Image default
Short Stories

ಬಿಕರಿ

“ಹುಡುಗೀನ ಈಗಲೇ ಸರ್ಯಾಗಿ ನೋಡಿಬಿಡಪ್ಪ ದಿವಾಕರ…ಆಮೇಲೆ ಸರ್ಯಾಗಿ ನೋಡಲಿಲ್ಲ, ಇನ್ನೊಂದು ಸಲ ಕರೆಸಿ ಅನ್ನಬೇಡಪ್ಪ….. ಹೂಂ ನೋಡು, ನೋಡು… ನಿಸ್ಸಂಕೋಚವಾಗಿ ನೋಡು. ಏನಾದ್ರೂ ಪ್ರಶ್ನೆ ಕೇಳೋದಿದ್ರೂ ಕೇಳು”-ಎಂದು ಮದುವೆ ಬ್ರೋಕರ್ ರಾಮನಾಥಯ್ಯ ತಮ್ಮ ಉಬ್ಬುಹಲ್ಲಿನ ಜೊತೆ ವಸಡೂ ಕಾಣುವಷ್ಟು ದೊಡ್ಡದಾಗಿ ಬಾಯಿಬಿಟ್ಟು ನಕ್ಕರು.

ಎದುರಿಗೆ ಸ್ವಲ್ಪ ದೂರದಲ್ಲಿ ತಲೆಬಾಗಿಸಿ ಕುಳಿತಿದ್ದ ಹುಡುಗಿಯತ್ತ ದಿವಾಕರ ಕಂಡೂ ಕಾಣದ ಹಾಗೆ ತನ್ನ ನೋಟವನ್ನು ತುಯ್ದ.ಮೊದಲನೋಟಕ್ಕೇ ಸುಂದರಿ ಎನಿಸಬಹುದಾದಂಥ ಚೆಲುವಾದ ಮೊಗ ನಾಚಿಕೆಯಿಂದ ಕೆಂಪಾಗಿತ್ತು. ತೆಳ್ಳಗೆ, ಎತ್ತರವಾದ ನಿಲುವು. ಒಂದುಕ್ಷಣ ಅವನ ಕಂಗಳಲ್ಲಿ ಮಿಂಚು ಸುಳಿದರೂ ತಟಕ್ಕನೆ ಅವನ ಮುಖ ಬಾಡಿ, ತಾಯಿಯ ದಿಟ್ಟಿಯೊಡನೆ ದಿಟ್ಟಿ ಬೆರೆತು ಪೆಚ್ಚುನಗೆ ಒಸರಿಸಿದ.

ಬಂದವರು ಮೇಲೆದ್ದರು.“ವಾರದಲ್ಲಿ ತಿಳಿಸ್ತೀವಿ…. ಹೋಗ್ಬನ್ನಿ”- ಎಂದು ಅವನ ತಂದೆ ಅಪ್ಪಣೆ ಕೊಡಿಸಿದಾಗ, ಸರಬರ ಸೀರೆಯ ಸದ್ದು, ಗಾಜಿನಬಳೆ ಕಿಣಿಕಿಣಿ… ಸ್ಯಾಂಡಕ್ ಚಪ್ಪಲಿಗಳ ಚರಕ್… ಸರಕ್… ಕ್ಷಣಾರ್ಧದಲ್ಲಿ ಎಲ್ಲವೂ ನಿಶ್ಶಬ್ದ.“

”ಹುಡುಗಿ ಹೇಗಿದ್ದಾಳೆ ಅಂತ ಅನ್ನಿಸ್ತೇ?….. ಆದ್ರೂ ಏನೋ ಶುದ್ಧ ಬಡವರ ಕಳೆ ಹೊಳೆಯುತ್ತಲ್ವೇನೇ ಶ್ಯಾಮ್ಲೂ ಆ ಹುಡುಗೀ ಅತ್ತಿಗೆಯ ಮುಖದ ಮೇಲೆ…ಅಲ್ಲಾ, ಹುಡುಗಿಯ ಮೈಮೇಲೆ ಒಂದು ಗುಲಗಂಜಿ ತೂಕ ಬಂಗಾರನೂ ಬೇಡ್ವೇನೇ?”

ರಮಾಬಾಯಿಯ ಏರುಕಂಠ ಕೇಳಿ, ಶ್ಯಾಮಲಾ ತತ್‍ಕ್ಷಣ ಗಾಬರಿಯಿಂದ ಚಿಮ್ಮಿ – ‘ಅಮ್ಮಾ’ ಎಂದು ಪಿಸುಗುಟ್ಟಿ ತಾಯಿಯ ಬಾಯಿಯ ಮೇಲೆ ಕೈಯಿಟ್ಟಳು.-“ಸ್ವಲ್ಪ ಮೆತ್ತಗೆ ಮಾತಾಡಮ್ಮ.. ಇನ್ನೂ ಬಂದವರು ಗೇಟೂ ದಾಟಿಲ್ಲ……… ಆಗ್ಲೇ ನಿನ್ನ ಕಾಮೆಂಟ್ಸ್ ಶುರು ಮಾಡಿಬಿಟ್ಯಾ?”-ಎಂದು ಹುಬ್ಬು ಹೆಣೆದು ತಾಯಿಯತ್ತ ಆಕ್ಷೇಪದ ನೋಟ ಬೀರಿದಳು.

ರಮಾಬಾಯಿಯ ಮುಖಭಾವ, ಆ ದಿನ ಬಂದಿದ್ದ ಹುಡುಗಿ ತಮಗೆ ಒಪ್ಪಿಗೆಯಾಗಿಲ್ಲವೆಂಬ ಅತೃಪ್ತಭಾವವನ್ನು ಗಾಢವಾಗಿ ಹೊರಚೆಲ್ಲುತ್ತಿತ್ತು. ಅನಿಸಿದ್ದನ್ನು ಬಾಯಲ್ಲಿ ಧಾರಾಳವಾಗಿ ಆಡಿಬಿಡುವ ಸ್ವಭಾವ ಅವರದು. “ಲಕ್ಷಣವಾಗಿ ಕುತ್ತಿಗೇಲಿ ಒಂದೆರಡೆಳೆ ಚಿನ್ನದ ಸರ, ಬಳೆ, ಉಂಗುರ, ಓಲೆ, ಝುಮಕಿ ಒಂದೂ ಕೇಳಬೇಡ… ಅದೇನು ವಾಕಿಂಗೋ, ಮಾರ್ಕೇಟಿಗೋ ಬಂದ ಹಾಗೆ ಕಿವೀಲಿ ಒಂದು ರಿಂಗ್ ತೂಗಿಹಾಕಿಕೊಂಡು ಬಂದಿದ್ದಾಳಲ್ಲ!… ಹೂಂ… ಆದೂ ಚಿನ್ನದ್ದೋ, ಹಿತ್ತಾಳೇದೋ?…”

ಶ್ರೀಕಂಠಯ್ಯನವರಿಗೆ ಹೆಂಡತಿಯ ಚಿನ್ನದ ವ್ಯಾಮೋಹ. ಆಸ್ತಿ – ಐಶ್ವರ್ಯದ ಹುಚ್ಚು ತಿಳಿಯದ್ದೇನಲ್ಲ. ಕಳೆದ ಆರು ತಿಂಗಳುಗಳಿಂದ ಗಂಡ – ಹೆಂಡತಿಗೆ ಇದೇ ತಿಕ್ಕಾಟ. ಮನೆಯ ಆಡಳಿತದಲ್ಲಿ ಆಕೆಯದೇ ಮೇಲುಗೈಯಾದ್ದರಿಂದ ಆತ ಆ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ತಿಂಗಳ ಮೊದಲಲ್ಲೇ ಹೆಂಡತಿಯ ಕೈಗೆ ಗಂಡನ ಸಂಬಳ ರವಾನೆಯಾಗುತ್ತಿತ್ತು. ರಮಾಬಾಯಿ ಅಚ್ಚುಕಟ್ಟಾಗಿ ಸಂಸಾರ ನಿಭಾಯಿಸಿಕೊಂಡು ಹೋಗುತ್ತ ಅದರಲ್ಲೇ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನೂ ತೂಗಿಸಿ, ಮಿತವ್ಯಯ ಮಾಡಿ ಆಗೀಗ ಅಷ್ಟಿಷ್ಟು ಒಡವೆಗಳನ್ನೂ ಮಾಡಿಸಿಕೊಂಡಿದ್ದರು. ಮಗಳಿಗೂ ಒಂದು ಸೆಟ್ ಆಭರಣ ಮಾಡಿಸಿದ್ದರು. ಮಗಳ ಓದು ಮುಗಿದಿತ್ತು. ಮಗನೂ ಎಂಜಿನಿಯರಿಂಗ್ ಮುಗಿಸಿ ಒಂದು ಕೆಲಸ ಹಿಡಿದ ನಂತರ ಮತ್ತೆ ಅವರು ಹೊಸ ಮಾದರಿಯ ಒಡವೆಗಳನ್ನು ಮಾಡಲು ಹಾಕಿದ್ದರು.

ದಿವಾಕರ ಸಂಪಾದಿಸತೊಡಗಿ ಆಗಲೇ ಮೂರುವರ್ಷಗಳು ಕಳೆದಿದ್ದವು. ಪ್ರತಿಯೊಂದು ವಿಷಯದಲ್ಲೂ ಹೆಂಡತಿಗೆ ವಿರುದ್ಧವಾಡದೆ ತೆಪ್ಪಗಿರುತ್ತಿದ್ದ ಶ್ರೀಕಂಠಯ್ಯನವರು, ಮಗನಿಗೆ ಹೆಣ್ಣು ತರುವ ಅಭಿಪ್ರಾಯದಲ್ಲಿ ಮಾತ್ರ ಹೆಂಡತಿಯೊಡನೆ ಜಟಾಪಟಿ ಕುಸ್ತಿಗಿಳಿದಿದ್ದರು.ಹತ್ಹರಿಯದ ವಾಗ್ವಾದ……. ಎಳೆದಾಟ!…….ಹೆಂಡತಿಯಂತೆ ಆತನಿಗೂ, ತಮ್ಮ ಏಕಮಾತ್ರ ಪುತ್ರನಿಗೆ, ದೊಡ್ಡ ಅಧಿಕಾರದಲ್ಲಿರುವವರ ಸಂಬಂಧವೇ ಬೆಳೆಸಬೇಕೆಂಬಾಸೆ. ಅಂತಸ್ತು.. ಸ್ಟೇಟಸ್ಸು – ಅವರ ಪಿತ್ತ ಹೊಕ್ಕಿತ್ತು! ಒಡವೆ–ವಸ್ತುಗಳ ಆಡಂಬರವಿರದಿದ್ದರೂ ತಮ್ಮ ಭಾವೀಸೊಸೆ, ಡಿ. ಸಿ.ಯ ಮಗಳೋ- ಕಮೀಷನರ್ ತಂಗಿಯೋ ಅಥವಾ ಯಾವುದಾದರೂ ಫ್ಯಾಕ್ಟರಿ ಜಿ. ಎಂ. ಸಂಬಂಧಿಯಾದರೂ ಆಗಿರಬೇಕೆಂಬುದು ಆತನ ಹೆಬ್ಬಯಕೆ!ನೋಡಿದ ಹೆಣ್ಣುಗಳಲ್ಲಿ ಅವರ ಆಸ್ತಿ- ಬಂಗಾರ- ಹಣ ಕಂಡು ರಮಾಬಾಯಿ ಮಾರುಹೋಗಿದ್ದು ಮೂರು ಜನರಿಗಾದರೆ, ಶ್ರೀಕಂಠಯ್ಯನವರು ಪಟ್ಟು ಹಿಡಿದದ್ದು ಒಂದು ಕೇಸಿನಲ್ಲಿ.ಆ ಹೆಣ್ಣುಗಳ ಪಟ್ಟಿಯಲ್ಲಿ, ರಾಮನಾಥಯ್ಯ ಇಂದು ‘ವಧುಪರೀಕ್ಷೆ’ಗೆಂದು ಕರೆದು ತಂದಿದ್ದ ಮಂದಾಕಿನಿಯ ವರ್ಚಸ್ಸು ತೀರ ಸಪ್ಪೆ.

“ಹುಡುಗಿಗೆ ತಂದೆ ಇಲ್ಲ… ಗುಮಾಸ್ತೆ ಅಣ್ಣನ ಆಸರೆಯಲ್ಲಿ ಇರುವವಳು. ಅವಳ ಮದುವೆ ಬಗ್ಗೆ ಅಣ್ಣ-ಅತ್ತಿಗೆಯರಿಗೇನು ಆಸ್ಥೆ- ಅಕ್ಕರತೆ ಇರುತ್ತದೆ? – ಜವಾಬ್ದಾರಿ ನೀಗಿದರೆ ಸಾಕು ಎಂದು ಕಾದಿರುತ್ತಾರೆ. ಪ್ರೈಮರಿ ಸ್ಕೂಲ್ ಮೇಷ್ಟರ ಮಗಳು ಎಷ್ಟು ತಾನೆ ಬಂಗಾರ ಹೊತ್ತು ತಂದಾಳು? – ನೆಟ್ಟಗೆ ಮದುವೇನೂ ಮಾಡಿಕೊಡ್ತಾರೋ ಇಲ್ಲವೋ” ಎಂದು ರಮಾಬಾಯಿಯ ಅನುಮಾನ.

ನಿರಾಭರಣಳಾಗಿದ್ದರೂ ತನ್ನ ಸೌಮ್ಯ ಕಳೆಯಿಂದ ಆಕರ್ಷಕವಾಗಿದ್ದ ಮಂದಾಕಿನಿಯ ಸೌಂದರ್ಯ ಯಾರಿಗೂ ಗಣನೀಯ ಎಂದೆನಿಸಲಿಲ್ಲ.ಶ್ಯಾಮಲಳಿಗೆ ಬರುವ ಅತ್ತಿಗೆ ತುಂಬಾ ಮಾಡರ್ನ್ ಆಗಿ ಇರಬೇಕೆಂಬುದೊಂದೇ ಆಸೆಯಾಗಿದ್ದರೂ ಹೆತ್ತವರ ಕಾವೇರಿದ ಚರ್ಚೆ- ವಾಗ್ವಾದದ ಮಧ್ಯೆ ತನ್ನ ಅಭಿಪ್ರಾಯ ತೂರಿಸುವಷ್ಟು ಎಂಟೆದೆ ಅವಳಿಗಿರಲಿಲ್ಲ.ಆದರೆ, ಗಂಡ – ಹೆಂಡತಿ ಮಾತ್ರ ತಮ್ಮ ಭಾವೀಸೊಸೆಯ ಮನೆತನ – ಅಂತಸ್ತುಗಳ ಬಗ್ಗೆ ಮಂಥಿಸಿದ್ದೇ ಮಂಥಿಸಿದ್ದು.ಬಾಯಿ ತೆರೆಯಲವಕಾಶ ಸಿಗದ ದಿವಾಕರ ಬೇಸರದಿಂದ ಅಲ್ಲಿಂದ ಜಾಗ ಖಾಲಿ ಮಾಡಿದ್ದ.

ವಾರ ಕಳೆದಿತ್ತು. ಹುಡುಗಿಯ ಅಣ್ಣ ಎನಿಸಿಕೊಂಡ ಬಡಪ್ರಾಣಿ, ಕಿರುಗುಟ್ಟಿತೋ ಇಲ್ಲವೋ ಎಂಬಂತೆ ಗೇಟನ್ನು ಮೆಲ್ಲನೆ ತೆರೆಯುತ್ತ, ಹಿಂಜರಿಕೆಯಿಂದಲೇ ಬೆಲ್ಲಿನ ಮೇಲೆ ಕೈಯಿಟ್ಟಿದ್ದ.ಅಂಗಳದಲ್ಲಿ ಹೂ ಬಿಡಿಸುತ್ತ ನಿಂತಿದ್ದ ರಮಾಬಾಯಿ, ಬಂದವರ್ಯಾರು ಎಂದು ತಿಳಿಯುತ್ತಲೇ ಮುಖ ಹಿಂಡಿ ಹುಳ್ಳಗೆ ಮಾಡಿದರು.ವರಾಂಡದಲ್ಲೇ ಪೇಪರೋದುತ್ತ ಕುಳಿತಿದ್ದ ಶ್ರೀಕಂಠಯ್ಯ, ಮೇಲೇಳುವ ನಟನೆಯೇ ಇಲ್ಲದೆ ‘ಬನ್ನಿ’ ಎಂದರು, ಆದರವಿಲ್ಲದ ದನಿಯಲ್ಲಿ – ಬಂದವರಿಗೆ ಏನು ಉತ್ತರಿಸುವುದೆಂದು ತೋಚದೆ ಉಗುಳು ನುಂಗುತ್ತ.“ನಮ್ಮ ಹುಡುಗ ಇನ್ನೂ ಏನೂ ಹೇಳಿಲ್ಲ. ಮುಂದಿನ ವಾರ…”_ ಎನ್ನುವಷ್ಟರಲ್ಲಿ ಆತ ಪೆಚ್ಚುಮೋರೆ ಹಾಕಿಕೊಂಡು ಮೇಲಕ್ಕೆದ್ದೇ ಬಿಟ್ಟರು.

ಷೆಡ್ಡಿನಿಂದ ಸ್ಕೂಟರ್ ಹೊರತೆಗೆಯುತ್ತಿದ್ದ ದಿವಾಕರ ಆ ದೃಶ್ಯ ಕಂಡು, ಕಂಡೂ ಕಾಣದ ಹಾಗೆ ಅಲ್ಲಿಂದ ನಿಶ್ಶಬ್ದವಾಗಿ ಸರಿದುಹೋದ.

ಸಂಜೆ ಅವನು ಕೆಲಸದಿಂದ ಬರುತ್ತಿದ್ದ ಹಾಗೆ ರಮಾಬಾಯಿ ಅದಕ್ಕೇ ಕಾದಿದ್ದವರಂತೆ ಅವನ ‘ಮದುವೆ’ಯ ಮಾತು ತೆಗೆದರು.

“ನೋಡಪ್ಪ ದಿವೂ, ಇವತ್ತೇನಾದ್ರೂ ಒಂದು ನಿರ್ಧಾರ ಆಗಲೇಬೇಕು….ನಿಮ್ತಂದೆ ಹಟ ನೋಡಿದರೆ ಯಾಕೋ ಅತಿಯಾಗ್ತಿದೆ ದಿನೇದಿನೇ……ಆ ಜಿಪುಣಾಗ್ರೇಸರ ಶ್ಯಾಮರಾಯರ ನಿರ್ದೇಶಕ ಅಂಬೋ ಹುದ್ದೆ ನೋಡಿ, ಇವರು ಮರುಳಾಗಿ ಅವರ ಮಗಳು ಕುಬ್ಜೆ ಪಂಕಜಾನೇ ತಂದುಕೊಳ್ಳೋಣಾಂತ ಪಟ್ಟು ಹಿಡಿದಿದ್ದಾರೆ ಕಣೋ…ಹೋಗಲಿ ಹುಡುಗಿ ಐಬು ಮುಚ್ಚಕ್ಕಾದ್ರೂ ಆತ ವರದಕ್ಞಿಣೆ- ವರೋಪಚಾರ ಕೊಡ್ತಾರಾ? ಉಹೂಂ….ಒಂದೂ ಕೇಳಬೇಡ….. ಹೋಗಲಿ, ಒಂದು ಗ್ರ್ಯಾಂಡಾಗಾದ್ರೂ ಮದುವೆ ಮಾಡಿಕೊಡ್ತೀನಿ ಅಂತಾರಾ?… ಎಲ್ಲಾ ಸಿಂಪಲ್ಲು….. ಒಂದೇ ದಿನದಲ್ಲಿ ವರಪೂಜೆ, ಲಗ್ನ, ರಿಸೆಪ್ಷನ್ನಂತೆ!…. ನನಗಂತೂ ಸುತರಾಂ ಈ ಸಂಬಂಧ ಒಪ್ಪಿಗೆಯಿಲ್ಲಪ್ಪ… ಮಹಾ ಘಾಟಿ ಆತ!”ಎಂದು ಅವಡುಗಚ್ಚಿದರಾಕೆ.

ಕುಡಿಯುತ್ತಿದ್ದ ಕಾಫಿ ಕಹಿ ಎನಿಸಿತು ದಿವಾಕರನಿಗೆ. ಈ ಮನೇಲಿ ನೆಮ್ಮದಿಯಾಗಿ ಒಂದು ತೊಟ್ಟು ಕಾಫಿ ಕುಡಿಯಕ್ಕೂ ಆಗಲ್ಲ ಎಂದು ಗೊಣಗಿಕೊಂಡ ಗಂಟಲೊಳಗೆ. ರಮಾಬಾಯಿಯವರ ಲೆಕ್ಕಾಚಾರವೇ ಬೇರೆ.

‘’ ಅಲ್ಲಮ್ಮ ಕನಕಾಭಿಷೇಕ ಮಾಡಿಬಿಟ್ಟರೆ ಕಪ್ಪನೆಯ ಹುಡುಗೀರು ದಂತದ ಬಣ್ಣಕ್ಕೆ ತಿರುಗಿಬಿಡ್ತಾರಾ ?… ಕುಳ್ಳಿ – ಕುರೂಪಿಯರು ಎತ್ತರವಾಗಿ ಸುಂದರಿಯರಾಗಿ ಬಿಡ್ತಾರಾ?… ಅಂತೂ ನಿನ್ನ ವರದಕ್ಷಿಣೆ ಕಾಸಿಗೆ ಅಂಥ ಮಾಂತ್ರಿಕ ಶಕ್ತಿ ಇದೆ ಅನ್ನು?!”-ಶ್ಯಾಮಲಾ ವ್ಯಂಗ್ಯದ ನುಡಿಗಳಿಂದ ತಾಯಿಯನ್ನು ಕೆಣಕಿದಳು.

“ಶಕ್ತಿ ಇದೆಯೋ ಬಿಟ್ಟಿದೆಯೋ … ನಾವೆಷ್ಟು ಕಷ್ಟಪಟ್ಟು ಗಂಡುಮಗ ಅಂತ ಚೆನ್ನಾಗಿ ಬೆಳೆಸಿ, ಬಿ.ಇ. ಓದಿಸಿ, ಸಾವಿರಾರು ರೂಪಾಯಿ ಸಂಪಾದಿಸೋ ಅಂಥ ಹಂತಕ್ಕೆ ತಂದು ತಲುಪಿಸಿದ್ದೀವಲ್ಲ…..” ತಾಯಿಯ ಉದ್ದನೆಯ ಭಾಷಣಕ್ಕೆ ಬ್ರೇಕ್ ಹಾಕುತ್ತ ಶ್ಯಾಮಲಾ- ‘’ ಓ… ನೀನು ಗಂಡುಮಗನ್ನ ಹೆತ್ತು- ಹೊತ್ತು, ಬೆಳೆಸಿ, ಓದಿಸಿ, ಬರೆಸಿದ್ದಕ್ಕೆ ಪರಿಹಾರ ಕೇಳ್ತಾ ಇದ್ದೀಯಾ?!… ಬರೀ ಪರಿಹಾರ ಸಾಕೋ, ಅಥವಾ ಅದರ ಮೇಲೆ ಲಾಭವೂ ಬೇಕೋ? ಅಂತೂ ಮಗನ್ನ ಖರೀದಿಗೆ ಇಟ್ಟಿದ್ದೀಯಾ ಅನ್ನು… ಹೂಂ .. ನಿರಾತಂಕವಾಗಿ ನಡೀಲಿ ನಿನ್ನ ವ್ಯಾಪಾರ”- ಎಂದೆನ್ನುತ್ತ ಅವಳು ಮತ್ತೊಂದು ಗಳಿಗೆಯೂ ಅಲ್ಲಿ ನಿಲ್ಲದೆ, ಅವರ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಚ್ಛಿಸದೆ, ಮುಖ ಸಿಂಡರಿಸಿ ದಿವಾಕರನತ್ತ ಅನುಕಂಪ ನೋಟ ಸವರಿ ಅಲ್ಲಿಂದ ಧಡಧಡನೆ ಹೊರ ನಡೆದಳು.

ದಿವಾಕರನಿಗೂ ದಿನಾ ತಂದೆ – ತಾಯಿಯರ ಜಗಳ– ತಿಕ್ಕಾಟ ಕಂಡು ತಲೆಚಿಟ್ಟು ಹಿಡಿದುಹೋಗಿತ್ತು!

“ಅಮ್ಮಾ ಸಾಕಮ್ಮ…. ದಿನಾ ನಿಮ್ಮ ಜಗಳ ನೋಡೀ ನೋಡಿ ನನ್ನ ತಲೆ ಗೊಬ್ಬರ ಆಗಿಹೋಗಿದೆ… ಇದುವರೆಗೂ ಏನಿಲ್ಲಾಂದ್ರೂ ನೀವು ನನಗೆ ಐವತ್ತು-ಆರವತ್ತು ಹೆಣ್ಣುಗಳನ್ನು ನೋಡಿದ್ದೀರಾ… ಹೆಣ್ಣು ಹೆತ್ತವರ ಮನೆಗಳಿಗೆ ಹೋಗಿ ಧಂಡ್ಯಾಗಿ ಕೇಸರೀಭಾತು – ಬೋಂಡಾ – ಉಪ್ಪಿಟ್ಟು – ಬರ್ಫಿಗಳನ್ನು ಮೇಯ್ದು ಬಂದಿದ್ದೀರಾ….. ಆಮೇಲವರು ನಮ್ಮನೆಗೆ ಅಲೆದಾಡಿದ್ದೆಷ್ಟು- ಆಗ್ಬನ್ನಿ- ಈಗ್ಬನ್ನಿ ಅಂತ ನೀವು ಅವರನ್ನು ವಿನಾಕಾರಣ ಸಸ್ಪೆನ್ಸ್ ನಲ್ಲಿಟ್ಟು ತಳಮಳಗೊಳಿಸಿದ್ದೆಷ್ಟು?…ಉಹೂಂ..ನೋ.. ಐ ಡೋಂಟ್ ಲೈಕ್ ದಿಸ್… ಈ ಕನ್ಯಾವೀಕ್ಷಣೆ ನಾಟಕದ ಅಂಕ ಇನ್ನಾದ್ರೂ ಮುಗೀಲಿ.. ಮದುವೆಯಾಗೋನು ನಾನು…..ನನ್ನ ಇಷ್ಟಾನೇ ಈ ವಿಷ್ಯದಲ್ಲಿ ಕೊನೆಯದಾಗಬೇಕು.”

ದಿವಾಕರ ಎಂದೂ ಇಷ್ಟು ನಿಷ್ಠೂರವಾಗಿ ಮಾತನಾಡಿರಲಿಲ್ಲ. ಮುಖ ಗಂಟು ಹಾಕಿಕೊಂಡವನೆ ಕೈಲಿದ್ದ ಪತ್ರಿಕೆಯನ್ನು ರಪ್ಪೆಂದು ಟೀಪಾಯಿಯ ಮೇಲೆಸೆದು, ಚಪ್ಪಲಿ ಮೆಟ್ಟಿಕೊಂಡು ಬಾಗಿಲು ದಾಟಿದಾಗ,– ನಿನ್ನಿಂದ್ಲೇ ಇಷ್ಟೆಲ್ಲ ರಾದ್ಧಾಂತ ಎನ್ನುವಂತೆ ಶ್ರೀಕಂಠಯ್ಯ ಹೆಂಡತಿಯನ್ನು ನೋಟದಿಂದ ತಿವಿದರು.ರಮಾಬಾಯಿಯವರೂ ಮಗನ ಅನಿರೀಕ್ಷಿತ ನಡವಳಿಕೆಯಿಂದ ಪೆಚ್ಚಾಗಿದ್ದರು!

ಹೀಗೆ.. ವಾರ, ದಿನಗಳು ಕಳೆದರೂ ದಿವಾಕರನ ಕೋಪವಿನ್ನೂ ಆರಿರಲಿಲ್ಲ. ರಮಾಬಾಯಿಯವರಿಗೂ ಹೊಸವಧು ಪರೀಕ್ಷೆಗಳನ್ನು ಏರ್ಪಡಿಸಲು ಧೈರ್ಯವಾಗಲಿಲ್ಲ.ಆ ಸಂಜೆ- ದಿವಾಕರ ಎಂದಿಗಿಂತ ಕೆಲಸದಿಂದ ಕೊಂಚ ಬೇಗನೆ ಬಂದವನು ಉಲ್ಲಸಿತನಂತೆ ಕಂಡ ಸಡಿಲವಾದ ಅವನ ಮುಖಭಾವದಿಂದ ಉತ್ತೇಜಿತಳಾದ ಶ್ಯಾಮಲಾ, ಅಣ್ಣನನ್ನು ಕೀಟಲೆ ಮಾಡಿದಳು.

“ಅಲ್ಲ ಕಣೋ ದಿವೂ, ‘ಮದುವೆ’ ಅಂದ್ರೆ ಮೂರು ವಾರ ಮಾತು ಬಿಟ್ಟು ಬಿಡ್ತೀಯಲ್ಲ…. ನಿನಗೆ ‘ಮದುವೆ’ ಅನ್ನೋದು ಅಲರ್ಜಿಯಾಗಿದ್ರೆ ಹಾಗಂತ ಅಪ್ಪ – ಅಮ್ಮನಿಗೆ ನೇರವಾಗಿ ಹೇಳಿಬಿಡು, ಆ ವಿಷ್ಯ ಮರ್ತು ಬಿಡಿ ಅಂತ… ಮತ್ತೆ ನೀನು ಮರೆತು ಹೆಣ್ಣಿನ ಮುಂದೆ ಕೂತ್ಯೋ, ಇವರು ಭೈರಿಗೆ ಕೊರೆಯೋದಂತೂ ಗ್ಯಾರಂಟಿ”ಶ್ಯಾಮಲಾ ಕಿಸಕ್ಕನೆ ನಕ್ಕಾಗ, ದಿವಾಕರ ಇಂದು ಮುಖ ಕಿವುಚಲಿಲ್ಲ. ಬದಲಾಗಿ ನಗುತ್ತ- ‘’ನಾಟಟಾಲ್… ಇನ್ಮುಂದೆ ಅದಕ್ಕೆ ಅವಕಾಶವೇ ಇರಲ್ಲ… ಯಾಕಂದ್ರೆ ನಾನೇ ಒಂದು ಹುಡುಗೀನ ಆರಿಸಿಕೊಂಡಿದ್ದೀನಿ”-ಎಂದು ನುಡಿದ ಮುಖ ಕೆಂಪಾಗಿಸಿಕೊಂಡು.

ತಟ್ಟನೆ ರಮಾಬಾಯಿಯ ಕಿವಿ ಚುರುಕಾಯಿತು! ಶ್ರೀಕಂಠಯ್ಯನವರೂ ಕೂಡ ತಾವು ಗಾಢವಾಗಿ ತಲ್ಲೀನರಾಗಿದ್ದ ಪೇಪರನ್ನು ಬದಿಗಿಟ್ಟು ಮಗನತ್ತ ಅಚ್ಚರಿಯ ನೋಟ ತುಳುಕಿಸಿದರು.ಮುಖದಲ್ಲಿ ಕುತೂಹಲ ಗಿಜಿಗುಡುತ್ತಿತ್ತು.

“ಹುಡುಗಿಯ ಮನೆಯವರು ಅನುಕೂಲವಂತರು ತಾನೇ?”-ತಾಯಿ ಕುತೂಹಲದಿಂದ ಅವನತ್ತ ಮತ್ತಷ್ಟೂ ಚಿಮ್ಮಿ ಸರಿದರು.“ಹುಡುಗಿ ತಂದೆ ಏನ್ಮಾಡ್ತಿದ್ದಾರೆ?”- ತಂದೆ-ತಾಯಿಯರ ಪ್ರಶ್ನೆಗಳಿಗೆ ದಿವಾಕರ ಸಾವಕಾಶವಾಗಿ ಉತ್ತರಿಸುತ್ತ ಸಮಾಧಾನದಿಂದ ನುಡಿದ.

“ಹುಡುಗಿ ತಂದೆ, ಎಕ್ಸೈಸ್ ಡಿಪಾರ್ಟ್‍ಮೆಂಟಿನಲ್ಲಿ ಡೆಪ್ಯುಟಿ ಕಮೀಷನರ್ರು, ಒಬ್ಬಳೇ ಮಗಳು… ಎಂ. ಎಸ್ಸಿ ಓದಿದ್ದಾಳೆ… ಬಂಗಲೆ.. ಕಾರು… ಆಸ್ತಿಪಾಸ್ತಿ… ಚಿನ್ನ ಬೆಳ್ಳಿ – ಹಣ ಎಲ್ಲ ಬೇಕಾದ ಹಾಗಿದೆ”

“ಅಯ್ಯೋ ದಡ್ಡಮುಂಡೇದೇ… ಮೊದ್ಲೇ ಯಾಕೋ ಈ ವಿಷ್ಯ ಹೇಳಲಿಲ್ಲ?… ನಾವೂ ಸುಮ್ನೇ ಯಾರ್ಯಾರ್ನೋ ನೋಡಿ ಕಂಠಶೋಷಣೆ ಮಾಡಿಕೊಂಡೆವಲ್ಲ?” – ಎನ್ನುವ ರಮಾಬಾಯಿ ಹಿಗ್ಗಿನಿಂದ ಮುಖವರಳಿಸಿ ನುಡಿದಾಗ, ಅವರಿಗಾದ ಸಂತಸದ ಎಲ್ಲೆ ಎರಡೂ ಕಿವಿಗಳವರೆಗೆ ಹರಡಿತ್ತು.ಶ್ರೀಕಂಠಯ್ಯನವರ ಮೊಗವೂ ಕಾದ ಎಣ್ಣೆಗೆ ಹಾಕಿದ ಉದ್ದಿನ ಹಪ್ಪಳದಂತಾಗಿತ್ತು!

“ನೀನೊಪ್ಪಿದ ಮೇಲೆ ಹುಡುಗಿ ಮುದ್ದಾಗಿದ್ದೇ ಇರ್ತಾಳೆ… ಏನಾದ್ರಾಗಲಿ, ಸಂಪ್ರದಾಯ ಬಿಡಕ್ಕಾಗಲ್ಲ… ಅವಳ ತಂದೆಗೆ ಜಾತಕ ತೊಗೊಂಡು, ಮೊದ್ಲು ಮನೆಗೆ ಬರಕ್ಕೆ ಹೇಳಪ್ಪ… ಆಮೇಲೆ ಹುಡುಗೀನ ನೋಡಿದ ಶಾಸ್ತ್ರ ಮುಗಿಸೋಣ”-ಆತನ ದನಿಯಲ್ಲಿ ಸಂತಸ – ಗೆಲುವು ಕುಣಿಯುತ್ತಿತ್ತು. ತಂದೆಯ ಮಾತು ಕೇಳುತ್ತಿದ್ದ ಹಾಗೆ ದಿವಾಕರನ ಮೊಗ ಅರಕ್ತವಾಯಿತು. ದನಿ ಗಂಟಲಲ್ಲೇ ಹೂತು ಹೋಯಿತು.

ರಮಾಬಾಯಿ ಸಂಭ್ರಮದಿಂದ – “ಹುಡುಗಿ ಹೆಸರು ಏನೋ ದಿವೂ?… ಅವರು ಯಾವ ಕಡೆಯವರಂತೆ?” -ಎಂದು ಕೇಳಿದಾಗ ದಿವಾಕರನ ಹಣೆಯ ಮೇಲೆ ಬೆವರಬಿಂದುಗಳು ಕಾಣಿಸಿಕೊಂಡವು!

ತಂದೆ ತಾಯಿಗಳ ನೇರ ನೋಟ ತಪ್ಪಿಸಿ, ಅವನು ಎತ್ತಲೋ ನೋಡುತ್ತ ತಗ್ಗಿದ ಸ್ವರದಲ್ಲಿ ನುಡಿದ:

“ಹುಡುಗೀ ಹೆಸರು ಫರೀದಾಬಾನು – ಅವಳಪ್ಪನ ಹೆಸರು ಅಬ್ದುಲ್ ಷಫಿ!…”ರಮಾಬಾಯಿ ಮೆಟ್ಟಿಬಿದ್ದರು!

ಶ್ರೀಕಂಠಯ್ಯನವರ ಮುಖಭಾವ ಒಮ್ಮೆಲೆ ವಿಕಾರವಾಗಿ- ”ಏ ಏನೋ ನೀನು ಹೇಳ್ತಿರೋದು?”- ಎಂದು ಕೋಪದಿಂದ ಅರಚಿದರು.

ದಿವಾಕರ ಅಷ್ಟೇ ತಣ್ಣಗೆ ಉತ್ತರಿಸಿದ:“ಹೌದಪ್ಪ, ಫರೀದಾ ನನ್ನ ಫ್ರೆಂಡ್ ಕಸಿನ್ನು… ತುಂಬಾ ಒಳ್ಳೆ ಹುಡುಗಿ… ನಾನವಳನ್ನ ಮೆಚ್ಕೊಂಡಿದ್ದೀನಿ… ನೀವು ಒಪ್ಪಿದರೆ ನನ್ನ ಮದುವೆ ನಡೆಯುತ್ತೆ… ಇಲ್ಲದಿದ್ರೆ ನಾನು ಆಜನ್ಮ ಬ್ರಹ್ಮಚಾರಿ”-ಎಂದೆನ್ನುತ್ತ ದಿವಾಕರ, ಅವರಿಗೆ ಮುಂದೆ ಮಾತನಾಡಲವಕಾಶ ಕೊಡದೆ ಮೇಲೆದ್ದು ತನ್ನ ಕೋಣೆ ಸೇರಿಕೊಂಡ.

ಮಗನ ನಿರ್ಧಾರವನ್ನು ಕೇಳಿ ಗರಬಡಿದು ನಿಂತ ರಮಾಬಾಯಿಯ ಕಣ್ಣಕೆರೆಗಳು ಧುಡುಮ್ಮನೆ ತುಂಬಿಕೊಂಡವು.

“ಅಯ್ಯೋ ದೇವ್ರೇ… ಎಂಥ ಗತಿ ತಂದಿಟ್ಯಪ್ಪ ನಮಗೆ?… ಶಾಸ್ತ್ರ, ಸಂಪ್ರದಾಯ ಕಟ್ಟುನಿಟ್ಟಾಗಿ ಆಚರಿಸೋ ಮನೇಲಿ ಎಂಥ ಬಿರುಗಾಳಿ ಎಬ್ಬಿಸಿ ಬಿಟ್ಯಲ್ಲಪ್ಪ…”ಎಂದಾಕೆ ಬಾಯಿಗೆ ಸೆರಗು ತುರುಕಿಕೊಂಡು ಬಿಕ್ಕಳಿಸಿದರು. ಶ್ರೀಕಂಠಯ್ಯನವರಿಗೆ ನಾಲಗೆ ಲಕ್ವ ಹೊಡೆದಂತಾಗಿತ್ತು!ಮನೆಯೊಳಗೆ ಕ್ಷಣಾರ್ಧದಲ್ಲಿ ಸ್ಮಶಾನಮೌನ ತುಂಬಿಕೊಂಡಿತು.

ರಾತ್ರಿಯಿಡೀ ರಮಾಬಾಯಿಯ ಎದೆಯಲ್ಲಿ ತುಫಾನು!… ರೆಪ್ಪೆಗೆ ರೆಪ್ಪೆ ಕೂಡಲಿಲ್ಲ… ಒಂದೇ ಸಮನೆ ಯೋಚನೆ ಮಾಡಿ ಕಂಗೆಟ್ಟರು.ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡುತ್ತಿದ್ದ ಶ್ರೀಕಂಠಯ್ಯನವರೂ ವಿಕ್ಷಿಪ್ತರಾಗಿದ್ದರು. ಮಠದ ಸ್ವಾಮಿಗಳ ಖಾಸಾ ಶಿಷ್ಯರಾದ ತಾವು ಮುಂದೆ ತಲೆಯೆತ್ತಿ ತಿರುಗುವುದಾದರೂ ಹೇಗೆಂಬ ಚಿಂತೆ ಅವರ ತಲೆಯನ್ನು ಕೊರೆಯುತ್ತಿತ್ತು.ಭಾವೀಸೊಸೆಯ ಆಗಮನದ ಕಲ್ಪನೆಯಿಂದ ದಂಪತಿಗಳಿಬ್ಬರೂ ನಡುಗಿ ಹೋಗಿದ್ದರು! ಆದರೆ ದಿವಾಕರ ಮಾತ್ರ ಬಂಡೆಯಂತೆ ಅಚಲನಾಗಿದ್ದ!…ತಂದೆ-ತಾಯಿಯರಲ್ಲಾಗುತ್ತಿದ್ದ ಹೊಯ್ದಾಟ ಗಮನಿಸಿಯೂ ಅವನು ಮೆತ್ತಗಾಗಲಿಲ್ಲ.ರಮಾಬಾಯಿ ಮಾತ್ರ ಮೌನದ ಮುದ್ದೆಯಾಗಿದ್ದ ಮಗನ ಮುಂದೆ ಮಕ್ಕಳಂತೆ ಅತ್ತು ಅಲವತ್ತುಕೊಂಡರು.

“ನೀನು ಜಾತಿಯಲ್ಲದ ಜಾತಿ ಮನೆ ಹುಡುಗೀನ , ಮದುವೆಯಾದರೆ ನಿನ್ತಂಗೀನ ಯಾರಪ್ಪ ಮದುವೆ ಮಾಡ್ಕೋತಾರೆ ದಿವೂ?… ನಿನ್ನಿಂದ ಅವಳ ಭವಿಷ್ಯಾನೇ ಮಣ್ಣುಗೂಡಿ ಹೋಗತ್ತೆ… ಯೋಚ್ನೆ ಮಾಡಿ ನೋಡು”ಹಿಂದೆಂದೂ ಮಣಿಯದಿದ್ದಷ್ಟು ಮೆತ್ತಗಿನ, ದುಃಖದಲ್ಲಿ ಅದ್ದಿ ತೆಗೆದ ಸ್ವರದಲ್ಲಿ ಆಕೆ ಅವನನ್ನು ಬೇಡಿಕೊಂಡರು. ತಂದೆಯೂ ದೈನ್ಯದ ಪ್ರತಿರೂಪವಾಗಿದ್ದರು!

“ನಾವೇನೋ ಆಸ್ತಿ – ಅಂತಸ್ತು ಅಂತ ಆಸೆಪಟ್ಟಿದ್ದು ನಿಜಾಪ್ಪ ದಿವೂ.. ಆದ್ರೆ ಈಗ ನಮ್ಮ ಮಾನ, ಮರ್ಯಾದೆ ಉಳಿದರೆ ಸದ್ಯ ಸಾಕಾಗಿದೆಯಪ್ಪ.. ನಮ್ಮಾಸೆಗೆ ಬೆಂಕಿ ಬಿತ್ತು… ಲಕ್ಷಣವಾಗಿ ನಮ್ಮ ಜನದ ಹುಡುಗಿ, ಬಡವಳೋ – ಶ್ರೀಮಂತಳೋ ನಮ್ಮನೆ ದೀಪವಾಗಿ ಬಂದು ಬೆಳಗಿದರೆ ಸಾಕು… ವಂಶೋದ್ಧಾರಕ ನೀನು ನಮಗೆ ಸತ್ತ ಮೇಲೆ ಒಂದು ಹಿಡಿ ಕೂಳು – ಪಿಂಡ ಹಾಕಿ ತಿಥಿ – ಮಥಿ ಮಾಡಬೇಡ್ವೇನೋ ?”

ದಿವಾಕರನಿಗೆ ತಂದೆಯ ದೈನ್ಯತೆ ಕಂಡು ಪಿಚ್ಚೆನಿಸಿ ಹೃದಯ ಆರ್ದ್ರವಾಗತೊಡಗಿತು. ತಾಯಿ, ಹಿಂದೆಂದೂ ಕಾಣದಷ್ಟು ಕುಬ್ಜರಾಗಿ, ನಾದಿದ ಹಿಟ್ಟಿನಂತೆ ಮೆತ್ತಗಾಗಿ ಅವನೆದುರು ದೀನರಾಗಿ ನಿಂತಿದ್ದರು.

ಶ್ಯಾಮಲಾ ಕೂಡಾ – “ಅಣ್ಣಾ ಪ್ಲೀಸ್… ಹೆತ್ತ ತಂದೆ ತಾಯಿಗಳನ್ನು ಇಷ್ಟು ನೋಯಿಸಬಾರ್ದು ನೋಡು.. ನಮ್ಮನೆ ನೆಮ್ಮದಿಯನ್ನು ಕದಡಬೇಡಣ್ಣಾ…” ಎಂದು ಹನಿದುಂಬಿದ ಕಣ್ಣುಗಳಿಂದ ಕೇಳಿಕೊಂಡಾಗ, ದಿವಾಕರ ಕೊಂಚ ಮೃದುವಾದರೂ, “ನನಗೆ ಯೋಚ್ನೆ ಮಾಡಕ್ಕೆ ಒಂದು ವಾರ ಟೈಂ ಕೊಡಿ” ಎಂದು ಗಡುವು ಕೇಳಿದಾಗ, ರಮಾಬಾಯಿಯ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಉಸಿರು ಕೊಂಚ ಸಡಿಲವಾಯಿತು.

ವಾರ… ಏಳುದಿನಗಳು ಕಳೆಯುವಷ್ಟರಲ್ಲಿ ಆಕೆ ಹತ್ತುವರ್ಷ ಹೆಚ್ಚಾದಷ್ಟು ಮುಪ್ಪಾಗಿದ್ದರು.. ಮಗ ಏನೆಂದು ನಿರ್ಧಾರ ತೆಗೆದುಕೊಳ್ಳುವನೋ ಎಂಬ ಆತಂಕ, ಹೆದರಿಕೆಗಳು ಆಕೆಯನ್ನು ಕುಕ್ಕಿ ಹಾಕಿದ್ದವು.ಸದ್ಯ ಅವನ ಮನದಿಂದ ಆ ಹೆಣ್ಣು ಮರೆಯಾದರೆ ಸಾಕೆಂದು ಬೇಡಿಕೊಂಡು ರಾಯರಿಗೆ ತುಪ್ಪದ ದೀಪ ಹಚ್ಚಿಟ್ಟು ಮುಡಿಪು ಕಟ್ಟಿಟ್ಟಿದ್ದರು.ಅವರ ಪಾಲಿಗೆ ಯುಗದಷ್ಟು ದೀರ್ಘವೆನಿಸಿದ್ದ ವಾರದ ಅವಧಿ ಅಂತೂ ಮುಗಿದಿತ್ತು.ದಿವಾಕರ ಅಂದು ತನ್ನ ನಿರ್ಧಾರವನ್ನು ಹೊರಗೆಡಹುವವನಿದ್ದ.ಶ್ರೀಕಂಠಯ್ಯನವರ ಎದೆಯೂ ಪುಕಪುಕ ಎನ್ನುತ್ತಿತ್ತು.

ದಿವಾಕರ, ದೀರ್ಘಾಲೋಚನೆಯಲ್ಲಿ ಮುಳುಗಿದವನಂತೆ ತಲೆಬಾಗಿಸಿ ಕುಳಿತಿದ್ದ. ಅವನ ಮೇಲೆ ಪ್ರಭಾವ ಬೀರುವಂತೆ, ಅವನ ಹತ್ತಿರಕ್ಕೆ ಸರಿದು ಅನುನಯ ಸ್ವರದಲ್ಲಿ ರಮಾಬಾಯಿ–‘’ಹೆತ್ತವರ ಮನಸ್ಸನ್ನು ನೀನು ನೋಯಿಸೋದಿಲ್ಲಾಂತ ನಂಗೆ ಗೊತ್ತು ಕಣೋ ದಿವೂ… ಅದು ನಿನಗೆ ಶ್ರೇಯಸ್ಸೂ ಅಲ್ಲ… ಬೇಕಾದ್ರೆ ನಾನು ಇಷ್ಟಪಟ್ಟಿರೋ ಶ್ರೀಮಂತರ ಮನೆ ಸಂಬಂಧ., ನಿಮ್ಮಪ್ಪ ಪಟ್ಟು ಹಿಡಿದಿರೋ ಎಂ. ಡಿ. ಮಗಳನ್ನು ನೀನು ಒಪ್ಪಿಕೊಳ್ಳದಿದ್ರೂ ಬೇಡ.. ಆದ್ರೆ ದಯವಿಟ್ಟು ನಮ್ಮ ಮನೆತನದ ಹೆಸರಿಗೆ ಮಾತ್ರ ಮಸಿ ಹಚ್ಚಬೇಡಪ್ಪ.. ಅವಳೊಬ್ಬಳನ್ನ ಬಿಟ್ಟು ನಾವು ನೋಡಿರೋ ಹುಡುಗೀರಲ್ಲಿ, ಯಾವ ವರದಕ್ಷಿಣೆ- ವರೋಪಚಾರ ಆಡಂಬರದ ಮದುವೇನೂ ಮಾಡಿಕೊಡಲು ಶಕ್ತರಲ್ಲದ ಆ ಗುಮಾಸ್ತನ ತಂಗಿ ಮಂದಾಕಿನಿಯನ್ನು ಬೇಕಾದ್ರೆ ಒಪ್ಕೋ, ನಾವು ಸಂತೋಷವಾಗಿ ಮನೆ ತುಂಬಿಸ್ಕೋತೀವಿ.. ಆದರೆ.. ಈ ಹುಡುಗಿ ಮಾತ್ರ….”-ಎನ್ನುವಷ್ಟರಲ್ಲಿ ಆಕೆಯ ಕಂಠ ಬಿಗಿದುಬಂದಿತ್ತು.

ತಾಯಿಯ ಕಣ್ಣೀರನ್ನು ಇನ್ನೊಂದು ಕ್ಷಣವೂ ವೀಕ್ಷಿಸಲಾರದ ದಿವಾಕರ, ತಟಕ್ಕನೆ ಆಕೆಯ ಕೈಹಿಡಿದುಕೊಂಡು – ‘’ನೀನು ಕಣ್ಣಲ್ಲಿ ನೀರು ಮಾತ್ರ ಹಾಕಬೇಡಮ್ಮ ಪ್ಲೀಸ್.. ನಿನ್ನ ಇಷ್ಟದಂತೆ ಆಗಲಿ.. ಆ ಮಂದಾಕಿನಿಯನ್ನೇ ಮದುವೆಯಾಗ್ತೀನಿ”- ಎಂದಾಗ ರಮಾಬಾಯಿಗೆ ಸ್ವರ್ಗಕ್ಕೆರಡೇ ಗೇಣು! ಮಗನನ್ನು ಎದೆಗಪ್ಪಿಕೊಂಡು ಆಕೆ ಆನಂದ ತುಂದಿಲರಾಗಿ- “ನೂರ್ಕಾಲ ತಣ್ಣಗಿರು ನನ್ನ ಕಂದ” ಎಂದು ಹರಸಿ, ರಾಯರಿಗೆ ತುಪ್ಪದ ದೀಪ ಬೆಳಗಲು ದೇವರ ಮನೆಯತ್ತ ಧಾವಿಸಿದರು.ಶ್ರೀಕಂಠಯ್ಯನವರಿಗೂ ಕಂಠ ಹೊಮ್ಮಿ ಬಂದು ಕಣ್ಣಲ್ಲಿ ಬಳಬಳನೆ ನೀರು ! ಶ್ಯಾಮಲ ಕೃತಜ್ಞತೆಯಿಂದ ಮೌನವಾಗಿ ಅಣ್ಣನ ಕೈ ಕುಲುಕಿ, ಒಳಗೆ ಓಡಿ ಹೋಗಿ ಒಂದು ಹಿಡಿ ಸಕ್ಕರೆ ತಂದು ಅವನ ಬಾಯಿಗೆ ತುರುಕಿದಳು.

ಉಸಿರುಗಟ್ಟಿಸಿದ್ದ ವಾತಾವರಣ ಕ್ಷಣಾರ್ಧದಲ್ಲಿ ಹಗುರವಾಯಿತು. ಒಡನೆಯೇ ಅವಳಿಗೆ, ತನ್ನಂತೆ ಇನ್ನೊಬ್ಬ ಹೆಣ್ಣಾದ ಫರೀದಾಳ ಬಗ್ಗೆ ಅಂತಃಕರಣ ಕದಡಿ, ದಿವಾಕರನನ್ನು ಎಬ್ಬಿಸಿಕೊಂಡು ಹೊರಗೆ ಕರೆದುತಂದು – ಅನುತಾಪದಿಂದ – “ಎಲ್ಲಾ ಸರಿ ಕಣೋ .. ಆದರೆ ಪಾಪ, ನಿನ್ನನ್ನೇ ನಂಬಿಕೊಂಡಿರೋ ಆ ಫರೀದಾಳಿಗೆ ಈಗ ಏನು ಹೇಳ್ತೀಯಣ್ಣ?”-ಎಂದು ಕಳಕಳಿಯಿಂದ ಕೇಳಿದಳು.

ದಿವಾಕರನ ಅರಳಿದ ಮೊಗದ ಮೇಲೆ ತೆಳುವಾದ ಮಂದಹಾಸವೊಂದು ಮಿನುಗಿತು!

“ಆ್ಞ… ಫರೀದಾ?!… ಹ್ಹೂಂ… ಅವಳಿಗಾ?… ಹೌದು ಅವಳಿಗೆ ಏನು ಹೇಳೋದು?..” ಎಂದು ಗಾಢವಾಗಿ ಆಲೋಚಿಸಿದವನಂತೆ ನಟಿಸುತ, ತಂಗಿಯ ಬೆನ್ನ ಮೇಲೊಂದು ಜೋರು ಗುದ್ದು ಹಾಕಿ ನಕ್ಕ.

“ಫರೀದಾ?!.. ಹೂಂ…ಅವಳು ಇದ್ರಲ್ವೇನೇ, ಅವಳಿಗೆ ಹೇಳೋಕ್ಕೆ”

ದಿವಾಕರನ ಗೆಲುವಿನ ನಗೆಯಲೆ ಪುಂಖಾನುಪುಂಖವಾಗಿ ಸುತ್ತ ಹರಡಿತು.

Related posts

ಕ್ಷಮೆ

YK Sandhya Sharma

ಗುದ್ದು

YK Sandhya Sharma

ಹಾವಸೆ

YK Sandhya Sharma

Leave a Comment

This site uses Akismet to reduce spam. Learn how your comment data is processed.