Image default
Dance Reviews

ಭರವಸೆ ಚೆಲ್ಲುವ ನೃತ್ಯ ಮಂದಾರ

ಈಚಿನ ದಿನಗಳಲ್ಲಿ ನೃತ್ಯ ಚಟುವಟಿಕೆಗಳೆಲ್ಲ ಆನ್ಲೈನ್ ಮಾಧ್ಯಮದಲ್ಲಿ ಪ್ರಸ್ತುತಿಗೊಳ್ಳುವುದು ಹೆಚ್ಚಾಗುತ್ತಿವೆ. ಜಗತ್ತನ್ನಾವರಿಸಿರುವ ಕರೋನಾ ಪಿಡುಗು ಕೆಲದಿನ ಹತಾಶರನ್ನಾಗಿ ಮಾಡಿದರೂ ಕೈಚೆಲ್ಲಿ ನಿಷ್ಕ್ರಿಯರಾಗಿ ಕುಳಿತುಕೊಳ್ಳುವ ಜಾಯಮಾನದವರಲ್ಲ ನಮ್ಮ ನೃತ್ಯ ಕಲಾವಿದರು. ಹೊರಗಿನ ವೇದಿಕೆಗಳ ಮೇಲೆ ನೃತ್ಯ ಪ್ರದರ್ಶನ ನೀಡುವುದು ಸಾಧ್ಯವಾಗದಾದಾಗ ಪರ್ಯಾಯ ಮಾರ್ಗವೊಂದು ತಾನೇ ತಾನಾಗಿ ತೆರೆದುಕೊಂಡಿದ್ದು ಅವರಿಗೆ ಅದೊಂದು ವರದಾನವಾಗಿ ಪರಿಣಮಿಸಿದೆ.

ಇಂದು ಪ್ರತಿದಿನ ಅನೇಕ ನೃತ್ಯ ಕಾರ್ಯಕ್ರಮಗಳು, ರಂಗಪ್ರವೇಶಗಳು, ಸಂಗೀತ ಕಛೇರಿಗಳು, ಉಪನ್ಯಾಸ ಮತ್ತು ಚರ್ಚಾ ಕಾರ್ಯಕ್ರಮಗಳು ಅಂತರ್ಜಾಲ ಮಾಧ್ಯಮದಲ್ಲಿ ನಡೆಯುತ್ತಲೇ ಬಂದಿರುವುದು ಸ್ವಾಗತಾರ್ಹ.  

ಈ ದಿಸೆಯಲ್ಲಿ ಪ್ರಖ್ಯಾತ ‘ನೃತ್ಯ ಸಂಜೀವಿನಿ ಅಕಾಡೆಮಿ’ಯ ನಾಟ್ಯಗುರು ವಿದುಷಿ ಫಣಿಮಾಲಾ ಚಂದ್ರಶೇಖರ್, ತಮ್ಮ ನೃತ್ಯ ಅಕಾಡೆಮಿಯ ವೇದಿಕೆಯಡಿ ಅನೇಕ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶಗಳನ್ನು ಕೊಡ ಮಾಡುತ್ತಾ ಬಂದಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ‘ನಾಟ್ಯಾಂಜಲಿ’ ಉತ್ಸವವನ್ನು ಪ್ರತಿ ಭಾನುವಾರ ಆನ್ಲೈನ್ ನಲ್ಲಿ ಏರ್ಪಡಿಸುತ್ತ ಬಂದಿದ್ದು ಅದಕ್ಕೆ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ. ಈ ಬಾರಿ ಅವರ ಶಿಷ್ಯರ ತಂಡ ತಮ್ಮ ಅತ್ಯಂತ ಹುರುಪಿನ ನರ್ತನ ಲಾಸ್ಯದಿಂದ ಮೆಚ್ಚುಗೆಯನ್ನು ಪಡೆದಿದೆ.

ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯ ವಿದ್ಯಾರ್ಥಿನಿಯರವರೆಗೂ ಭಾಗವಹಿಸಿದ್ದು ವಿಶೇಷ. ಅಂದು ದಸರಾ ಮಹೋತ್ಸವದ ‘ಆಯುಧ ಪೂಜೆ’ಯ ಮಹತ್ವದ ದಿನ. ಇವರೆಲ್ಲರ  ನೃತ್ಯ ಸಂಭ್ರಮಕ್ಕೆ ಗುರು ಮತ್ತು ಭರತನಾಟ್ಯ ಕಲಾವಿದೆ ಫಣಿಮಾಲಾ ಅವರ ಉತ್ತಮ ತರಬೇತಿ, ಕಾಳಜಿ-ಪ್ರೋತ್ಸಾಹ ಎದ್ದು ಕಾಣುತ್ತಿತ್ತು.

ಶುಭಾರಂಭದಲ್ಲಿ ಪುಟಾಣಿ ಕಲಾವಿದರಾದ ಅದಿತಿ ಮತ್ತು ಸನ್ನಿಧಿ ವಿಘ್ನ ನಿವಾರಕ ಶ್ರೀ ಗಣೇಶನಿಗೆ ಮೊದಲ ವಂದನೆ ಸಲ್ಲಿಸಿದರು. ವಿನಾಯಕನ ವಿವಿಧ ರೂಪಗಳ ವರ್ಣನೆಗೈದು, ವಿದ್ಯಾ ಕೃಪೆಗಾಗಿ ಸರಸ್ವತಿದೇವಿಯನ್ನು  ಸ್ತುತಿಯನ್ನು ಆತ್ಮವಿಶ್ವಾಸದಿಂದ ನೃತ್ಯ ನೈವೇದ್ಯ ನೆರವೇರಿಸಿದರು. ಅನಂತರ- ಕಲಾವಿದೆ ಸ್ಪಂದನಾ ‘ನಟೇಶ ಕೌತ್ವಂ’ ಅನ್ನು ಸುಂದರವಾಗಿ  ಸಾಕಾರಗೊಳಿಸಿದಳು. ಸರಳ ಜತಿಗಳ ನಿರೂಪಣೆಯ  ಜೊತೆಗೆ ತ್ರಿಶೂಲಧಾರಿ, ಢಮರುಗ ಹಸ್ತ, ನಂದಿವಾಹನ ಶಶಿಭೂಷಣ ನಟರಾಜನ ವಿವಿಧ ಭಂಗಿಗಳನ್ನು ಸೂಕ್ತವಾಗಿ ತೋರಿದಳು.

ಅದಿತಿ- ಮುದ್ದಾಗಿ ಅಭಿನಯಿಸಿದ ‘ವೆಂಕಟರಮಣನೆ ಬಾರೋ’ -ಪುರಂದರದಾಸರ ಕೃತಿ  ಚೊಕ್ಕವಾಗಿ ಮೂಡಿಬಂತು. ಪುಟಾಣಿಯ ಪುಟ್ಟಹೆಜ್ಜೆಗಳಲ್ಲಿ ಅಂದ ತುಂಬಿಕೊಡಿದ್ದು ಶ್ರದ್ಧೆಯನ್ನು ಬಿಂಬಿಸಿತು. ‘ಅಳಗಿರಿ ನಂದಿನಿ’ಯ ದೈವೀಕರೂಪವನ್ನು ತನ್ನ ಲವಲವಿಕೆಯ ಆಂಗಿಕಾಭಿನಯದಿಂದ ಸಾಕ್ಷಾತ್ಕರಿಸಿದ ನರ್ತಕಿ ಪನ್ನಗ- ರಣಾವೇಶದಿಂದ ನರ್ತಿಸಿದಳು. ಕ್ಷಿಪ್ರಗತಿಯ ಜತಿಗಳು, ವೇಗದ ಚಲನೆ, ಆಂಗಿಕಾಭಿನಯ ಸಮರ್ಥವಾಗಿ ಪ್ರದರ್ಶಿತವಾಯಿತು.

          ಪುಟಾಣಿ ಕಲಾವಿದರ ಸುಂದರ ನೃತ್ಯಗಳು ಮೊದಲ ಹಂತದಲ್ಲಿ ಅರ್ಪಣೆಯಾದರೆ, ಮುಂದೆ ಹಿರಿಯ ವಿದ್ಯಾರ್ಥಿಗಳ ಸ್ತುತ್ಯಾರ್ಹ ಪ್ರಯತ್ನಗಳು ಮನರಂಜಿಸಿದವು.

ಆತ್ಮವಿಶ್ವಾಸದಿಂದ ರಂಗಪ್ರವೇಶಿಸಿದ ಸಹನಾ, ‘ ಚಂದ್ರಚೂಡ ಶಿವಶಂಕರ’ ನಿಗೆ ತನ್ನ ನುರಿತ ಹೆಜ್ಜೆಗಳ ಚಲನೆಗಳಿಂದ, ನಗುಮೊಗದಿಂದ ಮುಖದಲ್ಲಿ ಪ್ರಪ್ಹುಲ್ಲತೆ ಬೀರುತ್ತ, ನಟರಾಜನಿಗೆ ಭಕ್ತಿಯಿಂದ ನಮನಗಳನ್ನು ಸಲ್ಲಿಸಿದಳು. ದೇವನಿಗೆ ತನ್ನ ಭಕ್ತಿ ನಿವೇದನೆಯ ಹಂತದಲ್ಲಿ ಸಮುದ್ರ ಮಂಥನ , ನೀಲಕಂಠನಾದ ಸಂದರ್ಭಗಳ ಸಂಚಾರಿಯ ಕಥನಗಳಲ್ಲಿ ಶಿವನ ಮಹತ್ವ-ಮಹಿಮೆಗಳನ್ನು ಸೂಚ್ಯವಾಗಿ ಅಷ್ಟೇ ಸುಂದರವಾಗಿ ನಿರೂಪಿಸಿದಳು. ತಾಳ-ಲಯಜ್ಞಾನವುಳ್ಳ ಕಲಾವಿದೆಯ ನೃತ್ತಗಳ ಲಾಸ್ಯ ಅಲ್ಲಲ್ಲಿ ಮಿನುಗಿತು.   

          ದಾಸಶ್ರೇಷ್ಠ ಶ್ರೀ ಪುರಂದರದಾಸರ ರಚಿಸಿದ -‘ಬಂದನೇನೆ ರಂಗ ಬಂದನೇನೆ ‘-ಕೃತಿಯ ಬಾಲನಾಯಕ ಬಾಲಕೃಷ್ಣನನ್ನು ತನ್ನ ಭಾವಾಭಿವ್ಯಕ್ತಿಯಿಂದ ಅನುನಯದಿಂದ ಕರೆದವಳು ಅವನ ಒಲವಿನ ಸಖಿ ‘ಸ್ನೇಹಾ’. ಬಾಲಕೃಷ್ಣನ ಲೀಲೆಗಳನ್ನು ರಮ್ಯವಾಗಿ ಕಟ್ಟಿಕೊಡುವ ನರ್ತಕಿ, ಅವನಿಗಾಗಿ ಕಾತುರ-ಹಂಬಲಗಳಿಂದ ನಿರೀಕ್ಷಿಸುತ್ತಾಳೆ. ಸುಂದರ ಹಾವಭಾವಗಳಿಂದ ನರ್ತಿಸಿದ ಸ್ನೇಹಾ, ಅಂತ್ಯದಲ್ಲಿ ಭಕ್ತಿಭಾವವನ್ನೂ ಅಷ್ಟೇ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುತ್ತಾಳೆ.

          ಶಿವಾರಾಧನೆಯನ್ನು ಬಹು ಶ್ರದ್ಧೆಯಿಂದ ಮಾಡುತ್ತಾ  ನರ್ತಿಸಲಾರಂಭಿಸಿದ ಹೇಮಾವತಿ, ತನ್ನ ಆರಾಧ್ಯದೈವ ‘ಶಿವ ಶಿವ ಹರ ಹರ..ಗಂಗಾಧರ..ಚಂದ್ರಚೂಡ’ನನ್ನು ಭಕ್ತಿತಾದಾತ್ಮ್ಯದಿಂದ ಪ್ರಾರ್ಥಿಸುತ್ತಾಳೆ. ಶಿವನ ನಾನಾ ಭಂಗಿಗಳನ್ನು ತನ್ನ ಸುಂದರ ಅರೆಮಂಡಿ, ಆಕಾಶಚಾರಿಗಳ ಆಂಗಿಕಗಳಿಂದ ಪ್ರದರ್ಶಿಸುತ್ತ ಮನಸಾರೆ ತನ್ನ ದೈವವನ್ನು ಭಜಿಸುತ್ತಾಳೆ.

‘ಶ್ರೀ ವಿಘ್ನರಾಜಂ ಭಜೆ ‘ ಎಂದು ಸಕಲ ವಿಘ್ನ ನಿವಾರಕ ಮೊದಲ ವಂದಿತ ಶಕ್ತಿಶಾಲಿ ಮಹಾಮಹಿಮ ಗಣೇಶನಿಗೆ ತನ್ನ ಕಲಾನೈಪುಣ್ಯದ ನೃತ್ತಾರಾಧನೆಯಿಂದ ಅರ್ಚಿಸಿದವಳು ಕಲಾವಿದೆ ಮನಸ್ವಿನಿ.  ಆತನ ವಿವಿಧ ರೂಪಗಳ ಪ್ರದರ್ಶನ ಮತ್ತು ಮಹಿಮಾನ್ವಿತನ ನಾನಾ ಹೆಸರುಗಳ ಸ್ತುತಿಯಿಂದ ಆತನ ಕೃಪೆ ಬೇಡುವ ಅಭಿವ್ಯಕ್ತಿ ಮನಮುಟ್ಟಿತು. ಕಡೆಯಲ್ಲಿ ಅಭಿವ್ಯಕ್ತವಾದ ಭಂಗಿ ಗಮನ ಸೆಳೆಯಿತು.

ಅಂತ್ಯದಲ್ಲಿ ಮೂಡಿಬಂದ ‘ಅಖಿಲಾಂಡೇಶ್ವರಿ ಚಾಮುಂಡೇಶ್ವರಿ’ -ದೇವಿಯನ್ನು ಕುರಿತ ರಮ್ಯವಾದ ಅಷ್ಟೇ ಪರಿಣಾಮಕಾರಿಯಾದ ಕೃತಿ ಮೂರುಜನ ನುರಿತ ಕಲಾವಿದೆಯರಾದ ಸ್ನೇಹಾ, ಸಹನಾ ಮತ್ತು ಹೇಮಾವತಿಯವರಿಂದ ಮನಮೋಹಕವಾಗಿ ಸಾಕಾರಗೊಂಡು ಕಣ್ತುಂಬಿತು. ಗಿರಿರಾಜ ಪುತ್ರಿ, ಜಗದೀಶ್ವರಿಯನ್ನು ನಾನಾ ಬಗೆಯ ಆಂಗಿಕಾರ್ಚನೆಗಳಿಂದ ಮನದುಂಬಿ ಸ್ತುತಿಸುತ್ತಾರೆ. ಅಷ್ಟಲಕ್ಷ್ಮಿಯರ ವೈಭವವನ್ನು ಬಣ್ಣಿಸುತ್ತಾರೆ. ರಮಣೀಯ  ನೃತ್ತವಲ್ಲರಿಗಳಿಂದ ಆವರಿಸಿದ ನರ್ತನ ಮತ್ತು  ಸುಂದರಾಭಿನಯದಲ್ಲಿ ಮೋಹಕತೆ ಮೇಳೈವಿಸಿತ್ತು. ಶಿಷ್ಟ ರಕ್ಷಣೆ-ದುಷ್ಟ ಸಂಹಾರಿಯ ಉಗ್ರರೂಪಗಳನ್ನು ಈ ಸುಂದರ ದಸರಾ ‘ನೃತ್ಯ ಸಂಜೆ’ಯಲ್ಲಿ ರಮ್ಯವಾಗಿ ಬಿಂಬಿಸಿದ್ದು ಅತ್ಯಂತ ಸಮರ್ಪಕವಾಗಿತ್ತು.ನರ್ತಕಿಯರ ನಡುವಣ ಸಮರಸತೆ ಚೆನ್ನಿತ್ತು. ಇಂಥ ಉತ್ತಮ ಭರವಸೆಯ ಕಲಾವಿದರನ್ನು ರೂಪಿಸುತ್ತಿರುವ ಗುರು ಫಣಿಮಾಲ ಅವರ ಬದ್ಧತೆಯ ಶಿಕ್ಷಣ ಸ್ತುತ್ಯಾರ್ಹ.  

                                    *****************

Related posts

Ramya Sabhapathi Rangapravesha Review article

YK Sandhya Sharma

ಮೀನಳ ಭಾವಪೂರ್ಣ ಅಭಿನಯದ ವರ್ಚಸ್ವೀ ನೃತ್ಯ

YK Sandhya Sharma

ಉದಯೋನ್ಮುಖ ಕಲಾವಿದೆಯರ ಭರವಸೆಯ ನೃತ್ಯ ಪ್ರದರ್ಶನ

YK Sandhya Sharma

Leave a Comment

This site uses Akismet to reduce spam. Learn how your comment data is processed.