Image default
Dance Reviews

ಕಣ್ಮನ ಸೆಳೆದ ಅನಘಾ-ನಿಧಿ ಬೋಳಾರ್ ಅಪೂರ್ವ ನೃತ್ಯ

ಒಂದೇ ಎತ್ತರದ ನಿಲುವು -ಸಪೂರ ಮೈಮಾಟ, ಅವಳಿ ಜವಳಿಗಳಂತೆ ಒಂದೇ ಎರಕದ ಮೂರ್ತಿಗಳಂತಿದ್ದ, ನೃತ್ಯದ ಪಲುಕುಗಳಲ್ಲಿ, ಹಸ್ತಚಲನೆಯ ಹೆಜ್ಜೆಗಳಲ್ಲಿ, ಬಾಗು-ಬಳುಕುಗಳಲ್ಲಿ ಸಾಮರಸ್ಯದ ಪ್ರತೀಕದಂತಿದ್ದ ಅನಘಾ ಜಿ.ಎಸ್. ಮತ್ತು ನಿಧಿ ಎಸ್. ಬೋಳಾರ್ ಅಪೂರ್ವ ಕಲಾವಿದರು. ಶಿಸ್ತುಬದ್ಧ ಶಿಕ್ಷಣಕ್ಕೆ ಹೆಸರಾದ ಪ್ರಸಿದ್ಧ ನೃತ್ಯಕಲಾವಿದೆ, ಗುರು ಮತ್ತು ನೃತ್ಯಸಂಯೋಜಕಿಯಾದ ಡಾ.ಶುಭಾರಾಣಿ ಬೋಳಾರ್ ಶಿಷ್ಯೆಯರಾದ ಇವರು ಇತ್ತೀಚಿಗೆ ನಗರದ ಗಾಯನ ಸಮಾಜದಲ್ಲಿ ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಿದರು.

‘ಭರತ ನೃತ್ಯ-ಸಂಗೀತ ಅಕಾಡೆಮಿ’ಯಲ್ಲಿ ನಾಟ್ಯ ಕಲಿಯುತ್ತಿರುವ ಈ ಕಲಾವಿದೆಯರು ಸುಮಾರು ಎರಡು ಗಂಟೆಗಳ ಕಾಲ ಕಣ್ಮನ ತಣಿಸುವ ನೃತ್ಯರಸಾಯನವನ್ನು ಉಣಬಡಿಸಿದರು. ರಂಗವಂದನ-ಗಣೇಶಸ್ತುತಿಯ ಮೂಲಕ ಸಾಂಪ್ರದಾಯಕವಾಗಿ ರಂಗಸ್ಥಳಕ್ಕೆ ಅಭಿವಂದಿಸಿದರು. ಶೊಲ್ಲುಕಟ್ಟುಗಳ ಲಯವಿನ್ಯಾಸಕ್ಕೆ ಮನೋಹರವಾಗಿ ಹೆಜ್ಜೆ ಹಾಕುವ ವಿಶಿಷ್ಟ ನಮನ ಇದಾಗಿತ್ತು. ಅನಂತರ ಬಾಲಮುರಳೀ ಕೃಷ್ಣರ ರಚನೆ-ನರ್ತನ ಗಣಪತಿಯನ್ನು ಕುರಿತ ಕೀರ್ತನೆಯನ್ನು ಮನೋಹರವಾಗಿ ಸಾಕ್ಷಾತ್ಕರಿಸಿದರು. ಲಲಿತಕಲಾಪ್ರಿಯ ಗಣಪತಿಗೆ ನಾನಾ ವಾದ್ಯಗಳ ನುಡಿಸಾಣಿಕೆಯಲ್ಲಿ ನೃತ್ತಾವಳಿಗಳ ನೃತ್ಯಾರ್ಚನೆ ಸಲ್ಲಿಸಿದರು., ವಿಘ್ನೇಶ್ವರನ ವಿವಿಧ ರೂಪಗಳ ಅಪರೂಪದ ಭಂಗಿಗಳನ್ನು ಪ್ರದರ್ಶಿಸಿದ ಕಲಾವಿದೆಯರು ಇಬ್ಬರೂ ಒಂದೇ ಬಗೆಯ ಸುಂದರ ಆಂಗಿಕಗಳಲ್ಲಿ ನರ್ತಿಸಿ ವಿಸ್ಮಯ ಮೂಡಿಸಿದರು.  

ಮುಂದಿನ ರಾಗಮಾಲಿಕೆಯ ‘ಶಿವತಾಂಡವ’ದ ಪ್ರಸ್ತುತಿಯ ಪರಿಕಲ್ಪನೆ ವಿನೂತನವಾಗಿತ್ತು. ಒಬ್ಬ ಕಲಾವಿದೆ ಸಾಕ್ಷಾತ್ ಶಿವನಾಗಿ ಮೈನವಿರೇಳಿಸುವ ತಾಂಡವ ನೃತ್ಯಕ್ಕೆ ತೊಡಗಿದರೆ, ಇನ್ನೊಬ್ಬ ಕಲಾವಿದೆ ಪಾರ್ವತಿಯಾಗಿ ತನ್ನ ಮೃದುವಾದ ಹೆಜ್ಜೆ,ಗೆಜ್ಜೆಗಳ ಕೋಮಲ ಅಭಿನಯದಿಂದ ಆಕರ್ಷಿಸುತ್ತ ಮನಸೆಳೆದಳು. ಪಾರ್ವತಿ, ಶಿವನಲ್ಲಿ  ಬೇರೆತುಹೊಗುವ ಸ್ತರದಲ್ಲಿ ನೇಯ್ದ ನೃತ್ಯಸಂಯೋಜನೆ ಅರ್ಥಪೂರ್ಣವಾಗಿತ್ತು. ಇಬ್ಬರೂ ಒಂದಾಗಿ ಸಂಗಮಿಸಿ, ಅರ್ಧನಾರೀಶ್ವರರಾಗುವ ಚಿತ್ರಣ ಬಹು ಮನೋಹರವಾಗಿತ್ತು. ಪರಸ್ಪರ ವೈರುದ್ಧ್ಯ ಗುಣ-ಲಕ್ಷಣಗಳಿಂದ ಕೂಡಿದ ಪ್ರಕೃತಿ-ಪುರುಷರು ಐಕ್ಯವಾಗುವ ಅವಿನಾಭಾವದ ದೃಶ್ಯ ರಮ್ಯವಾಗಿ, ಭಿನ್ನ ನಡೆಗಳ ನರ್ತನ ಲಾಸ್ಯ-ತಾಂಡವ ಕುತೂಹಲ ಮೂಡಿಸಿತ್ತು. ಶಿವತೇಜದ ಕುಣಿತದ ಅಡವುಗಳಿಂದ ಕಲಾವಿದೆ ಶಿವನ ರುದ್ರರೂಪವನ್ನು ಪರಿಣಾಮಕಾರಿಯಾಗಿ ಕಂಡರಿಸಿದಳು. ಶುಭಾರ ಖಚಿತವಾದ ನಟುವಾಂಗ, ನರ್ತಕಿಯರ ನೃತ್ತಸಾಮರ್ಥ್ಯಕ್ಕೆ ಉತ್ತಮ ಸಾಂಗತ್ಯ ನೀಡಿತ್ತು.  ಅನಂತರ ಸೌಮ್ಯರೂಪದ ಪಾರ್ವತಿ ಕಾಳಿಯಾಗಿ ಪ್ರಜ್ವಲಿಸಿ, ಸೌಂದರ್ಯ ಚೆಲ್ಲುವ ನೃತ್ತಗಳಿಂದ ಆವೃತವಾಗಿ, ಸಾತ್ವಿಕನೋಟದ ಬೆರಗು ಹೊಮ್ಮಿಸಿದ ದೈವೀಕ ನರ್ತನ ಹೃದಯಸ್ಪರ್ಶಿಯಾಗಿತ್ತು.

‘ಶ್ರೀಕೃಷ್ಣ ಕಮಲಾನಾಥೋ’ – ಭಕ್ತಿರಸ ಪ್ರಧಾನವಾದ ಪದವರ್ಣ. ಭಕ್ತಿಮೂರ್ತಿಗಳಾದ ಇಬ್ಬರು ಕಲಾವಿದೆಯರು ಒಂದೇಶಿಲ್ಪದ ಎರಡುಮುಖಗಳಂತೆ ಭಾಸವಾದರು. ಅನುರೂಪ ನೃತ್ಯವೈವಿಧ್ಯದಿಂದ ಅನಾವರಣಗೊಂಡ ಅವರ ನರ್ತನ ಪ್ರತಿಭೆ ಕಲಾನೈಪುಣ್ಯದ ಹೊಂಗಿರಣ ಅಭಿವ್ಯಕ್ತಿಸಿತು. ಇಬ್ಬರೂ ಒಂದೊಂದು ಪಾತ್ರಗಳಾಗಿ ಪೂರಕವಾಗಿ ಅಭಿನಯಿಸಿ, ಶ್ರೀಕೃಷ್ಣನ ಇಡೀಜೀವನದ ಕಥಾನಕದ ಘಟನೆಗಳನ್ನೆಲ್ಲ ಬಹು ಸುಂದರವಾಗಿ ಸಾಕ್ಷಾತ್ಕರಿಸಿದರು. ರುಕ್ಮಿಣಿಯ ಪರಿಣಯ ಪ್ರಸಂಗದ ನಾಟಕೀಯ ದೃಶ್ಯಗಳು ಮುದವೆರೆದವು. ಸೆರೆಮನೆಯಲ್ಲಿ ಕೃಷ್ಣನ ಜನನ, ಯಶೋದೆಯ ಆರೈಕೆ, ಪೂತನಿಯ ಹುನ್ನಾರ, ಶಕಟಾಸುರ ವಧೆ, ಕಾಳಿಂಗಮರ್ಧನ, ಗೋವರ್ಧನ ಗಿರಿಧಾರಿ, ಯುವಕೃಷ್ಣನ ರಾಸಲೀಲೆಗಳು, ಕೋಲಾಟ ಮುಂತಾದ ರಮ್ಯ ಚಿನ್ನಾಟಗಳನ್ನು ಅಭಿವ್ಯಕ್ತಿಸಿ ಅಭಿನಯ ಸೊಗಸಾಗಿತ್ತು. ಅಂತ್ಯದಲ್ಲಿ ಯುದ್ಧಭೂಮಿಯಲ್ಲಿ ತನ್ನವರನ್ನು ಕೊಲ್ಲಲು ಹಿಂಜರಿದ ಅರ್ಜುನನಲ್ಲಿ ಧೈರ್ಯತುಂಬಿ, ವಿಶ್ವರೂಪ ತೋರಿ ಗೀತೋಪದೇಶ ಮಾಡುವ ರಸೋತ್ಕರ್ಷದ ಘಟ್ಟದವರೆಗೂ ಕಲಾವಿದೆಯರು ಅನಾಯಾಸವಾಗಿ ನರ್ತಿಸಿ, ತಮ್ಮ ನಟನಾಕೌಶಲ್ಯ, ಪ್ರೌಢಿಮೆಯನ್ನು ಸಾಬೀತುಪಡಿಸಿದರು.

ಕಡೆಯಭಾಗದಲ್ಲಿ ಮನಮೋಹಕ ‘ವಾತ್ಸಲ್ಯ ಪದಂ’ ಮತ್ತು ಜಯದೇವನ ‘ಅಷ್ಟಪದಿ’, ‘ತಿಲ್ಲಾನ’ ಕೃತಿಗಳ ಮೆರುಗು ತುಂಬಿದ ಪ್ರಸ್ತುತಿಗಳು ಪರಿಣಾಮ ಬೀರಿದವು.

Related posts

ಪ್ರತಿಷ್ಠಳ ಮನಮೋಹಕ ನೃತ್ಯಲಾಸ್ಯ

YK Sandhya Sharma

ಕಣ್ಮನ ಸೆಳೆದ ಯೋಗದ ಭಂಗಿಗಳು- ಗಾಯನಳ  ರಮ್ಯನರ್ತನ

YK Sandhya Sharma

ಮೋಹಕತೆ ಚೆಲ್ಲಿದ ಕನ್ಯಾತ್ರಯರ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.