Image default
Dancer Profile

ಅನುಪಮ ಕಥಕ್ ನರ್ತಕಿ ಅಂಜನಾ ಗುಪ್ತಾ

ನೃತ್ಯ, ಅನ್ವೇಷಣೆಯ ಪಯಣ ಎಂದು ನಂಬಿರುವ ಕಥಕ್ ನೃತ್ಯ ಕಲಾವಿದೆ ಅಂಜನಾ ಗುಪ್ತಾ, ಕಾಯಾ-ವಾಚಾ-ಮನಸಾ ಧ್ಯಾನಿಸುವುದು ನೃತ್ಯವನ್ನೇ. ಇದು ಅವರಿಗೆ ಸಾಧ್ಯವಾದುದು ಬಹು ಪರಿಶ್ರಮದ ಸಾಧನೆಯಿಂದ. ಕಲಿಯಲೇಬೇಕೆಂಬ ಹಂಬಲದಿಂದ. ಅದೂ ಒಲಿದದ್ದು ಆಕಸ್ಮಿಕ. ವಯಸ್ಸು ಯಾವುದಕ್ಕೂ ಅಡ್ಡಿಯಲ್ಲ, ಮಿತಿಯೂ ಅಲ್ಲ.

        ದೆಹಲಿಯಲ್ಲಿ ಜನಿಸಿದ ಅಂಜನಾಳ ತಂದೆ ಚಂದ್ರಕುಮಾರ್ ಗೋಯಲ್ ಮತ್ತು ತಾಯಿ ಸುಶೀಲಾ. ಸಾಂಪ್ರದಾಯಕ ಕುಟುಂಬ. ಅಂಜನಾ ಬಾಲ್ಯ, ಓದು ಎಲ್ಲ ಸಾಗಿದ್ದು  ಚೆನ್ನೈನಲ್ಲಿ. ನೃತ್ಯ ಕಲಿಯುವ ಬಗ್ಗೆ ಅದಮ್ಯ ಆಸೆಯಿದ್ದರೂ ಬಾಲಕಿ ಅಂಜನಾಗೆ ಹಿರಿಯರ ತಡೆಯಿಂದ ನಿರಾಸೆಯಾಯಿತು. ಕಲೆಯ ಬಗ್ಗೆ ಯಾವ ಪ್ರೋತ್ಸಾಹವೂ ಮೆಚ್ಚುಗೆಯೂ ಇಲ್ಲದ ಪರಿಸರ. ಆದರೂ ನೃತ್ಯದ ಧ್ಯಾನ ಬಿಡಲಿಲ್ಲ. ಓದಿನಲ್ಲಿ ಜಾಣೆಯಾಗಿದ್ದವಳು ಉತ್ತಮಾಂಕಗಳನ್ನು ಪಡೆದು ಎಂ.ಕಾಂ. ಸ್ನಾತಕೋತ್ತರ ಪದವೀಧರೆಯಾದಳು. ಮದುವೆಯೂ ಆಯ್ತು. ಬೆಂಗಳೂರಿಗೆ ಬಂದನಂತರ ಆಕೆಯ ಜೀವನಪಥವೇ ಬದಲಾಯಿತು. ಅನಿರೀಕ್ಷಿತ ತಿರುವು. ಜೀವನಗುರಿ ಹುರಿಗೊಂಡಿತು.

ಅಂಜನಾ, ತಮ್ಮ ಆರುವರ್ಷದ ಮಗಳು ಶ್ರುತಿಯನ್ನು ಕಥಕ್ ಗುರು ಚಿತ್ರ ವೇಣುಗೋಪಾಲ್ ಅವರ ಬಳಿ ಕಥಕ್ ನೃತ್ಯ ಕಲಿಯಲು ಪ್ರತಿದಿನ ಕರೆದುಕೊಂಡು ಹೋಗುತ್ತಿದ್ದ ದಿನಗಳು…ಅಂಜನಳ ಹೆಜ್ಜೆಗಳು ಲಯದ ಮಿಡಿತದಲ್ಲಿ ಮಿಸುಕಾಡಿದರೆ, ಮನದಾಳದ ಬಯಕೆ ಗರಿಗೆದರಿತು. ಕೂಡಲೇ ತಾಯಿ, ಮಗಳ ಜೊತೆ ಚಿತ್ರಾರ ವಿದ್ಯಾರ್ಥಿನಿಯಾಗಿ ಕಥಕ್ ಕಲಿಯಲಾರಂಭಿಸಿದರು. ಆಗವರ ವಯಸ್ಸು ಇಪ್ಪತ್ತೊಂಭತ್ತು. ನಿಷ್ಠೆಯ ಕಲಿಕೆ. ಪರಿಶ್ರಮದ ನೃತ್ಯಾಭ್ಯಾಸ ಸತತ ಏಳು ವರ್ಷಗಳು.ಇದು ಇಷ್ಟಕ್ಕೇ ನಿಲ್ಲಲಿಲ್ಲ. ಕೊರಿಯಾಗ್ರಫಿಯಲ್ಲಿ ಬಿ.ಎ.ಪದವಿ ಪಡೆಯುವವರೆಗೂ ಮುಂದುವರಿಯಿತು. ಭಾರತೀಯ ವಿದ್ಯಾ ಭವನದಲ್ಲಿ ಸೀನಿಯರ್ ಡಿಪ್ಲೊಮಾ ಮುಗಿಸಿದರು. ಗುರುಗಳ ಮಾರ್ಗದರ್ಶನದಲ್ಲಿ ನೃತ್ಯ ಪ್ರದರ್ಶನ ಕೊಡಲಾರಂಭಿಸಿದವರು ಭಾರತೀಯ ವಿದ್ಯಾ ಭವನದ ‘ಭವನೋತ್ಸವ’ಗಳಲ್ಲಿ ಪ್ರತಿವರ್ಷ ಸತತವಾಗಿ ಭಾಗಿಯಾಗುತ್ತ ಬಂದಿರುವುದು ವಿಶೇಷ. ಖ್ಯಾತ ಕಥಕ್ ಗುರು ಮಾಯಾರಾವ್ ಅವರ ಮಾರ್ಗದರ್ಶನದಲ್ಲಿ  ಗಂಗಾ ಆವರ್ತನ್, ಆಜೀಜಾನ್, ಹಾಸ್ಯ ಚೂಡಾಮಣಿ ಮತ್ತು ಕಾಲಿಂಗ್ ಆಫ್ ಮದರ್ ಅರ್ಥ್ ಇವರ ನೃತ್ಯ ಸಂಯೋಜಿತ ಸುಂದರ ನೃತ್ಯರೂಪಕಗಳು.

ಅದಮ್ಯ ಉತ್ಸಾಹದ ಕಲಾವಿದೆಯಾದ ಅಂಜನಾ, ಕರ್ನಾಟಕ ರಾಜ್ಯ ಮಂಡಳಿಯ ಕಥಕ್ ವಿದ್ವತ್ ಪರೀಕ್ಷೆಯಲ್ಲಿ ಜಯಶೀಲರಾಗಿ ಖೈರಾಗರ್ ವಿಶ್ವವಿದ್ಯಾಲಯದಿಂದ ಕಥಕ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಹೆಮ್ಮೆ ಇವರದು. ದೂರದರ್ಶನದ ‘’ಎ’’ ಗ್ರೇಡ್ ಕಲಾವಿದೆ. ಐ.ಸಿ.ಸಿ.ಆರ್. ಮತ್ತು ಸಂಸ್ಕೃತಿ ಇಲಾಖೆಯ ಅನೇಕ ಕಾರ್ಯಕ್ರಮಗಳಲ್ಲಿ ನರ್ತಿಸಿದ್ದಾರೆ.  ಇವಲ್ಲದೆ, ಅನೇಕ ದೇವಾಲಯಗಳಲ್ಲಿ ನೃತ್ಯ ಸೇವೆ ಸಲ್ಲಿಸಿದ್ದಾರೆ. ದೇಶಾದ್ಯಂತ ಎಲ್ಲೆಡೆ ನೃತ್ಯ ಪ್ರದರ್ಶನಗಳನ್ನು ನೀಡಿ ರಸಿಕರ ಗಮನ ಸೆಳೆದಿದ್ದಾರೆ.

ಅಂಜನಾರ ನೃತ್ಯಾಭೀಪ್ಸೆ ತಮ್ಮದೇ ಆದ ‘ಸಮರ್ಪಣ್ ಅಸೋಸಿಯೇಶನ್ ಫರ್ ಕಲ್ಚರ್ ಅಂಡ್ ಎಜ್ಯುಕೇಶನ್’ ಎಂಬ ಅರ್ಥಪೂರ್ಣ ಹೆಸರಿನ ಕಥಕ್ ಡಾನ್ಸ್ ಅಕಾಡೆಮಿ ‘’ಸ್ಪೇಸ್’ ನೃತ್ಯಶಾಲೆಯ ಸ್ಥಾಪನೆಗೆ ಕಾರಣವಾಯಿತು. ಇನ್ನೇನು ದಶಕ ಕಾಣುತ್ತಿರುವ ‘ಸ್ಪೇಸ್’ ನ ಸಂಸ್ಥಾಪಕ ನಿರ್ದೇಶಕಿಯಾಗಿ ಇಂದು ನೂರಾರು ಮಕ್ಕಳಿಗೆ ಕಥಕ್ ನೃತ್ಯ ಶಿಕ್ಷಣ, ಸಮಗ್ರ ತರಬೇತಿಯನ್ನು ಬದ್ಧತೆಯಿಂದ ನೀಡುವ ಸಮರ್ಥ ಗುರುವಾಗಿದ್ದಾರೆ ಅಂಜನಾ. ಇದರಲ್ಲಿ ಕಲಾತ್ಮಕತೆ, ಸೌಂದರ್ಯ ಮತ್ತು ಸೃಜನಾತ್ಮಕತೆಯ ಪ್ರಯೋಗ ದೃಷ್ಟಿ ಪ್ರಮುಖವಾಗಿವೆ.

ಪ್ರತಿವರ್ಷ ಈಕೆ, ತಮ್ಮ ಅಕಾಡೆಮಿಯ ಮೂಲಕ ‘ಸ್ಪೇಸ್ ಕಥಕ್ ನೃತ್ಯೋತ್ಸವ’ ವನ್ನು ನಡೆಸಿಕೊಂಡು ಬರುತ್ತಿದ್ದು, ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸುವುದು ಇವರ ಮುಖ್ಯ ಆಶಯ. ಈಗಾಗಲೇ ಕಥಕ್ ಸರಿತಾ, ಕೃಷ್ಣಮಯಿ , ಸಮರ್ಪಣ್, ಖೋಜ್, ಬೀಬಿ ನಾಚಿಯಾರ್, ಏಕತ್ವ ಮುಂತಾದ ಅನೇಕ ವಿಶಿಷ್ಟ ಕಥಾರೂಪಕಗಳ ಪ್ರಸ್ತುತಿಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಇದರೊಡನೆ ಅನೇಕ ಉಪಯುಕ್ತ ಪ್ರಾತ್ಯಕ್ಷಿಕೆಗಳು , ಉಪನ್ಯಾಸ ಹಾಗೂ  ಕಾರ್ಯಾಗಾರಗಳನ್ನು ತಜ್ಞರಿಂದ ಏರ್ಪಡಿಸುತ್ತ, ಕಥಕ್ ನೃತ್ಯ ಶೈಲಿಯ ಬಗ್ಗೆ ಹೆಚ್ಚಿನ ಜ್ಞಾನ ಪ್ರಸಾರ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾರೆ.  ಜೊತೆಗೆ ಇವರ ಅನೇಕ ಮಂದಿ ವಿದ್ಯಾರ್ಥಿಗಳು ಕಥಕ್ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಉನ್ನತಿ ಪಡೆದಿದ್ದಾರೆ. ರವೀಂದ್ರ ವಿಶ್ವವಿದ್ಯಾನಿಲಯದ ಅಂಗಸಂಸ್ಥೆ  (ಅಫಿಲಿಯೇಟ್ ) ಆಗಿರುವ ‘ಸ್ಪೇಸ್’ ಇಂದು ಜಾಗತಿಕ ಮಟ್ಟದಲ್ಲಿ ಖ್ಯಾತವಾಗಿದ್ದು, ಸಿ.ಐ.ಡಿ ಫಾರ್ ಇಂಟರ್ವೆಂಷನಲ್ ಸರ್ಟಿಫಿಕೇಶನ್ ಗೆ ಸದಸ್ಯತ್ವ ಪಡೆದಿದೆ.

ವಿವಾಹಾನಂತರ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡು ಸಾಧನೆಯ ಪಥದಲ್ಲಿ ನಡೆಯುತ್ತಿರುವ ಅಪೂರ್ವ ಕಲಾವಿದೆ ಅಂಜನಾರ ಸಂಪೂರ್ಣ ಪ್ರಗತಿಗೆ ಕಾರಣಕರ್ತ ಆಕೆಯ ಪತಿ ಸುನೀಲ್ ಗುಪ್ತ ಅವರು. ತಮ್ಮೆಲ್ಲ ಕ್ರಿಯಾತ್ಮಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿರುವ ಪತಿಯ ಬಗ್ಗೆ ಈಕೆಗೆ ಅಪಾರ ಕೃತಜ್ಞತೆ. ಮಗಳು ಶ್ರುತಿ ಕೂಡ ಉತ್ತಮ ಕಥಕ್ ನೃತ್ಯ ಕಲಾವಿದೆ. ಕಥಕ್ ನಲ್ಲಿ ಪಿ.ಹೆಚ್.ಡಿ. ಮಾಡುತ್ತಿದ್ದಾಳೆ. ಮಗ ಕರಣ್ ಗುಪ್ತಾ ಆಕ್ಸ್ ಫರ್ಡ್ ನಲ್ಲಿ ಲಾ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

                               ******************** 

Related posts

ನಾಟ್ಯ-ಯೋಗ ಸಂಗಮ ಯಾಮಿನೀ ಮುತ್ತಣ್ಣ

YK Sandhya Sharma

ಕೂಚಿಪುಡಿ ನೃತ್ಯಾಭಿನಯ ಕುಶಲಿ ಸರಸ್ವತಿ ರಜತೇಶ್

YK Sandhya Sharma

ಕ್ರಿಯಾಶೀಲ ಹಿರಿಯ ನೃತ್ಯಕಲಾವಿದೆ ವೀಣಾಮೂರ್ತಿ ವಿಜಯ್

YK Sandhya Sharma

Leave a Comment

This site uses Akismet to reduce spam. Learn how your comment data is processed.