ಮನಸ್ಸು ಗಿರಗಿಟ್ಟಲೆಯಾಗಿತ್ತು. ಯೋಚನೆಗಳನ್ನು ಹತ್ತಿಕ್ಕಲು ಅಮೃತಾ ಮೇಲೆದ್ದು ಸೀದಾ ಅಂಗಳಕ್ಕೆ ನಡೆದಳು. ಹಿಂದಿನ ದಿನ ನರ್ಸರಿಯಿಂದ ತಂದಿದ್ದ ಸೂಪರ್ ಸ್ಟಾರ್ ರೋಜಾ ಗಿಡವನ್ನು ಕುಂಡದಿಂದ ತೆಗೆದು ನೆಲಕ್ಕೆ ಬದಲಿಸಬೇಕಿತ್ತು. ಭಾನುವಾರ ಬಿಡುವಿನ ದಿನ ಎಂದು ಕೆಲಸಕ್ಕೆ ಸಾರ್ವತ್ರಿಕ ರಜೆ ಘೋಷಿಸಲಾಗಿದ್ದರೂ ಅವಳ ಮನಸ್ಸಿನ ಮರ್ಮರಕ್ಕೆ ನಿಲುಗಡೆ-ರಜೆಯಿರಲಿಲ್ಲ. ಅವಳ ಕೈಗಳು ಯಾಂತ್ರಿಕವಾಗಿ ಸನಿಕೆಯಿಂದ ಮಣ್ಣನ್ನು ತೋಡುತ್ತಿದ್ದರೆ ಅವಳ ಮನಸ್ಸು ತನ್ನ ಪಾಡಿಗೆ ತಾನು ತನ್ನೊಳಗನ್ನು ತೋಡಿಕೊಳ್ಳತೊಡಗಿತ್ತು.
ನಿಂತರೆ, ಕೂತರೆ ಅದೇ ಸಂಗತಿ ಅವಳ ಮನಃಪಟಲದಲ್ಲಿ ಬಿಚ್ಚಿಕೊಳ್ಳುತ್ತಿತ್ತು. ಸುಮುಖನ ಬಾಳಿನ ದುರಂತ ಅವಳ ಕಣ್ಮುಂದೆ ಸುಳಿದು ಅವಳ ಎದೆಯಾಳದಲ್ಲಿ ಸಣ್ಣ ತಳಮಳವೊಂದು ಚಲಿಸಿತು.
ಸುಮುಖ ಕಛೇರಿಯಲ್ಲಿ ಅಮೃತಳಿಗಿಂತ ಒಂದು ಹಂತದ ಮೇಲಿನ ಅಧಿಕಾರಿಯಾದರೂ ಇಬ್ಬರಲ್ಲೂ ಸಹೋದ್ಯೋಗಿಯ ಸ್ನೇಹಭಾವ. ಅವನು ಅವಳಿಂದ ಯಾವ ವಿಷಯವನ್ನೂ ಮುಚ್ಚಿಡುತ್ತಿರಲಿಲ್ಲ. ಅವನು ತನ್ನ ಹೆಂಡತಿ ಮಕ್ಕಳೊಡನಾಟದ ಸುಖ ಸಂಸಾರದಲ್ಲಿ ಕಳೆದ ಪ್ರತಿಯೊಂದು ಕ್ಷಣದ ವರದಿಯೂ ಅವಳನ್ನು ತಲುಪುತ್ತಿತ್ತು. ಮುಕ್ತ ಮನಸ್ಸಿನಿಂದ ಸುಮುಖ ತನ್ನೆಲ್ಲ ಭಾವನೆಗಳನ್ನು ಅವಳೊಡನೆ ಹಂಚಿಕೊಳ್ಳುತ್ತಿದ್ದ. ಅಮೃತಾ ಕೂಡ ಅಷ್ಟೇ ಆಸಕ್ತಿಯಿಂದ ಅವನ ಮಾತುಗಳನ್ನು ಆಲಿಸುತ್ತಿದ್ದಳು. ಅಷ್ಟೇ ಅಲ್ಲ, ಹಲವಾರು ಬಾರಿ ಅವನ ಮನೆಗೂ ಹೋಗಿ ಬರುತ್ತಿದ್ದುದರಿಂದ ಅವಳಿಗೆ ಅವನ ಹೆಂಡತಿಯ ಪರಿಚಯವೂ ಸಾಕಷ್ಟಿತ್ತು.
ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದ ಸುಖ ಸಂಸಾರ, ಮುದ್ದಾದ ಎರಡು ಮಕ್ಕಳು. ಅನುರೂಪಳಾದ ಸತಿ. ಕನಿಷ್ಠ ಎಂದರೆ ದಿನಕ್ಕೊಮ್ಮೆಯಾದರೂ ತನ್ನ ಸುಖ ಸಂಸಾರದ ಬಗ್ಗೆ ಬಣ್ಣಿಸುತ್ತಿದ್ದ ಸುಮುಖನ ಬಾಳಲ್ಲಿ ಏನೆಲ್ಲ ಆಗಿಹೋಯ್ತು! ದೃಷ್ಟಿ ತಾಗಿತೋ ಎನ್ನುವಂತೆ ಅವನ ಬಾಳ ನೌಕೆ ಬಿರುಗಾಳಿಯ ಹೊಡೆತಕ್ಕೆ ಸಿಕ್ಕು ಅಲ್ಲೋಲ ಕಲ್ಲೋಲವಾಗಿ ಹೊಯ್ದಾಡಿತ್ತು.
ಸುದ್ದಿ ತಿಳಿದೊಡನೆ ಅಮೃತಾ ತಕ್ಷಣ ನರ್ಸಿಂಗ್ ಹೋಮ್‍ಗೆ ಧಾವಿಸಿದಳು. ಸುಮುಖ ಎಳೇ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತ ಕೂತಿದ್ದ. ತಾಯಿಯ ಹಠಾತ್ ಮರಣದಿಂದ ಮಕ್ಕಳೂ ಕಂಗಾಲಾಗಿದ್ದರು.
ದೇವಸ್ಥಾನಕ್ಕೆ ಹೋಗುತ್ತಿದ್ದವಳನ್ನು ಎದುರಿನಿಂದ ಬಂದ ಲಾರಿ ಅನಾಮತ್ತು ಅಪ್ಪಳಿಸಿ, ನೇರವಾಗಿ ಅವಳನ್ನು ದೇವರ ಹತ್ತಿರಕ್ಕೆ ಸಾಗಿಸಿತ್ತು. ನರ್ಸಿಂಗ್ ಹೋಮ್‍ಗೆ ಸೇರಿಸುವಷ್ಟು ವ್ಯವಧಾನವೂ ಇರಲಿಲ್ಲ, ವೈದ್ಯರ ನೆರವು ದೊರೆಯುವಷ್ಟರಲ್ಲಿ ಅವಳ ಪ್ರಾಣಪಕ್ಷಿ ಗೂಡು ಬಿಟ್ಟಿತ್ತು.
ಕೆಲವೇ ಗಂಟೆಗಳ ಮುಂಚೆ ನಗುನಗುತ್ತಿದ್ದ ಸಂಸಾರ ಈಗ ಗೊಳೋ ಎನ್ನುತ್ತಿತ್ತು. ಕಂಗೆಟ್ಟು ಕೂತ ಸುಮುಖನಿಗೆ ಹೇಗೆ ಸಮಾಧಾನ ಹೇಳುವುದೋ ಅಮೃತಳಿಗಂತೂ ತೋರಲಿಲ್ಲ.
ಈ ವಿಷಯ ಮಗಳ ಮೂಲಕ ಕೇಳಿದ ಅಮೃತಳ ತಾಯಿ ವನಜಮ್ಮ ಕೂಡ ಮಮ್ಮಲ ಮರುಗಿದರು.
‘ಖಂಡಿತ ಆ ದೇವರಿಗೆ ಕಣ್ಣಿಲ್ಲ ಕಣೆ. ಮುಂದೆ ಇನ್ನೂ ಚೆನ್ನಾಗಿ ಬಾಳಿ ಬದುಕಬೇಕಾದ ಜೀವಗಳನ್ನು ಯಾಕಿಷ್ಟು ಬೇಗ ಕರೆಸಿಕೊಳ್ತಾನೋ ಏನೋ…ಹೂಂ ಪಾಪ, ಉಳಿದವರ ಕಥೆ ಹೇಳು’ –ಎಂದು ನಿಡಿದಾಗಿ ಉಸಿರು ಹುಯ್ದರು.
ಅಮೃತಳ ಮನಸ್ಸೂ ಆ ಕುರಿತೇ ಯೋಚಿಸುತ್ತಿತ್ತು. ತೋಟದ ಕೆಲಸದಲ್ಲಿ ಮನಸ್ಸು ನಿಲ್ಲದೆ, ಒಳಗೆದ್ದು ಬಂದು ಮಣ್ಣು ಅಂಟಿಕೊಂಡ ಕೈಗಳನ್ನು ತೊಳೆದು, ಕೈಲೊಂದು ಮ್ಯಾಗಜಿನ್ ಹಿಡಿದುಕೊಂಡು ಸೋಫದ ಮೇಲೆ ಕುಳಿತಳು. ಆದರೂ ಮನಸ್ಸಿನೊಳಗಿನ ವಿಚಾರಗಳು ಸಾಯಲಿಲ್ಲ.
ತಿಂಗಳನಂತರ ಸುಮುಖ ಆಫೀಸಿಗೆ ಬರತೊಡಗಿದರೂ ಅವನ ಮನಸ್ಸಿನ ಹುಣ್ಣು ಮಾಯ್ದಂತಿರಲಿಲ್ಲ.
ಎದುರಿಗೆ ಬಂದು ಕೂತ ಅಮೃತಳತ್ತ ಪೆಚ್ಚು ಮೋರೆ ಮಾಡಿಕೊಂಡು ನುಡಿದ-
“ಹುಡುಗರಿಗೆಲ್ಲ ಸ್ಕೂಲು….ಹೊತ್ತೊತ್ತಿಗೆ ಊಟ-ತಿಂಡಿ ಎಲ್ಲ ಆಗ್ಬೇಕು…ನಮ್ಮ ಅತ್ತೆ ಹಾಗೂ ಹೀಗೂ ಇಪ್ಪತ್ತು-ಇಪ್ಪತ್ತೈದು ದಿನ ಇದ್ದೋರು, ನಿನ್ನೆ ಊರಿಗೆ ಹೊರಟೇಬಿಟ್ರು …..ನಮ್ಮನೇಲೂ ಮಗ-ಸೊಸೆ-ಮೊಮ್ಮಕ್ಕಳ ಜವಾಬ್ದಾರಿ ಕಣಪ್ಪಾ …ನನ್ನ ಸೊಸೆ ಕೆಲಸಕ್ಕೆ ಹೋಗಬೇಕು. ಅವಳೂ ಎಷ್ಟು ದಿನಾಂತ ರಜಾ ಹಾಕಕ್ಕೆ ಆಗತ್ತೆ…ಯಾರಾದ್ರೂ ಒಳ್ಳೆಯ ಅಡುಗೆಯೋರನ್ನು ಇಟ್ಕೊಳೀಪ್ಪ ಅಂತ ತಮ್ಮ ದಾರಿ ತಾವು ನೋಡಿಕೊಂಡ್ರು ಅಮೃತಾ” ಎನ್ನುವಾಗ ಅವನ ದನಿ ಬಡಕಲಾಗಿತ್ತು.
ಸುಮುಖನ ಸಂಕಟದ ಪರಿಸ್ಥಿತಿ ಕಂಡು ಅಮೃತಳ ಕರುಳಲ್ಲಿ ಕತ್ತರಿಯಾಡಿಸಿದಂತಾಯ್ತು. ಆ ದಿನ ಮಧ್ಯಾಹ್ನದ ಲಂಚ್ ಬ್ರೇಕ್‍ನಲ್ಲಿ ಅಮೃತಾ ಊಟದ ಡಬ್ಬಿ ಹಿಡಿದು ಸೀದಾ ಅವನ ಚೇಂಬರಿಗೆ ನುಗ್ಗಿದಳು. ಅವನ ಮುಖದಲ್ಲಿದ್ದ ವಿಷಾದ ಭಾವ ಇನ್ನೂ ಕರಗಿರಲಿಲ್ಲ. ಅವನ ಮುಂದೆ ಟಿಫನ್ ಬಾಕ್ಸ್ ಬಿಚ್ಚುವಾಗ ಅವಳಿಗೆ ಬಹಳ ಕೆಟ್ಟದೆನಿಸಿತು. ಪ್ರತಿದಿನ ಇಬ್ಬರೂ ತಾವು ತಂದ ಊಟಗಳನ್ನು ಪರಸ್ಪರ ಹಂಚಿಕೊಂಡು ತಿನ್ನುತ್ತಿದ್ದವರ ಮಧ್ಯೆ ಈಗ ಮೌನ ಉಯ್ಯಾಲೆಯಾಡುತ್ತಿತ್ತು.
ಅಮೃತಾ ಮೆಲ್ಲನೆ ಅವನತ್ತ ಕಿರುಗಣ್ಣ ನೋಟ ಹರಿಸಿದಳು. ಅವನ ದೃಷ್ಟಿ ಪಕ್ಕದ ರ್ಯಾಕ್ ಮೇಲೆ ಪ್ರತಿದಿನ ಇರುತ್ತಿದ್ದ ತನ್ನ ಹಾಟ್‍ಬಾಕ್ಸ್ ನತ್ತ ಅನಾಥವಾಗಿ ತೆವಳಿ, ಖಾಲಿ ಜಾಗ ಭಣಗುಡುವುದನ್ನು ದಿಟ್ಟಿಸಲಾರದೆ ದೃಷ್ಟಿ ಕದಲಿಸಿದ. ತನ್ನ ಕಣ್ಣಂಚಿನ ತೇವ ಎದುರಿಗೆ ಕೂತವಳ ಅರಿವಿಗೆ ಬಾರದಂತೆ ಮುಖ ತಿರುಗಿಸಿ, ಅವಳು ತನ್ನತ್ತ ಸರಿಸಿದ ಬಟ್ಟಲಿನಲ್ಲಿ ಏನಿದೆ ಎಂದು ಗಮನಿಸದೆ ಗಬಗಬನೆ ತಿಂದು ಮುಗಿಸಿದ.
“ಇನ್ನು ಸ್ವಲ್ಪ ಹಾಕಲಾ?”
ಅಮೃತಳ ದನಿಯಲ್ಲಿ ಎಂದಿನ ಉಪಚಾರದ ಕಕ್ಕುಲತೆಗಿಂತ ಕರುಣೆಯ ಮಿಡಿತ ಕಂಡು ಅವನ ಕೊರಳ ಸೆರೆ ಹೊಮ್ಮಿಬಂತು.
“ಎಲ್ಲೀವರೆಗೆ ನೀವು ಹೀಗೆ ಊಟ ತಂದ್ಕೊಡ್ತೀರಾ ಅಮೃತಾ? ನಾನಿಲ್ಲಿ ರುಚಿರುಚಿಯಾಗಿ ಊಟ ಮಾಡ್ತಿದ್ರೆ, ನನ್ನ ಮಕ್ಕಳಗತಿ…ಅವರ ಊಟ ತಿಂಡೀನೇ ದೊಡ್ಡ ಸಮಸ್ಯೆಯಾಗಿ ನನ್ನ ತಲೆ ತಿನ್ತಿದೆ’
ಅಮೃತಾ ಗಲಿಬಿಲಿಯಿಂದ ತಲೆಯೆತ್ತಿದಳು. ಅವಳ ಕಣ್ಣಲ್ಲಿ ಅಸಹಾಯಕತೆ ಸುರಿಯುತ್ತಿತ್ತು.
“ಯಾವ ಅಡುಗೆಯವರೂ ಸರಿ ಹೋಗ್ತಿಲ್ಲ…ಯಾರೂ ಸರಿಯಾದ ಟೈಮಿಗೆ ಬರಲ್ಲ…ಬರೀ ಚಕ್ಕರ್ರು …ಬಂದ್ರೂ ಅವರ ಮೇಲೆ ಕಣ್ಣಿಟ್ಕೊಂಡು ನೋಡಿಕೊಳ್ಳೋರು ಯಾರು? ಯಾಕೋ ಯಾವ ಅಡುಗೆಯೋರ ರೀತಿನೂ ಹಿಡಿಸ್ತಿಲ್ಲ …ನನ್ನ ಮಗಳದು ಒಂದೇ ಹಟ…ನಾನೇ ಅಡುಗೆ ಮಾಡಿಟ್ಟು ಸ್ಕೂಲಿಗೆ ಹೋಗ್ತೀನಿ ಅಂತ… ನಾನೇ ಮನೆ ಮ್ಯಾನೇಜ್ ಮಾಡ್ತೀನಿ ಅಂತಾಳೆ ದೊಡ್ಡ ಯಜಮಾನಿ ಥರ…ಈ ಸಲ ಅವಳು ಎಸ್.ಎಸ್.ಎಲ್.ಸಿ. ಬೇರೆ. ಓದೋದು ತುಂಬಾ ಇರುತ್ತೆ…..ಏನ್ಮಾಡಬೇಕೋ ದಿಕ್ಕೇ ತೋಚ್ತಿಲ್ಲ” ಎಂದು ಸುಮುಖ ತಲೆಯ ಮೇಲೆ ಕೈ ಇಟ್ಟುಕೊಂಡ.
ಅಮೃತಳಿಗೂ ಈ ಒಗಟನ್ನು ಬಿಡಿಸಲಾಗಲಿಲ್ಲ. ಅವನ ಮಕ್ಕಳೂ ಅವಳಿಗೆ ಪರಿಚಿತ. ಮಗಳಾಗಲೇ ದೊಡ್ಡವಳಾಗಿ ಸ್ವತಂತ್ರ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವ ಹಂತ. ಜತೆಗೆ ಬಹಳ ನಚ್ಚು ಅವಳು. ಮನೆ ಕ್ಲೀನಾಗಿರಬೇಕು. ಅಡುಗೆ ಶುಚಿ-ರುಚಿಯಾಗಿರಬೇಕು. ಎಲ್ಲವೂ ತನ್ನ ಇಷ್ಟದ ರೀತಿಯಲ್ಲೇ ನಡೆಯಬೇಕು ಎನ್ನುವ ಛಲ. ಮಗಳ ಈ ಸ್ವಭಾವವೇ ಸುಮುಖನಿಗೆ ಬಹು ಕಿರಿಕಿರಿಯೆನಿಸಿದ್ದು. ಹಾಗೆ ನೋಡಿದರೆ ಮಗನ ಕಾರುಬಾರು ಏನಿಲ್ಲ. ಅವನೂ ದೊಡ್ಡವನಾಗಿದ್ದ. ಎಂಟನೆಯ ಕ್ಲಾಸ್. ತನ್ನ ಕೆಲಸವನ್ನೆಲ್ಲ ತಾನೇ ಮಾಡಿಕೊಳ್ಳುವಷ್ಟು ಸ್ವತಂತ್ರನಾಗಿದ್ದ. ಆದರೆ ತಾಯಿ ಸತ್ತಾಗಿನಿಂದ ಬಹು ಮಂಕಾಗಿ ಹೋಗಿದ್ದ.
ಆಫೀಸಿನಿಂದ ಹಿಂತಿರುಗಿ ಬಂದೊಡನೆ ಅಮೃತಾ, ವ್ಯಾನಿಟಿ ಬ್ಯಾಗ್‍ನ್ನು ಮೇಜಿನ ಮೇಲೆಸೆದು, ತಣ್ಣಗೆ ಮುಖ ತೊಳೆದುಕೊಂಡು ಬಂದು ಕುಳಿತ ತತ್‍ಕ್ಷಣ ವನಜಮ್ಮ ಬಿಸಿ ಬಿಸಿ ಹಬೆಯಾಡುವ ಕಾಫಿಯ ಲೋಟವನ್ನು ತಂದು ಅವಳ ಕೈಗಿತ್ತರು.
ಅಮೃತಾ ಇನ್ನೂ ಒಂದು ಗುಟುಕು ಕಾಫಿ ಹೀರಿದ್ದಳೋ ಇಲ್ಲವೋ, ಆಕೆ-
“ಅದೇ ನಿಮ್ಮ ಆಫೀಸರ್ ಮನೆ ವಿಷ್ಯ ಏನಾಯ್ತೇ? ಯಾರಾದ್ರೂ ಅಡುಗೆಯೋರು ಅಡ್ಜಸ್ಟ್ ಆದ್ರಾ?” ಎಂದು ಕುತೂಹಲದಿಂದ ಅವಳ ಹತ್ತಿರಕ್ಕೆ ಕುರ್ಚಿ ಎಳೆದುಕೊಂಡು ಕುಳಿತರು.
ಅಮೃತಾ ಒಂದು ಗಳಿಗೆ ಏನೂ ಉತ್ತರಿಸಲಿಲ್ಲ. ದೊಡ್ಡ ನಿಡುಸುಯ್ಲು.
ನಿಧಾನವಾಗಿ ಅಂದಳು. “ಪಾಪ, ಅವರ ಪಾಡು ನೋಡಲಿಕ್ಕಾಗಲ್ಲಮ್ಮ …ದುಡ್ಡೂ ಕಾಸಿಗೆ ಏನೂ ಕೊರತೆಯಿರದಿದ್ರೂ ಯಾರೂ ಅಂಥ ಆಪ್ತ ಬಂಧು- ಬಳಗ-ಸಹಾಯಕರಿಲ್ಲ… ಹೊಟೇಲು ಊಟ ಮೈಗಾಗಲ್ಲ… ಮೊನ್ನೆ ತಾನೇ ಅವರ ಮಗ ಪುಡ್ ಇನ್‍ಫೆಕ್ಷನ್‍ನಿಂದ ಎರಡು ದಿನ ನರ್ಸಿಂಗ್ ಹೋಮ್ ಸೇರಿದ್ದ’
ವನಜಮ್ಮನ ಮೊಗ ದೀರ್ಘಾಲೋಚನೆಯಿಂದ ಮಗ್ನವಾಯಿತು. ಸ್ವಲ್ಪ ಹೊತ್ತು ಬಿಟ್ಟು ನುಡಿದರು.
“ಇದಕ್ಕೆಲ್ಲ ಒಂದೇ ಮದ್ದು ಕಣೆ ಅಮೃತಾ…ಆತ ಇನ್ನೊಂದು ಮದುವೆಯಾಗೋದು. ಒಂದು ಹೆಂಗಸೂಂತ ಆ ಮನೆಗೆ ಬಂದುಬಿಟ್ರೆ ಎಲ್ಲಾ ಸರಿಹೋಗುತ್ತೆ”
ಅಮೃತಳಿಗೂ ಇದೊಂದೇ ಪರಿಹಾರ ಉಳಿದಿರೋದು ಅನಿಸಿ, ತಾಯಿಯ ಮಾತನ್ನು ಬೆಂಬಲಿಸಿ ತಲೆಯಾಡಿಸಿದಳು.
ಎರಡು-ಮೂರು ತಿಂಗಳು, ಅವಳು ಸುಮುಖನಲ್ಲಿ ಈ ಬಗ್ಗೆ ಏನೂ ಪ್ರಸ್ತಾಪಿಸದೆ, ಒಂದು ದಿನ ಸರಿಯಾದ ಗಳಿಗೆ ನೋಡಿ ತನ್ನ ಸಲಹೆಯನ್ನು ಅವನಲ್ಲಿ ಉಸುರಿದಳು.
ಅದನ್ನು ಕೇಳಿದವನೇ ಸುಮುಖ ಹೌಹಾರಿದ!!!..
“ಸದ್ಯ! ನಾನೀ ಬಗ್ಗೆ ಕನಸು ಮನಸ್ಸಿನಲ್ಲೂ ಯೋಚ್ನೆ ಮಾಡಿಲ್ಲ ಅಮೃತಾ. ಅವಳು ಸತ್ತು ಆಗಲೇ ವರ್ಷಕ್ಕೆ ಬಂತು… ಈಗೀಗ ನನ್ನ ಬಂಧು-ಬಳಗದವರೆಲ್ಲ ನನ್ನ ಹತ್ತಿರ ಬಂದು ಮೆಲ್ಲನೆ ಈ ವಿಷ್ಯ ಪ್ರಸ್ತಾಪ ಮಾಡಕ್ಕೆ ನೋಡಿದರು ನೋಡು, ಚೆನ್ನಾಗಿ ರೇಗಾಡಿಬಿಟ್ಟೆ …ಯಾರೊಬ್ರೂ ನನ್ನ ಮನಃಸ್ಥಿತೀನ ಅರ್ಥಾನೇ ಮಾಡಿಕೊಳ್ತಿಲ್ಲ’’
ವಿಷಾದದ ದನಿ ಗಂಟಲಾಳದಲ್ಲೇ ಸುಳಿಗಟ್ಟಿತು.
ಅಮೃತಳ ಮುಖ ಪೆಚ್ಚಾಯ್ತು. ‘ಐ ಆಮ್ ಸಾರಿ ಸಾರ್…ನಾನೂ ಈ ದಿನ ಆ ಸಾಮಾನ್ಯರಲ್ಲಿ ಒಬ್ಬ ಸಾಮಾನ್ಯಳಾಗಿ ಬಿಟ್ಟೆ …ಏನೋ ನಮ್ಮ ತಾಯಿ ಹೀಗಂದ್ರು… ಅವರು ಹಳೇ ಕಾಲದೋರು’
“ಪ್ರತಿಯೊಂದಕ್ಕೂ ಒಂದು ಕಾರಣ- ಹಿನ್ನೆಲೆ ಇರತ್ತಲ್ವಾ…? ನಮ್ಮ ಮನಸ್ಸು ಸಿದ್ಧವಾಗದೇ ಇರೋ ಕೆಲಸಕ್ಕೆ ನಾವು ಮುಂದಡಿಯಿಡೋದು ಹೇಗೆ ಅಮೃತಾ?”
ಅಮೃತಾ ಮೌನವಾಗಿಯೇ ಇದ್ದಳು.
“ಉದಾಹರಣೆಗೆ ನಿಮ್ಮನ್ನೇ ತೊಗೊಳ್ಳಿ, ನೀವು ಇಷ್ಟು ವರ್ಷಗಳಾದ್ರೂ ಮದುವೆಯಾಗಿಲ್ಲ … ಅದಕ್ಕೆ ಕಾರಣ ಕೇಳಕ್ಕಾಗತ್ತಾ …? ಮದುವೆ ಮಾಡ್ಕೊಳ್ಳಿ ಅಂತ ನಾನೆಂದಾದ್ರೂ ನಿಮಗೆ ಸಲಹೆ ಕೊಟ್ಟಿದ್ದೀನಾ?”
ಸುಮುಖನ ಮಾತುಗಳೇಕೋ ತುಂಬ ಹರಿತ ಅನಿಸಿ ಅಮೃತಾ ಥಟ್ಟನೆ ಜಾಗ ಖಾಲಿ ಮಾಡಿದಳು.
ಅವನು ಕುಕ್ಕಿದ ಪ್ರಶ್ನೆ ಅವಳೆದೆ ಬಗೆಯತೊಡಗಿತು.
ಅಮೃತಾ ಅವಿವಾಹಿತಳಾಗಿ ಉಳಿಯಲು ಅಂಥ ಬಲವಾದ ಕಾರಣವೇನಿರಲಿಲ್ಲ. ಇಪ್ಪತ್ತು –ಇಪ್ಪತ್ತೈದರ ವಯಸ್ಸಿನಲ್ಲಿ ಅವಳ ಮದುವೆಯ ಪ್ರಶ್ನೆ ಏಳುವಷ್ಟರಲ್ಲಿ ಅವಳ ತಂದೆ ತೀರಿಕೊಂಡಿದ್ದರು. ಮನೆಯಲ್ಲಿ ಹಿರಿಯಕ್ಕ ಎರಡನೆಯ ಬಾಣಂತಿ. ಕಿರಿಯಕ್ಕನ ಮದುವೆಯ ಸಾಲ ಇನ್ನೂ ತೀರಿರಲಿಲ್ಲ. ಈ ಹೊರೆಗಳ ಮಧ್ಯೆ ತಾನೂ ಹೊರೆಯಾಗಲಿಚ್ಛಿಸದ ಅಮೃತಾ ಈಗ ಸದ್ಯಕ್ಕೆ ತನಗೆ ಮದುವೆ ಬೇಡ ಎಂದು ತನ್ನ ಮದುವೆಯನ್ನು ಮುಂದಕ್ಕೆ ಹಾಕುತ್ತ ಬಂದಿದ್ದಳು. ಕೆಲಸ ಮಾಡಿ ನಾಲ್ಕು ಕಾಸು ಕೂಡಿ ಹಾಕಿಕೊಳ್ಳೋಣ ಎಂಬ ಇಚ್ಛೆಯೂ ಇದಕ್ಕೆ ಬೆಂಬಲವಾಗಿತ್ತು.
ಈಗ ಕೈತುಂಬ ಸಂಬಳ, ಸಾಲ-ಗೀಲ ಇಲ್ಲ. ತಾಯಿ-ಮಗಳ ಚಿಕ್ಕ ಸಂಸಾರ.. ಈ ಬದುಕೇ ಚೆನ್ನಾಗಿದೆ ಎಂದವಳಿಗೆ ಅನಿಸತೊಡಗಿದಾಗ ಮದುವೆಯ ಅಂಕದ ಅವಶ್ಯಕತೆ ಅವಳಿಗೆ ಕಾಣಲಿಲ್ಲ. ಅದೂ ಅಲ್ಲದೆ ಮೂವತ್ತು ದಾಟಿರುವ ತನ್ನ ಕೈಹಿಡಿಯಲು ತಯಾರಾಗುವ ಗಂಡಿನ ಅಪೇಕ್ಷೆ ಅವಳಿಗೆ ತಿಳಿಯದ್ದೇನಲ್ಲ. ಹಾಗೇ ಅವನ ಕಣ್ಣು ತನ್ನ ಸ್ವಂತ ಮನೆ-ಸಂಬಳದ ಮೇಲೆ ಇರದಿದ್ದೀತೇ ಎಂಬುದೂ ಅವಳಿಗರಿವಾಗಿತ್ತು. ಈ ಆಲೋಚನೆಗಳ ಕಡೆದಾಟದಲ್ಲಿ ಅವಳಿಗೆ ‘ಮದುವೆ’ ಎನ್ನುವುದು ಅಂಥ ಆಕರ್ಷಣೀಯವಾಗಿಯಾಗಲಿ ಅನಿವಾರ್ಯವೆಂದಾಗಲೀ ಕಂಡುಬರಲಿಲ್ಲ. ತಾನು ಮದುವೆಯಾಗದ್ರಿದೆ ಯಾರನ್ನು ಕೆಡಿಸಿತು? ಇದರಿಂದ ಏನಂಥ ಲಾಭ? ದೇಶಕ್ಕೆ ಹೊರೆಯಷ್ಟೇ … ತನ್ನಿಂದ ಯಾರ ಬಾಳಾದರೂ ಹಸನಾಗುವ ಸಂದರ್ಭ ಬಂದಾಗ ಈ ಬಗ್ಗೆ ಯೋಚಿಸಿದರಾಯ್ತು ಎಂಬ ಧೋರಣೆಯಲ್ಲಿ ಅಮೃತಾ ತನ್ನ ಮದುವೆ ಬಗ್ಗೆ ಉದಾಸೀನ ತಳೆದಿದ್ದಳೇ ಹೊರತು, ಅವಳು ಮದುವೆಯಾಗಲೇ ಬಾರದೆಂದು ಭೀಷ್ಮ ಶಪಥವನ್ನೇನು ಮಾಡಿರಲಿಲ್ಲ.
ಸುಮುಖನ ಗುಂಗಿನಲ್ಲಿದ್ದ ವನಜಮ್ಮ ಮಗಳಿಗೆ ಏನೋ ಹೇಳಲು ಮುಂದೆ ಬಾಗಿದವರು, ಅವಳ ಮುಖಭಾವ ಗಮನಿಸಿ ಹೇಳುವ ಧೈರ್ಯವಾಗದೇ ತಟಕ್ಕನೆ ತಮ್ಮ ಮಾತನ್ನು ನುಂಗಿಕೊಂಡು ಒಳನಡೆದರು.
ಆಫೀಸಿನ ಸಹೋದ್ಯೋಗಿಗಳೆಲ್ಲ ಅಮೃತಳಿಗೆ ದುಂಬಾಲು ಬಿದ್ದಿದ್ದರು. “ಮೇಡಮ್, ಸಾಹೇಬ್ರು ನಿಮ್ಮ ಹತ್ರ ಫ್ರೆಂಡ್ಲಿಯಾಗಿದ್ದಾರೆ… ಹೇಗಾದ್ರೂ ಮಾಡಿ ಅವರನ್ನು ಮರುಮದುವೆಗೆ ಒಪ್ಪಿಸಿ’
ಅಮೃತಳ ಮಾತಿನ ಜಾಡನ್ನರಿತು ಸುಮುಖ- “ನನಗೆ ಬೆಳೆದ ಮಕ್ಕಳಿದ್ದಾರೆ …ನನಗ್ಯಾರು ಹೆಣ್ಣುಕೊಡ್ತಾರೆ ಈ ವಯಸ್ನಲ್ಲಿ …ಬಿಡಿ ಈ ಮಾತು, ಇದು ಆಗಿಹೋಗೋದಲ್ಲ” ಎಂದವನು ಪೆಚ್ಚಾಗಿ ನಕ್ಕ.
“ಅಲ್ಲಾ ಸಾರ್, ನಲವತ್ತೈದು ಅಂಥ ಒಂದು ದೊಡ್ಡ ವಯಸ್ಸೇ…?! ಒಳ್ಳೆಯ ಪೊಸಿಷನ್‍ನಲ್ಲಿದ್ದೀರಾ…ಸ್ವಂತ ಮನೆ, ಕಾರು ಆಸ್ತಿ-ಪಾಸ್ತಿ ಎಲ್ಲ ಇರೋ ನೀವೇ ಹೀಗಂತ ಯೋಚ್ನೆ ಮಾಡಿದ್ರೆ ಹೇಗೆ? ನೀವು ಹ್ಞೂಂ ಅನ್ನಿ… ಎಲ್ಲಾ ಸಮಸ್ಯೇನೂ ಪರಿಹಾರವಾಗುತ್ತೆ”
-ಎಂದಳು ಅಮೃತಾ ಹಿರಿಯಕ್ಕನ ಮುಖಭಾವ ತೋರಿ.
ಸುಮುಖ ಇದಕ್ಕೆ ‘ಹ್ಞೂಂ’ ಎನ್ನಲು ತಿಂಗಳೇ ಹಿಡಿದರೂ ಮತ್ತೊಂದು ಕಗ್ಗಂಟನ್ನು ಅವಳ ಮುಂದೆ ಹರವಿದ.
“ನನ್ನದಿರಲಿ, ನನ್ನ ಮಕ್ಕಳಿಗೆ ತಾಯಿಯೊಬ್ಬಳ ಅವಶ್ಯಕತೆ ಇದೆಯೆನಿಸಿದರೂ ನನ್ನ ಈ ನಡುಜೀವನದಲ್ಲಿ ಬಂದವಳು ಈ ಮನೆಗೆ ಹೊಂದಕೊಳ್ತಾಳೆ ಅನ್ತೀರಾ ಅಮೃತಾ?! ಅವಳು ಹೊಂದಿಕೊಂಡ್ರೂ ನನ್ನ ಮಗಳು ಈ ಹಂತದಲ್ಲಿ ಅಪರಿಚಿತ ಹೆಂಗಸೊಬ್ಬಳನ್ನು ತಾಯಿಸ್ಥಾನದಲ್ಲಿ ಸ್ವೀಕರಿಸುತ್ತಾಳೆಯೇ?…ನೋ…ಐ……ಡೌಟ್…..ನನಗೇಕೋ ಭಯವಾಗ್ತಿದೆ ಅಮೃತಾ”
“ಧೈರ್ಯವಾಗಿರಿ… ಎಲ್ಲ ಸರಿಹೋಗುತ್ತೆ, ಹೊಂದಿಕೆ ಅನ್ನೋದೇ ಹಾಗೇ, ಎಲ್ಲಾ ತಾನೇ ತಾನಾಗಿ ಆಗೋದು” ಎಂದು ಅಮೃತಾ ಸಮಾಧಾನ ಹೇಳಿದರೂ ಸುಮುಖನ ಮುಖದಲ್ಲಿ ನೆರಿಗೆಗಳು ಸಡಿಲವಾಗಲಿಲ್ಲ.
ತಿಂಗಳು ಬಿಟ್ಟು ಅಮೃತಾ ಮತ್ತೆ ಅವನಲ್ಲಿ ಅದೇ ವಿಷಯವನ್ನು ಕೆದಕಿದಳು.
“ನಮ್ಮ ಮನೆಗೆ ಸರಿಹೊಂದೋಂಥ ಹುಡುಗಿ ಸಿಗ್ತಾಳೆ ಅಂತೀರಾ ಅಮೃತಾ?”
ಸುಮುಖನ ಕಂಗಳಲ್ಲಿ ಆಶಾಭಾವ ಫಳಫಳ!!
“ಹುಡುಗಿ?!! ಹುಡುಗಿಯಲ್ಲದಿದ್ರೆ ಹೆಂಗಸಂತೂ ಸಿಕ್ಕೇ ಸಿಗ್ತಾಳೆ. ನನ್ನದೊಂದು ಸಲಹೆ ಸರ್, ತಾವು ತಪ್ಪು ತಿಳ್ಕೊಳ್ದಿದ್ರೆ …ಹೇಗೂ ನೀವೂ ಜೀವನದಲ್ಲಿ ನೊಂದಿದೀರಾ, ಆದ್ದರಿಂದ ನಿಮ್ಮಂತೆಯೇ ನೊಂದ ಒಬ್ಬ ಅಭಾಗಿನಿಯನ್ನು ಅಂದ್ರೆ ಒಬ್ಬ ವಿಧವೆಯನ್ನೋ ವಿಚ್ಛೇದನ ಹೊಂದಿದೋಳನ್ನ ಮದುವೆಯಾದ್ರೆ ನೀವು ಅವಳಿಗೂ ಒಂದು ಬಾಳು ಕೊಟ್ಟ ಹಾಗೆ ಆಗುತ್ತೆ”
ಅಮೃತಾ ಮೆಲ್ಲನುಸುರಿದಳು ಹಿಂಜರಿಕೆಯಿಂದ . ತತ್‍ಕ್ಷಣ ಅವನ ಮೊಗದಲ್ಲಿ ಆಲೋಚನೆಯ ಘಾಟು ತುಂಬಿಕೊಂಡಿತು. ಮುಖ ಕಿವುಚಿಕೊಂಡಿತು.
“ನನ್ನ ಮನಸ್ಯಾಕೋ ಇದನ್ನು ಒಪ್ತಿಲ್ಲ ಅಮೃತಾ…ನನಗ್ಯಾಕೋ ಇದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗ್ತಾ ಇಲ್ಲ… ಅವಿವಾಹಿತೆ, ಕನ್ಯೆಯಾಗಿದ್ರೆ ಬೆಟರ್ರು” ಎಂದ ತಲೆತಗ್ಗಿಸಿ.
ಅಮೃತಳ ಮನಸ್ಸು ಕಚಕ್ ಎಂದಿತು. ಆದರೂ ಅವಳದನ್ನು ಮೇಲೆ ತೋರಗೊಡದೆ,
“ಆಲ್ ರೈಟ್..ನನ್ನ ಫ್ರೆಂಡೊಬ್ಬಳು ಸರಕಾರಿ ಇಲಾಖೆಯೊಂದರಲ್ಲಿ ಟೈಪಿಸ್ಟ್ ಆಗಿದ್ದಾಳೆ..ಅವಳೂ ನಿಮ್ಮ ಜನವೇ, ಒಳಪಂಗಡವೂ ಬೇರೆಯಲ್ಲ, ವಯಸ್ಸು ನಲವತ್ತೆರಡಾಗಿದೆ …ಮಲತಾಯಿ ಕಾಟದಿಂದ ಮದುವೆ ಮುಂದೂಡುತ್ತಾ ಬಂದರೂ ನೋಡಕ್ಕಂತೂ ಫಸ್ಟ್ ಕ್ಲಾಸಾಗಿದ್ದಾಳೆ…ನೀವು ಹ್ಞೂಂ ಅಂದ್ರೆ ನಾಳೇನೇ ಅವಳನ್ನು ಇಲ್ಲಿಗೆ ಕರೆಸ್ತೀನಿ” ಎಂದು ಗಂಭೀರವಾಗಿ ನುಡಿದು ಪ್ರತಿಕ್ರಿಯೆಗಾಗಿ ಅವನ ಮುಖ ನೋಡಿದಳು.
ಸುಮುಖ ಒಂದು ನಿಮಿಷ ಮೌನವಾದ. “ಅಮೃತಾ, ವಯಸ್ಸು ಸ್ವಲ್ಪ ಜಾಸ್ತಿ ಅನ್ನಿಸಲ್ವಾ…? ನನಗೂ ನನ್ನ ಹೆಂಡ್ತಿಗೂ ಹತ್ತು ವರ್ಷ ವ್ಯತ್ಯಾಸವಿತ್ತು”
ಥಟ್ಟನೆ ಮೇಲೆದ್ದ ಅಮೃತಾ ಅವನನ್ನೇ ನುಂಗುವಂತೆ ನೋಡಿ “ನಾ ಇನ್ ಬರ್ತೀನ್ ಸಾರ್…ಕೆಲಸ ಇದೆ” ಎಂದವಳೇ ಬಿರುಗಾಳಿಯಂತೆ ಅವನ ಕೋಣೆಯಿಂದ ಈಚೆ ಬಂದಳು.
ಅವಳ ಮೂಗಿನ ಹೊಳ್ಳೆಗಳು ಸಿಟ್ಟಿನಿಂದ ಅರಳಿಕೊಂಡಿದ್ದವು. ಸೆಕೆಂಡ್ ಹ್ಯಾಂಡ್ ಆದ್ರೂ ಭಾರೀ ಸೆಲೆಕ್ಷನ್ನು …ಅಸಾಧ್ಯ ನಸನಸಿ” ಎಂದು ತನ್ನೊಳಗೇ ಗೊಣಗಿಕೊಂಡಳು.
ಇದೇ ಕೋಪದಲ್ಲಿ ಅಮೃತಾ ಒಂದು ವಾರ ಅವನ ಕೋಣೆಯ ಕಡೆ ತಲೆ ಹಾಕಲಿಲ್ಲ.
ಇದಕ್ಕಿದ್ದ ಹಾಗೆ ಸುಮುಖ ಎರಡು ದಿನ ಆಫೀಸಿಗೆ ಗೈರುಹಾಜರಾದಾಗ ಅವಳ ಮನಸ್ಸು ತಡೆಯಲಿಲ್ಲ. ಅವನ ಮನೆಗೆ ಪೋನ್ ಮಾಡಿದಾಗ ವಿಷಯ ತಿಳಿದು, ತತ್‍ಕ್ಷಣ ಅವಳು ಅವನ ಮನೆಗೆ ಧಾವಿಸಿದಳು. ಅವನ ಮಗಳಿಗೆ ವಿಪರೀತ ಜ್ವರ. ಅವನ ಮುಗ್ಧ ಮಕ್ಕಳ ಮುಖಗಳನ್ನು ದಿಟ್ಟಿಸುವಾಗ ಅವಳ ಕರುಳು ಚುರ್ರೆಂದಿತು.
ಆ ರಾತ್ರಿಯಿಡೀ ಅಮೃತಳಿಗೆ ಅರೆಬರೆ ನಿದ್ದೆ, ಬರೀ ಹೊರಳಾಟ. ಕಣ್ಣುಚ್ಚಿದರೆ ಸುಮುಖನ ಮಕ್ಕಳ ಅಸಹಾಯ ನೋಟವೇ ಕಣ್ತುಂಬ. ತಾಯಿಯ ಆರೈಕೆಯಲ್ಲಿ ಅರಳಬೇಕಿದ್ದ ಆ ಮಕ್ಕಳ ಬಡಕಲು ದೇಹ, ಬತ್ತಿದ ಮುಖಭಾವ ನೆನೆಸಿಕೊಂಡು ಅವಳ ಕರುಳೊಳಗೆ ಚೂರಿ ಆಡಿಸಿದಂತಾಯ್ತು.
ಬೆಳಗಾಗುವುದರಲ್ಲಿ ಅಮೃತಾ ಒಂದು ನಿರ್ಧಾರಕ್ಕೆ ಬಂದಿದ್ದಳು. ಆ ಮುಗ್ಧ ಮಕ್ಕಳ ಬಾಳನ್ನು ಬೆಳಗುವ ಹಣತೆ ತಾನಾಗಬೇಕೆಂದು ತೀರ್ಮಾನಿಸಿದ್ದಳು.
ಆ ಸಂಜೆ ಅಮೃತಾ ತಾನೇ ಸುಮುಖನನ್ನು ಕಾಫಿಗೆ ಆಹ್ವಾನಿಸಿ ರೆಸ್ಟೋರೆಂಟಿಗೆ ಕರೆದೊಯ್ದಿದ್ದಳು.
“ನಿಮ್ಮ ಮಗಳು ಈಗ ಹೇಗಿದ್ದಾಳೆ? ಜ್ವರ ಬಿಡ್ತಾ ಸರ್?” ಅಮೃತಾ ಕಳಕಳಿಯಿಂದ ಅವನನ್ನು ಕೇಳಿದ ಮೊದಲ ಪ್ರಶ್ನೆಯಿದು.
“ಪರವಾಗಿಲ್ಲ …ಶೀ ಈಸ್ ಬೆಟರ್ ನೌ…ರೆಸ್ಟ್ ಬೇಕೂಂತಾರೆ ಡಾಕ್ಟ್ರು …ಆದ್ರೆ ಮನೇಲೇ ಇದ್ದು ಅವಳನ್ನು ನೋಡ್ಕೊಳ್ಳೋರು ಯಾರು?…’ ಗವಿಯಾಳದಿಂದ ಬಂದಂತಿತ್ತು ಅವನ ಧ್ವನಿ.
“ಸರ್ ನಿಮ್ಮ ಸ್ಫೆಸಿಫಿಕೇಶನ್‍ನಂಥ ಹುಡುಗಿ ಒಬ್ಬಳು ನಿಮ್ಮ ಬಾಳ ಸಂಗಾತಿಯಾಗಲು ರೆಡಿಯಾಗಿದ್ದಾಳೆ. ನನ್ನ ಕ್ಲೋಸ್ ಫ್ರೆಂಡು…ವಯಸ್ಸು ಮೂವತ್ತೈದು ಗುಡ್ ಲುಕಿಂಗ್… ನಿಮ್ಮ ಮಕ್ಕಳನ್ನು ತನ್ನ ಮಕ್ಕಳಂತೆಯೇ ನೋಡ್ಕೊಳ್ಳೋ ವಿಶಾಲ ಮನಸ್ಸಿದೆ, ಅವಳಿಗೆ ಮಕ್ಳು ಬೇಡ ಅಂದ್ರೂ ಒಪ್ತಾಳೆ. ಜತೆಗೆ ಅವಳು ಒಳ್ಳೆಯ ಕೆಲಸದಲ್ಲೂ ಇದ್ದಾಳೆ. ನೀವು ಬೇಡ ಅಂದ್ರೆ ಕೆಲಸ ಬಿಡಕ್ಕೂ ಸಿದ್ಧ”
ಅವಳ ಮಾತನ್ನು ಅರ್ಧಕ್ಕೆ ತಡೆಯುತ್ತ ಸುಮುಖ ಮುಖ ಹಿಂಡಿ – “ಫ್ಲೀಸ್ ಅಮೃತಾ ಈ ವಿಷ್ಯ ಇನ್ನು ಸಾಕು…ನಾನು ಮರುಮದುವೆಯಾಗೋ ವಿಷ್ಯನ ಈಗ ಮನಸ್ನಿನಿಂದ ತೆಗೆದು ಹಾಕಿದ್ದೀನಿ…ನಾನು ಮನೇಲಿ ಪ್ರತಿನಿತ್ಯ ನಡೆಯೋ ಕದನಾನ ಎದುರಿಸಲು ಸಿದ್ಧನಿಲ್ಲ…ನನ್ನ ಮಗಳು ಖಂಡಿತ ಅವಳನ್ನು ಒಪ್ಪಿಕೊಳ್ಳಲ್ಲ, ಮನೆ ರಣರಂಗವಾಗೋದು ಷೂರ್…ಇಬ್ಬರು ಹೆಂಗಸರ ಮಧ್ಯೆ ಕಾದಾಟ…ಓಹ್…ನನ್ಕೈಲಾಗಲ್ಲ…ಓ.ಕೆ. ನಾನು ಈಗಿರೋ ಸಮಸ್ಯೇನ ಹೇಗೋ ಸುಧಾರಿಸಿಕೊಳ್ತೀನಿ…ಪರವಾಗಿಲ್ಲ…ನನಗೆ ಇನ್ನೊಂದು ಮದುವೆಯಂತೂ ಬೇಡವೇ ಬೇಡ.”ಎಂದಾಗ ಅಮೃತಾ ಅವನನ್ನೇ ವಿಸ್ಮಯದಿಂದ ದಿಟ್ಟಿಸಿದಳು.
‘ನಿಮಗೇನಂಥ ವಯಸ್ಸು…ನಿಮಗೂ ಆಸೆ ಅಕ್ಕರತೆ ಇಲ್ವೇ? ಹುಳಿ, ಉಪ್ಪು, ಖಾರ ತಿನ್ನೋ ದೇಹ ಕೇಳತ್ಯೇ…ನಿಮ್ಮ ದೇಹದ ಅಗತ್ಯಕ್ಕಾದರೂ ನೀವು ಇನ್ನೊಂದು ಮದುವೇ ಆಗಲೇ ಬೇಕು ಅಂತಾರೆ ಜನ… ನಿಜ…ಒಪ್ಪಿಕೊಳ್ತೀನಿ, ನನಗೂ ಸೆಕ್ಸ್ ಬೇಕು…ಬೇಕೇ ಬೇಕು ಅನ್ನಿಸುತ್ತೆ… ಇಷ್ಟಕ್ಕೋಸ್ಕರ ಇನ್ನೊಬ್ಬಳ್ಳನ್ನು ಕಟ್ಕೊಂಡು ದೊಡ್ಡ ಕಮಿಟ್‍ಮೆಂಟ್‍ಗೆ ಕೊರಳು ಕೊಡಲಾರೆ… ಮದುವೆಯಾಗೋಂಥ ತಪ್ಪನ್ನು ಮಾತ್ರ ಮಾಡಲಾರೆ… ಅಮೃತಾ…ನೋ…ಅಷ್ಟೂ ಬೇಕೆನಿಸಿದರೆ ನನ್ನ ದೇಹದ ಅಗತ್ಯ ಪೂರೈಸಿಕೊಳ್ಳಕ್ಕೆ ಹೊರಗೆ ಯಾವುದಾದ್ರೂ ಏರ್ಪಾಟು ಮಾಡ್ಕೋಬೇಕಷ್ಟೇ… ಅದೇ ನೀವು ನಿಮ್ಮ ಫ್ರೆಂಡ್ ವಿಚಾರ ಅವತ್ತು ಹೇಳಿದಿರಲ್ಲ…ಅಂಥೋರು ಯಾರನ್ನಾದರೂ ಅಡ್ಜೆಸ್ಟ್ ಮಾಡ್ಕೊಂಡು ಪರ್ಮನೆಂಟಾಗಿ ಏನಾದ್ರೂ ಸಂಬಂಧ ಇಟ್ಕೋಬೇಕಷ್ಟೇ…”
ಸುಮುಖನ ಬಾಯಿಯಿಂದ ಹೊರಬರುತ್ತಿದ್ದ ಮಾತುಗಳನ್ನು ಕೇಳುತ್ತ ಕೇಳುತ್ತ ಅಮೃತಳ ಮೈ ಉರಿದು ಹೋಯಿತು. ಮುಖದಲ್ಲಿ ಬೆಂಕಿಯ ಜ್ವಾಲೆ ಭುಗಭುಗನೆಂದಿತು. ಕಂಗಳು ಕಿಡಿಯನ್ನೆರಚುತ್ತಿದ್ದವು. ಅವನ ಸ್ವಾರ್ಥದ ದುರ್ಮುಖದ ದರ್ಶನವಾಗುತ್ತಿದ್ದಂತೆ ತಟ್ಟನೆ ಹಲ್ಲುಮುಡಿ ಕಚ್ಚಿ ಮೇಲೆದ್ದು ನಿಂತ ಅವಳು ಅವನನ್ನು ಸುಟ್ಟು ಬೂದಿ ಮಾಡುವಂತೆ ದುರದುರನೆ ದಿಟ್ಟಿಸಿದಳು.
ಕೋಪದಿಂದ ಬಿರಿಯುತ್ತಿದ್ದ ತನ್ನ ತುಟಿಗಳನ್ನು ಒತ್ತಾಯಪೂರ್ವಕವಾಗಿ ಒತ್ತಿಕೊಂಡು ಬಿರಬಿರನೆ ಅಲ್ಲಿಂದೆದ್ದು ಹೊರಟ ಅಮೃತಾ ಒಳಗೇ ಗರ್ಜಿಸುತ್ತಿದ್ದಳು:
‘ಯೂ ಡರ್ಟಿ ಡಾಗ್ …ಎಂಥ ಕೀಳು ಮನಸ್ಸಿನ ಸ್ವಾರ್ಥಿಯೋ ನೀನು…ಹೆಣ್ಣುಮಕ್ಕಳೆಂದರೆ ಏನಷ್ಟು ಅಗ್ಗವಾಗಿ ಸಿಕ್ಕಿಬಿಡೋ ಮಾಲು ಅಂದ್ಕೊಂಡ್ಯೇನೋ ಬಡ್ಡಿಮಗನೇ, ನಿನ್ನ ಬಗ್ಗೆ ಯಾರು ತಲೆಕೆಡಿಸಿಕೊಂಡೋರು, ಹೂಂ ದೇಹದ ಅಗತ್ಯತೆಯಂತೆ!…ಥೂ.. ನಿನ್ನಂಥವರು ಎಲ್ಲಿ ಬಿದ್ದು ಸತ್ರೂ ಯಾರೂ ಕೇಳೋರಿಲ್ಲ…ಅಯ್ಯೋ ಪಾಪ ಅನ್ನೋರಿಲ್ಲ’
-ಎಂದು ಮನದಲ್ಲೇ ಭೋರ್ಗರೆಯುತ್ತ, ರಸ್ತೆಯಲ್ಲಿ ಧಡಧಡನೆ ಹೆಜ್ಜೆ ಹಾಕುತ್ತಿದ್ದ ಅಮೃತಳ ಖೇದ ಮನಸ್ಸು ತಾಯಿಯಿಲ್ಲದ ಅವನ ಆ ತಬ್ಬಲಿ ಮಕ್ಕಳಿಗಾಗಿ ತೀವ್ರವಾಗಿ ಮಿಡುಕುತ್ತಿತ್ತು.
***