Image default
Short Stories

ಪ್ರಹಾರ

ಗಡಿಯಾರ ನೋಡಿಕೊಳ್ಳುತ್ತ ಧಾವಂತದಿಂದ ಒಳಬಂದು ಕುಳಿತ ಮೈತ್ರಿ ತಟ್ಟನೆ ಸುತ್ತಲೂ ನೋಟ ಹರಿಸಿದಳು. ಯಾವುವೂ ಪರಿಚಿತ ಮುಖಗಳೆಂದೆನಿಸಲಿಲ್ಲ. ಮರುಕ್ಷಣವೇ ಅವಳಿಗೆ ತನ್ನ ಅನಿಸಿಕೆಯ ಬಗ್ಗೆ ನಗು ಉಕ್ಕಿಬಂದರೂ, ಸುತ್ತ ಕಾಣಬರುತ್ತಿದ್ದ ಹದಿಹರೆಯದ  ಹೆಣ್ಣು-ಗಂಡಿನ ಮುಖಗಳನ್ನು ವೀಕ್ಷಿಸುತ್ತ ಅವಳು ಒಮ್ಮೆಲೆ ಸಪ್ಪಗಾದಳು. ಅವ್ಯಕ್ತ ತಲ್ಲಣ ಅವಳ ಒಳಗನ್ನು ಅಲುಗಿಸಿತ್ತು. ಕೈಲಿದ್ದ ಫೈಲು ಕೆಳಜಾರಿ, ಅದರೊಳಗಿದ್ದ ಸರ್ಟಿಫಿಕೇಟುಗಳೆಲ್ಲ ನೆಲದ ಮೇಲೆ ಚೆಲ್ಲಾಪಿಲ್ಲಿಯಾದವು. ಮೈತ್ರಿ ಮತ್ತಷ್ಟು ಗಾಬರಿಗೊಂಡು ಅವುಗಳನ್ನು ನಡುಗುವ ಕೈಗಳಿಂದ ಹೆಕ್ಕಿಕೊಂಡು, ಫೈಲಿನೊಳಗೆ ತುರುಕುವಷ್ಟರಲ್ಲಿ ಅವಳ ಹಣೆಯ ಮೇಲೆ ಬೆವರಿನ ಬಿಂದುಗಳು ಕೋದುಕೊಂಡಿದ್ದವು.

            ಸರ್ಕಾರ ಇದೀಗ ತಾನೇ ವಹಿಸಿಕೊಂಡಿದ್ದ ಆ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್‍ನ ಪರ್ಸನಲ್ ಸೆಕ್ರೇಟರಿ ಹುದ್ದೆಗೆ ನಲವತ್ತಕ್ಕೂ ಹೆಚ್ಚು ಮಂದಿ ಸಂದರ್ಶನಕ್ಕೆ ಬಂದಿದ್ದರು. ಮೈತ್ರಿಯ ಎದೆಯೊಳಗೆ ತಳಮಳ. ಹೆಚ್ಚೂ ಕಡಮೆ ತನ್ನೊಬ್ಬಳ ಹೊರತಾಗಿ ಉಳಿದವರೆಲ್ಲ ಸಣ್ಣ ವಯಸ್ಸಿನವರೇ…ಲವಲವಿಕೆಯ  ಉತ್ಸಾಹೀ ಯುವಕರು. ಸೆಲ್ವಾರ್-ಕಮೀಜ್, ಜೀನ್ಸ್ ಪ್ಯಾಂಟು, ಬಿಗಿಯಾದ ಟಾಪ್  ತೊಟ್ಟ ಆಧುನಿಕ ಬೆಡಗಿಯರು!

ಮೊಗದಲ್ಲಿ  ದಟ್ಟ ಕಾರ್ಮೋಡ, ಚಿಂತೆಯ ಬೇರುಗಳು ಹಬ್ಬಿಕೊಂಡಿದ್ದವು. ತನ್ನದು ವ್ಯರ್ಥ ಪ್ರಯತ್ನವೇ? ಮುಖಗೆಡಿಸಿಕೊಳ್ಳುವ ಬದಲು ಸಂದರ್ಶನಕ್ಕೆ ಹಾಜರಾಗದೆ ಹಾಗೇ ಹಿಂತಿರುಗಿ ಹೋಗಿಬಿಡಲೇ ಎಂದು ಮನಸ್ಸು ಹಿಂದೆ ಜಗ್ಗುತ್ತಿತ್ತು. ಇರುವ ಒಂದು ಖಾಲಿ ಹುದ್ದೆಗೆ ಬಹುಶಃ ತನಗಿಂತ ಹೆಚ್ಚು ಅರ್ಹತೆ, ಪ್ರಭಾವ ಪಡೆದಿರಬಹುದಾದ ಇಂಥ ಬೆಡಗಿಯರ ಮಧ್ಯೆ  ತಾನು ಸ್ಪರ್ಧಿಸುವುದು ಎಷ್ಟು ಉಚಿತ ಎಂಬ ಕೀಳರಿಮೆ ತಲೆಯೆತ್ತಿದಾಗ ಅವಳ ಮನಸ್ಸು ಡೋಲಾಯಮಾನವಾಯಿತು. ಈಗಾಗಲೇ ಸುಮಾರು ಹದಿನೆಂಟು  ಇಪ್ಪತ್ತು ಜನರ ಸಂದರ್ಶನ ಮುಗಿದಿತ್ತು. ನಿರಾಸೆಯಿಂದ ಮುದುಡಿಹೋಗಿದ್ದ ಮೈತ್ತಿ, ಮನೆಗೆ ಹಿಂತಿರುಗುವುದೇ  ಲೇಸೆಂದು ಮೇಲೆ ಏಳುತ್ತಿದ್ದವಳನ್ನು ಅಟೆಂಡರನ ಕರೆ ತಡೆದು ನಿಲ್ಲಿಸಿತು. ಒಮ್ಮೆಲೆ ಗಾಬರಿ ಅವಳ ಮುಖವನ್ನಾವರಿಸಿತು.

“ಮೈತ್ರಿ ನೀವೇ ಏನ್ರಮ್ಮ-ಬಿರ್ರನೆ ಬನ್ನಿ”

ಮೈತ್ರಿ ಧಡಬಡ ಮೇಲೆದ್ದು ಫೈಲನ್ನು ಎದೆಗಪ್ಪಿಕೊಂಡು ಮೈ ತುಂಬ ಸೆರಗು ಹೊದ್ದುಕೊಂಡು, ಒಂದಾನೊಂದು ಕಾಲದಲ್ಲಿ ಮೋಹಕ ಸೌಂದರ್ಯದಿಂದ ಬೀಗುತ್ತಿದ್ದ ತನ್ನ ಮೊಗದ ಮೇಲೆ ಇಳಿಬಿದ್ದಿದ್ದ ಮುಂಗೂದಲ ಮೇಲೆ ಕೈಯಾಡಿಸಿ, ಅಟೆಂಡರ್ ತೆರೆದಿದ್ದ ಬಾಗಿಲೊಳಗೆ ಮೆಲ್ಲನೆ ಅಡಿ ಇರಿಸಿದಳು.

“ನಮಸ್ಕಾರ ಸಾರ್”-

ಎದುರಿಗೆ ಲಾಳಾಕಾರದ ಮೇಜಿನ ಸುತ್ತ ಕುಳಿತ ಮೂವರು ಸಂದರ್ಶಕ ಮಹಾಶಯರಿಗೆ ತಲೆಯೆತ್ತದೆ ಕೈಮುಗಿದಳು.

“ಫ್ಲೀಸ್ ಟೇಕ್ ಯುವರ್ ಸೀಟ್”

-ಕಂಚು ಮೊಳಗಿದಂಥ ತುಂಬುಕಂಠದ ಅಪ್ಪಣೆಯ ಧ್ವನಿ ಎದುರಿನಿಂದ ತೇಲಿಬಂದಾಗ ಮೈತ್ರಿ ತಟಕ್ಕನೆ ತಲೆಯೆತ್ತಿ ನೋಡಿದಳು. ತುಂಬ…..ತುಂಬಾ….ಪರಿಚಿತವಾದ ಧ್ವನಿ! ಗಂಟೆಗಟ್ಟಲೇ ಇದೇ ಕಂಠದ ಮಾತುಗಳನ್ನು ಕೇಳಿದ ನೆನಪು ಎದೆಯೊಳಗೆ ಮೊರೆಯಿತು.

ತನ್ನಿಂದ ಎಂಟು ಅಡಿ ಅಂತರದಲ್ಲಿ ಕುಷನ್ ಸೀಟಿನಲ್ಲಿ ಕುಳಿತಿದ್ದಾತನ ಗೋಲ್ಡನ್ ಫ್ರೇಮಿನ ಕನ್ನಡಕದ ಹಿಂದಿದ್ದ ಪಿಳಿಚು ಗಣ್ಣುಗಳನ್ನು ದಿಟ್ಟಿಸುತ್ತ ಅವಳ ಗಂಟಲ ದ್ರವ ಆರತೊಡಗಿತು. ಅಯಾಚಿತವಾಗಿ ಅವಳ ದಿಟ್ಟಿ  ನೆಲಕ್ಕೂರಿತು.

ಇನ್ನು ಮುಂದೆ ನಡೆದದ್ದೆಲ್ಲ ಯಾಂತ್ರಿಕ.

 ‘ವೆರಿಗುಡ್…ವಿ ವಿಲ್ ಲೆಟ್ ಯೂ ನೋ’-ಆತನ ಧ್ವನಿ ಕಿವಿಯನ್ನು ತುಂಬುತ್ತಿದ್ದರೆ ಅವಳ ದೃಷ್ಟಿ ಆತನ ಮಂದಿದ್ದ ಹಿತ್ತಾಳೆಯ ಫಲಕದ ಮೇಲೆ ಕೀಲಿಸಿ ನಿಂತಿತ್ತು.

“ರಘುಚಂದ್ರ-ಐ.ಎ.ಎಸ್’’

ಅವಳು ಅಲ್ಲಿಂದ ಹೊರ ಬೀಳುವಷ್ಟರಲ್ಲಿ ಅವಳ ಮೈ ಸಂಪೂರ್ಣ ಬೆವರಿನಿಂದ ತೊಯ್ದು ಹೋಗಿತ್ತು.

ಕಣ್ಣು ನಿಜವನ್ನೇ ಕಾಣುತ್ತಿದ್ದರೂ ಮನಸ್ಸು ನಂಬಲಾಗದೆ ಹೊಯ್ದಾಡುತ್ತಿತ್ತು.

ಹನ್ನೆರಡು ವರ್ಷಗಳ ಬಳಿಕ ರಘು ತನಗೆ ಹೀಗೆ ದರ್ಶನ ಕೊಡುತ್ತಾನೆಂದು ಅವಳು ಕನಸು ಮನಸ್ಸಿನಲ್ಲೂ ನೆನೆಸಿರಲಿಲ್ಲ. ಹೆಚ್ಚೂ ಕಡಮೆ ಅವನು ಅವಳ ಪಾಲಿಗೆ ಸತ್ತೇಹೋಗಿದ್ದ. ಎಂಥ ವಿಪರ್ಯಾಸ! ಸ್ಥಾನ ಅದಲು ಬದಲಾಗಿತ್ತು. ಅಧಿಕಾರ, ಗತ್ತು, ಟೆಂಕಾರಗಳ ಸಹಿತ.

ದಾರಿಯುದ್ದಕ್ಕೂ ತನ್ನನ್ನು ಮುತ್ತಿದ್ದ ಆಶ್ಚರ್ಯದಿಂದ ಅವಳು ಬಿಡುಗಡೆ ಹೊಂದಲು ಆಗಿರಲಿಲ್ಲ. ಅಂದಿನ ಬಡಕಲು ಎಳಸು ಮುಖದ  ರಘು ಹೀಗೆ ಗಾಂಭೀರ್ಯ ಪ್ರೌಢಿಮೆಗಳ ಅಚ್ಚಾಗಿ ತನ್ನ ಹೆಸರಿನ  ಮುಂದೆ ಐ.ಎ.ಎಸ್. ಎಂದು ಮುದ್ರಿಸಿಕೊಂಡು ತನಗೆ ಹೀಗೆ ಎದುರಾಗುವನೆಂದು ಯಾರು ಕಂಡಿದ್ದರು?!!

ಒಂದೆಡೆ ರಘುವಿನ ಬೆಳವಣಿಗೆ-ಅನಿರೀಕ್ಷಿತ ಭೇಟಿಯ ಬಗ್ಗೆ ಅಚ್ಚರಿ ಜಲಪಾತವಾಗಿದ್ದರೆ ಇನ್ನೊಂದೆಡೆ ಅವಳ ಮನ ಸೋಲಿನ ಮೇಲೆ ಸೋಲಿನ ಪೆಟ್ಟು ತಿಂದು ನಿರಾಶೆಯಿಂದ ಕುಗ್ಗುತ್ತಿತ್ತು. ಹಾಗಾದರೆ…ತನ್ನ ಪ್ರಯತ್ನ ಈ ಬಾರಿಯೂ ವ್ಯರ್ಥ.. ಎಂ.ಡಿ ರಘುವಿನ ತೀರ್ಮಾನವೇ ಇಲ್ಲಿ ಅಂತಿಮ ತೀರ್ಮಾನವೆಂಬ ಸತ್ಯ ಗೋಚರಿಸಿದಂತೆ ಅವಳ ಮನದಲ್ಲಿ ಕಣ್ಮಿಟುಕಿಸುತ್ತಿದ್ದ ಕಟ್ಟಕಡೆಯ ಆಶಾಕಿರಣವೂ ನಂದಿಹೋಯಿತು… ಮುಂದೆ…ಕಣ್ಣಿಗೆ ಕಪ್ಪು-ಕಾವಳ ಮುತ್ತಿ ಮುಗ್ಗರಿಸಿದಳು.

ಬಲಹೆಬ್ಬೆರಳಿನಲ್ಲಿ ರಕ್ತ ಹನಿಸಿಕೊಂಡು ಕುಂಟುತ್ತ ಗೇಟು ತೆರೆದ ಮೈತ್ರಿಯ ಮುಖಭಾವದಿಂದಲೇ ಬಾಗಿಲಿಗೊರಗಿ ನಿಂತಿದ್ದ ಅವಳತ್ತಿಗೆ ಸಂದರ್ಶನದ ಫಲಿತಾಂಶ ಗ್ರಹಿಸಿ ಮೂತಿ ಸೊಟ್ಟಗೆ ಮಾಡಿ ಧಡಕ್ಕನೆ ಒಳಸರಿದಳು.

ಮೈತ್ರಿಯ ಕಣ್ಣಕೆರೆ ತುಂಬಿ ನಿಂತಿತ್ತು. ನಡುಮನೆಯಲ್ಲಿ ಹಬೆಯಾಡುವ ಇಡ್ಲಿಯನ್ನು ಚಟ್ನಿಯಲ್ಲದ್ದಿಕೊಂಡು ತಿನ್ನುತ್ತಿದ್ದ ಅಣ್ಣನಿಗೆ ಕಾಣದಂತೆ ಕಂಬನಿ ಮಿಡಿದು, ನಿಟ್ಟುಸಿರುಗರೆಯುತ್ತಾ ಸೋಫಾದ ಮೇಲೆ ಕುಕ್ಕರಿಸಿದಳು.

“ಏನು ಈ ಸಲವಾದ್ರೂ ಕೆಲಸ ಸಿಗತ್ತೋ ಇಲ್ವೋ?’ – ಕರ್ಕಶವಾಗಿತ್ತು ಅಣ್ಣನ ಕಂಠ ತಾತ್ಸಾರದಿಂದ.

ಮೈತ್ರಿಯ ನಾಲಗೆ ಮೇಲೇಳಲಿಲ್ಲ. ಭಾರವಾದ ಕಣ್ಣುಗಳನ್ನೆತ್ತಿ, ಎದುರಿಗೆ ಕಾಫಿಯ ಲೋಟ ಹಿಡಿದು ಬರುತ್ತಿದ್ದ ಅತ್ತಿಗೆಯತ್ತ ನೋಟ ತಿರುಗಿಸಿದಳು. ಆದರವಳು ನಾದಿನಿಯತ್ತ ಅಲಕ್ಷ್ಯದ ನೋಟ ಬಿಸಾಕಿ ಲೋಟವನ್ನು ಗಂಡನ ಕೈಗಿತ್ತಳು.

ಗಂಟಲೊಣಗಿ ಬಂದು, ಒಂದು ತೊಟ್ಟು ಕಾಫಿಯನ್ನು ನಿರೀಕ್ಷಿಸಿದ್ದ ಮೈತ್ರಿಯ ಮೊಗ ಅರಕ್ತವಾಯಿತು. ಮೇಲೆದ್ದು ಟೇಬಲ್ಲಿನ ಮೇಲೆ ಫೈಲನ್ನು ಕುಕ್ಕಿ, ಸೀದಾ ಅಡುಗೆಮನೆಯೊಳಗೆ ನುಗ್ಗಿ ಒಂದು ತಂಬಿಗೆ  ನೀರನ್ನು ಗಟಗಟನೆ ಕುಡಿದು, ತನ್ನ ಕೋಣೆಗೆ ಬಂದು ಹಾಸಿಗೆಯ ಮೇಲೆ ಬಿದ್ದುಕೊಂಡಳು.

ಅವಳೆದೆಯೊಳಗೆ ಗೂಡು ಕಟ್ಟಿದ್ದ ಅಹಂಕಾರ – ತಪ್ಪು ತಿಳಿವಳಿಕೆ -ಭ್ರಮೆಗಳೆಲ್ಲ ಒಂದೊಂದಾಗಿ ಕಳಚಿಕೊಳ್ಳುತ್ತ ಅವು ಅವಳ ಕಣ್ಣಿನ ಮೂಲಕ ಕೆನ್ನೆಯ ಮೇಲೆ ಜಾರತೊಡಗಿದವು.

ಮೈತ್ರಿ ಹಾಗೂ ರಘುಚಂದ್ರ ಇಬ್ಬರೂ, ಸುಮಾರು ಬುದ್ಧಿ ತಿಳಿದಾಗಿನಿಂದಲೂ ಅಂದರೆ ಮಿಡಲ್‍ಸ್ಕೂಲಿನಿಂದ ಒಂದೇ ಕ್ಲಾಸಿನಲ್ಲಿ ಓದುತ್ತಿದ್ದರು. ಮನೆಯೂ ಒಂದೆರಡು ರಸ್ತೆ ಆಚೀಚೆ . ಮೈತ್ರಿಯ ಬಂಧುಗಳ ಮನೆಯಲ್ಲಿ ಅನಾಥನಾಗಿದ್ದ ರಘು ವಾರಾನ್ನ ಮಾಡಿಕೊಂಡು ಬೆಳೆಯುತ್ತಿದ್ದ. ಒಂದೇ ಶಾಲೆ-ಒಂದೇ ತರಗತಿ. ಒಂದೇ ನೆಂಟಸ್ತನದ ವಲಯದಲ್ಲಿ ಒಡನಾಡುತ್ತಿದ್ದ ಇಬ್ಬರಲ್ಲೂ ಸಹಜವಾಗಿ ಸ್ನೇಹ-ಸಲುಗೆ. ಇಬ್ಬರೂ ಒಬ್ಬರನ್ನೊಬ್ಬರು ಮೀರಿಸುವ ಬುದ್ಧಿವಂತರೇ. ಒಂದು ವರ್ಷ ಪ್ರಥಮ ರ್ಯಾಂಕ್ ಅವನು ಗಿಟ್ಟಿಸಿದರೆ ಇನ್ನೊಂದು ವರ್ಷ ಇವಳ ಪಾಲು.

ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದಳು ಮೈತ್ರಿ. ರಾಮರಾಯರ ಒಬ್ಬನೇ ಮಗ ಮಧು ಮತ್ತು ಒಬ್ಬಳೇ ಮಗಳು ಮೈತ್ರಿ. ಹೀಗಾಗಿ ಮೈತ್ರಿ, ತಂದೆಯ ಅಪಾರ ಪ್ರೀತಿ – ಶ್ರೀಮಂತಿಕೆಯಲ್ಲಿ ಕೊಂಚ ಸೊಕ್ಕಿ ಬೆಳೆದಳೆಂದರೆ  ತಪ್ಪಿಲ್ಲ. ಜೊತೆಗೆ ಜೊತೆಯ ಹುಡುಗಿಯರಲ್ಲೆಲ್ಲ ಎದ್ದು ಕಾಣುವ ರೂಪ. ಬುದ್ಧಿವಂತಿಕೆಯೂ ಅವಳಿಗೆ ಕೋಡನ್ನು ಬೆಳಸಿತ್ತು.

ಡಿಗ್ರಿ ತರಗತಿಯವರೆಗೆ ರಘು ಮತ್ತು ಮೈತ್ರಿ ಒಟ್ಟಿಗೆ ಓದಿದರು. ಸ್ನಾತಕೋತ್ತರ ಪದವಿಗೆ ಬರುವ ಹೊತ್ತಿಗೆ ಬೇರೆ ಬೇರೆ ವಿಷಯಗಳನ್ನಾಯ್ದುಕೊಂಡು ಅವರು ಕವಲಾಗಿದ್ದರು. ರಾಮರಾಯರಿಗೆ ರಘು ಎಂದರೆ ತುಂಬಾ ಅಕ್ಕರೆ. ಅವನ ಬುದ್ಧಿಶಕ್ತಿ. ಪ್ರತಿಭೆ-ವಿನಯಪರ ನಡವಳಿಕೆ ಕಂಡು ಮೆಚ್ಚು. ಅವನೊಡನೆ ಅವರು ಎಷ್ಟೋ ವಿಷಯಗಳನ್ನು ಕುರಿತು ಚರ್ಚಿಸುತ್ತಿದ್ದರು. ಆಗೆಲ್ಲ ಅವನ ಊಟ-ತಿಂಡಿಗಳೆಲ್ಲ ಇಲ್ಲೇ. ಹೆಚ್ಚೇನು ಅವನು ಅವರ ಮನೆಯವರಲ್ಲಿ ಒಬ್ಬನಾಗಿ ಹೋಗಿದ್ದ.

ರಘುಚಂದ್ರ ಫಸ್ಟಕ್ಲಾಸಿನಲ್ಲಿ ಪಾಸಾಗಿ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿದ. ಮೈತ್ರಿ ಪಾಸಾದ ತತಕ್ಷಣ ರಾಮರಾಯರು ಅವಳ ಜಾತಕದ ನಕಲುಗಳನ್ನು ಮಾಡಿಸಿ ವರಾನ್ವೇಷಣೆಗೆ ತೊಡಗಿದರು.

ಎಂದಿನಂತೆ ಒಂದು ಸಂಜೆ. ರಾಮರಾಯರು ಹೊರಗಡೆ ಹೋಗಿದ್ದರು. ಮಧು ಟೇಬಲ್ ಟೆನ್ನಿಸ್ ಆಟವಾಡಲು ಕ್ಲಬ್ಬಿಗೆ ಹೋಗಿದ್ದ. ಮನೆಯಲ್ಲಿ ಮೈತ್ರಿ ಒಬ್ಬಳೇ ಕಥೆ ಪುಸ್ತಕ ಓದುತ್ತ ಹಾಗೇ ಸೋಫದ ಮೇಲೆ ಒರಗಿದ್ದಳು.

ಕರೆಗಂಟೆಯ ಸದ್ದಾಯಿತು. ಬಾಗಿಲು ತೆರೆದಳು ಮೈತ್ರಿ.

 ‘ಹಲೋ’ ಎಂದು ಹಲ್ಕಿರಿದ ರಘುಚಂದ್ರ. ಅವಳು ಮುಖ ಸಡಿಲಿಸದೆ ತನ್ನ ಮೊದಲಿನ ಭಂಗಿಯಲ್ಲೇ ಸೋಫದ ಮೇಲೆ ಹೋಗಿ ಕುಳಿತು ಕಾದಂಬರಿಯಲ್ಲಿ ಮುಖ ಹುದುಗಿಸಿದಳು.

ಐದ್ಹತ್ತು ನಿಮಿಷ ಸರಿಯಿತು.ಅವಳ ಗಮನ ಕೊಂಚವೂ ವಿಚಲಿತವಾಗಲಿಲ್ಲ. ರಘುವಿಗೆ ‘ಕೂತ್ಕೋ’ ಎಂದು ಸಹ ಅವಳು ಔಪಚಾರಿಕತೆಗಾದರೂ ಹೇಳಲಿಲ್ಲ. ಅದನ್ನು ನಿರೀಕ್ಷಿಸದ ಅವನು ತಾನೇ ನಿಸ್ಸಂಕೋಚದಿಂದ ಕುರ್ಚಿಯ ಮೇಲೆ ಅವಳಿಗೆದುರಾಗಿ ಕುಳಿತು ಅವಳ ಸುಂದರ ಮುಖದಲ್ಲಾಗುತ್ತಿದ್ದ ಏರಿಳಿತಗಳನ್ನು ಗಮನಿಸುತ್ತ ಕುಳಿತು ಆನಂದಿಸುತ್ತಿದ್ದ ರಘು, ಗೋಡೆ ಗಡಿಯಾರ ಏಳು ಹೊಡೆದಾಗಷ್ಟೇ ಎಚ್ಚೆತ್ತ.

ಮೈ ಸೆಟೆಸಿ ಸರಿಯಾಗಿ ಕೂತು ಅವಳತ್ತ ಬಾಗಿ ಗಂಟಲು ಸರಿಮಾಡಿಕೊಂಡ. ಅವಳ ಗಮನ ಕೊಂಚವೂ ಚೆದುರಲಿಲ್ಲ. ಕಡೆಗೆ ಅವನೇ ಮೆಲ್ಲನೆ – ‘ಮೈತ್ರಿ……. ನಿನ್ನ ಹತ್ರ ಒಂದ್ವಿಷ್ಯ ಮಾತನಾಡಬೇಕಿತ್ತು’ ಎಂದ ಎಂಜಲು ನುಂಗುತ್ತಾ. ಅವಳು ಹಾಂ… ಹೂಂ ಎನ್ನಲಿಲ್ಲ.

 ಮತ್ತೆ ಅವನೇ ‘ಮೈತ್ರಿ’ ಎಂದು ಅಂಗಲಾಚಿದ.

‘ಏನೋ ನಿನ್ನದೊಳ್ಳೆ ಕಾಟವಾಯ್ತಲ್ಲ… ಏನು ಹೇಳಬೇಕೊಂತಿದ್ದೀಯೋ ಅದನ್ನು ಒದರಿ ಎದ್ದು ಹೋಗು’ ಎಂದಳು ಒರಟಾಗಿ ಪುಸ್ತಕದಿಂದ ಮುಖವೆತ್ತದೆ. ಅವಳ ಪ್ರತಿಕ್ರಿಯೆ ಕಂಡು ರಘು ಪೆಚ್ಚಾದರೂ ಸಾವರಿಸಿಕೊಂಡು ಇದ್ದಬದ್ದ ಧೈರ್ಯವನ್ನೆಲ್ಲ ಗುಡ್ಡೆ ಮಾಡಿಕೊಂಡು – ‘ಮತ್ತೇ…. ಮಾವ ನಿನಗೆ ಗಂಡು ನೋಡ್ತಿದ್ದಾರಂತೆ’ ಎಂದಾಗ, ‘ಹೌದು, ಅದರಿಂದ ನಿನ್ನ ಗಂಟೇನ್ಹೋಯ್ತು’ ಸಿಡಾರನೆ ಬಂತು ಅವಳಿಂದ ಉತ್ತರ.

ರಘುವಿನ ಗಂಟಲೊಳಗಿದ್ದ ಮಾತುಗಳೆಲ್ಲ ಅಳುಕಿನಿಂದ ಒಳಗೇ ಜಾರಿಹೋದವು. ಅವಳ ಹುಬ್ಬುಗಳು ಗಂಟಾಗಿದ್ದವು. ‘ ಅದೇನು ಹೇಳೋದಾದ್ರೆ ಬೇಗ ಹೇಳು’

ರಘು ಮುಖ ಕೆಂಪಾಗಿಸಿಕೊಂಡು ತಲೆಬಾಗಿಸಿ ನುಡಿದ. ‘ನಾ ನಿನ್ನ ಪ್ರೀತಿಸ್ತಿದೀನಿ ಮೈತ್ರಿ. ನೀನು ನನ್ನ ಮದುವೆಯಾಗ್ತೀಯಾ?’

ಅವನ ಮಾತು ಮುಗಿಯುವುದರಲ್ಲಿ ರಪ್ಪನೆ ಅವನ ಕಪಾಳದ ಮೇಲೊಂದು ಏಟು ಬೀಸಿತು.

‘ಹೌ, ಡೇರ್ ಯೂ ಆರ್?’ -ಮೈತ್ರಿ, ಕೈಲಿದ್ದ ಪುಸ್ತಕವನ್ನು ನೆಲಕ್ಕೆ ಅಪ್ಪಳಿಸಿ ಎದ್ದುನಿಂತು ರಣಚಂಡಿಯಂತೆ ಅವನನ್ನೇ ನುಂಗುವಂತೆ ನೋಡುತ್ತಿದ್ದಳು.

ರಘು ಅವಳ ಅವತಾರ ಕಂಡು ತತ್ತರಿಸಿ ಹೋದ!

‘ಈ ಪ್ರಶ್ನೆ ಕೇಳಕ್ಕೆ ನಿನಗೆಷ್ಟೋ ಧೈರ್ಯ?! ನಾನೆಲ್ಲಿ ನೀನೆಲ್ಲಿ?…. ಈ ಆಸೇನಾ ಎಷ್ಟು ದಿನದಿಂದ ಹೊಂಚುಹಾಕ್ತಿದ್ದೆ?…. ಈ ಆಸೆ ಇಟ್ಕೊಳಕ್ಕೆ ನಿನಗ್ಯಾವ ಯೋಗ್ಯತೆ ಇದೆ?….. ಹೂಂ… ನನ್ನ ಮದುವೆ ಆಗ್ತೀನೀಂತ ಕೇಳ್ತೀಯಲ್ಲ!…. ಅಬ್ಬಾ!!…. ನನ್ನ ರೂಪ, ಅಂತಸ್ತು, ನೆಂಟಸ್ತನಗಳಿಗೆ ನೀನು ಸಮಾನಾನಾ? ಈ ದುರಾಸೆ ನಿನಗ್ಯಾಕೆ ಬಂತು?’

ರಘು ನಾಚಿಕೆಯಿಂದ ತಲೆಬಾಗಿಸಿದ.

 ‘ನಿನ್ನ ಜಾಗದಲ್ಲಿ ನೀನಿರಬೇಕು ತಿಳ್ಕೋ… ನಿನಗೆ ದಕ್ಕೋ ಅಂಥ ಸಾಮಾನ್ಯ ಹೆಣ್ಣು ನಾನು ಅಂತ ಅಂದ್ಕೊಡ್ಯಾ?…ಹೂಂ…ಕೇಳೋ…ನಮ್ಮಪ್ಪ ನನಗೆ ತಕ್ಕನಾದಂಥ ಸುರಸುಂದರಾಂಗ, ಎಂಜಿನಿಯರ್ರೋ –ಡಾಕ್ಟರೋ, ಫಾರಿನ್ ರಿಟರ್ನ್ಡ್ ಹುಡುಗನ್ನ ಹುಡುಕಿ ತರ್ತಾರೆ. ಗ್ರ್ಯಾಂಡಾಗಿ ಮದುವೆ ಮಾಡ್ತಾರೆ… ನಿನ್ನಂಥವನನ್ನು ನಾನು ಕಣ್ಣೆತ್ತಿ ಸಹ ನೋಡಲ್ಲ. ನಿನ್ನ ಚೌಕಟ್ಟಿನಲ್ಲಿ ನೀನೀರಬೇಕು. ನಿನ್ನ ಇತಿ ಮಿತಿ ಏನು ಅಂತ ತಿಳ್ಕೊಂಡು ಮೊದ್ಲು ಇಲ್ಲಿಂದ ಜಾಗ ಖಾಲಿ ಮಾಡು ಈಗ ’  ಎಂದು ಅಬ್ಬರಿಸಿದ್ದಳು.

ಅಂದು ಅವಳ ದೃಷ್ಟಿಯಿಂದ ಮರೆಯಾಗಿ ಹೋದ ರಘು ಹನ್ನೆರಡು ವರ್ಷಗಳ ನಂತರ ಇಂದು ಅವಳ ನೆನಪನ್ನು ಕೆದಕಿದ್ದ.

ನೆನಪಿನ ಉಬ್ಬಸದಿಂದ ಮೈತ್ರಿಯ ಎದೆ ಸಶಬ್ದವಾಗಿ ಏರಿಳಿಯುತ್ತಿತ್ತು- ಅಷ್ಟರಲ್ಲಿ ಒಳಗೆ ಬಂದ ಅವಳ ಹತ್ತು ವರ್ಷದ ಮಗಳು ಶ್ರುತಿ, ಹಾಸಿಗೆಯ ಮೇಲೆ ಬೋರಲು ಬಿದ್ದು ಬಿಕ್ಕುತ್ತಿದ್ದ ತಾಯಿಯ ಮೈದಡವುತ್ತ- ‘ಏನಾಯ್ತಮ್ಮ?’ ಎಂದು ತಾನೂ ಅಳಲುಪಕ್ರಮಿಸಿದಳು.

ಕಳೆದ ಈ ಹನ್ನೆರಡು ವರುಷಗಳು ಹೇಗೆಲ್ಲ ಮಗ್ಗುಲಾದವು ಎಂದು ಯೋಚಿಸತೊಡಗಿದ ಮೈತ್ರಿಯ ಕಂಗಳು ಮತ್ತೆ ಹಸಿಯಾಗಿ ಹನಿಯಿಕ್ಕಿದವು.

ರಾಮರಾಯರು ನಿಶ್ಚಯಿಸಿದಂತೆ ಮಗಳ ರೂಪ, ಓದಿಗೆ ತಕ್ಕನಾದಂಥ ಭಾರಿ ಇಂಜಿನಿಯರ್ ಹುಡುಗನನ್ನೇ ಆರಿಸಿದ್ದರು. ವರುಣ್ ಸರಸಿ, ಒಳ್ಳೆಯ ಮಾತುಗಾರ. ಪ್ರಥಮ ನೋಟದಲ್ಲೇ ಮೈತ್ರಿ ಅವನ ಎಲ್ಲ  ಅರ್ಹತೆಗಳಿಗೂ ಮಾರುಹೋಗಿದ್ದಳು. ಕೆಲವೇ ದಿನಗಳಲ್ಲಿ ಅವಳ ವಿವಾಹ ವಿಜೃಂಭಣೆಯಿಂದ  ನಡೆಯಿತು. ಮಧುಚಂದ್ರದ ಅವಧಿಯಲ್ಲಿ ಮೈತ್ರಿ ಹಕ್ಕಿಯಾಗಿ ವಿಹರಿಸಿದ್ದಳು. ಅವಳಿಗೆ ವೀಸಾ ಸಿಗದ ಕಾರಣ ಅವಳ ಗಂಡನೊಬ್ಬನೇ ಅಮೇರಿಕಾಕ್ಕೆ ಹೋಗಬೇಕಾಯಿತು. ಇಷ್ಟರಾಗಲೇ ಮೈತ್ರಿ ಗರ್ಭಿಣಿಯಾಗಿದ್ದಳು. ಹೆಣ್ಣುಮಗುವೂ ಹುಟ್ಟಿತು. ವರ್ಷ ಕಳೆದ ನಂತರ ತಾಯಿ ಮಗುವನ್ನು ಒಟ್ಟಿಗೆ ಅಮೆರಿಕೆಗೆ ಕಳಿಸಿಕೊಡುವ ರಾಯರ ಯೋಜನೆ ತಲೆಕೆಳಗಾಯಿತು.

ಮೈತ್ರಿಯ ಯಾವ ಪತ್ರಗಳಿಗೂ ಅವಳ ಗಂಡನಿಂದ ಉತ್ತರ ಬರಲಿಲ್ಲ. ಫೋನ್ ಸಂಪರ್ಕವೂ ಸಾಧ್ಯವಾಗದಾಯಿತು. ಅಳಿಯನ ಬಗ್ಗೆ ತಿಳಿಯಲು ಅವನನ್ನು ಸಂಪರ್ಕಿಸಲು ರಾಯರು ಮಾಡಿದ ಪ್ರಯತ್ನಗಳೆಲ್ಲವೂ  ವ್ಯರ್ಥವಾದವು. ಹುಟ್ಟಿದ ಮಗು ತಂದೆಯ ಮುಖವನ್ನೇ ನೋಡಲಿಲ್ಲ. ಕಡೆಗೆ, ಅಮೇರಿಕಾದಲ್ಲಿ ಗಂಡನಿಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿರುವ ಬಗ್ಗೆ ಯಾರಿಂದಲೋ ಸಮಾಚಾರ ತಿಳಿದು ಮೈತ್ರಿ ಧರೆಗಿಳಿದು ಹೋದಳು. ರಾಮರಾಯರಂತೂ ಹೃದಯಾಘಾತದಿಂದ ನೆಲಕ್ಕುರುಳಿದರು.

ತಂದೆ-ಗಂಡ ಇಬ್ಬರನ್ನೂ ಏಕಕಾಲಕ್ಕೆ ಕಳೆದುಕೊಂಡ ಮೈತ್ರಿ ನಿಜವಾಗಿ ಅನಾಥಳಾದಳು. ಅವಳ ದುಃಖ ಅಣ್ಣ-ಅತ್ತಿಗೆಯರನ್ನು ಹೆಚ್ಚು ಕಾಲ ಕಾಡಲಿಲ್ಲ. ಅವಳ ಹೆಸರಿನಲ್ಲಿ ಅವಳ ತಂದೆ ಇಟ್ಟಿದ್ದ ಹಣವೆಲ್ಲ ಕರಗುತ್ತ ಬಂದಂತೆ ಆ ಮನೆಯಲ್ಲಿ ದಿನಗಳೆದಂತೆ ಅವಳ ಬಗ್ಗೆ ಅಸಡ್ಡೆ ಹೆಚ್ಚಿತು.

ಇಬ್ಬರ ಹೊಟ್ಟೆ-ಬಟ್ಟೆಯ ಪ್ರಶ್ನೆ-ಜೊತೆಗೆ ಮಗಳ ವಿದ್ಯಾಭ್ಯಾಸದ ಖರ್ಚು ಬೇರೆ. ಎಂದೂ ಅನುಭವಿಸದ ದೈನ್ಯಭಾವನೆಗಳಲ್ಲಿ ಸಿಕ್ಕು ಮೈತ್ರಿ ಜರ್ಜರಿತಳಾಗಿದ್ದಳು. ತನ್ನ ಕಾಲ ಮೇಲೆ ತಾನು ನಿಲ್ಲಬೇಕಾದಂಥ ಅನಿವಾರ್ಯ ಪರಿಸ್ಥಿತಿ. ಧೂಳು ಮೆತ್ತಿದ್ದ ತನ್ನ ಡಿಗ್ರಿ ಸರ್ಟಿಫಿಕೇಟ್ಸ್ ಹಿಡಿದು ಕೆಲಸಕ್ಕಾಗಿ ಕಾದ ಟಾರುರಸ್ತೆಗಳ ಮೇಲೆ ಅಲೆದದ್ದೇ  ಅಲೆದದ್ದು. ಅವಳಿಗೆ ಎಲ್ಲೆಲ್ಲೂ ನಿರಾಶೆಯೇ ಎದುರಾಯಿತು. ನೌಕರಿಗಾಗಿ ಷಾರ್ಟ್‍ಹ್ಯಾಂಡ್, ಕಂಪ್ಯೂಟರ್ ಕೋರ್ಸ್‍ಗಳನ್ನೂ ಮುಗಿಸಿಕೊಂಡಳು. ಸರ್ಕಾರೀ ಕೆಲಸಕ್ಕೆ ಸೇರುವ ವಯೋಮಿತಿಯೂ ಮೀರುತ್ತ ಬಂದಿತ್ತು.

ಕಡೆಯ ಪ್ರಯತ್ನವಾಗಿ ಅವಳಿಂದು ಈ ಸಂದರ್ಶನಕ್ಕೆ ಹಾಜರಾಗಿದ್ದಳು. ಅದೂ ಈ ಹುದ್ದೆಗೆ  ಕೊಂಚ ವಯೋಮಿತಿ ಸಡಿಲಿಕೆ ಇದ್ದುದರಿಂದ, ಯಾವುದೋ ದೂರದ ಆಶಾಕಿರಣ ಮಿನುಗಿತ್ತು. ಆದರೆ ಸಂದರ್ಶನಕ್ಕೆ ಹೋಗುವಾಗಿದ್ದ ಅವಳ ಮುಖದ ಮೇಲಿನ ಕಳೆ, ಹಿಂತಿರುಗಿ ಬರುವಾಗ ಸತ್ತಿತ್ತು. ಎದೆಯೊಳಗೇನೋ ದುಗುಡ-ತಳಮಳ ರಣಗುಡುತ್ತಿತ್ತು. ಅವಳಿನ್ನೂ ಆಶ್ಚರ್ಯದ ಆಘಾತದಿಂದ ಹೊರಬಂದಿರಲಿಲ್ಲ.

ಆ ಕಂಪೆನಿಯ ಮುಖ್ಯಸ್ಥ ರಘು !…  ಓಹ್, ಅಂದಿನ ಬಡಕಲು ಮೈಯಿನ ನಿಸ್ಸಹಾಯಕ ರಘುವೆಲ್ಲಿ… ಇಂದಿನ ಟಿಪ್‍ಟಾಪ್ ಧಿರಿಸಿನ ಪ್ರೌಢ-ಗಂಭೀರ ಈ ವ್ಯಕ್ತಿಯೆಲ್ಲಿ?!…

ಹಿಂದಿನ ದಿನಗಳೆಲ್ಲ ಕಣ್ಣುಂದೆ ಸರಿಯುತ್ತ ಅಂದಿನ ಆ ಘಟನೆ, ತಾನು ರಘುವನ್ನು ಹೀನಾಯವಾಗಿ ಅಪಮಾನಗೊಳಿಸಿದ, ನಾಯಿಗಿಂತಲೂ  ಕಡೆಯಾಗಿ ಅವನನ್ನು ನಡೆಸಿಕೊಂಡ ಅಂದಿನ ದಿನದ ಮಾತುಕತೆಗಳೆಲ್ಲ ನೆನಪಲ್ಲಿ ದುಬದುಬನುಕ್ಕಿ ಬಂದು ಅವಳ ಮೊಗ ಕಪ್ಪಿಟ್ಟಿತು.

ತನಗೆ ಈ ಕೆಲಸ ಖಂಡಿತ ಸಿಗಲಾರದೆಂಬುದು ಖಾತ್ರಿಯೆನಿಸಿದಾಗ  ಮೈತ್ರಿ ಸಂಪೂರ್ಣ ಹತಾಶಳಾದಳು.

ಆದರೆ ಅವಳೆಂದೂ ನಿರೀಕ್ಷಿಸಿರದಂಥ ಊಹಿಸಿರದ ಅವಕಾಶ…ರಘುವಿನ ಸೆಕ್ರೇಟರಿಯಾಗಿ ಅವಳಿಗೆ ಕೆಲಸದ ಆರ್ಡರ್ ಆ ದಿನ ಬಂದೇ ಬಿಟ್ಟಿತ್ತು!!

ಮೈತ್ರಿಯ ಹೃದಯದ ಬಡಿತ ಒಂದರೆಗಳಿಗೆ ಸ್ತಬ್ಧವಾಯಿತು! ಇದರಲ್ಲೇನಾದರೂ ಸಂಚಿರಬಹುದೇ?!  ಕಳೆದುಹೋದ ಅಹಿತಕರ ಘಟನೆ ಮರುಕಳಿಸಿ, ಅಪಮಾನದ ದಳ್ಳುರಿಗೆ ಸಿಕ್ಕಿ ಸಾಯುವುದಕ್ಕಿಂತ ಈ ಕೆಲಸಕ್ಕೆ ಹೋಗದಿರುವುದೇ ಲೇಸೆನಿಸಿತು.

ಆದರೆ…ಅಣ್ಣ ಅತ್ತಿಗೆಯರ ತಿರಸ್ಕಾರದ ಕಟಕಿನುಡಿಗಳು ಹೃದಯ ಕೊರೆದಾಗ ಮೈತ್ರಿ ಮಂಜುಗಡ್ಡೆಯಂತಾದಳು.. ಎದುರಿಗೆ ನಿಂತ ಮಗಳ ಭವಿಷ್ಯ ಎದೆ ಗುಮ್ಮಿದಾಗ ಮೈತ್ರಿ ನೀರಾದಳು.

ಗತ್ಯಂತರವಿಲ್ಲದೆ ಅವಳು ಮರುದಿನವೇ ನಿರುತ್ಸಾಹದ, ಭಾರದ ಹೆಜ್ಜೆಗಳನ್ನಿಡುತ್ತ ಆ ಕಂಪೆನಿಯ ಆಫೀಸಿಗೆ ಹೋಗಿ ಡ್ಯೂಟಿಗೆ ರಿಪೋರ್ಟ್  ಮಾಡಿಕೊಂಡಳು.

ಮೊದಲ ದಿನ ರಘುವಿನೆದುರು ನಿಂತು ಡಿಕ್ಟೇಷನ್ ತೆಗೆದುಕೊಳ್ಳುವಾಗ, ಟೈಪ್ ಮಾಡಿದ್ದನ್ನು ಅವನ ಮುಂಚಾಚುವಾಗ ಅವಳು ನಡುಗಿಹೋಗಿದ್ದಳು. ಅವನ ಕಣ್ಣುಗಳು ಮಾತ್ರ ನಿರ್ವಿಕಾರವಾಗಿ ತಿಳಿಯಾಗಿದ್ದವು. ಸಾಂದರ್ಭಿಕವಾಗಿ, ಮೈತ್ರಿಯತ್ತ ಹರಿದ ಅವನ  ಒಂದೆರಡು ನೋಟಗಳು ಶೀತಲವಾಗಿ ಇದ್ದುದನ್ನು ಗಮನಿಸಿದರೂ ಅವಳು ಸುಮ್ಮ ಸುಮ್ಮನೆ  ಆತಂಕಗೊಂಡಿದ್ದಳು. ಮೈ ಹಿಡಿಯಾಗಿ ಹೋಗಿತ್ತು.

ಆಫೀಸಿನ ವ್ಯವಹಾರ ಬಿಟ್ಟರೆ ಅವನು ಅವಳನ್ನು ತಲೆಯೆತ್ತಿಯೂ ನೋಡಿರಲಿಲ್ಲ. ಅವಳಿಗೂ ಅವನನ್ನು ನೋಡುವ ಧೈರ್ಯವಾಗಲಿ, ಸಾಹಸವಾಗಲಿ ಇರಲಿಲ್ಲ. ಅಪರಾಧೀ ಪ್ರಜ್ಞೆ ಅವಳನ್ನು ಒಂದೇ ಸಮನೆ ಕೊರೆಯುತ್ತಿತ್ತು.

‘ಸರ್’ ಎಂದವನನ್ನು ಸಂಬೋಧಿಸುವಾಗಲೆಲ್ಲ  ಅವಳು ಸತ್ತು  ಸತ್ತೂ ಬದುಕುತ್ತಿದ್ದಳು.

ಕೆಲಸ ಸಿಕ್ಕ ಎರಡು ಮೂರು ತಿಂಗಳಲ್ಲೇ ಮೈತ್ರಿ ಒಂದು ಸಣ್ಣಮನೆ ಬಾಡಿಗೆಗೆ ಹಿಡಿದು ಮಗಳೊಡನೆ ಬೇರೆ ಇರತೊಡಗಿದಳು.

ಏಳೆಂಟು ತಿಂಗಳು ಇದೇ  ಕಳವಳ ಗಲಿಬಿಲಿಯಲ್ಲಿಯೇ ಕಳೆದಿತ್ತು.

          ಒಂದು ಸಂಜೆ, ಸುಮಾರು ಐದರ ಸಮಯ.

‘ಸಾಹೇಬ್ರು ಕರೀತಿದ್ದಾರೆ’-ಎಂದು ಅಟೆಂಡರ್ ಅವಳನ್ನು ಕರೆದ.

 ಮೈತ್ರಿಯೆದೆ ಢವಡವಿಸಿತು. ಪ್ಯಾಡು-ಪೆನ್ಸಿಲ್‍ನೊಂದಿಗೆ ಛೇಂಬರಿಗೆ ಧಾವಿಸಿದಳು.

ರಘು ಅವಳನ್ನು ನೇರವಾಗಿ ನೋಡುತ್ತ ನುಡಿದ: ‘ಡಿಕ್ಟೇಷನ್ ಏನಿಲ್ಲ…ನೀವು ನಮ್ಮನೆಗೊಂದು ದಿನ ಬನ್ನಿ ಅಂತ ಕರೆಯೋಣಾಂತ ಹೇಳಿ ಕಳುಹಿಸಿದೆ ಅಷ್ಟೇ ’

ಮೈತ್ರಿ ಒಳಗೇ ತೆಳ್ಳಗೆ ನಡುಗಿ ನಿರುತ್ತರಳಾದಳು.

ನಾಲ್ಕಾರು ವಾರಗಳ ನಂತರ ಮತ್ತೊಂದು ಸಂಜೆ. ಸುಮಾರು ಅದೇ ಸಮಯ.

‘ಈ ದಿನ ನೀವು ನಮ್ಮ ಮನೆಗೆ ಬರಬೇಕು’-ಎಂದ. ಕಟ್ಟಪ್ಪಣೆಯಂತ್ತಿತ್ತು ಅವನ ದನಿ.  

ಕೀಲುಗೊಂಬೆಯಂತೆ ಅವಳು ಅವನನ್ನು ಮೌನವಾಗಿ ಹಿಂಬಾಲಿಸಿದಳು.  ಕಾರು ದೊಡ್ಡ ಬಂಗಲೆಯ ಮುಂದೆ ನಿಂತಿತು. ದಾರಿಯುದ್ದಕ್ಕೂ ಒಂದು ಶಬ್ದವೂ ಮಾತನಾಡದ ರಘುಚಂದ್ರ ಕಾರಿನಿಂದಿಳಿದು ಗಂಭೀರವಾಗಿ ಮುಂದಡಿಯಿಟ್ಟ.  

ಮೈತ್ರಿ ಮೈಯನ್ನು ಹಿಡಿಮಾಡಿಕೊಂಡು ಅವನನ್ನನುಸರಿಸಿದಳು.

ಸುಸಜ್ಜಿತ ಬಂಗಲೆ-ಶ್ರೀಮಂತ ವಾತಾವರಣ. ತನ್ನ ಅಧಿಕಾರ, ಬಂಗಲೆ,  ಶ್ರೀಮಂತಿಕೆ, ಬೆಡಗಿನ ಹೆಂಡತಿ, ಮುದ್ದು ಮಕ್ಕಳ ಸಂಪತ್ತನ್ನು  ತನ್ನ ಮುಂದೆ ಪ್ರದರ್ಶಿಸಲು ತನ್ಮೂಲಕ ತನ್ನನ್ನು ಚುಚ್ಚಿ ನೋಯಿಸಲು, ಅಣಕಿಸಲು ಒತ್ತಾಯ ಪೂರ್ವಕವಾಗಿ ತನ್ನನ್ನಿಲ್ಲಿಗೆ  ಕರೆತಂದಿದ್ದಾನೆಂಬುದು ಅವಳಿಗರ್ಥವಾಗಿತ್ತು.

ಮೆತ್ತೆಯ ಸೋಫದೊಳಗೆ ಹುದುಗಿ ಹೋದ ಅವಳ ಕೈಗೆ ಅಡಿಗೆಯ ಹುಡುಗ ಸಿಹಿತಿಂಡಿಯ ತಟ್ಟೆ ಇತ್ತಾಗ, ಅವಳು ಗಲಿಬಿಲಿಗೊಂಡು ರಘುವಿನತ್ತ ನೋಡಿದಳು. ಅವನು ಅಷ್ಟೇ ಸಿಹಿಯಾದ ನಗೆ ಬೀರುತ್ತ- ‘ತಗೊಳ್ಳಿ ಪರವಾಗಿಲ್ಲ…ಟುಡೇ ಈಸ್ ಮೈ ಬರ್ತ್‍ಡೇ…ಆತ್ಮೀಯರ ಜೊತೆ ಸಿಹಿ ಹಂಚಿಕೊಂಡು ಸೆಲಬ್ರೇಟ್  ಮಾಡ್ಕೋಳೋಣ ಅಂತ ನಿಮ್ಮನ್ನ ಇವತ್ತು ಕರೆದೆ ಅಷ್ಟೆ’-ಎಂದಾಗ ಅವಳ ಕೈ ನಸುವಾಗಿ ಕಂಪಿಸಿತು.

‘ನಿಮ್ಮನೆಯೋರೆಲ್ಲ ಎಲ್ಲಿ ಕಾಣ್ತಾ ಇಲ್ವಲ್ಲ? ಎಂದೂ ಸುತ್ತಲೂ ದಿಟ್ಟಿಸಿದಳು.

‘ಮತ್ಯಾರಿರಬೇಕು?! ಅವನ ತುಂಟಿಯಂಚಿನಲ್ಲಿ ಕೆಣಕು ಇಣುಕಿತು.

‘ಅಂದ್ರೆ ನಿಮ್ಮೆಯವರೆಲ್ಲ?’- ಅವಳ ದನಿ ತೆಳುವಾಗಿತ್ತು.

‘ಇವರೇ ನಮ್ಮನೆಯೋರು…ಅಡಿಗೆ ಭಟ್ಟ-ಡ್ರೈವರ್ರು-ಗೂರ್ಖಾ, ಮಾಲಿ…’

ಮೈತ್ರಿಯ ಮೊಗದಲ್ಲಿ ವಿಷಾದ ಪಸರಿಸಿ ಕಣ್ಣುಗಳು ಕಿರಿದುಗೊಂಡವು.

 ‘ರಘು, ನೀನು ಅನಾಥ, ಬಡವ, ನಿನಗೆ ಮದುವೆಯಾಗೋ ಯೋಗ್ಯತೆ ಇಲ್ಲ’ – ಅಹಂ ಮೆತ್ತಿದ ಅವಳದೇ ದನಿಯ ಕರ್ಕಶ ನುಡಿಗಳು ಹಿಂದಕ್ಕೆ ಪುಟಗೊಟ್ಟು ನೆಗೆದು ಬಂದು ಅವಳೆದೆಯನ್ನು ಜೋರಾಗಿ ಬಡಿಯತೊಡಗಿತು. ತುಂಬಿದ ಕಣ್ಣಾಲಿಗಳನ್ನು  ತಗ್ಗಿಸಿದಳು ಮೈತ್ರಿ . ನೆಲದ ಮೇಲೆರಡು ತೊಟ್ಟಿಟ್ಟವು. ನಾಚಿಕೆ, ವಿಷಾದದಿಂದ ಹಿಂಡುತ್ತಿದ್ದ ಅವಳ ಅಂತರಂಗದೊಳಗೆ ಅಲ್ಲೋಲ್ಲ ಕಲ್ಲೋಲ.

ತಟ್ಟನೆ ಮೈತ್ರಿ ಮೇಲೆದ್ದು ಬಾಗಿಲತ್ತ ನಡೆದಳು.

’ಮೈತ್ರಿ ಒಂದು ನಿಮಿಷ’ -ರಘುವಿನ ಕಂಠ ಅವಳನ್ನು ತಡೆದು ನಿಲ್ಲಿಸಿತು.

‘ಬಾ ಮೈತ್ರಿ ಕೂತ್ಕೋ…ನಿನ್ನ ಕ್ಲೋಸ್ ಫ್ರೆಂಡ್- ಕಲೀಗ್ ವೀಣಾಳಿಂದ ನಿನ್ನ ವಿಷ್ಯವೆಲ್ಲ ತಿಳೀತು…ಆಯಾಮ್ ಸೋ ಸಾರಿ…’

ನಿಂತ ನೆಲ ಬಾಯ್ಬಿಡಬಾರದೇ ಎನಿಸಿ ಅವಳು ಇಂಚು ಇಂಚೇ ಕುಸಿಯತೊಡಗಿದಳು. ಮುಖ ಕೆಂಪಾಗಿ ಹಬೆ ರಾಚುತ್ತಿತ್ತು. ಅವನ ದನಿಯಲ್ಲಿ ವ್ಯಂಗ್ಯದೊಡನೆ ಕರುಣೆಯ ಟಿಸಿಲನ್ನೂ ಗುರುತಿಸಿ ಅವಳ ಮೈ ಕಂಪಿಸತೊಡಗಿತು..

‘ಮೈತ್ರಿ…ಹೌ ಡೇರ್ ಯೂ ಆರ್ ಅಂತ ನೀನು ಕೋಪ ಮಾಡ್ಕೊಂಡು ನನ್ನ ಇನ್ನೊಂದು ಕಪಾಳಕ್ಕೆ ಬೀಸಿ ಹೊಡೆಯದಿದ್ರೆ ಇನ್ನೊಂದ್ಮಾತು’

ಢವಢವಿಸುತ್ತಿದ್ದ ತನ್ನ ಹೃದಯವನ್ನು ಅವಳು ಎಡಗೈಯಲ್ಲಿ ಒತ್ತಿಕೊಳ್ಳುತ್ತ, ಅವನೆಡೆ ಪ್ರಯಾಸದಿಂದ ನೋಟ ಹರಿಸುವ ಸಾಹಸವನ್ನು ಮಾಡಿದಳು.

ಅವನ ದನಿ ಶಾಂತವಾಗಿತ್ತು:

 ‘ನನ್ನದು ಧಾರ್ಷ್ಯ ಅಂತ ಭಾವಿಸದಿದ್ರೆ ಒಂದು ಕೋರಿಕೆ ಮೈತ್ರೀ…ನನ್ನ ಮನ-ಮನೆಗಳೆರಡೂ ಇನ್ನೂ ಖಾಲಿ ಇವೆ…ನಿನ್ನ ಅಭ್ಯಂತರವಿಲ್ಲದಿದ್ರೆ, ನೀನೂ ಮತ್ತು ನಿನ್ನ ಮಗಳು ಇಬ್ರೂ ಬಂದು ಇಲ್ಲೇ ಇರಬಹುದಲ್ಲಾ?’

ಅವನ ದನಿ ಅಲೆ ಅಲೆಯಾಗಿ ತೇಲಿ ಬಂದು ಅವಳ ಕಿವಿಯಲ್ಲಿ ಮೊರೆಯತೊಡಗಿತು.

 ನಿಗರ್ವ-ವಿನಯ- ಕ್ಷಮೆ- ಔದಾರ್ಯ-ಔನ್ನತ್ಯ-ಸಜ್ಜನಿಕೆಗಳ ಸಂಗಮದಂತಿದ್ದ ಅವನ ಅನಿರೀಕ್ಷಿತ ಆಹ್ವಾನ ಕಂಡು ಮೈತ್ರಿ ಲಜ್ಜೆ-ಪಶ್ಚಾತ್ತಾಪಗಳಿಂದ ಕುಬ್ಜಳಾಗಿ ಕರಗತೊಡಗಿದಳು.

                                         ****************************

Related posts

ಹೀಗೊಂದು ಸ್ವಗತ

YK Sandhya Sharma

Skit- Kamlu Maga Foreign Returned

YK Sandhya Sharma

ಕ್ರೌರ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.