ಎದ್ದಾಗ ಲಟಲಟ ಎಂದು ನಟಿಕೆ ಮುರಿಯುತ್ತದೆ. ಕೋಲೂರಿಕೊಂಡು ಮೆಲ್ಲನೆ ಬಾಗಿಲ ಬಳಿಹೋದೆ. ನನ್ನ ರಾಜ್ಯದ ಗಡಿ ಈ ಕೋಣೆಯ ಹೊಸ್ತಿಲು. ಬಾಗಿಲಿನ ಚೌಕಟ್ಟಿಗೆ ಕೈ ಅದುಮಿ ಹಿಡಿದು ಅಲ್ಲಿಂದಲೇ ಬಗ್ಗಿ ಹೊರಗೆ ನೋಡಿದೆ. ಎಂದಿನ ನೀರವ. ಬಹುಶಃ ಅವನು ಎಲ್ಲೋ ಹೊರಗೆ ಹೋಗಿರಬೆಕು. ಗಂಟೆ ಎಂಟಕ್ಕೆ ಕಡಿಮೆ ಇರಲಿಕ್ಕಿಲ್ಲ ಎಂದುಕೊಂಡು ಹಿಂದೆ ತಿರುಗಿದಾಗ ಬುಗುರಿಯಂತೆ ಸುತ್ತಿಕೊಂಡಿದ್ದ ಈ ಇವಳು ನನ್ನಾಕೆ ಕಣ್ಣಿಗೆ ಬೀಳುತ್ತಾಳೆ. ಕಸಿವಿಸಿಯಾಗುತ್ತದೆ. ನಿಧಾನವಾಗಿ ಇವಳ ಹತ್ತಿರಕ್ಕೆ ನಡೆದೆ. ಪಕ್ಕ ಕುಳಿತುಕೊಂಡು ಮೈ ಹಿಡಿದು ಅಲ್ಲಾಡಿಸುತ್ತೇನೆ. ಮಿಸುಕಾಡುವುದಿಲ್ಲ. ಇವಳು ಏಳುವವರೆಗೂ ನನಗೂ ಕಾಫಿ ಇಲ್ಲ ಅನ್ನೋದು ಖಾತ್ರಿ… ಒಬ್ಬೊಬ್ಬರಿಗೇ ಕಾಫಿ ಕಾಯಿಸಿ ಹಾಕಲು ಅವನ ಹೆಂಡತಿಗೆ ಬೇಸರ.
“ಇವಕ್ಕೋಸ್ಕರ ನಾನು ಹಗಲೂ ರಾತ್ರಿ ಒಲೆ ಮುಂದೇನೇ ಸಾಯಕ್ಕಾಗತ್ಯೇ ಹೇಳಿ. ನನಗೇನು ಬೇರೆ ಕೆಲಸವೇ ಇರಲ್ವೇ? ಯಾವ ಕಾಲಕ್ಕೆ ನಾನು ನಿಮಗೆ ಅಡುಗೆ ಬೇಯ್ಸಿಹಾಕೋದು”-ಎಂದು ದನಿಯೇರಿಸಿ, ವರಾಂಡದಲ್ಲಿ ಪೇಪರೋದುತ್ತ ಕುಳಿತವನ ಕಿವಿ ಕಚ್ಚುವಂತೆ ಆರ್ಭಟ ಮಾಡುತ್ತಾಳೆ ಅವನ ಹೆಂಡತಿ.
ತಪ್ಪಿತಸ್ಥನಂತೆ ನಾನು ಇವಳನ್ನು ಎಬ್ಬಿಸುವ ಪ್ರಯತ್ನಕ್ಕೆ ತೊಡುಗುತ್ತೇನೆ. ಅಷ್ಟರಲ್ಲಿ ಅವನು ಬಾಗಿಲ ಬಳಿ ಬಂದು ನಿಂತಿರುತ್ತಾನೆ. ಮುಖ ಕೆಂಪಾಗಿರುತ್ತದೆ. ಗುಡುಗುತ್ತಾನೆ:
“ಎಷ್ಟು ಸಲಾಪ್ಪ, ನಿನಗೆ ಹೇಳೋದು! ಅವಳು ಒಬ್ಬೊಬ್ಬರಿಗೇ ಕಾಫಿ ಕೊಡಕ್ಕಾಗಲ್ಲ. ಅವಳ್ನೇನು ನಿಮ್ಮ ಚಾಕರಿಗೋಸ್ಕರ ಕರ್ಕೊಂಡು ಬಂದಿಲ್ಲ…ನನ್ನದು, ನಿಮ್ಮದೂ, ಮಕ್ಕಳದೂ ಎಲ್ಲರ ಕೆಲಸವೂ ಅವಳೊಬ್ಳೇ ನೋಡ್ಕೊಳ್ಳಕ್ಕಾಗುತ್ತಾ…? ಅವಳೇನು ಮನುಷ್ಯಳೋ ರಾಕ್ಷಸಿಯೋ? ಇಬ್ಬರೂ ಒಟ್ಟಿಗೆ ಬಂದ್ರೆ ಹೇಗೋ ಕೊಡಬಹುದು, ಒಟ್ಟಿಗೆ ಒಂದು ಕೆಲಸಾನೂ ಮುಗಿದ್ಹಾಗೆ ಆಗುತ್ತೆ. ಅದು ಬಿಟ್ಟು ಒಬ್ಬೊಬ್ಬರೂ ಒಂದೊಂದು ಹೊತ್ತಿಗೆ ಬಂದು ನಿಂತುಕೊಂಡ್ರೆ, ಅವಳ ಗತಿ ಏನು?… ಇವತ್ತು ನಿಮಗೆ ಮಾಡಿ, ನಾಳೆ, ಅವಳು ಮಲಗಿದರೆ ಮನೇಲಿ ಅನ್ನ ಕಾಣಿಸೋರು ಯಾರು? ಇವತ್ತೇ ಕಡೆ ಹೇಳಿಬಿಟ್ಟಿದ್ದೀನಿ. ಇನ್ನೊಂದು ಸಲ ಹೇಳಿಸಿಕೊಳ್ಳಬೇಡಿ. ಚೆನ್ನಾಗಿರಲ್ಲ. ಕಾಫಿ ಬೇಕಾದ್ರೆ ಇಬ್ರೂ ಒಟ್ಟಿಗೆ ಬರಬೇಕು. ಇಲ್ಲದಿದ್ದರೆ ಸೊನ್ನೆ. ಮುದುಕರಾದರೂ ನಾಲಗೆ ಚಪಲ ಇನ್ನೂ ಬಿಟ್ಟಿಲ್ಲ” ಎಂದು ಅವನು ಗೊಣಗಿಕೊಂಡು ಹೊರಟುಹೋದ. ಅವಳ ಬಾಯಾಗಿ ಈ ಮಾತುಗಳನ್ನು ಹೇಳಿದ ಅನಿಸಿತು. ಅವತ್ತೆಲ್ಲ ಕಾಫಿ ಇರಲಿ, ಊಟವೂ ಗಂಟಲಲ್ಲಿಳಿಯಲಿಲ್ಲ.
ಮಾರನೆಯ ದಿನ ಬೆಳಗ್ಗೆ ಆಗುತ್ತಿದ್ದ ಹಾಗೆ ನಾಚಿಕೆಗೆಟ್ಟ ನಾಲಗೆ ಮತ್ತೆ ಕಾಫಿ ರುಚಿಯನ್ನು ಬಯಸಿತು, ಗುಟುಕರಿಸಿತು.
ಬಲವಂತ ಮಾಡಿ ಇವಳನ್ನು ಎಬ್ಬಿಸಿದೆ.-
“ಏಳೇ, ಬೆಳಕು ಹರಿದು ಎಷ್ಟೊತ್ತಾಯಿತು”. ಎದ್ದಳು. ಹಿತ್ತಲಿಗೆ ಕರೆದುಕೊಂಡು ಹೋಗಿ ಮುಖ ತೊಳೆಯಲು ತಣ್ಣೀರಿನ ತಂಬಿಗೆಯನು ಅವಳ ಬದಿಗಿಟ್ಟೆ. ನಾನೂ ಮುಖವನ್ನು ನೀರಿನಲ್ಲಿ ಅದ್ದಿ ಹಿಂದಿನ ಅಂಗಳದಲ್ಲೇ ಕೂತೆ. ಅವಳೂ ಬಂದು ಪಕ್ಕ ಕುಳಿತಳು. ತುಂಬ ಹೊತ್ತೇ ಆಗಿರಬೇಕು. ಅವನ ಹೆಂಡತಿ ಮುಖ ಈಚೆ ಕಾಣಲಿಲ್ಲ. ಒಳಗೆ ಮಕ್ಕಳು ತಟ್ಟೆ ಎಳೆದಾಡುತ್ತಾ ಮಾತನಾಡುತ್ತಿದ್ದ ಸದ್ದು.
“ಓ… ಊಟದ ಸಮಯ ಆಗಲೇ!” ಎಂದುಕೊಂಡೆ. ಅವನು ಕೈ ತೊಳೆಯಲು ಬಚ್ಚಲು ಮನೆಗೆ ಹೋದ. ನಮ್ಮನ್ನು ನೋಡಿ ‘ಕಾಫಿಕೊಡು’ ಎಂದು ತನ್ನ ಹೆಂಡತಿಗೆ ಹೇಳಬಹುದು ಎಂದು ಕಾದೆ. ಉಹೂಂ…ಹಾಗೇ ಸ್ವಲ್ಪ ಹೊತ್ತು ಸರಿಯಿತು.
ನಡುಮನೆಯಲ್ಲಿ ಅವನ ಹಿಂದೆ ಅವನ ಹೆಂಡತಿ ಎರಡು-ಮೂರು ಸಲ ಸುಳಿದಾಡಿದಳು. ಅವಳ ಬೆನ್ನು ಅಡುಗೆಮನೆಯತ್ತ ತಿರುಗಿದಾಗ ಇದುವರೆಗೆ ತೆಪ್ಪಗೆ ಬಿದ್ದುಕೊಂಡಿದ್ದ ನಾಲಗೆ ಹೆಡೆಯಾಡಿಸಿತು. ಅವಳು ಬರುವಷ್ಟರಲ್ಲೇ ಸಾಯುವ ಅವಸರ. ದೃಷ್ಟಿ ತೂರುವವರೆಗೂ ಕಣ್ಣನ್ನು ತೂರಿಸಿದೆ. ಕಾಫಿ ಬಂತು. ಕುಡಿದೂ ಆಯಿತು. ಚಳಿಯ ಮುಜುಗರಕ್ಕೆ ನಾವಿಬ್ಬರು ಬಿಸಿಲು ಕಾಯಿಸುತ್ತ ಕುಳಿತೆವು.
ಆಮೇಲೆ ಸ್ನಾನ, ಪೂಜೆ, ಊಟ. ಮಧ್ಯಾಹ್ನ ಮತ್ತೆ ಇವಳು ಬುಗುರಿಯಾದಳು. ನಾನು ಭಗವದ್ಗೀತೆ ಓದುತ್ತ ಕುಳಿತೆ. ಮೂರು ನಾಲ್ಕು ಆಧ್ಯಾಯ ಮುಗಿಸುವುದರಲ್ಲಿ ಹುಡುಗರೆಲ್ಲ ಸ್ಕೂಲಿನಿಂದ ಬಂದಿರಬೇಕು. ಗಲಾಟೆ, ಅವನೂ ಬಂದ. ಸ್ವಲ್ಪ ಹೊತ್ತಿನಲ್ಲೇ ಅವರೆಲ್ಲರೂ ರೆಡಿಯಾಗಿ ವರಾಂಡ ದಾಟಿದರು.
“ಬಾಗಿಲು ಹಾಕಿಕೊಳ್ಳಿ” ಎಂಬ ಆದೇಶ ಅವನಿಂದ….ಕುಟುಂಬ ಸಮೇತ ಹೊರ ಹೊರಟಿರಬೇಕು.
ಕತ್ತಲಾದರೂ ಯಾಕೋ ಮೇಲೆದ್ದು ದೀಪ ಹಚ್ಚುವ ಮನಸ್ಸಾಗಲಿಲ್ಲ. ಇವಳ ತಲೆಗೂದಲು ಆ ಕತ್ತಲಲ್ಲೂ ಬೆಳ್ಳಗೆ ಮಿಂಚುತ್ತಿದ್ದವು. ಕಣ್ಣುಗಳೆರಡು ಪಿಳಿಪಿಳಿ ನನ್ನತ್ತಲೇ ದೈನ್ಯವಾಗಿ ದಿಟ್ಟಿಸುತ್ತಿದ್ದವು. ನಾನೂ ಶೂನ್ಯವಾಗಿ ಅದರತ್ತಲೇ ನೋಟ ನೆಟ್ಟೆ.
ಐವತ್ತು ವರ್ಷಗಳ ಹಿಂದಿನ ಚೆಲುವೆಯನ್ನು ನೋಡುತ್ತ ಅದೆಷ್ಟೋ ಹೊತ್ತು ಹಾಗೇ ಕುಳಿತುಬಿಟ್ಟಿದ್ದೆ !!.. ಕಣ್ತುಂಬ ಕತ್ತಲು ಮೆತ್ತಿದಂತಾದಾಗ ಗೋಡೆಯ ಮೇಲೆ ಕೈ ಹರಿದಾಡಿಸಿದೆ. ಸ್ವಿಚ್ ಅದುಮಿತು. ಬೆಳಕು ಫಳಕ್ಕನೆ ನುಗ್ಗಿತು. ಕಣ್ಣರಳಿಸಿ ದೃಷ್ಟಿ ಅವಳತ್ತ ನುಗ್ಗಿಸಿದಾಗ ಸುಕ್ಕು ತುಂಬಿದ ಮುಖ ಕಂಡು ಪಿಚ್ಚೆನಿಸಿ ದೀಪ ಆರಿಸಿ ಅವಳ ಬಳಿ ಸರಿಯುತ್ತೇನೆ. ಅವಳ ಕೈ ತೆಗೆದುಕೊಂಡು ಮೆಲ್ಲನೆ ಸುಕ್ಕನ್ನು ಇಸ್ತ್ರೀ ಮಾಡತೊಡಗುತ್ತೇನೆ.
ಬಾಗಿಲ ಸಪ್ಪುಳವಾದಾಗಲೇ ಎಚ್ಚರ. ಮೆಲ್ಲನೆ ಎದ್ದು ಹೋಗಿ ಬಾಗಿಲು ತೆರೆಯುತ್ತೇನೆ. ಅವರೆಲ್ಲ ಬಂದಿರುತ್ತಾರೆ. ಯಾವುದೋ ಸಿನಿಮಾದ ಮಾತು ಆಡುತ್ತಿರುತ್ತಾರೆ. ಉಹುಂ..ನನಗರ್ಥವಾಗುವುದಿಲ್ಲ. ತೆಪ್ಪಗೆ ಕೋಣೆ ಸೇರುತ್ತೇನೆ.
“ಏನು, ಇಷ್ಟು ಹೊತ್ತಾದ್ರೂ ದೀಪ ಹಾಕಿಲ್ಲ” –ಎಂದು ಹಿಂದೆ ಬಂದ ಅವನು ಝಗ್ಗನೆ ದೀಪ ಬೆಳಗುತ್ತಾನೆ. ಸ್ವಲ್ಪ ಹೊತ್ತು ಮೌನ ಜೀಕುತ್ತದೆ. ಎಷ್ಟೋ ಹೊತ್ತಿನನಂತರ ಇವಳನ್ನು ಊಟಕ್ಕೆ ಕರೆಯುತ್ತಾನೆ.
“ಹಸಿವಿಲ್ಲ” ಎಂದು ಇವಳು ಕ್ಷೀಣವಾಗಿ ನುಡಿದಾಗ, ತನ್ನ ಕರ್ತವ್ಯ ಮುಗಿಯಿತು ಎಂಬಂತೆ ಅವನು ತನ್ನ ಮುಖದ ಗೆರೆಗಳನ್ನು ಕೊಂಚವೂ ಕೊಂಕಿಸದೆ, ಹೆಜ್ಜೆ ಎತ್ತುತ್ತಾನೆ.
ಹೀಗೆ ನಾನು, ಒಬ್ಬನೇ ಕುಳಿತು ಊಟವನ್ನು ಹೊಟ್ಟೆಗೆ ಸೇರಿಸುವಾಗಲೆಲ್ಲ ಏನೋ ಅವ್ಯಕ್ತ ಸಂಕಟ ಎದೆ ಸುಡುತ್ತದೆ, ಏಕಾಂಗಿತನ ಕಾಡುತ್ತದೆ.
ರಾತ್ರಿ ತಲೆ ನೆಲಕ್ಕೆ ಇಟ್ಟಾಗ ನೆನಪು ನಿಧಾನವಾಗಿ ಸುಲಿಯುತ್ತದೆ.
** ** **
ಸುಂದರಿ ಹೆಂಡತಿ, ಮುದ್ದಾದ ಮಗು. ಸ್ವರ್ಗಕ್ಕೆ ಎರಡೇ ಗೇಣು ಎಂಬಂಥ ರಸಭರಿತ ಜೀವನ. ದಂಪತಿಗಳ ಪ್ರೇಮವೆಲ್ಲವೂ ಅವನೊಬ್ಬನಿಗೇ ಸೂರೆ. ಸುಖವಾಗಿ ಬೆಳೆದ. ಆಸೆಪಟ್ಟಿದ್ದೆಲ್ಲ ವಶ. ವಿದ್ಯಾಭ್ಯಾಸ ಚೆನ್ನಾಗಿ ಮುಂದುವರಿಯುತ್ತಿತ್ತು. ಅಷ್ಟರಲ್ಲೇ ಅವನಿಗೆ ಪುಟ್ಟ ತಮ್ಮನ ಆಗಮನ, ತನ್ನ ಪ್ರೀತಿಯಲ್ಲಿ ಪಾಲುಗೊಳ್ಳಲು ಬಂದವನನ್ನು ಕಂಡು ಅವನ ಮನ ಮೊಗ್ಗಾಯಿತು. ಹಿಂದೆಯೇ ಮೂರು ಮಂದಿ ತಂಗಿಯರು….ಆದರೇನು, ಇವನಿಗೆ ಯಾವುದಕ್ಕೂ ಮುಕ್ಕಾಗಲಿಲ್ಲ. ಪದವಿ, ಕೆಲಸ, ಮದುವೆ-ಮಕ್ಕಳೂ ಎಲ್ಲವೂ. ತಂಗಿಯರಿಗೂ ಮದುವೆ ಆದವು. ಮೊದಲಿನಿಂದಲೂ ಮಹಾಜಾಣನಾಗಿದ್ದ ಇವನ ತಮ್ಮ ಎಂಜಿನಿಯರ್ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸ್ಕಾಲರ್ಷಿಪ್ ಪಡೆದು ವಿದೇಶಕ್ಕೆ ಹಾರಿದ.
ನಾಲ್ಕು ಜನ ಕರುಬುವಂತೆ ಬಾಳಿ ಬದುಕಿದವರು. ಚಕಮುಕಿಯಂತೆ ಮಾತಾನಾಡುತ್ತಿದ್ದ ನನ್ನವಳು ಈಗ ಬಾಯಿ ಸೀಳುವುದೇ ಅಪರೂಪವೆನಿಸಿದೆ. ದಿನವಿಡೀ ಚಟುವಟಿಕೆಯಿಂದ ಕಾಲ ಕಳೆಯುತ್ತಿದ್ದವ ನಮಗೆ ಈಗ ಸೋಮಾರಿತನ ಮೆತ್ತಿಕೊಂಡಿದೆ. ಕಾಲ ಕೊಲ್ಲುವುದೇ ದುಸ್ತರ. ದಿನಾ ನಮ್ಮದು ಒಂದೇ ಕಾರ್ಯಕ್ರಮ. ಕಾಫಿ, ಊಟ, ಕತ್ತಲ ಕೋಣೆಯಲ್ಲಿ ತಪಸ್ಸು. ಏಕತಾನತೆ ಬಾಧಿಸುತ್ತದೆ. ನಡುಮನೆಯಲ್ಲಿ ಕುಳಿತು ಎರಡು ಮಾತಾಡೋಣವೆಂದರೆ ಅವನೊಂದಿಗೆ ಮಾತೇ ಸರಿ ಹೋಗುವುದಿಲ್ಲ. ಮಂಜಿನಲ್ಲಿ ಹಾಯುವ ಕೊಳ್ಳಿ ಅವನು. ಮನೆಗೆ ಬಂದವರೊಡನೆ ಬಾಯಿ ತೆರೆಯಲೂ ಇವನ ಅಂಜಿಕೆ ಕಾಡುತ್ತದೆ.
ಬುಸುಗುಟ್ಟುತ್ತ ಅವನು ಕೋಪದಿಂದ ಕೋಣೆಯೊಳಗೆ ಕಾಲು ಹಾಕುತ್ತಾನೆ.
“ಮೊನ್ನೆ ರಾಮೂ ಹತ್ತಿರ ನಿನ್ನ ಗೋಳು ಏನು ಹೇಳ್ಕೊಂಡಿ?…ಇದ್ದದ್ದೂ ಇಲ್ಲದ್ದೂ ಎಲ್ಲ ಸೇರಿ ಅವನ ಕಿವಿಗೆ ಸುರಿದುಬಿಟ್ಯೋ ಇಲ್ಯೋ? ಪಾಪ ಅಂತ ಊಟ ಹಾಕಿ ಇಟ್ಕೊಂಡಿದ್ರೆ ಕೊಬ್ಬು ಈ ಜನಕ್ಕೆ. ಯಾವ ನಿನ್ನ ಮಕ್ಕಳು ಈಗ ನಿನ್ನ ನೋಡ್ಕೋತ್ತಿದ್ದಾರೆ? ಕಡೆಗಾಲಕ್ಕೆ ನಾನೇ ನಿನಗೆ ಗತಿ. ಅದನ್ನು ತಿಳ್ಕೊಂಡು ಬಾಯಿ ಹೊಲ್ಕೊಂಡು ಇರಕ್ಕೆ ನಿಮಗೇನು ಧಾಡಿ? ಬಂದವರೆದುರೆಲ್ಲ ಹೇಳ್ಕೊಳ್ಳೋದು..ಹೂಂ…ಆ ರಾಮೂ ಬಂದು, ‘ಮಾವನ್ನ, ಅತ್ತೇನ ಚೆನ್ನಾಗಿ ನೋಡ್ಕೋ’ ಅಂತ ನನಗೇ ಉಪದೇಶ ಹೇಳ್ತಾನಲ್ಲ!…ನನಗೆಷ್ಟು ಅವಮಾನ. ನಿಮಗೇನು ನಾ ಕಡಿಮೆ ಮಾಡಿರೋದು? ಅವನೊಬ್ಬನಿಗೇನಾ ಜವಾಬ್ದಾರಿ ಇರೋದು? ಹೂಂ…ಎಷ್ಟು ಮಾಡಿದ್ರೂ ಅನ್ನೋದು ಬಿಡಲಿಲ್ಲ…ಕೃತಘ್ನರು!’’
ಅವನ ಹರಿತವಾದ ಮಾತುಗಳು ಒಂದೊಂದು ಬಂದು ನನ್ನನ್ನು ಜೋರಾಗಿ ಪರಚಿದವು. ಮೆಟ್ಟಿಬಿದ್ದೆ. ಹೇಗೋ ಸಾವರಿಸಿಕೊಂಡು-
“ನಾನು ಯಾರ ಹತ್ತಿರಾನೂ ಹೇಳಲಿಲ್ಲಪ್ಪ . ಅವನೇ ಸುಮ್ನೆ ವಿಚಾರಿಸಿಕೊಂಡ. ಅವಳಿಗೆ ‘ಮಂಚ ಹಾಕಿಸ್ಕೊಂಡು ಮಲಗಿ ಅತ್ತೆ ..ವಯಸ್ಸಾದವರು, ಎಷ್ಟು ಸಲ ಎದ್ದೂ ಬಗ್ಗಿ ಮಾಡ್ತೀರಿ’ ಅಂದ….. ನನಗೂ ‘’ಒಳ್ಳೆಯ ಆಹಾರ ತೊಗೊಂಡು ಚೆನ್ನಾಗಿ ಹೊರಗೆ ಸುತ್ತಾಡಿಕೊಂಡು ಬನ್ನಿ. ಆರೋಗ್ಯ ಹೇಗೆ ಚಿಗುರುತ್ತೆ ನೋಡಿ ಬೇಕಾದ್ರೆ’ ಎಂದ…ನಾ ಸುಮ್ಮನೆ ಇದ್ದೆ”–ಎಂದೆ ಕುಸಿಗೊರಳಲ್ಲಿ .
ನನ್ನ ಮಾತು ಕೇಳಿ ಅವನ ಮುಖ ಉರಿದು ಹೋಯಿತು.
“ಹೂಂ, ಮಂಚ, ಸುಪ್ಪತ್ತಿಗೆ, ಸುಗ್ರಾಸ ಭೋಜನ-ಎಲ್ಲ ಸಿಗತ್ತೆ. ದುಡಿದು ತರೋನು ನಾನು ಒಬ್ಬ. ತಿನ್ನೋರು ಎಂಟು ಜನ ಆದ್ರೆ ಹೇಗೆ ನಿಭಾಯಿಸೋದು? ನೀ ಗಂಟಿಟ್ಟಿದ್ದ ದುಡ್ಡು ಎಂದೋ ಕರಗಿಹೋಯಿತು. ನೀನೂ ನಿನ್ನ ಮಗನಿಗೆ ಮಾಡೋ ಕರ್ತವ್ಯ ನೆಟ್ಟಗೆ ಮಾಡಿದ್ರೇ ಹೀಗೇಕಾಗ್ತಿತ್ತು?”
“ಕರ್ತವ್ಯ!” – ಗರಬಡಿದ ಮಾತು ನನ್ನ ಬಾಯಿಂದ ನಿಧಾನವಾಗಿ ಹೊರ ಉರುಳಿದಾಗ-
“ಏನು, ಮಗು ಕೇಳಿದ ಹಾಗೆ ಕೇಳ್ತೀಯ? ಪಾಪ, ಏನೂ ಗೊತ್ತಿಲ್ಲ. ನಿನ್ನ ಚಿಕ್ಕಮಗ ಫಾರಿನ್ ನಲ್ಲಿ ಮೆರೀತಿದ್ದಾನೆ…ಹೆಣ್ಣುಮಕ್ಕಳು ಸುಖದಲ್ಲಿ ಕೊಬ್ಬಿಹೋಗಿದ್ದಾರೆ…ಈ ನಿನ್ನ ಪಾಳುಮನೆ ನಮಗೆ ಯಾವ ಲೆಕ್ಕ…ಸಣ್ಣಪುಟ್ಟ ವಯಸ್ಸಿನಲ್ಲಿ ಈ ಮಗನ ಸಂಸಾರ ಏನಾದರೂ ಉದ್ಧಾರ ಮಾಡಿದ್ರಾ, ನಿಮ್ಮ ಪಾಡು ನಿಮ್ಮದು..ಹೂಂ.. ಈಗ ಹೊರೆಯಾಗಿ ಬಂದು ನೆಂಟರಿಷ್ಟರೆದುರು ದೂರೋದು!!”- ಕಣ್ಣನ್ನು ನಿಗಿ ನಿಗಿ ಉರಿಸಿದ.
ಅವನ ಆರೋಪದ ಚಾಟಿಯಿಂದ ಸುಸ್ತಾಗಿಹೋದೆ. ಇವಳ ಕಡೆಗೆ ತಿರುಗಿ ನೋಡಿದೆ. ಅವಳ ಸುಕ್ಕಾದ ಮುಖದ ಪಿಳಿಚುಗಣ್ಣ ರೆಪ್ಪೆಗಳು ನೆನೆದಿದ್ದವು. ಪೇರುಸಿರಿಕ್ಕಿ, ನೋವು ಇಮ್ಮಡಿಸಿ ಸೋತು ಒರಗಿದೆ. ಹೆರಲಾರದಂಥ ನೂರು ಭಾವನೆಗಳು ಹೊಟ್ಟೆಯೊಳಗೆ ಢಿಕ್ಕಿ ಹೊಡೆದವು.
ನಾನು ಹೇಡಿ ಎನಿಸಿತು. ನನ್ನತನವನ್ನೆಲ್ಲ ಹಳ್ಳ ತೆಗೆದು ಹುಗಿದುಬಿಟ್ಟಿದ್ದೇನೆ. ಅದರ ಗೋರಿ ದಿನೇ ದಿನೇ ನನ್ನುದ್ದಕ್ಕೂ ಘೋರವಾಗಿ ಬೆಳೆದು ನಿಲ್ಲುತ್ತಿದೆ. ಒಂದು ದಿನ ಅದು ಚಾವಣಿಯನ್ನು ಸೀಳಿಕೊಂಡು ಎತ್ತರಕ್ಕೆ, ಬಹು ಎತ್ತರಕ್ಕೆ ನೆಗೆಯುತ್ತದೆ. ಇನ್ನೊಂದು ದಿನ ಆಕಾಶದವರೆಗೂ ಮೈ ನಿಮಿರಿ ಮೀಟಿ ಬೆಳೆದು ನಿಂತಾಗ ತಲೆ ಮಟುಕಿದಂತಾಗುತ್ತದೆ. ಭಾರಿ ಆಸ್ಫೋಟ! ಆಗ ನನ್ನತನವೆಲ್ಲ ಹೊರಗೆ ಸೋರಿ ಹೋಗುತ್ತದೆ. ಇಡೀ ಪ್ರಪಂಚವಷ್ಟನ್ನೂ ಅದು ಕಡಲಿನಂತೆ ನುಂಗಿದರೂ ನಾನು ಎಲ್ಲವನ್ನೂ ಮೀರಿ ಬೆಳೆಯುತ್ತೇನೆ. ಮತ್ತೆ ಮೊದಲಿನಂತೆ ಆಗುತ್ತೇನೆ. ಆಮೇಲೆ ಅದು, ಅದು ಎಂದೂ ನನ್ನಿಂದ ಜಾರಿ ಹೋಗದಂತೆ ಭದ್ರವಾಗಿ ಬೀಗ ಜಡಿಯುತ್ತೇನೆ. ತೆಂಗಿನಮರವಾಗಿ ಯಾರ ಕೈಗೂ ನಿಲುಕದೆ ಹೆಮ್ಮೆಪಡುತ್ತೇನೆ. ನೆಲದ ಮೇಲಿದ್ದ ಕೈ ಅಲುಗಾಡಿಸಲು ಆಗದಿದ್ದರೂ ಭೂಮ್ಯಾಂತರಿಕ್ಷದುದ್ದ ಬೆಳೆದ ನನ್ನ ಸ್ವಾಭಿಮಾನ ವೀರಾಂಜನೇಯನಂತೆ ಆತ್ಮವಿಶ್ವಾಸ ಪುಟಿಯುತ್ತದೆ.
ಅಷ್ಟರಲ್ಲಿ, ಮೇಲಿನಿಂದ ಧೊಪ್ಪನೆ ಏನೋ ಬಿದ್ದ ಭಾರಿ ಸದ್ದಾಯಿತು. ಬೆಚ್ಚಿ ಎದ್ದು ಕುಳಿತೆ. ಮಗ್ಗುಲಲ್ಲಿದ್ದ ಇವಳೂ ಬೆದರಿದಂತೆ ಕಂಡಳು.
ಅಟ್ಟದ ಒತ್ತಿಗೆ ಮೂಲೆಯಲ್ಲಿ ಒರಗಿಸಿಟ್ಟಿದ್ದ ಮರದ ಏಣಿ ಕೆಳಗೆ ಬಿದ್ದಿತ್ತು. ಸದ್ಯ..ನಮ್ಮಿಂದ ಒಂದೆರಡು ಇಂಚಿನ ಅಂತರದಲ್ಲಿ ಬಿದ್ದಿತ್ತಾದ್ದರಿಂದ ನಾವು ಬಚಾವಾದೆವು.
ನೆಲಕ್ಕೆ ಬಗ್ಗಿ ಅದನ್ನು ಎತ್ತಿ ಸರಿಯಾಗಿ ಒರಗಿಸಿಟ್ಟು, ಏಣಿಯನ್ನು ಬಿಗಿಯಾಗಿ ಹಿಡಿದುಕೊಂಡು ಅಟ್ಟದ ಕಡೆ ತಲೆ ಎತ್ತಿ ನೋಡುವುದರಲ್ಲಿ ತಲ್ಲೀನಳಾಗಿದ್ದಳು ಅವನ ಹೆಂಡತಿ. ನೆಲದ ಮೇಲೆ ಮೂರು ನಾಲ್ಕು ಬಿದಿರಿನ ಬುಟ್ಟಿಗಳು, ಹಳೆಯ ಮೊರದ ಜೊತೆಗಳು ಹೊರಳಾಡಿದ್ದವು. ಅದರ ಪಕ್ಕದಲ್ಲಿ ಹಳೆಯ ಪುಸ್ತಕಗಳ ಒಂದು ದೊಡ್ಡ ಗುಪ್ಪೆ.
“ನೋಡಿ, ಇನ್ಯಾವ್ಯಾವ ಕಸ, ಕೊಳಕು ಮೇಲಿದೆಯೋ ಎಲ್ಲವನ್ನೂ ನೋಡಿ, ಎಲ್ಲ ಕೆಳಗೆ ಹಾಕಿ. ದಂಡದ ಸಾಮಾನುಗಳು ಎಲ್ಲ, ಏನೂ ಉಪಯೋಗವಿಲ್ಲ. ಎಷ್ಟು ಕಾಲದಿಂದ ಅಲ್ಲೇ ಕೂತು ಜಾಗ ತಿನ್ನುತ್ತಿದೆಯೋ”-ಎಂದವಳು ಗಂಡನಿಗೆ ಹೇಳುತ್ತಿದ್ದಳು.
ಅಟ್ಟದ ಮೇಲೆ ದಡಬಡ ಸದ್ದು ಮಾಡುತ್ತಿದ್ದ ಅವನು, ಪುಸ್ತಕಗಳನ್ನು ಆರಿಸಿ ಆರಿಸಿ ಪಕ್ಕಕ್ಕಿಟ್ಟು, ಉಳಿದವನು ಕೆಳಗೆ ತಳ್ಳಿದ. ಹಿಂದೆಯೇ, ಬೊಂಬೆಯ ಪೆಟ್ಟಿಗೆಯನ್ನು ತಳ್ಳಿ ಅದರ ಜೊತೆ ಹಳೆಯ ಬಾವಿ ಹಗ್ಗವೊಂದನ್ನು ಕೆಡವಿದ. ನೆಗ್ಗಿದ ನಾಲ್ಕೆಂಟು ಹಿತ್ತಾಳೆ ಪಾತ್ರೆಗಳು, ತಾಮ್ರದ ಸಾಮಾನುಗಳು, ತುಕ್ಕು ಹಿಡಿದ ಹಳೆಯ ಕಬ್ಬಿಣದ ಬಾಣಲೆ, ಸೌಟುಗಳನ್ನು ಅವಳ ಕೈಗೆ ಕೊಟ್ಟ. ಕಡೆಯಲ್ಲಿ ಅವಳ ಸಹಾಯದಿಂದ ದೊಡ್ಡ ಬೆತ್ತದ ತೊಟ್ಟಿಲನ್ನು ಕೆಳಗೆ ಇಳಿಸಿ-
“ಈ ಪಾತ್ರೆಗಳನ್ನೆಲ್ಲ ಕೊಟ್ಟು ಇನ್ನೇನಾದ್ರೂ ಉಪಯೋಗವಾಗುವಂಥ ಹೊಸ ಪಾತ್ರೆಗಳನ್ನು ಬೇಕಾದ್ರೆ ಕೊಂಡುಕೊಳ್ಳೋಣ…. ಈ ಪುಸ್ತಕಗಳನ್ನೆಲ್ಲ ಅಂಗಡಿಗೆ ತೂಕಕ್ಕೆ ಕೊಟ್ಟು ಕಳುಹಿಸು” ಎಂದವನು ತನ್ನ ಕೈಗೆ ಮೆತ್ತಿಕೊಂಡಿದ್ದ ಧೂಳನ್ನು ಝಾಡಿಸಿದಾಗ ಇವಳು ಒಂದೇ ಸಮನೆ ಕೆಮ್ಮತೊಡಗಿದಳು.
ಅವನು ತನ್ನ ಪಾಡಿಗೆ ತಾನು ಏಣಿಯನ್ನು ಎತ್ತಿ ಪಕ್ಕಕ್ಕಿಟ್ಟು ಕೆಳಗೆ ಕೆಡವಿದ ಪದಾರ್ಥಗಳನ್ನು ಪರೀಕ್ಷಿಸತೊಡಗಿದ..
“ಈ ಹಗ್ಗಾನೇನೋ ಬಟ್ಟೆ ಒಣಗಿ ಹಾಕಕ್ಕೆ ಇಟ್ಕೋಳೋಣಾರೀ….ಆದರೆ, ಈ ಭೂತದ ಹಾಗಿರೋ ಜರಡಿ ತೊಟ್ಟಿಲನ್ನೇನು ಮಾಡೋದು?!!… ಕೊಟ್ಟರೂ ಮೂರು ಕಾಸು ಹುಟ್ಟಲ್ಲ… ಇಟ್ಕೊಳ್ಳೋಕೆ ಜಾಗ ಇಲ್ಲ…” ಎಂದವಳು ಅಲಕ್ಷ್ಯದಿಂದ ತೊಟ್ಟಿಲನ್ನು ಕಾಲಿನಿಂದ ಒತ್ತರಿಸಿ ಮೂಲೆಗೆ ತಳ್ಳಿದಳು.
ನನ್ನ ಎದೆಗೇ ಅವಳ ಕಾಲು ಒದ್ದ ಹಾಗಾಗಿ ಎದೆಯನ್ನು ಅದುಮಿಕೊಂಡು ನೀವಿಕೊಂಡೆ. ಮೇಲುಸಿರು ದಬ್ಬಿಕೊಂಡು ಬಂತು. ಹೃದಯವನ್ನು ಸನಿಕೆ ತೆಗೆದುಕೊಂಡು ಬಗೆಯುತ್ತಿರುವಂಥ ಧುಮುಗುಡುವ ತೀವ್ರ ನೋವು. ಅರಿಯದ ಸಂಕಟ ವ್ಯಾಪಿಸಿ ಒದ್ದಾಡತೊಡಗಿದೆ.
ಅವಳು ಅತ್ತ ಕಾಲು ಹಾಕುತ್ತಿದ್ದಂತೆ ನಾನು ಮೆಲ್ಲನೆ ಹಾಗೇ ಅದರ ಬಳಿ ತೆವಳಿದೆ. ದೊಡ್ಡ ಬೆತ್ತದ ತೊಟ್ಟಿಲು. ಗಟ್ಟಿಯಾಗಿ ಒತ್ತಾಗಿ, ಹೆಣೆದಿದ್ದ ಬೆತ್ತಗಳೆಲ್ಲ ಸಡಿಲಗೊಂಡಿವೆ. ಜೂಲುನಾಯಿಯಂತೆ ಅರ್ಧಂಬರ್ಧ ತುಂಡಾದ ಬೆತ್ತಗಳು ಜೋಲಾಡುತ್ತಿವೆ. ಮುಟ್ಟಿದರೆ ಪುಡಿಯಾಗುವುದೇನೋ ಎಂಬ ಅಂಜಿಕೆ. ನವುರಾಗಿ ಅದರ ಒಡಲಿನ ಮೇಲೆ ಕೈಯಾಡಿಸಿದೆ. ಅವನು ಹುಟ್ಟಿ ಬೆಳೆದ ಜಾಗ…!!…ಹಾಂ.. ಕೈಗೆ ಸಿಬುರು ಚುಚ್ಚಿದಂತಾಯಿತು. ನೋವು ಚುಳ್ ಎಂದಿತು. ಸರಕ್ಕನೆ ಕೈ ಹಿಂದೆ ತೆಗೆದುಕೊಂಡು ನೋಡಿಕೊಂಡೆ. ಅಂಗೈಯಲ್ಲಿ ಸಣ್ಣ ರಕ್ತದ ಚುಕ್ಕೆ ಕಾಣಿಸಿತು, ಕ್ರಮೇಣ ಅದು ಒಸರುತ್ತ ದೊಡ್ಡದಾಯಿತು.
ಚೂಪುನೋಟದಿಂದ ಒಸರುತ್ತಿದ್ದ ರಕ್ತದ ತೊಟ್ಟನ್ನೇ ದಿಟ್ಟಿಸಿ ನೋಡಿದೆ. ಅದರೊಳಗೆ ಒಂದು ತೊಟ್ಟಿಲು ತೂಗುತ್ತಿರುವಂತೆ ಭಾಸವಾಯಿತು. ಜೊಲ್ಲು ಸುರಿಸಿಕೊಂಡು ಅವನು ಕುಳಿತಿದ್ದಾನೆ.!..ಇವಳು ತನ್ಮಯಳಾಗಿ ತೊಟ್ಟಿಲ ಹಗ್ಗ ಹಿಡಿದು ತೂಗುತ್ತಿದ್ದಾಳೆ!….ತೊಟ್ಟಿಲು ತೂಗುತ್ತಲೇ ಇದೆ…ಕೈ ಸೋಲುವವರೆಗೂ ಇವಳು ತೂಗುತ್ತಲೇ ಇದ್ದಾಳೆ. ಅವನ ಹಿಂದೆ ಅವನ ತಮ್ಮ… ತಂಗಿಯರ ಸಾಲು. ಸುಂದರವಾಗಿ ಬಣ್ಣ ಬಳಿದ ಆ ಬೆತ್ತದ ತೊಟ್ಟಿಲನ್ನು ಕೊಂಡು ತಂದ ದಿನ ಇನ್ನೂ ನಿನ್ನೆ ಮೊನ್ನೆಯಂತಿದೆ. ಅದರ ಮೇಲೆ ಪಂಚವರ್ಣದ ಗಿಳಿಯನ್ನು ಕಟ್ಟಿ ತಿರುಗಿಸಿದ್ದೇ ತಿರುಗಿಸಿದ್ದು ನಾನು!… ಇತ್ತೀಚಿಗೆ, ಅವನ ಹತ್ತು ವರ್ಷದ ಕೊನೆಯ ಮಗಳೂ ಕೂಡ ಇದರೊಳಗೆ ಕೂತು ಕೇಕೆ ಹಾಕಿ ನಕ್ಕಿದ್ದು, ಅದರಿಂದ ಬಾಗಿ ಚಿಮ್ಮುತ್ತಿದ್ದುದು ಎಲ್ಲವೂ ನೆನಪಾಗುತ್ತದೆ. ನೆನಪು ಸಿಹಿ ಎನಿಸುತ್ತದೆ. ಇಷ್ಟೊಂದು ಜನರನ್ನು ಹೊತ್ತ ಭಾರದಿಂದ ಅದು ದುರ್ಬಲವಾಗಿ ಕುಸಿಯುತ್ತಿರುವಂತೆ ಅನಿಸುತ್ತಿದೆ.
ರಕ್ತ ಒಸರುತ್ತಿದ್ದ ಜಾಗವನ್ನು ಹೆಬ್ಬೆಟ್ಟಿನಿಂದ ಬಲವಾಗಿ ಒತ್ತಿಕೊಳ್ಳುತ್ತೇನೆ. ಅನಾಮತ್ತು ಮೇಲಿಂದ ಬಿದ್ದುದರ ಮೈ,ಕೈ ನೋಯುತ್ತಿರಬಹುದು ಎಂದು ಕಸಿವಿಸಿ, ಮೆಲ್ಲನೆ ತೊಟ್ಟಿಲ ಕಟ್ಟುಗಳನ್ನು ಸವರಿದೆ. ಪಾಪ, ತಳವನ್ನೆಲ್ಲ ಇಲಿಗಳು ಎಂಜಲು ಮಾಡಿವೆ. ನೋವಿನ ನಿಟ್ಟುಸಿರು ಕಕ್ಕಿ ಕಣ್ಣು ಮುಚ್ಚಿ ಕುಳಿತೆ. ತಲೆದಿಂಬಿಗೆ ಇಟ್ಟುಕೊಂಡಿದ್ದ ಹರಿದ ಬಟ್ಟೆ ತುಂಡುಗಳನ್ನು ಅದರ ತಳಕ್ಕೆ ಹಾಸಿ ಇವಳ ಪಕ್ಕಕ್ಕೆ ಬಂದೆ. ಅವಳು ಗೊರಕೆ ಹೊಡೆಯುತ್ತಿದ್ದಳು. ಎದುರಿಗೆ ತಲೆ ಎತ್ತಿ ನಿಂತಿದ್ದ ಭೂತಾಕಾರದ ಗೋರಿ ಕಿಸಕ್ಕನೆ ನಕ್ಕಂತಾಯಿತು.
ಮುಸುಕು ಎಳೆದು ಮಲಗಿದೆ. ಮಧ್ಯಾಹ್ನ ಬಿಸಿಲಿಗೆ ಒಣಗಿ ಹಾಕಿದ್ದ ಪಂಚೆಯನ್ನು ಒಳಗೆ ಎಳೆದು ತಂದು ಮಡಿಸಿ ತೊಟ್ಟಿಲಿನಲ್ಲಿ ಇಡಲು ಕೈ ಹಾಕಿದೆ. ಕಲಸಿದ ಹಿಟ್ಟನ್ನು ಮುಟ್ಟಿದಂತಾಯಿತು.
ಮುದ್ದಾದ ಎರಡು ಬೆಕ್ಕಿನ ಮರಿಗಳು. ಅದರ ಮೈಮೇಲೆ ಕೈಯಾಡಿಸಿ ಬೆಚ್ಚಗೆ ಪಂಚೆ ಹೊದಿಸಿದೆ.
ಕೆಲವೇ ವಾರಗಳಲ್ಲಿ ಮರಿಗಳು ಕೊಬ್ಬಿ ಅಡುಗೆಮನೆಯ ಹಾಲಿನ ಪಾತ್ರೆಯ ತಳ ಕಾಣುವಂತೆ ಮಾಡಿದಾಗ ಅವನ ಹೆಂಡತಿ ಅವಕ್ಕೆ ಹಿಡಿಹಿಡಿ ಶಾಪ ಹಾಕುತ್ತಾಳೆ.
ಅಂದು- ಬಲಮಗ್ಗುಲಾಗಿ ಹೊರಳಿ ಏಳುತ್ತಿದ್ದಂತೆ ಅವಳ ಏರು ದನಿ ಕಿವಿ ತಿಂದಿತು.
“ಹಾಳಾದ್ದು ಸೀಮೇಎಣ್ಣೇನೇ ಮುಗಿದುಹೋಗಿದೆ. ಈಗ ನಾನು ಯಾವುದರಲ್ಲಿ ಕಾಫಿ ಮಾಡ್ಲಿ?”
ಕಬ್ಬಿಣದ ಒಲೆ ದರಾಬರಾ ಎಳೆದ ಸದ್ದು.
ಸ್ವಲ್ಪ ಹೊತ್ತಿನಲ್ಲಿ ಅವನು ದಾಪುಗಾಲು ಇಡುತ್ತ ಕೋಣೆಯ ಒಳಗೆ ಬಂದ. ತೊಟ್ಟಿಲಿನಲ್ಲಿದ್ದ ಬಟ್ಟೆಗಳನ್ನೆಲ್ಲ ಪರಪರ ಈಚೆಗೆ ಕಿತ್ತೆಸೆದು ಅದನ್ನು ಹೊತ್ತುಕೊಂಡು ಹೊರಗೆಹೋದ.
ನಾನೂ ಗಾಬರಿಯಿಂದ ಪಕ್ಕದಲ್ಲಿ ನೆಲದ ಮೇಲೆ ಮಲಗಿಸಿದ್ದ ಕೋಲನ್ನು ಎಳೆದುಕೊಂಡು ಮೇಲೆದ್ದು, ಅವನನ್ನು ಹಿಂಬಾಲಿಸಿ ಹಿತ್ತಲಿಗೆ ಬಂದೆ.
ಒಗೆಯುವ ಕಲ್ಲಿನ ಮೇಲೆ ತೊಟ್ಟಿಲ ಬೆತ್ತಗಳನ್ನು ಬಿಡಿಸಿ ಮುರಿ ಮುರಿದು ಹಾಕುತ್ತಿದ್ದ. ಐದು ನಿಮಿಷಗಳಲ್ಲಿ ತೊಟ್ಟಿಲು ಮಾಯವಾಗಿ ಬೆತ್ತದ ತುಂಡಿನ ರಾಶಿ ಬಿತ್ತು. ಕರುಳು ಹಿಂಡಿ ಹಾಕಿದಂತಾಯಿತು. ಅದನ್ನು ವಿರೋಧಿಸಬೇಕು ಎನಿಸಿ ಹೆಜ್ಜೆ ಕೀಳಲು ಪ್ರಯತ್ನಿಸಿದೆ. ಆದರೆ ಅಡ್ಡವಾಗಿ ಗೋರಿ ಮೈ ಚಾಚಿ ನಿಂತಿತ್ತು. ಹತಾಶನಾಗಿ ಕುಸಿದು ಕುಳಿತೆ ಎಷ್ಟೋ ಹೊತ್ತು.
ಅವನು ತುಟಿಯಂಚಿಗೆ ಕಾಫೀಲೋಟ ಇಟ್ಟುಕೊಂಡು ಹೊರಗೆ ಬರುತ್ತಾನೆ. ಲೋಟದಿಂದ ಏಳುತ್ತಿದ್ದ ಹಬೆ ಮುಖಕ್ಕೆ ರಾಚಿದಂತಾಗಿ ಶಾಖದಿಂದ ಧಡಾರನೆ ಮೇಲೆದ್ದು ನಿಲ್ಲುತ್ತೇನೆ. ತಡವರಿಸಿಕೊಂಡು ಹೊಸ್ತಿಲನ್ನು ದಾಟಿಕೊಂಡು ಬಂದು , ಅವಳ ಪಕ್ಕಕ್ಕೆ ಆತು ಕೂಡುತ್ತೇನೆ.
ಅವಳ ಮುಸುಕು ಸರಿಸಿ, “ಲೇ” ಎಂದು ಕೂಗುತ್ತೇನೆ. ಏಳುವುದಿಲ್ಲ. ‘ಲೇ’…ಮೈ ಹಿಡಿದು ಅಲ್ಲಾಡಿಸುತ್ತೇನೆ. ಮಿಸುಕಾಡುವುದಿಲ್ಲ. ಮುದುರಿಕೊಂಡಿದ್ದ ಅವಳ ಕೈಯನ್ನು ಎತ್ತಿ ನನ್ನ ಕೈಯಲ್ಲಿರಿಸಿಕೊಳ್ಳುತ್ತೇನೆ. ಅದು ತಣ್ಣಗೆ ಕೊರೆಯುತ್ತಿರುತ್ತದೆ!!!.
** ** **
..