ನಾನಾಗ ಹದಿನೈದು ವರ್ಷದ ಹುಡುಗಿ. ಅದಾಗಲೇ ಒಂದೆರಡು ಕಥೆ-ಕವನಗಳನ್ನು ಬರೆದಿದ್ದೆ. ಒಂದು ಕಾದಂಬರಿಯನ್ನೂ ಬರೆದು ಮುಗಿಸಿದ್ದೆ. ಬಹುಶಃ ಇದು ನನ್ನ ಮೂರನೆಯ ಸಣ್ಣಕಥೆ ಇರಬೇಕು. ಷೋಡಶಿಯ ಮಧುರಭಾವನೆಗಳ ಅಭಿವ್ಯಕ್ತಿ ಹೇಗಿದೆ ನೋಡಿ ಹೇಳಿ : ಲೇಖಕಿ – ವೈ.ಕೆ.ಸಂಧ್ಯಾ ಶರ್ಮ
‘ಜಯಾ…ಜಯಾ’‘
‘ಬಂದೇಮ್ಮಾ’ ಬೇಸರದಿಂದ ಮುಖ ಸಿಂಡರಿಸಿಕೊಂಡು ಎದ್ದಳು ಜಯಶ್ರೀ.
‘ಒಂದು ಸ್ವಲ್ಪ ಕೊಬ್ಬರಿ ತುರಿದು ಕೊಡೆ’ ತಾಯಿ ಕೆಲಸ ಅಂಟಿಸಿದರು.
ತುರಿಯುವ ಮಣೆ, ಕೊಬ್ಬರಿ ಹೋಳು ತಂದು ಮುಂದೆ ಇಟ್ಟುಕೊಂಡಳು ಜಯಶ್ರೀ. ಜೋರಾಗಿ ಶಬ್ದ ಮಾಡುತ್ತಾ ತುರಿಯ ತೊಡಗಿದಳು, ತನಗೆ ಈ ಕೆಲಸ ಇಷ್ಟವಿಲ್ಲವೆಂಬಂತೆ. ‘ಥುತ್… ಹಾಳಾದ ಕೆಲಸ, ಮನೇಲಿ ಕೂತು ಕೂತು ಬೇಜಾರು. ಬಿ.ಎಸ್ಸಿ. ಮುಗಿದರೂ ಎಂ.ಎಸ್ಸಿ. ಗೆ ಹೋಗೋದಕ್ಕೆ ಅಪ್ಪ ಬೇಡ ಅಂದರು. ಕೆಲಸಕ್ಕೆ ಸೇರೋಣಾ ಅಂದ್ರೆ ಅಮ್ಮ ನಕಾರ. ಇನ್ನೇನು ತಾನೇ ಮಾಡಲಿ? …ಸರಿ…ಈ ಅಡಿಗೆ ಮನೆ ಕೆಲಸ ನನಗೆ ಕಟ್ಟಿಟ್ಟದ್ದು ಎಂದುಕೊಂಡು ವಿಮನಸ್ಕಳಾಗಿ ತುರಿಯುತ್ತಿದ್ದಳು.‘ಹಾ’ ಎಂದು ನೋವಿನಿಂದ ರಕ್ತ ಬರುತ್ತಿದ್ದ ಬೆರಳನ್ನು ಅದುಮಿ ಹಿಡಿದುಕೊಂಡಳು.
‘ಸಾಕಮ್ಮ ಸಾಕು…ನಿನಗೆ ಕೆಲಸ ಹೇಳೋದು ಸಾಕು, ನೀನು ಕೈ ಹೆಚ್ಚುಕೊಳ್ಳೋದು ಸಾಕು… ಬಿಡು ನಾನೇ ತುರಿದುಕೋತೀನಿ.’
ತಾಯಿ ಬಿಡು ಅಂದದ್ದೇ ತಡ ಜಯಶ್ರೀ ತಟ್ಟನೆ ರೂಮನ್ನು ಸೇರಿದಳು.ಜಯಶ್ರೀಯಲ್ಲಿದ್ದ ಉತ್ಸಾಹವೆಲ್ಲೋ ಮಂಗ ಮಾಯವಾಗಿತ್ತು. ಏನೋ ಬೇಸರ. ಬೆಳಗ್ಗೆ ಹೇಗೋ ಕೆಲಸದಲ್ಲಿ ಕಾಲ ಹೋಗೋದು ಗೊತ್ತಾಗುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತು ಬಿಡುವಾದಾಗ ಒಂದು ಸ್ವಲ್ಪ ಹೊತ್ತು ಕತೆಪುಸ್ತಕಾನೋ, ವಾರಪತ್ರಿಕೇನೋ ಕೈಯಲ್ಲಿ ಹಿಡಿದಿರುತ್ತಿದ್ದಳು. ನೆಪಕ್ಕೆ ಕೈಯಲ್ಲಿ ಪುಸ್ತಕ…ಕಣ್ಣ ಮುಂದೆ ಶ್ರೀನಾಥನ ಚಿತ್ರವೇ ಕುಣಿಯುತ್ತಿತ್ತು. ಅದನ್ನು ನೆನಪಿನಾಳದಿಂದ ಹೊಡೆದೋಡಿಸಲು ಅವಳು ಮಾಡಿದ ಪ್ರಯತ್ನಗಳೆಷ್ಟು? ಆದರೂ ಅವಳ ಸ್ಮೃತಿಪಟಲದಲ್ಲಿ ಶ್ರೀನಾಥನ ಚಿತ್ರ ಚಿರಸ್ಥಾಯಿಯಾಗಿ ಮನೆ ಮಾಡಿಕೊಂಡಿತ್ತು.
ಎಲ್ಲೆಲ್ಲೂ ಅವನ ಬಿಂಬವೇ! ಕನಸಿನಲ್ಲಿಯೂ ಅವನ ರೂಪ, ನಯ, ಮಾತಿನ ರೀತಿ, ಠೀವಿ ಅಲೆ ಅಲೆಯಾಗಿ ತೇಲಿ ಬಂದು ಅವಳನ್ನು ಮುತ್ತಿದ್ದವು. ತಾವಿಬ್ಬರೂ ಕಂಡ ಕನಸುಗಳೆಲ್ಲಾ ಮರುಕಳಿಸುತ್ತಿತ್ತು.
ಕೆನ್ನೆ ಕಂಬನಿಯಿಂದ ತೊಯ್ದಿತ್ತು. ಆತ್ಮ ಯಾತನೆಯಿಂದ ನರಳುತ್ತಿತ್ತು. ಶಾಂತಿಯ ಒಡಲೊಡೆದು ಸಿಡಿದು ಹೋಗಿತ್ತು…. ನನಗೇನಾಗಿದೆ ಇವತ್ತು? ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಂಡಳು. ಯೋಚನೆಗಳನ್ನು ಝಾಡಿಸಿ ಮೇಲೆದ್ದಳು.ಕಿಟಕಿಯ ಸರಳುಗಳನ್ನು ಹಿಡಿದುಕೊಂಡು ಹೊರಗೆ ನೋಡಿದಳು. ಬಸ್ಸು, ಆಟೋರಿಕ್ಷಾಗಳ ಓಡಾಟ. ತರಕಾರಿ ಮಾರುವವರು ಗಾಡಿ ತಳ್ಳಿಕೊಂಡು ಯಾಂತ್ರಿಕವಾಗಿ ಕೂಗುತ್ತಾ ಹೋಗುತ್ತಿದ್ದಾರೆ.‘ಥುತ್’ ಎಂದು ರಪ್ಪನೆ ಕಿಟಕಿಯ ಬಾಗಿಲನ್ನು ಮುಚ್ಚಿದಳು.
ಮನಸ್ಸು ಯೋಚನೆಗಳ ಗೂಡಾಗಿತ್ತು. ರಿಂಗಣಗುಣಿ ಯುತ್ತಿದ್ದ ತುಮುಲಗಳಿಗೆ ಬಿರಟೆಯೊತ್ತಿ, ಮನೆಯ ಹಿತ್ತಲಿಗೆ ಬಂದು ಹೆಮ್ಮರದಂತೆ ಬೆಳೆದಿದ್ದ ದಾಳಿಂಬೆ ಗಿಡದಡಿ ಬಂದು ಕುಳಿತಳು. ಈ ಗೊಂದಲಗಳಿಂದ ದೂರವಾಗಿ ಹಿತಕರವಾದ ಪ್ರಶಾಂತ ಸ್ಥಳವೊಂದಕ್ಕೆ ಹಾತೊರೆದು ಜಯಶ್ರೀ ಏಕಾಂತವಾಗಿರಲು ಅವಳು ಬಯಸಿದ್ದಳು. ಮೆಲುತಂಗಾಳಿ ಬೀಸಿ ಮನಸ್ಸಿಗೆ ಹಿತವೆನಿಸಿತು. ಮನಸ್ಸು ಈಗ ಕೊಂಚ ನೆಮ್ಮದಿ ತಬ್ಬಿತ್ತು. ಹಾಯಾಗಿ ಮಗ್ಗುಲ ಮಲ್ಲಿಗೆ ಚಪ್ಪರಕ್ಕೆ ಒರಗಿ ಒಂದೆರಡು ನಿಮಿಷ ಕಣ್ಣು ಮುಚ್ಚಿದಳು. ತಲೆಯಲ್ಲಿ ಮತ್ತೆ ಬೇಡದ ನೆನಪುಗಳು ಧಾಂಗುಡಿ ಇಡಲು ಮುಖ ಕಿವುಚಿ ಸರಕ್ಕನೆ ಎದುರಿಗಿದ್ದ ಒಗೆಯುವ ಕಲ್ಲಿನ ಮೇಲೆ ಹೋಗಿ ಕುಳಿತಳು. ತಲೆಯಲ್ಲಿ ಇನ್ನೂ ಗುಂಗು ಕರಗಿರಲಿಲ್ಲ. ಮಂಡಿಯಲ್ಲಿ ಮುಖ ಹುದುಗಿಸಿ ಕಣ್ಣು ಮುಚ್ಚಲು ಪ್ರಯತ್ನಿಸಿದ್ದಳು. ಮತ್ತೆ ಹಳೇ ನೆನಪುಗಳ ಮೆರವಣಿಗೆ.
ಶ್ರೀನಾಥನ ಬಗ್ಗೆ ನಿಜವಾಗಲೂ ಕೋಪವೇ ಬಂದಿತ್ತು ಎಂಥ ಹೇಡಿಯೆಂದು. ತಂದೆ ತುಂಬಾ ಓದಿದ ಹುಡಗಿಯರನ್ನು ಮದುವೆಯಾಗಕೂಡದೆಂದು ಫರ್ಮಾನು ಹೊರಡಿಸಿದರೆ ಪ್ರೀತಿಸಿದ ಹೆಣ್ಣನ್ನು ಕೈ ಬಿಟ್ಟ ಇವನನ್ನು ಹೆಣ್ಣಿಗ ಎನ್ನಬಾರದೇ? ತಂದೆಯೆದುರು ನೇರವಾಗಿ ನಿಂತು ಮಾತನಾಡದ ಇವನೆಂಥ ಗಂಡಸು?!.. ಪ್ರಶ್ನೆಗಳ ತರಂಗರಂಗವೇಳುತ್ತಿತ್ತು.
ಹತ್ತಿರವೇ ಯಾರನ್ನೋ ಕೂಗುತ್ತಿರುವ ಸದ್ದು. ಕೆಲಸದ ಲಿಂಗಿ ‘ಬತ್ತ್ತೀನಿ’ ಎಂದು ಹೇಳಿದ್ದು, ಪಕ್ಕದಲ್ಲೇ ಯಾರೋ ನಡೆದ ಅನುಭವವಾಗಿ ತಲೆ ಮೇಲೆತ್ತಿದಳು ಜಯಶ್ರೀ. ಕೆಲಸ ಮುಗಿಸಿದ ಲಿಂಗಿ ತನ್ನ ಗಂಡನ ಜೊತೆ ಮನೆಗೆ ಹೊರಡಲು ಸಿದ್ದವಾಗಿದ್ದಳು.
ಬೇಸರದಿಂದ ಮತ್ತೆ ಜಯಶ್ರೀ ತನ್ನ ತಲೆಯನ್ನು ಮಂದಿಯ ನಡುವೆ ಹುದುಗಿಸಿದ್ದಳು. ಜೊಂಪು ಹತ್ತಿದಂತಾಯಿತು.
ಅಷ್ಟರಲ್ಲಿ ಅಪ್ಪನ ಕರ್ಕಶ ಧ್ವನಿ ಜಯಶ್ರೀಯ ಕಿವಿಯ ಮೇಲೆ ಬಾಂಬ್ ಬಿದ್ದಂತೆ ಬಂದು ಅಪ್ಪಳಿಸಿತು. ತಂದೆ ತಾಯಿಯೊಡನೆ ಏರುದನಿಯಲ್ಲಿ ಮಾತನಾಡುವುದು ಕಿವಿಗೆ ಬಿತ್ತು. ಜಯಶ್ರೀ ಕಿವಿ ನಿಮಿರಿಸಿದಳು.
‘ ಸಾಯಂಕಾಲ ಹುಡುಗನ ಕಡೆಯವರು ಬರ್ತಾರೆ…ಜಯಶ್ರೀಗೆ ಸಿದ್ಧವಾಗಿರಲು ಹೇಳು…ಸಿಂಪಲ್ಲಾಗಿ ಬೋಂಡಾ…..’ ಅಪ್ಪನ ಮುಂದಿನ ಮಾತುಗಳನ್ನು ಕೇಳಲು ಅವಳಲ್ಲಿ ಆಸಕ್ತಿ ಉಳಿದಿರಲಿಲ್ಲ. ಕಿವಿಗೆ ಕಾದಸೀಸ ಎರೆದಂತಾಯ್ತು….
ಜಯಶ್ರೀ ಮುಖ ಸಿಂಡರಿಸಿ ಕಿವಿಮುಚ್ಚಿಕೊಂಡಳು. ಹಿಂದೆಯೇ ತಾಯಿಯ ಹುಕ್ಕುಂ. ಸಂಜೆ ನಾಲ್ಕಕ್ಕೆ ಸಿದ್ಧವಾಗಿರಲು…’ಥು..ಥು..ಥು…ಇವರಿಗೆ ಮಾಡೋಕ್ಕೆ ಬೇರೆ ಕೆಲಸವೇ ಇಲ್ಲವೇ? ದಿನಾ ವರನ ಕಡೆಯವರಿಗೆ ಕಾಫಿ ತಿಂಡಿ ಸಮಾರಾಧನೆ. ಇನ್ನು ತಾನಾದರೋ ನವರಾತ್ರಿ ಬೊಂಬೆಯಂತೆ ಅಲಂಕರಿಸಿಕೊಂಡು ಅವರ ಮುಂದೆ ನಿಂತುಕೊಳ್ಳುವುದು. ಅವರು ನನ್ನ ದೇಹದ ಇಂಚು ಇಂಚನ್ನೂ ಪರೀಕ್ಷಿಸಿ ಕಣ್ಣು ತೀಟೆ ತೀರಿಸಿಕೊಂಡು ಹೊರಡೋದು. ಆ ಮೇಲೆ ಕಾಗದ ಹಾಕೋದು. ಸ್ಕೂಟರು, ವರದಕ್ಷಿಣೆ ಏನೋ ಬೇಕೂಂತ. ಒಲ್ಲದವರಿಗೆ ಪಿಳ್ಳೆ ನೆವ ಅಂತ. ಹೆಣ್ಣು ಹೆತ್ತವರನ್ನು ಏನೆಂದುಕೊಂಡಿದ್ದಾರೆ…ಅವರಮನೆಯಲ್ಲಿ ಹೆಣ್ಣುಮಕ್ಕಳೇ ಇಲ್ಲವೇ…ಗಂಡು ಹೆತ್ತವರಿಗೇನು ಅಂಥ ಕೋಡು!!.. ಕೊಬ್ಬು ಹೆಚ್ಚು ಹಾಳಾದೋವರಿಗೆ…’ ಎಂದು ಅವಳು ಬರಲಿದ್ದ ಸಂಜೆಯ ಗಂಡಿನ ಕಡೆಯವರನ್ನು ಶಪಿಸಿ ನೆಟಿಕೆ ತೆಗೆದಳು….ಮನಸ್ಸು ಹುಳ್ಳಗಾಗಿತ್ತು. ಪಾಪ! ಅಪ್ಪ ತಾನೇ ಎಲ್ಲಿಂದ ತಂದಾರು ಅಷ್ಟೊಂದು ಹಣಾನಾ?…ಅಷ್ಟಕ್ಕೂ ನಾನೊಬ್ಬಳೇ ಮಗಳಾ?…ನನ್ನ ಬೆನ್ನ ಹಿಂದೆ ಬಿದ್ದ ಮೂರು ಜನ ತಂಗಿ ತಮ್ಮಂದಿರು….ಮತ್ತೆ ಅಮ್ಮನ ತಿವಿತ ಆರಂಭವಾಯಿತು. ..ಹಳೇರಾಗ…
‘ಹೊತ್ತಾಯ್ತು ಏಳೇ…ಅವರು ಬರೋ ಹೊತ್ತಾಯ್ತು..’
ತಾಯಿಯ ವರಾತ ತಾಳಲಾರದೆ ಜಯಶ್ರೀ, ಮುಖ ಹಿಂಡುತ್ತ ಒತ್ತಾಯದಿಂದ ಮೇಲೆದ್ದು ಮುಖ ತೊಳೆಯಲು ಬಚ್ಚಲು ಮನೆ ಹೊಕ್ಕಳು. ಕನ್ನಡಿ ಮುಂದೆ ಕೂತ ಅವಳು, ಒಂದು ಹೆರಳು ಪಿಣ್ಣನೆ ಬಿಗಿಯಾಗಿ ಹೆಣೆದುಕೊಂಡು, ಮೇಜಿನ ಡ್ರಾಯರಿನಲ್ಲಿದ್ದ ವಾಚನ್ನು ತೆಗೆದು ನೋಡಿದಳು. ಅದಕ್ಕೆ ಕೀಕೊಟ್ಟಿದ್ದರೇ ತಾನೇ ನಡೆಯೋದು… ಅದು ಕೆಟ್ಟು ಕೂತಿತ್ತು. ಹೂಂ..ಇದಕ್ಕೂ ನನ್ನ ಹಾಗೆ ಉತ್ಸಾಹವೇ ಇಲ್ಲ ಎಂದು ಗೊಣಗಿಕೊಂಡು ಕೈಯಲ್ಲಿ ಪುಸ್ತಕವೊಂದನ್ನು ಹಿಡಿದು ಕೂತಳು ಜಯಶ್ರೀ. ಅಷ್ಟರಲ್ಲಿ- ಅಮ್ಮನ ಸವಾರಿ ದಯಮಾಡಿಸಿತು.
‘ಏನೇ ಇದು…ಸ್ವಲ್ಪ ಟ್ರ್ರಿಮ್ ಆಗಿ ಡ್ರೆಸ್ ಮಾಡ್ಕೋಬಾರದೇನೇ… ಪ್ರತಿಸಲಾನೂ ನೀನು ಹೀಗೆ..’ ಅಮ್ಮನ ಗದರಿಕೆ. ಓಹೋ! ಪರವಾಗಿಲ್ಲ ಅಮ್ಮನಿಗೂ ಗೊತ್ತು ಟ್ರಿಮ್‍ನ ಅರ್ಥ. ಗಕ್ಕನೆ ಶ್ರೀನಾಥ ಹೇಳಿದ್ದು ನೆನಪಿಗೆ ಬಂತು.
‘ಜಯೂ … ಸೌಂದರ್ಯಗಳಲ್ಲಿ ಎರಡು ತರವಂತೆ, ಒಂದು ಉನ್ಮತ್ತ ಸೌಂದರ್ಯ, ಇನ್ನೊಂದು ಸೌಮ್ಯ ಸೌಂದರ್ಯ. ನಿನ್ನದು ಸೌಮ್ಯ ಸೌಂದರ್ಯ ಕಣೆ, ನೀ ಅಲಂಕಾರ ಮಾಡಿಕೊಳ್ಳದೆ ಇದ್ರೂ ಚೆನ್ನಾ’ ಮೆಚ್ಚಿ ನುಡಿದಿದ್ದ.ಅಮ್ಮನ ಮಾತು ಕೇಳಿ ನಗು ಬಂತು.
ಹೊರೆಗೆ ಟ್ಯಾಕ್ಸಿ ಮನೆ ಮುಂದೆ ಬಂದು ನಿಂತ ಸದ್ದು ಕೇಳಿಸಿತು. ಕಬ್ಬಿಣದ ಗೇಟಿನ ಕಿರ್ರನೆಯ ಸದ್ದು.. ಅಪ್ಪನ ಸ್ವಾಗತ. ಬೂಟಿನ ಸದ್ದು. ಇನ್ನೊಂದು ಗಂಭೀರ ಕಂಠ ಅಪ್ಪನೊಡನೆ ಮಾತಾಡುವ ದನಿ. ಕುರ್ಚಿಯ ಮೇಲೆ ಕುಳಿತ ಸರಸರ ಶಬ್ದ. ಸ್ವಲ್ಪ ಕಾಲ ಅದೇನೋ ಸಂಭಾಷಣೆ ನಡೆಯುತ್ತಿತು. ಅದು ರೂಮಿಗೆ ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಬೋಂಡದ ಗಮ್ಮನೆ ವಾಸನೆ. ಮೂಗಿನ ಹೊಳ್ಳೆ ಕೋಪದಿಂದ ಅರಳಿತು.
ಅಷ್ಟರಲ್ಲಿ ಅಮ್ಮ ಬಾಗಿಲ ಬಳಿ ಬಂದು ನಿಂತಳು…’ಬರ್ತೀಯಾ’… ಒಲ್ಲದ ಕರೆ. ನಿಟ್ಟುಸಿರು ಕಕ್ಕಿ, ಮನಸ್ಸಿಲ್ಲದ ಮನಸ್ಸಿನಿಂದ ಜಯಶ್ರೀ ಮೆಲ್ಲನೆ ಹೆಜ್ಜೆ ಕದಲಿಸಿದಳು. ಜಮಖಾನೆಯ ಮೇಲೆ ತಲೆ ಬಗ್ಗಿಸಿ ಕುಳಿತಳು. ಇದೆಲ್ಲಾ ಅವಳಿಗೆ ಚೆನ್ನಾಗಿ ಅಭ್ಯಾಸವಾಗಿ ಹೋಗಿತ್ತು. ವರನ ತಂದೆಯ ಪ್ರಶ್ನೆಗಳಿಗೆಲ್ಲಾ ಚುಟುಕು ಉತ್ತರ ಕೊಟ್ಟಳು. ತಲೆ ನೋವೆನಿಸಿತು. ಒಳಗೆ ಹೋಗಿ ಹಾಯಾಗಿ ಹಾಸಿಗೆ ಮೇಲೆ ಬಿದ್ದುಕೊಳ್ಳೋಣವೆನಿಸಿತು. ಹಾಗೆ ಮಾಡಿದರೆ ಅಮ್ಮ ಸುಮ್ಮನಿದ್ದಾಳೆಯೇ? ಅಪ್ಪ ಏನಂದಾರು, ಬಂದವರು ಏನು ತಿಳಿದಾರು? ಎಂಬ ಭೀತಿಯಿಂದ ಅವಳು ಹಾಗೇ ಹಿಡಿಯಾಗಿ ಕುಳಿತಳು.
’ ಹಾಡು ಹೇಳಮ್ಮ’…
‘ಈಗಿನ ಕಾಲದ ಹುಡುಗರು ಓದು ಕೇಳುತ್ತಾರೆ ಅಂತ ಓದಿಸಿದ್ದೀವಿ… ಹಾಡು ಹೇಳಿಸಿಲ್ಲ’ ಅಮ್ಮನ ನಯವಾದ ಸಮಾಧಾನ. ಆದರೆ ಇವರ್ಯಾಕೋ ಎಬ್ಬಿಸಿ ಕೂಡಿಸಿ ಊಟ್ ಬೈಸ್ ಮಾಡಿಸಿ ಇಂಚು ಇಂಚನ್ನು ಪರೀಕ್ಷಿಸಲಿಲ್ಲ. ಊರಿಗೆ ಹೋಗಿ ಕಾಗದ ಬರೀತೀವಿ ಎಂದು ಬಂದವರು ಎದ್ದರು. ಗೊತ್ತೇ ಇದೆ ಇವರ ಬಂಡವಾಳ ಅಂದುಕೊಂಡು ಮೇಲೆದ್ದಳು. ಎದುರಿಗಿದ್ದ ಟೀಪಾಯಿಯತ್ತ ಗಮನ ಹೊರಳಿತು. ಕೊಟ್ಟ ತಿಂಡಿ ಸ್ವಲ್ಪ ಮಾತ್ರವೇ ಖರ್ಚಾಗಿತ್ತು… ಪರವಾಗಿಲ್ಲ… ಇವರಾರೋ ಸ್ವಲ್ಪ ಮರ್ಯಾದಸ್ತರು ಅಂತ ಎನಿಸಿ, ಬಂದವರನ್ನು ಮೆಲ್ಲನೆ ಸ್ವಲ್ಪ ತಲೆಯೆತ್ತಿ ನೋಡಿದಳು. ಹಾಗೆ ನೋಡಿದರೆ ಅಮ್ಮನಿಗೆ ಕೋಪ.
ತಟ್ಟನೆ ಮುಖವರಳಿತು. ಕಣ್ಣು ನಕ್ಕಿತು…..ತಥೈ ದಿಥೈ….ದಿದಿ ಥೈ …ಎಂದು ಬಹಳ ವರ್ಷಗಳ ಹಿಂದೆ ಕಲಿತು ಬಿಟ್ಟ ಭರತನಾಟ್ಯವನ್ನು ಮಾಡಬೇಕೆಂದೆನಿಸಿತು..
ಎದುರಿಗೆ ಶ್ರೀನಾಥ!!
******************************