ಸೃಜನಶೀಲ ಕಥಕ್ ನೃತ್ಯಕಲಾವಿದೆಯಾಗಿ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಿಮ್ರನ್ ಗೋಧ್ವಾನಿ ಅವರ ಕನಸಿನ ಕೂಸು ‘ಕೃಶಾಲಾ ಡ್ಯಾನ್ಸ್ ಥಿಯೇಟರ್’. ಉತ್ತಮ ಗುಣಮಟ್ಟದ ಶಿಕ್ಷಣ, ಬದ್ಧತೆಯ ತರಬೇತಿಗೆ ಹೆಸರಾಗಿರುವ ಈ ನೃತ್ಯಶಾಲೆ ಇಂದು ನೂರಾರು ನೃತ್ಯಾಕಾಂಕ್ಷಿಗಳನ್ನು ಉತ್ತಮ ಕಲಾವಿದೆಯರನ್ನಾಗಿ ರೂಪಿಸಿದೆ.
ನಾಲ್ಕುವರ್ಷದ ಮಗುವಿನಿಂದ ಹಿಡಿದು ಹಿರಿಯ ವಯಸ್ಸಿನ ಮಹಿಳೆಯರವರೆಗೂ ಈ ಶಾಲೆಯಲ್ಲಿ ಕಥಕ್ ನೃತ್ಯ ಕಲಿಯುತ್ತಿರುವುದು ವಿಶೇಷ. ಶ್ರೀಮಂತ ಲಕ್ನೋ ಘರಾನ ಶೈಲಿಯ ಕಥಕ್ ನೃತ್ಯ ಕಲಿಸುವ ಗುರು ಸಿಮ್ರನ್ ತಮ್ಮ ಕಲಾತಂಡದೊಡನೆ ಯು.ಎಸ್.ಎ.,ಯು.ಕೆ., ಗ್ರೀಸ್ ಮತ್ತು ದುಬೈ ಮುಂತಾದೆಡೆ ವಿಶ್ವದ ಎಲ್ಲೆಡೆ ಸಂಚರಿಸಿ ನೃತ್ಯ ಕಾರ್ಯಕ್ರಮಗಳನ್ನು ನೀಡಿರುವ ವೈಶಿಷ್ಟ್ಯ ಇವರದು. ಭಾರತ ಮೂಲದ ಸಿಮ್ರನ್ ಜನಿಸಿ, ಬೆಳೆದದ್ದು ದುಬೈನಲ್ಲಿ. ಐದುವರ್ಷದ ಪುಟ್ಟಹುಡುಗಿಗೆ ಭಾರತೀಯ ಶಾಸ್ತ್ರೀಯ ನೃತ್ಯದತ್ತ ಅರಿಯದ ಸೆಳೆತ. ರಾಜಿ ನಾಯರ್ ಮೊದಲ ನೃತ್ಯಗುರು. ಅನಂತರ- ನಾಟ್ಯ ದಿಗ್ಗಜ ಪದ್ಮವಿಭೂಷಣ ಬಿರ್ಜು ಮಹಾರಾಜರ ಪ್ರಮುಖ ಶಿಷ್ಯ ಮುರಾರಿ ಶರಣ್ ಗುಪ್ತ ಅವರಲ್ಲಿ ಕಥಕ್ ನೃತ್ಯ ಮುಂದುವರಿಸಿದರು. ಇವರಲ್ಲಿ ಒಟ್ಟು ಹದಿನೆಂಟು ವರ್ಷಗಳ ನೃತ್ಯಾಭ್ಯಾಸ. ಪ್ರಯಾಗ್ ಸಂಗೀತ ಸಮಿತಿಯಿಂದ ಕಥಕ್ ನೃತ್ಯದಲ್ಲಿ `ಸಂಗೀತ್ ಪ್ರಭಾಕರ್‘ ಪದವಿ ಲಭ್ಯ.
ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ವಿಜ್ಞಾನ ಪದವಿ ಪಡೆದನಂತರ ಸಿಮ್ರನ್ ಕಾರ್ಪೋರೇಟ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದರು. ಚಿಕ್ಕಂದಿನಿಂದ ಒಡನಾಡಿಯಾಗಿದ್ದ ನೃತ್ಯ ಕೈಬೀಸಿ ಕರೆಯಿತು. ಅಕಸ್ಮಾತ್ ಭೇಟಿಯಾದ ಕಥಕ್ ನೃತ್ಯದ ಮೇರು ಕಲಾವಿದ ಬಿರ್ಜು ಮಹಾರಾಜ್ ಅವರ ಪ್ರೇರಣೆಯಿಂದ ಸಿಮ್ರನ್ ತಮ್ಮ ಲಾಭದಾಯಕ ಹುದ್ದೆ ತ್ಯಜಿಸಿ, 2006 ರಲ್ಲಿ `ಕೃಶಾಲಾ’ ಎಂಬ ನೃತ್ಯ ಸಂಸ್ಥೆಯನ್ನು ಪ್ರಾರಂಭಿಸಿ, ಕೃಶಾಲಾ ಡಾನ್ಸ್ ಥಿಯೇಟರಿನ ಸಂಸ್ಥಾಪಕರಾಗಿ ಅನೇಕ ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡರು.
‘’ಕೃಶಾಲ’’ದ ಇಡೀ ನೃತ್ಯಾಂಗಣ ನೂಪುರದ ದನಿಯಿಂದ ಝೇಂಕರಿಸುತ್ತ ಪುಟ್ಟ ವಿದ್ಯಾರ್ಥಿಗಳು ಉತ್ಸುಕತೆಯಿಂದ ತಮ್ಮ ಲಂಗದ ಚುಂಗುಗಳನ್ನು ನವಿರಾಗಿ ಕೈ ಬೆರಳುಗಳಲ್ಲಿ ಹಿಡಿದು ಒನಪಿನಿಂದ ತಲೆಯನ್ನು ಓರೆಯಾಗಿ ತಿರುಗಿಸಿ ಆಕರ್ಷವಾಗಿ ನರ್ತಿಸುವ ನೋಟವೇ ಒಂದು ಸೊಗಸು. ಪುಟಿವ ಕಾರಂಜಿಯಂತೆ ಲವಲವಿಕೆಯಿಂದ ಕುಣಿವ ಚಿಣ್ಣರನ್ನು ಗುರು ಸಿಮ್ರನ್ ಬಹು ಶ್ರದ್ಧೆಯಿಂದ ನುರಿತ ಕಲಾಶಿಲ್ಪವನ್ನಾಗಿ ರೂಪಿಸುತ್ತಿದ್ದಾರೆ. ಅವರೊಡನಾಟ-ನೃತ್ಯ ಸಾಂಗತ್ಯ ಆಕೆಯನ್ನು ತನ್ಮಯಗೊಳಿಸುವ ಕೈಂಕರ್ಯ.
ಒಂಭತ್ತು ವರ್ಷದ ಅವರ ಮಗಳು ಆರೋಹಿ ಕೂಡ ತಾಯಿಯಂತೆಯೇ ಬಾಲಪ್ರತಿಭೆ. ರಕ್ತಗತವಾಗಿ ಹರಿದು ಬಂದ ಕಲಾರಾಧನೆ-ನೈಪುಣ್ಯ. ಜೊತೆಗೆ ನುರಿತ ಗುರುವೂ ಆದ ತಾಯಿಯ ಗರಡಿಯಲ್ಲಿ ದೊರೆಯುತ್ತಿರುವ ಶಿಸ್ತಿನ ನೃತ್ಯಶಿಕ್ಷಣ. ಬೆಂಗಳೂರಿನ ‘ಅಮಾತ್ರ ಅಕಾಡೆಮಿ’ಯಲ್ಲಿ ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವ ಆರೋಹಿ ಓದಿನಲ್ಲೂ ಮುಂದಿದ್ದು, ಪಿಯಾನೋ ವಾದನವನ್ನು ಕಲಿಯುತ್ತಿದ್ದಾಳೆ. ತನ್ನ ಐದನೆಯ ವರ್ಷಕ್ಕೇ ಕಥಕ್ ನೃತ್ಯಾಭ್ಯಾಸವನ್ನು ಬಹು ಪ್ರೀತಿಯಿಂದ-ಪರಿಶ್ರಮದಿಂದ ನಡೆಸಿಕೊಂಡು ಬರುತ್ತಿದ್ದಾಳೆ. ಪ್ರತಿದಿನವೂ ಆನಂದದಿಂದ ನೃತ್ಯ ಕಲಿಯುವ ಆರೋಹಿಗೆ ಹೊಸ ತುಕಡಾ, ಪಾದಭೇದಗಳ ವೈವಿಧ್ಯ, ಚಕ್ಕರ್ ಗಳನ್ನು ಕಲಿಯುವುದರಲ್ಲಿ ಅಮಿತಾನಂದ. ಉತ್ತಮ ಅಭಿನಯ-ಅಭಿವ್ಯಕ್ತಿಯತ್ತಲೂ ಸಮಾನ ಗಮನ ಹರಿಸುವ ಬಾಲೆಗೆ ತಾನೊಬ್ಬ ಅತ್ಯುತ್ತಮ ಕಲಾವಿದೆಯಾಗುವ ಕನಸು.
‘ಕ್ರುಶಾಲ’ದ ಎಲ್ಲ ನೃತ್ಯ ಕಾರ್ಯಕ್ರಮ, ವಾರ್ಷಿಕೋತ್ಸವಗಳಲ್ಲಿ ತಪ್ಪದೆ ಭಾಗವಹಿಸುವ ಆರೋಹಿ ತಾಯಿಯೊ ಡನೆಯೂ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾಳೆ. ಏಕವ್ಯಕ್ತಿಯಾಗಿ, ಪ್ರಸನ್ನ ಗಣಪತಿ ದೇವಾಲಯ, ಅರುಣಾಚಲೇಶ್ವರ ದೇವಾಲಯದ ದೀಪಂ ಫೆಸ್ಟಿವಲ್, ಕ್ರಶಾಲ ಡಾನ್ಸ್ ಥಿಯೇಟರಿನ ಕಥಕ್ ಎಲಿಮೆಂಟ್ಸ್, ಏಕವ್ಯಕ್ತಿ ನೃತ್ಯ ಪ್ರದರ್ಶನ, ಶಾಸ್ತ್ರೀಯ ನೃತ್ಯ ಸ್ಪರ್ಧೆಗಳು, ಕರ್ನಾಟಕ ನೃತ್ಯೋತ್ಸವಗಳು, ‘ಸಮಂ’- ವಾರ್ಷಿಕೋತ್ಸವ ಮತ್ತು ವಿಶೇಷವಾಗಿ ಧಾರ್ಮಿಕ ಹಬ್ಬಗಳ ಅನೇಕ ಸಂದರ್ಭಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿರುವುದು ಈಕೆಯ ವಿಶೇಷ. ಈ ಚಿಕ್ಕ ವಯಸ್ಸಿಗೇ ಪಂಡಿತ್ ಬಿರ್ಜು ಮಹಾರಾಜ್ ಅವರ ಕಾರ್ಯಾಗಾರಗಳಲ್ಲಿ ಭಾಗವಹಿಸಿದ ಅನುಭವ ಪಡೆದುಕೊಂಡಿದ್ದಾಳೆ. ಚಂದೀಘರದ ಪ್ರಾಚೀನ ಕಲಾಕೇಂದ್ರದ ಮೊದಲ ಹಂತದ ‘ನೃತ್ಯಭೂಷಣ ‘ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಕರೋನಾ ಪಿಡುಗಿನ ಈ ವಿಷಮ ಪರಿಸ್ಥಿತಿಯಲ್ಲೂ ಅನೇಕ ಅಂತರ್ಜಾಲದ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ತೊಡಗಿಕೊಂಡಿದ್ದಾಳೆ.
‘ನೃತ್ಯ ಸಾಧನೆಯೇ ತನ್ನ ಮುಂದಿರುವ ಗುರಿ’ ಎಂದು ಧೇನಿಸುವ ಆರೋಹಿಗೆ ಉತ್ತಮ ಭವಿಷ್ಯವಿದೆ ಎನ್ನಬಹುದು.
*********************