
ನೃತ್ಯ ಆಕೆಯ ಬಾಲ್ಯದ ಕನಸು. ಮೂರುವರ್ಷದ ಹುಡುಗಿ ಲಯಬದ್ಧವಾಗಿ ಹೆಜ್ಜೆ ಹಾಕತೊಡಗಿದಾಗ ಮಗಳಲ್ಲಿದ್ದ ಸುಪ್ತ ಪ್ರತಿಭೆ ಗುರುತಿಸಿದವರು ಅವಳ ತಾಯಿ ಹೇಮಲತಾ ಮುರಳೀಧರನ್. ನಾಲ್ಕುವರ್ಷದ ಬಾಲೆಯನ್ನು ಗುರು ರೇವತಿ ಮುತ್ತುಸ್ವಾಮಿ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಅನಂತರ ಶ್ರೀರಂಗಂನಲ್ಲಿ ಇಂದಿರಾ ಕಣ್ಣನ್ ಮತ್ತು ಕೊಯಮತ್ತೂರಿನ ವಿಜಯಕುಮಾರ್ ಅವರಲ್ಲಿ ಶಿಷ್ಯವೃತ್ತಿ. ಅತೀವ ಉತ್ಸಾಹ-ಆಸಕ್ತಿಯಿಂದ ನಾಟ್ಯ ಕಲಿಯತೊಡಗಿದ ಕೌಸಲ್ಯ ಚಿಗುರಿನಲ್ಲೇ ತನ್ನ ವಿಶಿಷ್ಟ ಪ್ರತಿಭೆ ಅಭಿವ್ಯಕ್ತಿಸಿದಾಗ ಸಹಜವಾಗಿ ಆಕೆಗೆ ವಿಪುಲ ಅವಕಾಶಗಳು ಒದಗಿಬಂದವು. ತಿರುಚಿಯ ಶ್ರೀರಂಗದಲ್ಲಿ ಹುಟ್ಟಿ ಬೆಳೆದ ಇವಳಿಗೆ ಸುತ್ತ ಮುತ್ತಲ ಎಲ್ಲ ದೇವಾಲಯಗಳಲ್ಲಿ ನರ್ತಿಸುವ ಸುಯೋಗ ದೊರೆತು ‘ನಾಟ್ಯ ಪೆರೋಲಿ’ ಎಂಬ ಅಭಿದಾನ ಪಡೆದು, ಅತ್ಯಲ್ಪ ಕಾಲದಲ್ಲೇ ಬಾಲೆಯ ನರ್ತನಾ ಸಾಮರ್ಥ್ಯ ಖ್ಯಾತಿ ಪಡೆಯಿತು.
ಇಂದು ಸಾಫ್ಟವೇರ್ ಎಂಜಿನಿಯರ್ ( ಎಂ.ಟೆಕ್ -ಸ್ನಾತಕೋತ್ತರ ಪದವೀಧರೆ) ಆಗಿ ಕೈತುಂಬಾ ಸಂಬಳ ಗಳಿಸುತ್ತಿದ್ದ ಹುದ್ದೆಯನ್ನು ನೃತ್ಯಸಾಧನೆಗಾಗಿ ತೊರೆದು, ‘ಕೌಸಲ್ಯ ನಿವಾಸ್’ ಎಂಬ ಖ್ಯಾತ ಕಲಾವಿದೆಯಾಗಿ ಭರತನಾಟ್ಯ ಕ್ಷೇತ್ರದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವುದು ಆಕೆಯ ಅಗ್ಗಳಿಕೆ. ದೇಶ-ವಿದೇಶಗಳಲ್ಲಿ ಏಳುನೂರಕ್ಕೂ ಅಧಿಕ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಜನಮೆಚ್ಚುಗೆ ಜೊತೆಗೆ ವಿಮರ್ಶಕರ ಗಮನ ಸೆಳೆದಿರುವ ಪ್ರತಿಭಾವಂತ ನೃತ್ಯ ಕಲಾವಿದೆ ಎಂದರೆ ಅತಿಶಯೋಕ್ತಿಯಲ್ಲ.
ಕಳೆದ ಒಂಭತ್ತು ವರ್ಷಗಳಿಂದ ಬೆಂಗಳೂರಿನ ಮಹದೇವಪುರದಲ್ಲಿ ತಮ್ಮದೇ ಆದ ಶಾಸ್ತ್ರೀಯ ಡಾನ್ಸ್ ಕಂಪೆನಿ ‘’ಎಂ.ಎಸ್ ನಾಟ್ಯ ಕ್ಷೇತ್ರ’’ ಸಂಸ್ಥೆಯ ಮೂಲಕ ಗುರುವಾಗಿ, ಆರ್ಟಿಸ್ಟಿಕ್ ಡೈರಕ್ಟರ್ ಆಗಿ ನೂರಾರು ನಾಟ್ಯಾಕಾಂಕ್ಷಿಗಳಿಗೆ ವಿಶ್ವಗುಣಮಟ್ಟದ ನೃತ್ಯಶಿಕ್ಷಣ ನೀಡುತ್ತಿದ್ದಾರೆ. ಉತ್ತಮ ನೃತ್ಯ ಸಂಯೋಜಕಿ, ನಟುವನ್ನಾರ್ ಆಗಿರುವ ಕೌಸಲ್ಯ, ಅಣ್ಣಾಮಲೈ ವಿಶ್ವವಿದ್ಯಾಲಯದ ಗ್ರೇಡ್ ಪರೀಕ್ಷೆಗಳು, ಡಿಪ್ಲೊಮಾ ಮತ್ತು ಎಂ.ಎಫ್.ಎ. ಕಾರ್ಯಕ್ರಮಗಳಿಗೆ ಶಿಷ್ಯರಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ. ಶಾಸ್ತ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವ ಇವರು, ಬಾಲಿವುಡ್ ಶೈಲಿ, ಜಾನಪದ ಮತ್ತು ಪಾಶ್ಚಾತ್ಯ ನೃತ್ಯ ಶೈಲಿಯಗಳನ್ನೂ ಬಲ್ಲರು.
ಇವರ ಪ್ರಸಿದ್ಧ ನೃತ್ಯರೂಪಕಗಳೆಂದರೆ- ಕೃಷ್ಣಾರ್ಪಣ, ಮುಕುಂದ ಲೀಲಾ, ಶಿವೋಹಂ-ಜಗತ್ಕಾರಣ, ನವದುರ್ಗ, ಭರತ್ ಸತ್ವನ್ ಮತ್ತು ಶಕ್ತಿ ಸದನ. ಇವರ ನಿರ್ಮಾಣದ ಶ್ರೀರಂಗನಾಥಂ, ತಿರುಪ್ಪಾವೈ, ನವದುರ್ಗ, ಭೋ ಶಂಭೋ, ಕನ್ನಡ ರಾಜ್ಯೋತ್ಸವ ಮತ್ತು ಹನುಮಾನ್ ಚಾಲೀಸ ಮುಂತಾದ ಅನೇಕ ನೃತ್ಯರೂಪಕಗಳು ಯೂಟ್ಯೂಬ್ ನಲ್ಲಿ ಜನಪ್ರಿಯವಾಗಿವೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ವೇದಿಕೆಯಲ್ಲಿ ಎರಡು ಬಾರಿ ನೃತ್ಯಪ್ರದರ್ಶನ ನೀಡಿರುವ ಗರಿಮೆ ಇವರದು. ತಿರುವಾರೂರು ನಾಟ್ಯಾಂಜಲಿ, ಮಯೂರ ನಾಟ್ಯಾಂಜಲಿಯಲ್ಲಿ ನೃತ್ಯ ಪ್ರದರ್ಶನ, ಚಿದಂಬರಂ ನಾಟ್ಯಾಂಜಲಿ, ಬೆಂಗಳೂರಿನ ಕಲಾ ಉತ್ಸವ, ಐ.ಸಿ.ಸಿ.ಆರ್, ಗಣರಾಜ್ಯೋತ್ಸವ ಸಮಾರಂಭ, ಕೇರಳ ಸಾಂಸ್ಕೃತಿಕ ಉತ್ಸವ ಸಮರ್ಪಣ, ಕೊಲ್ಲೂರು ಮೂಕಾಂಬಿಕೆ ಮತ್ತು ತಮಿಳುನಾಡು-ಆಂಧ್ರ ಪ್ರದೇಶದ ಅನೇಕ ದೇವಾಲಯಗಳಲ್ಲಿ ಏಕವ್ಯಕ್ತಿಯಾಗಿ ನರ್ತಿಸಿದ ಧನ್ಯತಾಭಾವ ಮತ್ತು ದುಬೈ ಮತ್ತು ಯು.ಎ.ಇ. ನಲ್ಲಿ ಅಂತರರಾಷ್ಟ್ರೀಯ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡ ಹೆಮ್ಮೆ.
ಇತ್ತೀಚಿಗೆ ವಿಶೇಷಾಸಕ್ತಿಯಿಂದ ಖ್ಯಾತ ಕಥಕ್ ಗುರು ನಿರುಪಮಾ ರಾಜೇಂದ್ರ ಅವರಿಂದ ನಾಟ್ಯಶಾಸ್ತ್ರ ಶಿಕ್ಷಣ ಮತ್ತು ನಟುವಾಂಗದಲ್ಲಿ ಉನ್ನತ ಶಿಕ್ಷಣವನ್ನು ಗುರು ಗಣೇಶ ರಾಮಮೂರ್ತಿ ಅವರಿಂದ ಪಡೆದಿದ್ದಾರೆ.
ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಬಿ.ಟೆಕ್, ಕಂಪ್ಯೂಟರ್ ನೆಟ್ ವರ್ಕ್ಸ್ ನಲ್ಲಿ ಎಂ.ಟೆಕ್ ಓದಿರುವ ಇವರು ಚಿದಂಬರದ ಅಣ್ಣಾಮಲೈ ಯುನಿವರ್ಸಿಟಿಯಲ್ಲಿ ಭರತನಾಟ್ಯದಲ್ಲಿ ಎಂ.ಎಫ್.ಎ. ಮಾಡಿರುವ ಸುವಿದ್ಯಾವಂತೆ. ಕೌಸಲ್ಯರ ಪ್ರತಿಭೆಗೆ ಪ್ರಶಸ್ತಿ-ಗೌರವಗಳ ಮಹಾಪೂರ ಹರಿದಿರುವುದು ಅತ್ಯಂತ ಸಹಜ. ಅವುಗಳಲ್ಲಿ ಹೆಸರಿಸುವಂಥವು-ನಾದಂ ಕಲಾಭೂಷಣಂ, ಸೌತ್ ಇಂಡಿಯನ್ ವುಮನ್ ಅಚಿವರ್ ಪ್ರಶಸ್ತಿ , ಮಹದೇವಪುರ ರತ್ನ, ರಜನೀಕಾಂತ್ ರಾಜ್ಯಮಟ್ಟದ ಭರತನಾಟ್ಯ ಪ್ರಶಸ್ತಿ, ನಾಟ್ಯ ಪೆರೋಲಿ, ಟ್ರೈನಿಂಗ್ ಎಕ್ಸಲೆನ್ಸಿ ಅವಾರ್ಡ್- ವಾಗ್ದೇವಿ ವಿಲಾಸ ಸಂಗೀತ ಕಲಾಮಂದಿರ ಪ್ರಶಸ್ತಿಗಳಲ್ಲದೆ, ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಾಡಿದ ಕಾರ್ಯಗಳಿಗೆ ಅನೇಕ ಮನ್ನಣೆ ದೊರೆತಿವೆ. ಕೊಯಮತ್ತೂರು ಮತ್ತು ದೆಹಲಿ ಶಿಕ್ಷಣ ಸಂಸ್ಥೆಗಳಿಂದ ಅತ್ಯುತ್ತಮ ವಿದ್ಯಾರ್ಥಿ ಮತ್ತು ಸಂಘಟಕಿಯಾಗಿ ಪ್ರಶಸ್ತಿಗಳು ಸಂದಿವೆ. ಇವರ ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರುತಿಸಿರುವ ಬಿ.ಜೆ.ಪಿ ಪಕ್ಷ ಇವರನ್ನು ಮಹದೇವಪುರ ಕ್ಷೇತ್ರದ ಸಾಂಸ್ಕೃತಿಕ ಕಾರ್ಯದರ್ಶಿಯನ್ನಾಗಿ ನೇಮಿಸಿದೆ.
ಉನ್ನತ ಸಂಸ್ಥೆಯೊಂದರಲ್ಲಿ ಪ್ರಾಜೆಕ್ಟ್ ಮೆನೇಜರ್ ಆಗಿರುವ ಇವರ ಇಂಜಿನಿಯರ್ ಪತಿ ನಿವಾಸ್ ವೆಂಕಟರಮಣನ್ ಅವರ ಹವ್ಯಾಸ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿ . ತಮ್ಮ ನೃತ್ಯ ಚಟುವಟಿಕೆಗಳಿಗೆ ಅವರ ಸಂಪೂರ್ಣ ಬೆಂಬಲ ಪಡೆದ ತಾನು ನಿಜಕ್ಕೂ ಅದೃಷ್ಟವಂತೆ ಎನ್ನುವ ಕೌಸಲ್ಯ ಅವರದು ಮಗ ಮುಕುಂದ್ ಶ್ರೀವತ್ಸಾ (ತಬಲಾ) ಮತ್ತು ಮಗಳು ಶ್ರೀಲೇಖಾ ಇಬ್ಬರು (ಭರತನಾಟ್ಯ) ಪ್ರತಿಭಾನ್ವಿತ ಮಕ್ಕಳಿಂದ ಕೂಡಿದ ಸುಖದ ನೆಮ್ಮದಿಯ ಸಂಸಾರ.
***************************