Image default
Dancer Profile

ಬಹುಮುಖ ಪ್ರತಿಭೆಯ ನೃತ್ಯಜ್ಞೆ ಡಾ. ಜಯಲಕ್ಷ್ಮೀ ಜಿತೇಂದ್ರ

ನೃತ್ಯರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯಗಳಿಂದ ಸಾಧನೆಯ ಮಜಲುಗಳಲ್ಲಿ ಸಾಗುತ್ತಿರುವ ಜಯಲಕ್ಷ್ಮೀ ಜಿತೇಂದ್ರ ಅವರ ಬಹುಮುಖ ಆಸಕ್ತಿ-ಪ್ರತಿಭೆ ಗಮನಾರ್ಹ. ಸುಮಾರು ಐದುನೂರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡುತ್ತಿರುವ ನೃತ್ಯಗುರುವೆನಿಸಿಕೊಂಡಿದ್ದೂ ಸ್ವತಃ ನೃತ್ಯ ಕಲಾವಿದೆಯಾಗಿ ನಿರಂತರ ಒಂದಲ್ಲ ಒಂದು ನೃತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕ್ರಿಯಾಶೀಲೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿರುವ ಈಕೆ ತಾನು ಪ್ರಪ್ರಥಮ ಕಲಿತ ಭರತನಾಟ್ಯ ಶಾಸ್ತ್ರೀಯ ಚೌಕಟ್ಟಿಗೆ ಮಾತ್ರ ಸೀಮಿತಗೊಂಡವರಲ್ಲ. ತನ್ನ ಸೃಜನಾತ್ಮಕತೆಯ ರೆಂಬೆ-ಕೊಂಬೆಗಳನ್ನು ವಿಸ್ತೃತವಾಗಿ ಚಾಚಿಕೊಂಡು ಬೆಳೆಯುವ ಇರಾದೆ ಇವರದು.

ಮೂಲತಃ ಬೆಂಗಳೂರಿಗರಾದ ಆಧ್ಯಾತ್ಮಿಕ ಚಿಂತಕ, ಕೃಷ್ಣಯ್ಯ ಭಾಗವತರ್ ಮತ್ತು ಶ್ರೀಲಕ್ಷ್ಮೀ ಅವರ ಪುತ್ರಿ , ತನ್ನ ಐದರ ಎಳವೆಯಲ್ಲೇ ತಂದೆಯ ಜೊತೆ ಕೃಷ್ಣಭಕ್ತಿಯ ದೈವೀಕ ನೃತ್ಯಕ್ಕೆ ಹೆಜ್ಜೆ ಹಾಕಿದವರು. ಖ್ಯಾತ ನೃತ್ಯಗುರು ಶಿವರಾವ್ ಅವರಲ್ಲಿ ನೃತ್ಯ ಕಲಿಕೆಗೆ ಸೇರ್ಪಡೆ. ಏಳೆಂಟು ವರ್ಷಗಳ ಸತತ ಅಭ್ಯಾಸ. ಕರ್ನಾಟಕ ಸರ್ಕಾರದ ಜ್ಯೂನಿಯರ್ ನೃತ್ಯಪರೀಕ್ಷೆಯಲ್ಲಿ ತೇರ್ಗಡೆ.

ಶಾಲೆಯ ಹಂತದಲ್ಲಿ ಹಲವಾರು ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದು, ನಾಟಕ-ನೃತ್ಯಗಳ ಸ್ಪರ್ಧೆಗಳಲ್ಲಿ ತಪ್ಪದ ಬಹುಮಾನ. ವೀಣೆ-ಶಾಸ್ತ್ರೀಯ ಸಂಗೀತ ಕೂಡ ಜೊತೆಜೊತೆಯಲ್ಲಿ ಅಭ್ಯಾಸ. ಕರಾಟೆ-ಮಾರ್ಷಿಯಲ್ ಆರ್ಟ್ಸ್ ನಲ್ಲೂ ಪರಿಶ್ರಮ, ಬ್ಲಾಕ್ ಬೆಲ್ಟ್ ವಿಜೇತೆ. ಬೆಂಗಳೂರಿನ ವಿ.ವಿ.ಪುರಂ ಕಾನೂನು ಕಾಲೇಜಿನಿಂದ ಲಾ ಪದವಿ. ಮುಂದೆ- ಖ್ಯಾತ ನೃತ್ಯಜ್ಞ ಗುರು ರಾಧಾಕೃಷ್ಣ ಅವರ ಆಸ್ಥಾನ ಶೈಲಿಯಲ್ಲಿ, ಗುರು ಮಾಲಾ ಶಶಿಕಾಂತ್ ಮಾರ್ಗದರ್ಶನದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಇದುವರೆಗೂ ನೃತ್ಯ ಕಲಿಯುತ್ತಲೇ ಇದ್ದಾರೆ ಜಯಲಕ್ಷ್ಮೀ.  ‘ವಿದ್ವತ್’ ಪರೀಕ್ಷೆಯಲ್ಲಿ ಅತ್ಯುಚ್ಛ ಅಂಕಗಳನ್ನು ಪಡೆದ ಇವರು, ಎರಡು ದಶಕಗಳ ಹಿಂದೆ ರಂಗಪ್ರವೇಶ ಮಾಡಿ ದೇಶಾದ್ಯಂತ ಎಲ್ಲ ಪ್ರಮುಖ ವೇದಿಕೆಗಳಲ್ಲಿ ನರ್ತಿಸಿದ ಅನುಭವ ಪಡೆದುಕೊಂಡಿದ್ದಾರೆ. ನೃತ್ಯದಲ್ಲಿ ಬಿ.ಎ. ಪದವಿ ಜೊತೆಗೆ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡ ಹಿರಿಮೆ.

ದೇಶದ ವಿವಿಧ ಖ್ಯಾತ ನೃತ್ಯಗುರುಗಳ, ನೃತ್ಯಜ್ಞರ ಕಾರ್ಯಾಗಾರಗಳಲ್ಲಿ ಭಾಗವಹಿಸಿ, ನೃತ್ಯ ವ್ಯಾಕರಣ, ವಿಶೇಷ ಕೃತಿಗಳು, ನೃತ್ಯ ಸಂಯೋಜನೆಯ ಬಗ್ಗೆ ಜ್ಞಾನಾರ್ಜನೆ ಪಡೆದುಕೊಂಡಿದ್ದಾರೆ. ನಟುವಾಂಗದಲ್ಲೂ ವಿಶೇಷ ತರಬೇತಿ ಪಡೆದುಕೊಂಡ ಜಯಲಕ್ಷ್ಮೀ ತಮ್ಮ ಸರ್ವಾಂಗೀಣ ಬೆಳವಣಿಗೆಗೆ ಸತತವಾಗಿ ಬದ್ಧತೆಯಿಂದ ತೊಡಗಿಸಿಕೊಂಡಿರುವುದು ಸ್ತ್ಯುತಾರ್ಹ.

ಯೋಗಾಪಟುವಾದ ಈಕೆ ಹಲವಾರು ವರ್ಷಗಳಿಂದ ಅನೇಕರಿಗೆ ಯೋಗಾ ಶಿಕ್ಷಕರಾಗಿದ್ದು, ಮಾರ್ಷಿಯಲ್ ಆರ್ಟ್ಸ್ ಕೂಡ ಕಲಿಸುತ್ತಿರುವುದು ಇವರ ಅಗ್ಗಳಿಕೆ. ಎಲ್ಲಕ್ಕಿಂತ ವಿಶೇಷವೆಂದರೆ, ಮಂದಗತಿಯ ವಿದ್ಯಾರ್ಥಿಗಳಿಗೆ , ವಿಶೇಷ ಚೇತನರಿಗೆ, ಮಾನಸಿಕ ವಿಕಲಾಂಗರಿಗೆ, ಶ್ರವಣ-ದೃಷ್ಟಿ ಶಕ್ತಿ ಇಲ್ಲದವರಿಗೆ ಬಹು ತಾಳ್ಮೆಯಿಂದ, ವಿಶೇಷ ಕಾಳಜಿಯಿಂದ ನೃತ್ಯ ಕಲಿಸುತ್ತಿರುವ ಡಾನ್ಸ್ ಚಿಕಿತ್ಸೆಯನ್ನೂ ನೀಡುತ್ತಿರುವ ಸೇವಾ ಮನೋಭಾವದ ಅಪರೂಪದ ವ್ಯಕ್ತಿ ಇವರೆಂದರೆ ಅತಿಶಯೋಕ್ತಿಯಲ್ಲ.     

ನೃತ್ಯದ ನಾನಾ ಆಯಾಮಗಳನ್ನು ದುಡಿಸಿಕೊಂಡಿರುವ ಇವರು ಅನೇಕ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಇದಕ್ಕಾಗಿ ಅವರ ಕಠಿಣ ಪರಿಶ್ರಮ, ಪ್ರಯತ್ನ ಗಣನೀಯ. ದೂರದರ್ಶನ, ಜೀ, ಶಂಕರ ಸುವರ್ಣ ಮುಂತಾದ ಹಲವಾರು ಟಿವಿ ವಾಹಿನಿಗಳಲ್ಲಿ ಅನೇಕ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದು, ನಾಡಿನ ಅನೇಕ ದೇವಾಲಯಗಳಲ್ಲಿ ನೃತ್ಯ ಸೇವೆ ಸಲ್ಲಿಸಿ ರಸಿಕರಿಂದ ಪ್ರಶಂಸೆ ಪಡೆದಿದ್ದಾರೆ.   ಗ್ರಾಮೀಣ ಮಕ್ಕಳಿಗೆ ನೃತ್ಯಕಲೆ ದಕ್ಕಬೇಕೆಂಬ ಮನೋಭಾವದಿಂದ ಸತತ 12 ವರ್ಷಗಳು ಗ್ರಾಮೀಣ ಶಾಲೆಯ ಮಕ್ಕಳಿಗೆ ನೃತ್ಯ ಸಂಯೋಜನೆ ಮಾಡಿ – ಕಲಿಸುವ ಕೆಲಸ ಮಾಡಿದ್ದಾರೆ. ಹುಲಿವೇಷದ ನೃತ್ಯ ಮುಂತಾದ ಜಾನಪದ ನೃತ್ಯಗಳನ್ನೂ ಬಲ್ಲ ಈಕೆ, ತಮಿಳುನಾಡಿನ ಶಾಲೆಗಳಿಗೂ ಇದರ ಲಾಭ  ದೊರೆಯುವಂತೆ ಮಾಡಿದ್ದಾರೆ.  

ವಿವಿಧ ನೃತ್ಯಶೈಲಿಗಳಲ್ಲಿ ಆಸಕ್ತರಾದ ಜಯಲಕ್ಷ್ಮೀ, ಭರತನಾಟ್ಯದೊಂದಿಗೆ, ಕೂಚಿಪುಡಿ ಮತ್ತು ಕಥಕ್ ನೃತ್ಯವನ್ನೂ ಕಲಿಯುತ್ತಿದ್ದಾರೆ. ಸಮಕಾಲೀನ ನೃತ್ಯ, ಫ್ಯೂಶನ್, ಸಾಲ್ಸಾ, ಮಾಡ್ರನ್ ಮುಂತಾದ ಫ್ರೀ ಸ್ಟೈಲ್ ಪಾಶ್ಚಿಮಾತ್ಯ, ಸೃಜನಾತ್ಮಕ  ನೃತ್ಯ ಪ್ರಕಾರಗಳಲ್ಲಿ ಶಿಷ್ಯರನ್ನು ತಯಾರು ಮಾಡಿ ವ್ಯಾಪಕವಾಗಿ ನೃತ್ಯ ಪ್ರದರ್ಶನಗಳನ್ನು ನೀಡುತ್ತ ಬಂದಿದ್ದಾರೆ.

ಉತ್ತಮ ನೃತ್ಯ ಸಂಯೋಜಕಿಯಾಗಿರುವ ಜಯಲಕ್ಷ್ಮೀ ಅವರು ಸಂಯೋಜಿಸಿರುವ ನೃತ್ಯರೂಪಕಗಳೆಂದರೆ-ಮಹಿಷಾಸುರ ಮರ್ಧಿನಿ, ಅರ್ಧನಾರೀಶ್ವರ, ಶಿವ ಸಾನಿಧ್ಯ, ಸರ್ಪನೃತ್ಯ, ಭಾವಯಾಮಿ ಮುಂತಾದವು. ಪೂರ್ಣಾವಧಿಯ ನೃತ್ಯ ಶಿಕ್ಷಕಿ ಮತ್ತು ಕಲಾವಿದೆಯಾಗಿರುವ ಇವರಿಗೆ ಪ್ರಶಸ್ತಿ-ಸನ್ಮಾನಗಳ ಮಹಾಪೂರವೇ ಹರಿದಿದೆ. ಮಲೇಶಿಯಾ, ಬ್ಯಾಂಕಾಕ್, ಇಂಡೋನೇಶಿಯಾ, ಅಮೇರಿಕ, ಯುರೋಪ್ ದೇಶಾದ್ಯಂತ ಒಟ್ಟು 16 ರಾಜ್ಯಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿ ಅಲ್ಲಿ ಅತ್ಯುತ್ತಮ ನೃತ್ಯ ಕಲಾವಿದೆ ಪ್ರಶಸ್ತಿ, ನಾಟ್ಯರಾಣಿ ಶಾಂತಲಾ, ಆರ್ಯಭಟ, ಮಾಧ್ಯಮ ಪ್ರಶಸ್ತಿಗಳನ್ನು ಪಡೆದಿರುವ ಅಗ್ಗಳಿಕೆ ಇವರದು.

ಹಿರಿಯ ಹುದ್ದೆಯಲ್ಲಿರುವ ಪತಿ ಜಿತೇಂದ್ರ ಕುಮಾರ್  ಪತ್ನಿಯ ಎಲ್ಲ ನೃತ್ಯ ಚಟುವಟಿಕೆಗಳಿಗೂ ಬೆನ್ನೆಲುಬಾಗಿ ಪ್ರೋತ್ಸಾಹ-ನೆರವು ನೀಡುವ ಕಲಾಪ್ರೇಮಿಗಳು.  

Related posts

ಉಭಯ ಶೈಲಿಯ ನೃತ್ಯತಜ್ಞೆ ಡಾ.ಸುಪರ್ಣಾ ವೆಂಕಟೇಶ್

YK Sandhya Sharma

ಆಕರ್ಷಕ ನೃತ್ಯ ಸಂಯೋಜಕಿ- ಕಲಾವಿದೆ ರಶ್ಮಿ ವಿಜಯ್

YK Sandhya Sharma

ಅಭಿಜಾತ ನೃತ್ಯ ಕಲಾವಿದೆ ಐಶ್ವರ್ಯ ನಿತ್ಯಾನಂದ

YK Sandhya Sharma

6 comments

ಡಾ.ರಾಧಿಕಾರಂಜಿನಿ June 1, 2021 at 11:54 pm

ಜಯಲಕ್ಷ್ಮಿ ಅಭಿನಂದನೆಗಳು.

Reply
YK Sandhya Sharma July 12, 2021 at 8:49 pm

ಧನ್ಯವಾದಗಳು ರಾಧಿಕಾ

Reply
Druva June 30, 2021 at 5:36 pm

Good👍👍👍

Reply
YK Sandhya Sharma July 1, 2021 at 11:56 am

Thank you for your compliments.

Reply
Saravanan July 1, 2021 at 11:43 am

We are very proud of your achievements at such a young age. Wishing you continued Success in everything you do.

Reply
YK Sandhya Sharma July 1, 2021 at 11:56 am

Thank you.

Reply

Leave a Comment

This site uses Akismet to reduce spam. Learn how your comment data is processed.