Image default
Dance Reviews

ತಾಯಿ-ಮಗನ ಅಪರೂಪದ ರಂಗಪ್ರವೇಶ

ಸಾಮಾನ್ಯವಾಗಿ ಒಂದೇ ಗುರುಗಳ ಇಬ್ಬರು ಶಿಷ್ಯರು ಅಥವಾ ಅಣ್ಣ-ತಂಗಿ, ಅಕ್ಕ-ತಂಗಿ ಹೀಗೆ ಜೋಡಿಯಾಗಿ  ರಂಗಪ್ರವೇಶ ಮಾಡುವುದು ಸಾಮಾನ್ಯ. ಆದರೆ ಇಲ್ಲೊಂದು ಅಪರೂಪದ ರಂಗಪ್ರವೇಶ ನಡೆಯಿತು. ಶ್ರೀಮತಿ ಶ್ರೀಲಕ್ಷ್ಮೀ ಪ್ರಸಾದ್ ಮತ್ತು ಅಕ್ಷಯ್  ಎಸ್. ಭಾರದ್ವಾಜ್, ತಾಯಿ ಮತ್ತು ಮಗ ಒಟ್ಟಿಗೆ ತಾವು ಕಲಿತ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಲೋಸುಗ ಒಂದೇ ವೇದಿಕೆಯ ಮೇಲೆ ‘ರಂಗಪ್ರವೇಶ’ವನ್ನು ವಿದ್ಯುಕ್ತವಾಗಿ ನೆರವೇರಿಸಿಕೊಂಡದ್ದು ವಿಶೇಷ ಘಟನೆ.

ಅಂತರರಾಷ್ಟ್ರೀಯ ನೃತ್ಯ ಕಲಾವಿದ-ಗುರು, ನೃತ್ಯ ಸಂಯೋಜಕ, ಗಾಯಕ ಮತ್ತು ನಟುವನ್ನಾರ್ ಎಂಬ ವಿಶಿಷ್ಟ ವಿಶೇಷಣಗಳನ್ನೊಳಗೊಂಡ ಡಾ. ಸಂಜಯ್ ಶಾಂತಾರಾಂ ಅವರ ಬಳಿ ಶಿಕ್ಷಣ ಪಡೆದ ಉದಯೋನ್ಮುಖ ನೃತ್ಯಕಲಾವಿದ ಅಕ್ಷಯ್, ಇದಾಗಲೇ ನೃತ್ಯ ಕಲಾವಿದೆಯಾಗಿ ಹಲವಾರು ಕಾಯ್ರಕ್ರಮಗಳನ್ನು ನೀಡಿದ್ದ ತಾಯಿ ಶ್ರೀಲಕ್ಷ್ಮೀ ಅವರೊಂದಿಗೆ ಮಲ್ಲೇಶ್ವರದ ಸೇವಾಸದನದ ವೇದಿಕೆಯ ಮೇಲೆ ನರ್ತಿಸಿದರು. ‘ಶಿವಪ್ರಿಯ’ ನೃತ್ಯ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ತಾಯಿ ಶ್ರೀಲಕ್ಷ್ಮಿಗೆ ಬಾಲ್ಯದಿಂದ ನೃತ್ಯದ ಬಗ್ಗೆ ಅಪಾರ ಒಲವು. ‘ಪ್ರಭಾತ್ ಕಲಾವಿದರು’ ಸಂಸ್ಥೆಯಲ್ಲಿ ಒಂದೆರಡು ವರ್ಷ ಕಲಿತು ಹಲವೆಡೆ ನೃತ್ಯಕಾರ್ಯಕ್ರಮ ನೀಡಿ, ಮುಂದೆ ಅವಕಾಶವಾಗದೆ ಕಲಿಕೆ ನಿಂತು ಹೋದರೂ, ತಮ್ಮ ಮಗ ಅಕ್ಷಯನನ್ನು ನೃತ್ಯ ಕಲಾವಿದನನ್ನಾಗಿ ಮಾಡುವ ಕನಸು ಚಿಗುರಿತು. ಅವನಿಗೆ ಮೂರು ವರ್ಷವಾದಾಗ ನಾಟ್ಯಗುರು ಮಂಜು ಭೈರವಿ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಜೊತೆಗೆ ನೃತ್ಯ ಮುಂದುವರಿಸುವ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸುಯೋಗ ಆಗ ಆಕೆಗೆ ಒದಗಿಬಂತು. ಪತಿ ಶ್ರೀಕಂಠ ಪ್ರಸಾದ್ ಅವರ ಪ್ರೋತ್ಸಾಹದಿಂದ ಶ್ರೀಲಕ್ಷ್ಮಿ ಮಗನೊಡನೆ ತಾವೂ ನೃತ್ಯ ಕಲಿಯಲು ಆರಂಭಿಸಿದರು. ಮಂಜುಭೈರವಿ ಮಾರ್ಗದರ್ಶನದಲ್ಲಿ ಇಬ್ಬರೂ ಸರ್ಕಾರ ನಡೆಸುವ  ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ಪ್ರಥಮದರ್ಜೆಯಲ್ಲಿ ಜಯಶೀಲರಾದರು. ಇಬ್ಬರೂ ರಾಜ್ಯದ ಅನೇಕ ಪ್ರಮುಖ ದೇವಸ್ಥಾನಗಳು, ಪುಣ್ಯಕ್ಷೇತ್ರಗಳಲ್ಲಿ, ದೆಹಲಿ, ಮುಂಬೈ, ರಾಜಾಸ್ಥಾನ ಮುಂತಾದ ಅನೇಕ ವೇದಿಕೆಗಳ ಮೇಲೆ ನೃತ್ಯ ಪ್ರದರ್ಶನಗಳನ್ನು ನೀಡಿದರು. 

ಮುಂದೆ-ಅಕ್ಷಯ್, ಹೆಚ್ಚಿನ ಕಲಿಕೆಗೆ ಡಾ.ಸಂಜಯ್ ಶಾಂತಾರಾಂ ಅವರ ಬಳಿ ಸೇರಿ, ಶಿವಪ್ರಿಯದ ಕರ್ನಾಟಕ ವೈಭವ, ಅಪೂರ್ವ ಭಾರತ, ರೂಪ-ವಿರೂಪ, ನಾಡಪ್ರಭು  ಕೆಂಪೇಗೌಡ ಮುಂತಾದ ನೃತ್ಯರೂಪಕಗಳಲ್ಲಿ ಭಾಗವಹಿಸಿದರು. ಕಂಪ್ಯೂಟರ್ ವಿಷಯದಲ್ಲಿ ಡಿಪ್ಲೊಮಾ ಮಾಡಿರುವ ಅಕ್ಷಯನಿಗೆ  ನೃತ್ಯವನ್ನೇ ವೃತ್ತಿಯಾಗಿ ಸ್ವೀಕರಿಸಿ ಸಾಧನೆ ಮಾಡುವ ಹಂಬಲ. ಕರಕುಶಲ ಕಲೆಯಲ್ಲಿ ಪಳಗಿರುವ ಶ್ರೀಲಕ್ಷ್ಮೀ ಕೊಬ್ಬರಿ ಕೆತ್ತನೆ, ಬೊಂಬೆಗಳ ಅಲಂಕಾರ ಮುಂತಾದ ಕುಶಲಕಲೆಗಳಲ್ಲಿ ವೃತ್ತಿಪರ ಸೇವೆ ನೀಡುತ್ತ, ನೃತ್ಯ ಕಾಯಕವನ್ನೂ ಮುಂದುವರಿಸಿಕೊಂಡು ಹೋಗುವ ಭರವಸೆ ಹೊತ್ತಿದ್ದಾರೆ.

ತಾಯಿ-ಮಗ ಒಂದೇ ವೇದಿಕೆಯ ಮೇಲೆ ಜೋಡಿಯಾಗಿ ನರ್ತಿಸಿದ್ದು ಒಂದು ವಿಶೇಷವಾದರೆ, ಗುರು ಸಂಜಯ್ ಈ ರಂಗಪ್ರವೇಶಕ್ಕೆಂದೇ ನೂತನ ‘ವರ್ಣ’ವನ್ನು ರಚಿಸಿ ಸುಮನೋಹರವಾಗಿ ನೃತ್ಯ ಸಂಯೋಜಿಸಿ, ಮಿಂಚಿನ ಸ್ಪರ್ಶದ ಹೊಸಬಗೆಯ ಜತಿಗಳ ಸಮ್ಮೇಳದಿಂದ ಆನಂದ ನೀಡಿದರು. ಪ್ರಯೋಗಶೀಲತೆಗೆ ಹೆಸರಾದ ಇವರು, ಪುಷ್ಪಾಂಜಲಿಯಿಂದ ಹಿಡಿದು, ತಿಲ್ಲಾನ-ಮಂಗಳದವರೆಗೂ ಬಹುತೇಕ ಕೃತಿಗಳನ್ನು ಅವರೇ ರಚಿಸಿ, ಹೊಸತನವನ್ನು ಮೆರೆದರು.

ಶುಭಾರಂಭಕ್ಕೆ ‘ತಿಲ್ಲಾಂಗ್’ ರಾಗದಲ್ಲಿ ಮಂಡಿತವಾದ ‘ಪುಷ್ಪಾಂಜಲಿ’ಯ ಮೊದಲ ಹೆಜ್ಜೆಯಲ್ಲೇ ಅಕ್ಷಯ್ ತಮ್ಮ ಲವಲವಿಕೆಯ ಪರಿಚಯ ಮೂಡಿಸಿದರು. ವಿಘ್ನನಿವಾರಕನಿಗೆ ಮೊದಲ ವಂದನೆ ಸಮರ್ಪಿಸುವ ‘ಶ್ರೀ ಗಣೇಶ ಶರಣಂ’  ಕೃತಿ, ಕಲಾವಿದನ ಆತ್ಮವಿಶ್ವಾಸದ ಖಚಿತ ಅಡವು-ಹಸ್ತಚಲನೆಯ ಓಘದಲ್ಲಿ ಕಲಾರಸಿಕರ ಗಮನವನ್ನು ಹಿಡಿದಿಟ್ಟುಕೊಂಡಿತು. ಸಪೂರ ದೇಹದ ಅಕ್ಷಯ್, ತನ್ನ ಅಂಗಶುದ್ಧದ ಸುಂದರ ಚಾರಿಗಳಲ್ಲಿ, ವಿನಾಯಕನ ವಿಶಿಷ್ಟ ಭಂಗಿಗಳನ್ನು ಹರಿತ ಜತಿಗಳ ಸೆಳೆಮಿಂಚಿನಲ್ಲಿ ಸೃಜಿಸಿದ್ದು ನಯನ ಮನೋಹರವಾಗಿತ್ತು. ರಂಗವನ್ನು ಸಂಪೂರ್ಣ ಬಳಸಿಕೊಂಡ ಅವನ ಪಾದರಸದ ಚಲನೆಗಳು ಗಣಪನಿಗೆ ಭಕ್ತಿಪೂರ್ಣವಾಗಿ ನಾದ ನೈವೇದ್ಯ-ನೂಪುರಾರ್ಚನೆಯನ್ನು ಗೈದವು.  

ಅನಂತರ- ಭಾಗೇಶ್ರೀ-ಪೂರ್ವ ಕಲ್ಯಾಣಿ ರಾಗಮಿಳಿತ ಸಂಜಯರ ಕನ್ನಡ ರಚನೆ ‘ನಮೋ ನಮೋ ಹನುಮಂತ’ ಭಕ್ತಿಪ್ರಧಾನ ಕೃತಿ ಅಕ್ಷಯನ ಚೈತನ್ಯದ ಅನಾವರಣಕ್ಕಾಗಿಯೇ ರಚಿಸಿದಂತಿತ್ತು. ಹನುಮಂತ ಕೇಂದ್ರಿತ ರಾಮಾಯಣದ ಮುಖ್ಯಘಟನೆಗಳನ್ನು ಸುಂದರವಾಗಿ ಚಿತ್ರಿಸಿದ ಕೃತಿಯನ್ನು ಕಲಾವಿದ, ಭಕ್ತ್ಯಾವೇಶದಿಂದ ತಾದಾತ್ಮ್ಯನಾಗಿ ಸಮರ್ಪಿಸಿದ. ಸಂಚಾರಿಯಲ್ಲಿ- ಹನುಮಂತನ ಜನನದಿಂದ ಹಿಡಿದು, ಶ್ರೀರಾಮನ ಸಖ್ಯ, ಸೀತಾನ್ವೇಷಣೆ, ಸೇತು ನಿರ್ಮಾಣ, ಮುದ್ರಾ ಉಂಗುರ ನೀಡಿಕೆ,  ಲಂಕಾದಹನದವರೆಗೂ ಬಹು ಸಂಕ್ಷಿಪ್ತವಾಗಿ ಘಟನಾವಳಿಗಳನ್ನು ಸಾಂದ್ರವಾಗಿ ಒಡಮೂಡಿಸಲಾಯಿತು. ವಿವಿಧ ಬಗೆಯಲ್ಲಿ ಹೆಣೆದ ಸಂಕೀರ್ಣ ಜತಿಗಳನ್ನು ಅಕ್ಷಯ್ ಅಷ್ಟೇ ಜೀವಂತಿಕೆಯಿಂದ ನಿರೂಪಿಸಿ ಮನದುಂಬಿದನು.

ಮುಂದಿನ ಹಂತ ಮಹತ್ವದ್ದಾಗಿತ್ತು. ಈ ಸಂದರ್ಭಕ್ಕಾಗಿಯೇ ರಚಿಸಿದ ಅಯ್ಯಪ್ಪನ ಕುರಿತ ಅಪರೂಪದ ‘ವರ್ಣ’- ಕೃಷ್ಣಮಣಿ ರಾಗದಲ್ಲಿ ಸಂಯೋಜಿತಗೊಳಿಸಿದ್ದರು ವಾಗ್ಗೇಯಕಾರ ಸಂಜಯ್. ಹರಿಹರ ಸಂಗಮದಿಂದ ಜನಿಸಿದ ಅಯ್ಯಪ್ಪನ ವರ್ಣರಂಜಿತ ಕಥೆಯನ್ನು ಎಳೆಎಳೆಯಾಗಿ ಮುಂದಿಡುವ ‘ಹರಿಹರ ಸುತನೆ ಅಯ್ಯಪ್ಪ’ ರಸಾನುಭವವನ್ನು ನೀಡುವಲ್ಲಿ ಸಫಲವಾಯಿತು. ಹರಿ, ಮೋಹಿನಿಯ ರೂಪ ತಾಳಿ ದುಷ್ಟರಕ್ಕಸ ಮಹಿಷಿಯನ್ನು ದಮನಿಸುವ ಸಂಚಾರಿ ಸಂಕ್ಷಿಪ್ತವಾಗಿ ಮೂಡಿಬಂದರೆ, ರಾಜನ ಸಾಕುಮಗ ಅಯ್ಯಪ್ಪ ಕುಮನಸ್ಸಿನ ಸಾಕುತಾಯಿಯ ಸಂಚಿನಿಂದ, ದುರ್ಗಮ ಕಾಡಿಗೆ ತೆರಳಿ ಅವಳ ಬಯಕೆಯಂತೆ ‘ಹುಲಿಯ ಹಾಲ’ನ್ನು ತರುವ, ಹುಲಿಯ ಮೇಲೆ ಕುಳಿತು ಪುರ ಪ್ರವೇಶಿಸುವ ದೃಶ್ಯ ಪರಿಣಾಮಕಾರಿಯಾಗಿ ಸಾಕಾರಗೊಂಡಿತು.

ಲಯಬದ್ಧ ಜತಿಗಳಲ್ಲಿ ಎರಕಗೊಂಡ ಕ್ಲಿಷ್ಟ ನೃತ್ತಗಳ ಹೆಣಿಗೆ, ಕಲಾವಿದನ ನೃತ್ಯಸಾಮರ್ಥ್ಯಕ್ಕೆ ಸವಾಲೊಡ್ಡುವಂತಿತ್ತು. ಮಹಿಷಿ ಸೃಷ್ಟಿಸಿದ ಹಿಂಸಾಚಾರದ ಸನ್ನಿವೇಶ ದೃಶ್ಯವತ್ತಾಗಿತ್ತು. ಹರನನ್ನು ಸೆಳೆಯುವ  ಶೃಂಗಾರದ ಸಂಗಮದಲ್ಲಿ  ಮೋಹಿನಿಯಾಗಿ ಶ್ರೀಲಕ್ಷ್ಮೀ ಪೂರಕವಾಗಿ ನರ್ತಿಸಿದರು, ಮಣಿಕಂಠನನ್ನು ಸ್ತುತಿಸಿದರು.

ಮುಂದೆ- ಶ್ರೀಲಕ್ಷ್ಮೀ, ‘ಹರಿಸ್ಮರಣೆ ಮಾಡೋ ನಿರಂತರ’ ( ರಚನೆ: ಶ್ರೀ ಪುರಂದರದಾಸರು)ಎಂದು ಶ್ರೀ ಹರಿಯ ಮಹಿಮೆಯನ್ನು ಸಾರುವ ಘಟನೆಗಳನ್ನು ಸಂಚಾರಿಯಲ್ಲಿ ಅಭಿನಯಿಸಿ ತೋರಿದರು. ದ್ರೌಪದಿಗೆ, ಕೃಷ್ಣ,  ಅಕ್ಷಯವಸ್ತ್ರವನ್ನು ನೀಡುವ ದೃಶ್ಯವನ್ನು ಕಲಾವಿದೆ ಸಮಗ್ರವಾಗಿ ಅಷ್ಟೇ ಸಮರ್ಪಕವಾಗಿ ನಿರ್ವಹಿಸಿದರು. ಪರಮೇಶ್ವರನ ವಿಶೇಷ ಗುಣಪಾರಮ್ಯವನ್ನು ಎತ್ತಿ ಹಿಡಿವ ‘ ಆಡಿದನಾಡಿದ ಆಹಾ ಶಂಕರ’ ( ಗುಂಡಪ್ಪನ ರಗಳೆ) ನನ್ನು ಮನಸೋ ಇಚ್ಛೆ ಭಕ್ತ್ಯಾಧಿಕ್ಯದಿಂದ ಕುಣಿಕುಣಿದು ಅರ್ಚಿಸಿದ ನೃತ್ತಾವಳಿಗಳ ಸಮ್ಮೋದ ಕಲಾವಿದನ ಅಪೂರ್ವ ಚೈತನ್ಯಕ್ಕೆ ಕನ್ನಡಿ ಹಿಡಿಯಿತು. ನೃತ್ಯದಿಂದ ನೃತ್ಯಕ್ಕೆ ಉತ್ಸಾಹ ತುಂಬಿಕೊಂಡ ಅಕ್ಷಯನ ಆನಂದದ, ಲೀಲಾಜಾಲ ನರ್ತನ ಮುದ ನೀಡಿತು.

ಅಕ್ಷಯ್ ನಿರೂಪಿಸಿದ, ಪೌರುಷ ನೆಲೆಗಟ್ಟಿನ ವೈವಿಧ್ಯಪೂರ್ಣ ಜತಿಗಳ ನೃತ್ತ ಸಮೃದ್ಧತೆ, ಸಂಜಯವರ ನೃತ್ಯ ಸಂಯೋಜನೆಯ ಸೃಜನಾತ್ಮಕತೆಯನ್ನು ಅಭಿವ್ಯಕ್ತಿಸಿತು. ಅವು ಶಿವನ ರಭಸದ ಓಘ-ಆವೇಶವನ್ನು ಮನಗಾಣಿಸಿದವು. ಪಾದಭೇದದ ಅಡವುಗಳ ಸೊಗಸು, ಸ್ಥಾಯಿಭಾವವನ್ನು ಪುಷ್ಟೀಕರಿಸಿತು. ಕಲಾವಿದನ ಹಕ್ಕಿ ಹಾರಾಟದಂಥ ಲಾಘವ ಹೆಜ್ಜೆಗಳ ಓಳಿ ಮನತಟ್ಟಿತು. ಮುಂದೆ- ಕಲ್ಯಾಣಿ ರಾಗದ ‘ತಿಲ್ಲಾನ’ದಲ್ಲಿ ಯಾಂತ್ರಿಕತೆ ಇಣುಕದ ಜತಿಗಳಲ್ಲಿ ಮೂಡಿದ ನವರಸಾಭಿವ್ಯಕ್ತಿ, ಸ್ವರಗಳ ಆರೋಹಣ-ಅವರೋಹಣಗಳಲ್ಲಿ ಬಿಂಬಿಸಿದ ನೃತ್ತಗಳೂ ವಿಭಿನ್ನವೆನಿಸಿದವು. ವಂದೇ ಮಾತರಂ ಮತ್ತು ರಾಷ್ಟ್ರಗೀತೆಯನ್ನು ಅನುರಣಿಸಿದ ‘ಮಂಗಳ’ದೊಂದಿಗೆ ತಾಯಿ-ಮಗನ ಯುಗಳ ನೃತ್ಯ ಸಂಪನ್ನಗೊಂಡಿತು.

ಸುಮನೋಹರ ನರ್ತನಕ್ಕೆ ಸುವರ್ಣ ಚೌಕಟ್ಟು ಹಾಕಿದ ವಾದ್ಯವೃಂದದ ಸಹಕಾರ ಸ್ತುತ್ಯಾರ್ಹ. ಡಾ. ಸಂಜಯ್ ಅವರ ಭಾವಪೂರ್ಣ ಗಾಯನ-ನಟುವಾಂಗ, ಮಾ. ಕೌಶಿಕನ ಸಹ ನಟುವಾಂಗ, ಕಾರ್ತೀಕ್ ವೈಧಾತ್ರಿ- ಮೃದಂಗ, ವಿ. ಗೋಪಾಲ್- ವೀಣೆ, ಕೊಳಲು -ಕಿಕ್ಕೇರಿ ಜಯರಾಂ ಮತ್ತು ರಿದಂ ಪ್ಯಾಡ್- ಕಾರ್ತೀಕ್ ದಾತಾರ್.  

                   ***************************************

Related posts

Kala Sindhu Academy-Samvitha Rangapravesha

YK Sandhya Sharma

Adithi Jagadeesh Rangapravesha-Review

YK Sandhya Sharma

ಅದ್ಭುತ ರಸಾನುಭವದ ‘’ಏಕ’’ಮೇವಾದ್ವಿತೀಯ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.