ರಂಗದ ಮೇಲೆ ಬಳ್ಳಿಯಂತೆ ಬಳುಕುತ್ತ, ಲವಲವಿಕೆಯಿಂದ ಚಂಗನೆ ಹಾರುತ್ತ ಬೆಡಗಿನಿಂದ ನೃತ್ಯ ಮಾಡುವುದು ಅಮೃತಾಳ ವೈಶಿಷ್ಟ್ಯ. ಒಮ್ಮೆ ಭರತನಾಟ್ಯದ ಶುದ್ಧಬಂಧದಲ್ಲಿ ಮನದುಂಬಿದರೆ, ಇನ್ನೊಮ್ಮೆ ಕಥಕ್ ಲಾಸ್ಯದಲ್ಲಿ ಬೆಡಗು ಹೊರಹೊಮ್ಮಿಸುವಳು. ಮಗದೊಮ್ಮೆ ಜಾನಪದ ಸೊಗಡಿನಲ್ಲಿ ಲೀಲಾಜಾಲವಾಗಿ ಕುಣಿಯುತ್ತ, ಆಕರ್ಷಿಸುತ್ತಾಳೆ. ಇನ್ನೊಮ್ಮೆ ಪಾಶ್ಚಾತ್ಯ ನೃತ್ಯದ ರಂಗಿನಲ್ಲಿ ಬೇರೆಯದೇ ಆಯಾಮವನ್ನು ಪ್ರದರ್ಶಿಸುವ ಈ ಪ್ರತಿಭಾನ್ವಿತ ನೃತ್ಯಗಾರ್ತಿ ಅಮೃತಾ ಕಲಿಕೆಯ ವಿಷಯದಲ್ಲಿ ಮಹಾ ಉತ್ಸಾಹಿ.
ಇವಳ ತಂದೆ ಮೋಹನ್ ಮತ್ತು ತಾಯಿ ತ್ರಿವೇಣಿ ಕಲಾಸಕ್ತರು. ಮೂರರ ಬಾಲೆಯಾಗಿದ್ದಾಗಲೇ ಅಮೃತಾ ತನ್ನಷ್ಟಕ್ಕೆ ತಾನು ಮೈಕೈ ಕುಣಿಸುತ್ತಾ ಹೆಜ್ಜೆಗಳನ್ನು ಹಾಕುತ್ತ ನೃತ್ಯಾಭಿಲಾಷೆ ವ್ಯಕ್ತಪಡಿಸಿದವಳು. ಸುಮಾರು ಎಂಟರ ವಯಸ್ಸಿನಲ್ಲಿ ‘ನಾಟ್ಯಾಂಜಲಿ’ ನೃತ್ಯಶಾಲೆ ಸೇರಿ ನೃತ್ಯಗುರು ಅಶೋಕ್ ಕುಮಾರ್ ಬಳಿ ಭರತನಾಟ್ಯ ಕಲಿಯತೊಡಗಿದ್ದು, ಇಂದಿಗೂ ಅವರ ಗರಡಿಯಲ್ಲೇ ತರಬೇತಿ ಪಡೆಯುತ್ತಿರುವುದು ಅವಳ ಏಕ ಗುರುನಿಷ್ಠೆಗೆ ಉದಾಹರಣೆ. ಕರ್ನಾಟಕ ಸರ್ಕಾರದ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಅಮೃತಾ, ಶಾಲೆ-ಕಾಲೇಜುಗಳಲ್ಲಿ ಏಕವ್ಯಕ್ತಿ ನೃತ್ಯಪ್ರದರ್ಶನ ನೀಡಲಾರಂಭಿಸಿದಳು. ಅದರ ಜೊತೆ ನಾಟ್ಯಾಂಜಲಿ ಶಾಲೆಯ ಸಮೂಹ ನೃತ್ಯ ಕಾರ್ಯಕ್ರಮಗಳಲ್ಲಿ ಹಾಗೂ ಇತರ ಸಬೆ-ಸಮಾರಂಭಗಳಲ್ಲಿ, ಸೋಲೋ ನೃತ್ಯ ಪ್ರದರ್ಶನಗಳನ್ನು ನೀಡುತ್ತ ಬಂದಳು.
ಅಮೃತಾ ಪಥಮ ನೃತ್ಯಸಂಯೋಜನೆ ಮಾಡಿದ್ದು ಅವಳು ಪಿ.ಯೂ.ಸಿ ವಿದ್ಯಾರ್ಥಿ ಆಗಿದ್ದಾಗ. ವಿವಿಧ ಶಾಲೆ-ಕಾಲೇಜುಗಳಿಂದ ಬೇಡಿಕೆ ಬಂದಾಗ ಅವಳಿಗೆ ಇಷ್ಟವಾದ ನೃತ್ಯಸಂಯೋಜನೆಯ ಕೆಲಸವನ್ನು ತತಕ್ಷಣ ಒಪ್ಪಿಕೊಂಡುಬಿಡುತ್ತಿದ್ದಳಂತೆ. ಹೀಗಾಗಿ ಬಿ.ಕಾಂ ವಿದ್ಯಾಭ್ಯಾಸದೊಡನೆ ಈ ನೃತ್ಯಕಾಯಕವೂ ಜೊತೆಯಲ್ಲೇ ಸಾಗಿತ್ತು. ಇದುವರೆಗೂ ನೂರಾರು ನೃತ್ಯಕಾರ್ಯಕ್ರಮಗಳನ್ನು ನೀಡಿರುವ ಇವಳು, ಮುಂದೆ ಬಿಕಾಂ ಪದವೀಧರೆಯಾದ ನಂತರ ಜೈನ್ ವಿಶ್ವವಿದ್ಯಾನಿಲಯದಿಂದ ಭರತನಾಟ್ಯ ವಿಷಯದಲ್ಲಿ ‘ಎಂ.ಎ.’ ಸ್ನಾತಕೋತ್ತರ ಪದವಿ ಗಳಿಸಿದಳು. ಈ ಮಧ್ಯ ಅನೇಕ ನೃತ್ಯ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತ, ವಿನೋದಕುಮಾರ್ ಅವರಲ್ಲಿ ಸಮಕಾಲೀನ ನೃತ್ಯ ಕಲಿತಳು. ಜೊತೆಗೆ ಪಾಶ್ಚಾತ್ಯ ನೃತ್ಯ, ಅರೆಶಾಸ್ತ್ರೀಯ ನೃತ್ಯ ಮತ್ತು ಜಾನಪದ ನೃತ್ಯಗಳಲ್ಲಿ ತರಬೇತಿ ಪಡೆದು, ಇದೀಗ ಅವಳು ಕಾರ್ಯಾಗಾರಗಳಲ್ಲಿ ಬೋಧಕಿಯಾಗಿಯೂ ಕಾರ್ಯನಿರತಳಾಗಿದ್ದು, ಪಾಶ್ಚಾತ್ಯ ನೃತ್ಯವನ್ನೂ ಕಲಿಸುತ್ತಾಳೆ. ತನ್ನದೇ ಆದ ‘’ ನೃತ್ಯಾಂಕುರ’’ ತಂಡದಿಂದ ವಿವಿಧ ಶೈಲಿಗಳ ಮನರಂಜನಾ ಕಾರ್ಯಕ್ರಮ, ನೃತ್ಯಪ್ರದರ್ಶನ ನೀಡಿರುವ ಉತ್ಸಾಹ ಇವಳದು.
ನೃತ್ಯದೊಡನೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡುತ್ತಿರುವ ಇವಳು, ರಿದಂ ಪ್ಯಾಡ್ ನುಡಿಸುವುದನ್ನು ಕಲಿಯುತ್ತಿರುವುದು ವಿಶೇಷ. ಶಾಲೆ-ಕಾಲೇಜಿನಲ್ಲಿದ್ದಾಗ ಕ್ರೀಡಾಪಟುವಾಗಿದ್ದ ಅಮೃತಳಿಗೆ ಕಲಾವಿದೆಗೆ ತಕ್ಕ ಎತ್ತರದ ನಿಲುವು, ಬಳ್ಳಿನಡು, ಬಾಗಿ-ಬಳುಕುವ ಸಾಮರ್ಥ್ಯವಿರುವುದು ಅವಳ ಧನಾತ್ಮಕ ಅಂಶ. ಪ್ರಸ್ತುತ, ‘ಕ್ಯಾಪಿಟಲ್’ ಶಾಲೆಯಲ್ಲಿ ನೃತ್ಯಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಕಲೆ-ಸಂಗೀತ ಮತ್ತು ನೃತ್ಯ ಕಲಿಸುವ ‘’ಪ್ರದ’ ಸಂಸ್ಥೆಯನ್ನು ಇದೇತಾನೇ ಸಮಾನ ಅಭಿರುಚಿಯ ಕೆಲ ಸ್ನೇಹಿತರೊಂದಿಗೆ ಸೇರಿ ಹುಟ್ಟುಹಾಕಿದ್ದಾಳೆ.
ಅಮೃತಾ ನೀಡಿರುವ ಹಲವಾರು ಕಾರ್ಯಕ್ರಮಗಳಲ್ಲಿ, ಉದಯ ಫಿಲಂ ಫೇರ್ ಅವಾರ್ಡ್ ಷೋ ನಲ್ಲಿ ನೃತ್ಯ ಪ್ರದರ್ಶನ, ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನ, ಮುಂಬೈನ ರಂಗಸಮಾಜ ಸಾಂಸ್ಕೃತಿಕ ಸಂಸ್ಥೆ, ವೆಂಕಟೇಶ ನಾಟ್ಯ ಮಂದಿರದ ‘ರಸಸಂಜೆ’ ಕಾರ್ಯಕ್ರಮ ಮುಂತಾದವು ಪ್ರಮುಖವಾದುವು. ರಂಗಭೂಮಿಯಲ್ಲೂ ಆಸಕ್ತಳಾದ ಇವಳು ಹಲವಾರು ಕನ್ನಡ ನಾಟಕಗಳಲ್ಲಿ ಅಭಿನಯಿಸಿದ್ದಾಳೆ. ರಂಗಾಭಿನಯವನ್ನು ಮುಂದುವರಿಸುವ ಆಸೆ ಇದೆ.
ಸ್ವಪ್ನ ಕಲ್ಪ, ಅಂಗನಾ ಮೋಹನ ಮುಂತಾದ ನೃತ್ಯನಾಟಕಗಳಲ್ಲೂ ಪಾಲ್ಗೊಂಡಿದ್ದಾಳೆ. ಕರ್ನಾಟಕ ಮಹಾನಟ ನೃತ್ಯೋತ್ಸವ ಸ್ಪರ್ಧೆಯಲ್ಲಿ ಮೊದಲಸ್ಥಾನ ಹಾಗೂ ಗ್ಲೋಬಲ್ ಫೆಸ್ಟ್ ನೃತ್ಯಸ್ಪರ್ಧೆಯಲ್ಲಿ ಎರಡನೆಯ ಸ್ಥಾನ ಪಡೆದುಕೊಂಡು, ‘ಜ್ಞಾನ ಮಂದಾರ’ ಎಂಬ ಪ್ರಶಸ್ತಿ ಹೊಂದಿದ್ದಾಳೆ. ಜೊತೆಗೆ, ಆರ್.ಕೆ.ಕೆ.ಹಾಗೂ ಶ್ರೀ ಶಂಕರ ಟಿವಿ ಸಹಯೋಗದಲ್ಲಿ ನಡೆದ ಆರ್ಟ್ ಫಾರ್ ಹ್ಯುಮ್ಯಾನಿಟಿ ಲಾಂಗೆಸ್ಟ್ ವೆರೈಟಿ ಶೋನಲ್ಲಿ ತಂಡದೊಡನೆ ನೀಡಿದ ಕಾರ್ಯಕ್ರಮ ‘ಗಿನ್ನಿಸ್ ದಾಖಲೆ’ ಮತ್ತು ಲಿಮ್ಕಾ ಬುಕ್ ರೆಕಾರ್ಡ್ಸ್ ನಲ್ಲಿ ದಾಖಲೆಯಾಗಿರುವ ಹೆಮ್ಮೆ ಇವಳದು.
ಸದಾ ಕ್ರಿಯಾಶೀಲರಾದ ರಂಗಕರ್ಮಿ ರಮೇಶ್ ಇವರ ಜೀವನ ಸಂಗಾತಿ. ತಮ್ಮೆಲ್ಲ ಚಟುವಟಿಕೆಗಳಿಗೆ ಪತಿಯ ಸಹಕಾರ-ಬೆಂಬಲವನ್ನು ಅಮೃತಾ ಕೃತಜ್ಞತೆಯಿಂದ ಸ್ಮರಿಸುತ್ತಾರೆ.