಲು ತೆಗೆದಳು.
ರಾತ್ರಿ ಯಾಂತ್ರಿಕವಾಗಿ ಅಡಿಗೆ ಮಾಡಿ ಎಲ್ಲರಿಗೂ ಬಡಿಸಿದಳು. ಆದರೆ ಅವಳು ರಾತ್ರಿಯ ಹೊತ್ತು ಊಟವನ್ನು ಮಾಡುವ ಪದ್ಧತಿ ಇಟ್ಟಿರಲಿಲ್ಲ. ಬೇಕೆನಿಸಿದರೆ ಸ್ವಲ್ಪ ಅವಲಕ್ಕಿಗೆ ಮೊಸರು ಹಾಕಿಕೊಂಡು ತಿನ್ನುತ್ತಾಳೆ.
ಹಿಂದೆ ಅಂದರೆ ಈಗ ಮೂರು ವರ್ಷದ ಕೆಳಗಿನ ಮಾತು. ಆಗ ಅವಳ ಮಾವನ ತಾಯಿ ಅಚ್ಚಮ್ಮ ಬದುಕಿದ್ದರು. ಅವರು ಇವಳ ಹಾಗೆಯೇ ಮಡಿ ಹೆಂಗಸು. ವಯಸ್ಸು ಬಹಳವಾಗಿದ್ದರಿಂದ ಕೈಲಾಗುತ್ತಿರಲಿಲ್ಲ. ರಾತ್ರಿ ಹೊತ್ತು “ನಂಗೂ ಹಾಗೆ ಒಂದ್ ಸ್ವಲ್ಪ ಏನಾದ್ರೂ ಮಾಡಿಬಿಡೆ ತಾಯಿ” ಎಂದು ನಯವಾಗಿ ಮಾತಾಡಿ ಪದ್ಮಾವತಿಯ ಕೈಯಲ್ಲೇ ಮಾಡಿಸಿಕೊಳ್ಳುತ್ತಿದ್ದರು.
ಅವರಿದ್ದಾಗ ಅವಳ ಕೆಲಸ, ಕಾರ್ಯಗಳಲ್ಲಿ ವಿಪರೀತ ಮಡಿ- ಅಚ್ಚುಕಟ್ಟು, ಭಯ-ಭಕ್ತಿಗಳು ಎದ್ದು ಕಾಣುತ್ತಿದ್ದವು. ಹಿರಿಯರು ಏನನ್ನುತ್ತಾರೋ?… ತನ್ನ ಕೆಲಸ ಒಪ್ಪುವರೋ ಇಲ್ಲವೋ ಎಂಬ ಆತಂಕದಿಂದ ಅವಳು ಮನಗೊಟ್ಟು ಆದಷ್ಟು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಎಲ್ಲ ಕೆಲಸವನ್ನೂ ಮಾಡುತ್ತಿದ್ದಳು. ಅಚ್ಚಮ್ಮನಿಗೆ ಬೆಳಗಿನಿಂದ, ರಾತ್ರಿಯವರೆಗೂ ಸೀರೆಗಳನ್ನು ಹಾಸಿಗೆಯಂತೆ ಹಾಸಿ ದಿಂಬು ಜೋಡಿಸಿ ಕೊಡುವಷ್ಟರವರೆಗೂ ಆಕೆಯ ಸೇವೆಯ ಜವಾಬ್ದಾರಿ ಅವಳ ಮೇಲೆಯೇ ಬಿದ್ದಿತ್ತು. ಸಂಜೆ ಬಿಡುವಾಗಿ ಸ್ವಲ್ಪ ಹೊತ್ತು ಸ್ವತಂತ್ರವಾಗಿ ಕಾಲ ಕಳೆಯುವ ಹಾಗೂ ಇರಲಿಲ್ಲ.
“ಹತ್ತಿ ಬುಟ್ಟಿ ತೊಗೊಂಡ್ಬಾ ಪದ್ಮಾ, ಹೂಬತ್ತಿ ಮಾಡೋಣ” ಎಂದು ಮುದುಕಿ ಕರೆಯುತ್ತಿತ್ತು. ಪದ್ಮಾವತಿಗೆ ಬೇಸರವೆನಿಸಿದರೂ ಆಡುವಂತಿಲ್ಲದೆ ಮೌನವಾಗಿ ಬತ್ತಿ ಹೊಸೆಯಬೇಕಿತ್ತು. ಆಗ ಅವಳಿಗೆ ಮುದುಕಿಯಿಂದ ಬುದ್ಧಿವಾದ, ಉಪದೇಶ.
“ನೋಡೇ ತಾಯಿ…. ನಮಗೆ ಇಂಥ ಜನ್ಮ ಬಂದಿರೋದೇ ಹಿಂದಿನ ಎಷ್ಟೋ ಜನ್ಮಗಳ ಪುಣ್ಯ…. ನಾವು ಮಾಡಿದ ಸೇವೆಯಲ್ಲ ನೇರವಾಗಿ ಆ ಪರಮಾತ್ಮನಿಗೆ ಮುಟ್ಟುತ್ತೆ…. ಉಳಿದೋರ್ಯಾರಿಗೂ ಇಂಥ ಅವಕಾಶವಿಲ್ಲ….. ನಾವು ಸನ್ಯಾಸಿಗಳು. ಯೋಗಿಗಳು ತಪಸ್ವಿನಿಯರಿದ್ದ ಹಾಗೆ…. ಆದಷ್ಟು ಅವನ ಸೇವೆಗೆ ಈ ದೇಹಾನ ಗಂಧದ ಚೆಕ್ಕೆ ತೇದ ಹಾಗೆ ತೇಯಬೇಕು ಕಣಮ್ಮ. ಆಗ್ಲೇ ನಮ್ಮ ಹುಟ್ಟು ಸಾರ್ಥಕ…. ನಾವು ಹೀಗೆ ಇರೋ ಅಷ್ಟ್ರಲ್ಲೇ ಋಷಿ ಪಂಚಮಿ, ಲಕ್ಷ ಬತ್ತಿ, ಲಕ್ಷ ಜಪ, ಲಕ್ಷ ದೀಪ, ಲಕ್ಷ ನಮಸ್ಕಾರ ಎಲ್ಲ ಮುಗಿಸ್ಕೊಂಡು ಬಿಡ್ಬೇಕು. ಯಾವಾಗ್ಲೂ ಆ ನಮ್ಮಪ್ಪನ ಧ್ಯಾನದಲ್ಲೇ ಕಾಲ ಹಾಕಬೇಕು….. ತಿಳೀತಾ?…. ಆಗ್ಲೇ ನಿನ್ನ ಗಂಡನ ಆತ್ಮಕ್ಕೂ ಶಾಂತಿ”
ಪದ್ಮಾವತಿ ಅವರ ಮಾತುಗಳನ್ನೆಲ್ಲಾ ಹೂ ಬತ್ತಿಯ ಜೊತೆಗೇ ಹೊಸೆದು ಹಾಕಿ, ಬುಟ್ಟಿಯಲ್ಲಿ ತುಂಬಿಟ್ಟು ಅಡುಗೆ ನೆವದಿಂದ ಒಲೆಯ ಮುಂದೆ ಕೂತು ಅಜ್ಜಿಯ ಮಾತಿಗೂ ತನ್ನ ಮನಸ್ಸಿಗೂ ತಾಳೆ ಇದೆಯೇ ಎಂದು ಲೆಕ್ಕ ಹಾಕುತ್ತಾಳೆ. ಆಕೆ ಅದೇ ಮಾತುಗಳನ್ನು ಪ್ರತಿ ದಿನ ಹೇಳುತ್ತಾ ಬಂದಿದ್ದರೂ ಒಮ್ಮೆಯಾದರೂ ಅವಳಿಗೆ ಅದರಲ್ಲಿ ರುಚಿ ಹುಟ್ಟಿರಲಿಲ್ಲ.
ಅವರು ಹೇಳಿದಂತೆ ಲಕ್ಷ ದೀಪ, ನಮಸ್ಕಾರಗಳನ್ನು ಗುಡಿಗೆ ಹೋಗಿ ಸಲ್ಲಿಸಿ ಬರಬಹುದಿತ್ತು. ಆದರೆ ಈ ವೇಷದಲ್ಲಿ ಅವಳಿಗೆ ಹೊರಗೆ ಬರಲಿಕ್ಕೆ ನಾಚಿಕೆ. ನಡು ಬಾಗಿ, ಬಿಳಿಕೂದಲು ಹೊರ ಹಾಕಿ ಬೊಚ್ಚು ಬಾಯಿ ಇದ್ದರೆ ಈ ವೇಷ ಹೊಂದುತ್ತದೆ. ಜೊತೆಗೆ ಅಂಥವರನ್ನು ಕಂಡರೆ ಗೌರವವೂ ಹುಟ್ಟುತ್ತದೆ. ತನ್ನಂಥ ಎತ್ತರವಾದ ಬಳ್ಳಿ ನಡುವಿನ ಯುವತಿಯರಿಗೆ ಈ ಮಡೀಹೆಂಗಸರ ವೇಷ ವಿಚಿತ್ರವಾಗಿ ತೋರಬಹುದು ಎನಿಸಿ ಅವಳು ಹಿಂಜರಿದು, ಇನ್ನೂ ಅವುಗಳಿಗೆ ಮನಸ್ಸು ಮಾಡಿರಲಿಲ್ಲ. ಎಂದೋ ಒಂದು ಸಲ ಅತ್ತೆಯ ಬಲವಂತಕ್ಕೆ ಗುಡಿಗೆ ಹೋಗಿದ್ದಾಗ ಪುರಾಣದಲ್ಲಿ ಮನಸ್ಸು ನಿಲ್ಲದೆ ಬಂದವರನ್ನು ಗಮನಿಸುವುದರಲ್ಲೇ ಕಾಲ ಕಳೆದು ಹೋಗಿತ್ತು. ತನ್ನಂತೆಯೇ ಮೂಲೆಯಲ್ಲಿ ಕುಳಿತ ಒಂದು ದೊಡ್ಡ ಗುಂಪು ಮಡೀ ಹೆಂಗಸರಲ್ಲಿ ತನ್ನ ವಯಸ್ಸಿನವರು ಯಾರಾದರೂ ಕಾಣಬಹುದೇನೋ ಎಂದು ಆಸೆಯಿಂದ ನಿರುಕಿಸಿದ್ದು ನಿರಾಶೆಯನ್ನು ತಂದಿತ್ತು. ತನಗೆ ಆಗಬಾರದ್ದು ಏನೋ ಆಗಿಹೋಗಿದೆ ಎಂದು ಮೊದಲ ಬಾರಿಗೆ ಮನದೊಳಗೆ ಕುಟುಕಿ ಛಳಕು ಹೊಡೆದಂತಾಯಿತು.
ಅಪ್ರಯತ್ನವಾಗಿ ಗಂಡಸರ ಗುಂಪಿನತ್ತ ಕಣ್ಣು ಸರಿಯಿತು. ಮನಸ್ಸು ಚೆದುರಿ ಎಲ್ಲೆಲ್ಲೋ ಹರಿದಾಗ ಅವ್ಯಕ್ತ ನೋವು ಕೀವುಗಟ್ಟಿ ಹರಿದಂತೆನಿಸಿ ಮರುದಿನದಿಂದ ಪುರಾಣಕ್ಕೆ ಹೋಗುವುದನ್ನೇ ನಿಲ್ಲಿಸಿದಳು ಪದ್ಮಾವತಿ . ಆದರೂ ಮನಸ್ಸು ಸದಾ ಆ ಬಗ್ಗೆಯೇ ಗಿರಕಿ ಹೊಡೆಯುತ್ತಿತ್ತು. ಅದನ್ನು ಝಾಡಿಸಿ ಗಮನವನ್ನು ಬೇರೆಡೆಗೆ ಕಟ್ಟುವ ಆಲೋಚನೆಗಿಂತ ಅದರಲ್ಲೇ ಏನೋ ಮೆಲುಕು ಹಾಕುತ್ತಾ ಕೂರುವುದೇ ಹಿತವೆನಿಸಿತ್ತು.
ಅಂದಿನಿಂದಲೇ ಅವಳಿಗೆ ತನ್ನ ಬಾಳು ನೀರಸ, ಬರಡು ಎನಿಸತೊಡಗಿದ್ದು.

ಅಜ್ಜಿ ಸತ್ತ ಮೇಲೆ ಆಚಾರ, ಮಡಿ, ಕಟ್ಟು-ಕಟ್ಟಳೆಗಳು ಸ್ವಲ್ಪ ಕಡಿಮೆಯಾದವು. ಹೊಸ ವಿಚಾರಗಳು ಅವಳ ತಲೆಯಲ್ಲಿ ಚಿಗುರತೊಡಗಿದವು. ಮೈದುನ, ಸೀನು ತರುತ್ತಿದ್ದ ಕೆಲವು ಕಥೆ ಪುಸ್ತಕ, ಪತ್ರಿಕೆಗಳನ್ನು ಓದುವುದು; ಸಂಜೆಯ ಹೊತ್ತು ಎಲ್ಲರಂತೆ ನಡುಮನೆಯಲ್ಲಿ ಕುಳಿತೋ, ನಿಂತೋ ರೇಡಿಯೋ ಕಡೆ ಕಿವಿಗೊಡುವುದು; ನಾದಿನಿಯರು ಹೇಳುವ ಹೊರಗಿನ ಸಮಾಚಾರಗಳನ್ನು ಕೇಳುವುದು, ಮೈದುನನಿಗೆ ಬರುವ ಹೆಣ್ಣುಗಳ ಚರ್ಚೆಯಲ್ಲಿ ಭಾಗವಹಿಸುವುದು ಇತ್ಯಾದಿ ಮಾಡತೊಡಗಿದಳು. ಹೊರಗಿನ ಎಲ್ಲಾ ಸಮಾಚಾರಗಳನ್ನು ಕೇಳುವಾಗ, ಅತ್ತೆ ಮತ್ತು ನಾದಿನಿಯರು ಯಾರದೋ ಮದುವೆಗೆ ಹೊರಟಾಗ ಅವಳಿಗೆ ಈ ಎಲ್ಲಾ ಸುಖ ಸಂತೋಷಗಳಿಂದ ತಾನು ವಂಚಿತಳು ಎನಿಸಿ ಎದೆಯಲ್ಲಿ ಕುಟುಕಿದ ಹಾಗಾಗುತ್ತದೆ. ತನ್ನ ಈ ದುರವಸ್ಥೆಗೆ ಯಾರು ಹೊಣೆ ಎಂದೇ ತಿಳಿಯದೆ ಒಳಗೇ ಕೊರಗಿ ಸೀಯುತ್ತಾಳೆ. ತನ್ನ ಬಳಿ ಇದ್ದ ಬನಾರಸ್, ಧರ್ಮಾವರಂ ಸೀರೆಗಳು, ಒಡವೆಗಳು ನುಸಿ ಹಿಡಿದು, ತುಕ್ಕುಗಟ್ಟಿರಬೇಕು. ತಾನು ಮೊದಲಿನ ಪದ್ಮ ಆಗಲಾರೆ ಎಂದು ತನ್ನ ಬೋಳುತಲೆಯನ್ನು ಸವರಿಕೊಂಡು ಹಿತ್ತಲಿಗೆ ಹೋಗಿ ಕಣ್ಣೀರು ಬಸಿಯುತ್ತಾಳೆ.
ಈ ರೀತಿಯ ನೋವು, ಚಡಪಡಿಕೆ, ದುಃಖ ಎಲ್ಲಾ ಈಚೆಗೆ ಮೂರು ನಾಲ್ಕು ವರ್ಷಗಳಿಂದ ಹೆಚ್ಚಾಗಿದೆ. ತಾನು ಈ ಅವಸ್ಥೆಗೆ ಬರುವಾಗಲಾದರೂ ವಿರೋಧಿಸಬಾರದಿತ್ತೇ ಎಂದು ತನ್ನ ಅಜ್ಞಾನದ ಜನ್ಮವನ್ನು ಹಳಿದು ಪಶ್ಚಾತ್ತಾಪಕ್ಕೆ ಸುತ್ತಿಕೊಳ್ಳುತ್ತಾಳೆ.
ನಾದಿನಿಯ ಮದುವೆಯ ಸಂಭ್ರಮದ ದಿನ ಎಲ್ಲರೂ ರಂಗುರಂಗಿನ ಸೀರೆಗಳಲ್ಲಿ ಓಡಾಡುತ್ತಿರುವಾಗ ಹೊಸ ಕೆಂಪುಸೀರೆ ತೆಗೆದು ಕೊಡುವೆನೆಂದು ಅತ್ತೆ ಹೇಳಿದ್ದು ನೆನಪಾಗಿ ಮುಖ ಮುಚ್ಚಿಕೊಂಡು ಕೋಣೆಯಲ್ಲೇ ಕುಳಿತಳು. ಮನಸ್ಸಿನ ಉಬ್ಬರ ಹೆಚ್ಚಿದಾಗ ನೆನಪುಕ್ಕಿ ಬಂತು.

ತಾನು ಮಾಧವನ ಕೈಹಿಡಿದ ದಿನದಿಂದ ತನ್ನ ಕೈಬಳೆಗಳು ಒಡೆದು ಬಿದ್ದ ದಿನಗಳವರೆಗಿನ ಎಲ್ಲ ಚಿತ್ರಗಳೂ ತೂಗಾಡಿದವು, ಚಲಿಸಿದವು, ಪೇಲವವಾಗಿ ಎಲ್ಲ ಅಳಿಸಿ ಹೋದವು. ಅವಳ ಪಾಲಿಗೆ ಉಳಿದುದೊಂದೇ ಮೌನವಾಗಿ ಗುಬ್ಬಳಿಸುವುದು…ದಾರಗಾಣದೆ ಬಿಕ್ಕಿ ಬಿಕ್ಕಿ ಅಳುತ್ತ ಕುಳಿತಳು.
ಆರು ಜನ ಅಣ್ಣಂದಿರಿಗೆ ತಂಗಿಯಾಗಿ ಹದಿನೇಳು ವರ್ಷ ಬೆಳೆದ ಮೇಲೆ ಪದ್ಮಾವತಿ ಮಾಧವನ ಕೈಹಿಡಿದಿದ್ದಳು. ನಾಲ್ಕುವರ್ಷ ಅವರದು ಸುಖಸಂಸಾರ. ಒಮ್ಮೆಯೂ ಅವಳು ತವರಿಗೆ ಹೋಗಿರಲಿಲ್ಲ. ಅವಳಿಗೆ ಹೋಗಬೇಕು ಎಂದು ಅನಿಸಿಯೂ ಇರಲಿಲ್ಲ. ತಂದೆ-ತಾಯಿಯರಿಲ್ಲದ ಅವಳಿಗೆ ಅತ್ತೆ-ಮಾವಂದಿರೇ ತಂದೆ-ತಾಯಿಯರಾಗಿದ್ದರು. ಮಾಧವ ಸರಸ ಸ್ವಭಾವದವನು. ಪದ್ಮಾವತಿಯನ್ನು ಏನಾದರೂ ಕೆಣಕುತ್ತ, ರೇಗಿಸಿ, ಅವಳು ಕೋಪಿಸಿಕೊಂಡು ಕಡೆಗೆ ನಗುವಂತೆ ಮಾಡಿದಾಗಲೇ ಅವನಿಗೂ ಖುಷಿ. ಅವನಿಗೆ ಸರಿ ಮಿಗಿಲಾಗಿ ಅವಳೂ ಏನಾದರೂ ಕೀಟಲೆ ಮಾಡಿ ಅವನನ್ನು ಕಾಡುತ್ತಿದ್ದಳು. ಮಾಧವ ದಮ್ಮಯ್ಯ ಗುಡ್ಡೆ ಹಾಕಿ ಅವಳ ಬಳಿ ಲಲ್ಲೆಗರೆದು ಕ್ಷಮೆಬೇಡಿ ಸಮಾಧಾನಿಸುತ್ತಿದ್ದ.
ತನ್ನ ಮೈಯನ್ನು ಬಳ್ಳಿಯಂತೆ ಸುತ್ತಿಕೊಂಡು ಪ್ರತಿಯೊಂದು ನಡೆನುಡಿಯಲ್ಲೂ ತನ್ನ ಬಗ್ಗೆ ಅನನ್ಯ ಪ್ರೇಮ ವ್ಯಕ್ತಪಡಿಸುವ ಪತಿಯನ್ನು ಕಂಡರೆ ಅವಳಿಗೆ ಪ್ರಾಣ. ಮದುವೆಯಾದ ಎರಡು ವರ್ಷಗಳಲ್ಲೇ ಅವಳಿಗೆ ಗಂಡುಮಗುವೊಂದು ಹುಟ್ಟಿ ಸತ್ತುಹೋಯಿತು. ದುಃಖಿಸುತ್ತ ಮುದುರಿ ಮಲಗಿದ್ದ ಹೆಂಡತಿಯ ಕೆಂಪಾದ ಗಲ್ಲವನ್ನು ಮೇಲೆತ್ತಿ ಮಾಧವ, ಅವಳಿಗೆ ಸಾಂತ್ವನ ಹೇಳಿ ಮುದ್ದಿಸುತ್ತ ನುಡಿದಿದ್ದ –
“ಇಷ್ಟಕ್ಕೆಲ್ಲ ಮನಸ್ಸು ಮುರಿದುಕೊಂಡು ಅಳ್ತಾ ಕೂತ್ರೆ ಹೋದ ಕೂಸು ಮತ್ತೆ ಬರತ್ತಾ ಪದ್ದು…. ಅಳ್ಬೇಡ ನನ್ನ ಚಿನ್ನ …… ಸುಮ್ನೆ ಕೊರಗ್ತಾ ಹೀಗೆ ಕಂಗೆಟ್ಟರೆ ನನ್ನಾಣೆ ‘’- ಎಂದು ಅವಳನ್ನು ಮುದಗೊಳಿಸಲು ಪ್ರಯತ್ನಿಸುತ್ತಾ, ‘’ಯೋಚನೆ ಮಾಡಬೇಡ ಕಣೆ ನನ್ನ ರಾಣಿ….ಕಟ್ಟಾಮಸ್ತಾಗಿ ನಾನಿದ್ದೀನಲ್ಲ…… ಧೈರ್ಯವಾಗಿರು’’ ಎಂದು ನಕ್ಕವನೆ, ‘’ನಾನಿರೋತನ್ಕ ನಿಂಗೆ ಸಾಕು ಸಾಕು ಅಂದ್ರು ಬಿಡಲ್ಲ, ವರ್ಷಕ್ಕೊಂದು ಗ್ಯಾರಂಟಿ. ಮಕ್ಕಳಿಗೇನು ಬರವಿಲ್ಲ.. ಆಗತ್ತೆ ಕಣೆ ನನ್ನ ಬಂಗಾರಿ… ಬೇಜಾರ್ ಮಾಡ್ಕೋಬೇಡ” ಎಂದವಳನ್ನು ತೆಕ್ಕೆಗೊತ್ತಿಕೊಂಡಾಗ ಪದ್ಮಾವತಿ, ಕೆಂಡಸಂಪಿಗೆಯಾಗಿ ನಾಚಿಕೆಯ ಜೊತೆಗೆ ಉಕ್ಕಿಬಂದ ನಗುವನ್ನು ತಡೆಯಲಾರದೆ “ಥೂ, ನೀವೊಬ್ರು ಹೋಗ್ರಿ” ಎಂದು ಮುಖ ಮುಚ್ಚಿಕೊಂಡಿದ್ದಳು.
ಪದ್ಮಾವತಿಯ ಕೆನ್ನೆಯಿಂದ ಜಾರಿದ ಬಿಸಿಕಂಬನಿ ಅವಳ ಮೊಣಕಾಲಿನ ಮೇಲೆ ಬಿತ್ತು. ವಿಶಾದದ ದಟ್ಟ ಕಾರ್ಮೋಡ ಅವಳ ಮುಖದ ತುಂಬಾ ದಟ್ಟವಾಗಿ ಆವರಿಸಿತ್ತು.
ತಂದೆ ಕಟ್ಟಿಸುತ್ತಿದ್ದ ಹೊಸಮನೆಯ ತಾರಸಿಗೆ ಸರಿಯಾಗಿ ನೀರು ಕಟ್ಟಿದ್ದಾರೋ ಇಲ್ಲವೋ ಎಂದು ಪರೀಕ್ಷಿಸಲು ಹೋದ ಮಾಧವ ಏಣಿಯೇರಿ ಕಡೆಯ ಮೆಟ್ಟಿಲ ಮೇಲೆ ನಿಂತು ದೃಷ್ಟಿಯನ್ನೆಲ್ಲ ತಾರಸಿಯ ನೆಲದ ಮೇಲೆ ನಿಲ್ಲಿಸಿದ್ದ ನೀರಿನಲ್ಲಿ ಮುಳುಗಿಸಿದ್ದ. ಆಗ ಸರಕ್ಕನೇ ಏಣಿ ಪಕ್ಕಕ್ಕೆ ವಾಲಿಕೊಂಡು ಜಾರಿ ನೆಲದ ಮೇಲೆ ಮಲಗಿತು. ನೆಲದ ಮೇಲೆ ಮಲಗಿದ ಏಣಿಯ ಮೇಲೆ ಮಾಧವ, ಹಾಗೆಯೇ ಎಂದೆಂದೂ ಮೇಲೇಳದಂತೆ ಮಲಗಿಬಿಟ್ಟಿದ್ದ. ಕೆಳಗೆ ಪೇರಿಸಿಟ್ಟಿದ್ದ ಚಪ್ಪಡಿ ಕಲ್ಲುಗಳಿಗೆ ಜೋರಾಗಿ ಅವನ ತಲೆ ಬಡಿದಿತ್ತು.
ಚಟ್ಟವನ್ನು ತಯಾರಿಸಿಕೊಂಡೇ ಮಾಧವ ಸತ್ತ ದಿನ ಪದ್ಮಾವತಿ ಹುಚ್ಚಿಯಂತಾಗಿದ್ದಳು!!!… ಅತ್ತೂ ಅತ್ತು ಅವಳ ಉಸಿರು ತೆಳ್ಳಗಾಗಿ, ದಿಕ್ಕೆಟ್ಟು ಹುಚ್ಚಿಯಂತಾಗಿದ್ದಳು. ತಾನಿನ್ನೂ ಬದುಕಿರಬಾರದೆಂದು ತೀರ್ಮಾನಿಸಿ, ಮನೆಯ ಹಿಂದಿನ ಬಾವಿಯ ಬಳಿ ಹೊರಟಾಗ ಯಾರೋ ಅವಳನ್ನು ತಡೆದಿದ್ದರು. ನಾನಿನ್ನು ಬದುಕಿರಲಾರೆ ಎಂದು ಮನಸ್ಸು ಭೋರ್ಗರೆಯುತ್ತಿತ್ತು. ಸಂಭವಿಸಿದ ದುರ್ಘಟನೆಯನ್ನು ಮತ್ತೆ ಮತ್ತೆ ನೆನೆಸಿಕೊಂಡು ಎದೆ ಒಡೆಯುವಂತೆ ಬಿಕ್ಕಿ ಬಿಕ್ಕಿ ಅಳುತ್ತ ಜೀವಶ್ಶವವಾದಳು. ದಿನವಿಡೀ ಕಣ್ಣೀರು ಹರಿಸುತ್ತ ಅನ್ನ-ನೀರು ತೊರೆದಳು. ಹತ್ತು ದಿನವೂ ಮರಗಟ್ಟಿ ಕುಳಿತಂತೆ ಯಾರು ಬಂದರೂ ಅವಳಿಗೆ ಗಮನವಿಲ್ಲ, ಯಾರು ಹೋದರೂ ಅವಳಿಗೆ ಪರಿವೆ ಇಲ್ಲ. ಈ ನಡುವೆ, ತಾಯ್ತಂದೆಯರು ಇಲ್ಲದ ತೌರು ಮನೆಯ ಕಡೆಯಿಂದ ಅಣ್ಣಂದಿರು ಬಂದದ್ದಾಯ್ತು. ಲೋಕಾರೂಢಿಯ ನಾಲ್ಕು ಮಾತುಗಳಲ್ಲಿ ಸಮಾಧಾನ ಹೇಳಿದ್ದಾಯ್ತು, ವಾಪಸ್ ಹೋದದ್ದೂ ಆಯಿತು.

ಕುಂಕುಮ ಅಳಿಸುವ ದಿನ ನೆಂಟರಲ್ಲಿ ಗುಸು-ಗುಸು ಚರ್ಚೆ. ಪದ್ಮಾವತಿಗೊಂದು ಬೇಕಿರಲಿಲ್ಲ. ಹಿರಿಯ ಸೊಸೆಯ ಕೇಶಮುಂಡನ ಮಾಡಿಸಲೇಬೇಕು ಎಂದು ಅಜ್ಜಿಯ ತೀರ್ಮಾನ.
“ಇನ್ನೇತಕ್ಕೆ ಬರತ್ತೆ ಈ ವ್ಯರ್ಥ ಬಾಳು…. ಈ ರೀತಿಯಾದರೂ ಸಾರ್ಥಕಪಡಿಸ್ಕೊಂಡ್ರೆ ಒಳ್ಳೆಯದು” – ಎಂದು ಒಂದಿಬ್ಬರು ಅನುಭವಸ್ಥ ಮಡೀ ಹೆಂಗಸರ ಮಾತು.
“ಹೌದು ಮುದ್ರಾಧಾರಣೆಯಾಗದೆ, ಮಡಿಯಾಗದೆ ಅವಳು ಬೇಯ್ಸಿ ಹಾಕಿದ್ದನ್ನು ತಿನ್ನೋದು ಹೇಗೆ ನಾವು?’’
ಅತ್ತೆಯೂ ಅವರ ಮಾತುಗಳಿಗೆ ಹೂಂಗುಟ್ಟಿದರು. ಇನ್ನೊಂದು ಮಡೀಹೆಂಗಸು ಪದ್ಮಾವತಿಯಲ್ಲಿಗೆ ಬಂದು-“ಪಾಪಿ ಜನ್ಮ ಕಣಮ್ಮ ಇಂಥದ್ದು. ಆಗಿದ್ದು ಆಗ್ಹೋಯಿತು. ಇನ್ನಾದ್ರು ಶುದ್ಧಿ ಮಾಡ್ಕೋಬೇಡ್ವೇ?… ಪರಮಾತ್ಮನ ಧ್ಯಾನ, ಸೇವೇಲಿ ಕಾಲ ಕಳೀಬೇಕಮ್ಮ. ಹೀಗೆ ಇದ್ರೆ ಯಾರೂ ಹತ್ರ ಸೇರಿಸಲ್ಲ. ಮಡಿಯಾಗೋದೇ ಅತಿ ಶ್ರೇಷ್ಠ” ಎಂದಿತು.
ಮಾಧವನ ಅಜ್ಜಿಗೂ ಅವಳು ಮಡಿಯಾಗುವುದೇ ಸರಿಯೆನಿಸಿತು. ಹಲವಾರು ವರ್ಷಗಳಿಂದ ತಮ್ಮ ಕೈಲಾಗದಿದ್ದರೂ ಮಡಿಯಲ್ಲೇ ಎಲ್ಲರಿಗೂ ಮಾಡಿ, ಬಡಿಸಿ, ಗೇಯ್ದು ತಮ್ಮ ಜೀವ ದಣಿದು ಹೋಗಿದೆ. ಇದಕ್ಕೆ ಪದ್ಮಾವತಿಯೂ ಒಂದು ಕೈ ಹಾಕಿ ಸಹಾಯ ಮಾಡುವಂತಿದ್ದರೆ ಬಹಳ ಅನುಕೂಲ ಎನಿಸದೆ ಇರಲಿಲ್ಲ ಆಕೆಗೆ. ಅಷ್ಟಲ್ಲದೆ ಅವಳ ಜೀವಕ್ಕೂ ಶ್ರೇಯಸ್ಕರ, ಅಗಲಿದ ಮಾಧವನ ಆತ್ಮಕ್ಕೂ ಶಾಂತಿ ಎಂದು ಯೋಚಿಸಿ ತೀರ್ಮಾನಿಸಿದವರು ಪದ್ಮಾವತಿಗೆ ಮಡಿ ಮಾಡಿಸಲೇಬೇಕೆಂದರು. ಹಾಗಿದ್ದರೆ ಮಾತ್ರ ಅವಳು ತಮ್ಮ ಮನೆಯಲ್ಲಿರಬಹುದು ಎಂದು ಒಂದು ಮಾತು ಕೂಡ ಸೇರಿಸಿದರು..
ಅತ್ತೆ, ಅಜ್ಜಿ, ನೆಂಟರ ತೀರ್ಮಾನಕ್ಕೆ ಪದ್ಮಾವತಿ ಪ್ರತಿಯಾಡಲಿಲ್ಲ. ಮುಂದಿನ ಆಗು ಹೋಗುಗಳು ಅವಳ ಪಾಲಿಗೆ ಕತ್ತಲಲ್ಲಿ ಕಲಸಿ ಹೋಗಿದ್ದರಿಂದ ಅವಳ ಬುದ್ಧಿಯೇ ಸ್ಥಿಮಿತದಲ್ಲಿರಲಿಲ್ಲ.
“ಛೇ, ಈಗಿನ ಕಾಲ್ದಲ್ಲೆಲ್ಲಾ ಹೀಗೆ ಮಾಡಬಾರದು… ಇಷ್ಟು ಸಣ್ಣ ಹುಡುಗಿಗ್ಯಾಕೆ ಇಂಥ ಅಸಹ್ಯ, ಕಷ್ಟ. ಇದರಿಂದ ನಮಗೇನು ಬಂದ ಹಾಗಾಗುತ್ತೆ ..ಬೇಡ…. ಬೇಕಾದ್ರೆ ಅವಳು ತನ್ನ ತವರು ಮನೆಗೆ ಹೋಗಿರಲಿ… ಪದ್ಮಾವತಿ ಖಂಡಿತಾ ಹೀಗಾಗೋದು ಬೇಡ” -ಎಂದರು ಮಾವನವರು ಖಚಿತವಾಗಿ.
ಯಾರೂ ಅವರ ಮಾತಿಗೆ ಬೆಲೆಗೊಡಲಿಲ್ಲ. ಅವಳನ್ನು ಮಡಿ ಮಾಡುವ ತೀರ್ಮಾನ ಮಾಡಿದಾಗಲೂ ಯಾರೂ ಪದ್ಮಾವತಿಯನ್ನು ಕೇಳಲಿಲ್ಲ. ಅವಳು ದುಃಖದ ಮಡುವಿನಲ್ಲಿ ಮೌನದ ಗೊಂಬೆಯಾಗಿದ್ದಳು.

ಮಾಧವನ ನೆನಪು ಒಂದೇ ಸಮನೆ ಭೋರ್ಗರೆಯುತ್ತಿತ್ತು. ಅವನಿಲ್ಲದ ಬದುಕು ಶೂನ್ಯವೆನಿಸಿತು. ಸುತ್ತ ನಡೆಯುತ್ತಿದ್ದ ವಿದ್ಯಮಾನಗಳೊಂದೂ ಅವಳಿಗೆ ಬೇಕಿರಲಿಲ್ಲ. ಭಾವೋದ್ವೇಗದಲ್ಲಿ ಮುಚ್ಚಿಹೋಗಿದ್ದಳು. ಒಳಗಿನ ಒಳತೋಟಿ ಅವಳ ಕರುಳನ್ನು ತಿರುಚುತ್ತಿತ್ತು. ತಾನು ಬದುಕಿದ್ದಾದರೂ ಇನ್ನು ಏನು ಪ್ರಯೋಜನ? ಅವರಿದ್ದರೆ ತಾನೇ ಈ ಬಾಳಿಗೊಂದು ಅರ್ಥ. ಅವರನ್ನೇ ಕಳೆದುಕೊಂಡ ಮೇಲೆ ತಾನು ಈಗ ಹೇಗಿದ್ರೇನಂತೆ, ಬರೀ ಬೆಂಡು ಬಾಳು, ಇರಿಯುವ ಶೂನ್ಯ…ಒಳಗಿನ ದುಖ ಉಮ್ಮಳಿಸಿ ಬಂತು… ಈ ವ್ಯರ್ಥ ಬಾಳು, ಹಾಳು ಜೀವ ಹೇಗಾದರೂ ಸವೆದರೆ ಸಾಕು ಎನಿಸಿಹೋಗಿತ್ತು.
“ ಇವಳು ಹೀಗೆ ಇರ್ಬೇಕು ಅಂದ್ರೆ ನಿಮ್ಮನೇಗೆ ಕರೆದುಕೊಂಡು ಹೋಗಿಟ್ಕೊಳ್ಳಿ….. ನಮ್ಮನೆಯಲ್ಲಿ ಮಾತ್ರ ಇರಕಾಗ್ದು” -ಎಂಬ ಕಠಿಣವಾದ ಮಾತು ಕೇಳಿ ಅವಳ ಅಣ್ಣಂದಿರು ತೆಪ್ಪಗೆ ವೈಕುಂಠ ಸಮಾರಾಧನೆ ಮುಗಿಸಿಕೊಂಡು ಊರಿಗೆ ತೆರಳಿದ್ದರು.
ಮಾಧವ ಸತ್ತ ದಿನದಿಂದ ಹಿಡಿದು ಹತ್ತನೆಯ ದಿನದವರೆಗೂ ಏನೇನೋ ಪದ್ಧತಿಗಳು … ಪದ್ಮಾವತಿಗೆ ಎಲ್ಲಾ ಮುತ್ತೈದೆಯರು ಧಾರಾಳವಾಗಿ ಕುಂಕುಮ-ಅರಿಶಿನ ಹಚ್ಚಿ, ತಲೆಯ ಮೇಲೆ ಒಂದು ಹೂವಿನ ತೇರನ್ನೇ ನಿರ್ಮಿಸಿಬಿಟ್ಟಿದ್ದರು.
ತನ್ನಿಂದ ಕಳಚಿಹೋದ ವಸ್ತುವನ್ನು ಈ ಜನಗಳು ಈ ರೀತಿಯಲ್ಲಿ ಅಳೆಯುತ್ತಿದ್ದಾರಲ್ಲ ಎಂದು ನೆನೆದು ಅವಳ ಮೈ-ಮನ ಮೈ ಕುದಿಯುತ್ತಿತ್ತು. ಎದುರಿಗಿರುವ ಬಟ್ಟಲಲ್ಲಿ, ಹಣೆಯಲ್ಲಿ ಹರಡಿಹೋಗಿರುವ ಒಂದಿಷ್ಟು ಪುಡಿಯೇ ತನ್ನ ಪ್ರಿಯ ಮಾಧವ? !!…ತನ್ನ ತಲೆಗೂದಲನ್ನು ಪರಚುತ್ತ , ನೋಯಿಸುತ್ತಾ ಜಾಗ ಮಾಡಿ ಕೂತ ಹಲವು ಮೊಳಗಳ ಹೂವೇ ತನ್ನಿನಿಯ ಮಾಧವ? ..ಒಡಲ ತುಂಬ ಬಿಸಿಯಲೆಯನ್ನು ಹರಡುತ್ತಾ, ತನ್ನನ್ನು ಬೇರಾವುದೋ ಸಗ್ಗಲೋಕಕ್ಕೆ ಕೊಂಡೊಯ್ಯುತ್ತಿದ್ದ ಆ ಸುಂದರಾಂಗನ ಆರಡಿಯ ದೀರ್ಘಕಾಯವೆಲ್ಲಿ? ಹಿಡಿಯಲ್ಲಿ ಅಮುಕಿದರೆ, ಗಾಳಿಯಲ್ಲಿ ತೂರಿದರೆ ಮಾಯವಾಗುವ ಈ ವಸ್ತುಗಳೆಲ್ಲಿ?…ಇಲ್ಲ…ಇವ್ಯಾವುವೂ ಅಲ್ಲ ತನ್ನ ಮಾಧವ. ತನ್ನನ್ನೇಕೆ ಈ ನೋವಿನ ಪದ್ಧತಿಗಳಿಂದ ಜನಗಳು ಇಷ್ಟು ವ್ಯರ್ಥ ಹಿಂಸಿಸುತ್ತಿದ್ದಾರೆ ಎಂಬ ನೋವು, ದುಃಖ ನೊರೆನೊರೆಯಾಗಿ ಉಕ್ಕಿಬಂದರೂ, ಉಕ್ಕುತ್ತಿದ್ದ ಭಾವನೆಗಳು ಹೊರಗೆ ಬರುತ್ತಿದ್ದ ಹಾಗೆ ಗಡ್ಡೆ ಕಟ್ಟ್ಟಿ ನಿಷ್ಪಂದವಾಗಿ ಕೂತುಬಿಟ್ಟಿತ್ತು.
ದಾರಿಗಾಣದ ಅವಳು ಮೌನವನ್ನು ನೇಯುತ್ತ ತಲೆ ಕೆಳಗೆ ಹಾಕಿ ಕುಳಿತಳು.

“ಇನ್ನು ಹತ್ತೇ ದಿನ ಕಣಮ್ಮ ನಿನಗೆ ಈ ಸೌಭಾಗ್ಯ!”- ದನಿಯೊಂದು ಮೊಳಗಿತು ಎಚ್ಚರಿಕೆಯ ಗಂಟೆಯಾಗಿ.
ಪದ್ಮಾವತಿಗೆ ಅವನಿಲ್ಲದ ಈ ವಸ್ತುಗಳು ಭಾಗ್ಯಗಳೆನಿಸಲಿಲ್ಲ. ಹತ್ತುದಿನಗಳು ತಾನೇ ಯಾಕೆ? ಇವತ್ತೇ ಕಿತ್ತುಹಾಕಿದರೂ ಅವಳು ಎದುರಾಡುತ್ತಿರಲಿಲ್ಲ. ಅವನಿಲ್ಲವೆಂದು ಖಾತ್ರಿಯಾದ ಮೇಲೆ ಇವರೆಲ್ಲ ಏಕೆ ತನಗೆ ಇವುಗಳನ್ನು ಹಚ್ಚಿ ಪುಸಲಾಯಿಸುತ್ತಿದ್ದಾರೆ?!!!..ಸರಿ, ತನ್ನ ಮಾಧವನನ್ನು ತಂದು ಕೊಡುವುದಾದರೆ ಈ ಭಾಗ್ಯಗಳನ್ನೆಲ್ಲ ನೀವೇ ಇಟ್ಕೊಳ್ಳಿ. ನನಗೆ ಆಗ ಏನೂ ಬೇಡ. ತನ್ನ ಮಾಧವ ಇವುಗಳಿಗಿಂತ ತುಂಬಾನೇ ಬೇರೆ ಎಂದು ಅವಳ ಮನ ಕೂಗಿ ಕೂಗಿ ಹೊರಳಾಡುತ್ತಿತ್ತು.
ಹತ್ತನೆಯ ದಿನ ಅವಳನ್ನು ತೋಟಕ್ಕೆ ಕರೆದೊಯ್ದರು. ಜೊತೆಗೆ ಬಂದ ಮಡಿಹೆಂಗಸರ ಕರುಣೆ ಕಾಣದ ಮುಖಗಳು ಅವಳನ್ನು ತಮ್ಮ ಜಾತಿಗೆ ಸೇರಿಸಿಕೊಳ್ಳಲು ಹಾರ್ದಿಕ ಸ್ವಾಗತ ನೀಡುತ್ತಿರುವಂತೆ ಅವಳಿಗೆ ಭಾಸವಾದವು. ಬಲಿಯನ್ನು ಬಲಿಪೀಠಕ್ಕೆ ಎಳೆದುಕೊಂಡು ಹೋಗುವ ಚಿತ್ರ ಕಣ್ಣೆದುರಿಗೆ ಎದುರಾಯಿತು. ಆದರೆ ಬಹಳ ವ್ಯತ್ಯಾಸ. ತನ್ನದು ಯಾವ ಪ್ರತಿಭಟನೆ, ವಿರೋಧವೂ ಇಲ್ಲ ಅಂದುಕೊಂಡಳು.
ಒಂದು ಗುಂಪು ಮರಗಳ ನಡುವೆ, ನಿರ್ಜನವಾದ ಪ್ರದೇಶದಲ್ಲಿ ಒಬ್ಬಾಕೆ ತನ್ನ ಸೆರಗನ್ನು ಸರಿಸಿ ತಾಳಿಯನ್ನು ಹರಿಯಲು ಕುತ್ತಿಗೆಗೆ ಕೈ ಹಾಕಿದಾಗ ಕಿವಿಯ ತುಂಬಾ ವಾಲಗದ ಸದ್ದು, ಹೆಂಗಸರ ಸಂಭ್ರಮ, ಸೀರೆ-ಬಳೆಗಳ ಓಲಾಟ, ಪುರೋಹಿತರ ಮಂತ್ರ ಘೋಷ…. ಮೈ ಜುಂ ಎಂದು ತೂಕಡಿಸುತ್ತಿರುವಾಗ ಮಾಧವನ ಸುಪುಷ್ಟ ಕೈಗಳು ತನ್ನ ಕತ್ತನ್ನು ತಬ್ಬಿದಂತೆನಿಸುತಿತ್ತು. ಅವನ ಬಿಸಿಯಾದ ಉಸಿರು ಇನ್ನೂ ತನ್ನೊಡಲಲ್ಲಿ ಹೊಯ್ದಾಡುತ್ತಿದೆ. ಮಾಂಗಲ್ಯವನ್ನು ಬಲವಾಗಿ ಗಂಟು ಹಾಕಿದವನೆ, ತನ್ನ ಕಿವಿಯ ಬಳಿ ಬಗ್ಗಿ “ಎಂದೂ ಬಿಚ್ಚೋಗ್ದೆ ಇರೋ ಹಾಗೆ ಗಟ್ಯಾಗಿ ಬಿಗಿದಿದ್ದೀನಿ ಪದ್ದು…. ಇನ್ನು ನಿನ್ನ ಜೋರೆಲ್ಲ ಬಂದ್” ಎಂದ ಅವನ ದನಿ ಗುಂಗುರು ಗುಂಗುರಾಯಿತು.
ಪದ್ಮಾವತಿ ಜೋರಾಗಿ ಬೆಚ್ಚಿದಳು. ಮೈ ಕೊಡವಿ ಕಣ್ತೆರೆದು ನೋಡಿದಳು. ಎದುರುಗಡೆ ಮರಕ್ಕೆ ಒರಗಿ ಕುಳಿತಿದ್ದ ಕ್ಷೌರಿಕ ಕತ್ತಿಯನ್ನು ಹರಿತ ಮಾಡುತ್ತಿರುವುದು ಕಾಣಿಸಿತು.
ಮೊಣಕಾಲುದ್ದ ಇಳಿಬಿದ್ದಿದ್ದ ತನ್ನ ಉದ್ದನೆಯ ಹೆರಳು ಮಾಧವನ ನೆನಪನ್ನು ಮತ್ತೆ ಮತ್ತೆ ತೂಗಿತು.
“ಪದ್ದು, ನಿಂಗೆ ಹೆಸರಿಟ್ಟವರ್ಯಾರೇ ಶುದ್ಧ ಪೆದ್ದುಗಳು….ನಾಗವೇಣಿ ಅಂತಿಟಿದ್ರೆ ಭಾಳ ಚೆನ್ನಾಗಿ ಒಪ್ತಿತ್ತು ನೋಡು”
ಪದ್ಮಾವತಿಗೆ ಅಂಚು-ಸೆರಗು ಇಲ್ಲದ ಕೆಂಪನೆಯ ಹತ್ತಿ ಸೀರೆ ಉಡಿಸಿ ತಲೆಯ ಮೇಲೆ ಸೆರಗು ಹೊದ್ದಿಸಿ ಮನೆಯ ಹಿಂಬಾಗಿಲಿನಿಂದ ಕರೆದುಕೊಂಡು ಬರುವಾಗ- “ಆ್ಞ..ಎಲ್ರೂ ಒಳಗೆ ಹೋಗಿ, ಹೋಗಿ… ಯಾರೂ ನೋಡ್ಬಾರ್ದು ಇವಳನ್ನ, ಈ ದಿನ ಪೂರಾ’’ ಎಂದು ಜೋರಾಗಿ ಕೂಗು ಹಾಕಿಕೊಂಡೇ ಬಂದವರು ಪದ್ಮಾವತಿಯನ್ನು ಅಡುಗೆಮನೆಯ ಮಗ್ಗುಲಿಗ್ಗಿದ್ದ ಸಣ್ಣ ಕೋಣೆಯಲ್ಲಿ ಒಂಟಿ ಕೂಡಿಸಿದರು.
ಆ ದಿನವೆಲ್ಲ ಗಾಳಿ-ಬೆಳಕಿರದ ಆ ಕತ್ತಲಕೋಣೆಯಲ್ಲಿ ಅವಳು ಕಣ್ಣೀರಧಾರೆಯಾಗಿ ಕೊಳೆತಳು. ಅವಳನ್ನು ಉಂಡೆಯಾ ಎಂದು ಕೇಳಿದವರಿಲ್ಲ…ಹೊರಗೆ ಪಂಕ್ತಿ ಪಂಕ್ತಿ ಊಟ…ಢರ್ರೆಂದು ತೃಪ್ತಿಯಿಂದ ತೇಗಿದ ಸದ್ದುಗಳು… ಪುರೋಹಿತರ ರಾಗವಾದ ದಾನಗಳ ಪಟ್ಟಿ . ಬಗೆಬಗೆಯ ದಾನಗಳ ವಿತರಣೆ…ಬಂದವರು ನಿಧಾನವಾಗಿ ತೆರಳಿದಂತೆ ಕ್ಷೀಣ ಕ್ಷೀಣವಾದ ಸದ್ದು…

ಕಡೆದ ವಿಗ್ರಹದಂತೆ ಬಿಮ್ಮನೆ ಕುಳಿತಿದ್ದ ಪದ್ಮಾವತಿಯ ಮನದಲ್ಲಿ ವಿಪ್ಲವ…ಯೋಚನೆಗಳ ತುಫ್ಹಾನು…!…ತಾನು ಎಲ್ಲಿದ್ದರೇನು …?.. ಹೇಗಿದ್ದರೇನು ? ಎಂಬ ಶೂನ್ಯ ಮನಸ್ಥಿತಿಯಲ್ಲಿ ಪದ್ಮಾವತಿ ನಿರ್ವಿಕಾರ ಮನೋಭಾವ ತಾಳಿ ಒಪ್ಪಿಯೇ ಮಡಿಯಾಗಿದ್ದಳು.
ಆಗ- ಸನ್ಯಾಸಿಗಳ ಜೀವನ, ಒಪ್ಪತ್ತೂಟ, ಮಡಿ, ಆಚಾರ ಯಾವುದರ ಬಗ್ಗೆಯೂ ಅವಳು ಅಂದು ಇಪ್ಪತ್ತೊಂದರ ಪ್ರಾಯದಲ್ಲಿ ಯೋಚಿಸಿರಲಿಲ್ಲ. ಆದರೆ ಈಗ ಪದ್ಮಾವತಿಗೆ ಮೂವತ್ತೊಂದು ವರ್ಷ. ತನ್ನ ಜೀವಮಾನವೆಲ್ಲ ಕೋಣೆಯಲ್ಲೇ ಕೊಳೆಯಲು ಸಿದ್ಧ ಎಂದು ದೃಢ ಮನಸ್ಸು ಮಾಡಿ ತೆಪ್ಪಗಾದವಳು, ಒಳಗೇ ಗೋಳಿಡುತ್ತಿದ್ದವಳು, ಈಗ ಜ್ಞಾನೋದಯವಾದಂತೆ ಕಣ್ಣೊರೆಸಿಕೊಂಡು ನಿಧಾನವಾಗಿ ಕಣ್ತೆರೆದು ಮುಂದೆ ಹೊಗೆಯಂತೆ ಕವಿದಿದ್ದ ಕತ್ತಲೆಯನ್ನು ಮೆಲ್ಲನೆ ಕೈಯಿಂದ ಒರೆಸುತ್ತ ತನ್ನ ನೋಟವನ್ನು ಚೂಪುಗೊಳಿಸುತ್ತಿದ್ದಾಳೆ.
ಮಡಿಯಾದ ಹತ್ತುವರುಷಗಳ ಆನಂತರ ಯೋಚನೆಗಳು ಮಗ್ಗುಲಾಗಿವೆ…ಛೇ…ಆಗೇನಾಗಿತ್ತು ತನಗೆ ?!!..ಸತ್ತಿದ್ದರೆ ಒಂಥರ..ಅಥವಾ ಅಣ್ಣಂದಿರ ಮನೆಗಳಿಗಾದರೂ ಹೋಗಿದ್ದರೆ ಹೇಗೋ ದುಡಿದೋ, ಸ್ವತಂತ್ರವಾಗೋ ಬದುಕಬಹುದಿತ್ತು. ಆದರೆ ಈಗ ಇದೆಂಥ ಹಂಗಿನ ಬದುಕು!!…ಮನವೊಲ್ಲದ ಬೇಸರದ ಬಾಳು.. ಎಂಥ ನೀರಸ ಯಾಂತ್ರಿಕ ಜೀವನ ಎನಿಸತೊಡಗಿ, ಈ ಕಳೆದ ಮೂರುವರ್ಷಗಳಿಂದ ಈ ಚಡಪಡಿಕೆ ಅವಳಲ್ಲಿ ಮತ್ತಷ್ಟು ತೀವ್ರವಾಗಿತ್ತು.
ಶಾಂತವಾಗಿ ನಿಧಾನದಲ್ಲಿ ಆಲೋಚಿಸತೊಡಗಿದಂತೆ ತನ್ನ ತಪ್ಪಿನ ಅರಿವಾಗಿತ್ತು…ತಾನಾಗ ಭಾವೋದ್ವೇಗದಲ್ಲಿ ಒಪ್ಪಿಗೆ ನೀಡಿದ್ದು ತಪ್ಪಾಯಿತು, ಈಗ ಏನು ತಾನೇ ಮಾಡಲಾದೀತು..ತನ್ನ ಇಡೀ ಜೀವನ ತಿದ್ದಿ ಬರೆಯಲಾಗದ ಕರಡಂತೆ ಅಯೋಮಯವಾಯಿತಲ್ಲ ಎಂದು ಒಳಗೊಳಗೇ ವ್ಯರ್ಥ ಕೊರಗುತ್ತಾಳೆ.

ಒಮ್ಮೊಮ್ಮೆ ಆಸೆಯ ಮಿಣುಕುಗಳು ಕಣ್ ಮಿಟುಕಿಸುತ್ತವೆ. ಹಾಗೆಯೇ ಅಸಹಾಯಕತೆ ಅವಳನ್ನು ಹಿಂಡಿ ಹಿಪ್ಪೆ ಮಾಡಿ ನೋಯಿಸುತ್ತವೆ. ಬೇಸರವಾದಾಗ ಒಮ್ಮೊಮ್ಮೆ ಮೈದುನ ಸೀನು ತಂದುಕೊಟ್ಟ ಕಥೆಪುಸ್ತಕಗಳನ್ನು ಬಿಚ್ಚುತ್ತಾಳೆ. ಅವುಗಳಲ್ಲಿ ಕೆಲವು ಪ್ರಣಯ ಕಾದಂಬರಿಗಳು. ಓದುತ್ತಾ ಓದುತ್ತಾ ಹೋದ ಹಾಗೆ ಅವಳ ಹುರಿದುಹೋದ ಭಾವನೆಗಳು ಮುಲುಕಾಡುತ್ತವೆ. ಮೈ ಬಿಗಿ ಕಟ್ಟಿಸುವಂಥ ವರ್ಣನೆಗಳು ಕುಲುಕಾಡಿಸುತ್ತವೆ. ದಿನದ ಬೆಳಗಿನ ಹೊತ್ತು, ಅವಳಿಗೆ ಈ ಬಗ್ಗೆ ಯೋಚಿಸಲು ಪುರುಸೊತ್ತು ಕೊಡುವುದಿಲ್ಲ.
ಚಾಪೆಯ ಮೇಲೆ ಮೈ ಮುದುರಿ ಮಲಗಿದಾಗ, ಮೆತ್ತೆ ಹಾಸಿಗೆಯಲ್ಲಿ ಗಂಡನ ಬಿಸಿಯಪ್ಪುಗೆಯಲ್ಲಿ ಮೈಮರೆಯುತ್ತಿದ್ದುದು ಗಕ್ಕನೆ ನೆನಪಾಗುತ್ತದೆ. ಅವನ ಬಲಿಷ್ಠ ತೋಳುಗಳು ಮೈ ಬಿಗಿಯುವಾಗ ಮಾಂಸ ಖಂಡಗಳೆಲ್ಲ ವೀಣೆಯ ಹಾಗೆ ಮಿಡಿದಂತೆ…. ಅವನ ಮೈಯ್ಯ ಬಿಸುಪು ಇನ್ನೂ ತನ್ನ ಮೈಯ್ಯ ಮೂಲೆ-ಮೂಲೆಗಳಲ್ಲಿ ನಿಧಾನವಾಗಿ ಹಬ್ಬುತ್ತಿರುವ ಹಾಗೆ ಮಾಂಸ ಖಂಡಗಳು ಚೀರಿಡುತ್ತವೆ. ಸುಖಾನುಭವಗಳೆಲ್ಲ ನೆನಪಿನ ರೂಪದಲ್ಲಿ ಹುದುಗಿ ಕಾಡುತ್ತವೆ, ಕೆಣಕುತ್ತವೆ. ಅದರಲ್ಲೂ ಪದ್ಮಾವತಿ, ಹೊರಗೆ ಕೂತಾಗಲಂತೂ ಮೂರು ದಿನವೂ ಕೂತಲ್ಲಿಯೇ ಕೂತಿರುವುದಾಗುತ್ತದೆ. ಯಾರೋ ಬೇಯಿಸಿ ಹಾಕುತ್ತಾರೆ. ಆಗೆಲ್ಲ ಬಿಡವೋ ಬಿಡುವು..ಮನದೊಳಗೆ ಸ್ರವಿಸುವ ಭಾವಮೇಳ..ಮೆದುಳು ತಿನ್ನುವ ವಿಚಾರಗಳ ಲಗ್ಗೆ!…

ರಾತ್ರಿ ನೆಲಕ್ಕೆ ತಲೆ ಹಾಕಿದಾಗ ಒಮ್ಮೆಲೆ ಮುತ್ತಿಕ್ಕುವ ವಿಚಾರಗಳ ಹಿಂಡು.. ಈಗಾಗಿರುವ ತಪ್ಪನ್ನು ತಿದ್ದುಪಡಿ ಮಾಡುವುದು ಹೇಗೆಂಬುದೊಂದೇ ಚಿಂತೆ ಕೊರೆಯುತ್ತದೆ. ಕವಲೊಡೆದ ಮನಸ್ಸು ಎಲ್ಲೆಲೋ ಚೆದುರಿ, ಎಂದೆಂದೂ ತಾನು ಮಾಧವನನ್ನು ಬಿಟ್ಟು ಬೇರಾರನ್ನು ನೆನೆಯಲಾರೆ, ಅವನಿಲ್ಲದೆ ನಾನು ಬದುಕಿದ್ದರೂ ಒಂದೇ ಸತ್ತರೂ ಒಂದೇ ಎಂದವಳು ಏನೇನೋ ಬಡಬಡಿಸಿದ್ದು ದಿನಗಳೆದಂತೆ ಮೆಲ್ಲ ಮೆಲ್ಲಗೆ ಕರಗುತ್ತ, ಆವಿಯಾಗುತ್ತ, ಈಗಂತೂ ನಾನು ಹೀಗಿರಲಾರೆ ಎಂಬ ಹಳಹಳಿಕೆಯೊಂದು ಮಾತ್ರ ಗಟ್ಟಿಯಾಗುತ್ತ ನರಳಿಸುತ್ತದೆ….
ಕ್ಷೀಣಿಸದ ಅವಳ ಸ್ವಗತಗಳು ದಿನವಿಡೀ ಹಾಡಾಗಿವೆ.. ಹೌದು… ನಾನು ಬದುಕಬೇಕು..ನಾನೂ.. ಆದರೆ ಒಂಟಿಯಾಗಿ ಹೀಗೆ ಮಾತ್ರ ಇರಲಾರೆ. ಯೌವ್ವನ ತುಳುಕುತ್ತಿದ್ದ ದೇಹದ ಕೋಟಿ ಕೋಟಿ ರೋಮಗಳು ಚಂಡಿ ಹಿಡಿದಂತೆ ಸೆಟೆದು ನಿಲ್ಲುತ್ತವೆ. ತನ್ನ ಮೈಯ ಮೂಳೆಗಳನ್ನು ಪುಡಿ ಪುಡಿಗುಟ್ಟಿಸುವ ಅಪ್ಪುಗೆ ಬೇಕೇ ಬೇಕೆನಿಸಿದಾಗ ಮಾಧವನ ಮುಖ ತನ್ನ ಮುಖಕ್ಕೆ ಕಚ್ಚಿ ಕುಳಿತ ನೆನಪಲ್ಲಿ ಅವನ ಮುಖದ ಚಹರೆ ಮಾಸಲು ಮಾಸಲಾಗಿ, ಕರಗುತ್ತ, ಕಡೆಯಲ್ಲಿ ಕೇವಲ ಉಬ್ಬಿದ ಮಾಂಸಖಂಡಗಳ ದೇಹವೊಂದೇ ಸ್ಪಷ್ಟವಾಗಿ ಆಕೃತಿಗೊಳ್ಳುತ್ತದೆ. ಹೊರಳಾಡುತ್ತದೆ, ನೆನಪು ಕಿವುಚುತ್ತದೆ.
ಇದ್ದಕ್ಕಿದ್ದ ಹಾಗೆ ಪದ್ಮಾವತಿಯ ಉಸಿರು ಬಿಗಿಯಾಯಿತು. ಕೈಯಲ್ಲಿದ್ದ ಪುಸ್ತಕ ಮುಚ್ಚಿ ಹೊರಳಿದಳು.
ಒಂದು ದಿನ- ಯಾವುದೋ ಮಡಿ ಹೆಂಗಸು ಬಸುರಾಗಿ ಓಡಿಹೋದ ಸುದ್ದಿಯನ್ನು ಕೇಳಿದ ಅತ್ತೆ, ಸೊಸೆಯ ಮುಂದೆ ಆ ಹೆಂಗಸನ್ನು ನಿಂದಿಸಿದರು. “ಈ ಲಕ್ಷಣಕ್ಕೆ ಮಡಿ ಅಂತ ಯಾಕಾಗ್ಬೇಕು? ಲಕ್ಷಣವಾಗಿ ಇನ್ನೊಂದು ಮದುವೆ ಮಾಡ್ಕೊಂಡು ಹಾಯಾಗಿ ಇರಬಾರದಿತ್ತೇ? ಈಗ ಅವಳಿಗೂ ಕೆಟ್ಟ ಹೆಸರು, ಅವರ ಮನೆತನಕ್ಕೂ ಕಳಂಕ”
ಮೊದಲಿಗೆ ಪದ್ಮಾವತಿಗೆ ಈ ಸುದ್ದಿ ಕೇಳಿ ಆಶ್ಚರ್ಯ!…ಮಡಿಯಾಗಿ ಈ ರೀತಿಯೆಲ್ಲ ಯೋಚಿಸುವುದೇ..ಶುದ್ಧ ತಪ್ಪು. ತಾನೊಬ್ಬಳೇ ಅಂತ ಕಾಣತ್ತೆ ಈ ರೀತಿ ವಿಚಿತ್ರವಾಗಿ ಏನೇನೋ ಅಂದುಕೊಳ್ಳೋದು, ಸಂಕಟಪಡೋದು, ಹೊರಗೊಂದು ಒಳಗೊಂದು…ತನಗಿನ್ನು ಇನ್ನೂ ಏನೇನು ಕಾದಿದೆಯೋ ಎಂದು ಪಾಪಪ್ರಜ್ಞೆಯಿಂದ ಭೀತಳಾಗಿದ್ದವಳು, ಅತ್ತೆ ಹೇಳಿದ ಸುದ್ದಿ ಕೇಳಿ ಸ್ವಲ್ಪ ಗೆಲುವಾದಳು. ಪರವಾಗಿಲ್ಲ ತನ್ನಂತೆಯೇ ಯೋಚಿಸುವವರೂ ಇದ್ದಾರಲ್ಲ. ಅಷ್ಟೇಕೆ ಇನ್ನೂ ಒಂದು ಹೆಜ್ಜೆ ಮುಂದೆಯೇ ಹೋಗಿದ್ದಾರಲ್ಲ ಎನಿಸಿ ಸಮಾಧಾನದ ಭಾವ ಉದಿಸಿದರೂ ಓಡಿಹೋದ ಆ ಹೆಂಗಸಿನ ನಡವಳಿಕೆ ಅವಳಿಗೆ ಹಿತವೆನಿಸಲಿಲ್ಲ.

ಇಷ್ಟು ದಿನಗಳ ಮಂಥನದಿಂದ ಒಂದು ತೀರ್ಮಾನ ದಟೈಸುತ್ತ ಬಂದಿತ್ತು. ಕಳೆದು ಹೋದುದಕ್ಕೆ ವ್ಯಥೆಪಡುವ ಬದಲು ಇನ್ನಾದರೂ ಸುಖವಾಗಿರುವ ದಾರಿ ಹುಡುಕಿಕೊಳ್ಳಬೇಕು. ಎಲ್ಲರ ಒಪ್ಪಿಗೆಯೂ ಪಡೆದು ಧೈರ್ಯವಾಗಿಯೇ ಈ ಜೀವನವನ್ನು ಹಿಮ್ಮೆಟ್ಟಿ, ಹೊಸಬಗೆಯಲ್ಲಿ ತೆರೆದುಕೊಳ್ಳಬೇಕು. ಹೇಡಿಯಂತೆ ಒಳಗೆ ಕುದ್ದುಕೊಳ್ಳುವುದಕ್ಕಿಂತ ಬಹಿರಂಗವಾಗಿಯೇ ಎಲ್ಲವನ್ನೂ ಎದುರಿಸಬೇಕು ಎಂಬ ಕಿರು ಧೈರ್ಯ ಅಂಬೆಗಾಲಿಕ್ಕಿತು. ಈಚಿನ ಅವಳ ಎಲ್ಲಾ ಪರಿವರ್ತನೆಗಳಿಗೂ ಸೀನು ತಂದುಕೊಡುತ್ತಿದ್ದ ಅವಳ ನೆಚ್ಚಿನ ಕತೆಗಾರನ ಪುಸ್ತಕಗಳೇ ಕಾರಣವಾಗಿತ್ತು.
“ ನೀವು ಈ ರೀತಿಯೆಲ್ಲ ಇರೋದು ನಂಗೊಂಚೂರು ಸರಿಹೋಗಲ್ಲ ಅತ್ತಿಗೆ. ನೀವು ಹೀಗಾಗುವ ಹೊತ್ತಿಗೆ ನಾನೇನಾದ್ರು ಸ್ವಲ್ಪ ದೊಡ್ಡೋನಾಗಿದಿದ್ರೆ ನಾನು ಮಾತ್ರ ಹೀಗಾಗಕ್ಕೆ ಖಂಡಿತ ಬಿಡ್ತಿರ್ಲಿಲ್ಲ ನಿಮ್ಮನ್ನ….ಇದು ಎಲ್ಲಾ ಈ ಹಳೆಯ ಕಾಲದವರು ಮಾಡಿರೋ ದರಿದ್ರ ಪದ್ಧತಿ” ಎಂದು ಸೀನು ಮುಖ ಸಿಂಡರಿಸಿಕೊಂಡು, ಹಳೆಯ ಕಟ್ಟು-ಕಟ್ಟಳೆಗಳನ್ನು ಹಳಿದು ತನ್ನ ಅನೇಕ ಆಧುನಿಕ ವೈಚಾರಿಕತೆಯ ಚಿಂತನೆಗಳನ್ನು ಅವಳ ಬಳಿ ಹಂಚಿಕೊಳ್ಳುತ್ತಾನೆ:
“ನೋಡಿ ಈಗಿನವರೆಲ್ಲ ಎಷ್ಟು ಬ್ರಾಡ್ ಮೈಂಡು….ಗಂಡ ಸತ್ತ ಹೆಣ್ಣಿಗೆ ಅಲ್ಲಿಗೇ ಅವಳ ಜೀವನ ಸಮಾಧಿಯಾಗಿ ಹೋಗಲ್ಲ. ಮತ್ತೆ ಅವಳು ಮದುವೆಯಾಗಿ ಸುಖವಾಗಿರಬಹುದು ಅಂತಾರೆ. ಅದೇ ಹಳೇ ಕಾಲದವರು ಗಂಡ ಸತ್ತೊಡನೆ ವಿಧವೆಗೂ ಅಲ್ಲೇ ತಿಥಿ ಮಾಡಿ ಹೂತು ಹಾಕಿ ಬಿಡುತ್ತಿದ್ರು….. ನೋಡಿ ಅದಕ್ಕೆ ಉದಾಹರಣೆ ನೀವೇ ಇದ್ದೀರಲ್ಲ.. ನಿಮ್ಮ ಗತೀನೇ ಈಗ ಹೀಗಾಗಿದೆಯಲ್ಲ… ಈ ನಿಮ್ಮ ದುಃಖಕ್ಕೆ, ದುರಂತಕ್ಕೆ ಯಾರು ಹೊಣೆ?” -ಎಂದು ಸೀನು ಪದ್ಮಾವತಿಯ ಹತ್ತಿರ ಮಾತನಾಡಲು ತೊಡಗಿದರೆ ತುಂಗಮ್ಮ, ಅವನ ಮಾತಿನ ವಾಸನೆ ಹಿಡಿದು, ಗದರಿಸಿ ಅವನನ್ನು ಆಚೆಗೆ ಅಟ್ಟುತ್ತಿದ್ದರು.
ಸೀನುವಿನ ಮಾತುಗಳು ಅವಳ ಮನದಾಳದಲ್ಲಿ ಹೂತು ಹೋಗಿದ್ದ ಬೀಜವೊಂದನ್ನು ಮೊಳೆಯುವಂತೆ ನೀರೆರೆದಿತ್ತು. ಇವನಾದರೂ ತನ್ನ ಪರ ವಹಿಸುತ್ತಾನಲ್ಲ ಎಂಬ ಕಿಂಚಿತ್ ಸಮಾಧಾನ ಅವಳಿಗೆ.
“ಬರೀ ಬಾಯಿಯಲ್ಲಿ ಆಡಿ ಕೈ ತಿರುಗಿಸೋ ಜನ ಅಲ್ಲ ಅತ್ತಿಗೆ ಇವತ್ನೋರು… ನೋಡಿ ಆ ನವ್ಯ ಕತೆಗಾರನ ಕತೆಗಳನ್ನೆಲ್ಲ ನೀವೇ ಓದಿದ್ದೀರಲ್ಲ. ಅವನಿಗೆ ಜೀವನದಲ್ಲಿ ನೊಂದವರು, ವಿಧವೆಯರು ಅಂದ್ರೆ ಎಷ್ಟು ಕನಿಕರ. ಅಂಥವರನ್ನ ಉದ್ಧರಿಸಬೇಕು ಅನ್ನೋ ಪ್ರಯತ್ನಕ್ಕೆ ಈಗ ಒಂದು ಗುಂಪೇ ಸಿದ್ಧವಾಗಿದೆಯಂತೆ. ಆ ಗುಂಪಿನವರೆಲ್ಲ ಇಂಥವರನ್ನೇ ಮದುವೆಯಾಗಿ ಉದ್ಧಾರ ಮಾಡ್ತೀವಿ ಅಂತ ಶಪಥ ಮಾಡಿದ್ದಾರಂತೆ. ಮೊನ್ನೆ ಆ ಕತೆಗಾರನ ಭಾಷಣವನ್ನು ಕೇಳಿದೆ.. ಎಷ್ಟು ಚೆನ್ನಾಗಿ ಮನಮುಟ್ಟುವಂತೆ ಮಾತಾಡಿದ. ಅವನ ಕತೆಗಳಲ್ಲಿ ಬರುವ ಹೀರೋಗಳ ಥರಾನೇ ಅವನ ಮಾತು, ರೀತಿ ಎಲ್ಲ. ನನಗೂ ಅಂಥ ಸಮಾಜೋದ್ಧಾರದಲ್ಲೇ ಒಲವು’’ ಅಂದ.
ಪದ್ಮಾವತಿಗೆ ಇದ್ದಕ್ಕಿದ್ದ ಹಾಗೆ ಹುರುಪುಗಟ್ಟಿತ್ತು.
ಈ ಪೊಳ್ಳುಜೀವನವನ್ನು ಇನ್ನು ನಡೆಸಲಾರೆ ಎಂಬ ಆರ್ತನಾದ ಅದರೊಂದಿಗೆ ಮಿಳಿತವಾಯಿತು. ಆಲೋಚಿಸಿದ ವಿಚಾರಗಳಿಗೆ ಒಂದು ಆಧಾರ ಸಿಕ್ಕ ಹಾಗಾಯಿತು. ಇಷ್ಟು ದಿನ ಒದ್ದಾಡಿದ್ದೇ ಸಾಕು. ಇನ್ನು ಯಾರನ್ನೂ ಲಕ್ಷಿಸಬಾರದು ಎಂದು ಗಟ್ಟಿ ಮನಸ್ಸು ಮಾಡಿದ ಪದ್ಮಾವತಿ, ತನ್ನ ತಲೆಯನ್ನು ಸವರಿ ನೋಡಿಕೊಂಡಳು. ನಿರೀಕ್ಷೆಗೂ ಮೀರಿ ಕೂದಲು ಉದ್ದ ಬೆಳೆದಿತ್ತು. ಸಂತೋಷದಿಂದ ಧಿಗ್ಗನೆ ಮೇಲೆದ್ದಳು. ಇನ್ನೊಂದು ವಾರ, ಹದಿನೈದು ದಿನಗಳಲ್ಲಿ ಕೂದಲು ಇನ್ನೂ ಉದ್ದ ಉದ್ದ ಬೆಳೆದಿರುತ್ತದೆ. ಈ ಬಾರಿ ಏನಾದರೂ ಒಂದು ಅನಾರೋಗ್ಯದ ಕಾರಣ ಹೇಳಿ ಕ್ಷೌರಿಕನಿಂದ ತಪ್ಪಿಸಿಕೊಳ್ಳಬೇಕು. ಎರಡು-ಮೂರು ತಿಂಗಳಲ್ಲಿ ಸ್ವಲ್ಪ ಉದ್ದ ಕೂದಲು ಬೆಳೆಸಿ, ಪುಟ್ಟ ಗಂಟು ಅಥವಾ ಎರಡು ಹೆಣಿಗೆ ಜಡೆ ಹಾಕುವಷ್ಟಾದರೂ ಸಾಕು, ಆ ಲೇಖಕರ ಬಳಿ ಹೋಗಿ ಈ ವಿಷಯವನ್ನು ಪ್ರಸ್ತಾಪಿಸಬೇಕು. ಮನೆಯವರನ್ನು ಒಪ್ಪಿಸಬೇಕು. ಒಪ್ಪದಿದ್ದರೆ ಧೈರ್ಯವಾಗಿ ಮನೆ ಬಿಟ್ಟು ಹೊರಟೇಬಿಡುವುದು. ಒಪ್ಪಲಿ ಬಿಡಲಿ ನನ್ನ ಸುಖ-ಭವಿಷ್ಯ ನನಗೆ ಮುಖ್ಯ ಎಂದುಕೊಂಡು ಪದ್ಮಾವತಿ ಅಂತಿಮ ತೀರ್ಮಾನಕ್ಕೆ ಬಂದಳು.

ತುಂಗಮ್ಮನ ಕರೆ ಅವಳನ್ನು ಎಚ್ಚರಿಸಿತು. ಇನ್ನೊಮ್ಮೆ ಆಕೆ “ಪದ್ಮಾ” ಎಂದು ದನಿಯೇರಿಸಿ ಕರೆದಾಗ, ಪದ್ಮಾವತಿ ಬೆಚ್ಚಿಬಿದ್ದಳು!!.. ತಾನು ತೀರ್ಮಾನಿಸಿದ್ದು ಆಕೆಗೆ ತಿಳಿದುಹೋಯಿತೇ ಎಂಬ ಆತಂಕ, ಗಾಬರಿಯಿಂದ ಎದೆ ಢವ ಢವ…. ಮೆಲ್ಲಗೆ ಅತ್ತೆಯನ್ನು ಸಮೀಪಿಸಿದಳು.
“ಹೋಗಮ್ಮ ಅವನು ಬಂದು ಎಷ್ಟೊತ್ತಾಯ್ತು….. ಕಾಯ್ತಿದ್ದಾನೆ….ನಾ ಕರೀತಾನೇ ಇದ್ದೀನಿ ನಿಂಗೆ ಕೇಳಿಸಲಿಲ್ವಾ?”
ಅಭ್ಯಾಸ ಬಲದಂತೆ ಪದ್ಮಾವತಿ ತನ್ನರಿವಿಲ್ಲದೆ ಮೆಲ್ಲಗೆ ಹಿತ್ತಲಿಗೆ ನಡೆದು ಕ್ಷೌರಿಕನಿಗೆ ತಲೆ ಕೊಟ್ಟಳು.
ಸ್ವಲ್ಪ ಹೊತ್ತಿನ ನಂತರ ತನ್ನ ತಲೆಯ ಮೇಲಾಡುತ್ತಿರುವ ಬೆರಳುಗಳ ಸ್ಪರ್ಶದಿಂದ ಎಚ್ಚರ ಮರಳಿದಂತಾಗಿ ಅವಳು ಗಾಬರಿಯಾದಳು. “ ಅಯ್ಯೋ, ನಾ ಯಾಕೆ ಇಲ್ಲಿ ಬಂದು ಕೂತೆ? ನನ್ನ ತೀರ್ಮಾನಕ್ಕೆ ಈ ಕೂದಲು ಬೇಕೇ ಬೇಕಲ್ಲ” ಎಂದುಕೊಂಡಾಗ ಅವಳೆದೆ ಢವಢವಿಸುತ್ತಿತ್ತು. ಅಷ್ಟರಲ್ಲಿ ತಲೆ ನುಣ್ಣಗಾಗಿ ಹೋಗಿತ್ತು…! ಎದೆ ಹೊಡೆದುಕೊಂಡಿತು..!…ದಿಗ್ಭ್ರಮೆ ಅವಳನ್ನಾವರಿಸಿತು…ದುಃಖಿತಳಾಗಿ ಕಲ್ಲಂತೆ ಕುಕ್ಕರಿಸಿದಳು ಕೆಲಕ್ಷಣ. ಆ ದಿನವೆಲ್ಲಾ ಅವಳ ಕೆಲಸ ಅಡ್ಡಾದಿಡ್ಡಿಯಾಗಿ ಸಾಗಿತು. ಕೈ ಮತ್ತೆ ಮತ್ತೆ ತಾಮ್ರದ ತಂಬಿಗೆಯಂತಿದ್ದ ತನ್ನ ಬೋಳುಮಂಡೆಯನ್ನು ಸವರಿಕೊಳ್ಳುತ್ತಿತ್ತು…ಆದರೆ, ಅಚಾತುರ್ಯ ನಡೆದುಹೋಗಿತ್ತು. ಒಂದೇಸಮನೆ ಕಣ್ಣೀರು ತೊಟ್ಟಿಕ್ಕಿತು.. ಆದರೂ ಅವಳು ಹತಾಶಳಾಗದೆ, ತನ್ನ ತೀರ್ಮಾನವನ್ನು ಟೊಳ್ಳಾಗಲು ಬಿಡಲಿಲ್ಲ.
ಒಂದು ಸಂಜೆ ಸೀನು ನಡುಮನೆಯಲ್ಲಿ ಯಾರೋ ಗಂಡಸರೊಡನೆ ಮಾತನಾಡುತ್ತಿರುವಂತಾ ಯಿತು. ಹೊಸ ಧ್ವನಿ, ಸ್ವಲ್ಪ ಗಡಸು.
“ಅತ್ತಿಗೆ” – ಸೀನು ಬಾಗಿಲ ಬಳಿ ಬಂದು ನಿಂತಿದ್ದ.
“ಬನ್ನಿ… ಯಾರು ಬಂದಿದ್ದಾರೆ ನೋಡಿ”
ಪದ್ಮಾವತಿಗೆ ಅವನ ಮಾತು ಕೇಳಿ ಆಶ್ಚರ್ಯ, ತನ್ನನ್ನು ನೋಡಲು, ಅದೂ ಗಂಡಸರು ಯಾರು ಬರುತ್ತಾರೆ ಎಂಬ ಕುತೂಹಲ. ಮೆಲ್ಲನೆ ಹೊಸ್ತಿಲ ಈಚೆಯೇ ನಿಂತು ಹೊರಗೆ ಬಗ್ಗಿ ನೋಡಿದಳು. ಅಪರಿಚಿತ ಮುಖ. ಸುಮಾರು ನಲವತ್ತರ ಗಡಿ ದಾಟಿರಬಹುದೆನಿಸಿತು. ಖಾದಿ ಪೈಜಾಮ ಜುಬ್ಬಾ ಧರಿಸಿದ ಗುಂಗುರು ಕೂದಲಿನ ವ್ಯಕ್ತಿ.
“ಇವರೇ ನಮ್ಮತ್ತಿಗೆ…. ನಿಮ್ಮ ಕಥೆಗಳೂಂದ್ರೆ ಇವರಿಗೆ ತುಂಬ ಇಷ್ಟ”
“ಇವರೇ ಅತ್ತಿಗೆ, ನೀವು ತುಂಬಾ ಇಷ್ಟಪಡ್ತಿದ್ರಲ್ಲ ಆ ಕಥೆಗಳ ಲೇಖಕರು”
ಪದ್ಮಾವತಿ ಮೆಲ್ಲಗೆ ಕೈಜೋಡಿಸಿದಳು. ತನ್ನ ನೆಚ್ಚಿನ ಕಥೆಗಾರ, ಹೆಣ್ಣುಮಕ್ಕಳ ಉದ್ಧಾರಕ್ಕಾಗಿ ಪಣ ತೊಟ್ಟು ನಿಂತ ಕ್ರಾಂತಿಕಾರ ಎದುರಿಗೇ ಕುಳಿತಿದ್ದಾನೆ! ಅವಳಲ್ಲಿ ಆನಂದ, ಲಜ್ಜೆ, ಉದ್ವೇಗ ಒಮ್ಮೆಲೆ ಉಕ್ಕಿದವು. ಅವರನ್ನು ತಲೆಯೆತ್ತಿ ನೋಡಲೂ ಆಗದಂತೆ ಮುಖದ ಸ್ನಾಯುಗಳಲ್ಲಿ ಅವ್ಯಕ್ತ ಲಜ್ಜೆ ಹರಡಿ ಮುಖ ಬಿಸಿಯಾಯಿತು..ಜೊತೆಗೆ ಕೆಂಪೂ .
ಅವರ ಅಗಲವಾದ ಪಾದ, ಉದ್ದನೆಯ ಬೆರಳುಗಳಲ್ಲೇ ದೃಷ್ಟಿಯನ್ನು ನೆಟ್ಟು ಅವರಿಬ್ಬರ ಮಾತುಕತೆಗಳನ್ನು ಮೌನವಾಗಿ ಆಲಿಸತೊಡಗಿದಳು.
“ನೀವು ಹೇಳಿದ ವಿಷಯಾನೆಲ್ಲ ಕೇಳಿದರೆ ನಮ್ಮ ಜನಗಳು, ಸಮಾಜ ಎಷ್ಟು ಹಿಂದುಳಿದಿದ್ದಾರೆ. ಹೆಣ್ಣುಮಕ್ಕಳ ಭವಿಷ್ಯವನ್ನು ಹೊಸಕಿ ಹಾಕುತ್ತಿದ್ದಾರೆ ಅಂತ ನಿಮ್ಮ ಅತ್ತಿಗೆಯಂಥ ಚಿಕ್ಕ ವಯಸ್ಸಿನವರ ಸ್ಥಿತೀನ ನೋಡಿದ್ರೆ ಗೊತ್ತಾಗುತ್ತೆ. ಅಯಾಮ್ ವೆರಿ ಸಾರಿ ಮಿ. ಶ್ರೀನಿವಾಸ್….ಇಷ್ಟು ದಿನ ಆಗಿದ್ದು ಆಗೋಯ್ತು, ಮುಂದಾದ್ರೂ ಇಂಥವರು ಬಾಳಕ್ಕೆ ಅವಕಾಶ ಮಾಡಿಕೊಡ್ಬೇಕು. ಇದಕ್ಕೆ ನಮ್ಮ ನಿಮ್ಮಂಥ ಯುವಕರು ಮುಂದಾಗಬೇಕು.”
ಅವರ ಮುಂದಿನ ಮಾತುಗಳು ಅವಳ ಕಿವಿಗೆ ಬೀಳಲಿಲ್ಲ. ಅವಳ ಆಸೆ ತುಂಬಿದ ಕಣ್ಣುಗಳು ಅವರತ್ತ ತಿರುಗಿದಾಗ ಕೃತಜ್ಞತೆಯನ್ನು ಹೊರಸೂಸುತ್ತಿದ್ದವು.
“ಇದಕ್ಕೆ ನೀವೇನಂತೀರಾ?’ – ಕಥೆಗಾರನ ಪ್ರಶ್ನೆ.
ಪದ್ಮಾವತಿಗೆ ಕಂಠ ತುಂಬಿ ಬಂದಂತಾಯಿತು..ಅವಾಕ್ಕಾಳಾದಳು!!..
ಮುಂದೆ ಅದೂ ಇದೂ ವಿಷಯ ಮುಂದುವರೆಯಿತು. ಪದ್ಮಾವತಿ ಒಳಗೆ ಹೋಗಿ ಕಾಫಿ ಮಾಡಿ ತಂದುಕೊಟ್ಟಳು. ಸೀನು ಅತ್ತಿಗೆಗೆ ಒಂದು ಕುರ್ಚಿ ತಂದು ಹಾಕಿದ. ಅವರ ಎದುರಾಗಿ ನೇರ ಕುಳಿತು ಮಾತನಾಡುವಾಗ ಪದ್ಮಾವತಿಯ ಮೊದಲಿನ ಸಂಕೋಚ ಸ್ವಲ್ಪ ಕರಗಿತ್ತು.
“ಇನ್ನೊಂದ್ಸಲ ಬನ್ನಿ” ಎಂದು ಅವರನ್ನು ಬೀಳ್ಕೊಟ್ಟಳು.

ಮುಂದೆ- ಕೆಲವು ದಿನಗಳಲ್ಲಿ ಸೀನು ಅವರನ್ನು ಮನೆಗೆ ಎರಡು ಮೂರು ಸಲ ಕರೆತಂದಿದ್ದ. ಕಥೆಗಳ ಬಗ್ಗೆ ಚರ್ಚೆ ನಡೆದಿತ್ತು. ಈಚೆಗೆ ಅತ್ತಿಗೆ ಗೆಲುವಾಗುತ್ತಿದ್ದಾರೆ ಎಂಬ ಸೂಚನೆಯೇ ಸೀನುವಿಗೆ ಅಪಾರ ಸಂತೋಷ. ಹೊಸ ಹೊಸ ನಾಟಕದ ಪುಸ್ತಕಗಳನ್ನು ತಂದುಕೊಟ್ಟ. ಪದ್ಮಾವತಿಗೆ ಲೇಖಕರ ಮಾತಿನ ಧಾಟಿ, ಪ್ರಗತಿಪರ ವಿಚಾರಲಹರಿ ಕೇಳಿದಾಗ ಅವಳ ಒಣಗಿ ಹೋದ ಭಾವನೆಗಳು ಮಾತನಾಡುತ್ತವೆ, ಆಶೆ ಮೊಳೆಯುತ್ತದೆ. ತನ್ನ ಮನದಿಂಗಿತ, ತಿಕ್ಕಾಡುವ ತುಮುಲಗಳನ್ನು ಅವರಲ್ಲಿ ಅಭಿವ್ಯಕ್ತಿಸಲು ನಡುವೆ ಇರುವ ಸೀನು ಅಡ್ಡ ಎನಿಸುತ್ತದೆ. ಹೇಗಾದರೂ ಅವರನ್ನು ಏಕಾಂತವಾಗಿ ಭೇಟಿ ಮಾಡಿ ತಿಳಿಸಲೇಬೇಕು ಅಂದುಕೊಂಡಳು. ಅದು ಈ ಮನೆಯಲ್ಲಂತೂ ಸಾಧ್ಯವಿಲ್ಲ. ಅವರ ಕೋಣೆಗೇ ಹೋಗಿ ಕಾಣಬೇಕು ಎಂಬ ಹಂಬಲಿಕೆ ಬೆಳೆಯಿತು.
ಸಂಜೆ ನಾಲ್ಕು ಗಂಟೆಯ ಸಮಯ… ಪುಸ್ತಕದಲ್ಲಿದ್ದ ಅವರ ವಿಳಾಸ ಗುರುತು ಹಾಕಿಕೊಂಡು ಬೀದಿಗಿಳಿದಳು. ಇವತ್ತು ಏನಾದರೂ ಇತ್ಯರ್ಥ ಮಾಡಿಬಿಡಬೇಕು. ನೇರವಾಗಿ ಅವರ ಅಭಿಪ್ರಾಯ ಕೇಳುವುದು. ಅವರು ಸಂತೋಷದಿಂದ ಒಪ್ಪಿದರೆ….
ಒಂದೊಂದೇ ರಸ್ತೆಗಳನ್ನು ಅವಳು ದಾಟುತ್ತಿರುವಾಗ ಅವಳಲ್ಲಿ ಅದುಮಿಟ್ಟಿದ್ದ ಸಂಕೋಚ ಮೆಲ್ಲಗೆ ಮೇಲಕ್ಕೆ ಚಿಮ್ಮಿ ಬರುತ್ತಿತ್ತು. ಇನ್ನೇನು ಅರ್ಧಕ್ಕೂ ಹೆಚ್ಚು ದೂರ ಬಂದಿದ್ದಳು. ಅಧೈರ್ಯ, ತುಯ್ದಾಟ ತಡೆದು ನಿಲ್ಲಿಸಿತು. ಪಕ್ಕದ ರಸ್ತೆಗೆ ಹೆಜ್ಜೆ ತಿರುಗಿತು.
ಗುಡಿಯನ್ನು ಪ್ರವೇಶಿಸಿದಳು. ಪ್ರದಕ್ಷಿಣೆ ಹಾಕುವಾಗಲೂ ಮನಸ್ಸಿನ ತುಂಬ ಗಲಿಬಿಲಿ. ತನ್ನ ದಿಟ್ಟ ಹೆಜ್ಜೆಗೆ ಅವರು ಅಷ್ಟು ಒತ್ತಾಸೆ ನೀಡುತ್ತಿದ್ದರೂ ತನಗೇಕೆ ಇಷ್ಟು ಹಿಂಜರಿಕೆ ಎಂದು ಅವಳಿಗೇ ಅರ್ಥವಾಗಲಿಲ್ಲ. ಈ ಬಗ್ಗೆ ಯೋಚಿಸುತ್ತಲೇ ಹೊರಗೆ ಬಂದಳು.
“ನಮಸ್ಕಾರ”
ಗಲಿಬಿಲಿಗೊಂಡು ಅವಳು ಕತ್ತೆತ್ತಿ ನೋಡಿದಾಗ ನಗುತ್ತಾ ನಿಂತ ಅವರು!…
ಅವಳ ಮುಖದಲ್ಲಿ ಸಖೇದಾಶ್ಚರ್ಯ !!..
ಇಬ್ಬರೂ ಮಾತನಾಡುತ್ತ ರಸ್ತೆಯ ಅಂಚಿಗೆ ಬಂದರು.
“ಏನು ಈ ಕಡೆ?” ಎಂದರು.
“ಸುಮ್ನೆ ಗುಡಿಗೆ ಬಂದಿದ್ದೆ… ಈಚೆಗೆ ನಿಮ್ಮದು ಯಾವುದೂ ಹೊಸ ಪುಸ್ತಕ ನೋಡ್ಲಿಲ್ಲ ನಾನು…. ಯಾವುದು ಬಂತು?” ಎಂದು ಕೇಳಿದಳು ಪದ್ಮಾವತಿ ತಲೆಯನ್ನು ಮೇಲೆತ್ತದೆ.
“ಬನ್ನಿ, ನನ್ನ ರೂಮು ಇಲ್ಲಿಗೆ ಹತ್ತಿರವೇ ಇದೆ, ಕೊಡ್ತೀನಿ”
ಪದ್ಮಾವತಿಗೆ ಅವರೊಡನೆ ನಡೆಯುವಾಗ ಅಂಗಾಲಿನಿಂದ ಲಜ್ಜೆ, ಸಂಕೋಚ ಮುತ್ತಿಕ್ಕುತ್ತಿದ್ದವು. ಯಾರಾದರೂ ಕಂಡಾರೆಂಬ ಹೆದರಿಕೆಯಿಂದ ಸುತ್ತ-ಮುತ್ತಲು ನೋಡಿದಳು. ಮೆಟ್ಟಿಲು ಹತ್ತುವಾಗ ಅವಳ ಉಬ್ಬಿದ ಎದೆಗಳು ಇನ್ನಷ್ಟು ಏರಿಳಿದವು. ಹಣೆಯಲ್ಲಿ ಬೆವರಿನ ಹನಿಗಳು.
ಆತ ರೂಮಿನ ಬೀಗ ತೆರೆದು ಒಳಗೆ ಕಾಲಿಟ್ಟು “ಬನ್ನಿ’’ ಎಂದು ಅವಳನ್ನು ಒಳಗೆ ಕರೆದು ಕುರ್ಚಿ ತೋರಿಸಿದರು.
ಪುಟ್ಟದಾದರೂ ಅಚ್ಚುಕಟ್ಟಾಗಿತ್ತು ಕೋಣೆ. ಬೆತ್ತದ ಕುರ್ಚಿಯ ಮೇಲೆ ಕೂತವಳು ಸುತ್ತ ವೀಕ್ಷಿಸಿದಳು. ಒಂದು ಕಡೆ ರ್ಯಾಕಿನಲ್ಲಿ ಅಂದವಾಗಿ ಜೋಡಿಸಿಟ್ಟ ಪುಸ್ತಕಗಳು. ಗೋಡೆಗಳ ಮೇಲೆ ನಾಲ್ಕೈದು ಕ್ಯಾಲೆಂಡರುಗಳು. ಈಜು ಉಡುಪಿನಲ್ಲಿದ್ದ ಸುಂದರಿ ಬಣ್ಣದ ಛತ್ರಿಯ ಕೆಳಗೆ ಬೋರಲಾಗಿ ಮಲಗಿ ಏನೋ ಓದುತ್ತಿದ್ದಾಳೆ. ಪದ್ಮಾವತಿ ತಕ್ಷಣ ಸೆರಗನ್ನು ಮೈತುಂಬ ಹೊದ್ದು ಸಂಕೋಚದಿಂದ ತನ್ನ ಕತ್ತನ್ನು ಬೇರೆಡೆಗೆ ತಿರುಗಿಸಿದಳು.
ತುಂಬು ನಿತಂಬಿನಿಯೋರ್ವಳು ಮೈಮುರಿಯುವ ಚಿತ್ರ. ಇರುಸುಮುರುಸಿನಿಂದ ಪದ್ಮಾವತಿಯ ದೃಷ್ಟಿ ಕೆಳಬಾಗಿತು. ರೇಡಿಯೋ ಮೇಲಿಟ್ಟಿದ್ದ ನಗ್ನ ಶಿಲಾಬಾಲಿಕೆಯರ ಜೋಡಿ ವಿಗ್ರಹ ಇವಳ ಕಡೆಗೇ ಮುಖ ಮಾಡಿತ್ತು.
ಅವರು ಬೀರುವನ್ನು ತೆಗೆದು ತಮ್ಮ ಹೊಸ ಪುಸ್ತಕವನ್ನು ಅವಳ ಕೈಗಿತ್ತರು.
ಪದ್ಮಾವತಿ ತಾನು ಹೇಳಬೇಕೆಂದಿದ್ದ ಮಾತುಗಳನ್ನು ಹೊರಗುರುಳಿಸುವುದು ಹೇಗೆಂದು ತಿಳಿಯದೆ ಹೊಯ್ದಾಡುತ್ತಿದ್ದಳು. ತನ್ನ ಈ ಅವಸ್ಥೆಯನ್ನು ಪ್ರದರ್ಶನ ಮಾಡುತ್ತ ಕೇಳುವುದು ಹೇಗೆಂಬ ಹಿಂಜರಿಕೆ-ಕೀಳರಿಮೆಯಿಂದ ಮಾತು ಗಂಟಲಲ್ಲೇ ಇಂಗಿ ಹೋಗಿತ್ತು. ತುಟಿಗಳು ಹೊಲಿದುಕೊಂಡಿದ್ದವು.
ಸುತ್ತಲೂ ಒಂದು ನೋಟ ಹರಿಸಿ ಧೈರ್ಯ ತಂದುಕೊಂಡು ನೆಟ್ಟಗೆ ಕುಳಿತು ಅವರನ್ನೇ ದಿಟ್ಟಿಸಿ ನೋಡಿದಳು. ಮೈ ಬಿಸಿಯಾಗಿ ಬಿಗಿಯಾಯಿತು. ಪ್ರಯತ್ನಪೂರ್ವಕವಾಗಿ ಮೆಲ್ಲಗೆ ಬಾಯಿ ತೆರೆದಳು.
“ನಿಮ್ಮ ಗುಂಪೆಲ್ಲ ಹೀಗೆ ಸಮಾಜೋದ್ಧಾರಕ್ಕೆ ನಿಂತಿರೋದು ಕೇಳಿ ನನಗಂತೂ ಭಾಳ ಸಂತೋಷ…. ನಂಗೂ ನೀವೊಂದು ಸಹಾಯ ಮಾಡ್ಬೇಕು”
ಅವಳ ದನಿ ಕಡೆಯಲ್ಲಿ ತೆಳ್ಳಗಾಯಿತು.
“ಏನು?” – ಅವರ ಮುಖದಲ್ಲಿ ಕುತೂಹಲ, ಗಾಬರಿ, ವಿಹ್ವಲತೆ.!!…
ಪದ್ಮಾವತಿಯ ಮಾತು ತಡವರಿಸಿತು. “ನನ್ನ ತಂಗಿ ಚಿಕ್ಕವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡಳು….. ನೀವು ಒಪ್ಪುವುದಾದರೆ…”
ಅರ್ಧಕ್ಕೆ ಅವಳ ಮಾತು ತುಂಡಾಯಿತು. ತಾನೇನು ಹೇಳುತ್ತಿರುವೆನೆಂಬ ಪರಿವೆ ನಿಧಾನವಾಗಿ ನುಸುಳಿ ಮಾತು ನಿಲ್ಲಿಸಿದಳು. ಅವರ ಮುಖದಲ್ಲಿರುವ ಭಾವವನ್ನು ಹೆಕ್ಕಿಕೊಳ್ಳಲು ಕಣ್ಣುಗಳು ಅಗಲವಾದವು.
ಅವರ ಮುಖದ ಗೆರೆಗಳು ಒಮ್ಮೆಲೆ ಬದಲಾದವು.
ಆತ ತಮ್ಮ ಕಣ್ಣನ್ನು ಚಿಕ್ಕದು ಮಾಡಿ ಒಣನಗೆ ಒಸರಿಸುತ್ತ – “ಹಿ ಹ್ಹಿ…..ನಾನು ಹಾಗೆ ಬರೆಯೋದೇನೋ ನಿಜವೇ….. ಅದು ನನ್ನ ಸಿದ್ಧಾಂತ, ಅಭಿಪ್ರಾಯ ಅಷ್ಟೇ …. ಆದರೆ, ನಾನು ಬ್ರಹ್ಮಚಾರಿಯಾಗೇ ಉಳೀಬೇಕೂಂತ ತೀರ್ಮಾನಿಸಿಬಿಟ್ಟಿದ್ದೀನಿ…. ಅಕಸ್ಮಾತ್ ನನ್ನ ತೀರ್ಮಾನವನ್ನೇನಾದರೂ ಬದಲಿಸಿದರೆ ನೋಡೋಣ ಮುಂದೆ. ಆಗ ನಿಮ್ಮನ್ನು ಸಂಪರ್ಕಿಸುತ್ತೇನೆ… ಏನೂ ತಿಳಿದುಕೊಳ್ಳಬೇಡಿ ಇವರೇ…. ಕ್ಷಮಿಸಿ..”

-ಪದ್ಮಾವತಿಯ ಕೆಂಪುಸೀರೆಯ ನೆರಿಗೆಗಳನ್ನೇ ದಿಟ್ಟಿಸುತ್ತ ನುಡಿದು ಕೈಲಿದ್ದ ಪುಸ್ತಕಗಳನ್ನು ಇಡುವ ನೆಪದಿಂದ ಆತ, ಬೀರು ತೆಗೆದು ಅವಳಿಗೆ ಬೆನ್ನು ತೋರಿಸಿದರು.
ಬೀರುವಿನ ಒಳಬಾಗಿಲಿಗೆ ಹಚ್ಚಿದ್ದ ಪೋಸ್ಟರಿನಲ್ಲಿದ್ದ ಪ್ರೇಮಿಗಳ ಗಾಢಾಲಿಂಗನ ದೃಶ್ಯವನ್ನೇ ಎವೆಯಿಕ್ಕದೆ ಅಚ್ಚರಿಯಿಂದ ನೋಡುತ್ತ ಜಡವಾಗಿ ಕುಳಿತಿದ್ದಳು ಪದ್ಮಾವತಿ.
************
2 comments
ಇಂಥವರು ವೇಷಧಾರಿಗಳು. ನಂಬಲನರ್ಹರು.. ಛಂದದ ತಿರುವು ಕೊಟ್ಟಿರಿ.. ಇಲ್ಲವಾದರೆ ಇದೂ ಹತ್ತರೊಂದಿಗಿನ ಹನ್ನೊಂದಾಗ್ತಿತ್ತು..
ನಿಮ್ಮ ಪ್ರೀತಿಯ ಮೆಚ್ಚುಗೆಗೆ ಅನಂತ ಕೃತಜ್ಞತೆಗಳು ಗೆಳತಿ ಮಾಲತಿ. ದಯವಿಟ್ಟು ನಿಮ್ಮ ಕಥಾಪ್ರೀತಿಯನ್ನು ಹೀಗೆಯೇ ಮುಂದುವರಿಸಿ.