ಬೆಳಗಿನ ಜಾವದ ಹಿತವಾದ ನಿದ್ದೆ. ದೀಪಿಕಾ ನಿದ್ದೆಯಲ್ಲೇ ಕಿಲಕಿಲನೆ ನಕ್ಕಳು. ತನ್ನ ಗೆಳತಿಯರ ಜೊತೆ ಸ್ವಚ್ಛಂದವಾಗಿ ಆಡುತ್ತ, ನಲಿಯುತ್ತಿದ್ದ ಸುಂದರ ಸ್ವಪ್ನಲೋಕ!
ಗಣಗಣ ಗಂಟೆಯ ಶಬ್ದ !
ತತ್‍ಕ್ಷಣ ದೀಪಿಕಾ ಬೆಚ್ಚಿ ಕಣ್ತೆರೆದು ಎದ್ದು ಕುಳಿತಳು. ಅವಳ ಸಿಹಿಗನಸು ಅರ್ಧದಲ್ಲೇ ತುಂಡಾಗಿತ್ತು. ಪ್ರಿಯಸಖಿಯರ ನಡುವಿನ ಆ ಕಿನ್ನರಲೋಕ ಮಾಯವಾಗಿತ್ತು! ಅವಳ ಮೊಗದ ಮೇಲೆ ಮಿನುಗುತ್ತಿದ್ದ ಮಂದಹಾಸ, ಗುರುತಿಲ್ಲದಂತೆ ಅಳಿಸಿಹೋಗಿತ್ತು. ದೇವರ ಮನೆಯಿಂದ ತೂರಿಬಂದ ಘಂಟಾರವ ಅವಳನ್ನು ಬಾಹ್ಯ ಜಗತ್ತಿಗೆ ಎಳೆತಂದು, ಆ ಮುಗ್ಧ ಮೊಗದ ಮೇಲೆ ನಿರಾಸೆ, ಭ್ರಮನಿರಸನದ ಭಾವಗಳನ್ನು ಹನಿಸಿತ್ತು.
‘ದೀಪೂ ಮರಿ…’
ತಾತನ ಕೂಗಿಗೆ ಓಗೊಡುವಂತೆ ಅವಳು ಬೇಗ ಅಂಗೈಗಳನ್ನುಜ್ಜಿ ಕಣ್ಣಿನ ಮೇಲೆ ನೀವಿಕೊಂಡು, ಅಂಗೈ ನೋಡಿಕೊಳ್ಳುತ್ತ ತಾತ ಹೇಳಿಕೊಟ್ಟ ‘ಕರಾಗ್ರೇ ವಸತೇಲಕ್ಷ್ಮೀ….’ ಶ್ಲೋಕ ಹೇಳಿಕೊಂಡು, ಬಾತ್‍ರೂಮಿಗೆ ಓಡಿಹೋಗಿ ಹಲ್ಲುಜ್ಜಿ, ಮುಖ ತೊಳೆದು ಸೀದಾ ದೇವರ ಮನೆಯತ್ತ ಧಾವಿಸಿದಳು.
ತಾತಾ ಅವಳಿಗಾಗಿ ಕಾಯುತ್ತಿರುತ್ತಾರೆಂಬ ವಿಷಯ ಅವಳಿಗೆ ಗೊತ್ತಿದ್ದದ್ದೇ. ಅಜ್ಜಿ ಬೆಳಗಾಗಿ ದೇವರುಮನೆ ಸಾರಿಸಿ, ದೇವರ ಪಾತ್ರೆಗಳನ್ನು ತೊಳೆದು, ಅವುಗಳನ್ನು ಒಳಗೆ ಒಪ್ಪವಾಗಿ ಬೋರಲು ಹಾಕಿ, ನೀಲಾಂಜನ ದೀಪದ ಬತ್ತಿ ಬದಲಿಸಿ, ಎಣ್ಣೆ ಹಾಕಿ ಸಿದ್ಧಪಡಿಸಿ, ಎರಡೆಳೆ ರಂಗೋಲಿ ಎಳೆದರೆಂದರೆ ಅವರ ಕೆಲಸ ಮುಗಿಯಿತು. ಇನ್ನು ಪೂಜೆಗೆ ಹೂವು ಕಿತ್ತು ತಂದಿಡುವ ಕೆಲಸ ದೀಪಿಕಳದು. ಅಂಗಳದಲ್ಲಿ ಸುತ್ತಾಡಿ, ಎಗರಿ, ಬಗ್ಗಿ ಹೂ ಬಿಡಿಸುವಷ್ಟು ಶಕ್ತಿಯಿಲ್ಲ ಅಜ್ಜಿಗೆ. ಅದೂ ಅಲ್ಲದೆ ಹೆಣ್ಣುಮಕ್ಕಳು ಲಕ್ಷಣವಾಗಿ ಬೆಳಗ್ಗೆ ಬೇಗನೆದ್ದು ಚಟುವಟಿಕೆಯಿಂದಿರಲಿ ಎಂದೇ ಅಜ್ಜಿ ಅವಳಿಗಂಟಿಸಿದ ಕೆಲಸವದು.
ದೀಪಿಕಾ ಇಂಗಿತಜ್ಞೆ. ವಯಸ್ಸು ಹತ್ತಾದರೂ, ಇಪ್ಪತ್ತರ ತಿಳುವಳಿಕೆ, ನಡವಳಿಕೆ. ಆಧುನಿಕ ವಿಚಾರ ಲಹರಿಯ ತಾಯ್ತಂದೆಯರನ್ನೂ ಅನುಸರಿಸಿಕೊಂಡು ಹೋಗುತ್ತಾಳೆ. ಸಂಪ್ರದಾಯಸ್ಪ ಅಜ್ಜಿ-ತಾತಂದಿರ ಮನಸ್ಸಿಗೆ ಒಪ್ಪುವ ಹಾಗೂ ನಡೆದುಕೊಳ್ಳುತ್ತಾಳೆ.
ಅಂಗಳದಲ್ಲಿ ಬಿಟ್ಟಿದ್ದ ನಿತ್ಯಮಲ್ಲಿಗೆ ಇರುವಂತಿಗೆ, ನಂದವರ್ಧನ, ಜಾಜಿ ಹೂಗಳ ಜೊತೆ ಸ್ವಲ್ಪ ಪತ್ರೆಗಳನ್ನೂ ಕೊಯ್ದುಕೊಂಡು ಬಂದು ಹೂ ಬುಟ್ಟಿಯನ್ನು ತಾತನ ಮುಂದಿರಿಸಿದಳು. ತಾತನ ಮೊಗದಲ್ಲಿ ಸಂತೃಪ್ತಿಯ ಕಳೆ ಅರಳಿತು… ‘ಜಾಣೆ’ ಎಂದವರ ಕಣ್ಣೋಟವೇ ಅವಳಿಗೆ ಶಹಭಾಷ್‍ಗಿರಿ ಹೇಳಿತು. ಆದರೆ ಅಜ್ಜಿಯ ಮೊಗದಲ್ಲಿ ಅಸಮಾಧಾನದ ಹನಿಗಳು:
‘ಅಲ್ವೇ ದೀಪು.. ಕಪ್ಪಗೆ ಮಿರಿಮಿರಿ ಮಿಂಚ್ತಾ ಇರೋ ಈ ಸೊಂಪಾದ ಕೂದಲನ್ನು ಕತ್ತರಿಸಕ್ಕೆ ಯಾಕೆ ಬಿಟ್ಟೇ ನೀನು… ಮಣಿಮಣಿಯಾಗಿ ಕಪ್ಪನೆ ಹೆರಳು ಉದ್ದಕ್ಕೆ ಹೆಣೆದಿದ್ರೆ, ಪೆಟ್ಟಿಗೆಯಲ್ಲಿರೋ ನನ್ನ ನಾಗರ, ಕುಚ್ಚು ಎಲ್ಲ ಹಾಕಬಹುದಿತ್ತೋ’
ದೀಪಿಕಳ ಮೊಗ ಚಿಕ್ಕದಾಯ್ತು.
‘ನಾನೇನ್ಮಾಡ್ಲೀ ಅಜ್ಜಿ, ಮಮ್ಮಿ ಮಾತು ಕೇಳದಿದ್ರೆ….’ ರೂಮಿನ ಬಾಗಿಲಲ್ಲಿ ಆಶಾ ಜೋರಾಗಿ ಕೆಮ್ಮಿದ ಸದ್ದು ಕೇಳಿ ದೀಪಿಕಾ ತನ್ನ ಮಾತನ್ನು ಅರ್ಧಕ್ಕೆ ತುಂಡರಿಸಿದಳು. ಸೊಸೆಯ ಸ್ವಭಾವ ಅಜ್ಜಿಗೇನು ತಿಳಿಯದ್ದಲ್ಲ. ಆಶಾಳದು ಹಿಡಿದದ್ದೇ ಹಟ; ಎಲ್ಲದರಲ್ಲೂ ತನ್ನ ಮಾತೇ ನಡೆಯಬೇಕೆಂಬ ಹಮ್ಮು. ತಿಳುವಳಿಕಸ್ಥರಾದ ಅಜ್ಜಿ ಎಂದೂ ಸೊಸೆಯೊಡನೆ ಘರ್ಷಣೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿರಲಿಲ್ಲ.
ತಾತಾ ಕರಿಮರದ ಮಂದಾಸನದೊಳಗಿದ್ದ ಸಾಲಿಗ್ರಾಮದ ಪೆಟ್ಟಿಗೆ ತೆರೆದು ಅದರೊಳಗಿದ್ದ ಸುದರ್ಶನ, ನರಸಿಂಹ ದೇವರ ಸಾಲಿಗ್ರಾಮಗಳಿಗೆ ಅಭಿಷೇಕ ಮಾಡುವುದನ್ನೇ ದೀಪಿಕಾ ತನ್ಮಯಿತೆಯಿಂದ ನೋಡುತ್ತಿದ್ದವಳು ಒಮ್ಮೆಲೆ ಹಿಂದಿನಿಂದ ತೂರಿ ಬಂದ ಘರ್ಜನೆ ಧ್ವನಿಕೇಳಿ ತತ್ತರಿಸಿದಳು !
‘ದೀಪೂ ಟೈಂ ಸೆನ್ಸ್ ಇಲ್ವಾ ನಿಂಗೆ, ಗಂಟೆ ಆಗ್ಲೇ ಏಳೂವರೆಯಾಯ್ತು…. ಇನ್ನೂ ಸ್ಕೂಲಿಗೆ ರೆಡಿಯಾಗದೆ, ನಿಂಗೇನಲ್ಲಿ ಕೆಲಸ?… ವ್ಯಾನ್ ಬರೋ ಹೊತ್ತಾಯ್ತು, ಯಾವಾಗ ನೀನಿನ್ನು ಸ್ನಾನ ಮಾಡಿ ರೆಡಿಯಾಗೋದು? ‘
-ಅದೇ ತಾನೇ ಜಾಗಿಂಗ್ ಮುಗಿಸಿ ಒಳ ಅಡಿಯಿರಿಸುತ್ತಿದ್ದ ದಿನೇಶ, ಮಗಳು ಆರಾಮವಾಗಿ ಕೂತಿರುವುದನ್ನು ಕಂಡು ಕಿಡಿಕಾರಿದ. ‘ನಿಮಗೂ ಮಾಡಕ್ಕೆ ಬೇರೆ ಕೆಲಸ ಇಲ್ಲವೇನಮ್ಮ… ಓದೋ ಹುಡುಗೀಗೆ ದೇವರಮನೆ ಕೆಲಸ ಹಚ್ಚಿ ಹಾಡೂ ಹಸೆ ಅಂತ ಕೊರೀತಾ ಅವಳನ್ನು ಕೆಡಿಸ್ತಿದ್ದೀರ ಅಷ್ಟೇ… ದಯವಿಟ್ಟು ಬೆಳಗೆ ಸ್ಕೂಲ್ ಟೈಂನಲ್ಲಿ ಅವಳನ್ನ ಡಿಸ್ಟರ್ಬ್ ಮಾಡ್ಬೇಡಿ’
ಮಗನ ಒರಟು ನುಡಿಗಳನ್ನು ಕೇಳಿ, ದೇವರ ಪೂಜೆಯಲ್ಲಿ ನಿರತರಾಗಿದ್ದ ತಂದೆ ತಟ್ಟನೆ ತಲೆಯೆತ್ತಿ ಅವನತ್ತ ನೋಡಿದರು. ಅವರ ಕಂಗಳಲ್ಲಿ ನೋವು ಹೆಣೆದಿತ್ತು. ತಾಯಿ, ಹೊಸೆಯುತ್ತಿದ್ದ ಹೂಬತ್ತಿಯ ಬುಟ್ಟಿಯನ್ನೆತ್ತಿಕೊಂಡು ಮೌನವಾಗಿ ಒಳಸರಿದರು.
‘ದೀಪೂ….’
ಈ ಬಾರಿ ಘರ್ಜಿಸುವ ಸರದಿ ಆಶಾಳದು. ‘ಇನ್ನೂ ರೆಡಿಯಾಗಲಿಲ್ಲವೇನೇ?…. ವ್ಯಾನ್ ಬಂತು’
ದೀಪಿಕಾ ದಡಬಡ ಬೆನ್ನಿನ ಮೇಲೆ ಪುಸ್ತಕಗಳ ಮೂಟೆ ಹೊತ್ತು ಬಗ್ಗಿಕೊಂಡೇ ತಾಯಿಗೆ ‘ಬೈ’ ಎಂದು ಹೊರಗೋಡಿದಳು.
ಅಡಿಗೆಮನೆ ಬಾಗಿಲಲ್ಲಿ ನಿಂತಿದ್ದ ಅಜ್ಜಿಯ ಕೈಲಿದ್ದ ತಿಂಡಿಯ ತಟ್ಟೆ ಹಾಗೇ ಇತ್ತು. ತಂದೆ-ತಾಯಿ ಇಬ್ಬರೂ ಅವಸರ ಮಾಡಿ ಮಗುವನ್ನು ಬರೀ ಹೊಟ್ಟೆಯಲ್ಲೇ ಶಾಲೆಗೆ ಸಾಗಿಹಾಕಿದ್ದನ್ನು ಕಂಡು ಅಜ್ಜಿ ಒಳಗೇ ಪೇಚಾಡಿಕೊಂಡಿತು.
‘ಅದೇನೊಳ್ಳೆ ಅವಸರವೋ ನಿಮ್ದು… ಮಗೂಗೆ ಒಂದು ತುತ್ತು ತಿನ್ನಿಸಿ ಕಳಿಸಬಾರದಿತ್ತೇ?… ಈ ವ್ಯಾನ್ ಹೋದರೆ ಹೋಗಲಿ, ದಿನಾ ಅವಳನ್ನು ಕಾರಿನಲ್ಲಿ ಬಿಟ್ಟುಬರಬಹುದಿತ್ತು’ ಅಜ್ಜಿ ಒದ್ದುಕೊಂಡರು ಕಳಕಳಿಯಿಂದ.
‘ನೀವು ಹೀಗೆ ಅತೀ ಮುದ್ದು ಮಾಡೇ ಕೆಡಿಸ್ತಿದ್ದೀರಿ-ಟೈಮ್‍ಗೆ ಸರಿಯಾಗಿ ಸ್ಕೂಲಿಗೆ ಹೋಗದಿದ್ರೆ ಹೇಗೆ? ಅದೂ ಇದೂ ಕೆಲಸ ಹೇಳಿ ಸ್ಕೂಲಿಗೆ ಲೇಟ್ ಮಾಡಿದ್ದು ನೀವೇ… ಈಗ ತಪ್ಪು ನನ್ನ ಮೇಲೆ ಹೊರಿಸ್ತಿದ್ದೀರಾ?’-ಸೊಸೆ ಮುಖ ದುಮ್ಮಿಸಿಕೊಂಡಳು.
‘ಇನ್ಮೇಲೆ ನೀವು ಬೆಳಗಾಗೆದ್ದು ಶ್ಲೋಕ- ಸಂಸ್ಕೃತ ಅಂತ ಹೇಳಿಕೊಡ್ತಾ ಕೂತ್ಕೋಬೇಡಿ… ಅವಳು ತುಂಬಾ ಓದಿಕೊಳ್ಳೋದಿರತ್ತೆ… ಟೈಂ ಈಸ್ ಪ್ರೆಷಿಯಸ್’
ಮಗ, ತಂದೆಗೆ ಬುದ್ಧಿವಾದ ಹೇಳಿದಾಗ, ಆತ ಮಗುಟ ಬಿಚ್ಚಿಡುತ್ತಿದ್ದವರು ಹುಬ್ಬುಗಂಟಿಕ್ಕೆ ‘ನೀವೆಲ್ಲ ಹೀಗಾಗೋ ಹೊತ್ತಿಗೆ ನಮ್ಮ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮರೆಯಾಗಿ ಹೋಗ್ತಿರೋದು…. ನಮ್ಮ ರಾಮಾಯಣ-ಭಗವದ್ಗೀತೆ ಅಂತ ಎರಡು ಶ್ಲೋಕ ಕಲೀಬಾರ್ದೇನೋ ಮಗು…’ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.
ಸೊಸೆ ಇನ್ನೂ ನೈಟ್‍ಗೌನಿನಲ್ಲೇ ಓಡಾಡುತ್ತಿರುವುದನ್ನು ಗಮನಿಸಿ ಅಜ್ಜಿ ಗಂಟಲಲ್ಲಿ ಗೊಣಗೊಣ ಮಾಡಿ, ತಲೆ ಬಗ್ಗಿಸಿಕೊಂಡು ತರಕಾರಿ ಹೆಚ್ಚ ತೊಡಗಿದರು.
ಅಡಿಗೆ ವಾಸು, ದೀಪಿಕಳಿಗೆ ಇಷ್ಟವಾದ ಕೇಸರೀಭಾತ್ ತಟ್ಟೆಯಲ್ಲಿ ಹಾಗೇ ಉಳಿದಿದನ್ನು ಕಂಡು- ‘ಆ ಮಗೂಗೆ ಹೊಟ್ಟೆ ಒಂದಿದೆ ಅಂತ ಯೋಚಿಸೋರು ಯಾರೂ ಇಲ್ಲವೇ…ಸರಿ ನಾನೇ ಡಬ್ಬಿಗೆ ಹಾಕ್ಕೊಂಡು ಸ್ಕೂಲಿಗೆ ಹೋಗಿ ಕೊಟ್ಟು ಬರ್ತೀನಿ’… ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ.
ದೀಪಿಕಳ ನಿರ್ಗಮನಾನಂತರ ಮನೆ ಮೌನದ ಕಡಲಾಯ್ತು. ಸದಾ ಕಲರವವೆಬ್ಬಿಸುವ ಮೊಮ್ಮಗಳಿದ್ದರೇ ಅಜ್ಜಿ-ತಾತನಿಗೆ ಜೀವಸಂಚಾರ…. ‘ಕಥೆ ಹೇಳು’ ಎಂದು ಪೀಡಿಸುವ ಮೊಮ್ಮಗಳ ನಿರೀಕ್ಷೆಯಲ್ಲಿ ತಾತಾ ಗಡಿಯಾರಕ್ಕೆ ಕಣ್ಣು ಅಂಟಿಸಿಕೊಂಡು ಕೂತರು.
ದಿನೇಶ ಹತ್ತು ಗಂಟೆಗೆ ಸರಿಯಾಗಿ ಆಫೀಸಿಗೆ ಹೋದ.
ಐದೈದು ನಿಮಿಷಗಳಿಗೂ ಫೋನ್ ಹೊಡೆದುಕೊಳ್ಳುತ್ತಿತ್ತು. ಎಲ್ಲಾ ಆಶಾಳ ಲೇಡಿಸ್ ಕ್ಲಬ್ ಸ್ನೇಹಿತೆಯರದು. ಆಶಾ ಗೆಳತಿಯರ ಮುಂದೆ ತನ್ನ ಗಂಡನ ಪ್ರಮೋಷನ್ನು, ಸಂಬಳ, ಅಧಿಕಾರಗಳ ಬಗ್ಗೆ, ಮಗಳ ನೃತ್ಯಾಭ್ಯಾಸದ ಬಗ್ಗೆ ಕೊಚ್ಚಿಕೊಂಡದ್ದೇ ಕೊಚ್ಚಿಕೊಂಡದ್ದು. ಮಧ್ಯಾಹ್ನ ಸರಿಯಾಗಿ ಎರಡಕ್ಕೆ ಅವಳು ವ್ಯಾನಿಟಿಬ್ಯಾಗ್ ಚಿಮ್ಮಿಸಿಕೊಂಡು ಕ್ಲಬ್ಬಿಗೆ ನಡೆದಾಗ, ಅಜ್ಜಿ ನಿಡಿದಾದ ನಿಟ್ಟುಸಿರು ಕಕ್ಕಿದವರೇ ಅಡುಗೆಮನೆಯತ್ತ ನಡೆದು- ‘ವಾಸು, ಸಂಜೆಗೆ ದೀಪೂಗೆ ಇಷ್ಟವಾದ ಈರುಳ್ಳಿ ಪಕೋಡ ಮಾಡಿಡು… ಹಾಗೇ ಮೊನ್ನೆ ಮಾಡಿಟ್ಟ ಕೋಡುಬಳೆ ಮುಗಿದಿದ್ರೆ ಇನ್ ಸ್ವಲ್ಪ ಮಾಡಿ ಮೇಲೆ ಮುಚ್ಚಿಟ್ಟು ಬಿಡು, ಆಶಾಳ ಕಣ್ಣಿಗೆ ಬೀಳದ ಹಾಗೆ’ ಎಂದರು ಉತ್ಸಾಹದಿಂದ.
ಸರಿಯಾಗಿ ನಾಲ್ಕು ಗಂಟೆ ಆಗೋದನ್ನೇ ಕಾಯುತ್ತಿದ್ದ ಅಜ್ಜಿ-ತಾತ, ಹೊರಗೆ ವ್ಯಾನ್ ಶಬ್ದ ಕೇಳುತ್ತಲೇ ಹೊರಧಾವಿಸಿ ಬಂದರು. ದೀಪಿಕಳ ಮೊಗಗಾಣುತ್ತಲೇ ಅವರ ಮುಖಗಳು ಅರಳಿದವು!
‘ಬೇಗ ಹೋಗಿ ಕೈಕಾಲು ಮುಖ ತೊಳ್ಕೊಂಡು, ಬಟ್ಟೆಬದಲಾಯಿಸ್ಕೊಂಡು ಬಾ ಮಗೂ…. ನಿಂಗೊಂದು ತಮಾಷೆ ಕೊಡ್ತೀನಿ’ ಅಜ್ಜಿ ಹುರುಪಿನಿಂದ ಹೇಳಿದರು.
‘ಆಮೇಲೆ ಅಂಗಳದ ಕಲ್ಲುಬೆಂಚಿನ ಮೇಲೆ ಕೂರ್ತೀನಿ ಬಾ ದೀಪೂ, ಕಥೇ ಹೇಳ್ತೀನಿ’ – ತಾತ ಕೋಲೂರಿಕೊಂಡು ಹೊರನಡೆದರು.
ದೀಪಿಕಳಿಗೆ ತಂದೆ-ತಾಯಿಯರಿಲ್ಲದ ಸಮಯವೆಂದರೆ ದೊಡ್ಡ ಹಬ್ಬ!… ಸ್ಟೇಚ್ಛೆಯಾಗಿ ನರ್ತಿಸುವ ನವಿಲಂತೆ ತನ್ನ ಫ್ರಾಕಿನ ನೆರಿಗೆಗಳನ್ನು ಪಟಪಟಾಯಿಸಿಕೊಂಡು ಮನೆ ತುಂಬಾ ಓಡಾಡಿದಳು. ಹೊಟ್ಟೆ ಬಿರಿಯ ಕೇಸರಿಭಾತು, ಪಕೋಡಾ-ಕೋಡುಬಳೆ ತಿಂದು ಅಂಗಳಕ್ಕೆ ಓಡಿಬಂದು ತಾತನಿಗೊರಗಿ ಕುಳಿತು ಹೂಂಗುಟ್ಟಿದಳು. ತಾತನಿಗೆ ಕಥೆ ಆರಂಭಿಸು ಎಂಬ ಸಂಕೇತವದು.
ಕಥೆ ಕೇಳಿದ ನಂತರ ‘ತಾತಾ ಡ್ಯಾಡಿ ಬರಕ್ಕೆ ಇನ್ನು ಅರ್ಧ ಗಂಟೆ ಟೈಮಿದೆ, ಪಕ್ಕದ್ಮನೆ ಶ್ರುತಿ ಜೊತೆ ಸ್ವಲ್ಪ ಹೊತ್ತು ಆಟ ಆಡ್ಕೊಂಡು ಬರಲಾ?’ ಎಂದು ಚಿಟ್ಟೆಯಂತೆ ಹಾರಿ ಉತ್ಸಾಹ ಗರಿಗೆದರಿ ನಿಂತವಳ ಮೊಗ ಗೇಟಿನತ್ತ ದಿಟ್ಟಿ ಹೊರಳಿತು. ಮನೆಯ ಮುಂದೆ ಕಾರು ನಿಂತು ದಿನೇಶ ಅದರಿಂದ ಕೆಳಗಿಳಿಯುತ್ತಿದ್ದ.
‘ಏಯ್..ದೀಪೂ… ಎಲ್ಲಿಗೆ ಹೊರಟೆ ?…. ಪರೀಕ್ಷೆಗೆ ಎಷ್ಟು ದಿನ ಉಳಿದಿದೆ ಗೊತ್ತಾ?… ಹೂಂ ಸದಾ ಆಟ ಆಟ… ಯಾಕೋ ಬರ್ತಾ ಬರ್ತಾ ತೀರ ಕೆಟ್ಟ್ಹೋಗ್ತಿದ್ದೀ … ಟ್ಯೂಷನ್ ಮಿಸ್ ಬರೋ ಟೈಮು, ಒಳಗೆ ನಡಿ’ ಎಂದು ದಿನೇಶ ಗದರಿಕೊಂಡೇ ಒಳಬಂದ.
ದೀಪಳ ನಗುವ ಮುಖ ಒಮ್ಮೆಲೆ ಮೊಗ್ಗಾಗಿ, ಕಾಂತಿಹೀನ ಕಣ್ಣುಗಳಿಂದ ತಾತನತ್ತ, ಅಸಹಾಯಕ ನೋಟ ಬೀರಿದಳು.
ತಾತ ಮಗನತ್ತ ದುರುಗುಟ್ಟಿಕೊಂಡು ನೋಡುತ್ತ, ‘ನಿಂದೊಳ್ಳೆ ಅತಿಯಾಯ್ತು ಕಣೋ ದಿನೂ, ಆಡೋ ಮಗೂಗೆ ಹೀಗೆ ಸದಾ ಓದೂಂತ ನಾಲ್ಕು ಗೋಡೆ ಮಧ್ಯಾನೇ ಕಟ್ಟುಹಾಕಿದರೆ ಅದರ ಮನಸ್ಥಿತಿ ಹೇಗಾಗಬೇಡ… ನೀನು ಈ ವಯಸ್ಸಲ್ಲಿ ರಾತ್ರಿ ಎಂಟಾದರೂ ಮನೆ ಸೇರ್ತಿರ್ಲಿಲ್ಲ…? ಎಂದರು.
ದಿನೇಶನ ಹುಬ್ಬುಗಳು ಹೆಣೆದುಕೊಂಡವು- ‘ನಮ್ಮ ಕಾಲನೇ ಬೇರೆ- ಈ ಕಾಲನೇ ಬೇರೆ… ಈಗ ಎಲ್ಲ ಕಾಂಪಿಟೇಷನ್ ಯುಗ. ಇವಳು ಹೀಗೆ ಟೈಂ ವೇಸ್ಟ್ ಮಾಡಿದರೆ ನನ್ನಾಸೆಯಂತೆ ನಾಳೆ ಕಂಪ್ಯೂಟರ್ ಎಂಜಿನಿಯರ್ ಆದ್ಹಾಗೆ.. ದಯವಿಟ್ಟು ಈ ವಿಷ್ಯದಲ್ಲಿ ನೀವು ತಲೆಹಾಕಬೇಡಿ ನೀವು ’ ಎಂದು ಖಾರವಾಗಿ ಅಂದವನೆ, ಮಗಳನ್ನು ದರದರನೆ ಎಳೆದುಕೊಂಡು ಒಳಗೆ ಹೋದ.
ಅಜ್ಜಿ ಪೆಚ್ಚಾಗಿ ನಿಂತಿದ್ದರು.
ದೀಪಿಕಳ ಸುತ್ತ ಒಂದು ದೊಡ್ಡ ಪುಸ್ತಕದ ಕೋಟೆಯೇ ನಿರ್ಮಿತವಾಗಿತ್ತು. ದಿನೇಶ ಪ್ರತಿಸಲ ಮಾಲಿಗೆ ಹೋದಾಗಲೂ ಹೊತ್ತುಕೊಂಡು ಬರುತ್ತಿದ್ದುದು ಜನರಲ್ ನಾಲೆಡ್ಜ್, ಸೈನ್ಸ್ ಇನ್ನಿತರ ಜ್ಞಾನಾರ್ಜನೆಯ ಪುಸ್ತಕಗಳನ್ನೇ.
‘ಇದನ್ನೆಲ್ಲ ನೀನು ಓದಿ ಮುಗಿಸಬೇಕು ಮರಿ, ಆಮೇಲೆ ಇನ್ನಷ್ಟು ಬುಕ್ಸ್ ತಂಕೊಡ್ತೀನಿ’
‘ದಿನಕ್ಕೆ ನಾಲ್ಕು ಗಂಟೆ ಕಾಲ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ, ನೀನೊಬ್ಬ ದೊಡ್ಡ ನೃತ್ಯಕಲಾವಿದೆ ಆಗಬೇಕೂ ಅನ್ನೋದೇ ನನ್ನಾಸೆ ಕಣೆ ದೀಪು…. ಅದೇ, ನನ್ನ ಜೀವನದ ಗುರಿ’
‘ಪ್ರತಿದಿನ ಭಗವದ್ಗೀತೆಯ ಶ್ಲೋಕಗಳನ್ನೆಲ್ಲ ಬಾಯಿಪಾಠ ಮಾಡಿ ನಂಗೆ ಒಪ್ಪಿಸಬೇಕು ಪುಟ್ಟ’
ಎಲ್ಲರೂ ಒಂದೊಂದು ಕಟ್ಟಪ್ಪಣೆ ಮಾಡುವವರೇ… ಕಿವಿಯ ತುಂಬ ಕಾದ ಸೀಸ ಹೊಯ್ದಂತಾಗಿ ದೀಪಿಕಾ ನೋವಿನಿಂದ ಮುಖ ಹಿಂಡಿದಳು. ಅವಳ ದೃಷ್ಟಿ ಕೈಲಿದ್ದ ಟೆಕ್ಟ್ಸ್ ಬುಕ್‍ನಲ್ಲಿರದೆ ಹಾಲಿನ ಟಿವಿಯ ತೆರೆಯ ಮೇಲೆ ನಲಿದಾಡುತ್ತಿದ್ದ ದೃಶ್ಯಗಳ ಮೇಲೆ ಕೇಂದ್ರೀಕೃತವಾಗಿತ್ತು. ಅವಳ ಅತ್ಯಂತ ಸಂತೋಷದ ಘಳಿಗೆಗಳೆಂದರೆ ಬೊಂಬೆಗಳೊಡನೆ ಆಟ ಆಡುವಾಗ ಹಾಗೂ ಭಾನುವಾರಗಳಂದು ಟಿವಿಯಲ್ಲಿ ಕಾರ್ಟೂನ್ ಚಿತ್ರಗಳನ್ನು ನೋಡುವಾಗ.
ಅದೂ ನಿರಾತಂಕದ ಘಳಿಗೆಗಳಲ್ಲಿ ಅವಳು ಕಡು ಆಸಕ್ತಿಯಿಂದ ಕಾರ್ಟೂನ್ ನೋಡುವಾಗ ದಿನೇಶ್ ನಿರ್ದಾಕ್ಷಿಣ್ಯವಾಗಿ ಟಿವಿ ಆಫ್ ಮಾಡಿ, ಮಗಳ ಬೆನ್ನಿಗೊಂದು ಪೆಟ್ಟುಕೊಟ್ಟು,- ‘ಸದಾ ಟಿವಿ ಮುಂದೆ ಕೂತ್ರೆ ಕಣ್ಣು ಹಾಳಾಗತ್ತಷ್ಟೆ. ಎದ್ದು ಓದ್ಕೋ ಹೋಗು… ಈ ಸಲ ನೀನು ಕ್ಲಾಸಿಗೆ ಫಸ್ಟ್ ಬರದಿದ್ರೆ ಏನ್ಮಾಡ್ತೀನಿ ನೋಡು’… ಎಂದು ಕಣ್ಣು ಕೆಂಪಗೆ ಮಾಡುತ್ತಿದ್ದ ತಂದೆಯ ಕಣ್ಣಿನ ಕೆಂಡ ಅವಳ ಮೇಲೆ ಸುರುವಿದಂತಾಗಿ ಅವಳು ಗಾಬರಿಯಿಂದೆದ್ದು ಕೋಣೆಗೆ ಓಡಿ ಹೋಗುತ್ತಿದ್ದಳು.
‘ದೀಪೂ… ನಿನ್ನ ಅರಂಗೇಟ್ರಂ ಗ್ರ್ಯಾಂಡಾಗಿ ಅರೆಂಜ್ ಮಾಡ್ತೀನಿ, ನಮ್ಮ ಕ್ಲಬ್ಬಿನೋರೆಲ್ಲ ಮೂಗಿನ ಮೇಲೆ ಬೆರಳು ಇಡೋ ಹಾಗೆ, ಆ ಕಮಲಾಕ್ಷಿ ಮಗಳ ಪ್ರೋಗ್ರಾಮ್ ನಿವಾಳಿಸೋ ಹಾಗೆ,ಎಲ್ಲ ಬಂದು ನನ್ನ ಗ್ರೀಟ್ ಮಾಡಬೇಕು ಹಾಗೆ ನೀನು ತಯಾರಾಗಬೇಕು.. ಜೋಕೇ !!’
ತಂದೆ-ತಾಯಿಯರ ಬೆಟ್ಟದೆತ್ತರದ ನಿರೀಕ್ಷೆ ಕಂಡು ಆ ಪುಟ್ಟ ಹೃದಯ ಭೀತಿಯಿಂದ ಢವಢವವೆಂದಿತು. ರಾತ್ರಿಯೆಲ್ಲ ಅರೆಬರೆ ನಿದ್ದೆ… ಕನವರಿಕೆ ಹೊರಳಾಟ. ತನ್ನ ತಲೆ ದಪ್ಪವಾಗಿ ಬೆಲೂನಿನಂತೆ ಊದಿಕೊಳ್ಳುತ್ತ, ಟಪ್ಪನೆ ಸಿಡಿದಂತಾಗಿ ಗಾಬರಿಯಾಗಿ ‘ಅಮ್ಮ ನಾನು ಸತ್ತೆ’ ಎಂದು ಅವಳೊಮ್ಮೆ ಒಂದು ರಾತ್ರಿ ಹೆದರಿ ಕನವರಿಸಿಕೊಂಡು ಎದ್ದು ಕೂತಾಗ, ಗಾಬರಿಯಿಂದ ದಿನೇಶ, ಆಶಾ ಇಬ್ಬರೂ ಅವಳ ಕೋಣೆಗೆ ಓಡಿ ಬಂದಿದ್ದರು.
‘ಏನೋ ಕೆಟ್ಟ ಕನಸು ಕಂಡಿರಬೇಕು’ ಎಂದು ದಿನೇಶ ಮಗಳಿಗೆ ಧೈರ್ಯ ಹೇಳಿ ಹೊರಟಾಗ ದೀಪಿಕಳ ಮುಖ ಬೆವರಿನಿಂದ ತೊಯ್ದು ಹೋಗಿತ್ತು. ‘ಸುಮ್ನೆ ಮಲಕ್ಕೋ ದೀಪು… ಬೆಳಿಗೆ ಬೇಗ ಏಳಬೇಕು- ಸೋಮವಾರದಿಂದ ಪರೀಕ್ಷೆ.’
ಅವನ ನುಡಿ ಕೋಣೆಯಿಡೀ ಝೇಂಕರಿಸಿತು. ಆ ಗೋಡೆಯಿಂದ ಈ ಗೋಡೆಗೆ ಅಪ್ಪಳಿಸಿತು…ಗದರಿಕೆಯ ದನಿ, ಝೇಂಕಾರವಾಗಿ ಬರುಬರುತ್ತ ಗೆಜ್ಜೆಯ ಝಣ ಝಣ ಝಣಾತ್ಕಾರವಾಗಿ ಕಿವಿ ತುಂಬುತ್ತ ಕರ್ಕಶವಾಗಿ ಕಿವಿಯ ತಮಟೆಯನ್ನು ಭೇದಿಸತೊಡಗಿತು. ಝಣ್ ಝಣ್… ಥೈ. ಥೈ. ಥೈ ದಿದಿಥೈ… ಥೈಥೈತೈ ದಿದಿಥೈ….
ಬೆಳಗಿನವರೆಗೂ ದೀಪಿಕಾ ಭಯವಿಹ್ವಲಳಾಗಿ ಒಂದೇ ಸಮನೆ ಹೊರಳಾಡುತ್ತಲೇ ಇದ್ದಳು. ಆಗಾಗ ಬೆಚ್ಚಿಬಿದ್ದೆದ್ದು ಕೂಡುತ್ತಿದ್ದಳು. ಕಣ್ಣುಗಳು ಭಯದ ಹೊಂಡದಂತೆ… ಹಣೆಯ ಮೇಲೆ ಬೆವರ ಸಾಲು…. ಎದೆ ಢಗಢಗ ಬಾರಿಸುವ ನಗಾರಿ!….
ಎರಡೂ ಕಿವಿಯನ್ನೂ ಭದ್ರವಾಗಿ ಮುಚ್ಚಿಕೊಂಡಳು. ಆದರೂ ಒಳತೂರಿ ಪ್ರತಿಧ್ವನಿಸುತ್ತಿದ್ದ ತಾತನ ಕಂಚಿನ ಕಂಠದಲ್ಲಿ ಭಗವದ್ಗೀತೆಯ ಶ್ಲೋಕಗಳ ಗುಂಗುರು.. ಗುಂಗುರು.
ಬೆಳಗ್ಗೆ ದಿನೇಶ, ಎಂದಿನಂತೆ ಜಾಗಿಂಗ್ ಮುಗಿಸಿ ಬಂದವನು ಸೀದಾ ಮಗಳ ಕೋಣೆಯೊಳಗೆ ನುಗ್ಗಿ –
‘ದೀಪೂ ಇದೇನು ಇನ್ನೂ ಮಲಗೇ ಇದ್ದೀ….ಪರೀಕ್ಷೆ…’ ಎಂದು ಅಬ್ಬರಿಸಿದವನನ್ನು, ಅಜ್ಜಿ ತಡೆಯುತ್ತ, ದೀಪಿಕಳ ಹಣೆಯ ಮೇಲೆ ಕೈಯಿರಿಸಿ ಹೌಹಾರಿ ‘ಕೆಂಡಾಮಂಡಲ ಜ್ವರ ಸುಡುತ್ತಿದೆ, ಬೇಗ್ಹೋಗಿ ಡಾಕ್ಟರನ್ನ ಕರ್ಕೊಂಡು ಬಾ ಹೋಗೋ ದಿನೂ’ ಎಂದು ಗಾಬರಿಯಿಂದ ಬಡಬಡಿಸಿದರು.
‘ಸ್ಕೂಲ್ ತಪ್ಪಿಸ್ಕೊಳಕ್ಕೆ ಆಟ ಕಟ್ಟಿದ್ದಾಳಷ್ಟೆ. ಈ ಕಡೆ ಬಾಮ್ಮ, ನಾನು ನೋಡ್ತೀನಿ ಎಂದ ದಿನೇಶ, ಮಗಳ ಹಣೆ ಮುಟ್ಟಿ ನೋಡಿದವನೇ ಹೌಹಾರಿದ!
‘ಹೊತ್ತುಗೊತ್ತು ಇಲ್ಲದೆ ಪಾಪ ಮಗೂನ ಹಾಗೆ ನೀನು ಓದಿಸೋದೇನು, ನಿಮ್ಮಿಷ್ಟಕ್ಕೆ ಅವಳನ್ನ ಕುಣಿಸೋದೇನು’- ತಾತ ಕೋಪದಿಂದ ಗೊಣಗುಟ್ಟಿದರು.
ಹಿರಿಯರ ಇಷ್ಟಾನಿಷ್ಟಗಳ ಮಧ್ಯೆ ದೀಪಿಕಾ ಪಗಡೆಯಾಟದ ದಾಳವಾಗಿ ಹೋಗಿದ್ದಳು. ಎಲ್ಲರಿಗೂ ಅವರದೇ ಇಷ್ಟ ನಡೆಯಬೇಕೆಂಬ ಇರಾದೆ. ಹೀಗೆಯೇ ಗಂಡ-ಹೆಂಡತಿ ಮತ್ತು ತಾತನ ಮಧ್ಯೆ ದಿನಾ ಇದೇ ಕಿತ್ತಾಟ. ಯಾವಾಗಲೂ ಒಬ್ಬರು ಏನಾದ್ರೂ ಹೇಳಿಕೊಡ್ತಿದ್ರ್ರೆ ಇನ್ನೊಬ್ಬರಿಗೆ ಅಸಹನೆ…ವಾಗ್ವಾದ.. ಹೀಗಾಗಿ ಕಡೆಗೊಂದು ದಿನ ಅವರ ನಡುವೆ ಒಂದು ಒಪ್ಪಂದವಾಗಿತ್ತು. ಮೂರು ಜನರು ತಮಗೆ ಇಷ್ಟವಾದುದನ್ನು ದೀಪಿಕಳಿಗೆ ಕಲಿಸಲು ಬೇರೆಬೇರೆ ಸಮಯಗಳನ್ನು ಹಂಚಿಕೊಂಡಿದ್ದರು. ಒಬ್ಬರ ಟೈಂನಲ್ಲಿ ಇನ್ನೊಬ್ಬರು ಪ್ರವೇಶ ಮಾಡುವ ಹಾಗಿರಲಿಲ್ಲ. ಈ ದಿನಚರಿಯಲ್ಲಿ ಬೆಳಗೆಯಿಂದ ರಾತ್ರಿಯವರೆಗೆ ಒಂದು ನಿಮಿಷವೂ ದೀಪಿಕಾಳಿಗೆ ಅವಳದು ಎಂಬ ಸ್ವಂತ ಇಷ್ಟಕ್ಕಾಗಿ ಸಮಯ ನಿಗದಿಯಾಗಿರಲಿಲ್ಲ. ಹೀಗಾಗಿ ಇವರ ಮಧ್ಯೆ ದೀಪಿಕಾ ಹೈರಾಣಾಗಿ ಹೋಗಿದ್ದಳು. ಈ ನಡುವೆ ದಿನಾ ರಾತ್ರಿ ಹೊತ್ತು ಹಾಸಿಗೆ ಒದ್ದೆ ಮಾಡಿಕೊಳ್ಳತೊಡಗಿದ್ದಳು. ಇದಕ್ಕಾಗಿ ದಿನೇಶ ಅವಳನ್ನು ಒಂದೆರಡು ಬಾರಿ ದಂಡಿಸಿಯೂ ಇದ್ದ.
ನಟನೆ ಎಂದುಕೊಂಡದ್ದು ನಿಜವಾಗಿ, ದೀಪಿಕಾ ಎಂಟು ದಿನಗಳಿಗೂ ಹೆಚ್ಚು ಕಾಲ ತೀವ್ರ ಜ್ವರದ ತಾಪದಿಂದ ನರಳಿದಳು. ನರ್ಸಿಂಗ್ ಹೋಂಗೂ ನಾಲ್ಕು ದಿನ ಅಡ್ಮಿಟ್ ಆಗಿದ್ದಳು.
ಈ ಮಧ್ಯೆ ಸೋಮವಾರ ಬಂತು. ಪರೀಕ್ಷೆ ಆರಂಭವೂ ಆಯ್ತು. ಮುಗಿದೂ ಹೋಯ್ತು. ದಿನೇಶ ನಿರಾಸೆ-ಬೇಸರಗಳಿಂದ ದುಗುಡಗೊಂಡಿದ್ದ. ಅನ್ಯಾಯವಾಗಿ ಅವಳು ಪರೀಕ್ಷೆಗೆ ತಪ್ಪಿಸಿಕೊಳ್ಳುವ ಪ್ರಸಂಗ ಬಂದುದಕ್ಕೆ ಒಳಗೊಳಗೆ ಮಿಡುಕಾಡಿ ಬೆಂದುಹೋಗಿದ್ದ. ಮಗಳ ಪೇಲವ ಮೊಗ-ಕಾಂತಿಹೀನ ಕಣ್ಣುಗಳನ್ನು ಕಾಣುತ್ತ ಅವನ ಹೃದಯವೇ ಕಿತ್ತು ಬಂದಂತಾಗುತ್ತಿತ್ತು.
ಜ್ವರ ಬಿಟ್ಟರೂ ಸದಾ ಮಂಕಾಗಿ ಬುದ್ಧಿ ಭ್ರಮಿತಳಂತೆ ಕೂತಿರುತ್ತಿದ್ದ ಮಗಳನ್ನು ಕಂಡು, ಆಶಾ ಹೌಹಾರಿದ್ದಳು. ಅವಳ ಹೆತ್ತಕರುಳು ವಿಲವಿಲನೆ ಒದ್ದಾಡುತ್ತಿತ್ತು. ತನ್ನ ಭವ್ಯ ಕನಸುಗಳು ಗಾಳಿಗೆ ತೂರಿ ಹೋದರೂ, ಸದ್ಯ ತನ್ನ ಕೂಸು ತನಗೆ ದಕ್ಕಿದರೆ ಸಾಕು ಎಂಬ ದೈನ್ಯ ಸ್ಥಿತಿ ಅವಳದಾಗಿತ್ತು. ಅಜ್ಜಿ ಕಳವಳದಿಂದ ಎರಡೂ ಹೊತ್ತು ದೇವರ ಮುಂದೆ ತುಪ್ಪದ ದೀಪ ಹಚ್ಚಿಟ್ಟರು. ಎಲ್ಲ ದೇವರಿಗೂ ಹರಕೆ ಕಟ್ಟಿಟ್ಟರು. ತಾತನಂತೂ ಮೌನವಾಗಿ ಸದಾ ದೇವರ ಮನೆ ಸೇರಿ ಧ್ಯಾನಾರೂಢರಾಗಿದ್ದರು. ಅವರೊಳಗಿನ ಮೂಕವೇದನೆ ಅವರ ಮೊಗದಲ್ಲಿ ಮಡುಗಟ್ಟಿತ್ತು.
ದೀಪಿಕಾ ಕ್ರಮೇಣ ಅವರಿಗೆಲ್ಲ ಒಂದು ಒಗಟಾಗಿದ್ದಳು.
ಅವಳ ಕ್ಲಾಸ್ ಫರ್‍ಫಾರ್ಮೆನ್ಸ್ ನೋಡಿ ಶಾಲೆಯಲ್ಲಿ ಅವಳಿಗೆ ಮುಂದಿನ ತರಗತಿಗೆ ಪ್ರಮೋಷನ್ ಕೊಟ್ಟಿದ್ದರು. ಆದರೆ ದಿನೇಶನಿಗೆ ಅವಳ ಪಾಸು, ನಪಾಸುಗಳತ್ತ ಗಮನವಿರಲಿಲ್ಲ. ಅವನ ಬಯಕೆಗಳೆಲ್ಲ ಗೋರಿಯಾಗಿದ್ದವು. ಅವನಾಸೆಯ ಕಂಪ್ಯೂಟರ್ ಎಂಜಿನಿಯರ್ ಕಣ್ಗೊಂಬೆ ಕರಗಿ ನೀರಾಗಿ ಹರಿದುಹೋಗಿತ್ತು. ಅವನೀಗ ಮಂಕು ಬಡಿದ ಮಗಳ ಸ್ಥಿತಿಯ ಬಗ್ಗೆ ಅತೀವ ಬೇಗುದಿಗೊಂಡಿದ್ದ, ಅವಳಂತೆಯೇ ಮಂಕಾಗಿ ಹೋಗಿದ್ದ.
ದಿನಗಳುರುಳಿದರೂ ಮೌನದ ಗೊಂಬೆ ದೀಪಿಕಳಲ್ಲಿ ಯಾವ ಬದಲಾವಣೆಯ ಆಶಾಕಿರಣವೂ ಕಾಣಲಿಲ್ಲ. ಮೊದಲಿನ ನಗು-ಮಾತು-ಚಟುವಟಿಕೆಗಳಿಲ್ಲ, ಶಾಲೆಯಲ್ಲೂ ಮಂಕಾಗಿರುತ್ತಿದ್ದಳು-ಸಹಪಾಠಿಗಳೊಂದಿಗೆ ಸ್ನೇಹದ ನಡೆ ಇಲ್ಲ. ಓದಿನಲ್ಲೂ ಹಿನ್ನಡೆ… ಹಿಂದಿನ ದೀಪಿಕಾ ಎಲ್ಲೋ ಕಳೆದುಹೋಗಿದ್ದಳು. ದೀಪಿಕಳ ಬದಲಾದ ಚರ್ಯೆ ಕಂಡು ಮನೆಮಂದಿಯೆಲ್ಲ ಕಂಗಾಲಾಗಿ ಹೋಗಿದ್ದರು. ಸದ್ಯ ಅವಳು ಎಂಜಿನಿಯರ್, ಡ್ಯಾನ್ಸರ್ ಏನಾಗದಿದ್ದರೂ ಅವಳು ಮೊದಲಿನ ಮಗುವಾಗಿರಲಿ ಎಂದು ಎಲ್ಲರೂ ದೇವರನ್ನು ಹಗಲಿರುಳು ಪ್ರಾರ್ಥಿಸುವಂತಾಗಿದ್ದರು. ಎಲ್ಲರೂ ದೈನ್ಯಸ್ಥಿತಿಗೆ ಬಂದು, ಅವಳಿಗಾಗಿ ಅವರು ಏನನ್ನು ಮಾಡಲೂ ತಯಾರಿದ್ದರು.
ಗಂಡ-ಹೆಂಡತಿ ಅವಳನ್ನು ಡಾಕ್ಟರರ ಬಳಿ ಕರೆದೊಯ್ದಾಗ ಅವರು ‘ಇದು ದೈಹಿಕ ಖಾಯಿಲೆಯಲ್ಲ… ಮಾನಸಿಕ ತಜ್ಞರಿಗೆ ತೋರಿಸಿ’ ಎಂದಾಗ ಇಬ್ಬರೂ ಧರೆಗಿಳಿದು ಹೋದರು. ಆದರೂ, ಧೈರ್ಯ ಬರಸೆಳೆದುಕೊಂಡು ಗಂಡ-ಹೆಂಡತಿ, ಮಗಳನ್ನು ಪ್ರಸಿದ್ಧ ಮನಶಾಸ್ತ್ರಜ್ಞರ ಹತ್ತಿರ ಕರೆದೊಯ್ದು ತೋರಿಸಿ, ಅನೇಕ ದಿನಗಳು ಸಹನೆಯಿಂದ ಚಿಕಿತ್ಸೆ ಕೊಡಿಸಿದರು.
ಸರಿಯಾಗಿ ಒಂದು ವರ್ಷವೇ ಹಿಡಿಯಿತು- ಮಾನಸಿಕ ತಜ್ಞರು ದೀಪಿಕಳ ಮಾನಸಿಕ ಆಘಾತ- ಹಿನ್ನಲೆಯ ಬಗ್ಗೆ ಅಧ್ಯಯನ ಮಾಡಿ ಸುಪ್ತಮನಸ್ಸಿನ ಪದಾರ್ ಪದರಗಳನ್ನು ಬಿಡಿಸುವ ಪ್ರಯತ್ನ ಮಾಡಿ, ಅನೇಕ ಬಗೆಯ ಚಿಕಿತ್ಸೆಗಳ ನಂತರ ಅವಳನ್ನು ಮೊದಲಿನ ಸ್ಥಿತಿಗೆ ತರಲು.
ಮನಶಾಸ್ತ್ರಜ್ಞ ವೈದ್ಯರು ಗಂಡ-ಹೆಂಡಿರನ್ನು ಚೆನ್ನಾಗೇ ತರಾಟೆಗೆ ತೆಗೆದುಕೊಂಡಿದ್ದರು.
‘ನಿಮಗೇನಾದ್ರೂ ತಿಳುವಳಿಕೆಯಿದೆಯೇ?… ಓದಿದ ಜನಗಳು ನೀವು.. ನೀವೇ ಹೀಗೆ ಎಳೆಯ ಮನಸ್ಸಿನ ಮೇಲೆ ದಬ್ಬಾಳಿಕೆ ನಡೆಸಿದರೆ ಆ ಸುಕೋಮಲ ಮನಸ್ಸಿನ ಸ್ಥಿತಿ ಏನಾಗಬೇಡ…ನಿಮ್ಮಗಳ ಆಸೆಗೆ ಅವಳನ್ನು ಕೈಗೊಂಬೆ ಮಾಡಿಕೊಂಡು ನೀವುಗಳು ಅವಿವೇಕದಿಂದ ನಡೆದುಕೊಂಡಿದ್ದೀರಾ ಅಂತ ಹೇಳದೆ ಬೇರೆ ವಿಧೀನೇ ಇಲ್ಲ… ಅವಳ ಬಾಲ್ಯ ಸಹಜವಾದ ಆಸೆ ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಳ್ಳದೆ ನಿರ್ಲಕ್ಷಿಸಿದ್ದು ತುಂಬಾ ದೊಡ್ಡ ತಪ್ಪು… ಇನ್ ಸ್ವಲ್ಪ ದಿನಗಳು ಹೀಗೇ ಮುಂದುವರಿದಿದ್ರೆ, ಮಗು ಸಂಪೂರ್ಣ ಮನೋ ವೈಫಲ್ಯಕ್ಕೆ ಗುರಿಯಾಗೋದು… ಅದಕ್ಕೂ ತನ್ನದೇ ಆದ ಒಂದು ಮನಸ್ಸು, ಪ್ರಪಂಚ ಇದೆ… ಆಸೆ-ಆಕಾಂಕ್ಷೆಗಳಿವೆ… ಅದಕ್ಕೂ ಸ್ವಾತಂತ್ರ್ಯ ಬೇಕು- ಇದನ್ನು ನೀವು ಮೊದಲು ತಿಳ್ಕೋಬೇಕು’
ವೈದ್ಯರ ತೀಕ್ಷ್ಣನುಡಿಗಳು ನೇರವಾಗಿ ದಿನೇಶನ ಎದೆ ಹೊಕ್ಕು ಇರಿಯಿತು. ತಪ್ಪಿನ ಅರಿವಿನಿಂದ ಅವನು ತಲೆಬಾಗಿಸಿ ನಿಂತ. ಆಶಳಿಗೂ ಪಶ್ಚಾತ್ತಾಪವಾಗಿ ಕಣ್ದುಂಬಿ ಮಗಳತ್ತ ನೋಡುತ್ತಿದ್ದಳು.
‘ಡ್ಯಾಡಿ… ನಡೀರಿ ಮನೆಗೆ ಹೋಗೋಣ ಹೊತ್ತಾಯ್ತು… ನಾ ಓದ್ಕೋಳ್ಳೋದು ಇನ್ನು ಎಷ್ಟೊಂದಿದೆ. ಅಲ್ಲದೆ ನಾನಿನ್ನು ಡ್ಯಾನ್ಸ್ ಪ್ರಾಕ್ಟೀಸೂ ಮಾಡಿಲ್ಲ’ ಎಂದು ದೀಪಿಕಾ ಆತಂಕದಿಂದ ಮೇಲೆದ್ದಾಗ, ದಿನೇಶ, ಮಗಳ ತಲೆ ನೇವರಿಸುತ್ತ, ‘ಪರವಾಗಿಲ್ಲ ಬಿಡು ಪುಟ್ಟ. ಓದಿದರಾಯ್ತು… ಈಗ ನಾವೆಲ್ಲ ಎಂ.ಜಿ. ರೋಡಿಗೆ ಹೋಗಿ ಐಸ್‍ಕ್ರೀಂ ತಿಂದು, ನಿನಗೆ ಫರ್ ಡಾಲ್ ಕೊಂಡುಕೊಂಡು ಆಮೇಲೆ ಬಾಲಭವನಕ್ಕೆ ಹೋಗೋದು… ನೀನು ಅಲ್ಲಿ ಹಾಯಾಗಿ ಉಯ್ಯಾಲೆ-ಜಾರೋಬಂಡೆ……’
ದಿನೇಶ ಮಾತನಾಡುತ್ತಲೇ ಇದ್ದ. ದೀಪಿಕಾ ಸಂತೋಷ – ಆಶ್ಚರ್ಯಗಳಿಂದ ಕಣ್ಣರಳಿಸಿ ತಂದೆಯನ್ನೇ ಬೆಕ್ಕಸ ಬೆರಗಾಗಿ ನೋಡುತ್ತಿದ್ದಳು.
**********************
7 comments
ಇಂದಿನ ತಂದೆತಾಯಿಗಳು ಓದಲೇಬೇಕಾದ ಕಥೆ.ಮಕ್ಕಳ ಮೇಲೆ ಅದೆಷ್ಟು ಒತ್ತಡ.ನಿರೂಪಣೆ ಮತ್ತು ಅಂತ್ಯ ಚೆನ್ನಾಗಿದೆ👌🏻🙏
ಗೌರವಾನ್ವಿತ ಮೇಡಂ ಅವರೆ,
ಕಥೆಯ ಹಂದರ ನಿರರ್ಗಳವಾಗಿ ಚೆನ್ನಾಗಿ ಮೂಡಿಬಂದಿದೆ.
ಇಂದಿನ ತಂದೆತಾಯಿಗಳು ಓದಲೇಬೇಕಾದ ಕಥೆ.ಮಕ್ಕಳ ಮೇಲೆ ಅದೆಷ್ಟು ಒತ್ತಡ.ನಿರೂಪಣೆ ಮತ್ತು ಅಂತ್ಯ ಚೆನ್ನಾಗಿದೆ👌🏻🙏
ಜಿ.ಚಂದ್ರಕಾಂತ ನಿವೃತ್ತ ಉಪ ನಿರ್ದೇಶಕರು ವಾರ್ತಾ ಇಲಾಖೆ ಕಲಬುರಗಿ
REPLY
ಅಪಾರ ಧನ್ಯವಾದಗಳು.
ಗೌರವಾನ್ವಿತ ಮೇಡಂ ಅವರೆ,
ಕಥೆಯ ಹಂದರ ನಿರರ್ಗಳವಾಗಿ ಚೆನ್ನಾಗಿ ಮೂಡಿಬಂದಿದೆ.
ಇಂದಿನ ತಂದೆತಾಯಿಗಳು ಓದಲೇಬೇಕಾದ ಕಥೆ.ಮಕ್ಕಳ ಮೇಲೆ ಅದೆಷ್ಟು ಒತ್ತಡ. ನಿರೂಪಣೆ ಮತ್ತು ಅಂತ್ಯ ಬಹು ಸುಂದರವಾಗಿದೆ.
ಜಿ.ಚಂದ್ರಕಾಂತ ನಿವೃತ್ತ ಉಪ ನಿರ್ದೇಶಕರು ವಾರ್ತಾ ಇಲಾಖೆ ಕಲಬುರಗಿ
REPLY
ನಿಮ್ಮ ಪ್ರೀತಿಯ-ಅಭಿಮಾನದ ಪ್ರತಿಕ್ರಿಯೆಗೆ ಅನಂತ ನಮಸ್ಕಾರಗಳು ಚಂದ್ರಕಾಂತ್. ಇದೇ ರೀತಿ ನಿಮ್ಮ ಕಥಾಪ್ರೀತಿ ಮುಂದುವರೆಯಲಿ. ನನ್ನ ಎಲ್ಲ ಕಥೆಗಳನ್ನೂ ನೀವು ಓದಬೇಕೇಂಬುದು ನನ್ನ ಆಸೆ.
ಈಗ ಹೀಗೆ ಆಗುತ್ತಿದೆ ನೋಡಿದ್ರೆ ತುಂಬಾ ಹಿಂಸೆ ಆಗುತ್ತೆ
Definetely Varuni avare. thank you for liking my story.