ಯಾವುದೇ ಒಂದು ನೃತ್ಯ ಪ್ರದರ್ಶನ ಪರಿಣಾಮಕಾರಿಯಾಗಿ ಹೊರಹೊಮ್ಮಲು, ರಸಿಕಜನರ ಹೃದಯಸ್ಪರ್ಶಿಸಲು ಸುಂದರವಾದ ಪರಿಸರ,ವಾತಾವರಣ ಅತ್ಯವಶ್ಯ. ಮನಸ್ಸಿಗೆ ಮುದನೀಡುವ ರಂಗಸಜ್ಜಿಕೆ, ಹದವಾದ ಬೆಳಕಿನ ಕೌಶಲ, ಕಲಾವಿದೆಯ ನರ್ತನಕ್ಕೆ ಜೀವತುಂಬುವ ಗಾನಸಿರಿ, ಭಾವನೆಗಳಿಗೆ ಪೂರಕವಾದ ವಾದ್ಯಗೋಷ್ಠಿ, ಸನ್ನಿವೇಶ ನಿರ್ಮಾಣಕ್ಕೆ ತಕ್ಕ ಧ್ವನಿಪರಿಣಾಮಗಳು, ಸಮಗ್ರವಾಗಿ ನೃತ್ಯದಚೆಲುವನ್ನು ಔನ್ನತ್ಯಕ್ಕೇರಿಸುತ್ತವೆ. ಇಂಥದೊಂದು ಆನಂದ ಒದಗಿ ಬಂದದ್ದು ಕು.ಸಂಜನಾ ಜಗನ್ನಾಥ್ ರಂಗಪ್ರವೇಶದ ಸಂದರ್ಭದಲ್ಲಿ.
‘ಶಿವಪ್ರಿಯ’ ನೃತ್ಯಶಾಲೆಯ ಕಲಾನಿರ್ದೇಶಕ ಅಂತರರಾಷ್ಟ್ರೀಯ ನೃತ್ಯ ಕಲಾವಿದ, ನಾಟ್ಯಗುರು, ನಟುವನ್ನಾರ್, ಗಾಯಕ, ನೃತ್ಯಸಂಯೋಜಕ ಮತ್ತು ವಾಗ್ಗೇಯಕಾರ ಡಾ. ಸಂಜಯ ಶಾತಾರಾಂ ಅವರ ಸಮರ್ಥಗರಡಿಯಲ್ಲಿ ರೂಪುಗೊಂಡ ಶಿಷ್ಯೆ ಈಕೆ. ವೈಶಿಷ್ಟ್ಯದ ಸಂಗತಿಯೆಂದರೆ ಸಂಜಯ್, ತಮ್ಮ ನೃತ್ಯಪಯಣದಲ್ಲಿ ಅಡಿಯಿರಿಸುತ್ತಿರುವ ಐವತ್ತನೆಯ ರಂಗಪ್ರವೇಶ ಸಂಭ್ರಮ ಇದಾಗಿದ್ದು, ಸುವರ್ಣ ಸಿಂಚನದ ವಾತಾವರಣ ಕಳೆಗಟ್ಟಿತ್ತು.
ಸಾಂಪ್ರದಾಯಕ ‘ಪುಷ್ಪಾಂಜಲಿ’ಯೊಂದಿಗೆ ಸಂಜನಾ ತನ್ನ ಪ್ರಸ್ತುತಿಯನ್ನು ಶುಭಾರಂಭಗೊಳಿಸಿದಳು. ಸಮಸ್ತ ದೇವತೆಗಳಿಗೆ, ಗುರು-ಹಿರಿಯ ರಸಿಕಜನರಿಗೆ ವಿನಮ್ರ ಪ್ರಣಾಮವನ್ನು ಕಲಾವಿದೆ ಸುಂದರ ದೈಹಿಕ ವಿನ್ಯಾಸದ ಮೂಲಕ ಭಕ್ತಿಪೂರ್ವಕ ಅರ್ಪಿಸಿದಳು. ಮಿಂಚಿನಚಲನೆಯ ನೃತ್ತಾವಳಿ ರಂಜಿಸಿತು. ಸೂರ್ಯರಾಗದ ‘ ಗಣಪತಿ ಸ್ತುತಿ’ ಗೆ ಪ್ರವೀಣ್ ಡಿ.ರಾವ್ ಸಂಯೋಜಿಸಿದ ಸಂಗೀತದ ಹಿನ್ನಲೆಗೆ, ಗಾಯನವನ್ನು ಸಂಜಯ್ ‘ ಗಂ ಗಣಪತೆಯೇನಮಃ’ಎಂದು ಸೊಗಸಾಗಿ ಪ್ರಸ್ತುತಪಡಿಸಿ, ಜೊತೆಯಲ್ಲಿ ತಮ್ಮ ನಟುವಾಂಗದ ಕುಶಲತೆಯನ್ನು ಅಭಿವ್ಯಕ್ತಿಸಿದ್ದು ಗಮನಾರ್ಹವಾಯಿತು. ಮೋದಕಪ್ರಿಯನ ಆಕಾರ, ರೂಪ-ಮಹಿಮೆಗಳನ್ನು ಸಂಜನಾ, ತನ್ನ ಖಚಿತಹಸ್ತ, ಚಲನೆಗಳ ಅಂಗಶುದ್ಧಿಯ ಪರಿಚಯ ಮಾಡಿಸುತ್ತ, ಅಭಿನಯಿಸಿದ್ದರಲ್ಲಿ ಬೆಡಗು ತುಂಬಿತ್ತು.
ಅನಂತರ ಮೋಹನಗಾಂಧಿ ರಾಗದ ‘ಜತಿಸ್ವರ’ನಿರೂಪಣೆಯಲ್ಲಿ, ದೃಷ್ಟಿ-ಶಿರೋಭೇದಗಳನ್ನು ನವಿರಾಗಿ ತೋರುತ್ತ, ಲೀಲಾಜಾಲವಾಗಿ ಆಕಾಶಚಾರಿ, ಗತಿಭೇದಗಳನ್ನು ತನ್ನ ಪಾದರಸದ ಮಿಂಚಿನ ಸಂಚಾರದ ನೃತ್ತವಿನ್ಯಾಸಗಳಲ್ಲಿ ಅಭಿವ್ಯಕ್ತಿಸಿದಳು. ಮುಂದೆ ಸಂಜಯ್ ರಚಿಸಿದ ‘ಶಬ್ದಂ’ -ಶಿವನಿಗೆ ಅರ್ಪಿತವಾಗಿತ್ತು. ಪರಮ ಶಿವಭಕ್ತೆಯಾದ ಪ್ರೌಢನಾಯಿಕೆ ಮನದುಂಬಿ, ಭಕ್ತಿಯಪಾರಮ್ಯದಿಂದ ಶಿವನ ಗುಣಾವಳಿಗಳನ್ನು ಹೊಗಳುತ್ತ ಅವನಿಗೆ ಅರ್ಪಿಸಿಕೊಳ್ಳುವ ಭಾವುಕ ಕೃತಿ. ‘ಶಂಕರ, ವಿಶ್ವೇಶ್ವರ, ಜಟಾಧರ..‘ ಎಂದು ನಾಯಿಕೆ, ಮಂದಹಾಸದ ಮಿನುಗು ತುಂಬಿದ ಮುಖಭಾವದಲ್ಲಿ ತಾದಾತ್ಮ್ಯಭಾವದಿಂದ ನರ್ತಿಸುತ್ತಾ, ಮನೋಹರವಾಗಿ ಅಭಿನಯ ತೋರಿದ್ದು ಆಹ್ಲಾದಕಾರಿಯಾಗಿತ್ತು. ಶಿವ, ನೀಲಕಂಠನಾದ ಸಂಚಾರಿಯ ಕಥಾಭಾಗವನ್ನು ಪರಿಣಾಮಕಾರಿಯಾಗಿ ನಿರೂಪಿಸಿದಳು. ಶಿವನ ಪ್ರತಿ ಹೆಸರಿನ ಹಿನ್ನಲೆಯ ಕಥೆಯನ್ನು ಅನಾವರಣ ಮಾಡುತ್ತಾ ಸಾಗಿದ, ವೀರಾವೇಶ-ರೋಷಾಗ್ನಿಯ ಸಂದರ್ಭದ ಗಾಢ ಅಭಿನಯಭಾಗದಲ್ಲಿ ಸಂಜನಾ ತನ್ನ ಪರಿಣತಿಯನ್ನು ಪ್ರದರ್ಶಿಸಿದಳು. ಮಂಡಿ ಅಡವುಗಳ ನೃತ್ತಾವಳಿ ಕಣ್ಮನ ತಣಿಸಿತು.
ನೃತ್ಯ ಪ್ರದರ್ಶನದ ಹೃದಯಭಾಗ, ‘ಪದವರ್ಣ’ ಹೃದ್ಯವಾಗಿ ಮೂಡಿಬಂತು. ರಾಮಾಯಣದ ಕೆಲವು ಪ್ರಮುಖ ಘಟನೆಗಳನ್ನು ಚಿತ್ರಿಸಿದ ‘ ವರ್ಣ’ ದಲ್ಲಿ ನೃತ್ತನೈಪುಣ್ಯ ಮತ್ತು ಅಭಿನಯ ಸಾಮರ್ಥ್ಯ ಸಮಾನವಾಗಿ ಅಭಿವ್ಯಕ್ತವಾಯಿತು. ಸಂಚಾರಿಯ ‘ಶಬರಿಯ ಪ್ರಸಂಗ’ ಸಂಜನಳ ಪಾತ್ರ ಪರಕಾಯಪ್ರವೇಶಕ್ಕೆ ಸಾಕ್ಷಿಯಾಯಿತು. ವೃದ್ಧೆಯ ಬಾಗಿದ ನಡಿಗೆ, ನಡುಗುವ ತನು, ಹಣ್ಣುಜೀವದ ವರ್ತನೆಯನ್ನು ಸೊಗಸಾಗಿ ಬಿಂಬಿಸಿದಳು. ಸಂಕೀರ್ಣ ಜತಿಗಳ ಶೊಲ್ಲುಕಟ್ಟುಗಳಿಗೆ ಕಲಾವಿದೆ ಅನುಗುಣವಾದ ಚುರುಕುಗತಿಯ ಅಡವುಗಳು, ಪಾದಭೇದಗಳ ಮಿಂಚಿನ ಸಂಚಾರ ತೋರಿ ಮೆಚ್ಚುಗೆ ಪಡೆದಳು. ಶ್ರೀರಾಮನ ಗಾಂಭೀರ್ಯ ನಡೆ, ಸಾತ್ವಿಕಾಭಿನಯ, ಸೀತೆಯ ಮುಗುದೆಭಾವದ ಲಜ್ಜೆಯೋಕುಳಿಯನ್ನು ಸೊಗಸಾಗಿ ತೋರಿದಳು. ಹನುಮಂತನ ಭಕ್ತಿಯ ಸಾಕ್ಷಿ ದೃಶ್ಯ ಅನನ್ಯವಾಗಿತ್ತು. ಮನೋಜ್ಞ ಅಭಿನಯದ ನಡುವಣ ನೃತ್ತಲಹರಿಯ ಓಘ-ಚೆಲುವು ಮನಸೆಳೆದಿತ್ತು.
ಹಿನ್ನಲೆಯಲ್ಲಿ ಝೇಂಕರಿಸಿದ ಗೋಪಾಲರ ವೀಣೆ, ಶಶಿಶಂಕರರ ಮೃದಂಗ, ನರಸಿಂಹಮೂರ್ತಿಯ ಕೊಳಲನಾದ, ಕಾರ್ತಿಕ್ ದಾತಾರ್ ರಿದಂಪ್ಯಾಡ್ ನ ಸಹಕಾರ ಕಲಾವಿದೆಯ ನೃತ್ಯದ ಸೊಬಗಿಗೆ ರಂಗುತಂದಿತ್ತು. ಅಂತ್ಯದಲ್ಲಿ ಪ್ರದರ್ಶಿತವಾದ ಮನೋಹರಭಂಗಿಗಳಲ್ಲಿ ಕಲಾವಿದೆಗಿದ್ದ, ದೇಹದ ಮೇಲಿನ ನಿಯಂತ್ರಣಶಕ್ತಿ ಸುವ್ಯಕ್ತಗೊಂಡಿತ್ತು.
ನಂತರ ಪ್ರಸ್ತುತವಾದ ಮೌಳಿರಾಗದ ಅಣ್ಣಮಾಚಾರ್ಯರ `ವೆಂಕಟೇಶ್ವರ ಸ್ತುತಿ’ಯ ಸಾಕಾರದಲ್ಲಿ ಹದಿಮೂರರ ಬಾಲೆ ಸಂಜನಾ, ತನ್ನ ಅಳವಿಗೂ ಮೀರಿ ದೈವೀಕ ಅಭಿನಯ ಸಾಕ್ಷಾತ್ಕರಿಸಿದಳು. ವಲಚಿರಾಗದ ‘ತಿಲ್ಲಾನ’ದಲ್ಲಿ ನಾಟಕೀಯ ಸೆಳಕುಗಳನ್ನು ಅತ್ಯಂತ ಮನೋಹರವಾಗಿ ಪ್ರದರ್ಶಿಸಿ, ಮಂಗಳದೊಂದಿಗೆ ತನ್ನ ಅರ್ಥಪೂರ್ಣ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು.