ಅದಿತಿ ಶಶಿಕುಮಾರ್ ಗುರುವಂದನೆ ಸಮರ್ಪಣೆ
‘’ಶಿವಪ್ರಿಯ’’ ಖ್ಯಾತ ನೃತ್ಯಶಾಲೆಯ ಕಲಾತ್ಮಕ ನಿರ್ದೇಶಕ ಅಂತರರಾಷ್ಟ್ರೀಯ ನೃತ್ಯಕಲಾವಿದ-ನೃತ್ಯಗುರುವಾಗಿ ಪ್ರಸಿದ್ಧಿ ಪಡೆದಿರುವ ವಾಗ್ಗೇಯಕಾರ, ಗಾಯಕ, ನಟುವನ್ನಾರ್ ಡಾ. ಸಂಜಯ್ ಶಾಂತಾರಾಂ ಅವರದು ಬಹುಮುಖ ಪ್ರತಿಭೆ. ಇವರಲ್ಲಿ ನೃತ್ಯ ತರಬೇತಿ ಪಡೆಯುತ್ತಿರುವ ಅದಿತಿ ಶಶಿಕುಮಾರ್, ಗುರು ಸಂಜಯರ ಶಿಸ್ತುಬದ್ಧ ನಾಟ್ಯಶಿಕ್ಷಣದಲ್ಲಿ ಒಡಮೂಡಿರುವ ಕಲಾಕುಸುಮ. ತನ್ನ ನೃತ್ಯ ನೈಪುಣ್ಯವನ್ನು ರಸಿಕರ ಮುಂದೆ ಸಾಕ್ಷೀಕರಿಸಲು ಅದಿತಿ, ತನ್ನ ಗುರು ಕಲಾ ಆರತಿ ರತ್ನ ಸಂಜಯ್ ಅವರೊಂದಿಗೆ ನರ್ತಿಸಿ, ‘’ಗುರುವಂದನೆ’’ಯನ್ನು ಶ್ರದ್ಧಾ-ಭಕ್ತಿಗಳಿಂದ ಸಲ್ಲಿಸಲಿದ್ದಾಳೆ. ಇದೇ ತಿಂಗಳ 11 ಗುರುವಾರ ಸಂಜೆ 5 ಗಂಟೆಗೆ ವಯ್ಯಾಲಿಕಾವಲ್ಲಿನಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಗುರು-ಶಿಷ್ಯರು ಸುಮನೋಹರ ನೃತ್ಯ ಪ್ರದರ್ಶನ ನೀಡಲು ಸನ್ನದ್ಧಳಾಗಿದ್ದಾರೆ.
ಶ್ರೀ ಶಶಿಕುಮಾರ್ ಮತ್ತು ಹೇಮಾವತಿ ದಂಪತಿಗಳ ಪುತ್ರಿಯಾದ ಅದಿತಿ, ಚಿಕ್ಕಂದಿನಿಂದಲೇ ನೃತ್ಯಕ್ಕೆ ಮನಸೋತವಳು. ನಾಲ್ಕುವರ್ಷದ ಮಗುವನ್ನು ಹೆತ್ತವರು ಭರತನಾಟ್ಯ ಕಲಿಕೆಗೆ ಸೇರ್ಪಡೆ ಮಾಡಿದರು. ಪುಟ್ಟ ಪುಟ್ಟಹೆಜ್ಜೆಗಳಲ್ಲೇ ತನ್ನ ಪ್ರತಿಭೆಯ ಹೊಳಪನ್ನು ಹೊರಸೂಸಿದ ಅದಿತಿ, ವಿದುಷಿ ಎಲ್. ಮಂಜುಳಾ ಅವರ ಬಳಿ ಸಮರ್ಥ ಬಗೆಯಲ್ಲಿ ನಾಟ್ಯ ಕಲಿತು, ತನ್ನ ಪರಿಶ್ರಮದಿಂದ ಅನೇಕ ಕಡೆ ನೃತ್ಯ ಪ್ರದರ್ಶನಗಳನ್ನು ನೀಡಿದ್ದು ಅವಳ ವಿಶೇಷ. ಅವರ ನೇತೃತ್ವದಲ್ಲೇ ‘ರಂಗಪ್ರವೇಶ’ವನ್ನೂ ವಿದ್ಯುಕ್ತವಾಗಿ ನೆರವೇರಿಸಿಕೊಂಡಳು. ಮುಂದೆ ಸಂಜಯ್ ಅವರ ನುರಿತ ಗರಡಿಗೆ ಬಂದ ಈ ಶಿಷ್ಯೆ ಮತ್ತಷ್ಟು ನಾಟ್ಯದ ವಿವಿಧ ಮಜಲುಗಳನ್ನರಿತು ಕೃತಜ್ಞತಾಪೂರ್ವಕ ವಂದನೆ ಸಲ್ಲಿಸಲು ಇದೀಗ ಸಜ್ಜಾಗಿದ್ದಾಳೆ.
ಅದಮ್ಯ ಉತ್ಸಾಹದ ಈ ಹದಿನಾಲ್ಕರ ಬಾಲೆ ಮಲ್ಲೇಶ್ವರದ ಶ್ರೀ ವಿದ್ಯಾಮಂದಿರ ಹೈಸ್ಕೂಲಿನಲ್ಲಿ 9 ನೇ ತರಗತಿಯ ವಿದ್ಯಾರ್ಥಿನಿ. ಶಾಲೆಯಲ್ಲಿ ನೃತ್ಯಸ್ಪರ್ಧೆಯಲ್ಲಿ ಅನೇಕ ಬಹುಮಾನ ಗಳಿಸಿರುವ ಇವಳು, ಈಗಾಗಲೇ ದೆಹಲಿ ಕನ್ನಡ ಸಂಘ, ಕಲ್ಕತ್ತಾ ಕನ್ನಡ ಸಂಘ, ಶ್ರೀಪುರಂ, ಗೋಲ್ಡನ್ ಟೆಂಪಲ್ ಗುರುವಾಯೂರು, ಕೇರಳ-ಧರ್ಮಸ್ಥಳ, ಸಿಗಂದೂರು ಮುಂತಾದ ಅನೇಕ ದೇವಾಲಯಗಳಲ್ಲಿ ನರ್ತಿಸಿದ್ದಾಳೆ. ಕರ್ನಾಟಕ ಸರ್ಕಾರದ ಜ್ಯೂನಿಯರ್ ನೃತ್ಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಇವಳು, ಶಾಸ್ತ್ರೀಯ ಸಂಗೀತದಲ್ಲೂ ಪರಿಶ್ರಮಿಸುತ್ತಿದ್ದಾಳೆ.
ಪ್ರತಿಭಾ ಪುರಸ್ಕಾರ, ಕಲಾರತ್ನ, ನೃತ್ಯಾಂಜಲಿ, ಯೋಗ ಪ್ರಬೋಧ ಸ್ವರ್ಣಪದಕ ಪಡೆದಿರುವ ಅದಿತಿ ಪ್ರತಿಭಾವಂತೆ. ಗುರುಗಳ ಜೊತೆ ನರ್ತಿಸಲಿರುವ ಇವಳ ನೃತ್ಯ ಸೊಬಗನ್ನು ಕಣ್ತುಂಬಿಕೊಳ್ಳಲು ‘ಗುರುವಂದನೆ’ಗೆ ಸರ್ವರಿಗೂ ಸ್ವಾಗತ.
*****************