Image default
Dancer Profile

ಮೋಹಕ ಒಡಿಸ್ಸಿ ನರ್ತಕಿ ಕರಿಷ್ಮಾ ಅಹುಜಾ

ದೇವ ಜಗನ್ನಾಥನ ನಾಡಿನಿಂದ ವಿಶ್ವದಾದ್ಯಂತ ಸಂಚರಿಸುತ್ತಿರುವ, ಭಾರತದ ಶಾಸ್ರೀಯ ನೃತ್ಯಕಲೆಗಳಲ್ಲೊಂದಾದ `ಒಡಿಸ್ಸಿ’ ನೃತ್ಯಶೈಲಿ ಸಾಂಪ್ರದಾಯಕತೆ, ಭಕ್ತಿ ಮತ್ತು ಲಾಲಿತ್ಯಗಳ ಆಗರ. ಗುರು ಕೇಳುಚರಣ್ ಅವರ ಸುಮನೋಹರ  ಒಡಿಸ್ಸಿ ನೃತ್ಯಶೈಲಿಯಲ್ಲಿ ತರಬೇತಿ ಪಡೆದು ಅನೇಕ ವೇದಿಕೆಗಳಲ್ಲಿ  ನೃತ್ಯ ಪ್ರದರ್ಶನ ನೀಡುವ ಮೂಲಕ ರಸಿಕರ ಮನರಂಜಿಸುತ್ತಿರುವ ಖ್ಯಾತ ಕಲಾವಿದೆಯರ ಪೈಕಿ ಶ್ರೀಮತಿ ಕರಿಷ್ಮಾ ಅಹುಜಾ ಕೂಡ ಒಬ್ಬರು.

ಬೆಂಗಳೂರು ದಕ್ಷಿಣಭಾಗದಲ್ಲಿ ತಮ್ಮದೇ ಆದ ‘ಕಾದಂಬರಿ’ ನೃತ್ಯ ಸಂಸ್ಥೆಯ ಮೂಲಕ ಮಕ್ಕಳಿಗೆ ಬದ್ಧತೆಯಿಂದ ಒಡಿಸ್ಸಿ ನೃತ್ಯವನ್ನು ಕಲಿಸುತ್ತಿರುವ ಕರಿಷ್ಮಾ ತಮ್ಮ ಇಡೀ ಜೀವನವನ್ನು ನೃತ್ಯಾರ್ಪಣೆ ಮಾಡಿಕೊಂಡಿರುವುದು ವಿಶೇಷ.

ಮುಂಬೈ ಮೂಲದ ಪ್ರತಿಭಾವಂತೆ ಕರಿಷ್ಮಾರ ಸಂಪೂರ್ಣ ವಿದ್ಯಾಭ್ಯಾಸ ನಡೆದದ್ದು ಅಲ್ಲೇ.    ವಿದ್ಯಾರ್ಜನೆಗೂ ಅವರು ಕೈಕೊಂಡಿರುವ ಕಾಯಕಕ್ಕೂ ಅರ್ಥಾತ್ ಸಂಬಂಧವಿಲ್ಲ. ಮೂಲತಃ ಎಂ.ಬಿ.ಎ. ಪದವೀಧರೆಯಾಗಿ, ಕಾರ್ಪೋರೆಟ್ ಕ್ಷೇತ್ರದಲ್ಲಿ ಒಟ್ಟು ಎಂಟು  ವರ್ಷಗಳ ಅನುಭವ ಪಡೆದಿದ್ದಾರೆ.  ಕಾಗ್ನಿಸೆಂಟ್ ಕಾರ್ಪೋರೆಟ್ ಕಂಪೆನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹೆಚ್.ಆರ್. ಆಗಿ ಕಾರ್ಯ ನಿರ್ವಹಿಸಿದ್ದು ವಿಶೇಷ ಮುನ್ನಡೆ. ಮೊದಲಿನಿಂದ ನೃತ್ಯದ ಬಗ್ಗೆ ಅದಮ್ಯ ಪ್ರೀತಿಯಿದ್ದ ಇವರು ಶಾಲಾ-ಕಾಲೇಜುಗಳಲ್ಲೂ ನೃತ್ಯಸ್ಪರ್ಧೆ-ಪ್ರದರ್ಶನಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದುಂಟು. ನರ್ತಿಸುವಾಸೆ ಸುಪ್ತವಾಗಿಯೇ ಇದ್ದದ್ದು,  ಅನಂತರ ಮದುವೆ-ಮಗುವಾದನಂತರ ಅವರ ಕನಸು ನನಸಾಯಿತು .

ಮುಂಬೈನಲ್ಲಿ ವಿದ್ಯಾಭ್ಯಾಸದ ನಂತರ ಕೆಲಕಾಲ ಅಲ್ಲಿ ಉದ್ಯೋಗ ಮಾಡಿದ ಮೇಲೆ ಕಳೆದೊಂದು ದಶಕದಿಂದ ಅವರ ಕಾರ್ಯಕ್ಷೇತ್ರ ಬೆಂಗಳೂರು ಆಗಿದೆ. ಇಲ್ಲೂ ಒಂದೆರಡು ವರ್ಷ ಕೆಲಸ ಮಾಡಿದವರ ಮೂಲಾಸಕ್ತಿ ನೃತ್ಯವಾಗಿದ್ದರಿಂದ ಅವರ ಮನ ಸದಾ ಆ ಕುರಿತೇ ಚಿಂತಿಸುತ್ತಿತ್ತು. ಟಿವಿಯಲ್ಲಿ ನೋಡುತ್ತಿದ್ದ ಒಡಿಸ್ಸಿ ಕಲಾವಿದೆ ಸುಜಾತ ಮಹೋಪಾತ್ರರ ಲಾಲಿತ್ಯಪೂರ್ಣ ಒಡಿಸ್ಸಿಯ ನೃತ್ಯಶೈಲಿ ಅವರ ಮೇಲೆ ಪ್ರಭಾವ ಬೀರಿತು. ಕಲೆಯ ಬಗ್ಗೆ ಅದಮ್ಯ ಪ್ರೀತಿಯಿದ್ದಾಗ, ಆಸಕ್ತಿ-ತುಡಿತಗಳಿದ್ದಾಗ ಕಲಿಕೆಗೆ ವಯಸ್ಸು ಅಡ್ಡಿಯಾಗದು. ಅಷ್ಟರಲ್ಲಿ ಕರಿಷ್ಮಾ ಒಂದು ಮಗುವಿನ ತಾಯಿಯಾಗಿದ್ದರು. ಪತಿ ಗಣೇಶ್ ಅವರ ಪ್ರೋತ್ಸಾಹದಿಂದ ಅವರು ಖ್ಯಾತ ಒಡಿಸ್ಸಿ ನೃತ್ಯಗುರು ಶರ್ಮಿಳಾ ಮುಖರ್ಜಿ ಅವರ ಬಳಿ ನೃತ್ಯ ಕಲಿಯಲು ಸೇರ್ಪಡೆಯಾದರು. ಆಸಕ್ತಿ-ಪರಿಶ್ರಮ ಬಹು ಬೇಗ ಫಲ ನೀಡಿತು. ಸೂಕ್ಷ್ಮಗ್ರಹಣ ಶಕ್ತಿಯಿದ್ದ ಕರಿಷ್ಮಾ ಹಗಲಿರುಳೂ ಕಠಿಣ ಪರಿಶ್ರಮದಿಂದ ಬಹು ಬೇಗ ಒಡಿಸ್ಸಿಯ ಎಲ್ಲ ಆಯಾಮಗಳನ್ನೂ ಅರ್ಜಿಸಿಕೊಳ್ಳತೊಡಗಿದ್ದು ಅವರ ವೈಶಿಷ್ಟ್ಯ. ಮಗುವಿನ ಲಾಲನೆ-ಪಾಲನೆ ಮತ್ತು ಮನೆಯ ಜವಾಬ್ದಾರಿ ಅವರ ಸಾಧನೆಗೆ ಅಡ್ಡಿಯಾಗಲಿಲ್ಲ. ನೃತ್ಯ ಒಂದು ಧ್ಯಾನದಂತೆ ಆಕೆ ಬಿಡದ ಅಭ್ಯಾಸದಲ್ಲಿ ಮುಳುಗಿದರು. ಬೆಂಗಳೂರಿನಿಂದ ಭುವನೇಶ್ವರಕ್ಕೆ ತೆರಳಿ ಅಲ್ಲಿ ಹೆಚ್ಚಿನ ಶಿಕ್ಷಣ ಪಡೆಯತೊಡಗಿದ್ದು ಅವರ ಆಸಕ್ತಿಯ ದ್ಯೋತಕ. ಅನೇಕ ವರ್ಷಗಳು ಒಡಿಸ್ಸಿ ನೃತ್ಯಪ್ರಕಾರದಲ್ಲಿ ತರಬೇತಿಗೊಂಡ ಇವರು ಪ್ರಸ್ತುತ ಕೇಳುಚರಣ್ ಮಹೋಪಾತ್ರರ ಮಗ ಗುರು ರತಿಕಾಂತ್ ಮಹಾಪಾತ್ರ ಮತ್ತು ಅವರ ಪತ್ನಿ ಗುರು ರಾಜಶ್ರೀ ಪ್ರಹರಾಜ್ ಅವರ ಮಾರ್ಗದರ್ಶನ ಪಡೆಯುತ್ತಿದ್ದಾರೆ.

           ದೇಶಾದ್ಯಂತ ತಮ್ಮ ಪ್ರತಿಭಾ ಪ್ರದರ್ಶನ  ಮಾಡಿರುವ ಕರಿಷ್ಮಾ, ನಾಡಿನೊಳಗೆ ಮಾತ್ರವಲ್ಲದೆ  ಹೊರರಾಷ್ಟ್ರಗಳಲ್ಲೂ ಅನೇಕ ನೃತ್ಯೋತ್ಸವಗಳು, ಕಾರ್ಪೊರೇಟ್, ಖಾಸಗಿ ಮತ್ತು ಸಾರ್ವಜನಿಕ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಮೂಹ ಮತ್ತು ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ದೇಶದ ಹಲವು ಪ್ರಮುಖ ದೇವಾಲಯಗಳಲ್ಲಿ, ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ- ಕರೂರು ನಾಟ್ಯಾಂಜಲಿ (ಕರೂರು), ಗೌಹಾತಿ, ಆಗ್ರದ ತಾಜ್ ಮಹೋತ್ಸವಗಳಲ್ಲಿ ಏಕವ್ಯಕ್ತಿ ಪ್ರದರ್ಶನ, ನೃತ್ಯ ನಿರಂತರ, ಗ್ಲೋಬಲ್ ಫೆಸ್ಟಿವಲ್ ಆಫ್ ಡಿವೈನಿಟಿ ಇನ್ ಹ್ಯುಮಾನಿಟಿಯ ರಾಷ್ಟ್ರೀಯ ಸಮಾರಂಭ, ಚೆನ್ನೈನ ಕಲಾಪೋಷಕಂ, ಪೃಥ್ವಿ ನೃತ್ಯೋತ್ಸವಗಳಲ್ಲದೆ,  ಸಮೂಹ ನೃತ್ಯ ಪ್ರದರ್ಶಗಳಲ್ಲಿ, ಪ್ರತಿಷ್ಟಿತ ವೇದಿಕೆಗಳಾದ ತಿರುವನಂತಪುರದ ಸೂರ್ಯ ನೃತ್ಯೋತ್ಸವ, ಚಂದೀಘರದ ರಾಷ್ಟ್ರೀಯ ನೃತ್ಯೋತ್ಸವ ಹಾಗೂ ಬೆಂಗಳೂರಿನ ಅನೇಕ ಮುಖ್ಯ ನೃತ್ಯೋತ್ಸವಗಳಲ್ಲಿ ಭಾಗವಹಿಸಿದ ಹೆಮ್ಮೆ ಇವರದು.

‘ಓಹ್ ಒಡಿಸ್ಸಿ-ಒನ್ ವರ್ಲ್ಡ್’ ಹ್ಯೂಸ್ಟನ್ -ಒಡಿಸ್ಸಿ ಅಕಾಡೆಮಿ ಅಂತರ್ಜಾಲದಲ್ಲಿ ನಡೆದ ಈಕೆಯ ನೃತ್ಯದ ವೈಖರಿ, ಸುಮನೋಹರ ಅಭಿನಯ, ಮೃದುಚಲನೆಗಳು ಮತ್ತು ಸುಂದರ ನೃತ್ಯದ ರಮ್ಯ ಭಂಗಿಗಳು ಕಲಾರಸಿಕರ ಗಮನ ಸೆಳೆದದ್ದು ಗಮನಾರ್ಹ ಸಂಗತಿ. ‘ಅಟಲ್ ಕಾವ್ಯ ಕಲಾ ನರ್ತನ್’-ಅಟಲ್ ಬಿಹಾರಿ ವಾಜಪೇಯಿ ಅವರ ಕಾವ್ಯ ಕುರಿತ  ರಾಷ್ಟ್ರಮಟ್ಟದ ನೃತ್ಯ ನಿರ್ಮಾಣದಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂತು. ಅದು ದೂರದರ್ಶನದ ರಾಷ್ಟ್ರೀಯ ಚಾನಲ್ ನಲ್ಲೂ ಪ್ರಸಾರವಾದದ್ದು ವಿಶೇಷ.   

ನೃತ್ಯ ಕಲಿಯಲು ಬರುವ ಪುಟ್ಟಮಕ್ಕಳಿಗೆ ಅಕ್ಕರಾಸ್ಥೆಯಿಂದ ಬಹು ತಾಳ್ಮೆಯಿಂದ ನೃತ್ಯಶಿಕ್ಷಣ ನೀಡುತ್ತಿರುವುದು ಈಕೆಯ ವಿಶೇಷ ಗುಣ. ಇವರ ನೇತೃತ್ವದ ನೃತ್ಯಶಾಲೆ ‘ಕಾದಂಬರಿ’ ಬೆಂಗಳೂರು ಮತ್ತು ಚೆನ್ನೈಗಳಲ್ಲಿ ಶಾಖೆಗಳನ್ನು ಹೊಂದಿದೆ. ಎರಡೂ ಕಡೆ ನೃತ್ಯಾಕಾಂಕ್ಷಿಗಳಿಗೆ ಶಿಕ್ಷಣ ನೀಡುತ್ತಿರುವ ಜೊತೆಗೆ ಕರಿಷ್ಮಾ, ತಾವು ಸ್ವತಂತ್ರವಾಗಿ ಅನೇಕ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ನಿರತರು. ಜೊತೆಗೆ ಉದಯೋನ್ಮುಖ ನೃತ್ಯ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಆಶಯದಿಂದ ಇವರು ಪ್ರತಿವರ್ಷ ‘’ ಕಾದಂಬರಿ ನೃತ್ಯೋತ್ಸವ’ಗಳನ್ನು ಆಯೋಜಿಸುತ್ತ ಬಂದಿದ್ದಾರೆ.

 ಯೋಗವನ್ನು ಚೆನ್ನಾಗಿ ಅಭ್ಯಸಿಸಿರುವ ಕರಿಷ್ಮಾ,  ಉತ್ತಮ ಯೋಗ ಶಿಕ್ಷಕಿ ಕೂಡ. ಯೋಗ ಅವರ ನೃತ್ಯ ಶಿಕ್ಷಣದ ಭಾಗವಾಗಿರುವುದರಿಂದ ನೃತ್ಯಕ್ಕೆ ಅದು ಪೂರಕವಾಗಿ ತನ್ನದೇ ಆದ ವಿಶೇಷಗಳನ್ನು ಹೊಂದಿದೆ. ಬೆಂಗಳೂರಿನ ಪ್ರಸಿದ್ಧ ‘ವ್ಯಾಲಿಶಾಲೆ’ಯಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಇವರ ಪ್ರತಿಭೆಯನ್ನು ಅರಸಿ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಬೆಂಗಳೂರಿನ ಅಂತರರಾಷ್ಟ್ರೀಯ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಸಂಗೀತೋತ್ಸವದ ಸಂದರ್ಭದಲ್ಲಿ ‘ನೃತ್ಯ ಕನಕಪ್ರಭ ಸಂಮಾನ್’, ಹೊಸೂರು ನಾಟ್ಯಾಂಜಲಿ ಪ್ರತಿಷ್ಠಾನದಿಂದ ‘ಕಲಾಮಣಿ’ ಪ್ರಶಸ್ತಿ-ಗೌರವಗಳು ದೊರೆತಿವೆ.

ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪತಿ ಗಣೇಶ್ ಅಯ್ಯರ್ ಹಾಗೂ ಪುಟ್ಟ ಮಗಳು ‘ವಾನ್ಯ’ಳಿಂದ ಕೂಡಿದ ಅನುರೂಪ ಸುಖ ಸಂಸಾರ ಇವರದಾಗಿದೆ.

                                       ***************

Related posts

ಸರ್ವಕಲಾ ಸಂಪನ್ನೆ ನೃತ್ಯ ಕಲಾವಿದೆ ಮಾನಸ ಕಂಠಿ

YK Sandhya Sharma

ತ್ರಿಶೈಲಿಯ ಮೋಹಕ ನರ್ತಕಿ ಮಾಯಾ ಧನಂಜಯ್

YK Sandhya Sharma

ಭರವಸೆಯ ಕಥಕ್ ನರ್ತಕ ಅಶ್ವಿನ್ ಜೆ. ಪ್ರಭಾತ್

YK Sandhya Sharma

Leave a Comment

This site uses Akismet to reduce spam. Learn how your comment data is processed.