‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬುದು ಪ್ರಸಿದ್ಧ ಗಾದೆ. ಅದಕ್ಕನ್ವಯವಾಗಿರುವವಳು ಚಿಗುರು ಪ್ರತಿಭೆ ಅಷ್ಟೇ ಅಪಾರ ಭರವಸೆ ಮೂಡಿಸಿರುವ ನೃತ್ಯಗಾರ್ತಿ ಕಾವ್ಯ. ಪುಟ್ಟವಯಸ್ಸಿನಲ್ಲೇ ಉತ್ಸಾಹದಿಂದ ಪ್ರಗತಿಯ ಪಥದಲ್ಲಿ ಮುಂದಡಿಯಿಡುತ್ತಿರುವ ಮಹತ್ವಾಕಾಂಕ್ಷಿ.
ಅಂತರರಾಷ್ಟ್ರೀಯ ಭರತನಾಟ್ಯ ಕಲಾವಿದೆ, ನಾಟಕ-ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಅಭಿನಯಿಸಿರುವಾಕೆ. ಸಂಗೀತ, ಯಕ್ಷಗಾನ, ಜಾನಪದ ನೃತ್ಯಗಳನ್ನು ಬಲ್ಲವಳು. ಚಿತ್ರಕಲೆ, ಛದ್ಮವೇಷ, ಏಕಪಾತ್ರಾಭಿನಯಗಳಲ್ಲಿ ಆಸಕ್ತಿ ಹೊಂದಿದ್ದಾಳೆ.

ಈ ಬಹುಮುಖ ಪ್ರತಿಭೆ ಕಾವ್ಯಳ ಸ್ವಂತಸ್ಥಳ ಸಾಗರ. ತಂದೆ ಗೋಪಿನಾಥರಾವ್, ತಾಯಿ ಸುಜಾತಾ. ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರು. ವಿದ್ಯಾಭ್ಯಾಸವೂ ಇಲ್ಲೇ. ಮಗಳ ನರ್ತನಾಸಕ್ತಿಯನ್ನು ಮೊದಲು ಗುರುತಿಸಿದ ತಾಯಿ ಗುರು ಮೀರಾ ಈಶ್ವರ್ ಅವರಲ್ಲಿ ನಂತರ ಗುರು ರೇವತಿ ಅವರಲ್ಲಿ ನೃತ್ಯ ಕಲಿಯಲು ಸೇರಿಸಿದರು. ಸತತ ಹತ್ತುವರ್ಷಗಳ ನಾಟ್ಯಶಿಕ್ಷಣ. ಆಸಕ್ತಿ-ಬದ್ಧತೆಗಳಿಂದ ಕಲಿಯುತ್ತ ಹೋದಳು. ಭರತನಾಟ್ಯದ ಜ್ಯೂನಿಯರ್, ಸೀನಿಯರ್ ಮತ್ತು ಪ್ರೀ ವಿದ್ವತ್ ಪರೀಕ್ಷೆಗಳಲ್ಲಿ ಕಾವ್ಯ ಉತ್ತಮಾಂಕಗಳಿಂದ ತೇರ್ಗಡೆಯಾದಳು. ಜೊತೆಜೊತೆಗೆ ಶಾಲಾ-ಕಾಲೇಜುಗಳಲ್ಲಿ ನೃತ್ಯಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದುದರಿಂದ ನೃತ್ಯ ಅವಳ ಜೀವನದ ಒಂದು ಭಾಗವಾಗಿಬಿಟ್ಟಿತ್ತು.
ತಾಯಿಯಿಂದಲೇ ಜಾನಪದ ನೃತ್ಯದಲ್ಲಿ ಶಿಕ್ಷಣ. ಸಣ್ಣವಯಸ್ಸಿಗೇ ಕಾವ್ಯಳಿಗೆ ಅನೇಕ ನೃತ್ಯ ಕಾರ್ಯಕ್ರಮಗಳಲ್ಲಿ ನರ್ತಿಸುವ ಅದೃಷ್ಟ ಒಲಿದುಬಂದಿತ್ತು. ಲವಲವಿಕೆಯಿಂದ ಮಾತನಾಡುತ್ತಿದ್ದ ಇವಳಿಗೆ ಬಾಲನಟಿಯಾಗಿ ಚಲನಚಿತ್ರ ಮತ್ತು ನಾಟಕ-ಧಾರಾವಾಹಿಗಳಲ್ಲಿ ಅಭಿನಯಿಸುವ ಅವಕಾಶ ಒದಗಿತ್ತು. ಓದು, ನೃತ್ಯಾಭ್ಯಾಸ ಮತ್ತು ಅಭಿನಯಗಳ ಬಿಡುವಿರದ ದಿನಚರಿಯಲ್ಲಿ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಸಂದರ್ಭಗಳು. ಬಹುಮಾನಗಳ ಸುರಿಮಳೆ, ಜೊತೆಗೆ ಅನೇಕ ಬಾಲಪ್ರಶಸ್ತಿಗಳೂ ಅವಳನ್ನು ಹಿಂಬಾಲಿಸಿ ಬಂದಿದ್ದು ಅವಳ ಅಗ್ಗಳಿಕೆ.
ಹದಿನಾಲ್ಕುವರ್ಷದ ಬಾಲೆ, ವಿದ್ಯುಕ್ತವಾಗಿ ‘ರಂಗಪ್ರವೇಶ’ ನೆರವೇರಿಸಿಕೊಂಡು ರಸಿಕರ ಪ್ರಶಂಸೆ ಪಡೆದಳು. ಬಸವನಗುಡಿಯ ನ್ಯಾಷನಲ್ ಕಾಲೇಜಿನಿಂದ ಬಿಕಾಂ ಪದವೀಧರೆಯಾದಳು. ಜೊತೆಗೆ ಅಲ್ಲೇ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನೂ ಪಡೆದಳು. ಭರತನಾಟ್ಯಾಭ್ಯಾಸಕ್ಕಾಗಿ ಕೇಂದ್ರೀಯ ಸಾಂಸ್ಕೃತಿಕ ಸಂಪನ್ಮೂಲ ಇಲಾಖೆಯ ಶಿಷ್ಯವೇತನಕ್ಕೂ ಭಾಜನಳಾದಳು. ಇದರಿಂದ ಉತ್ತೇಜಿತಳಾದ ಕಾವ್ಯ, ಬೆಂಗಳೂರು ವಿಶ್ವ ವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂ.ಎ. ಪದವಿ ಗಳಿಸಿದಳು. ಇಷ್ಟರಲ್ಲಿ ಅವಳು ನಾಡಿನಾದ್ಯಂತ ನೃತ್ಯ ಪ್ರದರ್ಶನಗಳನ್ನು ನೀಡತೊಡಗಿದ್ದಳು. ಯಕ್ಷಗಾನದ ಹೆಜ್ಜೆಗಳು, ನಾಟಕಾಭಿನಯದ ಬಗ್ಗೆ ಆಕರ್ಷಿತಳಾದ ಕಾವ್ಯ, ಶಂಕರ್ ಬಲ್ಕುದ್ರು ಅವರಲ್ಲಿ ಯಕ್ಷಗಾನ ಕಲಿತು, ದಕ್ಷಯಜ್ಞ, ಶ್ರೀ ಶನೀಶ್ವರ ಮಹಾತ್ಮೆ, ಕನಕಾಂಗಿ ಕಲ್ಯಾಣ, ಚಂದ್ರಾವಳಿ ವಿಲಾಸ ಮತ್ತು ಲವಕುಶ ಪ್ರಸಂಗಗಳಲ್ಲಿ ಅಭಿನಯಿಸಿ ‘ಸೈ’ ಎನಿಸಿಕೊಂಡಳು.
ನೃತ್ಯ ಸಂಯೋಜನೆಯಲ್ಲೂ ಶ್ರಮಿಸಿರುವ ಕಾವ್ಯ, ‘ಹಚ್ಚೇವು ಕನ್ನಡದ ದೀಪ’ ಹಾಡಿಗೆ ವಿಭಿನ್ನವಾಗಿ ನೃತ್ಯ ಸಂಯೋಜಿಸಿ ದೇಶಾದ್ಯಂತ ಪ್ರದರ್ಶನ ನೀಡಿದ ಹೆಮ್ಮೆ ಅವಳದು. ದೆಹಲಿ, ವಾರಣಾಸಿ, ಮುಂಬೈ, ಕೇರಳ, ಆಂಧ್ರ ಪ್ರದೇಶ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರಿನ ವಿವಿಧ ನೃತ್ಯೋತ್ಸವಗಳಲ್ಲಿ ಮಾತ್ರವಲ್ಲದೆ ನಾಡಿನ ಎಲ್ಲ ಪ್ರಮುಖ ದೇವಾಲಯಗಳಲ್ಲಿ ನರ್ತಿಸಿದ್ದಾಳೆ. ದೇಶಾದ್ಯಂತ ನೃತ್ಯ ಪ್ರದರ್ಶನಗಳನ್ನುನೀಡಿರುವುದಲ್ಲದೆ ಇವಳು, ಅಮೆರಿಕಾದ ಅಕ್ಕ ಸಮ್ಮೇಳನ, ದುಬೈ, ಕುವೈತ್,ಸಿಂಗಾಪುರ, ನೇಪಾಳ, ಖಟ್ಮಂಡು,ಅಂಡಮಾನ್ ಮತ್ತು ಮಲೇಶಿಯಾಗಳಲ್ಲಿ ತನ್ನ ನೃತ್ಯಪ್ರತಿಭೆಯನ್ನು ಮೆರೆದಿರುವುದು ವಿಶೇಷ.
ಕಾವ್ಯ ಅಭಿನಯಿಸಿರುವ ಕೆಲ ನಾಟಕಗಳು ಹೀಗಿವೆ: ಸತ್ಯ ಹರಿಶ್ಚಂದ್ರ, ಕೆಂಪೇಗೌಡರ ಸೊಸೆ ಸಿರಿದೇವಿ, ಕೃಷ್ಣ ಸಂಧಾನ ಮತ್ತು ಶ್ರಾವಿಂಧ್ಯ ಮುಂತಾದವು. ಕಿರುತೆರೆ ಧಾರಾವಾಹಿಗಳು- ಸೂರ್ಯವಂಶ, ಸಿಲ್ಲಿ-ಲಲ್ಲಿ, ಮುಂಗಾರಿನ ಕನಸು, ನೀ ನಡೆವ ಹಾದಿಯಲ್ಲಿ, ಮಹಾಯಾನ, ಪಾರ್ವತಿ-ಪರಮೇಶ್ವರ, ದೇವಿ, ಪುನರ್ವಿವಾಹ, ಪಂಚರಂಗಿ ಪಾಂ ಪಾಂ, ವೈಶಾಖ ಮುಂತಾದವು. ಚಲನಚಿತ್ರಗಳು- ಪುಟಾಣಿ ಫೋರ್ಸ್ A2Z, ಶಿವಾನಿ, ಮಂದಾಕಿನಿ, ಚಿಲಿಪಿಲಿ ಹಕ್ಕಿಗಳು ಮತ್ತು ಬೆಟ್ಟದಪುರದ ದಿಟ್ಟರು.

ಕಾವ್ಯಳ ಪ್ರತಿಭೆಗೆ ಸಂದಿರುವ ಬಿರುದು-ಬಾವಲಿಗಳ ನೂರಾರು ಪ್ರಶಸ್ತಿಗಳ ಪಟ್ಟಿ ಅತಿ ದೊಡ್ಡದು. ಮುಖ್ಯವಾದವು- ರಾಜ್ಯದ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ, ಬೆಳ್ಳಿದೀಪ, ನಾಟ್ಯಶ್ರೀ, ನಾಟ್ಯಮಯೂರಿ, ಕರ್ನಾಟಕ ನೃತ್ಯಶ್ರೀ, ಕಾಮಧೇನು, ಸಾಧನಶ್ರೀ, ಕರುನಾಡ ಸಿರಿ, ನಾಟ್ಯ ಶಾರದೆ, ವಿಶ್ವೇಶ್ವರಯ್ಯ ಪ್ರಶಸಿ, ನೃತ್ಯಮಂದಾರ ಮುಂತಾದ ಅನೇಕಾನೇಕ ಪ್ರಶಸ್ತಿಗಳು ಇವಳ ಮುಡಿಗೇರಿವೆ.
*******************