Image default
Short Stories

ಪ್ರಾಪ್ತಿ

ರಾಹುಲನ  ಧ್ವನಿ ಕೇಳಿದ ಹಾಗಾಗಿ ನಂದಿತಳ ಕಿವಿ ನಿಮಿರಿತು. ಕೈಲಿದ್ದ ನೆರಿಗೆ ಜಾರಿ ನೆಲಕ್ಕೆ ಬಿದ್ದು ಚೆಲ್ಲಾಪಿಲ್ಲಿಯಾಯಿತು. ಹಾಗೇ ಕಂಬದಂತೆ ಕದಲದೇ ನಿಂತು ಬಿಟ್ಟಳು. ಅಂತರಾಳದ ಶಕ್ತಿಯನ್ನೆಲ್ಲಾ ಕಿವಿಗೆ ತುಂಬಿ ನಡುಮನೆಯಿಂದ ತೂರಿಬರುವ ಕಂಚುಕಂಠದ ಅಲೆಗಾಗಿ ಕಿವಿಗೊಟ್ಟು ಆಲಿಸಿದಳು.

ಹೌದು! ಅದು ರಾಹುಲನ ಗಂಭೀರ ಧ್ವನಿಯೇ …ಕಾಳರಾತ್ರಿಯಲ್ಲಿ ಸೂರ್ಯ ತೂರಿಬಂದಷ್ಟು ವಿಸ್ಮಯಕಾರಿಯಾಗಿತ್ತು ಅವನ ಆಗಮನ!

ರಾಹುಲ ತಂದೆಯೊಡನೆ ಮಾತನಾಡುತ್ತಿದ್ದ. ತಂದೆಯ ಧ್ವನಿಯೂ ಉದ್ವಿಗ್ನವಾಗಿತ್ತು. ತಾಯಿ ಮಾಡುತ್ತಿದ್ದ ಕೆಲಸವನ್ನು ಅಷ್ಟಕ್ಕೇ ಬಿಟ್ಟು ನಡುಮನೆಯ ಬಾಗಿಲಿಗೆ ಓಡಿ ಬಂದಿದ್ದರು.

ನಂದಿತಳ ಹೃದಯ ಒಂದು ಬಗೆಯ ಚಡಪಡಿಕೆಯಿಂದ ತುಯ್ದಾಡಿತು. ಕೈಯಲ್ಲಿ ಮತ್ತೆ ನೆರಿಗೆ ಹಿಡಿಯಲು ಪ್ರಯತ್ನಿಸಿದಳು. ಅವನು ತನ್ನ ಹೆಸರನ್ನು ಉಚ್ಛರಿಸುತ್ತಿದ್ದುದನ್ನು ಕೇಳಿದೊಡನೆ ಕೈ ಸಡಿಲವಾಯಿತು.

“ನಂದಿತ ಮನೇಲಿಲ್ವಾ?… ಎಲ್ಲಿ ಕಾಣ್ತಾ ಇಲ್ವಲ್ಲಾ?”

ಈಗ ಇನ್ನೂ ಆಶ್ಚರ್ಯ ಎರಗಿತು. ಮಿತಭಾಷಿ. ತುಸು ಬಿಗಿ ನಡವಳಿಕೆಯ ರಾಹುಲ ಇಂದು ಇದ್ದಕ್ಕಿದ್ದ ಹಾಗೆ ತಮ್ಮ ಮನೆಗೆ, ಬಂದದ್ದು, ಬಾಯ್ತುಂಬ ಮಾತಾಡುತ್ತಿರುವುದು, ಅಷ್ಟೇ ಅಲ್ಲದೆ ತನ್ನನ್ನು ವಿಚಾರಿಸಿಕೊಳ್ಳುತ್ತಿರುವುದನ್ನು ಕಂಡು ನಂದಿತಾಳ ಉಸಿರಾಟ ತೀವ್ರವಾಯಿತು. ಎದೆಬಡಿತ ಕಿವಿಯಲ್ಲಿ ಪ್ರತಿಧ್ವನಿಸಿತು.

ಅವಳ ತಂದೆ ಸುಬ್ಬಯ್ಯನವರೂ ಗರಬಡಿದವರಾಗಿ ಅವನ ಪ್ರಶ್ನೆಗಳಿಗೆಲ್ಲ ತಡಬಡಿಸುತ್ತ ಉತ್ತರಿಸುತ್ತಿದ್ದರು. ಪದ್ದಮ್ಮ ಮೂಕವಿಸ್ಮಿತರಾಗಿ ಒಂದೂ ಮಾತನಾಡದೆ ಬೊಂಬೆಯಂತೆ ನಿಂತಿದ್ದರು.

“ಏನು ಹಾಗೇ ನಿಂತ್ಬಿಟ್ಯಲ್ಲ?!… ಭಾಳ ಅಪರೂಪಕ್ಕೆ ಈ ನಮ್ಮ ರಾಹುಲ ಅತ್ತೇ-ಮಾವನ್ನ ಜ್ಞಾಪಿಸಿಕೊಂಡು ಪ್ರತ್ಯಕ್ಷವಾಗಿದ್ದಾನೆ- ಒಂಚೂರು-”

ಪದ್ದಮ್ಮ ಗಂಡನ ಮಾತು ಮುಗಿಯುವುದರೊಳಗೆ ಅಡಿಗೆಮನೆ ಸೇರಿ ತಿಂಡಿಯನ್ನು  ತಟ್ಟೆಗೆ ಹಾಕಿ, ಕಾಫಿಗೆ ಅಣಿಮಾಡತೊಡಗಿದರು.

ಇದೇನು ಇವತ್ತು ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಹುಟ್ಟಿಬಿಟ್ಟನೇ? ಎನ್ನುವಷ್ಟು ಬೆರಗು! ಆ ಮನೆಗೂ ಈ ಮನೆಗೂ ಸಂಬಂಧ ಕಡಿದುಹೋಗಿ ಆಗಲೇ ಆರೇಳು ವರ್ಷಗಳ ಮೇಲೆಯೇ ಆಗಿರಬೇಕು.

  ಮರೆತ ನೆನಪನ್ನು ಮತ್ತೆ ಮೀಟಿದ ಹಾಗಾಯಿತು.

ರಾಹುಲ-ನಂದಿತಳ ಸೋದರತ್ತೆಯ ಮಗ. ಸಂಕೋಚ ಹಾಗೂ ಗಂಭೀರ ಸ್ವಭಾವದ ಹುಡುಗನಾದರೂ ನಿಷ್ಕಲ್ಮಶ ಮನಸ್ಸಿನ ಸರಳ ಹುಡುಗ ರಾಹುಲ. ಇದೇ ಊರಿನಲ್ಲಿದ್ದಾಗ ಅವನು ಎಂ.ಎಸ್ಸಿ. ಓದುತ್ತಿದ್ದ. ಆಗ ಅವನು ತುಸು ಬಡಕಲು ಬಡಕಲಾಗಿದ್ದ. ಈಗ ಚೆನ್ನಾಗಿ ಮೈ, ಕೈ ತುಂಬಿಕೊಂಡು ನೋಡಲು ಲಕ್ಷಣವಾಗಿ ಕಾಣುತ್ತಿದ್ದ.

“ಮಾವ ನನಗೆ ಇದೇ ಊರಿನಲ್ಲಿ ಕೆಲಸವಾಗಿದೆ-ಕಂಪ್ಯೂಟರ್ ಸೈನ್ಸ್‍ನಲ್ಲಿ ಸ್ಪೆಷಲೈಸ್ ಮಾಡ್ಕೊಂಡಿದ್ದೀನಿ. ಇಲ್ಲಿಗೆ ಬಂದು ಆಗಲೇ ಎರಡು ತಿಂಗಳಾಗ್ತಾ ಬಂತು. ಒಂದು ಸಣ್ಣ ಮನೆ ಮಾಡಿದ್ದೀನಿ-ಒಳ್ಳೇ ಸಂಬಳ ಬರ್ತಾ ಇದೆ-ಬ್ರೈಟ್ ಫ್ಯೂಚರ್ರೂ ಇದೆ”

-ಎನ್ನುತ್ತ ಮಾತಿಗೆ ಬಿಚ್ಚಿಕೊಂಡ ರಾಹುಲನನ್ನು ಕಂಡು, ಅವನು ಬಹಳಷ್ಟು ಬದಲಾಗಿದ್ದಾನೆ ಎನಿಸಿತು ನಂದಿತಳಿಗೆ. ಹುಡುಗರೇ ಹೀಗೇ- ಅಂದುಕೊಂಡಳು.

“ಹಾಯ್” ಎಂದ ರಾಹುಲ ನಂದಿತಳತ್ತ ತಿರುಗಿ. ನಂದಿತಾ ನವಿರಾಗಿ ನಕ್ಕಳು. ಅವಳ ವಿದ್ಯಾಭ್ಯಾಸ, ಕಾಲೇಜಿನ ಬಗ್ಗೆ ಅವನು ಆಸಕ್ತಿಯಿಂದ ವಿಚಾರಿಸಿಕೊಂಡ.

ನಂದಿತಳಿಗೆ ಹುರುಪು ಬಂದಿತು. ಅವನ ತುಂಟಕಣ್ಣುಗಳು, ನಿರ್ಭಿಡೆಯ ಮಾತುಕತೆ ಒಂದು ಬಗೆಯ ಆಕರ್ಷಣೆಯನ್ನುಂಟು ಮಾಡಿತು, ಕಾಲೇಜಿಗೆ ಹೋಗುವುದನ್ನೂ ಮರೆತು ಅವನೊಡನೆ ಹರಟುತ್ತ ಕುಳಿತಳು ನಂದಿತಾ.

“ನಂದೂ ಕಾಲೇಜಿಗೆ ಹೊತ್ತಾಗ್ಲಿಲ್ಲಾ?”

-ತಾಯಿ ನೆನಪಿಸಿದಾಗ ಅವಳು ಜಗ್ಗನೆ ಮೇಲೆದ್ದು ಗಡಿಯಾರ ನೋಡಿಕೊಂಡು, “ರಾಹುಲ್, ನಂಗೆ ಕಾಲೇಜಿಗೆ ಹೊತ್ತಾಯ್ತು. ಇನ್ನೊಂದು ದಿನ ಖಂಡಿತಾ ನೀನು ಬರ್ತೀಯಲ್ಲ?” ಎನ್ನುತ್ತಾ ಹೆಗಲಿಗೆ ಬ್ಯಾಗ್ ತೂಗಾಡಿಸಿಕೊಂಡು ಹೊರಟಳು.

“ನಾನೂ ಬಂದೆ-ನಿನ್ನ ಕಾಲೇಜಿಗೆ ಡ್ರಾಪ್ ಮಾಡಿ ಹಾಗೇ ನಮ್ಮಾಫೀಸಿಗೆ ಹೋಗ್ತೀನಿ” ಎಂದು ಹೆಲ್ಮೆಟ್ಟನ್ನು ಕೈಗೆತ್ತಿಕೊಂಡ ರಾಹುಲ.

ಅವನ ಹಿಂದೆ ಮೋಟರ್‍ಬೈಕ್‍ನಲ್ಲಿ ಕೂಡುವಾಗ ಒಂದು ಥರಾ ಖುಷಿಯೆನಿಸಿತು ಅವಳಿಗೆ. ಆಜಾನುಬಾಹು. ಯೌವ್ವನ ಚಿಮ್ಮುವ ಸುಂದರಯುವಕನ ಹಿಂದೆ ಅವಳು ಇದೇ ಮೊದಲ ಬಾರಿಗೆ ಹೊರಟಿದ್ದು. ಅವನ ನಗು, ಆತ್ಮೀಯ ಮಾತು. ಗಾಡಿಯ ವೇಗ ಅವಳಲ್ಲಿ ಮುದ ತುಂಬಿತು.

  ಕಾಲೇಜಿನ ಬಳಿ ಬೈಕು ನಿಂತಾಗ ನಂದಿತಾ ಏನನ್ನೋ ನಿರೀಕ್ಷಿಸುತ್ತ ಮುಖವರಳಿಸಿ ಸುತ್ತ ನೋಡಿದಳು. ಕಾಂಪೌಂಡಿನೊಳಗೆ ಗೆಳತಿಯರ ತಂಡ ಕಂಡಿತು. ಅವರು ತನ್ನನ್ನು, ರಾಹುಲನನ್ನು ಅವನ ಮೋಟರ್‍ಬೈಕನ್ನು ಗಮನಿಸಿದರೆಂದು ಅರಿವಾದ ನಂತರ ತೃಪ್ತಿಯ  ನಗು ಒಸರಿಸಿ ನಂದಿತಾ-

“ಬರ್ಲಾ ರಾಹುಲ್ – ಬಾ ಯಾವಾಗ್ಲಾದ್ರೂ”-ಎಂದು ಅವನಿಗೆ ಕೈ ಬೀಸಿದಳು.

 ಅವನ ಚಿಗುರುಮೀಸೆ-ಗುಡುಗುಡಿಸಿದ ಬೈಕಿನ ಸದ್ದು ಅವಳೊಳಗೆ ಕಲರವಿಸಿತು. ಸುಬ್ಬಯ್ಯ-ಪದ್ದಮ್ಮ ದಂಪತಿಗಳ ಅಂತರಂಗದಲ್ಲೂ ಕಲರವ. ಹಿಂದೆ ನಡೆದು ಹೋದ ಸಂಗತಿಗಳು ಕಣ್ಣ ಮುಂದೆ ಹರಿದವು.

ಸುಬ್ಬಯ್ಯನ ತಂಗಿಯ ಮನೆಯವರಿಗೂ, ಸುಬ್ಬಯ್ಯನ ಮನೆಯವರಿಗೂ ಮೊದಲಿನಿಂದ ಬೆಳೆದ ದ್ವೇಷವೇನೂ ಇರಲಿಲ್ಲ. ತುಂಬಾ ಹೊಂದಿಕೊಂಡು ಚೆನ್ನಾಗಿಯೇ ಇದ್ದರು. ಈ ರೀತಿ ಮನಸ್ತಾಪ ಬಂದು ಆರೇಳು ವರ್ಷಗಳಾಗಿವೆ ಅಷ್ಟೇ. ಇದಕ್ಕೆ ಕಾರಣ ಸುಬ್ಬಯ್ಯನ ಹಿರಿಮಗ ಪ್ರಕಾಶ. ಅವರ ತಂಗಿಯ ಮಗಳು ರಾಧಾಳನ್ನು ಅವನು ಮದುವೆಯಾಗದಿದ್ದುದೇ ದೊಡ್ಡ ಪ್ರಮಾದವಾಗಿತ್ತು.

ಒಂದೇ ಬಡಾವಣೆಯಲ್ಲಿ, ನಾಲೈದು ಬೀದಿಗಳ ವ್ಯತ್ಯಾಸದಲ್ಲಿ  ಅವರ ಮನೆಗಳು. ಪರಸ್ಪರ ಹೋಗಿ ಬಂದು ಮಾಡುವ ವಾಡಿಕೆ. ಪ್ರಕಾಶ ಸೋದರತ್ತೆಯ ಮನೆಗೆ ಹೋದಾಗ ರಾಜೋಪಚಾರ ನಡೆಯುತ್ತಿತ್ತು. ರಾಧಾ, ಸೋದರಮಾವನ ಮನೆಗೆ ಬಂದಾಗ ಪದ್ದಮ್ಮ ಪ್ರೀತಿಯಿಂದ ಅವಳನ್ನು ಮಾತಾಡಿಸುತ್ತಿದ್ದರು. ಒತ್ತಾಯದಿಂದ ಅವಳನ್ನು ಊಟಕ್ಕೆ ಅಲ್ಲೇ ಉಳಿಸಿಕೊಳ್ಳುತ್ತಿದ್ದರು. ಮನೆ ಮಂದಿಯೆಲ್ಲಾ ಅವಳನ್ನು ಆದರಿಸುತ್ತಿದ್ದರು. ಇದಕ್ಕೆ ಪ್ರಕಾಶನೂ ಹೊರತಲ್ಲ. ತನ್ನ ನಗೆಚಾಟಿಕೆಗಳಿಂದ ಅವಳನ್ನು ನಗಿಸುತ್ತಿದ್ದ. ಏನಾದರೂ ರೇಗಿಸುವುದೂ, ಕೀಟಲೆ ಮಾಡುವುದೂ ಅವನ ಹವ್ಯಾಸ. ಸ್ವಭಾವತಃ ಸರಸಿ ಅವನು. ಪ್ರಕಾಶನ ಆಕರ್ಷಕ ರೂಪ, ಬಿ.ಇ. ಪದವಿ. ನೆಮ್ಮದಿಯ ಕುಟುಂಬದ ಸ್ಥಿತಿಗತಿಗಳನ್ನು ಚೆನ್ನಾಗಿ ಬಲ್ಲ ರಾಧಾ ಅವನಿಗೆ ಮನಸೋತಿದ್ದು ಅಸಹಜವೇನಲ್ಲ. ಜೊತೆಗೆ ಅವಳು ಈ ಭಾವನೆ ಬೆಳೆಸಿಕೊಳ್ಳಲು ಯಾರದೂ ಅಡ್ಡಿಯಿರಲಿಲ್ಲ. ಸೋದರತ್ತೆಯ ಮಗಳ ಜೊತೆ ಸ್ನೇಹ-ಸಲುಗೆಯಿಂದಿರುವ ಮಗನ ನಡುವಳಿಕೆ ಅವನ ತಂದೆ-ತಾಯಿಗಳಿಗೂ ಅಹಿತವಾಗಿರಲಿಲ್ಲ. ಅವನಿಷ್ಟ. ಅವರಿಬ್ಬರು ಮದುವೆಯಾದರೂ ತಮಗೆ ಬೇಸರವಿಲ್ಲವೆಂದು ಆ ದಂಪತಿಗಳು ಮನದಲ್ಲೇ ತೀರ್ಮಾನಿಸಿದ್ದರು.

 ಆದರೆ ಪ್ರಕಾಶ ಮಾತ್ರ ಎಂದೂ ಹೀಗೆ ಅಂತ ತನ್ನ ಮನದ ಅಭಿಪ್ರಾಯವನ್ನು ಹೊರಗೆಡವಿರಲಿಲ್ಲ. ಯಾವುದನ್ನೂ ಅವನು ಗಾಢವಾಗಿ ಹಚ್ಚಿಕೊಂಡಿರಲಿಲ್ಲ. ರಾಧಳ ಸ್ನೇಹದ ವರ್ತನೆಯನ್ನು ಅವನು ಇಷ್ಟಪಡುತ್ತಿದ್ದ. ಅವಳಿರುವವರೆಗೂ ಸರಸವಾಗಿ-ಆತ್ಮೀಯವಾಗಿ     –

ಹರಟುತ್ತಿದ್ದ. ಆದರೆ ಆನಂತರ ಅವಳ ಬಗ್ಗೆಯೇ ಯೋಚಿಸುತ್ತ ಕನಸಿನಲೋಕದಲ್ಲಿ ವಿಹರಿಸುವ ಕನಸುಗಾರ ಅವನಾಗಿರಲಿಲ್ಲ. ಅಲ್ಲಿದನ್ನು ಅಲ್ಲಿಗೇ ಬಿಡುವ ಅಭ್ಯಾಸ ಅವನದು. ಮದುವೆಯ  ಬಗ್ಗೆ ಇನ್ನೂ ಅವನ ಕಲ್ಪನೆ ಕಸರತ್ತು ಮಾಡಿರಲಿಲ್ಲ.

ರಾಧಾಳ ಮನೆಯವರು ಮದುವೆಯ ಪ್ರಸ್ತಾಪ ಮಾಡುವ ಮೊದಲು ಪ್ರಕಾಶನ ಸಹೋದ್ಯೋಗಿ ಅವನಿಗೆ ತನ್ನ ತಂಗಿಯನ್ನು ತೋರಿಸಿದ. “ನಿಮ್ಮ ಮನಸ್ಸಿಗೆ ಬಂದರೆ ನನ್ನ ತಂಗೀನ ನಿಮ್ಮನೆಗೆ ಕರ್ಕೊಂಡು ಬರ್ತೀನಿ” ಅಂದ.

ಪ್ರಕಾಶ ಮೊದಲನೋಟದಲ್ಲೇ ಅವನ ತಂಗಿಗೆ ಮನಸೋತ. ತನ್ನ ಒಪ್ಪಿಗೆಯನ್ನೂ ಸೂಚಿಸಿದ. ಎಲ್ಲಾ ಕನಸಿನಲ್ಲೆಂಬಂತೆ ನಡೆದುಹೋಯ್ತು.

ತಮ್ಮ ಮಗಳನ್ನೇ ಪ್ರಕಾಶ ಮದುವೆಯಾಗುತ್ತಾನೆಂದು ಭಾವಿಸಿದ್ದ ರಾಧಾಳ ತಂದೆ, ತಾಯಿಗೆ ಈ ವಿಷಯ ತಿಳಿದು ಶಾಕ್ ಆಯಿತು. ಇನ್ನೇನು ಪ್ರಕಾಶನ ಮದುವೆ ನಿಶ್ಚಿತಾರ್ಥ ಮೂರುದಿನಗಳಿವೆ ಎನ್ನುವಾಗ ರಾಧಳ ತಂದೆ-ತಾಯಿಗಳು ಪ್ರಕಾಶನ ಮನೆಗೆ ಧಾವಿಸಿಬಂದರು. ರಾಧಾಳ ತಂದೆ ಎಷ್ಟು ನಿಷ್ಠೂರವಾಗೆಂಬಂತೆ ನುಡಿದಿದ್ದರು.

“ಬೆಕ್ಕಿಗೆ ಚೆಲ್ಲಾಟ, ಇಲ್ಲಿಗೆ ಪ್ರಾಣ ಸಂಕಟ-ನಮ್ಮ ರಾಧನ್ನ ನಂಬಿಸಿ ಹೀಗೆ ಕೈಕೊಡೋದೇ? ಅವಳ ತಲೇಲಿ ಇಲ್ಲಸಲ್ಲದನ್ನೆಲ್ಲ ತುಂಬಿ ಅವಳ ಬುದ್ಧಿ ಯಾಕೆ ಕೆಡಿಸ್ಬೇಕಿತ್ತು?’’

-ಎದುರಿಗಿರುವವರು ಸಂಬಂಧಿಗಳು ಎಂಬುದನ್ನೂ ಮರೆತು ಒಂದು ಕ್ಷಣ ಗುಡುಗಿದ್ದರು ಆತ.

ಅದಕ್ಕೇನು ತಾನೇ ಸುಬ್ಬಯ್ಯ ಉತ್ತರಿಸಬಲ್ಲರು? ಪ್ರಕಾಶ ಹೀಗೇಕೆ ಮಾಡಿದ ಎಂಬುದು ಅವರಿಗೂ ಒಗಟು.

ಸುಬ್ಬಯ್ಯನವರ ತಂಗಿ ಕಣ್ಣೀರು ತುಂಬಿಕೊಂಡು ಸೊರಬುಸ ಮಾಡಿ ಅಣ್ಣ ಅತ್ತಿಗೆಯನ್ನು ನಿಂದಿಸಿದ್ದಾಯ್ತು-“ಇಂಥ ಪರಿಸ್ಥಿತೀಲಿ ನಮ್ಮ ರಾಧನ ಮನಸ್ಸನ್ನು  ನೀವೇ ಊಹಿಸ್ಕೊಳ್ಳಿ- ಹೆತ್ತವರ ಸಂಕಟ ನಿಮಗೆ ಹೇಗೆ ಅರ್ಥವಾಗಬೇಕು- ನಿಮ್ಮ ನಂದಿತಾ ಇನ್ನೂ ಚಿಕ್ಕೋಳು. ದೊಡ್ಡೋರೆಲ್ಲ ನಿಮಗೆ ಬರೀ ಗಂಡು ಮಕ್ಕಳು.. ಹೂಂ-ನೀವು ಆಡಿದ್ದೇ ಆಟ”

ಪದ್ದಮ್ಮ ಮೂಕರಾಗಿದ್ದರು. ಮಗನ ತಪ್ಪಿಗೆ ಇವರು ಏನೆಂದು ತಾನೇ ಸಮಜಾಯಿಷಿ ನೀಡಿಯಾರು? ನಾದಿನಿಯ ಎದುರು ತಲೆ ತಗ್ಗಿಸಿದರು.

   ಅಂದಿಗೇ ತೊರೆದುಹೋಯಿತು ಆ ಎರಡು ಮನೆಗಳ ನಡುವಿನ ಸಂಬಂಧ. ಪ್ರಕಾಶನ ಮದುವೆಯಾದಾಗಲಾಯ್ತು ರಾಧಾಳ ಮನೆಯವರ್ಯಾರೂ ಇತ್ತ ಕಡೆ ತಲೆ ಹಾಕಿಯೂ ಮಲಗಲಿಲ್ಲ. ಸುಬ್ಬಯ್ಯ ಮಗನ ದೆಸೆಯಿಂದಾಗಿ ತಂಗಿಯನ್ನು ಸಂಪೂರ್ಣವಾಗಿ ಮರೆಯುವ ಹಾಗಾಗಿಬಿಟ್ಟಿತ್ತು.

ಒಂದೆರಡು ವರ್ಷಗಳಲ್ಲಿ ಸುಬ್ಬಯ್ಯನ ಭಾವಮೈದುನನಿಗೆ ಬೇರೆ ಊರಿಗೆ ವರ್ಗವಾಯಿತು. ಅನಂತರ  ಅವರೆಲ್ಲೋ ಇವರೆಲ್ಲೋ . ರಾಧಾಳಿಗೆ ಮದುವೆಯಾಯಿಯಂತೆ. ಅವಳ ಅಣ್ಣನಿಗೂ ಆಯಿತಂತೆ-ಒಂದಕ್ಕೂ ಸುಬ್ಬಯ್ಯನವರ ಮನೆಗೆ ಆಮಂತ್ರಣ ಪತ್ರಿಕೆಯಿಲ್ಲ.

ಈ ಬಗ್ಗೆ ಇರುಸು ಮುರುಸು ಸುಬ್ಬಯ್ಯ ದಂಪತಿಗಳ ಮನಸ್ಸನ್ನು ಕೊರೆಯುತ್ತಲೇ ಇತ್ತು. ಆದರೆ ಇದೀಗ ಗದಗುಡುತ್ತಿದ್ದ ಚಳಿಯ ದಿನದಲ್ಲಿ ಸೂರ್ಯನ ಎಳೆಬಿಸಿಲು ಹಿತವಾಗಿ ಹರಡಿದಂತೆ ಬೆಚ್ಚಗನಿಸಿತು. ರಾಹುಲನ ಅನಿರೀಕ್ಷಿತ ಆಗಮನ! ಹಿರಿಯರ ಕಲಹದ ಗೋಜಿಗೆ ಹೋಗದೆ ರಾಹುಲ, ತಿಳಿಮನಸ್ಸಿನಿಂದ ತಮ್ಮ ಸಂಬಂಧದ ಎಳೆಯನ್ನು ಕೋದುಕೊಂಡು ಬಂದಿದ್ದಾನೆ ಎನಿಸಿದಾಗ ಆ ದಂಪತಿಗಳ ಹೃದಯಗಳು ಸ್ಪಂದಿಸಿದವು.

ರಾಹುಲನ ಮೊದಲ ಬರುವಿನ ನಂತರ, ಅವನು ಹಲವಾರು ಬಾರಿ ಮಾವನ ಮನೆಗೆ ಬಂದಿದ್ದ. ಹಿಂದಿನ ಸಂಗತಿಗಳ ಗುರುತರಿಯದಂತೆ ರಾಹುಲ ಅವರ ಮನೆಯವರೊಡನೆ ಸಮರಸವಾಗಿ ಸ್ನೇಹದಿಂದ ಬೆರೆತ.

ಪದ್ದಮ್ಮನೂ ಹೆಚ್ಚು ಕೆದಕಲಿಕ್ಕೆ ಹೋಗಲಿಲ್ಲ. ಔಪಚಾರಿಕವಾಗಿ ಅವನ ತಾಯ್ತಂದೆಯರ ಯೋಗಕ್ಷೇಮದ ಬಗ್ಗೆ ವಿಚಾರಿಸಿಕೊಂಡರು. ಇದೀಗ ಮುಸುಕಿದ್ದ ಸೂತಕವೊಂದು ಕಳೆದಂತೆ ರಾಹುಲ ಮತ್ತು ಸುಬ್ಬಯ್ಯನವರ ಮನೆ ಮಂದಿಯ ನಡುವೆ ಸೌಹಾರ್ದತೆ ನೆಲೆಸಿತ್ತು.

ಹೆಚ್ಚು ಕಡಿಮೆ ರಜಾದಿನಗಳಲ್ಲಿ ಸೋದರಮಾವನ ಮನೆಯಲ್ಲೇ ರಾಹುಲನ ಠಿಕಾಣಿ. ಬೆಳಿಗ್ಗೆ ಬಂದರೆ ಊಟ, ತಿಂಡಿ ಎಲ್ಲವನ್ನೂ ಮುಗಿಸಿ ರಾತ್ರಿ ಹೊರಡುತ್ತಿದ.್ದ ನಂದಿತಳ ತಮ್ಮ- ತಂಗಿಯರೊಡನೆ ಚೆಸ್ ಆಡುವುದು, ಟಿ.ವಿ. ನೋಡುವುದು, ಸಿನಿಮಾ-ವಾಕಿಂಗ್‍ಗೆ ಹೋಗೋವರೆಗೂ ಅವರ ಮನೆಯವರಲ್ಲಿ ಒಬ್ಬನಾಗಿ ಸೇರಿಹೋಗಿದ್ದ ರಾಹುಲ.

ನಂದಿತಾ ಫೈನಲ್ ಇಯರ್ ಎಂ.ಎಸ್ಸಿ. ಪರೀಕ್ಷೆಗೆ ಕುಳಿತಿದ್ದಳು. ರಾಹುಲನಿಂದ ಅವಳಿಗೆ ಬಹಳಷ್ಟು ಸಹಾಯ ದೊರೆಯುತ್ತಿತ್ತು. ಕಾಲೇಜಿಗೆ ಡ್ರಾಪ್ ಕೊಡುವುದರಿಂದ ಹಿಡಿದು , ಪಾಠ ಹೇಳಿಕೊಡುವವರೆಗೂ ಅವಳೊಡನೆ ಸಹಕರಿಸುತ್ತಿದ್ದ. ಒಂದು ದಿನ ರಾಹುಲ ಬರದಿದ್ದರೂ ಅವಳಿಗೆ ಖಂಡಗ ಬೇಜಾರು. ಅವನಿಗಾದರೂ ಅಷ್ಟೇ ನಂದಿತಳ ಮೋಹಕ-ಮುಖ ಮಂದಸ್ಮಿತ, ಮೃದುಮಾತು ಎಂದರೆ ಅವನಿಗೆ ಬಲು ಮೆಚ್ಚುಗೆ.

  ಇಬ್ಬರೂ ಬಾಯ್ಬಿಟ್ಟು ಹೇಳದಿದ್ದರೂ ಅವರೀರ್ವರ ನಡುವಿನ ಆತ್ಮೀಯತೆ ಒಂದು ಸ್ಪಷ್ಟ ರೂಪವನ್ನು ಪಡೆದುಕೊಂಡಿತ್ತು.

ಇದುವರೆಗೂ ಏನೋ ಸರಿಹೋಯ್ತು. ಇನ್ನು ಮುಂದಿನ ಹಂತವನ್ನು ನೆನೆಸಿಕೊಂಡಾಗ ನಂದಿತಳ ತಂದೆ- ತಾಯಿಗಳನ್ನು ದೊಡ್ಡದೊಂದು ಧರ್ಮಸಂಕಟ ಬಾಧಿಸಲಾರಂಭಿಸಿತ್ತು. ಅವರಿಬ್ಬರೂ ಇಷ್ಟು ಮುಂದುವರಿಯಲು ತಾವು ಆಸ್ಪದ ಕೊಡಬಾರದಿತ್ತು ಎಂಬ ಪಶ್ಚಾತಾಪವೂ ಉಂಟಾಗಿತ್ತು – ಆದರೆ ಈಗ ಕೈ ಮೀರಿತ್ತು. ನಂದಿತಾ – ರಾಹುಲ್ ಪರಸ್ಪರ ತುಂಬಾ ಹಚ್ಚಿಕೊಂಡುಬಿಟ್ಟಿದ್ದರು.

ನಂದಿತಳ ಪರೀಕ್ಷೆ ಫಲಿತಾಂಶ ಹೊರಬಿತ್ತು. ಅವಳು ಫಸ್ಟ್‍ಕ್ಲಾಸಿನಲ್ಲಿ ತೇರ್ಗಡೆಯಾಗಿದ್ದಳು. ಅಂದು ಅವಳನ್ನು ಹಿಡಿಯುವವರೇ ಇಲ್ಲ.

“ಗುರುಗಳೇ ನಿಮಗೆ ಮೊದಲ ಸ್ವೀಟ್ಸ್”- ಎನ್ನುತ್ತ ನಂದಿತಾ ಹಲ್ವದ ತುಂಡೊಂದನ್ನು ರಾಹುಲನ ಬಾಯೊಳಗಿಟ್ಟಾಗ, ಅವಳು ತನ್ನ ಮೃದುಹೃದಯವನ್ನೇ ತನಗರ್ಪಿಸಿದ ಅನುಭವ ಅವನಿಗೆ. ರಾಹುಲ ಆನಂದಪರವಶನಾದ.

“ಮುಂದೇನು ಮಾಡಲಿ ರಾಹುಲ್? ನೀನು ಹೇಗೆ ಹೇಳಿದರೆ ಹಾಗೆ” ಮುಗ್ಧತೆ ಸೂಸುವ ಕಣ್ಣುಗಳರಳಿಸಿ ನಿಂತ  ನಂದಿತಾ ಅವನ ಆಜ್ಞಾಧಾರಕಳಂತೆ ನಿಂತಿದ್ದಳು.

ರಾಹುಲನ ಸಲಹೆಯಂತೆ ಅವಳು ಕೆಲಸಕ್ಕೆ ಪ್ರಯತ್ನಿಸತೊಡಗಿದಳು. ಆದರೆ ಸುಬ್ಬಯ್ಯನವರಿಗೆ ಇದು ಹಿಡಿಸಲಿಲ್ಲ. ಹೇಳಿಕೊಳ್ಳಲು ಒಂದು ಪದವಿ. ಸೌಂದರ್ಯ, ಮನೆಗೆಲಸ ಕಲಿತದ್ದು, ವಯಸ್ಸು ಇಪ್ಪತ್ತು ದಾಟಿರುವುದು ಅವಳ ಮದುವೆಗೆ ಸಕಾಲ ಎನಿಸಿತ್ತು. ಗಂಡ- ಹೆಂಡತಿ ಚರ್ಚಿಸಿದರು. ನಂದಿತಳ ಮನಸ್ಸು ಎತ್ತ ಕಡೆ ಇದೆಯೆಂದು ಅರಿತಿದ್ದೂ ಬೇರೆ ಕಡೆ ಪ್ರಯತ್ನಿಸುವುದೇ? ಎಂಬ ಇಬ್ಬಂದಿ. ಆದರೆ- ಈ ಸಂಬಂಧ ಫಲಿಸುವುದೇ?-ಯಾವ ಮುಖ ಹೊತ್ತು ತಂಗಿಯ ಮುಂದೆ ನಿಂತು ನನ್ನ ಮಗಳನ್ನು ನಿನ್ನ ಸೊಸೆ ಮಾಡಿಕೋ ಎಂದು ಬೇಡುವುದು? ಆಗ ಭಾವಮೈದುನ ಖಂಡಿತಾ ಹಂಗಿಸದೇ ಬಿಡನು-ಏನು ಮಾಡುವುದು?- ಎಂದು ಯೋಚಿಸಿ ಅವರು ಕೈ ಕೈ ಹಿಂಡಿಕೊಂಡರು.

ಹಳೆಯದನ್ನೇ ಸೋಸಿ, ಹಿಂಡಿ ತಂಗಿ ಹಟ ಹಿಡಿದು ಕೂತರೆ-ರಾಹುಲ್ ಕೂಡ ತಾಯಿಯ ಹಟಕ್ಕೇ ಮೆತ್ತಗಾದರೆ-ತಮ್ಮ ಮುಗ್ಧ ನಂದಿತಳ ಗತಿ?-

ಗಂಡ- ಹೆಂಡತಿ ವಿಗ್ರಹದಂತೆ ಜಡರಾಗಿ ಕುಳಿತರು. ಆದರೊಂದು ಮಿಣುಕು!

ರಾಹುಲ್ ನಂದಿತಾಳನ್ನು ಗಾಢವಾಗಿ ಪ್ರೀತಿಸುತ್ತಾನೆಂಬ ಅವ್ಯಕ್ತ ನಂಬಿಕೆ.

  ನಂದಿತಾ-ರಾಹುಲ್ ಅವರಿಬ್ಬರೇ ತಮ್ಮ ಭವಿಷ್ಯದ ನಿರ್ಧಾರವನ್ನು ಕೈಗೊಳ್ಳಲಿ ಎಂದು ಆಲೋಚಿಸಿ ಆ ದಂಪತಿಗಳು ಕೈ ಚೆಲ್ಲಿ ಕೂತರು.

ನಂದಿತಾ ಖಾಸಗಿ ಕಾಲೇಜೊಂದರಲ್ಲಿ ಅಧ್ಯಾಪಕಿಯಾಗಿ ಉದ್ಯೋಗಕ್ಕೆ ಸೇರಿದಳು. ರಾಹುಲ್ ಮತ್ತು ನಂದಿತಾರ ಸ್ನೇಹ ಭಂಗ ಬಾರದೆ ಅದೇ ರೀತಿ ಮುಂದುವರೆಯಿತು.

ರಾಹುಲ್ ಎರಡು, ಮೂರು ತಿಂಗಳಿಗೊಮ್ಮೆ ಊರಿಗೆ ಹೋಗಿ ತನ್ನ ತಂದೆ- ತಾಯಿಗಳನ್ನು ನೋಡಿಕೊಂಡು ಬರುತ್ತಿದ್ದ.

ಈ ಸಲ ಊರಿಗೆ  ಹೋದಾಗ ತನ್ನ ತಾಯಿ ತನ್ನ ಮದುವೆಯ ಬಗ್ಗೆ ಪ್ರಸ್ತಾಪಿಸಿ ಒತ್ತಾಯಿಸುತ್ತಿದ್ದಾರೆಂದು ನಂದಿತಳಿಗೆ ಹೇಳಿ ಅವಳ ಮುಖದ ಬದಲಾವಣೆಯನ್ನು ವೀಕ್ಷಿಸಿದ. ನಂದಿತಾ ಮೌನವಾಗಿದ್ದಳು. ಅವಳ ಮನಸ್ಸಿನಲ್ಲಿ ನಡೆಯುತ್ತಿರುಬಹುದಾದ ತುಮುಲ, ಬಯಕೆ-ಆತಂಕ-ಲಜ್ಜೆಗಳ ಕಲ್ಪನೆ ಮಾಡಿಕೊಂಡವನು ಅವಳಿಂದ ಪ್ರತಿಕ್ರಿಯೆ ಹೊರಡಿಸಲು ಪ್ರಯತ್ನಿಸಿದ. ನಂದಿತಾ ಏನೂ ಹೇಳದೆ ವಿಷಯಾಂತರಿಸಿದಳು. ಅದೇ ಅವನಿಗೆ ಉತ್ತರವಾಯಿತು ರಾಹುಲ ಉಬ್ಬಿಹೋದ.

ಉಲ್ಲಾಸದಿಂದ ಬೀಗದ ಕೈ ಸರಪಳಿಯನ್ನು ಬೆರಳಿನ ಸುತ್ತ ತಿರುಗಿಸುತ್ತ ಬೈಕ್ ಸ್ಟಾರ್ಟ್ ಮಾಡಿದ.

ಒಂದು ಬೆಳಿಗ್ಗೆ- ಅವನ ತಂದೆ-ತಾಯಿಗಳು ಊರಿನಿಂದ ಬಂದಿಳಿದರು. ಅವರ ಆಗಮನ ರಾಹುಲನಿಗೆ ಅನಿರೀಕ್ಷಿತವೇನಲ್ಲ. ಅವರು ಅಲ್ಲಿಗೆ ಬರುವ ಕಾರಣವನ್ನು ವಾರದ ಹಿಂದೆಯೇ ಕಾಗದ ಬರೆದು ತಿಳಿಸಿದ್ದರು.

ಇದೇ ಊರಿನಲ್ಲಿದ್ದ ಪ್ರಸಿದ್ಧ ಲಾಯರೊಬ್ಬರ ಪುತ್ರಿಯನ್ನು ರಾಹುಲನಿಗೆ ತೋರಿಸಲು ಏರ್ಪಾಡು ಮಾಡಿದ್ದರು. ಅವನ ತಂದೆ-ತಾಯಿ ಹುಡುಗಿಯನ್ನು ನೋಡಿ ಒಪ್ಪಿಯಾಗಿತ್ತು. ನೋಡಲು ರೂಪಸಿ-ಪದವೀಧರೆ ಮೇಲಾಗಿ ಶ್ರೀಮಂತ ಲಾಯರ್ ಅವರ ಏಕಮಾತ್ರ ಪುತ್ರಿ. ರಾಹುಲ್ ಹೆಣ್ಣು ನೋಡುವ ಶಾಸ್ತ್ರವನ್ನು ಮಾಡುವುದೊಂದೇ ಬಾಕಿ ಇತ್ತು.

ಅಂತೂ ಅವನ ತಂದೆ- ತಾಯಿಗಳ ಪ್ಲಾನಿನಂತೆಯೇ ಎಲ್ಲವೂ ಚಾಚೂತಪ್ಪದೆ ನಡೆದಿತ್ತು. ನಂದಿತಳ ಅಣ್ಣ ಪ್ರಕಾಶ್, ರಾಹುಲನ ಅಕ್ಕನನ್ನು ನಂಬಿಸಿ ನಡು ನೀರಿನಲ್ಲಿ ಕೈ ಬಿಟ್ಟಂತೆ, ಅವನ ತಂಗಿಗೂ ನೋವಿನ ಸನ್ನಿವೇಶವನ್ನು ತಂದಿಟ್ಟು  ನೋವು – ನಿರಾಸೆ ಉಂಟು ಮಾಡಬೇಕೆಂಬುದೇ ರಾಹುಲ್ ಹಾಗೂ ಅವನ ಹೆತ್ತವರ ಯೋಜನೆಯಾಗಿತ್ತು. ಅದೊಂದು ಮರೆಯದ ಗಾಯ ರಾಹುಲನ ಮನೆಯವರಿಗೆ, ಪ್ರಕಾಶ ಬೇರೆ ಮದುವೆಯಾದನಂತರ ರಾಧ ಕಣ್ಣೀರಿನಲ್ಲಿ ಕೈ ತೊಳೆದಿದ್ದೆಷ್ಟು? ಕೊರಗಿದ್ದೆಷ್ಟು? ತನಗೆ ಮದುವೆಯೇ ಬೇಡ ಎಂದು ಹಟ ಹಿಡಿದಳಲ್ಲ. ಅವಳಿಗೆ  ನೂರು ಪರಿಯಲ್ಲಿ ಸಮಾಧಾನ ಹೇಳಿ ಅವಳನ್ನು  ಮದುವೆಗೆ ಒಪ್ಪಿಸುವಷ್ಟರಲ್ಲಿ ರಾಹುಲನ ತಂದೆ-ತಾಯಿಗಳ ಹೈರಾಣರಾಗಿ ಹೋಗಿದ್ದರು. 

ಅವರಿಗಾದ ಅಪಾರ ನೋವು-ನಿರಾಶೆಗಳು  ಸೇಡಿನ  ರೂಪದಲ್ಲಿ ಭುಗಿಲೆದ್ದಿದ್ದವು. ಏನಾದರಾಗಲಿ ಪ್ರಕಾಶನ ಮನೆಯವರಿಗೂ ಇದೇ ರೀತಿ ಬುದ್ಧಿ ಕಲಿಸಬೇಕೆಂಬ ಹಟÀ-ಪ್ರತೀಕಾರ ಮನೋಭಾವ ತಲೆ ಎತ್ತಿತ್ತು. ತೀರ್ಮಾನ ಗಟ್ಟಿಯಾಯಿತು.

ರಾಹುಲನಿಗೂ ಅದೇ ಊರಿನಲ್ಲಿ ಕೆಲಸವಾಗಿತ್ತು. ತಮ್ಮ ಪ್ರತೀಕಾರಕ್ಕೆ ಇದೇ ಸಕಾಲ-ಸುಸಂದರ್ಭ ಎನಿಸಿದಾಗ, ರಾಹುಲನೂ ಅವರ ಒಳಸಂಚಿಗೆ ಶಾಮೀಲಾಗಿದ.್ದ ಮೊದಲು ಪ್ರಕಾಶನ ತಂಗಿ ನಂದಿತಳನ್ನು ಆಕರ್ಷಿಸಿ ಪ್ರೀತಿಸಿದಂತೆ ಮಾಡಿ ನಂಬಿಕೆ ಹುಟ್ಟಿಸುವುದು. ಅವಳು “ನೀನೇ ಪ್ರಾಣ ರಾಹುಲ್” ಎಂದು ತನ್ನಲ್ಲಿ ತಾದಾತ್ಮ್ಯ ಭಾವ ಪಡೆಯುವ  ಭಾವುಕಘಟ್ಟದಲ್ಲಿ, ಅವಳ ಬಿಸಿಪ್ರೇಮಕ್ಕೆ ತಣ್ಣೀರು ಸುರಿದು, ಹಿಂದಿನ ಇಂಥದ್ದೇ ಒಂದು  ಪ್ರಕರಣವನ್ನು ನೆನಪಿಸಿ-ಚುಚ್ಚಿ ಹಂಗಿಸಬೇಕು- ಅದರಿಂದ ಅವಳ ಹೃದಯ ಭಗ್ನಗೊಳ್ಳಬೇಕು ಇತ್ಯಾದಿ  ಏನೇನೋ ಯೋಜನೆಗಳನ್ನು ನೇಯ್ದುಕೊಂಡು ರಾಹುಲ್ ಅವಳ ಹೃದಯವನ್ನು ಬಿರುಕಿಸಲು ಸನ್ನದ್ಧನಾಗುತ್ತಿದ್ದ.

ಬಹಳ ದಿನಗಳಿಂದ ರಾಹುಲನ ತಂದೆ ತಾಯಿಗಳು ಎದುರು ನೋಡುತ್ತಿದ್ದ ದಿನ ಬಂದಿತ್ತು. ರಾಹುಲ್ ಇಂದಿನ ಮುಹೂರ್ತವನ್ನು ಆರಿಸಿದ್ದ, “ಸಂಜೆ ಕಾಲೇಜಿನ ಹತ್ರ ಸಿಕ್ತೀನಿ ಎಂದಿದ್ದಾಳೆ ನಂದಿತಾ, ಹೋಗ್ಬರ್ತೀನಿ”-ಎನ್ನುತ್ತಾ ರಾಹುಲ್ ಬೈಕ್‍ಹತ್ತಿದ. ಅವನನ್ನು ಬೀಳ್ಕೊಡಲು ಬಾಗಿಲಲ್ಲಿ ನಿಂತಿದ್ದ ಅವನ ತಾಯಿಯ ಮೊಗದಲ್ಲಿ ಒಂದು ಬಗೆಯ ಕ್ರೂರತೃಪ್ತಿ ತಾಂಡವವಾಡುತ್ತಿತ್ತು. ನಿನ್ನ ಕೆಲಸ ಯಶಸ್ವಿಯಾಗಲಿ ಎಂದು ಮನದಲ್ಲೇ ಹಾರೈಸಿದ ಅವನ ತಂದೆಯ ಮುಖದಲ್ಲಿ ಠೇಂಕಾರ ನೆಲೆಸಿತ್ತು.

ರಾಹುಲ್ ಎಂದಿಗಿಂತ ಕೊಂಚ ತಡವಾಗಿ ಮನೆಗೆ ಬಂದ. ಅವನ ಬೈಕಿನ ಸದ್ದು ಕೇಳುತ್ತಲೇ ಅವನ ತಾಯಿ ಧಾವಿಸಿ ಬಂದು ಬಾಗಿಲು ತೆರೆದವರು ಒಂದು ಕ್ಷಣ ಅವಕ್ಕಾಗಿ ನಿಂತರು! ಎದುರಿಗೆ ರಾಹುಲ್ ಬಸವಳಿದು ನಿಂತಿದ್ದ. ಮನೆ ಬಿಡುವಾಗ ಅವನ ಮುಖದಲ್ಲಿ ಮೆರೆಯುತ್ತಿದ್ದ ಹುರುಪು, ಠೀವಿ-ನಗು ಎಲ್ಲ ಮಾಯವಾಗಿತ್ತು. ಅವನ ಹಣೆಯ ತುಂಬ ಬೆವರತುಂತುರು. ಕೂದಲು ಚೆಲ್ಲಾಪಿಲ್ಲಿ, ಕಣ್ಣುಗಳು ಕೆಂಪಗೆ ಬಾತುಕೊಂಡಿದ್ದವು.

“ಏನಾಯ್ತೋ ರಾಹುಲ್”- ಎಂದು ಕಂಗಾಲಾದರು ಆಕೆ. ರಾಹುಲ್ ಕಷ್ಟಪಟ್ಟು ಎರಡು ಹೆಜ್ಜೆ ಮುಂದಿಟ್ಟು ಕುರ್ಚಿಯ ಮೇಲೆ ಧೊಪ್ಪನೆ ಕುಸಿದ. ವಿಜಯದ ನಗೆಯ ಮಗನನ್ನು ಎದುರು ನೋಡುತ್ತಿದ್ದ ಅವನ ತಂದೆಗೂ ಗಾಬರಿ!

ಒಂದು ಕ್ಷಣ ಏದುಸಿರು- ಗಾಬರಿ, ಆತಂಕ ಯಾರೂ ಮಾತಾಡಲಿಲ್ಲ. ಪ್ರಯಾಸದಿಂದ ಬಾಯ್ತೆರೆದವನು ರಾಹುಲನೇ. ಅವನ ಕಂಠ ಗದ್ಗದಿತವಾಗಿತ್ತು

   “ಅಮ್ಮಾ, ನಮ್ಮ ಕೆಟ್ಟ ಪ್ಲಾನು ತಿರುಗುಬಾಣವಾಗಿ ನಮ್ಮ ಕೊರಳನ್ನೇ ಕೊಯ್ದುಬಿಡ್ತಮ್ಮ….. ಹಾಳು ಸೇಡು… ನಿನ್ನ – ಅಪ್ಪನ ಮಾತು ಕಟ್ಕೊಂಡು ನಾನು ಹಾಳಾದೆ – ನನ್ನ ಜೀವನವೇ ಸರ್ವನಾಶವಾಯ್ತು… ಈಗ ಹೊಂಡಕ್ಕೆ ಬಿದ್ದೋನು ನಾನಮ್ಮ-ಅವಳಲ್ಲ”.

 ದಂಪತಿಗಳ ಹುಬ್ಬೇರಿತು!

“ನಂದಿತನ್ನ ಲವ್ ಮಾಡೋ ನಾಟಕ ಆಡಕ್ಕೆ ಹೋಗಿ ನಾನು ನಿಜವಾಗ್ಲೂ ಅವಳನ್ನು ಪ್ರೀತಿಸಿಬಿಟ್ಟೆ ಅಮ್ಮಾ’’-

“ಏನೋ!! ಏನೋ ನೀನು ಹೇಳ್ತಿರೋದು!?”

 “ಹೌದಪ್ಪ- ನಾನು ಸಂಜೆ ಮನೇ ಬಿಡೋವರ್ಗೂ ಅವಳನ್ನ- ಅವಳ ಮನೆಯವರನ್ನು ದ್ವೇಷಿಸ್ತೀನಿ, ಸೇಡು ತೀರಿಸ್ಕೋಬೇಕು ಅಂತಲೇ ಅವಳನ್ನು ನೋಡಕ್ಕೆ ಹೋದೆ, ನಿಮ್ಮ ಐಡಿಯದಂತೆಯೇ ಅವಳ ಹತ್ರ ಮಾತಾಡ್ತಾಮಾತಾಡ್ತಾ ಮಧ್ಯದಲ್ಲಿ ‘ನನಗೆ ಮದುವೆ ಗೊತ್ತುಮಾಡಿದ್ದಾರೆ ನಮ್ತಂದೆ-ತಾಯಿಗಳು- ಇದೇ ಊರಿನಲ್ಲಿ ಲಾಯರ್ – ಅವರ ಒಬ್ಬಳೇ ಮಗಳು’ ಎಂದು ಅರ್ಧಕ್ಕೆ ಮಾತು ನಿಲ್ಲಿಸಿ ಅವಳ ಮುಖ ನೋಡಿದೆ.

 ನಾನು ಊಹಿಸಿದ ಹಾಗೆ ಅವಳು  ಕುಸಿದು ಬೀಳಲಿಲ್ಲ. ತನ್ನ ಕಣ್ಣೀರಿನಿಂದ ನನ್ನ ಕಾಲ್ತೊಳೆದು ಗೋಳಾಡಲಿಲ್ಲ. ಬದಲಾಗಿ ನಗ್ತಾ ಅವಳು ‘ಕಂಗ್ರಾಟ್ಸ್’ ಅಂತ ನನ್ನ ಕೈ ಕುಲುಕಿಬಿಡೋದೇ! -ನಾನಲ್ಲೇ ಅರ್ಧ ಹೆಣವಾಗಿ ಹೋದೆ- ಅಷ್ಟೇ ಸಾಲದು ಅಂತ ಅವಳು ‘ರಾಹುಲ್ ನಿನಗೆ ಸರ್‍ಪ್ರೈಜ್ ಮಾಡೋಣಾಂತ ಒಂದು ವಿಚಾರ ಮುಚ್ಚಿಟ್ಟಿದ್ದೆ- ನನ್ನ ಕಲೀಗ್ ಸುಧೀರನ ಜೊತೆ ನನ್ನ ಮದುವೆ ಫಿಕ್ಸ್ ಮಾಡ್ಕೊಂಡಿದ್ದೀನಿ’ ಎಂದು ಅವಳು ಖುಷಿಯಿಂದ ಹೇಳಿದಾಗ ನಾನು ಪೂರ್ತಿ ಕುಸಿದುಹೋದೆ – ಈಗ ನಾನೇನು ಮಾಡಲಿ? -ಮೋಸ ಮಾಡಕ್ಕೆ ಹೋಗಿ ಮೋಸ ಹೋದೋನು ನಾನು, ಅವಳಲ್ಲಮ್ಮಾ…ನಾನು…ನಾನವಳನ್ನು ತುಂಬ ತುಂಬಾ- ಪ್ರೀತಿಸ್ತೀನಿ. ಅವಳಿಲ್ಲದೆ ನಾನು ಬದುಕಿರಲಾರೆ- ಅವಳನ್ನಲ್ಲದೆ ನಾನು ಈ ಜನ್ಮದಲ್ಲಿ ಬೇರ್ಯಾರನ್ನೂ ಮದುವೆಯಾಗಲು ಸಾಧ್ಯವೇ ಇಲ್ಲಾಮ್ಮ- ನಾನವಳನ್ನು ತುಂಬ ತುಂಬಾ-’’

ರಾಹುಲ ತಾಯಿಯ ಮಡಿಲಲ್ಲಿ ಮುಖವಿರಿಸಿ ಜೋರಾಗಿ ಬಿಕ್ಕತೊಡಗಿದ.

                                          ********************

Related posts

ಚಿತ್ರವಿಲ್ಲದ ಚೌಕಟ್ಟು

YK Sandhya Sharma

ಹುಟ್ಟುಹಬ್ಬ

YK Sandhya Sharma

ಒಳ ಮುಖಗಳು

YK Sandhya Sharma

Leave a Comment

This site uses Akismet to reduce spam. Learn how your comment data is processed.