Image default
Dance Reviews

ರಸಾನುಭವದ ರಸಸಂಜೆ- ನೀಲಾ ಮಾಧವ ನೃತ್ಯರೂಪಕ

ಅದೊಂದು ಸುಂದರ ಸಂಜೆ-ರಸಸಂಜೆ. ಪರಿಣತ ಹಿರಿಯ ಗುರು ರಾಧಾ ಶ್ರೀಧರ್ ಪ್ರತಿವರ್ಷ ತಪ್ಪದೆ ಆಯೋಜಿಸುವ ಮನೋಹರ ನೃತ್ಯಗಳ ಗುಚ್ಛ. ಹೆಸರಿಗೆ ಅನ್ವರ್ಥವಾಗಿ ಕಲಾರಸಿಕರಿಗೆ ರಸಾನಂದವನ್ನುಂಟು ಮಾಡಿದ ಮೂರುದಿನಗಳ ಈ ಕಾರ್ಯಕ್ರಮದ ಹಿಂದೆ ಸುದೀರ್ಘ ಅನುಭವವಿದೆ, ಶ್ರಮವಿದೆ, ಅಷ್ಟೇ ಪ್ರೀತಿಯ ಆಯೋಜನೆ ಇದೆ.

 ಒಂದು ನಾಟ್ಯ ಸಂಸ್ಥೆ ಐವತ್ತು ವರ್ಷಗಳನ್ನು ಯಶಸ್ವಿಯಾಗಿ ಕ್ರಮಿಸುವುದು ಸಣ್ಣ ಸಾಧನೆಯೇನಲ್ಲ. ಈ ಕೀರ್ತಿ ಬೆಂಗಳೂರಿನ ಸುಪ್ರಸಿದ್ಧ ‘’ವೆಂಕಟೇಶ ನಾಟ್ಯ ಮಂದಿರ’’ಕ್ಕೆ ಸಲ್ಲಬೇಕು. ಅರ್ಧ ಶತಮಾನಗಳ ಹಿಂದೆ ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಗುರು, ಕರ್ನಾಟಕ ಕಲಾಶ್ರೀ, ರಾಜ್ಯೋತ್ಸವ ಪ್ರಶಸ್ತಿ, ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ರಾಧಾ ಶ್ರೀಧರ್ ತಮ್ಮ ಈ ನೃತ್ಯಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಪ್ರತಿಭಾನ್ವಿತ ನೃತ್ಯಕಲಾವಿದರನ್ನು ರೂಪಿಸಿರುವುದು ಅವರ ಅಗ್ಗಳಿಕೆ. ಇಂದು ವಿಶ್ವದಾದ್ಯಂತ ಇವರ ಬಾನಿಯಲ್ಲಿ ವಿಕಸಿತರಾದ ಶಿಷ್ಯರು ಪ್ರಖ್ಯಾತ ಕಲಾವಿದರಾಗಿ, ತಮ್ಮದೇ ಆದ ನೃತ್ಯಶಾಲೆಗಳ ಮೂಲಕ ನೂರಾರು ಕಲಾವಿದರನ್ನು ನೃತ್ಯಕ್ಷೇತ್ರಕ್ಕೆ ಸಮರ್ಪಿಸುತ್ತ, ಕಲಾಸೇವೆಯಲ್ಲಿ ತೊಡಗಿರುವ ಶ್ರೇಯಸ್ಸು ಗುರು ರಾಧಾ ಅವರಿಗೆ ಸಲ್ಲುತ್ತದೆ. ಕಳೆದ ಐವತ್ತುವರ್ಷಗಳಿಗೂ ಹಿಂದಿನಿಂದ ನಾಲ್ಕು ತಲೆಮಾರುಗಳಿಗೆ ವಿದ್ಯಾಧಾರೆಯೆರೆಯುತ್ತ, ಇಂದೂ ಚಟುವಟಿಕೆಯ ಚಿಲುಮೆಯಾಗಿ ಕ್ರಿಯಾಶೀಲರಾಗಿರುವುದು ಇವರ ವೈಶಿಷ್ಟ್ಯ.

ವಿಶ್ವಾದ್ಯಂತ ನೂರಾರು ನೃತ್ಯಪ್ರದರ್ಶನಗಳನ್ನು ಪ್ರಸ್ತುತಪಡಿಸಿ, ಕಲಾರಸಿಕರಲ್ಲದೆ, ಮಾಧ್ಯಮ ವರ್ಗದಿಂದಲೂ ಅಪಾರ ಪ್ರಶಂಸೆ ಪಡೆದಿರುವುದು ಇವರ ಹೆಮ್ಮೆ. ಕಳೆದ ಇಪ್ಪತ್ತೈದು ವರ್ಷಗಳಿಂದ ನಿರಂತರ ದೇಶ-ವಿದೇಶದ ಉದಯೋನ್ಮುಖ ಮತ್ತು ಪ್ರತಿಷ್ಟಿತ ನೃತ್ಯಕಲಾವಿದರಿಗೆ ವೇದಿಕೆಯಿತ್ತು, ಅವರ ಪ್ರತಿಭಾ ಪ್ರಕಾಶಕ್ಕೆ ಉತ್ತೇಜನ ನೀಡುತ್ತ ಬಂದಿರುವ ಸಂಸ್ಥೆಯ        ‘’ರಸಸಂಜೆ’’ ಒಂದು ಪ್ರತಿಷ್ಟಿತ ನೃತ್ಯೋತ್ಸವವಾಗಿ ಗುರುತಿಸಲ್ಪಟ್ಟಿದೆ.

        ಮೂರುದಿನಗಳ ಕಾಲ ನಡೆಯುವ ‘’ರಸಸಂಜೆ’’ ವೈವಿಧ್ಯಪೂರ್ಣ ಕಾರ್ಯಕ್ರಮಗಳಲ್ಲಿ ಒಂದಾದ ವಿ. ಇಂದ್ರಾಣಿ ಪಾರ್ಥಸಾರಥಿ ಪರಿಕಲ್ಪನೆಯ ‘’ ನೀಲ ಮಾಧವ’’ ನೃತ್ಯರೂಪಕವನ್ನು ಗುರು ರಾಧಾ ಶ್ರೀಧರ್ ನಿರ್ದೇಶನ ಮಾಡಿದ್ದು, ಇತ್ತೀಚಿಗೆ ಎ.ಡಿ.ಎ ರಂಗಮಂದಿರದಲ್ಲಿ ಅವರ ಶಿಷ್ಯೆಯರು ಸುಮನೋಹರವಾಗಿ ಪ್ರದರ್ಶಿಸಿದರು. ‘ಕೃಷ್ಣಪ್ರೀತಿ’ಯೇ ಕೇಂದ್ರಿತವಾಗಿದ್ದ ರೂಪಕದಲ್ಲಿ ಕೃಷ್ಣನ ಜನನ, ಗೋಕುಲದಲ್ಲಿ ಬಾಲ್ಯ, ತುಂಟಾಟ, ಗೋಪಿಕೆಯರೊಡನಾಟ-ರಾಸಲೀಲೆ, ಅವನ ಸಾಹಸ, ಮಹಿಮೆಗಳನ್ನೊರೆವ ವರ್ಣರಂಜಿತ ಕಥಾನಕಗಳೊಡನೆ ಅಂತ್ಯದಲ್ಲಿ ಕೃಷ್ಣನ ಔನ್ನತ್ಯ ಸಾರುವ ಭಗವದ್ಗೀತೆ ಮತ್ತು ವಿಶ್ವರೂಪ ದರ್ಶನದ ಅದ್ಭುತ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲಾಯಿತು.  

ಹಾಗೇ ನೋಡಿದರೆ ಈ ನೃತ್ಯರೂಪಕದ ಘಟನಾವಳಿಗಳಲ್ಲಿ ಸಾವಯವ ಸಂಬಂಧವಿಲ್ಲದೆ ಇದ್ದುದರಿಂದ ಘಟನಾವಳಿಗಳು  ಬಿಡಿಬಿಡಿಯಾಗಿ ಪೋಣಿಸಿದ ಕೃತಿಗಳ ಸರಮಾಲೆಯಂತಿತ್ತು. ಒಂದೇಸೂತ್ರದಲ್ಲಿ ಅವುಗಳನ್ನು ನೇಯ್ಡಿದ್ದರೆ ಇನ್ನಷ್ಟು ಬಿಗಿಬಂಧ ಪಡೆದು ಶೋಭಿಸುತ್ತಿತ್ತು. ನೃತ್ಯರೂಪಕವೆಂದರೆ ಹಾಗೆಯೇ, ದೃಶ್ಯಗಳು ಒಂದರೊಳಗೊಂದು ಹಾಸುಹೊಕ್ಕಾಗಿ ಸಹಜ ನೇಯ್ಗೆಯಲ್ಲಿ ಪರಿಣಾಮವನ್ನುಂಟು ಮಾಡಬೇಕು. ಆದರೆ ಇಲ್ಲಿ ಒಂದೊಂದು ಕೃತಿಗಳೂ ಭಿನ್ನ ನೆಲೆಯಲ್ಲಿ ಪ್ರಸ್ತುತವಾದವು. ಸಮರಸದ ಹರಿವು ಕಾಣಲಿಲ್ಲ.

`

ಐದುಜನ ಕಲಾವಿದೆಯರು ಪಂಚ ದೇವರ ಭಂಗಿಗಳಲ್ಲಿ ನೃತ್ಯ ಪ್ರಾರಂಭಿಸಿ, ನೃತ್ತಗಳ ಅಲಂಕಾರದಲ್ಲಿ ‘ಪುಷ್ಪಾಂಜಲಿ’ ಸಲ್ಲಿಸಿದ್ದು ಸೂಕ್ತವಾಗಿತ್ತು. ಅಣ್ಣಮಾಚಾರ್ಯರ ಕೃತಿಯನ್ನು ಸಮಂಜಸವಾಗಿ ಬಳಸಿಕೊಳ್ಳಲಾಗಿತ್ತು. ಸಿಂಹಾವಲೋಕನ ಕ್ರಮದಲ್ಲಿ ಇಡೀ ಕೃಷ್ಣನ ಸಮಗ್ರ ವ್ಯಕ್ತಿತ್ವವನ್ನು ಪುಟ್ಟ ಪುಟ್ಟ ಸಂಚಾರಿಗಳಲ್ಲಿ ಕಲಾವಿದೆಯರು ಕಟ್ಟಿಕೊಟ್ಟರು. ಸೆರೆಮನೆಯಲ್ಲಿ ಕೃಷ್ಣನ ಜನನ, ಗೋಕುಲದಲ್ಲಿ ಅವನ ತುಂಟ ಬಾಲ್ಯ, ಯಶೋದೆಯ ವಾತ್ಸಲ್ಯ, ಕುಚೇಲನ ಸ್ನೇಹ ಇತ್ಯಾದಿಗಳು ಸುಂದರವಾಗಿ ನಿರೂಪಿತವಾದವು. ಇವುಗಳನ್ನು ಸೂಕ್ಷ್ಮ ಅಭಿನಯಕ್ಕೆ ಹೆಸರಾದ ಕಲಾವಿದೆ ಐಶ್ವರ್ಯ ನಿತ್ಯಾನಂದ ತನ್ನ ನುರಿತಾಭಿನಯದಿಂದ, ಅರ್ಥಪೂರ್ಣ ಆಂಗಿಕಾಭಿನಯದಿಂದ ರಸಾನಂದವನ್ನು ವರ್ಷಿಸಿದಳು. ‘ಆಡಿಸಿದೆಳೆಶೋದೆ ಜಗದೋದ್ಧಾರನ’ -ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ ಕಲಾವಿದೆ, ತನ್ನ ಸೂಕ್ಷ್ಮ ಸಂವೇದನೆಯಿಂದ  ಪ್ರತಿ ಭಾವವನ್ನೂ ರಸಸ್ಪರ್ಶವಾಗಿಸಿದಳು. ನೃತ್ಯರೂಪಕದ ಪ್ರಮುಖ ನರ್ತಕಿಯಾದ ಈಕೆ ತನ್ನ ಸೊಗಸಾದ ನುರಿತ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆದಳು.  ಉಳಿದ ಕಲಾವಿದೆಯರೂ ಯಶೋದೆಯ ವಾತ್ಸಲ್ಯಭಾವ ಪ್ರದರ್ಶನಕ್ಕೆ ಪೂರಕವಾಗಿ ನರ್ತಿಸಿದರು.

ಗೋಪಿಕೆಯರು ಕೃಷ್ಣನೊಡನೆ ಮನದಣಿಯೆ ರಾಸಲೀಲೆಯಾಡಿದರೂ ಮಗನ ಬಗ್ಗೆ ತಾಯಿಯ ಬಳಿ ದೂರು ಕೊಡುವುದನ್ನು ಮರೆಯುವುದಿಲ್ಲ. ತಾಯಿ ಮಗನನ್ನು ಒಪ್ಪಿಟ್ಟುಕೊಂಡು ಬರುವುದು, ಮಗನ ಮುಗ್ಧನಟನೆ ಮತ್ತು ಯುವಕೃಷ್ಣನ ಯೌವ್ವನದ ಕೀಟಲೆಗಳನ್ನು ನರ್ತಕಿಯರು ಸುಂದರವಾಗಿ ನೃತ್ತಾವಳಿಯೊಂದಿಗೆ ಪ್ರದರ್ಶಿಸಿದರು.  ಕಾಳಿಂಗನನ್ನು ಮಣಿಸಿ ಐದುಹೆಡೆಗಳ ಮೇಲೆ ಕೃಷ್ಣನ ವಿಜಯ ನರ್ತನ ಸೊಗಸಾಗಿ ಮೂಡಿಬಂತು. ಜಯದೇವನ ‘ಹರಿರಿಹ ಮೂರ್ಧನೆ…’ ಶೃಂಗಾರ ರಸಭಾವದಲ್ಲಿ ನೋಡಿಸಿಕೊಂಡಿತು. ಅಂತ್ಯದಲ್ಲಿ ಐಶ್ವರ್ಯ ಅರ್ಜುನನಾಗಿ, ಮಾನಸಗೌರಿ ಕೃಷ್ಣನಾಗಿ ಅಭಿನಯಿಸಿದ ‘ಭಗವದ್ಗೀತೆಯ’ ದೃಶ್ಯಾವಳಿಗಳು ಪ್ರೌಢ ಅಭಿನಯಗಳಿಂದ ಮನಮುಟ್ಟಿದವು. ನೃತ್ಯರೂಪಕದಲ್ಲಿ ಇವರೊಂದಿಗೆ ರಶ್ಮಿ ರಾವ್, ಚಂದನ ಶಾಸ್ತ್ರಿ, ರಶ್ಮಿ ರಘು ಮತ್ತು ಶಿವಾತ್ಮಿಕಾ ಭಾಗವಹಿಸಿದ್ದರು.

                                                 *******************        

Related posts

‘ರಸಾನಂದ’ದ ಚೇತೋಹಾರಿ ನೃತ್ಯಗಳ ಸರಮಾಲೆ

YK Sandhya Sharma

ಪವಿತ್ರಾ – ಲಕ್ಷ್ಮೀ ಸುಂದರ ಜೋಡಿಯ ಸುಮನೋಹರ ನೃತ್ಯ

YK Sandhya Sharma

Guru Naman to Kathak expert Chitra Venugopal

YK Sandhya Sharma

Leave a Comment

This site uses Akismet to reduce spam. Learn how your comment data is processed.