ವೇದಿಕೆಯ ಮೇಲೆ ಉತ್ಸಾಹದಿಂದ ಅಷ್ಟೇ ಲವಲವಿಕೆಯಿಂದ ನರ್ತಿಸುವ ಶ್ರುತಿ ಗುಪ್ತಳ ಕಥಕ್ ತಾಳ ತರಂಗಗಳು ನೋಡುಗರನ್ನು ಸೆಳೆಯುವುದರಲ್ಲಿ ಅನುಮಾನವೇ ಇಲ್ಲ. ನಿರಾಯಾಸವಾಗಿ ಗಂಟೆಗಟ್ಟಲೆ ನರ್ತಿಸಬಲ್ಲ ಶ್ರುತಿಗೆ ನರ್ತನ ಅವಳ ಜೀವದ ಉಸಿರು. ತನ್ನ ಐದನೆಯ ವಯಸ್ಸಿಗೇ ಖ್ಯಾತ ಕಥಕ್ ಗುರು ಚಿತ್ರಾ ವೇಣುಗೋಪಾಲ್ ಅವರ ಬಳಿ ತರಬೇತಿ ಪಡೆಯಲಾರಂಭಿಸಿದ ಶ್ರುತಿ, ಹಗಲಿರುಳೂ ಪರಿಶ್ರಮದಿಂದ ನೃತ್ಯಾಭ್ಯಾಸ ಮಾಡುವ ಬದ್ಧತೆಯ ನೃತ್ಯಾರ್ಥಿ.
ಪ್ರಸಿದ್ಧ ಕಥಕ್ ನೃತ್ಯ ಅಕಾಡೆಮಿ ‘ಸ್ಪೇಸ್’ ಸಂಸ್ಥೆಯ ಸ್ಥಾಪಕಿ ಮತ್ತು ನುರಿತ ಕಥಕ್ ನೃತ್ಯಪಟು ಅಂಜನಾ ಗುಪ್ತಾ ಇವಳ ತಾಯಿ ಮತ್ತು ತಂದೆ ಸುನೀಲ್ ಗುಪ್ತಾ. ಹಾಗೇ ನೋಡಿದರೆ ಮನೆಯಲ್ಲಿ ಹಿನ್ನಲೆಯಾಗಿ ನೃತ್ಯದ ವಾತಾವರಣವೇನೂ ಇರಲಿಲ್ಲ. ಬೆರಗಿನ ಸಂಗತಿಯೆಂದರೆ, ಶ್ರುತಿ ಕಥಕ್ ನೃತ್ಯ ಕಲಿಯಲಾರಂಭಿಸಿದಾಗ ಪ್ರತಿದಿನ ಅವಳೊಡನೆ ನೃತ್ಯ ತಗತಿಗೆ ಬರುತ್ತಿದ್ದ ಅವಳ ತಾಯಿ ಅಂಜನಾ ಅವರ ಮೇಲೆ ಕಥಕ್ ನೃತ್ಯ ಶೈಲಿ ಅತೀವ ಪ್ರಭಾವ ಬೀರಿ ಆಕೆ ಮಗಳೊಡನೆ ಕಲಿಯತೊಡಗಿದರು. ಸಾಧನೆ ಮಾಡಿದ ಅವರು ತಮ್ಮದೇ ಆದ ನೃತ್ಯಶಾಲೆ ತೆರೆದು ನೂರಾರು ಮಕ್ಕಳಿಗೆ ಕಥಕ್ ಶಿಕ್ಷಣ ನೀಡತೊಡಗಿದ ಸಂಗತಿ ನಿಜಕ್ಕೂ ಅಚ್ಚರಿ. ತಾಯಿಯ ಕಡು ಆಸಕ್ತಿ ಶ್ರುತಿಯ ಮೇಲೆ ಪರಿಣಾಮ ಬೀರಿ, ಅವಳು ಇನ್ನಷ್ಟು ನೃತ್ಯ ತಾಲೀಮಿನಲ್ಲಿ ತೊಡಗಿಕೊಂಡು ತಾಯಿಯ ಮಾರ್ಗದರ್ಶನದಲ್ಲಿ ಹೆಚ್ಚಿನ ಶಿಕ್ಷಣ ಪಡೆಯತೊಡಗಿದಳು.
ಕಥಕ್ ನೃತ್ಯ ಅಭಿವೃದ್ಧಿ, ಹೆಚ್ಚಿನ ಪ್ರಸಾರಕ್ಕೆ ಶ್ರಮಿಸುತ್ತಿರುವ ‘ಸಮರ್ಪಣ್ ಅಸೋಸಿಯೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್’ (ಸ್ಪೇಸ್) ದಶಕದತ್ತ ಸಾಗುತ್ತಿರುವ ಈ ಸಂಸ್ಥೆ ರವೀಂದ್ರ ವಿಶ್ವವಿದ್ಯಾನಿಲಯದ ಅಂಗಸಂಸ್ಥೆ (ಅಫಿಲಿಯೇಟ್ ) ಆಗಿದ್ದು, ಇಂದು ಜಾಗತಿಕ ಮಟ್ಟದಲ್ಲಿ ಖ್ಯಾತವಾಗಿದ್ದು, ಸಿ.ಐ.ಡಿ ಫಾರ್ ಇಂಟರ್ವೆಂಷನಲ್ ಸರ್ಟಿಫಿಕೇಶನ್ ಗೆ ಸದಸ್ಯತ್ವ ಪಡೆದಿದೆ. ಈ ಸಂಸ್ಥೆಯಲ್ಲಿ ಪ್ರಸ್ತುತ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಶ್ರುತಿ, ಸಾಧನೆಯ ಪಥದಲ್ಲಿ ಸಾಗುತ್ತಿರುವ ಉದಯೋನ್ಮುಖ ಭರವಸೆಯ ಕಥಕ್ ನರ್ತಕಿ.
ತನ್ನ ಒಂಭತ್ತನೆಯ ವಯಸ್ಸಿಗೇ ವೇದಿಕೆಯೇರಿ ತನ್ನ ಪ್ರಥಮ ನೃತ್ಯ ಪ್ರಸ್ತುತಿ ನೀಡಿ ರಸಿಕರ, ವಿಮರ್ಶಕರ ಮೆಚ್ಚುಗೆ ಗಳಿಸಿದ ಶ್ರುತಿ, ಗುರು ಚಿತ್ರಾ ವೇಣುಗೋಪಾಲ್ ತಂಡದ ಎಲ್ಲ ಕಾರ್ಯಕ್ರಮಗಳಲ್ಲಿ ಪ್ರಧಾನ ನರ್ತಕಿಯಾಗಿ ಪಾಲ್ಗೊಳ್ಳುತ್ತಿದ್ದುದು ವಿಶೇಷ ಸಂಗತಿ. ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ನೃತ್ಯಪರೀಕ್ಷೆಯಲ್ಲಿ ಉನ್ನತಾಂಕಗಳಿಂದ ಮುಂದೆ ಸಾಗಿದ ಇವಳು, ತನ್ನ ಶಾಲೆಯ ಎಲ್ಲ ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ಬಹುಮಾನಗಳನ್ನು ಪಡೆಯುತ್ತಿದ್ದಳು. ಅನಂತರ ಭಾರತೀಯ ವಿದ್ಯಾ ಭವನದ ಜ್ಯೂನಿಯರ್ ಡಿಪ್ಲೊಮಾ ಪದವಿ ಕೂಡ ಪಡೆದುಕೊಂಡಳು.
ಪಿಯೂಸಿಯ ನಂತರ ನೃತ್ಯ ಅವಳ ಕಟ್ಟೊಲುಮೆಯ ವಿಷಯವಾಗಿದ್ದರಿಂದ ಕಥಕ್ ನೃತ್ಯದಲ್ಲಿಯೇ ತನ್ನ ಬಿ.ಎ. ಪದವಿ ಗಳಿಸಿದಳು. ಖ್ಯಾತ ಕಥಕ್ ಗುರು ಮಾಯಾರಾವ್ ಅವರ ಗರಡಿಯಲ್ಲಿ ವಿಶೇಷ ತರಬೇತಿ ಪಡೆದುಕೊಂಡ ಶ್ರುತಿ, ನೃತ್ಯ ಸಂಯೋಜನೆಗಳ ಪ್ರಯೋಗಗಳಲ್ಲಿ ಆಸಕ್ತಿ ತೋರಿ, ಅವರು ನಿರ್ಮಿಸಿದ ಪೌರಾಣಿಕ , ಚಾರಿತ್ರಿಕ, ಸಮಕಾಲೀನ ಶೈಲಿಯ ನೃತ್ಯನಾಟಕಗಳಲ್ಲಿ ಪಾಲ್ಗೊಂಡಳು. ‘ಕಥಕ್ ಥ್ರೂ ಏಜಸ್’ -ನಿರ್ಮಾಣದಲ್ಲಿ ಪ್ರಮುಖ ನರ್ತಕಿಯಾಗುವ ಅದೃಷ್ಟ ಇವಳದಾಗಿತ್ತು.
ಜೊತೆ ಜೊತೆಯಲ್ಲಿ ಅನೇಕ ಸೋಲೋ ಮತ್ತು ಸಮೂಹ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಒದಗಿತು. ಅವುಗಳಲ್ಲಿ ಪ್ರಮುಖವಾದುವು- ಬೃಹನ್ನಾಟ್ಯಾಂಜಲಿ ಮತ್ತು ಚಿದಂಬರಂ ನೃತ್ಯೋತ್ಸವಗಳು. ‘ಸಮರ್ಪಣಂ’ ನಲ್ಲಿ ಪೂರ್ಣಾವಧಿಯ ಪ್ರಮುಖ ಕಲಾವಿದೆ ಮತ್ತು ಶಿಕ್ಷಕಿಯಾಗಿರುವ ಶ್ರುತಿ, ಖೈರಾಗರ್ ವಿಶ್ವವಿದ್ಯಾಲಯದಲ್ಲಿ ಕಥಕ್ ನೃತ್ಯವನ್ನು ಪ್ರಧಾನ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಸ್ನಾತಕೋತ್ತರ ಎಂ.ಎ. ಪದವಿ ಪಡೆದಿದ್ದಾಳೆ. ತನ್ನ ಜ್ಞಾನಾರ್ಜನೆಗಾಗಿ ಬಿರ್ಜು ಮಹಾರಾಜ್, ರಾಜೇಂದ್ರ ಗಂಗಾನಿ, ಚೇತನ್ ಜೋಷಿ, ದುರ್ಗಾ ಆರ್ಯ, ಸೋಹಿನಿ ದೇವನಾಥ್, ಮೌಲಿಕ್ ಭಾಯ್, ಶಮಾ ಭಾಟೆ ಮುಂತಾದ ಹಿರಿಯ ನೃತ್ಯಜ್ಞರ ಮಾರ್ಗದರ್ಶನದ ಅನೇಕ ಕಾರ್ಯಾಗಾರಗಳಲ್ಲಿ ಭಾರತದ ಒಳ-ಹೊರಗೆ ಭಾಗವಹಿಸಿ ಅನುಭವ ಗಳಿಸಿದ್ದಾಳೆ. ಭಾರತಾದ್ಯಂತ ನೃತ್ಯ ಪ್ರದರ್ಶನ ನೀಡಿರುವ ಇವಳು, ಗುರು ಚಿತ್ರಾ ವೇಣುಗೋಪಾಲ್ ಮತ್ತು ಮಾಯಾರಾವ್ ಅವರ ನೇರ ಶಿಷ್ಯಳಾಗಿ ಶಿಕ್ಷಣ ಪಡೆದುಕೊಂಡದ್ದು ಇವಳ ಭಾಗ್ಯ.
ಎರಡು ವರ್ಷಗಳ ಹಿಂದೆ ‘ರಂಗಪ್ರವೇಶ’ ಮಾಡಿದ ಶ್ರುತಿ ತನ್ನ ಪ್ರತಿಭಾ ಪ್ರದರ್ಶನದ ವಿಶಿಷ್ಟ ನೃತ್ಯದ ಆಯಾಮಗಳಿಂದ ರಸಿಕರ ಶ್ಲಾಘನೆ ಪಡೆದಳು. ಅವಳು ಅಭಿನಯಿಸಿದ ‘ಗೀತ ಗೋವಿಂದ’ದ ಶೃಂಗಾರ ದೃಶ್ಯಗಳು ಮತ್ತು ‘ರಾಮಾಯಣ’ದ ಕೆಲ ಆಯ್ದ ಭಾಗಗಳ ಅಭಿನಯ ಹೃದಯಸ್ಪರ್ಶಿಯಾಗಿತ್ತು. ದೂರದರ್ಶನದ ‘ಬಿ’ಶ್ರೇಣಿಯ ಕಲಾವಿದೆಯಾಗಿ ಮಾನ್ಯತೆ ಪಡೆದಿರುವ ಶ್ರುತಿಗೆ ನಿರಂತರ ಅಧ್ಯಯನ-ಅಭ್ಯಾಸದಲ್ಲಿ ಅಪರಿಮಿತ ಆಸಕ್ತಿ. ಪ್ರಸ್ತುತ ಕಥಕ್ ನೃತ್ಯ ವಿಷಯದಲ್ಲಿ ಪಿ.ಹೆಚ್.ಡಿ ಸಂಶೋಧನಾ ಕಾರ್ಯ ಕೈಗೊಂಡಿದ್ದಾಳೆ.
ಮನೆಯಲ್ಲಿ ತಾಯಿ ಮತ್ತು ಗುರು ಅಂಜನಾ ಗುಪ್ತ, ತಂದೆ ಸುನೀಲ್ ಗುಪ್ತ ಮತ್ತು ಆಕ್ಸ್ ಫರ್ಡ್ ನಲ್ಲಿ ಲಾ ಓದುತ್ತಿರುವ ಸಹೋದರ ಕರಣ್ ಗುಪ್ತ ಅವಳೆಲ್ಲ ಬೆಳವಣಿಗೆಗೆ ಇಂಬಾಗಿದ್ದಾರೆ.
***********************