Image default
Short Stories

ನಂಟು

ಮನೆಯ ತುಂಬ ಮದುವೆಗಾಗಿ ಬಂದ ಜನ. ಮುಂದಿನ ಕೋಣೆಯಲ್ಲಿ ಗಂಡಸರು ಹರಟುತ್ತಿದ್ದರೆ, ನಡುವಿನ ಹಜಾರ ಹೆಂಗಸರ ಬಿಡಾರ. ಅದರ ಪಕ್ಕದ ಕೋಣೆಯಲ್ಲಿ ನಸೀಮಳ ಸುತ್ತಲೂ ಹುಡುಗಿಯರ ಪ್ರಭಾವಳಿ. ನಸೀಮಳ ಮೃದುವಾದ ಅಂಗೈ ಮೇಲೆ ಮೆಹಂದಿಯ ಕುಸುರಿ ಚಿತ್ರ ಬಿಡಿಸುತ್ತ ಕುಳಿತ ಗೆಳತಿಯರು ಅವಳನ್ನು ಪದೇ ಪದೇ ಕೀಟಲೆ ಮಾಡುತ್ತಿದ್ದರು. ಕೆಂಪು ಮುದ್ದೆಯಾಗಿ ನಾಚಿಕೆಯಲ್ಲಿ ನೆನೆಯುತ್ತ ತಲೆಬಾಗಿಸಿ ಕುಳಿತಿದ್ದಳು ನಸೀಂ. ಯಾರೋ ಒಬ್ಬಳು ಹಾಸ್ಯಮಾಡಿದಳು. ಲಲನೆಯರ ತಂಡದಲ್ಲಿ ನಗು ಸ್ಫೋಟಿಸಿತು.

ಮದುವೆಯ ವ್ಯವಸ್ಥೆಗಾಗಿ ಬಿಡುವಿಲ್ಲದೆ ಓಡಾಡುತ್ತಿದ್ದ ತಯುಬ್ ಆ ಕಡೆ ಹಾದವನು ಅಲ್ಲೇ ನಿಂತ. ತೆಳು ತೆರೆಯ ಮರೆಯಿಂದ ಒಳಗಿನ ದೃಶ್ಯ ಕಂಡಿತು. ಮುಸುಕಿನ ಗುಪ್ಪೆಯಾಗಿ ಕುಳಿತ ತಂಗಿಯ ಸುತ್ತ ನಗೆಯ ಲಾಸ್ಯದಲ್ಲಿ ಮೈ ಕುಲುಕಿಸುತ್ತ ತುಟಿ ಅರಳಿಸಿದ ಆರೆಂಟು ಚೆಲುವೆಯರು. ಉಬ್ಬರಿಸಿ ಉಬ್ಬರಿಸಿ ಹೊರ ಉಕ್ಕುತ್ತಿದ್ದ ಕುಲುಕುಲು ನಗು. ನಸೀಮಳ ಮುಸುಕನ್ನು ಸರಿಸಿ ಮತ್ತೆ ಕೆಣಕುವ ಹವಣಿಕೆ ಒಂದಿಬ್ಬರದು.

ನಸೀಮಳ ಭಂಗಿ, ಆಕೃತಿಯಲ್ಲಿ ಮತ್ತಾರೋ ಹೊಕ್ಕಂತಾಗಿ ತಯುಬನ ನೋಟ ತುಯ್ದಿತು. ಹೃದಯಲ್ಲಿ ದೊಡ್ಡ ತುಫಾನು!…. ಅವಳನ್ನು ನೋಡು ನೋಡುತ್ತಿದ್ದಂತೆ ಮೈ ಒಳ ಹೊರಗಿನದೆಲ್ಲ ಹಿಂಡಿದಂತಾಗಿ ಕಾಲು ಕುಸಿಯಿತು.

‘ಸಾಬ್’……’ – ಕೆಲಸದಾಳು ಕರೆಯುತ್ತಿದ್ದ. ಕಾಲನ್ನು ಮೆಲ್ಲನೆ ಎತ್ತಿ ಎತ್ತಿ, ಊರದಂತೆ ಹಗುರವಾಗಿ ಹಾಕುತ್ತ ತಯುಬ್ ಹೊರಬಂದ. ಅವನ ಮುಖ ಒಳಮೊರೆಯ ಪ್ರತಿಬಿಂಬದಂತೆ ನೋವಿನ ಸೆಲೆಯಾಗಿತ್ತು. ತನ್ನನ್ನೇ ದಿಟ್ಟಿಸುತ್ತ ನಿಂತ ಆಳಿಗೆ ನಿರುತ್ಸಾಹದಿಂದ ಕೆಲಸದ ಸೂಚನೆಗಳಿತ್ತು ಹಿಂದಿರುಗುವುದರಲ್ಲಿ ಅಡಿಗೆಯ ಸಲೀಂ ಕಾದು ನಿಂತಿದ್ದ.

ಮೂರು ದಿನಗಳಿಂದಲೂ ತಯುಬನಿಗೆ ಮೈ ತುರಿಸಿಕೊಳ್ಳಲು ಪುರುಷೊತ್ತಿಲ್ಲದಷ್ಟು ತಂಗಿಯ ಮದುವೆಯ ಕೆಲಸದ ಹೊರೆ. ಇದರ ಮಧ್ಯೆ ಮದುವೆಗಾಗಿ ಬಂದ ನೆಂಟರನ್ನು ವಿಚಾರಿಸಿಕೊಳ್ಳುವುದು…….ಉಪಚಾರ. ಅರ್ಧಕ್ಕರ್ಧ ವ್ಯವಸ್ಥೆಯಲ್ಲ ಅತ್ಯುತ್ಸಾಹದಿಂದಲೇ ನಡೆದಿತ್ತು. ಆದರೆ ಈಗ ಇಳಿಜಾರಿಗೆ  ಎಡವಿ ಬಿದ್ದಂತೆ ಇದ್ದಕ್ಕಿದಂತೆ ಅವನ ಸಡಗರ, ಸಂಭ್ರಮಗಳೆಲ್ಲ ಬತ್ತಿಹೋಗಿ ಅವನ ಮುಖ ನಿಸ್ತೇಜವಾಗಿತ್ತು.

ತಯುಬ್, ಸಲೀಂನನ್ನು ಮೌನವಾಗಿ ಹಿಂಬಾಲಿಸಿ ಹಿತ್ತಲಿಗೆ ಬಂದ.

 ದೂರದ ಹಿಪ್ಪ ನೇರಿಳೆ ಮರದ ಕೆಳಗೆ ಒಬ್ಬ ಮನುಷ್ಯ ನಿಂತಿದ್ದ. ಅವನ ಕೈಯಲ್ಲಿ ಎರಡು ಹಗ್ಗದ ತುದಿಗಳು. ಕೊರಳಲ್ಲಿ ನೇಣು ಬಿಗಿದ ಕುಬ್ಬಿದ ಕುರಿಗಳೆರಡು ತಮ್ಮ ಪಾಡಿಗೆ ತಾವು ನಿರಾತಂಕವಾಗಿ ಕೆಳಗಿನ ಹಸಿರು ಹುಲ್ಲಿಗೆ ಬಾಯಿ ಹಚ್ಚಿದವು.

 ಮೊದಲೇ ಮಾತನಾಡಿದಷ್ಟು ಹಣವನ್ನು ತಯುಬ್, ಆ ಮನುಷ್ಯನ ಕೈಗೆ ಹಾಕಿದ. ಹಗ್ಗದ ತುದಿಗಳೆರಡು ಸಲೀಮನ ಕೈಗೆ ಬಂದವು. ತಯುಬ್, ಇನ್ನೇನು ಒಳಗಡಿ ಇಡಬೇಕೆನ್ನುವಷ್ಟರಲ್ಲಿ ಮಮ್ತಾಜ್ ಓಡಿ ಬಂದು ಅವನ ಕೈಯನ್ನು ಜಗ್ಗಿದಳು.

 ‘ಅಬ್ಬಾ… ಆಡಕ್ಕೆ ನಂಗೆ ಆ ಪುಟಾಣಿ ಮರಿ ಬೇಕು, ಕೊಡಿಸು. ‘ಊ್ಞ ಊ್ಞ’ ‘ ಎಂದು ಹಟದಿಂದ ರಾಗ ತೆಗೆದಳು. ಪುಟ್ಟ ಮಮ್ತಾಜಳ ದೃಷ್ಟಿಯೆಲ್ಲ ಆ ಮನುಷ್ಯನ ಕಂಕುಳಲ್ಲಿ ಪಿಳಿಪಿಳಿ ಕಣ್ಣು ಪಿಳುಕಿಸುತ್ತಿದ್ದ ಪುಟ್ಟ ಕುರಿಮರಿಯಲ್ಲಿಯೇ ನೆಟ್ಟಿತ್ತು.

ಹೊರಟಿದ್ದ ಆ ಮನುಷ್ಯ ನಿಂತುಕೊಂಡ. ಬಿಳಿನೊರೆಯ ಮುದ್ದೆಯಂತಿದ್ದ ಮರಿಯತ್ತ ಕೈ ಚಾಚಿ, ಆಸೆಗಣ್ಣುಗಳಿಂದ ತಂದೆಯತ್ತ ತಿರುಗಿ ನಿಂತಿದ್ದಳು ಮಮ್ತಾಜ್. ತಯುಬ್‍ನ ಕೈ ಜೇಬಿನೊಳ ಹೋಗಿ ಪಾಕೆಟ್ ಹೊರಬಂತು. ಸಲೀಂ ಮರಿಯನ್ನು ಸೊಂಟದಲ್ಲಿ ಇರುಕಿಕೊಳ್ಳಲು ಹೊರಟಾಗ, ತನ್ನ ಪುಟ್ಟಕೈಗಳಿಂದ ಅವನನ್ನು ಹೊಡೆಯುತ್ತಾ ಮಮ್ತಾಜ್- ‘ಕೊಡೋ……ನನ್ಮಗು ಅದು’ ಎಂದು ಅವನಿಂದ ಮರಿಯನ್ನು ಕಸಿದುಕೊಂಡು ಎದೆಗವಚಿಕೊಂಡು ಮನಸಾರೆ ಮುದ್ದಿಸಿದಳು. ಆ ಮುದ್ದಿನ ಕುರಿಮರಿಯನ್ನು ತಂದೆಗೆ ತೋರಿಸಲು ಅವಳು ಪಕ್ಕಕ್ಕೆ ತಿರುಗಿದಾಗ ತಯುಬ್ ಅಲ್ಲಿರಲಿಲ್ಲ. ಮುಂದಿನ ಕೆಲಸಗಳನ್ನು ಗಮನಿಸಲು ಅವನು ಅಲ್ಲಿಂದ ಹೊರಟು ಹೋಗಿದ್ದ.

ಮುಂದಿನ ವರಾಂಡದಲ್ಲಿ ಅವನ ತಂದೆ, ಖಾಜಿಯ ಜೊತೆ ಮಾತುಕತೆ ನಡೆಸುತ್ತಿದ್ದರು. ತಾಯಿ ಕೋಣೆಯಲ್ಲಿ, ದೊಡ್ಡದಾಗಿ ಪೆಟ್ಟಿಗೆ ತೆರೆದುಕೊಂಡು ಕುಳಿತು ತಾವು ನಸೀಮಳಿಗೆ  ಮದುವೆಗೆ ಹಾಕುವ ಒಡವೆ, ಸೀರೆಗಳನ್ನು ತಮ್ಮ ಕೆಲವು ಆಪ್ತನೆಂಟರಿಗೆಲ್ಲ ತೋರಿಸುತ್ತಿದ್ದರು.

ಓಡಾಡುವವರಿಗೆ ನಡುವೆ ಕಾಲ್ತೊಡಕಾಗಿ ಸಿಕ್ಕುವ ಮಕ್ಕಳ ಹಾವಳಿ, ನಗು, ಕೂಗು, ಮಾತು, ಗಲಾಟೆಗಳಿಂದ ಮನೆಯವರಿಗೆ ಮುಂದಿನ ಕೆಲಸಗಳೇ ತೋಚುತ್ತಿರಲಿಲ್ಲ. ತಯುಬ್ ಅತ್ತಿಂದಿತ್ತ ಓಡಾಡುತ್ತಿದ್ದ. ಇದುವರೆಗೂ ಉತ್ಸಾಹ ತುಂಬಿದ್ದ ಜಾಗದಲ್ಲಿ ಈಗ ಅವ್ಯಕ್ತ ದುಗುಡ ಆವರಿಸಿಕೊಂಡಿತ್ತು. ತಲೆಯಲ್ಲಿ ‘ಮೊಹರಂ’ ಕುಣಿತದ ಲಗ್ಗೆ. ನೆತ್ತಿ ಧುಮುಗುಡುತ್ತಿದ್ದಂತಾಗಿ ಮೈ ಬಿಸಿಯೇರಿ ಹಿಂದಿನ ಪಡಸಾಲೆಯ ಅಂಚಿಗೆ ಮೈ ಹಾಸಿದ.

ಯೋಚನೆಯ ಪಡೆ ಒಮ್ಮೆಲೆ ಮೇಲೆ ಬಿದ್ದು ಆಕ್ರಮಿಸಿತು.

ಬೆಳಗ್ಗೆ- ಹಿಂದಿನ ದಿನಗಳಂತೆ ಚಟುವಟಿಕೆಯಿಂದ ಎದ್ದು ಓಡಾಡಲಿಲ್ಲ ತಯುಬ್.  ಒಳ ಜ್ವರ, ಬೇಗುದಿ ಮೆಲ್ಲನೆ ಅವನ ಮನವನ್ನು ಕಸುಕತೊಡಗಿತು. ಮೈಯ ಸಂದಿಗೊಂದಿಗಳಲ್ಲಿ ಚಳಿ ಕಿರುಗುಟ್ಟಿದಾಗ ತಯುಬ್ ಹಿತ್ತಲಿನ ಕಲ್ಲಮೇಲೆ ಕುಳಿತು ಎಳೆಬಿಸಿಲಿಗೆ ಮೈಗೊಟ್ಟು, ಮಿದುಳು ನಿಶ್ಶಬ್ದದ ಪೊರೆ ಪೊರೆಯೊಳಗೆ ಸರಿಯುತ್ತಿರುವಷ್ಟರಲ್ಲಿ ಮಕ್ಕಳ, ಜಗಳ-ಗಲಾಟೆ ತಲೆಯೊಳಗೆ ರಾಡಿ ಎಬ್ಬಿಸಿತು. ಮುಖ ಗಂಟಿಕ್ಕಿಕೊಂಡು ಸೆಟೆದು ಕೂತು ಪಕ್ಕಕ್ಕೆ ತಿರುಗಿದ.

ಗೂಟಕ್ಕೆ ಬಿಗಿದ ಕುರಿಗಳಿಗೆ ಎಜಾಸ್, ಮಮ್ತಾಜ್ ಇಬ್ಬರೂ ಹುಲ್ಲು ತಿನ್ನಿಸುತ್ತಿದ್ದಾರೆ. ತಾನು ಕಿತ್ತ ಹುಲ್ಲನ್ನು ಸೆಳೆದುಕೊಂಡು ಎಜಾಸ್ ತಿನ್ನಿಸಿದನೆಂದು ಮಮ್ತಾಜ್ ಕೋಪಗೊಂಡು ಜಗಳವಾಡುತ್ತಿದ್ದಳು. ಕೈಕೈ ಮಿಲಾಯಿಸಿತು. ‘ಎಜೂ ಮಮ್ಮೂ’ ಕರ್ಕಶವಾಗಿ ಅರಚಿದ ತಯುಬ್. ತಂದೆಯ ದನಿ ಕೇಳಿದೊಡನೆ ಇಬ್ಬರೂ ಕುರಿಮರಿಯನ್ನೆತ್ತಿಕೊಂಡು ತಯುಬನ ಬಳಿಗೆ ಚಿಮ್ಮಿ ಬಂದರು.

‘ಅಬ್ಬಾ, ನನ್ನ ಮುದ್ದು ಮರಿಗೆ ಶಫಿ ಅಂತ ಹೆಸರಿಟ್ಟಿದ್ದೀನಿ. ಎಷ್ಟು ಮುದ್ದಾಗಿದೆಯಲ್ಲ’ –

ಮುದ್ದು ದನಿಯಲ್ಲಿ ಮಮ್ತಾಜ್ ತಂದೆಯ ತೋಳಿಗೊರಗಿ ನಿಂತು ಕೇಳಿದಾಗ ತಯುಬನ ಕೋಪವೆಲ್ಲ ಸರ್ರನೆ ಕರಗಿಹೋಯಿತು.

‘ನಾನಬ್ಬ ಹೆಸರಿಟ್ಟಿದ್ದು. ಅವಳು ಸುಳ್ಳು ಹೇಳ್ತಾಳೆ’ – ಎಜಾಸ್ ಮೂತಿಯುಬ್ಬಿಸಿ ತಂದೆಯ ಹತ್ತಿರಕ್ಕೆ ಸರಿದ. ತಯುಬ್ ಮೆಲ್ಲನೆ ಮಕ್ಕಳ ತಲೆಯ ಮೇಲೆ ಕೈಯಾಡಿಸಿ ಎದ್ದುನಿಂತ. ತಾಯಿಯ ಎರಕದ ರೂಪ ಹೊತ್ತ ಮಮ್ತಾಜಳ ಮುಖವನ್ನು ದಿಟ್ಟಿಸಲಾಗದೆ ತಟ್ಟನೆ ಒಳಗೆ ನಡೆದ.

‘ಅಬ್ಬಾಜಾನ್……….’ ಏನೋ ಹೇಳಲು ಹಿಂಬಾಲಿಸಿ ಬಂದ ಮಗಳ ಮುದ್ದು ಮುಖ, ನುಡಿಗಳತ್ತ ತಿರುಗದೆ – ‘ಹೋಗ್ಹೋಗು………ನಂಗೆ ಭಾಳ ಕೆಲಸ ಇದೆ’ ಎಂದು ಗದರಿಸಿ ಅವಳನ್ನು ತನ್ನ ಕಣ್ಮುಂದೆಯಿಂದ ಅಟ್ಟಿ, ಉದ್ದನೆಯ ಉಸಿರೊಂದನ್ನು ಹೊರಗೆ ಹುಯ್ದ.

ಬಂದವರನ್ನು ನಗುವಿನ ಬುರ್ಕಾ ತೊಟ್ಟು ಆಹ್ವಾನಿಸಿದ ತಯುಬ್. ಅವರೊಡನೆ ಹೆಚ್ಚು ಮಾತಿಗೆ ನಿಲ್ಲದೆ, ತುಂಬ ಕೆಲಸವಿರುವಂತೆ ಒಳಹೊರಗೆ ಓಡಾಡಿದ. ಕಲ್ಲುಸಕ್ಕರೆ, ಬಾದಾಮಿಯ ತಟ್ಟೆಗಳನ್ನು ಜೋಡಿಸಿಟ್ಟ. ಅಡಿಗೆ ಮನೆಗೆ ಹೋಗಿ ಅಲ್ಲಿಯ ವ್ಯವಸ್ಥೆ ನೋಡಿ ಬಂದ. ಗದ್ದಲವೆಬ್ಬಿಸುತ್ತಿದ್ದ ಮಕ್ಕಳನ್ನು ಗದರಿಸಿ ಸುಮ್ಮನಿರ ಹೇಳಿದ. ಷಾಮಿಯಾನದೊಳಗೆ ಮತ್ತಷ್ಟು ಕುರ್ಚಿಗಳನ್ನು ಹಾಕಲು ಆಳಿಗೆ ಆಜ್ಞಾಪಿಸಿದ. ಬಿಡುವಿಲ್ಲದೆ ಕೆಲಸ ಮಾಡಿದನೆಂದು ಕಂಡರೂ ತಯುಬನ ಮನಸ್ಸಿನ ಪೊಟರೆಯೊಳಗೆ ಖಾಲಿ, ಖಾಲಿ… ಮುಜುಗರ. ನಿಂತಕಡೆ ನಿಲ್ಲುವ ಸಮಚಿತ್ತವಿರಲಿಲ್ಲ. ಈ ಸಡಗರ- ಸಂಭ್ರಮದೊಳಗೆ ತನ್ನ ದೇಹ ಪಾಲ್ಗೊಳ್ಳುತ್ತಿದ್ದರೂ ತನ್ನ ಮನಸ್ಸು ಮಾತ್ರ ನಿಷ್ಕ್ರಿಯ, ನಿಷ್ಪಂದ ಎಂದು ಅವನ ಮನವರಿಕೆ..

‘ನಿಕಾಹ್’ ಶಾಸ್ತ್ರ ಸಾಂಗವಾಗಿ ನಡೆಯುತ್ತಿತ್ತು. ಖಾಜಿ ಜೋರಾಗಿ ‘ಕುತ್ಬಾ’ವನ್ನು ಓದಿ ಹೇಳುತ್ತಿದ್ದರು. ಒಪ್ಪಿಗೆಯ ಕೇಳಿಕೆ….. ಒಪ್ಪಿಗೆ….. ಗಂಡು ಹೆಣ್ಣಿನ ದನಿ. ಸುತ್ತಲಿದ್ದವರ ಮಾತಿನ ಸಂಭ್ರಮ. ಮೈಮರೆಯುವಿಕೆ…..ಅತ್ತರಿನ ಸುವಾಸನೆಯ ಮತ್ತು…..

 ತಯುಬನ ತಲೆ ಗಿರ್ರನೆ ಸುತ್ತಿದಂತಾಯಿತು.

‘ಫಾಮಿದಳನ್ನು ಸ್ವೀಕರಿಸಲು ಒಪ್ಪಿದ್ದೇನೆ…. ಒಪ್ಪಿದ್ದೇನೆ…. ಒಪ್ಪಿದ್ದೇನೆ….’ –

ಮನಸಾರೆ ಹೃದಯ ತುಂಬಿದ ನುಡಿಗಳು. ಅದಕ್ಕುತ್ತರ ನಯವಾದ ಸುಸ್ವನ. ‘ಒಪ್ಪಿಗೆ…..ಒಪ್ಪಿಗೆ….ಒಪ್ಪಿಗೆ….’

ಆಗೆಷ್ಟು ತನ್ನ ಮೈ ಮನ ಪುಳಕಗೊಂಡಿತ್ತು! ಸುತ್ತಲ ಪ್ರಪಂಚವೇ ಮರೆಗೊಂಡಿತ್ತು. ಒಂದು ಸುಂದರ ವರ್ತುಲದಲ್ಲಿ ತಾನು, ಫಾಮಿದಾ ಇಬ್ಬರೇ….ಪರದೆಯೊಳಗೆ ಹುದುಗಿದ್ದ ತನ್ನ ಮನದನ್ನೆಯ ಮುಖವನ್ನು ನೋಡುವ ಕಾತುರ ಎದ್ದು ಕುಣಿಯುತ್ತಿತ್ತು. ಮೈ ರೋಮಾಂಚದಿಂದ ಅದರುತ್ತಿತ್ತು. ಆಗ ಕೆಣಕುವ, ರೇಗಿಸುವ ಗೆಳೆಯರು ಇಲ್ಲದಿರಲಿಲ್ಲ. ಮನವನ್ನು ಬಿಗಿಮಾಡಿ ಕೂತಿದ್ದ. ಮುಂದೆ…….

ದೂರದಲ್ಲಿ  ತಂಗಿಯ ‘ನಿಕಾಹ್ ‘ ಶಾಸ್ತ್ರವನ್ನು ಕೈಕಟ್ಟಿಕೊಂಡು ನೋಡುತ್ತ ನಿಂತಿದ್ದ ತಯುಬ್ ಜನರೆಲ್ಲ ಮೇಲೆದ್ದಾಗ ಎಚ್ಚರಗೊಂಡ. ಮೆಲ್ಲನೆ ಮುಂಬಾಗಿಲಿಗೆ ಬಂದ.

 ‘ಯಾಕೊ ಸಪ್ಪಗಿದ್ದೀಯಲ್ಲ!’ -ದೊಡ್ಡಕ್ಕ ಕೇಳಿದಳು. ತತ್‍ಕ್ಷಣ ನಾಲ್ಕಾರು ಜನ ಹಾಗೇ ವಿಚಾರಿಸಿದರು. ಎಲ್ಲದಕ್ಕೂ ತಯುಬನದು ಶುಷ್ಕನಗೆ.

‘ಮದುವೆ ಮನೆ ಕೆಲ್ಸ ಜಾಸ್ತಿಯಾಯ್ತು….ಪಾಪ ಎಲ್ಲಾ ಒಬ್ನೇ ನೋಡ್ಕೋಬೇಕಾಗಿದೆ. ಆಯಾಸಕ್ಕೆಲ್ಲೋ ಮುಖ ಬಾಡಿರಬೇಕು’ –

ಅವನ ತಾಯಿ ಜವಾಬು ಹೇಳಿದರು.

 “ಕೆಲ್ಸಬೇಕಾದಷ್ಟಿದೆ……ಆಮೇಲೆ ಮಾತಾಡಿದ್ರಾಯ್ತು, ನಡೀರಿ”- ತಯುಬ್ ಎಲ್ಲರನ್ನೂ ಅವಸರಿಸಿ ಆ ಜಾಗ ಖಾಲಿ ಮಾಡಿದ.

 ‘ಬೇಗ ಇವನಿಗೊಂದು ಮದ್ವೆ ಮಾಡಿದರೆ ಎಲ್ಲಾ ಸರಿಹೋಗುತ್ತೆ’ ಯಾರೋ ಅಂದದ್ದು ಅವನ ಕಿವಿಯೊಳಗೆ ನುಸುಳಿ ಅವನ ಹೃದಯ ಮತ್ತಷ್ಟು ತಪ್ತಗೊಂಡಿತು.

ಅವನ ತಾಯಿಗೆ ಉತ್ಸಾಹ, ಆಸೆ….. ‘ಯಾವ ಹುಡುಗಿ ನೀವು ಹೇಳಿದ್ದು?’

ಯಾರೋ, ಚಮಕಿ ಕಸೂತಿಯ ನೀಲಿಸೀರೆಯುಟ್ಟ ಆ ಉದ್ದನೆಯ ಹುಡುಗಿಯನ್ನು ತೋರಿದರು. ತಾಯಿ, ದೊಡ್ಡಕ್ಕನ ಕಣ್ಣಿಗೂ ಆ ಹುಡುಗಿಯನ್ನು ಹಾಕಿದರು. ಈ ಮದುವೆ ಮುಗಿದ ಮೇಲೆ ತಯುಬನ ಮದುವೆ ವಿಷಯ ಇತ್ಯರ್ಥ ಮಾಡೋಣವೆಂದು ತಾಯಿ-ಮಗಳು ತೀರ್ಮಾನಿಸಿದರು.

ವರನ ದಿಬ್ಬಣ ಬರುತ್ತಿದ್ದಂತೆ, ಮೆರವಣಿಗೆಯನ್ನು ಕಂಡು ತಯುಬ್ ಮೆಲ್ಲನೆ ಒಳಸರಿದ. ವಿಶೇಷವಾಗಿ ಅಲಂಕೃತನಾಗಿದ್ದ ತಾನಂದು ನಡೆದ ಪ್ರತಿ ಹೆಜ್ಜೆ…ಗತ್ತುಗಳ ನೆನಪು ಒತ್ತತೊಡಗಿತು.

ನೆರೆದ ಜನಗಳ ಮಾತು, ಹಾಡನ್ನು ಮುಳುಗಿಸುವಂಥ ಕೆಲವು ಕೇಕೆಯ ಧ್ವನಿಗಳು, ಕುಣಿತದ ಹೆಜ್ಜೆ ಹಾಕುತ್ತಿದ್ದ ಪಡ್ಡೆ ಹುಡುಗರ ಗುಂಪು… ತೆರೆದ ಕಣ್ಣಿನ ತುಂಬ ಹರಡಿಕೊಂಡ ಬಣ್ಣ ಬಣ್ಣದ, ಕನ್ನಡಿ ಹೆಣೆದ ಹೊಳೆಯುವ ಸೀರೆಗಳು, ಕಸೂತಿ ಮಾಡಿದ ಜುಬ್ಬಾಗಳು….. ಪೈಜಾಮಗಳ ಹರಿದಾಟ. ಸೆಂಟಿನ ಪರಿಮಳದ ತೆರೆಗಳು….ಕಿವಿಗಡಚಿಕ್ಕುವ ಮೈಕಿನಿಂದ ತೂರಿಬರುತ್ತಿದ್ದ ಹಾಡು, ಏರುತ್ತ ಹರಡುತ್ತ ಹೋದ ಸಂತಸದ ವಾತಾವರಣ!

ಮೆಲ್ಲಮೆಲ್ಲನೆ ಅದರಿಂದ ಹಿಂದೆ ಬಂದಂತೆ ಹೃದಯ ವಿದ್ರಾವಕ ಅರಚುವಿಕೆ…ಮೊರೆ… ಗೋಳಿಡುವ ಕರೆ ಅವನನ್ನು ಮನೆಯ ಹಿಂಭಾಗಕ್ಕೆ ಕರೆಸಿಕೊಂಡಿತು.

ಸಲೀಂ ಹರಿತವಾದ ಕತ್ತಿಯಿಂದ ಕುರಿಯ ತಲೆಗಳನ್ನು ಬೇರೆ ಮಾಡುವುದರಲ್ಲಿ ಮಗ್ನನಾಗಿದ್ದ. ಉಸಿರು ಕಳೆದುಕೊಳ್ಳುವುದರಲ್ಲಿದ್ದ ಕುರಿಗಳು ಒಂದೇ ಸಮನೆ ಆರ್ತನಾದ ಮಾಡುತ್ತಿದ್ದವು, ಆತನ ಕೈಯಿಂದ ನುಣುಚಿಕೊಳ್ಳಲು ಕೊಸರಾಡುತ್ತಿದ್ದವು. ಕಚಕ್ಕನೆ ಕತ್ತಿಯಾಡಿತು. ದೇಹದಿಂದ ದೂರ ಹಾರಿದ ತಲೆಗಳು ತೊಪತೊಪನೆ ಹೊಯ್ದಾಡಿದವು. ರಕ್ತ ಕಾರಂಜಿ ಚಿಲ್ಲನೆ ಚಿಮ್ಮಿ, ಬಾಯಾರಿದಂತೆ  ಸಡಿಲವಾಗಿದ್ದ ಮರಳು ಹುಡಿಯ ಸುತ್ತಲ ನೆಲಕ್ಕೆ ಗಟಗಟನೆ ಕುಡಿಯಿಸಿತು.

ಇದೆಲ್ಲವನ್ನೂ ಕಟ್ಟೆಯ ಮೇಲೆ ನಿಂತು ಭಿತ್ತಿಚಿತ್ರದಂತೆ ಕೆಮ್ಮನೆ ನೋಡುತ್ತಿದ್ದ ತಯುಬ್ ನಿಷ್ಪಂದನಾಗಿದ್ದ. ಪಾತ್ರೆಯಲ್ಲಿ ರಕ್ತವನ್ನು ಮೊಗೆದು ತುಂಬಿಸಿಕೊಂಡು ದ್ರಾಕ್ಷಿ ಬಳ್ಳಿಯ ಪಾತಿಗೆರೆಯುತ್ತ ‘ಇದು ಹಾಕಿದರೆ ಹಣ್ಣು ತುಂಬ ರುಚಿಯಾಗಿರುತ್ತೆ ಸಾಬ್ …’ -ಎಂದು ನುಡಿದ ಸಲೀಮನ ಮಾತಿನ ಮೇಲಿಂದ ತಯೂಬನ ಲಕ್ಸ್ಯ ಜಾರಿತ್ತು. ಶೂನ್ಯದೃಷ್ಟಿಯಲ್ಲಿ ಕಣ್ಣು ತೇಲಿಸಿ ಅವನು ಬೆನ್ನು ತಿರುಗಿಸಿದ.

ಮತ್ತೆ ಅವನು ಅರ್ಧಗಂಟೆಯ ನಂತರ ಬಂದಾಗ ಸಲೀಂ ಮಾಂಸವನ್ನು ತೊಳೆತೊಳೆಯಾಗಿ ತಟ್ಟೆಯಲ್ಲಿ ಬಿಡಿಸಿ ಇಡುತ್ತಿದ್ದ. ಅಭ್ಯಾಸ ಬಲದಿಂದ ಅವನ ಕೈ ಚುರುಕಾಗಿ ಕೆಲಸ ಮಾಡುತ್ತಿತ್ತು. ಅವನ ಮುಖ ನಿರ್ಭಾವದ ಅರಣ್ಯವಾಗಿ ಕಂಡರೂ ಕಣ್ಣುಗಳು ಮಾತ್ರ ಬಿಡಿಬಿಡಿಯಾಗಿ ಸುಲಿಯುವ ಕಾರ್ಯದಲ್ಲಿ ಹರಿತವಾಗಿ ಓಡಾಡುತ್ತಿದ್ದವು.

ಅದನ್ನೇ ದಿಟ್ಟಿಸಿ ನೋಡುತ್ತ ನಿಂತ ತಯೂಬನ ಕಿವಿಯ ತುಂಬಾ ಆರ್ತನಾದದ ಒರಲು…ಒದ್ದಾಟ….ಹೊಟ್ಟೆಯೊಳಗೆ ಕುಡುಗೋಲು ತಿರುಚಿದಂಥ ಅನುಭವವಾಗಿ ಅವನು ಮುಖವನ್ನು ಕಿವುಚಿ ಸರಸರನೆ ಅಲ್ಲಿಂದ ನಡೆದ.

 ಇದ್ದಕ್ಕಿದ್ದಂತೆ ಪಟಪಟನೆ ಮಳೆಯ ಹನಿಗಳು. ಮೈಯೆಲ್ಲಾ ಒದ್ದೆ…ಬಟ್ಟೆ, ಮೈ ಕೈಗಳನ್ನು ನೋಡಿಕೊಂಡ. ಕೆಂಪುಬಣ್ಣ ತೊಯ್ದ ಅಂಗಿಯಿಂದ ಹನಿ ಹನಿ ತೊಟ್ಟಿಕ್ಕತೊಡಗಿತು. ರಕ್ತದ ತೊಟ್ಟು ಗಳು!… ಸಣ್ಣದಾಗಿ ತುಂತುರಿನಂತೆ ಇಳಿಯುತ್ತಿದ್ದ ನೆತ್ತರ ಹನಿಗಳು ಅಂಗಿಯಿಂದ ಪ್ರವಾಹದಂತೆ ಕೊಚ್ಚಿ ಧುಮುಕಿದಾಗ ಅವನ ಉಸಿರು ದಾರವಾಗಿ ಮೈಯೆಲ್ಲಾ ತಣ್ಣಗಾದಂತಾಯಿತು. ದೇಹ, ಮಂಜುಗಡ್ಡೆಗೆ ಅವುಚಿಕೊಂಡಂತೆ ಚಳಿ ಕೊರೆದು ಥರ ಥರನೆ ನಡುಗಿ ಸಿಡಿಯುತ್ತಿತ್ತು. ತುಟಿಗಳು ಹಾಯಿಪಟದಂತೆ … ರಕ್ತದ ಮಳೆಯ ಅಬ್ಬರ ಗಗನ ಬಿರಿದು ಅಪ್ಪಳಿಸಿದಂತೆ …ಎಲ್ಲೆಲ್ಲೂ ಕೆಂಪು ಮಡು, ಕಾಲುವೆಗಳು ಜುಳು ಜುಳು !…ಎದೆ ಚಿದ್ರಿಸುವ ಗುಡುಗು!…ಸಿಡಿಲು!..ರಕ್ತದ ಮಳೆಯಲ್ಲಿ ತೊಪ್ಪೆಯಾದ ತಯುಬ್ ಉಟ್ಟ ಚರ್ಮವನ್ನು ಕಳಚಿ ನಿಂತಿದ್ದ ಹಾಗಿತ್ತು. ಘೋರ ಪ್ರವಾಹವನ್ನು ನೋಡಲಂಜಿ ಕಣ್ಮುಚ್ಚಿ ನಿಂತವನಿಗೆ ಎಲ್ಲೆಲ್ಲೂ ಚೀತ್ಕಾರ ನುಗ್ಗಿ ತಿವಿದಂತಾಯಿತು. ಕಿವಿಯ ಪದರಗಳಲ್ಲಿ ಬೇಡಿಕೆಯ ನರಳುಧ್ವನಿ ಹರಡುತ್ತಾ ಸುಳಿಯಲ್ಲಿ ತಿರ್ರನೆ ತಿರುಗಿಸಿದಂತೆ ಧೊಪ್ಪನೆ ಕೆಳಗೆ ಬಿದ್ದ.

ಅತ್ತ ಬಂದವರಾರೋ ಗಾಬರಿಯಿಂದ ಜೋರಾಗಿ ಕೂಗಿಕೊಂಡರು. ಸಲೀಂ ಮತ್ತಿಬ್ಬರು ಓಡಿ ಬಂದರು.ಯಾರೋ ಹೋಗಿ ಮುಂದಿನ ಅಂಗಳಕ್ಕೆ ಸುದ್ದಿ ತಗುಲಿಸಿ ಬಂದರು. ಹಣೆ ಒಡೆದುಕೊಂಡು ಜ್ಞಾನ ತಪ್ಪಿ ಬಿದ್ದಿದ್ದ ತಯುಬನ ಸುತ್ತ ಜನಗಳ ಗುಂಬಸ್ ನಿಂತಿತು. ಗಾಬರಿಯಿಂದ ಅವನ ತಾಯಿ ಅಳತೊಡಗಿದರು. ಅವನ ದೊಡ್ಡಕ್ಕ ಆಕೆಯನ್ನು ಸಮಾಧಾನಗೊಳಿಸುತ್ತ ಒಳಗೆ ಕರೆದೊಯ್ದಳು. ತಯುಬನಿಗೆ ತತ್ ಕ್ಷಣದಲ್ಲಿ ಆಗಬೇಕಿದ್ದ ಶುಶ್ರೂಷೆ ನಡೆಯಿತು. ಹಣೆಪಟ್ಟಿ ಕಟ್ಟಿದರು. ನೀರು ಚುಮುಕಿಸಿ ಎಚ್ಚರಿಸಿದರು.

ಮುಖದ ಮೇಲೆ ತಣ್ಣನೆಯ ದ್ರವ ಬಿದ್ದೊಡನೆ ಅವನು ಗಾಬರಿಯಿಂದ ಎದ್ದು ಕುಳಿತು ಮುಖ ಉಜ್ಜಿಕೊಂಡು ಕೈಗಳನ್ನು ನೋಡಿಕೊಂಡ…ನೀರು!…ಮತ್ತೆ ಮತ್ತೆ ನೋಡಿಕೊಂಡ. ಬಣ್ಣ ಕಾಣದ ದ್ರವ. ಉಸಿರು ಕಂತೆ ಕಂತೆಯಾಗಿ ಹೊರಬಿತ್ತು. ಅವನ ಚರ್ಯೆ ವಿಲಕ್ಷಣ ಎನಿಸಿದರೂ ಯಾರೂ ಬಾಯಿ ಬಿಡಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅವನು ಚೇತರಿಸಿಕೊಂಡಂತೆ ಜನ ಮದುವೆ ನಡೆಯುತ್ತಿದ್ದ ಸ್ಥಳದತ್ತ ಕಾಲು ಹಾಕಿದರು.

ತಯುಬ್ ಮೌನವಾಗಿ ಒಂದೆಡೆ ಕುಳಿತ.

‘’ಯಾಕೆ..ಏನಾಯ್ತು?’’-ಹಲವರು ಪ್ರಶ್ನಿಸಿದರು. ಅವನು ಬೊಂಬೆಯಂತೆ ಕುಳಿತಿದ್ದ.

‘’ ಅಜೀರ್ಣವಾಗಿದೆ ಅಂತ ಕಾಣತ್ತೆ.. ಸ್ವಲ್ಪ ತಲೆ ಚಕ್ಕರ್ ಬಂದಿದೆ ಅಷ್ಟೇ ‘’- ಎಲ್ಲರಿಗೂ ಉತ್ತರಿಸುವ ಸರದಿ ದೊಡ್ದಕ್ಕನದು.

ತಯುಬನಿಗೆ ಸ್ವಲ್ಪ ಹೊತ್ತಿನ ಹಿಂದೆ ತನಗಾದ ಅನುಭವ ನೆನಪಾಯಿತು. ಕತ್ತೆತ್ತಿ ಮೇಲೆ ನೋಡಿದ. ಶುಭ್ರ ನೀಲಾಕಾಶದಲ್ಲಿದ್ದ ಚುಕ್ಕಿಗಳು ಕಣ್ಣು ಮಿಟುಕಿಸಿ ‘ಏನು?’ ಎಂದಂತಾಯಿತು. ಅದಕ್ಕೆ ಇಸ್ತ್ರಿಗೊಂಡ ಅವನ ಬಿಳಿ ತೊಡುಗೆ ಉತ್ತರಗೊಡುತ್ತಿತ್ತು.  ಗೊಂದಲದಂಗಳದಲ್ಲಿ ದಾರಿ ತಪ್ಪಿ ಅಲೆಯುತ್ತಿದ್ದ ತಯುಬ್ ಆ ಬಗ್ಗೆ ಮುಂದಕ್ಕೆ ಯೋಚಿಸುವ ಗೋಜಿಗೆ ಹೋಗದೆ ಆಹ್ವಾನಿತರತ್ತ ತನ್ನ ಗಮನ ಹರಿಯಗೊಟ್ಟ.

ಲಗ್ಗೆ ಹೊಡೆದುಕೊಂಡು ಊಟ ಮಾಡುತ್ತಿದ್ದರು ನೆಂಟರು. ಮತ್ತಷ್ಟು ಬಡಿಸಿಕೊಳ್ಳಲು ಮನೆಯವರ ಉಪಚಾರ, ಆತಿಥ್ಯ, ಹುರುಪಿನ ಓಡಾಟ.

ತಯುಬ್ ಮೌನವಾಗಿ ತುತ್ತು ನುಂಗುತ್ತಿದ್ದ. ಪಕ್ಕದಲ್ಲಿ ಕುಳಿತು ಒಂದೇ ಸಮನೆ ಹರಟುತ್ತಿದ್ದ ಮಗಳ ಮಾತುಗಳೊಂದೂ ಅವನನ್ನು ತಾಗಲಿಲ್ಲ. ಕೈ ತೊಳೆದೊಡನೆ ಹೋಗಿ ಮಲಗಿಕೊಂಡ.

ಮದುವೆ ಮುಗಿದು ಎಂಟು-ಹತ್ತು ದಿನಗಳಾಗಿದ್ದವು. ಊರಿಂದ ಬಂದವರೆಲ್ಲ ಹಿಂದಕ್ಕೆ ತೆರಳಿದ್ದರು. ತಯುಬನ ಮದುವೆಯ ಪ್ರಸ್ತಾಪಕ್ಕೋಸ್ಕರ ದೊಡ್ಡಕ್ಕ ಉಳಿದುಕೊಂಡಿದ್ದಳು. ತಾಯಿ-ಮಗಳಿಬ್ಬರೂ ಮದುವೆಯಲ್ಲಿ ಕಂಡ ಹುಡುಗಿಯನ್ನು ತುಂಬಾ ಮೆಚ್ಚಿಕೊಂಡಿದ್ದರು. ಇನ್ನೂ ಹುಡುಗಿಯ ರೂಪವನ್ನು ವರ್ಣಿಸಿ ಅವನನ್ನು ಒಪ್ಪಿಸುವುದೊಂದು ಬಾಕಿ. 

ಎಂದಿನಂತೆ ಅವನು ನಿರ್ಲಿಪ್ತನಾಗಿ ಕೆಲಸಕ್ಕೆ ಹೋಗಿಬರುತ್ತಿದ್ದ. ಅವನ ಬಿಗಿದ ಮುಖ, ಒತ್ತಾದ ಹುಬ್ಬುಗಳನ್ನು ಕಂಡಾಗ ದೊಡ್ಡಕ್ಕನ  ಧ್ವನಿ ಕೊಸರಾಡಿತು. ‘ಅಮ್ಮಿ ನೀನೇ ಕೇಳಮ್ಮಿ’ ಎಂದು ತಾಯಿಯನ್ನೇ ಪುಸಲಾಯಿಸಿದಳು.

ಮನೆಯಲ್ಲಿ ತನ್ನ ಬೆನ್ನ ಹಿಂದೆ ನಡೆಯುತ್ತಿರುವ ಮಾತುಕತೆಗಳ ನೆರಳನ್ನು ಗ್ರಹಿಸಿದ ಅವನು ಪ್ರಶ್ನೆ ಬರುವ ಮುನ್ನವೇ ‘ನಾನವತ್ತೆ ಹೇಳಿದ್ದೀನಿ ಮದ್ವೆ ಮಾಡ್ಕೊಳ್ಳೊಲ್ಲ ಅಂತ. ಮತ್ತೆ ಮತ್ತೆ ಏನಿದು?’ ಎಂದು ಗುಡುಗಿದ. ತೆಪ್ಪನೆ ಊರಿಗೆ ತೆರಳಿದಳು ದೊಡ್ಡಕ್ಕ. ಅವನ ಮನಸ್ಥಿತಿಯನ್ನರಿತು ತಾಯಿಯೂ ಸುಮ್ಮನಾದರು.

ಹುಚ್ಚು ಹೊಳೆಯಂತೆ ಏರುದನಿಯಲ್ಲಿ ಸದಾ ಹರಟುತ್ತಿದ್ದ ನಸೀಂ ಗಂಡನ ಮನೆಗೆ ಹೊರಟುಹೋದ ಮೇಲೆ ಮನೆಯಲ್ಲಿ ನಿಶ್ಶಬ್ದ ತಾಂಡವಾಡುತ್ತದೆ ಎಂದು ಎಣಿಸಿದ್ದು ತಿರುಗುಮುರುಗಾಯಿತು.

ಪ್ರತಿದಿನ ಹಾಸಿಗೆಯಿಂದಲೇ ಮಮ್ತಾಜ್-ಎಜಾಸರ ಜಗಳದ ಅಲೆಗಳು. ಶಫಿಯನ್ನು ಮೊದಲು ಕಂಡದ್ದು, ತಂದೆಯನ್ನು ಕೇಳಿ ಪಡೆದದ್ದು ತಾನೆಂದು ಮಮ್ತಾಜಳ ಪಟ್ಟು. ಶಫಿ ಬಂದ ಮರುದಿನವೇ ಅದರ ಕೊರಳಿಗೆ ಕಿರುಗೆಜ್ಜೆ ಕಟ್ಟಿ ನಾಮಕರಣ ಮಾಡಿದ್ದರಿಂದ ಅದು ತನಗೆ ಸೇರಬೇಕೆಂದು ಎಜಾಸನ  ವಾದ.

‘ಏಯ್ ……ನನ್ನ ಫ್ರೆಂಡು ಕೊಡೇ’ ಎಂದು ಎಜಾಸ್ ಅವಳ ಕೈಯಿಂದ ಶಫಿಯನ್ನು ಕಸಿದುಕೊಂಡಾಗ ಅದು ‘ಬ್ಯಾ ಬ್ಯಾ’  ಎಂದು ಕಿರುದನಿಯಲ್ಲಿ ಒರಲುತ್ತದೆ.

‘ಕತ್ತೆ ನೀನೊಬ್ಬ ಶುದ್ಧ ಒಡ್ಡ….ನನ್ಮಗೂನ ಸುಮ್ನೆ ನೋಯಿಸ್ತೀ….ತಡೀ ದಾದಾಗೆ ಹೇಳ್ತೀನಿ’ ಎಂದು ಮಮ್ತಾಜ್ ನಯವಾಗಿ ಮರಿಯನ್ನು ತೋಳಿನಲ್ಲಿ ಸಿಕ್ಕಿಸಿಕೊಂಡು, ತನ್ನ ಹಾಸಿಗೆಯ ಮೇಲೆ ಮಲಗಿಸಿ ಉಪಚರಿಸುತ್ತಾಳೆ. ಶಫಿ ಪುಟಪುಟನೆ ನೆಗೆಯುತ್ತ ಮನೆತುಂಬ ಹರಿದಾಡಿದರೆ ಅದರ ಕೊರಳಗೆಜ್ಜೆ ‘ಗಲ್ ಗಲ್’ ದನಿಮಾಡುತ್ತದೆ.

ಎಜಾಸ್-ಮಮ್ತಾಜ್ ಆಟವಾಡುತ್ತಿದ್ದಾಗ ಶಫಿ ಚಂಗನೆ ಹಾರಿಕೊಂಡು ಬಂದು ಎಜಾಸನನ್ನು ಸುತ್ತುವರಿದಾಗ  ಅವನು ಅದರ ಕೊರಳನ್ನು ಬಳಸಿ ‘ನೋಡು ನನ್ನ ನೋಡಿಯೇ ಬಂದದ್ದು.. ನಿನಗಿಂತ ನನ್ನ ಕಂಡ್ರೆ ಇದಕ್ಕೆ ಎಷ್ಟೊಂದು ಪ್ರೀತಿ!’- ಎಂದಾಗ ಮಮ್ತಾಜ್ ಮುಖ ಊದಿಸಿಕೊಂಡಳು.

 ‘ನಿನ್ನೆ ರಾತ್ರಿ ನನ್ನ ಹತ್ರ ಮಲಗಿದ್ದನ್ನು ಕದ್ದು ನಿನ್ನ ಪಕ್ಕ ಮಲಗಿಸ್ಕೊಳಕ್ಕೆ ನಾಚ್ಕೆ  ಆಗಲ್ಲ… ಕಳ್ಳ…..ಕಳ್ಳ…’ ಎಂದು ಅವಳು ಮುಖ ಸಿಂಡರಿಸಿ ಅಣ್ಣನನ್ನು ಹಂಗಿಸಿದಾಗ ಪಟ್ಟನೆ ಅವನಿಂದ ಅವಳಿಗೊಂದು ಏಟು ಬಿತ್ತು. ಅಳು ಶುರುಮಾಡಿದಳು. ದೂರು ದಾದನವರೆಗೂ ಹೋಯಿತು.

‘ಬೆಳಗಾಯ್ತಂದ್ರೆ ನಿಮ್ಮ ಜಗಳ ಶುರೂನಾ? ತುಂಟ ಹುಡುಗರು’

ಸುಕ್ಕುಬಿದ್ದ ಕೆನ್ನೆಯ ತುಂಬ ನಗು ಹೊರಳಿಸಿ, ಹುಸಿಗೋಪ ತೋರಿದರು ದಾದಾ. ಚಳಿಯೆಂದು ದಪ್ಪ ಕಂಬಳಿ ಹೊದ್ದು ಇನ್ನೂ ಮಂಚವಿಳಿಯದಿದ್ದ ದಾದಾನ ಆಚೀಚೆ ಬದಿಯಲ್ಲಿ ಕುಳಿತ ಮೊಮ್ಮಕ್ಕಳ ಫಿರ್ಯಾದು ದಾದೀಮಾನ ಗಮನವನ್ನೂ ಸೆಳೆದಿತ್ತು.

‘ಏನಂತಾರೆ ನ್ಯಾಯಾಧೀಶರು?’-ಮಂಚ ಕಿರುಗುಟ್ಟುವಂತೆ ಭಾರವಾಗಿ ಕುಳಿತುಕೊಳ್ಳುತ್ತ  ದಾದೀಮನ ನಗುಮುಖದ ಪ್ರಶ್ನೆ.

 ‘ನಿನ್ನ ಹಾಗೆ ಮೊಂಡು ನೋಡು ನಿನ್ನ ಮೊಮ್ಮಗಳು. ಶಫಿ ಸದಾ ತನ್ನ ಹತ್ರಾನೇ ಇರ್ಬೇಕು ಅಂತ ಹಟ…ಏಜೂ ಎಲ್ಲಿ ಎತ್ಕೊಂಡು ಬಿಡ್ತಾನೋಂತ ಎರಡು ದಿನದಿಂದ ಸ್ಕೂಲಿಗೂ ಹೋಗಿಲ್ಲ ಈ ಪುಟ್ಟಿ -’ ದಾದಾ ಮೊಮ್ಮಗಳ ಗಲ್ಲದ ಮೇಲೆ ಬೆರಳು ಬಡಿದರು.  

ದಾದನ ಬೆಚ್ಚನೆಯ ಕಂಬಳಿಯಿಂದ ಹೊರಬರಲು ತಕರಾರು ಮಾಡುತ್ತಿದ್ದ  ಶಫಿಯನ್ನು ಬಲವಂತವಾಗಿ ಎತ್ತಿಕೊಳ್ಳುವುದರಲ್ಲೇ ಮಮ್ತಾಜಳ ಗಮನವೆಲ್ಲ ಅಡಗಿತ್ತು. ಶಫಿ ಕಂಬಳಿಯೊಳಕ್ಕೆ ತಲೆ ಎಳೆದುಕೊಳ್ಳುತ್ತ ಕಿಣಿಕಿಣಿ ನಾದದ ಕೊಸರಾಟ ಮಾಡಿದಾಗ ಸರಕ್ಕನೆ ಬಗ್ಗಿ ಅದನ್ನು ಕಂಕುಳಲ್ಲಿ ಬಾಚಿ ತಬ್ಬಿಕೊಂಡು ದಾದೀಮಾ ನಡುಮನೆಯತ್ತ ಧಾವಿಸಿದ್ದು ಎಲ್ಲರಿಗೂ ಅನಿರೀಕ್ಷಿತ!… ಮಮ್ತಾಜ್ ಮಂಚದಿಂದ ನೆಲಕ್ಕೆ ನೆಗೆದು ‘ಊಂ ಊಂ’ ಎಂದು ಕೈ ಬಡಿದು ಹಟಮಾಡುತ್ತ ದಾದೀಮಾನ ಹಿಂದೆ ಓಡಿದಳು.

ದಾದಾ ಮೊಮ್ಮಗನಿಗೆ ನಗು ಕುಪ್ಪಳಿಸಿ ಬಂತು. ‘ಹಾಗೇ ಆಗಬೇಕು, ನೀ ಅಳಬೇಕು, ನಾ ನಗಬೇಕು’-ಎಜಾಸ್ ಸಂತೋಷದಿಂದ ನಕ್ಕ.

ನಡುಮನೆಯ ಈಜೀಚೇರಿನ ಮೇಲೆ ಪೇಪರೋದುತ್ತ ಕುಳಿತಿದ್ದ ತಯುಬನ ತೊಡೆಯ ಮೇಲೆ ಶಫಿಯನ್ನು ತಂದು ಕುಕ್ಕಿದರು ದಾದೀಮಾ. ಪೇಪರ್ ಪರ್ರೆಂದು ಹರಿದು ಶಫಿಯ ರೇಷ್ಮೆಗೂದಲು ತಯುಬನ ಗಲ್ಲ ನೇವರಿಸಿದಾಗ,

 ‘ಏನಮ್ಮಿ ಇಷ್ಟು ದೊಡ್ಡವಳಾಗಿದ್ದೀ, ಇನ್ನೂ ನಿಂಗೆ ಹುಡುಗಾಟವೇ?… ಮೊಮ್ಮಕ್ಕಳ ಜೊತೆ ಸೇರಿ ನೀನೂ ಯಾಕೋ ಮಗುವಾಗ್ತಾ ಬರ್ತಿದ್ದೀ’ -ಕೋಪ ಲೇಪನದೊಳಗೆ ಅಳಲು ತುಂಬಿದ ಭಾರದ ದನಿ…. ಸೀಸದಷ್ಟು, ಕಬ್ಬಿಣದಷ್ಟು ಭಾರ…. ಭಾರ.. ಮಡಿಲಲ್ಲಿ ಬುಳುಬುಳು ಹೊರಳಿದಾಗ ತಯುಬ್ ಶಫಿಯನ್ನು ಒರಟಾಗಿ ಕೆಳಗೆ ತಳ್ಳಿ ಮುಖಕ್ಕೆ ಅಡ್ಡವಾಗಿ ಪೇಪರ್ ಹಿಡಿದು ಕೂತ.

 ಬುಡಕ್ಕನೆ ಉರುಳಿಬಿದ್ದ ಶಫಿಯನ್ನು ಅಪ್ಪಿಕೊಳ್ಳುವುದನ್ನೂ ಮರೆತು ಮಮ್ತಾಜ್ ತಂದೆಯ ಕಡೆಗೇ ಅಚ್ಚರಿಯಿಂದ ನೋಡುತ್ತಿದ್ದಳು. ಪೇಪರಿನ ಮರೆಯಿಂದ ತಿದಿಯೊತ್ತಿನಂಥ ನಿಟ್ಟುಸಿರು. ಮಮ್ತಾಜ್ ಪಿಳಿಪಿಳಿ ಕಣ್ಣು ಮಿಟುಕಿಸಿದಳು. ಕೆಳಗೆ ಮಲಗಿದ್ದ ಅವನ ಪ್ರೀತಿಯ ನಾಯಿ ಆಲಿಯೂ ಅರ್ಥವಾಗದ ನೋಟದಿಂದ ಒಡೆಯನನ್ನು ದಿಟ್ಟಿಸುತ್ತಿತ್ತು.

ಮನೆಮಂದಿಯೆಲ್ಲ ಶಫಿಯನ್ನು ಮುದ್ದಿಸಲು ಹಾತೊರೆಯುವಾಗ ತಂದೆ ಮಾತ್ರ ಯಾಕೆ ಹೀಗೆ? ಎಂದು ಅವಳ ಪುಟ್ಟಮನದೊಳಗೆ ಪ್ರಶ್ನೆಗಳ ಪಗಡೆಯಾಟ. ಒಂದೆರಡು ಬಾರಿ ಕೇಳಿದಾಗ ‘ನನ್ನ ಮುದ್ದುಮರಿ ನೀನಿರುವಾಗ ನನಗೆ ಇನ್ಯಾವ ಮರೀನೂ ಬೇಡ’ ಎಂದವಳ ತಲೆತಟ್ಟಿ ಅವಳನ್ನು ತೊಡೆಯಿಂದ ಕೆಳಗಿಳಿಸಿದ್ದ.

ಮೆಲ್ಲಮೆಲ್ಲನೆ ಸದ್ದಿಲ್ಲದ ಹೆಜ್ಜೆಯಲ್ಲಿ ತಂದೆಯ ಬಳಿಸಾರಿ ಮಮ್ತಾಜ್ ಅವನ ಮುಖ ಮರೆಸಿದ್ದ ಪೇಪರಿನ ಮೇಲೆ ಪಟಕ್ಕನೆ ಹೊಡೆದು ಒಳಕ್ಕೆ ಓಡಿ ಹೋದಳು. ತಯುಬನ ಕೈಲಿದ್ದ ಪೇಪರ್ ಕೆಳಗೆ ಜಾರಿಬಿತ್ತು. ಜೊತೆಗೆ ಪಟಪಟನೆ ಕಣ್ಣೀರ ಹನಿಗಳು ಕೂಡ.

ಎದುರಿಗೆ  ಗೋಡೆಯ ಮೇಲೆ ನೇತು  ಹಾಕಿದ್ದ ದೊಡ್ಡ ಫೋಟೋದಲ್ಲಿನ ಬಣ್ಣಗಳೆಲ್ಲ ಕಲೆಸಿದಂತಾಯಿತು. ಕಣ್ಣು ಒರೆಸಿಕೊಂಡು ನೋಡಿದರೂ ಮಂಜು…ಮಂಜು….ಕಪ್ಪು ಕಾವಳ. ಧಿಮ್ಮೆನ್ನುತ್ತಿದ್ದ ತಲೆಯನ್ನೊತ್ತಿ ಈಜೀಚೇರಿನ ಹಿಂಭಾಗಕ್ಕೆ ಒರಗಿಕೊಂಡ.

 ಉಂಗುರ ಉಂಗುರವಾದ ಯೋಚನೆಗಳು. ಸುತ್ತಲಿನ ಸದ್ದುಗಳು ಸ್ತಬ್ದವಾದಂತೆ, ಎದುರಿನ ವಸ್ತುಗಳು ಮಾಯವಾದಂತೆ ಅವನಿಗೆ ಭಾಸವಾಯಿತು. ಶೂನ್ಯದ ಕಡಲುರೊಯ್ಯನೆ ಅಪ್ಪಳಿಸಿ ಬಂದಂತೆ…. ಹತಾಶನಾಗಿ ಕುಳಿತವನು ಕಣ್ಬಿಟ್ಟಾಗ, ಕಿವಿ ತೆರೆದಾಗ-ಕಂಡಿದ್ದು, ಕೇಳಿದ್ದು ಘಲ್ ಘಲ್ ಸದ್ದಿನೊಡನೆ ತಲೆ ಕುಣಿಸಿಕೊಂಡು ಕುಪ್ಪಳಿಸಿ ಬಂದ ಶಫಿ!!!… ಕರುಳನ್ನು ಬೇಯಿಸಿಟ್ಟ ಅನುಭವ. ನೋವಿನಿಂದ ಮುಖ ಹಿಂಡಿ ದೃಷ್ಟಿಯನ್ನು ಮೇಲಕ್ಕೇರಿಸಿದ. ಹೃದಯ ಉಕ್ಕುಕ್ಕಿ ಬಂತು. ಬಾಗಿಲಿಗೆ ಇಳಿಬಿಟ್ಟ ಪರದೆಯನ್ನು ಬಾಯಲ್ಲಿ ಸಿಕ್ಕಿಸಿಕೊಂಡು ವಯ್ಯಾರ ಮಾಡುತ್ತಿದ್ದ ಶಫಿಯನ್ನು ನೋಡುತ್ತಿದ್ದ ಹಾಗೆ ಅವನಿಗೆ ತನ್ನ ಪ್ರೀತಿಯ ಚಿಲುಮೆಯಾಗಿದ್ದ ಫಾಮಿದಳ ನೆನಪು ಚಿಮ್ಮಿ ಚಿಮ್ಮಿ ಬಂತು. ಅವಳ ಮುದ್ದು ಒಸರುವ ಮುಖ, ಪ್ರೀತಿ ಹೆಪ್ಪುಗಟ್ಟಿದ ಕಣ್ಣುಗಳು ಕಣ್ಮಂದೆ ನಿಂತಂತೆ…… ಮಾತಾಡಿಸಿದಂತೆ.

ಕಾದ ಕಾವಲಿಯ ಮೇಲೆ ಕೂತವನಂತೆ ಒಂದೇ ಸಮನೆ ಹೊಯ್ದಾಡಿದ. ಎದೆಯಲ್ಲಿ ಗೂಡುಗಟ್ಟಿದ್ದ ನೆನಪುಗಳ ಹಿಂಡು ಬರಾತಿನಂತೆ ಧುಮುಧುಮು ಹೊರ ನುಗ್ಗತೊಡಗಿದವು. ಅವಳು ಬೆಳ್ಳಿ ಕಾಲ್ಗೆಜ್ಜೆಯೊಂದಿಗೆ ಪುಟಪುಟನೆ ಚಿಮ್ಮಿ ಬಂದು ಕೊರಳಿಗೆ ತೋಳ ಮಾಲೆ ಹಾಕುತ್ತಿದ್ದುದು…..ಕೆನ್ನೆಗೆ ತುಟಿಯೊತ್ತಿದಾಗಲೆಲ್ಲ ‘ಹೋಗೀಪ್ಪ….ನಾನೇನು ಏಜೂನೇ, ಮಮ್ಮೂನೇ..ಮಕ್ಕಳನ್ನು ಮುದ್ದಿಸೋ ಹಾಗೇ ಮುದ್ದಿಸ್ತೀರಲ್ಲ ‘ ಎಂದು ಕೆನ್ನೆಯನ್ನು ಹಿಂದಕ್ಕೆಳೆದುಕೊಂಡು ಬೆಳಕು ಬಿಚ್ಚಿದಂತೆ ತುಟಿಯ ದಳಗಳನ್ನು ಬಿರಿಸಿ ಸಶಬ್ದವಾಗಿ ನಗುತ್ತಿದ್ದುದು…

‘’ಹಾಗಾದ್ರೆ ಮಕ್ಕಳ ತಾಯೀನ ಮುದ್ದಿಸೋದು ಹ್ಯಾಗೇಂತ ಹೇಳ್ಕೊಡು, ಮುದ್ದಿಸ್ತೀನಿ’ ಎಂದು ಅವಳು ಹಿಡಿತದಿಂದ ಜಾರದಂತೆ ನಡು ಬಳಸಿದಾಗ ಸರಕ್ಕನೆ ತನ್ನ ಕೈಕಿತ್ತಿ ಹಿಂದಕ್ಕೆ ಚಂಗನೆ ಹಾರಿ ‘ಹೀಗೆ’ ಎಂದು ಕೈ ಖಾಲಿ ಮಾಡಿ ರೇಗಿಸಿ ಮಾಯವಾಗುತ್ತಿದ್ದಳು. ಎರಡು ಮಕ್ಕಳ ತಾಯಿಯಾಗಿದ್ದರೂ ಅದೇ ಸರಸ, ಉತ್ಸಾಹ, ರಸಿಕತೆಗಳ ಕುಡಿಕೆ…..ಮತ್ತೇರಿಸುವ ನಯವಾದ ಅಪ್ಪುಗೆ… ಉಪಚಾರ…….ಕನಸಿನಂತೆ ಬಂದು ಕನಸಿನಂತೆಯೇ ಮಾಯವಾದಳು.

ಯಾರಾದರೂ ಕಣ್ಣು ಹಾಕುವಂಥ ಅಪೂರ್ವ ಜೋಡಿ, ಸಂಸಾರ. ಗಂಡ ಹೆಂಡಿರು ಒಂದು ನಿಮಿಷವೂ ಒಬ್ಬರನ್ನಗಲಿ ಒಬ್ಬರು ಇರುತ್ತಿರಲಿಲ್ಲ. ಫಾಮಿದಳ ಬೇಕು, ಬೇಡಗಳೇ ತಯುಬನದೂ ಕೂಡ. ಹೆಂಡತಿ ಚೆಲುವಿನ ಖನಿಯಾಗಿ, ಸರ್ವಾಲಂಕೃತಳಾಗಿ ಕೊನೆಗೆ ಅದನ್ನು ಗೋರಿ ಮಾಡುವಂತೆ ಮೇಲೆ ಬುರ್ಕಾತೊಟ್ಟು ಜೊತೆಗೆ ಹೊರಡಲು ಸಿದ್ಧವಾದಾಗ ಮಾತ್ರ ಅವನಿಗೆ ಸಿಟ್ಟು ಸಾಗರವಾಗುತ್ತದೆ.

 ‘ನಂಗೆ ಈ ಹಳೇ ಘೋಷಾ ಪದ್ಧತಿ ಒಂದೂ ಸರಿ ಬರಲ್ಲ……ಅದನ್ನು ಕಿತ್ತೆಸಿ.. ಚೆಲುವಿರೋದೇ ಎಲ್ಲರ ಕಣ್ಣು ತುಂಬಕ್ಕೆ…ಮೆಚ್ಚಿಗೆ ಪಡೆಯೋಕ್ಕೆ’ ಎಂದು ಅವಳ ಸೌಂದರ್ಯವನ್ನು ಅನಾವರಣ ಮಾಡಿದ್ದ.

ಚೆಲುವೆ ಹೆಂಡತಿ, ಗೆಜ್ಜೆಯುಲಿಯುತ್ತ ಹಿತವಾಗಿ ನಲಿಯುತ್ತ ಎಲ್ಲರೊಡನೆ ಮಿಳಿತವಾಗಬೇಕೆನ್ನುವುದೇ ಅವನ ಇಚ್ಛೆ. ಗಂಡನ ಅಭಿಲಾಷೆಗೆ ತಕ್ಕಂತೆ ಬಹುಬೇಗ ಫಾಮಿದಾ ಹೊಂದಿಕೊಂಡು. ಆಧುನಿಕ ರೀತಿಯಿಂದ ಬಾಳಬಯಸಿದ್ದ ಅವನ ದನಿಗಳಿಗೆಲ್ಲ ಇನಿಯಾದ ಮಾರ್ದನಿ ಅವಳದು. ಬಂದವರನ್ನೆಲ್ಲ ಗಂಡನಿಗೆ ಸಮನಾಗಿ ನಿಂತು ಆದರಿಸುವ ಹೊಣೆಗಾರಿಕೆ ಅವಳಿಗೆ. ಮೈ ಮನ ತುಂಬಿ ಬಾಳು ಜೇನಾಗಿಸಿದ ಅವಳ ಕೊಡುಗೆಗಳೆರಡನ್ನು ಮುದ್ದಿಸುವಾಗ ತಯುಬನ ಹೃದಯ ಸಂತಸ, ಕೃತಜ್ಞತೆಗಳಿಂದ ಫಾಮಿದಳ ಬಗ್ಗೆ ತುಳುಕಿ ತಾನು ಬಹು ಅದೃಷ್ಟವಂತನೆಂದು ಬಾರಿ ಬಾರಿ ಅಂದುಕೊಳ್ಳುತ್ತಿದ್ದ. ‘ ಖುದಾ, ಈ ಅದೃಷ್ಟ ನಿರಂತರವಾಗಿರಲಿ’ ಎಂಬುದೊಂದೇ ಅವನ ಪ್ರತಿನಿತ್ಯದ ನಮಾಜು?…ಅವನ ಅತಿ ಪ್ರೀತಿಯ ಕಾವಲೇ ಅವಳಿಗೆ ಮುಳುವಾಯಿತೇನೋ?  ಎಲ್ಲರೊಡನೆ ಹೆಂಡತಿ ಜೊತೆಜೊತೆಯಾಗಿ ಬೆರೆಯಬೇಕೆಂದ ಅವನ ಆಸೆಯ ಪಾಲನೆಯೇ ಅವಳಿಗೆ ಕುತ್ತಾಯಿತೇನೋ? ಆದರೆ, ಅವನಿಗೆ ಅವಳ ಮೇಲೆ ಸಂಶಯ ಹಾಗೆ ಇದ್ದಕ್ಕಿದ ಹಾಗೆ ಒಮ್ಮೆಲೆ ಧುತ್ತೆಂದು ಅವತರಿಸಲಿಲ್ಲ.

ಎಂದಿನ ನಿಷ್ಕಲ್ಮಶತೆಯಿಂದ ಅವನ ಆಪ್ತ ಸ್ನೇಹಿತನಿಗೆ ಉಪಚರಿಸಿ ಮಾತಾಡುತ್ತ ಕೂತವಳು ಮಧ್ಯೆ ಮಧ್ಯೆ ನಗುತ್ತಿದ್ದಾಗಲೇ ಮೆಲ್ಲಮೆಲ್ಲನೆ ಅವನ ಮನದೊಳಗೆ ಶಂಕೆ ತೆವಳುತ್ತಿತ್ತು. ಬಾರಿಬಾರಿಗೂ ಸ್ನೇಹಿತನೇಕೆ ತನ್ನವಳನ್ನು ಹೊಗಳಬೇಕು? ಮೆಚ್ಚಿಕೊಳ್ಳಬೇಕು? ಅದಕ್ಕೆ ಇವಳದೋ ಧನ್ಯತೆಯ ಹೂ ನಗು… ಅವನ ಉಪಚಾರದಲ್ಲಿ ಅತೀ ಆಸ್ಥೆ. ಅನುಮಾನ ಅಂಬೆಗಾಲಿಟ್ಟಿದ್ದು ಸರಸರನೆ ಒಳಹೊಕ್ಕು ಮೆಲ್ಲನೆ ಎದ್ದುನಿಂತಿದ್ದು ಅವನುದ್ದಕ್ಕೂ ಬೆಳೆಯತೊಡಗಿತು. ಕಣ್ಣು-ಕಿವಿಗಳು ಪಾತಾಳಗರಡಿಯಾದವು. ಅತೀ ಪ್ರೀತಿಸುವವರನ್ನು ಒಮ್ಮೊಮ್ಮೆ ತೀಕ್ಷ್ಮ ನೋವಿಗೀಡು ಮಾಡಬೇಕೆನ್ನಿಸುತ್ತದೋ ಏನೋ?… ತಯುಬ್ ಯಾವುದನ್ನೂ ಬಾಯಿಬಿಟ್ಟು ಹೇಳದೆ ನಿಧಾನವಾಗಿ ಅವಳನ್ನು  ದೂರ ಸರಿಸ ಹತ್ತಿದ. ವಿನಾಕರಣ ದೀರ್ಘ ಮೌನ. ಒಮ್ಮೆಲೆ ಸಿಡಿದೇಳುವುದು. ಅವಳಿಗೆ ಮಾತಾಡಲು ಅವಕಾಶಗೊಡದೆ ‘ನಿನ್ನ ಪ್ರೀತಿ ಎಲ್ಲ ಬೂಟಾಟಿಕೆ ನಂಗೊತ್ತು ಸುಮ್ನಿರು’ ಕಟುವಾಗಿ ಗದರಿಸುವುದು ಆಗೀಗ ನಡೆದಿತ್ತು.   ಆಗೇನೋ ಅವನಿಗೆ ಅವ್ಯಕ್ತ ಕ್ರೂರ ತೃಪ್ತಿ ಮಿಸುಕಾಡಿದಂತಾಗುತ್ತಿತ್ತು.

ಇದೇಕೆ ಈ ಬೆಳವಣಿಗೆ ಪಡೆಯಿತೋ ಅವನಿಗೇ ಅಗೋಚರ. ಪ್ರತಿದಿನ ಅವಳ ಅಳು…..ಗೋಳು…ಅವಳನ್ನೂ ಚಿಂತೆಯಲ್ಲಿ ಹೂತು ತಾನೂ ಯೋಚನೆಯ ಹುತ್ತದೊಳಗೆ ಪ್ರವೇಶಿಸುತ್ತಿದ್ದ ತಯುಬ್. ಅವಳ ವಿವರಣೆ ಅವನಿಗೆ ಅಗತ್ಯವೆನಿಸಲಿಲ್ಲ. ತಪ್ಪಿನ ಮೇಲೆ ತಪ್ಪು ಹೊರೆಸಿ ಆಪಾದನೆಯ ಕೋಟೆಯೊಳಗೆ ಅವಳನ್ನು ಬಂಧಿಸಿ ತಾನೂ ವಿಚಿತ್ರವಾಗಿ ನರಳಬೇಕೆನಿಸುತ್ತಿತ್ತು. ಅದನ್ನು ಕಾರ್ಯಕ್ಕೂ ಇಳಿಸಿದ್ದ.

ಇದ್ದಕ್ಕಿದ್ದಂತೆ ಬದಲಾದ ಗಂಡನ ಕ್ರೂರ ನಡವಳಿಕೆ ಫಾಮಿದಳನ್ನು ಕಂಗೆಡಿಸಿತು. ತಾನೇನು ಮಾಡಿದೆ ಎಂಬುದೇ ಅವಳಿಗೆ ಸಮಸ್ಯೆಯ ಪರ್ವತ. ತನ್ನನ್ನು ಕಂಡರೆ ಸಿಡಿಗಟ್ಟುವ, ತನ್ನ ಮುಖವನ್ನೂ ನೋಡಲಿಚ್ಛಿಸದ ಅವನನ್ನು  ಶಾಂತಗೊಳಿಸಿ ಕಾರಣ ಕೇಳುವುದಂತೂ ಅವಳಿಗೆ ಸಾಧ್ಯವಾಗಲಿಲ್ಲ. ಅವಳೆಷ್ಟು ಅತ್ತು ಬೇಡಿಕೊಂಡರೂ ಅವನು ಸಡಿಲಾಗಲಿಲ್ಲ. ಅವಳ ಬಾಯಿಗೆ ಬೀಗ ಜಡಿಯುವಂತೆ ವರ್ತಿಸಿದ್ದ. ತಾನೂ ಈ ಬಗ್ಗೆ ಬಾಯಿ ಬಿಚ್ಚಲಿಲ್ಲ.  ಹೆಂಡತಿ ತನಗೆ ದ್ರೋಹ ಬಗೆದಳೆಂದೇ ಅವನ ದೃಢ ತೀರ್ಮಾನ. ಹಾಗೆ ನಂಬುವುದರಲ್ಲಿ ಅನುಭವಿಸುವುದರಲ್ಲಿ, ದುಃಖಿಸುವುದರಲ್ಲೇನೋ ಅವನಿಗೆ ಸಮಾಧಾನ ಕಂಡಿತ್ತು. ತಪ್ಪು ಅರ್ಥೈಸಿಕೊಂಡು ತಾನೂ ನವೆಯುತ್ತ  ಹೆಂಡತಿಯನ್ನೂ ನೋವಿನ ಗಿರಣಿಯೊಳಕ್ಕೆ ತಳ್ಳಿದ.

ಮನಸ್ಸಿನ ಬಿರುಕು ದಿನೇ ದಿನೇ ಅಗಲವಾಗಿ ಬಾಯ್ತೆರೆದು ಕಂದರ ಆಳ ಆಳಕ್ಕೆ ಕೊರೆಯಿತು. ತಾನು ಮೊದಲೆರಡು ಮಕ್ಕಳ ಬಸುರಿಯಾಗಿದ್ದಾಗ ಗಂಡ ಮಾಡುತ್ತಿದ್ದ  ಬೂಚುಬೂಚಿಯ ಶುಶ್ರೂಷೆ, ರಮಿಸುವಿಕೆಯ ನೆನಪು ಫಾಮಿದಳನ್ನು ಪ್ರತಿಕ್ಷಣವೂ ಮುತ್ತಿ ಕುಟುಕುತ್ತಿತ್ತು. ಫಾಮಿದಾ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದಿದ್ದರೂ ತಯುಬ್ ಅದನ್ನು ಲಕ್ಷಿಸದೆ ಹೋದಾಗ, ಹಿಂದಿನ ಸನ್ನಿವೇಶಗಳಿಗೆ ವ್ಯತಿರಿಕ್ತವಾಗಿ ಅವನು ನಡೆದುಕೊಂಡಾಗ ಅವಳು ಒಳಗೇ ನೊಂದುಕೊಳ್ಳುತ್ತಾ, ಹೊಟ್ಟೆಯಲ್ಲಿರುವ ಮಗುವಿನ ಚಿಂತೆಯನ್ನು ಮುದುರಿಟ್ಟು ಅನ್ನ, ನೀರು ಬಿಟ್ಟಳು.

ಯಾವುದಕ್ಕೂ ಜಗ್ಗದೇ ಹೋದ ತಯುಬ್. ಈಚೆಗೆ ತನ್ನ ಗೆಳೆಯ ಬಂದಿದ್ದಾಗ ಅವಳ ಹತ್ತಿರ ಹಿತ್ತಿಲಲ್ಲಿ ತುಂಬ ಹೊತ್ತು  ಹರಟುತ್ತಿದ್ದುದನ್ನು ನೆನೆಸಿಕೊಂಡು, ಅವರ ನಡುವಣ ಸಂಭಾಷಣೆಯನ್ನು ಕಲ್ಪನೆಯಲ್ಲಿ ನೇಯತೊಡಗಿದ. ಇವಳೂ ಮನಬಿಚ್ಚಿ ಅವನೊಡನೆ ಆಪ್ತವಾಗಿ ಮಾತಾಡಿರಬಹುದೇ ಎಂದೆನಿಸಿತವನಿಗೆ.

‘ಯಾಕಿಷ್ಟು ಬಡವಾಗಿದ್ದೀರಾ? ಅವನ ಕಳಕಳಿಯ ಪ್ರಶ್ನೆಗೆ ಇವಳು ನಡೆಯುತ್ತಿರುವುದನ್ನೆಲ್ಲ ಮರುಕ ಉಕ್ಕುವಂತೆ ಅವನ ಕಿವಿಗೆ ಹುಯ್ದಿರಬಹುದೆ?….ಹೇಳಿಯೇ ಇರುತ್ತಾಳೆ ಎಂದು ಬಲವಾಗಿ ಅಂದುಕೊಂಡಾಗ ಅವನ ವಿವೇಕ ಬತೇರಿಯಿಂದ  ಧೊಪ್ಪನೆ ಕೆಳಗೆ ಬಿತ್ತು. ಹೆಂಡತಿಯ ಮೇಲೆ ಕೋಪ ಕುದ್ದು ಕಲ್ಲಾಯಿತು. ಸೀದಾ ಬಂದವನೇ,  ‘ನಂಗೆ ನಿನ್ನ ನಡತೆ ಹಿಡಿಸ್ಲಿಲ್ಲ.. ಬಿಡುಗಡೆ ಕೊಟ್ಟು ನಾ ಬೇರೆ ಮದ್ವೆ ಆಗ್ತೀನಿ’ ಎಂದು ಸಿಟ್ಟುಕಾರಿ ಹೊರಗೆ ನಡೆದ.

‘ಜನ್ಮ ಜನ್ಮಾಂತರಕ್ಕೂ ನೀನೊಬ್ಬಳೇ ನನ್ನ ರಾಣಿ ಫಾಮಿ…….’ ಎಂದು ಸಾವಿರ ಬಾರಿ ಉಸುರಿದ್ದ , ಅತೀವ ಪ್ರೀತಿ ತೋರಿದ್ದ ಗಂಡನ ಬಾಯಿಂದ ಇಂಥ ನುಡಿ ಕೇಳಿ ಆಘಾತಗೊಂಡಳು…ನಾನು ಮಾಡಿದ ಅಪರಾಧವಾದರೂ ಏನು ಹೇಳಿ ಎಂದವಳ ಮನ ಒಳಗೇ ಕೀರಿತು…ಕೆಂಗುಲಾಬಿಯಂತಿರುತ್ತಿದ್ದ ಅವಳ ಮೊಗ ಅವನ ಅನಾಮತ್ತು ನಿರ್ಧಾರ ಕೇಳಿ ಅರಕ್ತವಾಯಿತು.

ಬೆಳಗಾಗುವುದರಲ್ಲಿ ನೇಣು ಬಿಗಿದುಕೊಂಡು ಅವಳು ಇಲ್ಲವಾಗಿದ್ದಳು.

 ‘ನಿಮ್ಮಾಣೆ ನಾನು ತಪ್ಪು ಮಾಡಿಲ್ಲ, ನಂಬಿ’

 ಅವಳ ಕೊನೆಯ ಬರವಣಿಗೆಯ ನುಡಿ ತಯುಬನ ಕಿವಿಯಲ್ಲಿ ಅವಳೇ ಆರ್ತದನಿಯಲ್ಲಿ ಬೇಡಿ ನುಡಿದಂತೆ ಮಾರ್ಮೊಳಗು… ಅವಳ ಪಲುಕಿನ, ಏರಿಳಿತದ  ದನಿಯಲ್ಲಿ ಕಾಣದಿದ್ದ ಸತ್ಯ, ನಂಬುಗೆಯನ್ನು ಅವನು ಬರವಣಿಗೆಯಲ್ಲಿ ಗುರುತಿಸಿ ಭೋರೆಂದು ಅತ್ತ. ತುಂಬಿದ ಬಸುರಿಯನ್ನು ತಾನೇ ಕೊಲೆ ಮಾಡಿದೆ ಎಂದು ತೊಲೆಯಿಂದ ನೇತಾಡುತ್ತಿದ್ದ ಅವಳ ಕಾಲಿನ ನೂಪುರವನ್ನು ಘಲುಘಲು ಎನಿಸಿ ಅರಚಿಕೊಂಡ ಗೋಳಾಡಿದ.

ಅನೂಹ್ಯ ಘಟನೆ ಅವನ ಮನವನ್ನು ಛಿದ್ರಗೊಳಿಸಿ ಮತ್ತೆ ಚೇತರಿಸಿಕೊಳ್ಳದ ಹಾಗೆ ಮಾಡಿತ್ತು. ಮಗ-ಮೊಮ್ಮಕ್ಕಳನ್ನು ಸಮಾಧಾನಪಡಿಸಬೇಕಾದರೆ ಅವನ ತಂದೆತಾಯಿಗಳಿಗೆ ಸಾಕು ಬೇಕಾಯಿತು. ‘ಇದನ್ನೆಲ್ಲ ನೋಡಲು ದೇವರು ತಮಗ್ಯಾಕೆ ಇಷ್ಟು ಆಯಸ್ಸು  ಕೊಟ್ಟಿದ್ದಾನೆ?’ ಎಂಬ ಕೊರಗು ಬೇರು ಬಿಡತೊಡಗಿತ್ತು.

ಈ ದುರ್ಘಟನೆ ನಡೆದು ಸುಮಾರು ಎರಡು ವರುಷಗಳ ಮೇಲಾಗಿದ್ದರೂ ತಯುಬನ ಹೃದಯ ಫಾಮಿದಳನ್ನು ಇಂದೇ ಕಳೆದುಕೊಂಡಂತೆ ವಿಲವಿಲನೆ ಒದ್ದಾಡುತ್ತದೆ. ಕಣ್ಣಾಲಿ ನೀರಿನಲ್ಲಿ ಈಜುತ್ತದೆ. ಅಲ್ಲದೆ ಈ ಐದಾರು ತಿಂಗಳಿನಿಂದ ಶಫಿ, ಯೌವ್ವನದ ಹೆಣ್ಣಿನಂತೆ ಸಂಭ್ರಮಿಸಿ ಬರುವ ದಿನಗಳಿಂದಲೂ ಅವನ ನೋವು ಉಬ್ಬೆಯಾಗಿ ಹೊಮ್ಮುತ್ತಿದೆ. ಶಫಿಯ ಪ್ರತಿಹೆಜ್ಜೆ, ಕುಣಿತಗಳೂ ಅವಳನ್ನೇ ಎದುರಿಗೆ ತಂದು ನಿಲ್ಲಿಸಿದಂತೆ…. ಮಡಿಸಿಟ್ಟ  ವ್ಯಥೆಯ ಪದರಗಳು ರಿವ್ವನೆ ಬಿಚ್ಚಿಕೊಂಡು ಹೃದಯವನ್ನು ಬಾಳಕ ಮಾಡುತ್ತವೆ. ಶಫಿಯ ಒಡನಾಟದಲ್ಲಿ ಮೈ ಮರೆಯುತ್ತಿದ್ದವರಿಗೆಲ್ಲ ತಯುಬ್, ಅದರ ಬಗ್ಗೆ ನಿರ್ಲಿಪ್ತ ಎಂದೇ ಕಂಡರೂ ಅವನು ಮಾತ್ರ ಭಾವನೆ, ನೋವುಗಳ ಗಣಿಯಾಗಿದ್ದ. ಶಫಿಯತ್ತ ದಿಟ್ಟಿ, ಮನ ಹರಿಸಿದಾಗ ಭಾವೋನ್ಮಾದ  ಝೇಂಕರಿಸುತ್ತದೆ. ಶಫಿಯಿಂದ  ಕಣ್ತೆಗೆದು ಫಾಮಿದಳ ಫೋಟೋದಲ್ಲಿ  ದೃಷ್ಟಿ ನೆಡುತ್ತಾನೆ.

ಊರಿಂದ ಬಂದ ನಸೀಮಳಿಗಂತೂ ಶಫಿ ಅಚ್ಚುಮೆಚ್ಚು. ಎಜಾಸ್, ಮಮ್ತಾಜರ ಜಗಳದ ದನಿಗೆ ಇನ್ನೊಂದು ದನಿ ಸೇರ್ಪಡೆ. ಅದನ್ನು ಊರಿಗೆ ಕೊಂಡೊಯ್ಯುವ ನಸೀಮಳ ಬಯಕೆಯನ್ನು ಮಕ್ಕಳ ಹಟ ಕತ್ತರಿಸಿತು.

ನಸೀಂ ಶಫಿಯನ್ನು ಎತ್ತಿಕೊಂಡು ಊಟದ ಮನೆಗೆ ಓಡಿದಳು. ಭಾನುವಾರವಾದ್ದರಿಂದ ಎಲ್ಲರೂ ಒಟ್ಟಿಗೆ ಮೇಜಿನ ಸುತ್ತ ಊಟಕ್ಕೆ ಕುಳಿತಿದ್ದರು. ಶಫಿ, ದಾದನ ಮೊಣಕಾಲ ಮೇಲೆ ಹಾರಿತು. ದಾದೀಮಾ ಅದರ ತಲೆ ನೇವರಿಸಿ ಎತ್ತಿಕೊಳ್ಳಲು ಬಾಗಿದಾಗ ಅದು ತಯುಬನನ್ನು ತಾಗಿಕೊಂಡು ನಸೀಮಳ ತೊಡೆ ಸೇರಿತು. ಪಕ್ಕದಲ್ಲಿ ಆಲಿ ನಾಲಗೆಯಾಡಿಸುತ್ತ ಕುಳಿತಾಗ ತಯುಬ್ ಅದಕ್ಕೆ ಮಾಂಸದ ತುಂಡೊಂದನ್ನು ಹಾಕಿ  ಮೌನವಾಗಿ ಊಟಕ್ಕೆ ತೊಡಗಿದ.

ಶಫಿ ತನ್ನ ಮುಂಗಾಲುಗಳಿಂದ ಅಲಿಯ ತಲೆ ಕೆರೆಯುತ್ತಾ ಆಟವಾಡುತ್ತಿತ್ತು.

 ‘ ಬಾ ಶಫಿಮರಿ’ ಎಂದು ಪದ್ಧತಿಯಿಂತೆ ಮಮ್ತಾಜ್ ಕರೆದು ಮೊದಲ ತುತ್ತನ್ನು ಶಫಿಯ ಬಾಯಿಗಿಟ್ಟಳು. ಅನಂತರ ದಾದೀಮಾ ಸಿಹಿಯನ್ನು ಶಫಿಯ ಬಾಯ ಬಳಿ ಕೊಂಡ್ಯೊಯುತ್ತಿದ್ದ ಹಾಗೆ ‘ಏಯ್….ನೀನೂ ಸರಿ. ಅದೇನೋ ಮಗು ಅಂದ್ರೆ ನಿಂಗೂ ತಿಳಿಯಲ್ವಾ? ಬರ್ತಾ ಬರ್ತಾ ನೀನು ಎಳೇ ಕೂಸಾಗ್ತಿದ್ದೀ’- ದಾದಾ ಹುಸಿಗೋಪ ಬೆರೆಸಿದ ನಗುವಿನೊಡನೆ ದಾದೀಮಾನನ್ನು ರೇಗಿಸಿದಾಗ ಎಲ್ಲರೂ ಘೊಳ್ಳನೆ ನಕ್ಕರು. ದಾದೀಮಾನ ಮುಖ ಕೆಂಪು ಕೊಡವಾಯಿತು. ತಲೆ ಬಗ್ಗಿಸಿಕೊಂಡು ಉಣತೊಡಗಿ ಯಾರಿಗೂ ಕಾಣದಂತೆ ಮೇಜಿನ ಕೆಳಗಿಂದ ದಾದನ ತೊಡೆ ಚಿವುಟಿದ್ದೇ ತಡ ದಾದಾ- ‘ಹಾಯ್’ ಎಂದು ಅಬ್ಬರಿಸಿದರು. ದಾದಾ ಬಾಯಿಬಿಚ್ಚುವುದರಲ್ಲಿ ನಾಚಿಕೆಯಲ್ಲಿ ನೆಂದ ದಾದೀಮಾ ‘ಇವರ್ಜೊತೆ ಊಟ ಮಾಡಿದರೆ ಸುಮ್ನೆ ನಗಿಸ್ತಾರೆ…….ನಂಗಾಗಲ್ಲಪ್ಪ’ ಎಂದು ಮೆಲ್ಲನೆ ಜಾಗ ಖಾಲಿ ಮಾಡಿದರು.

ಮೊದಲ ಬಾರಿ ತವರಿಗೆ ಬಂದ ತಂಗಿಯೊಡನೆ ಮಾತನಾಡುವ ಆಸಕ್ತಿಯನ್ನೂ ತೋರದೆ ತಯುಬ್ ತನ್ನ ಪಾಡಿಗೆ ತಾನು ಕೋಣೆ ಸೇರಿದ.

ಮುಂದಿನ ದಿನಗಳಲ್ಲಿ ಅವನು ಮತ್ತಷ್ಟು ಹಣ್ಣಾದ. ಹೆಂಡತಿಯ ನೆನಪುಕ್ಕಿಸುವ ಮಕ್ಕಳು ಮತ್ತು  ಶಫಿಯಿಂದ ಆದಷ್ಟೂ ದೂರವಾಗಿರಲು ಪ್ರಯತ್ನಿಸಿದರೂ ವಿಫಲ. ಫಾಮಿದಳನ್ನು ಮರೆಯುವ ಬಗೆ ಹೇಗೆ ಎಂಬುದೊಂದೇ ಅವನಿಗೆ ಚಿಂತೆಯ ಅಗ್ನಿಕುಂಡ.

ಉಪವಾಸದ ರಂಜಾನ್ ದಿನಗಳು ಮುಗಿದು ಮನೆಯಲ್ಲಿ ‘ಈದ್’ ಹಬ್ಬದ ಸಡಗರದ ಸಿದ್ಧತೆ ನಡೆದಿತ್ತು. ನಸೀಂ ಮತ್ತು ಅವಳ ಗಂಡನಿಗೆ ಜೌತಣ.

ಬೆಳಗಾಗೆದ್ದು ತಯುಬ್, ಫಾಮಿದಳ ಗೋರಿಯ ಬಳಿ ಹೋಗಿ ತುಂಬ ಹೊತ್ತು ಕುಳಿತಿದ್ದ. ಕಣ್ತುಂಬ ದಿಟ್ಟಿಸಿ ನೋಡಿ ಕಾಲೆಳೆಯುತ್ತ ಮನೆ ತಲುಪಿದ್ದ.

ಎಂದಿನಂತೆ ಎಲ್ಲರೂ ಗುಂಡಗೆ ಊಟಕ್ಕೆ ಕುಳಿತರು. ನಸೀಂ ತಮ್ಮ ಊರಿನ ಸುದ್ದಿ ಹೇಳುತ್ತಿದ್ದಳು. ಮಾಮೂಲಿನಂತೆ ಅವನ ಪ್ರೀತಿಯ ಅಲಿ ಪಕ್ಕ ಕುಳಿತು ಅವನ ಎಡಗೈ ನೆಕ್ಕಿದಾಗ ತಯುಬ್ ಮಾಂಸದ ತುಂಡೊಂದನ್ನು ಅದರ ಮುಂದೆ ಹಾಕಿದ. ಮಾಂಸವನ್ನು ಮೂಸಿ ನೋಡಿದ ಅಲಿ ‘ಗುರ್-ಗುರ್’ ಎಂದು ಹಿಂದಕ್ಕೆ ಸರಿಯಿತು. ತಯುಬ್ ಅದರ ತಲೆ ನೇವರಿಸಿ ಮುಂದಕ್ಕೆಳೆದುಕೊಂಡ. ಅಲಿ ಮಾಂಸವನ್ನು ಮುಟ್ಟದೆ ಜೋರಾಗಿ ಬೊಗಳತೊಡಗಿತು.

 ಮಮ್ತಾಜ್ ಮೊದಲ ತುತ್ತು ಹಿಡಿದು ‘ಶಫೀ’ ಎಂದು ರಾಗವೆತ್ತಿ ಕರೆದಳು. ಎಂದಿನಂತೆ ಶಫಿ ಲಯವಿಟ್ಟ ಹೆಜ್ಜೆಯಲ್ಲಿ ಕುಣಿದು ಬರದಾಗ ಎಲ್ಲರಿಗೂ ಆಶ್ಚರ್ಯದ ಬಡಿತ! ದಾದಾ-ದಾದೀಮರ ಮಡಿಲು ಬರಿದೆನಿಸಿ ಶಫಿಯನ್ನು ಸ್ವರವೆತ್ತಿ ಕೂಗಿದರು. ಎಜಾಸ್ ಕುರ್ಚಿಯಿಂದ ಚಿಮ್ಮಿ ಮನೆಯೆಲ್ಲ ಸುತ್ತಿಬಂದ.

ತಲೆ ತಗ್ಗಿಸಿ ಕುಳಿತಿದ್ದ ತಯುಬನಿಗೂ ಶಫಿಯ ದನಿಗೇಳಲು ಕಾತರ. ಪ್ರತಿನಿಮಿಷ ಚಡಪಡಿಕೆಯ ಚುಚ್ಚು. ದಾದೀಮಾ, ನಸೀಂ ಇನ್ನೊಮ್ಮೆ ದನಿಯೇರಿಸಿ ಕರೆದಾಗ ಅಡಿಗೆಯ ಮನೆಯಲ್ಲಿದ್ದ ಸಲೀಂ ಹೊರಬಂದು  ತಯುಬನ ಕಡೆಗೊಮ್ಮೆ ನೋಡಿ, ತಟ್ಟೆಯತ್ತ ಬೊಟ್ಟು ಮಾಡಿ ತಲೆ ಕೆಳಗೆ ಹಾಕಿದ. ದನಿಕೊಡದೆ ತಟ್ಟೆಯಲ್ಲಿ ನಿರ್ಜೀವವಾಗಿ ಮಲಗಿದ್ದ ಶಫಿಯನ್ನು ಕಂಡು ಎಲ್ಲರೂ ಹೌಹಾರಿದ್ದರು!!!….ಗಾಬರಿಯ ಮುಖಗಳು… ಕಣ್ಣುಗಳೂ ಒದ್ದೆ, ಒದ್ದೆ… ಮಂಜು ಪೊರೆ.

ಫಾಮಿದಳಾಗಿ ಗಳಿಗೆ ಗಳಿಗೆಗೂ ಕೊಲ್ಲುತ್ತಿದ್ದ ಶಫಿಯನ್ನು ತೊಲಗಿಸಲು ತಾನು ಅಪ್ಪಣೆ ಮಾಡಿದಾಗ, ಸಲೀಂ ಅದನ್ನು ದ್ರಾಕ್ಷಿಯ ಗಿಡದ ಬಳಿ ಕೊಂಡೊಯ್ದಾಗ ಶಫಿ, ಗಿಡದ ಸುತ್ತ ಕುಣಿಕುಣಿದು ಅದರ ಬುಡದ ಗರಿಕೆಯ ಬಾಯಿ ಹಚ್ಚಿದ್ದು….. ಮುಂದೆ….ಮುಂದೆ…..

ತಯುಬನ ಗಂಟಲೊಣಗಿ, ಕಣ್ಣು ಕತ್ತಲೆಯ ಕಣಜವಾಗಿ ‘ಫಾಮೀ’ ಎಂದು ಬಾಡುತ್ತಿದ್ದ ದನಿಯಲ್ಲಿ ಉದ್ಗರಿಸಿ ಎದ್ದುಬಿಟ್ಟ.

ಉಳಿದವರ ಕಣ್ಣಲ್ಲಿ ನೀರು ತುಂಬಿ, ಹೊಟ್ಟೆಯಲ್ಲಿ ವಿಚಿತ್ರ ಸಂಕಟ ಕಡೆದಂತಾಗಿ ಎಲ್ಲರೂ ತಟ್ಟೆಯಲ್ಲೇ ಕೈತೊಳೆದು ಮೇಲೆದ್ದರು.

                                 ********************

Related posts

ಸಾ.ಕು.ಸಾಹಸ ಪುರಾಣ

YK Sandhya Sharma

ಪಂಜ

YK Sandhya Sharma

ಹೊದಿಕೆಗಳು

YK Sandhya Sharma

Leave a Comment

This site uses Akismet to reduce spam. Learn how your comment data is processed.