ಯೋಗಾ ಮತ್ತು ನೃತ್ಯಕ್ಕೆ ಹೇಳಿ ಮಾಡಿಸಿದ ಸಪೂರ ಮೈಮಾಟ-ಮಂದಸ್ಮಿತ ಮೊಗ. ಸದಾ ಪುಟಿಯುವ ಚೈತನ್ಯ. ಇವರೇ ಸ್ನೇಹಾ ಭಾಗವತ್. ಸಮರ್ಥ ಯೋಗಾ ಪಟು, ಭರತನಾಟ್ಯ ಸಾಧಕಿ ಸ್ನೇಹ, ಯಶಸ್ವೀ ಲಾಯರ್ ಕೂಡ.
ಹೊನ್ನಾವರ ಮೂಲದ ಈ ಬೆಡಗಿಯ ತಂದೆ ಎಂ.ಎಸ್. ಭಾಗವತ್ ಕೂಡ ಉಚ್ಚ ನ್ಯಾಯಾಲಯದ ಹಿರಿಯ ಅಡ್ವೋಕೇಟ್. ತಾಯಿ ಲಕ್ಷ್ಮೀ ಭಾಗವತ್ ಕಲಾರಾಧಕಿ. ಏಳುವರ್ಷದ ಪುಟ್ಟ ಸ್ನೇಹಳ ಹಾವ ಭಾವ, ಹೆಜ್ಜೆಯ ಲಯ ಗುರುತಿಸಿದವರು ಖ್ಯಾತ ನಾಟ್ಯಗುರು ಭವಾನಿ ರಾಮನಾಥ್ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಅನಂತರ ಸ್ನೇಹ ತನ್ನ ನಾಟ್ಯ ಕಲಿಕೆ ಮುಂದುವರಿಸಿದ್ದು ಡಾ. ಸಂಜಯ್ ಶಾಂತಾರಾಂ ಅವರ ಬಳಿ. ಸತತ 27 ವರ್ಷಗಳ ನೃತ್ಯ ಸಾಧನೆಯಲ್ಲಿ ಸ್ನೇಹ ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಉತ್ತಮ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾಳೆ.
ಶ್ರೀ ವಿದ್ಯಾಮಂದಿರದಲ್ಲಿ ಓದುವಾಗ ತಪ್ಪದೆ ಎಲ್ಲ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ, ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುತ್ತ ತನ್ನ ನೃತ್ಯದೊಲವು, ಪರಿಶ್ರಮವನ್ನು ಸಾಬೀತುಗೊಳಿಸಿದಾಕೆ, ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಭಾರತೀಯ ನೃತ್ಯ ಸಂಸ್ಥೆಯ ಸಕ್ರಿಯ ಭಾಗವಾದಳು. ವಿಶ್ವವಿದ್ಯಾಲಯದ ಲಾ ಕಾಲೇಜಿನಿಂದ ಕಾನೂನು ಪದವಿ ಪಡೆದು, ಪ್ರಸ್ತುತ ತಂದೆಯ ಬಳಿಯೇ ಯಶಸ್ವೀ ಲಾಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಳೆ.
ಬಾಲ್ಯದಿಂದ ನೃತ್ಯದತ್ತ ಅದಮ್ಯ ಒಲವು-ನಂತರ ಉತ್ತಮ ತರಬೇತಿ-ಬದ್ಧತೆಯ ಕಠಿಣಾಭ್ಯಾಸಗಳಿಂದ ಸ್ನೇಹ ಭರತನಾಟ್ಯದ ಎಲ್ಲ ಆಯಾಮ, ಸೀಮೆಗಳನ್ನು ಶೋಧಿಸುವತ್ತ ಗಂಭೀರವಾಗಿ ತೊಡಗಿಕೊಂಡಳು. ಕರ್ನಾಟಕ ಸರ್ಕಾರದ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ನೃತ್ಯ ಪರೀಕ್ಷೆಗಳಲ್ಲಿ ಉತ್ತಮಾಂಕಗಳಿಂದ ಮುಂದುವರೆದು, ಪ್ರಸ್ತುತ ತಂಜಾವೂರಿನ ಶಾಸ್ತ್ರ ಯುನಿವರ್ಸಿಟಿಯಲ್ಲಿ ಭರತನಾಟ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಗೆ ಅಭ್ಯಾಸ ಮಾಡುತ್ತಿರುವಳು.
ದೂರದರ್ಶನದ ‘ಗ್ರೆಡೆಡ್ ಆರ್ಟಿಸ್ಟ್’ ಆಗಿ ಮಾನ್ಯತೆ ಪಡೆದಿರುವ ಸ್ನೇಹಾ, ಸಮರ್ಥ ನೃತ್ಯಗಾತಿಯಾಗಿ ನೀಡಿರುವ ನೃತ್ಯ ಪ್ರದರ್ಶನಗಳು ಅಸಂಖ್ಯ. ಏಕವ್ಯಕ್ತಿ ಪ್ರದರ್ಶನ ಜೊತೆಗೆ ಸಮೂಹ ನೃತ್ಯಗಳಲ್ಲೂ ತನ್ನ ಅಸ್ಮಿತೆ ಮೆರೆವ ಕಲಾವಿದೆ ಈಕೆ. ‘ಶಿವಪ್ರಿಯ’ ತಂಡದ ಎಲ್ಲ ಪ್ರಮುಖ ನೃತ್ಯರೂಪಕಗಳಲ್ಲಿ ಭಾರತದಲ್ಲಿ ಮತ್ತು ವಿದೇಶದಲ್ಲಿ ನೂರಾರು ಪ್ರದರ್ಶನಗಳನ್ನಿತ್ತಿರುವ ಹೆಮ್ಮೆ ಈಕೆಯದು. ‘ಶಿವಚರಿತಾಮೃತ’- ಟೆಲಿ ಸೀರಿಯಲ್ ನ ಶೀರ್ಷಿಕೆ ಗೀತೆಯಲ್ಲಿ ಈಕೆಯೇ ಪ್ರಧಾನ ನರ್ತಕಿಯಾಗಿ ನರ್ತಿಸಿ ಪ್ರಾಮುಖ್ಯ ಪಡೆದಿದ್ದಾರೆ. ಸ್ನೇಹಾ ಭಾಗವಹಿಸಿರುವ ಪ್ರಮುಖ ಉತ್ಸವಗಳನ್ನು ಹೆಸರಿಸಬೇಕೆಂದರೆ – ಆರ್ಯಭಟ ನೃತ್ಯೋತ್ಸವ, ಸಭಾ ಮುಂತಾದ ಅನೇಕಾನೇಕ ನೃತ್ಯೋತ್ಸವಗಳಲ್ಲಿ ಭಾಗವಹಿಸಿದ ಹಿರಿಮೆ.
ಅಂತರರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ನೃತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಸ್ನೇಹಾ, ದಕ್ಷಿಣ ಭಾರತದಾಂತ್ಯವಲ್ಲದೆ, ಸಿಂಗಾಪುರ್, ಕೊಲೊಂಬೋ, ಮಲೇಶಿಯಾ,ಬೆಹರಾನ್, ಆಸ್ಟ್ರೇಲಿಯಾ, ಕತಾರ್ ಗಳಲ್ಲಿ ನರ್ತಿಸಿ ಮೆಚ್ಚುಗೆ ಗಳಿಸಿದ್ದಾಳೆ. ಅಮೆರಿಕಾದ್ಯಂತ ಎಲ್ಲ ರಾಜ್ಯಗಳಲ್ಲೂ ತನ್ನ ಗುರು ಸಂಜಯ್ ಅವರೊಡನೆ ನೃತ್ಯಕ್ಕೆ ಸಂಬಂಧಿಸಿದಂತೆ ಅನೇಕ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿರುವ ವೈಶಿಷ್ಟ್ಯ. ‘ ಶಿವಪ್ರಿಯ’ದ ನಿರ್ಮಾಣಗಳಾದ ಅಲ್ಲಾದಿನ್, ರೂಪ-ವಿರೂಪ, ನವರಸ ಕೃಷ್ಣ, ತಾಂಡವ ಮುಂತಾದ ನೃತ್ಯರೂಪಕಗಳಲ್ಲಿ ಪ್ರದರ್ಶನ ನೀಡಿದ ಹೆಮ್ಮೆ ಇವಳದು. ಜೊತೆಗೆ, ನೃತ್ಯ ಕಲಾವಿದ ಕೆ.ಸಿ.ರೂಪೇಶ್ ಅವರ ಸಹಯೋಗದಲ್ಲಿ ‘’ ಸಾಮರಸ್ಯ’’ ಸಂಸ್ಥೆಯ ಸ್ಥಾಪಕಿಯಾಗಿ ಅನೇಕ ವಿಶೇಷ ಪ್ರದರ್ಶನಗಳನ್ನು ಮತ್ತು ಶೇಖರ್ ರಾಜೇಂದ್ರನ್ ಅವರೊಡನೆ ’’ ಮಯಾ’’ತಂಡದ ಭಾಗವಾಗಿ ಅನೇಕ ಗಮನಾರ್ಹ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾಳೆ. ಪರಸ್ಪರ ಬೆಳವಣಿಗೆಯ ದೃಷ್ಟಿಯಲ್ಲಿ ತನ್ನ ಸಹ ನೃತ್ಯ ಕಲಾವಿದರೊಡನೆ, ಸೃಷ್ಟಿ-ಶೋಧನೆಯ ವಿವಿಧ ಆಯಾಮಗಳ ಅನ್ವೇಷಣಾ ಕಾರ್ಯದಲ್ಲಿ ನಿಮಗ್ನರಾಗಿದ್ದಾರೆ.
ತಮ್ಮ ಜೀವನದ ಭಾಗವಾಗಿ ಯೋಗಾಭ್ಯಾಸವನ್ನು ಅಳವಡಿಸಿಕೊಂಡಿರುವುದಲ್ಲದೆ ಸ್ನೇಹಾ, ಎಸ್. ವ್ಯಾಸ ಯುನಿವರ್ಸಿಟಿ ಮತ್ತು ನಿರಾಕುಲ ಅಕಾಡೆಮಿಯಿಂದ ಯೋಗ ತರಬೇತಿ-ಶಿಕ್ಷಣ ಪಡೆದು, ಅದರಲ್ಲಿ ನೈಪುಣ್ಯ ಪಡೆದು ಶಿಕ್ಷಕಿಯಾಗಿ ಅನೇಕರಿಗೆ ಯೋಗಾಭ್ಯಾಸವನ್ನು ಹೇಳಿಕೊಡುತ್ತಿದ್ದಾರೆ. ತಮ್ಮದೇ ಆದ ‘’ಸ್ಥಿತಾ’’ ನೃತ್ಯ ಸಂಸ್ಥೆಯಲ್ಲಿ ಅದರ ಕ್ರಿಯೇಟಿವ್ ಡೈರೆಕ್ಟರ್ ಆಗಿ, ನೃತ್ಯಾಕಾಂಕ್ಷಿಗಳಿಗೆ ನೃತ್ಯ ಶಿಕ್ಷಣ ನೀಡುತ್ತಿರುವ ಇವರು, ‘ನೃತ್ಯಕ್ಕೆ ಯೋಗದ ಸಾಹಚರ್ಯ ಅತ್ಯಗತ್ಯ , ದೇಹ ನಿಯಂತ್ರಣಕ್ಕೆ ಯೋಗ ಅತ್ಯಾವಶ್ಯ’ ಎನ್ನುತ್ತಾರೆ. ಉತ್ತಮ ನೃತ್ಯ ಸಂಯೋಜಕರೂ ಕೂಡ ಆಗಿರುವ ಇವರು, ಅನೇಕ ನೃತ್ಯರೂಪಕಗಳ ಸಂಯೋಜನೆಯಲ್ಲಿ ತಮ್ಮ ಕಲಾನೈಪುಣ್ಯ ಬಳಸಿದ್ದಾರೆ. ಡಾ. ಪದ್ಮಾ ಸುಬ್ರಹ್ಮಣ್ಯಂ, ಶಂಕರ ಕಂದಸ್ವಾಮಿ, ಕಿರಣ್ ಸುಬ್ರಹ್ಮಣ್ಯಂ, ಬ್ರೆಗಾ ಬೆಸಲ್, ಡಾ. ಜಾನಕಿ ರಂಗರಾಜನ್, ರಮಾ ವೈದ್ಯನಾಥನ್ ಮುಂತಾದ ಖ್ಯಾತ ನೃತ್ಯಜ್ಞರ ಕಾರ್ಯಾಗಾರಗಳಿಂದ ವಿಪುಲ ನೃತ್ಯ ಜ್ಞಾನ ಸಂಪಾದಿಸಿರುವ ಸ್ನೇಹಾ ಅತ್ಯಂತ ನಿಗರ್ವಿ-ಸರಳ ಸ್ವಭಾವದವರು. ಕಥಕ್ ನೃತ್ಯಪಟು ನಿರುಪಮಾ ರಾಜೇಂದ್ರನ್ ಅವರಿಂದ ನಾಟ್ಯಶಾಸ್ತ್ರದ ಕರಣಗಳನ್ನು ಕಲಿಯುವ ಅದೃಷ್ಟ ಇವರದಾಗಿತ್ತು.
ಕುಚಿಪುಡಿ, ಕಥಕ್, ಕಳರಿಪಯಟ್ಟು, ಮತ್ತು ಕಾನ್ಟೆಂಪೋರರಿ ಮುಂತಾದ ಅನೇಕ ಬಗೆಯ ನೃತ್ಯಶೈಲಿಗಳ ಪರಿಚಯವನ್ನು ಹೊಂದಿರುವ ಸ್ನೇಹ, ಒಬ್ಬ ಪರಿಪೂರ್ಣ ಕಲಾವಿದೆ ಎನಿಸಿಕೊಂಡಿದ್ದಾರೆ. ಸಂಗೀತದಲ್ಲೂ ಅಪಾರ ಒಲವಿದ್ದು, ಪ್ರಖ್ಯಾತ ಸಂಗೀತಗಾರ್ತಿ ಡಾ. ಪಿ.ರಮಾ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಕೇರಳದ ಹೇಮಂತ್ ಲಕ್ಷ್ಮಣ್ ಅವರಿಂದ ನಟುವಾಂಗವನ್ನೂ ಕಲಿಯುತ್ತಿರುವ ಶ್ರದ್ಧೆ-ಬದ್ಧತೆ ಇವರದು.
ಸ್ನೇಹ ಅವರ ಪ್ರತಿಭೆ ಮತ್ತು ಸಾಧನೆಯನ್ನು ಅನುಸರಿಸಿ, ಅನೇಕ ಗೌರವ-ಪ್ರಶಸ್ತಿಗಳು ಅರಸಿ ಬಂದಿವೆ. ಕಲಾ ಆರತಿ ರತ್ನ (ಅರಿಜೋನಾ) , ನಾಟ್ಯ ಮಯೂರಿ ( ಸೆಂಟ್ರಲ್ ಓಹಿಯೋ), ನೃತ್ಯ ವಿಶಾರದೆ ( ಸಿಡ್ನಿ ಸ್ಯಾಂಡಲ್ ವುಡ್ ಎಂಟರ್ಟೈನ್ ಮೆಂಟ್ಸ್) ಕರ್ನಾಟಕ ವುಮನ್ಸ್ ಲಾಯರ್ ಅಸೋಸಿಯೇಶನ್ ನಿಂದ ‘ವುಮನ್ ಅಚಿವರ್’ ಮುಂತಾದ ಅನೇಕ ಪ್ರಶಸ್ತಿ-ಬಿರುದುಗಳು ಇವರಿಗೆ ಸಂದಿವೆ.
ಕಳೆದೆರಡು ವರ್ಷಗಳಿಂದ ಸ್ನೇಹಾ, ಅಮೇರಿಕ, ಯುರೋಪ್ ರಾಜ್ಯಗಳ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕ ನೃತ್ಯಶಿಕ್ಷಣ ನೀಡುತ್ತಿದ್ದಾರೆ. ಅವ್ಯಕ್ತ ಮಾಂತ್ರಿಕ ಶಕ್ತಿಯುಳ್ಳ ನೃತ್ಯದ ದಿವ್ಯಾನುಭವದ ಅಮೂರ್ತತೆ ಮತ್ತು ನೃತ್ಯದ ಭಾವ ಮನಸ್ಸನ್ನು ಮುದಗೊಳಿಸುತ್ತದೆ ಎಂದು ತಾದಾತ್ಮ್ಯರಾಗುತ್ತಾರೆ.
ಸ್ನೇಹಳಿಗೆ ಅನುರೂಪರಾದ ಪತಿ ಅರವಿಂದ್ ಚಂದ್ರಶೇಖರ್ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಫೋಟೋ ಗ್ರಫಿಯಲ್ಲಿ ಅವರಿಗೆ ಅಪಾರ ಒಲವು. ಪತ್ನಿಯ ಎಲ್ಲ ಕಾರ್ಯಕ್ರಮಗಳಲ್ಲೂ ಸಮಭಾಗಿ, ಅತುಳ ಕಲಾ ಪ್ರೋತ್ಸಾಹಿ. ಈಗ ಈ ದಂಪತಿಗಳಿಗೆ ಒಂದೂವರೆ ತಿಂಗಳ ಪುಟ್ಟ ಕೂಸು.
*************************************