ನಗರದ ಚೌಡಯ್ಯ ಸ್ಮಾರಕ ಭವನದ ವಿಶಾಲ ವೇದಿಕೆಯ ಮೇಲೆ ಕಣ್ಮನ ಸೆಳೆವ ದಿವ್ಯಾಲಂಕಾರಗಳಿಂದ ಶೋಭಿತರಾದ ಸಪ್ತಮಾತೃಕೆಗಳಂತಿದ್ದ ಏಳುಜನ ನೃತ್ಯಕಲಾವಿದೆಯರು ಲೀಲಾಜಾಲವಾಗಿ ಅಷ್ಟೇ ಸುಮನೋಹರವಾಗಿ ನರ್ತಿಸಿದ್ದು ವಿಶೇಷವಾಗಿತ್ತು.
ಅಂದು ನಡೆದ ‘ರಂಗಾಭಿವಂದನೆ’ – ನೃತ್ಯಲಾಸ್ಯ ಹಲವು ದೃಷ್ಟಿಗಳಿಂದ ವಿಶಿಷ್ಟವಾಗಿತ್ತು. ಅವರೆಲ್ಲರೂ, ಖ್ಯಾತ ‘ಶಿವಪ್ರಿಯ’ದ ಕಲಾನಿರ್ದೇಶಕ ಅಂತರರಾಷ್ಟ್ರೀಯ ನೃತ್ಯ ಕಲಾವಿದ, ನಾಟ್ಯಗುರು, ನಟುವನ್ನಾರ್, ಗಾಯಕ, ನೃತ್ಯಸಂಯೋಜಕ ಮತ್ತು ವಾಗ್ಗೇಯಕಾರರಾದ ಡಾ. ಸಂಜಯ ಶಾಂತಾರಾಂ ಅವರ ಮೊನಚು ಗರಡಿಯಲ್ಲಿ ರೂಹು ತಳೆದ ಕಲಾಶಿಲ್ಪಗಳು. ಅನೇಕ ಮೊದಲುಗಳನ್ನು ಸಾಧಿಸಿದ, ವಿಶಿಷ್ಟ ಪ್ರಯೋಗ-ನೃತ್ಯರೂಪಕಗಳನ್ನು ಪ್ರದರ್ಶಿಸಿ ಜನಮನ್ನಣೆ ಪಡೆದ ಅದ್ಭುತ ಕಾರ್ಯಶೀಲ ನಾಟ್ಯಾಚಾರ್ಯರ ಶಿಷ್ಯೆಯರಾದ ಪ್ರಿಯಾಂಕ ತಳವಾರ, ಜಿ.ಆರ್.ಮೋನಿಕಾ, ಡಿ. ಸಿರೀಶ ,ಎಸ್. ಸಿಂಚನ, ಪೂಜಾ ರಾಜ್, ಡಾ.ಸಿ.ಜೆ.ಮೋನಿಷಾ ಮತ್ತು ಡಾ. ಪ್ರಿಯಾ ಯೇಲಿ ರಸಿಕರ ಕಣ್ಮನ ತಣಿಸುವ ನೃತ್ಯಗಳನ್ನು ಪ್ರದರ್ಶಿಸಿದರು.
ಅತ್ಯಲ್ಪ ಕಾಲದಲ್ಲಿ ಅತ್ಯಂತ ಪರಿಶ್ರಮಿಸಿ ಗುರುಗಳ ಬದ್ಧತೆಯ ಮಾರ್ಗದರ್ಶನದಲ್ಲಿ ವೇದಿಕೆಗೆ ಅಣಿಗೊಂಡವರು. ವಿವಿಧ ವಯೋಮಾನದವರಾದ ಇವರಲ್ಲಿ ಒಂದಿಬ್ಬರು ವಿದ್ಯಾರ್ಥಿಗಳು, ವೈದ್ಯರು ಮತ್ತು ಮಕ್ಕಳ ತಾಯಂದಿರಿದ್ದು ಯಾವುದೇ ಹಿಂಜರಿಕೆಯಿಲ್ಲದೆ, ಆತ್ಮವಿಶ್ವಾಸದಿಂದ ಎರಡು ಗಂಟೆಗಳ ಕಾಲ ಉತ್ಸಾಹಪೂರ್ಣವಾಗಿ ನರ್ತಿಸಿ ರಸಿಕರ ಮೆಚ್ಚುಗೆ ಪಡೆದರು.
ದೈವೀಕ ಕಲೆಯಾದ ನೃತ್ಯಾರ್ಪಣೆಯಲ್ಲಿ ಒಂದು ಕ್ರಮವಿರುತ್ತದೆ. ಅದರಂತೆ ರಂಗದ ಮೇಲೆ ಪ್ರಥಮವಾಗಿ ಪದಾರ್ಪಣೆ ಮಾಡುವ ನೃತ್ಯಗಣ ಭೂದೇವಿಗೆ, ಗುರು-ಹಿರಿಯರಿಗೆ, ಸಭೆಗೆ ವಂದಿಸಿ ಆಶೀರ್ವಾದ ಪಡೆದು ತಮ್ಮ ಕಲಾಪ್ರದರ್ಶನಕ್ಕೆ ಸಜ್ಜಾಗುತ್ತಾರೆ. ಅದರಂತೆ ಪ್ರಥಮ ಪೂಜಿತ ಗಣಪತಿಗೆ ವಂದಿಸುವ ಮುನ್ನ, ನೃತ್ತಾವಳಿಗಳನ್ನು ಪ್ರದರ್ಶಿಸುತ್ತ ತನುವನ್ನು ಹುರುಪುಗೊಳಿಸಿಕೊಂಡು ನೃತ್ಯಾಂಗನೆಯರು ರಂಗದ ಮೇಲೆ ಕಾಣಿಸಿಕೊಂಡರು. ಉದಯೋನ್ಮುಖ ಕಲಾವಿದರಿಂದ ವೃತ್ತಿಪರತೆಯ ಪ್ರಬುದ್ಧತೆಯನ್ನು ನಿರೀಕ್ಷಿಸಲಾಗದಿದ್ದರೂ, ನಿರೀಕ್ಷಿತ ಮಟ್ಟ ಮೀರಿ ನರ್ತಕಿಯರು ಲೀಲಾಜಾಲವಾಗಿ ನರ್ತಿಸಿದ್ದು ಆನಂದ ತಂದಿತ್ತು.
ಈ ರಂಗಾಭಿವಂದನೆಯ ಇನ್ನೊಂದು ವಿಶೇಷವೆಂದರೆ ಸ್ವತಃ ವಾಗ್ಗೇಯಕಾರರಾದ ಗುರು ಸಂಜಯ್ ಇಲ್ಲಿ ಪ್ರದರ್ಶಿತವಾದ ಬಹುತೇಕ ಎಲ್ಲ ಕೃತಿಗಳ ರಚನಕಾರರಾಗಿದ್ದರು. ನರ್ತಕರ ಹೆಜ್ಜೆಗಳ ಲಯ, ಆಂಗಿಕಗಳ ವೇಗ-ಅಳತೆಯ ಅಂದಾಜಿರುವ ಗುರುಗಳೇ ನಟುವಾಂಗ ಮಾಡುವಾಗ ಮತ್ತು ಹಾಡುವ ಸಂದರ್ಭದ ಸದವಕಾಶಗಳು ಬಹಳ. ಅದರಂತೆ ಸಂಜಯ್ ತಲ್ಲೀನತೆಯಿದ ಅರೆನಿಮೀಲಿತ ನೇತ್ರರಾಗಿ, ನುರಿತ ಹಸ್ತಚಳಕದಲ್ಲಿ ತಾಳ ಹಾಕುತ್ತ ಭಾವಪೂರ್ಣವಾಗಿ ಹಾಡುವಲ್ಲಿ ಅಪರಿಮಿತ ಆತ್ಮವಿಶ್ವಾಸ ಅಭಿವ್ಯಕ್ತವಾಗುತ್ತಿತ್ತು.
ಆಹಿರ್ ಭೈರವ್ ರಾಗದ ‘ಗಣಪತಿಯ ಸ್ತುತಿ’ ಯಲ್ಲಿ, ಓಂಕಾರ ಸ್ವರೂಪಿ ಗಣೇಶನ ವೈಶಿಷ್ಟ್ಯ-ರೂಪಾತಿಶಯ ಮತ್ತು ಮಹಿಮೆಯನ್ನು ಕಲಾವಿದೆಯರು ಸುಂದರವಾಗಿ ಸಾದರಪಡಿಸಿದರು. ನೃತ್ತಗಳ ಪ್ರಭಾವಳಿಯಲ್ಲೂ ಸಾಮರಸ್ಯವಿತ್ತು. ವಿಶಿಷ್ಟ ನೃತ್ಯಸಂಯೋಜನೆಯ ವಿನ್ಯಾಸಗಳು, ಆರೋಹಣಾ ಕ್ರಮದ ಲಾಸ್ಯಪೂರ್ಣ ಭಂಗಿಗಳು ಆಕರ್ಷಕವಾಗಿದ್ದವು.
ವಚನಗಳನ್ನು ಅಭಿನಯಿಸಲು, ನೃತ್ಯವಾಗಿಸಲು ಸಾಧ್ಯ ಎಂಬ ಹೊಸಪ್ರಯೋಗ ಗಮನ ಸೆಳೆಯಿತು. ಸಮರಸ ಜತಿಗಳೊಂದಿಗೆ ಮಿಳಿತವಾದ ಬಸವಣ್ಣನವರ ವಚನಗಳನ್ನು ಕಲಾವಿದೆ ಡಾ.ಪ್ರಿಯಾ ಯೇಲಿ ಭಕ್ತಿಭಾವದಿಂದ ಸಾಕ್ಷಾತ್ಕರಿಸಿದಳು. ತನ್ಮಯತೆಯ ಅರ್ಪಣೆ ಇಲ್ಲಿಯ ಸ್ಥಾಯಿಯಾಗಿತ್ತು. ಭಕ್ತಿಯ ತಾದಾತ್ಮ್ಯದಲ್ಲಿ ಮೈಮರೆತು ನರ್ತಿಸುವ ಭಕ್ತೆಯ ಅಂತರಾಳದ ಭಾವಗಳ ಸ್ಫುಟವಾದ ಅರ್ಥ ಹೊಮ್ಮಿಕೆ ಮನಮುಟ್ಟಿತು.
ಮುಂದೆ- ಶಾಲಾ ವಿದ್ಯಾರ್ಥಿನಿ ಸಿಂಚನಾ ಸತೀಶ್ ‘ನಂಜುಂಡೇಶ್ವರ ಸ್ತುತಿ’ ಯನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದಳು. ಸಮುದ್ರಮಂಥನದ ನಾಟಕೀಯ ಅಂಕವನ್ನು ಕಣ್ಣಿಗೆ ಕಟ್ಟುವಂತೆ ದೃಗ್ಗೋಚರ ದೃಶ್ಯ ರಚಿಸಿ ಅದರೊಳಗೆ ತಾನೂ ಒಂದಾಗಿ ಅನುಭವಿಸಿ ಅಭಿನಯಿಸಿದ ಸಿಂಚನಳ ಅಭಿನಯ ಸೊಗಸಾಗಿತ್ತು. ಹಾಲಾಹಲ ಉತ್ಪತ್ತಿಯ ಸನ್ನಿವೇಶ ಕೊನ್ನಕೋಲ್ ಝೇಂಕಾರದ ಹಿನ್ನಲೆಯಲ್ಲಿ ಮೂಡಿಬಂದದ್ದು ಪರಿಣಾಮಕಾರಿಯಾಗಿತ್ತು. ಅಂಗಶುದ್ಧಿಯ ಅಭಿವ್ಯಕ್ತಿ, ಮನೋಹರ ಭಂಗಿಗಳಲ್ಲಿ ರುದ್ರನ ಪ್ರಖರ ಸ್ವರೂಪಗಳನ್ನು ನಿರೂಪಿಸಿದ ಸಿಂಚನಾ ಭರವಸೆಯ ಕಲಾವಿದೆಯಾಗಿ ಗೋಚರಿಸಿದಳು.
ಅನಂತರ- ಇದೇ ಘಟನೆಯ ಮುಂದುವರಿದ ಭಾಗವಾಗಿ, ‘ಸಮುದ್ರ ಮಂಥನ’ ದ ಸುತ್ತ ಹೆಣೆದ ಮೋಹಿನಿಯ ಅವತಾರದ ಸುಮನೋಹರ ಸನ್ನಿವೇಶಗಳನ್ನು ಸಿರೀಶ ದಿನೇಶ್ ತನ್ನ ರಸಾಭಿವ್ಯಕ್ತಿಯ ಅಭಿನಯದಿಂದ ಹೃದಯ ಮುಟ್ಟಿದಳು. ಸ್ವರಗಳ ನಡೆಗಳಿಗೆ ಜಗನ್ಮೋಹಿನಿ ತನ್ನ ವಯ್ಯಾರದ ಲಾಸ್ಯದಿಂದ ಜೀವ ತುಂಬಿ, ಮೊದಲು ಕವಿತಾರೂಪದಲ್ಲಿ ಅಭಿವ್ಯಕ್ತವಾದ ಅಭಿನಯ ಮುಂದೆ ಸಂಗೀತಾತ್ಮಕವಾಗಿ ನೃತ್ಯಾಭಿನಯದಲ್ಲಿ ಮೆರೆಯಿತು. ಸಂಚಾರಿಯ ವಿಸ್ತಾರದಲ್ಲಿ, ದೇವ ದಾನವರಿಗೆ ಅಮೃತ ಹಂಚಿಕೆ, ಭಸ್ಮಾಸುರನ ಪ್ರಸಂಗ, ಹರಿಹರ ಸಂಗಮ ಮತ್ತು ಅಯ್ಯಪ್ಪನ ಜನನದವರೆಗೆ ವಿವಿಧ ಘಟನಾವಳಿಗಳ ಮನೋಜ್ಞ ನೃತ್ಯಸಂಯೋಜನೆ ಮತ್ತು ಅದನ್ನು ಸುಗಮವಾಗಿ ಚೈತನ್ಯಪೂರ್ಣವಾಗಿ ನಿರೂಪಿಸಿದ ರೀತಿ ಖುಷಿ ನೀಡಿತು.
ಶಿವನ ಬಗ್ಗೆ ಅಚಲಭಕ್ತಿಯನ್ನು ನಿರೂಪಿಸಿದ ‘’ ತತ್ವಂ’’ ಕಥಾನಕದ ಭಕ್ತಿ ನಿರೂಪಣೆಯನ್ನು ಮೋನಿಕಾ ತನ್ನ ಗಾಢವಾದ ಅಭಿನಯ ಚಾತುರ್ಯದಿಂದ ಮನವರಿಕೆಪಡಿಸಿದಳು. ಕಾಡಿನಲ್ಲಿ ಸಂಚರಿಸುತ್ತಿ ಬೇಡನಿಗೆ ಶಿವ ಸಾಕ್ಷತ್ಕಾರವಾಗಿ ತನ್ನನ್ನು ನಂಬಿದ ಭಕ್ತರಲ್ಲಿ ತನಗೆ ಯಾವ ಭೇದ-ಭಾವವೂ ಇಲ್ಲ, ಮಡಿ, ಮೈಲಿಗೆಗಳಿಲ್ಲ ಎಂಬುದನ್ನು ದೃಷ್ಟಾಂತವಾಗಿ ನಿರೂಪಿಸಿದ ಕೃತಿ ಸಾರ್ಥಕವಾಗಿತ್ತು. ಲೋಕಧರ್ಮೀಯ ಆಯಾಮದ, ಜಾನಪದ ಧಾಟಿಯ ಈ ಸುಂದರ ಕೃತಿ ತನ್ನ ಶಾಸ್ತ್ರೀಯ ಚೌಕಟ್ಟನ್ನು ಮೀರದೆ ಮೋನಿಕಳ ಲವಲವಿಕೆಯ ಮುಗ್ಧಭಕ್ತಿಯನ್ನು ಹೃದಯಸ್ಪರ್ಶಿಯಾಗಿಸಿತು.
ಮುಂದೆ- ವಿಷ್ಣುವಿನ ನಾಲ್ಕನೇ ಅವತಾರ-ನರಸಿಂಹನ ಅದ್ಭುತರೂಪವನ್ನು ಧರೆಗಿಳಿಸಿದ ಪೂಜಾಳ ರಣೋತ್ಸಾಹದ ನೃತ್ಯದ ಲೀಲಾಜಾಲ ಅಡಿಗಳು, ರಕ್ಕಸ ಹಿರಣ್ಯಕಶಿಪುವಿನ ಉಗ್ರವ್ಯಕ್ತಿತ್ವವನ್ನು ಕಣ್ಮುಂದೆ ನಿಲ್ಲಿಸಿದವು. ಪುಟ್ಟ ಪ್ರಹ್ಲಾದನಾಗಿ ಅರ್ಣವ್ ತನ್ನ ಮುದ್ದಾದ ಮುಗ್ಧ ಅಭಿನಯದಿಂದ ಮುದನೀಡಿದ. ಹರಿಯ ಮಹಿಮೆಯನ್ನು ಧಿಕ್ಕರಿಸುವ ರಾಕ್ಷಸನ ಒರಟು ಹೆಜ್ಜೆ, ಹೂಂಕಾರ, ಗದೆ ಹಿಡಿದು ವಿಜ್ರುಂಭಿಸುವ ದರ್ಪದ ನಡೆಯ ಮೂಲಕ ಕಲಾವಿದೆ ತನ್ನ ಉತ್ತಮಾಭಿನಯದಿಂದ ರೋಮಾಂಚಗೊಳಿಸಿದಳು. ನಾರಸಿಂಹ, ರಕ್ಕಸನ ಕರುಳು ಬಗೆದು ಕೊರಳ ಮಾಲೆ ಧರಿಸಿ, ನಾಲಗೆ ಚಾಚಿ ರುಧಿರ ಹೀರುವ ಭೀಷಣದೃಶ್ಯವನ್ನು ಕಲಾವಿದೆ ನರಸಿಂಹ ಮುದ್ರೆಗಳಲ್ಲಿ ಪರಿಣಾಮಕಾರಿಯಾಗಿ ಅಭಿನಯಿಸಿ ಮೆಚ್ಚುಗೆ ಪಡೆದಳು. ಅದಕ್ಕೆ ಕಳಶವಿಟ್ಟಂತೆ ಸಂಜಯರ ಶಕ್ತಿಶಾಲಿ-ಭಾವಪೂರ್ಣ ಗಾಯನ ಸನ್ನಿವೇಶಕ್ಕೆ ಕಾವು ನೀಡಿತ್ತು.
ಅನಂತರ- ಪ್ರಿಯಾಂಕ ತಳವಾರ, ಮಧುರಾನುಭವ ಆವರಿಸುವ ‘ಕೃಷ್ಣ ಸ್ತುತಿ’ಯನ್ನು ತನ್ನ ಸುಮನೋಹರ ಅಭಿನಯದ ಪ್ರಾವೀಣ್ಯತೆಯಿಂದ ‘ಹರಿ ನಿನ್ನನೆ ಪಾಡುವೆ-ಪೋಗಳುವೆ’ ಎಂದು ಮೈಮರೆತು ನರ್ತಿಸಿದಳು. ಇಡೀರಂಗವನ್ನು ಬಳಸಿಕೊಂಡು ಕಾಳಿಂಗಮರ್ಧನದ ಘಟನೆಯನ್ನು ಅಮೋಘವಾಗಿ ನಿರೂಪಿಸಿದಳು. ಗೋವರ್ಧನಗಿರಿಧಾರಿ, ಬಾಲಗೋಪಾಲರೊಡನಾಟ, ಸುಧಾಮನ ಸ್ನೇಹ ಪ್ರಸಂಗ ಇತ್ಯಾದಿ ಸಂಚಾರಿಗಳನ್ನು ಯಶಸ್ವಿಯಾಗಿ ಅಭಿನಯಿಸಿ ಚೈತನ್ಯಪೂರ್ಣವಾಗಿ ನರ್ತಿಸಿ ಮನಸೆಳೆದಳು. ಕ್ರೀಡೆಯ ಲಹರಿಯಲ್ಲಿದ್ದಷ್ಟೇ ಸೊಗಸು, ದೇವನ ಶರಣಾಗತಿಯಲ್ಲೂ ನಲಿವು, ಸಂಭ್ರಮ ಬಿಂಬಿಸಿದಳು.
ಕಡೆಯಲ್ಲಿ- ಅತ್ಯಂತ ಗಾಢವಾದ ಭಾವದಲ್ಲಿ ಬೆಸೆದ ‘ಶಂಭೋ ಶಂಕರ ಶಿವ’ಎಂದು ಕರುಣಾರ್ದ್ರ ಭಾವದಿಂದ ಭಕ್ತಿ ಭಾವಸಾಗರದಲ್ಲಿ ಮೀಯುವಂತೆ ಮಾಡಿದ ಡಾ. ಮೋನಿಷಾಳ ಅದ್ಭುತ ನೃತ್ಯ ಕಂಗಳನ್ನು ಹಸಿಯಾಗಿಸಿತು. ನೃತ್ಯ ನೈವೇದ್ಯ ಶಿವನ ಪದತಲ ಸೇರಿದ ಸಾರ್ಥಕ್ಯ ಕ್ಷಣಗಳು ಸಾಕ್ಷಿಯಾದವು. ಮುದವಾದ ನವಿರು ಚಲನೆಗಳಿಂದ ಆರಂಭವಾದ ಶೃಂಗಾರ ಭಕ್ತಿ ಪರಾಕಾಷ್ಟತೆಗೇರಿ ಪುಳಕಗೊಳಿಸಿತು. ಸಶಕ್ತ ಕೊನ್ನಕೋಲ್ ವಾಗ್ಝರಿ ಆಕೆಯ ರಭಸದ ನೃತ್ತಗಳನ್ನು ಸ್ಫೂರ್ತಿಗೊಳಿಸಿದವು. ಅದ್ಭುತ ಸಂಯೋಜನೆಯ ಕೃತಿಯ ಔನ್ನತ್ಯವನ್ನು ಕಲಾವಿದೆ ತನ್ನ ಮಾಗಿದ ಅಭಿನಯ ಮತ್ತು ಮನೋಜ್ಞ ಭಂಗಿಗಳಿಂದ ಎತ್ತಿ ಹಿಡಿದಳು.
ಅಂತ್ಯದ ತಿಲ್ಲಾನ ಮತ್ತು ಮಂಗಳ ತನ್ನದೇ ಆದ ಅಸ್ಮಿತೆಯಿಂದ ವೈಶಿಷ್ಟ್ಯಪೂರ್ಣವಾಗಿದ್ದವು. ಕಣ್ಮನಕ್ಕೆ ಹಿತವೆರೆವ ಕಲಾವಿದೆಯರ ಉಡುಪು-ವಸ್ತ್ರಾಭರಣ, ಸನ್ನಿವೇಶದ ಮಹತ್ವವನ್ನು ಎತ್ತಿಹಿಡಿವ ಬೆಳಕಿನ ವಿನ್ಯಾಸ, ನೃತ್ಯ ಪ್ರಸ್ತುತಿಗೆ ಜೀವ ತುಂಬುವ ವಾದ್ಯಗೋಷ್ಠಿ ಅಮೋಘವಾಗಿದ್ದು, ಈ ನೃತ್ಯ ವೈಭವದ ಸಮಗ್ರ ಸೌಂದರ್ಯಕ್ಕೆ ಪ್ರತಿಯೊಂದು ಅಂಶಗಳೂ ಕಾರಣವಾಗಿದ್ದವು ಎಂದರೆ ಅತಿಶಯೋಕ್ತಿಯಲ್ಲ.
**********