Image default
Dance Reviews

ಉದಯೋನ್ಮುಖ ಕಲಾವಿದೆಯರ ಭರವಸೆಯ ನೃತ್ಯ ಪ್ರದರ್ಶನ

ಇಡೀ ವಿಶ್ವವನ್ನು ‘ಕೊರೋನಾ’ ಆಕ್ರಮಿಸಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಕಲಾವಿದರು ತಮ್ಮ ಸೃಜನಾತ್ಮಕ ಚಟುವಟಿಕೆಗಳ ಪ್ರದರ್ಶನಕ್ಕೆ ಇಂದು ಏನಾದರೊಂದು ದಾರಿ ಹುಡುಕಿಕೊಂಡೇ ಹುಡುಕಿಕೊಳ್ಳುವುದು ಅನಿವಾರ್ಯವಾಗಿದೆ . ವೇದಿಕೆಯ ಮೇಲೆ, ಕಲಾರಸಿಕರ ಸಮ್ಮುಖ ಅನೇಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುವ ಕಲಾವಿದರಿಗೆ ಕಾಲಹರಣ ಮಾಡುತ್ತಾ ಸುಮ್ಮನೆ ಕೂರಲಾಗುವುದಿಲ್ಲ. ಈ ಅನಿವಾರ್ಯ ಪರಿಸ್ಥಿತಿಗೆ ಪರ್ಯಾಯ ಮಾರ್ಗ ಹುಡುಕಿಕೊಂಡ ಒಂದು ಬಗೆ ಎಂದರೆ  ಪ್ರಸ್ತುತ ‘’ ಆನ್ಲೈನ್’’ ನೃತ್ಯ ಪ್ರದರ್ಶನ  ನೀಡುವುದು ಸಾಮಾನ್ಯವಾಗಿದೆ. ಈಚೆಗೆ ಇಂಥ ಅನೇಕ ಕಾರ್ಯಕ್ರಮಗಳು ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ದಿನನಿತ್ಯ ನಡೆಯುತ್ತ ಸಾಗಿದೆ. ಇದರಲ್ಲಿ ವೈಯಕ್ತಿಕ ಮತ್ತು ನೃತ್ಯಶಾಲೆಗಳ ಸಾಮೂಹಿಕ ಪ್ರಯತ್ನಗಳೂ ಸೇರಿವೆ. ಇವುಗಳನ್ನು ಕಲಾರಸಿಕರೂ ಪ್ರೋತ್ಸಾಹಿಸುತ್ತ ಬರುತ್ತಿರುವುದು ಒಂದು ಧನಾತ್ಮಕ ಪ್ರತಿಕ್ರಿಯೆ-ಇದು ಅತ್ಯಂತ ಸ್ವಾಗತಾರ್ಹ.

ಇತ್ತೀಚಿಗೆ ಅಂತರ್ಜಾಲದ ವೇದಿಕೆಯ ಮೇಲೆ ತಮ್ಮ ಕಲಾಪ್ರದರ್ಶನವನ್ನು ‘ನೃತ್ಯ ಸಂಜೀವಿನಿ’ ನೃತ್ಯ ಶಾಲೆಯ  ವಿದ್ಯಾರ್ಥಿನಿಯರು- ನಾಲ್ವರು ಉದಯೋನ್ಮುಖ ಕಲಾವಿದೆಯರಾದ ಕೆ. ಸರಯೂ, ಅಪೇಕ್ಷಾ, ಕೃಷ್ಣಪ್ರಿಯ ಮತ್ತು ಅಖಿಲಾ ಯಶಸ್ವಿಯಾಗಿ ಅಂತರ್ಜಾಲದಲ್ಲಿ ನೀಡಿದರು. ನಾಲ್ವರೂ ಗಂಧರ್ವ ಪ್ರವೇಶಿಕ ಪೂರ್ಣ ಪರೀಕ್ಷೆಯಲ್ಲಿ ಉತ್ತಮಾಂಕಗಳಿಂದ ತೇರ್ಗಡೆ ಹೊಂದಿದ್ದಾರೆ. ಶಾಲೆಯ ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿ ‘ನೃತ್ಯ ಸಂಜೀವಿನಿ’ ಆಯೋಜಿಸಿದ ಎಲ್ಲ ನೃತ್ಯ ಕಾರ್ಯಕ್ರಮಗಳಲ್ಲೂ ಭಾಗವಹಿಸಿ, ಕರ್ನಾಟಕ ಸರ್ಕಾರದ ಜ್ಯೂನಿಯರ್ ನೃತ್ಯ ಪರೀಕ್ಷೆಗಳಲ್ಲೂ ಜಯಶೀಲರಾಗಿ ನೃತ್ಯಾಭ್ಯಾಸವನ್ನು ಗಂಭೀರವಾಗಿ ಸ್ವೀಕರಿಸಿ ಅಭ್ಯಾಸಪಥದಲ್ಲಿ ಸಾಗುತ್ತಿರುವುದು ಸ್ತ್ಯುತಾರ್ಹ.

 ಎರಡು ದಶಕಗಳ ನೃತ್ಯಶಿಕ್ಷಣದ ಅನುಭವವುಳ್ಳ ಫಣಿಮಾಲಾ ಚಂದ್ರಶೇಖರ್ ಉತ್ತಮ ಭರತನಾಟ್ಯ ಕಲಾವಿದೆ ಮತ್ತು ಬದ್ಧತೆಯುಳ್ಳ ನಾಟ್ಯಗುರು ಕೂಡ.’’ನೃತ್ಯ ಸಂಜೀವಿನಿ ಅಕಾಡೆಮಿ’’ ಎಂಬ ತಮ್ಮ ನೃತ್ಯಶಾಲೆಯನ್ನು ಅವರು ಆರಂಭಿಸಿ ದೇಶಾದ್ಯಂತ ಹಲವಾರು ದೇವಾಲಯಗಳಲ್ಲಿ ದೈವೀಕ ನೃತ್ಯಕಾರ್ಯಕ್ರಮಗಳನ್ನು ನೀಡಿದ್ದಾರೆ. ನಾಟ್ಯ ಗಣಪತಿ, ದಶಾವತಾರ, ರುದ್ರ ಸ್ಫಟಿಕಾ, ವಿಷ್ಣು ಕಲಾಪಂ , ಗೋಕುಲ ನಿರ್ಗಮನ  ಮುಂತಾದ ನೃತ್ಯರೂಪಕಗಳನ್ನು ರಂಗದ ಮೇಲೆ ತಂದು ರಸಿಕರ ಮೆಚ್ಚುಗೆ ಗಳಿಸಿದ್ದಾರೆ. ಇವರ ನಾಲ್ಕುಜನ ಶಿಷ್ಯೆಯರು ಸಮರ್ಥ ನಾಟ್ಯಶಿಕ್ಷಣ ಪಡೆದು, ಏಕವ್ಯಕ್ತಿ ಪ್ರದರ್ಶನಗಳನ್ನು ತಮ್ಮದೇ ಆದ ನೃತ್ಯ ಸಂಯೋಜನೆಯ ಪ್ರಯೋಗದೊಂದಿಗೆ ಆತ್ಮವಿಶ್ವಾಸದಿಂದ ಪ್ರದರ್ಶಿಸಿದ್ದು ಸ್ವಾಗತಾರ್ಹ. ಇಂಥ ಬದ್ಧತೆಯ ಗುರುಗಳ ಕೈಕೆಳಗೆ ತಯಾರಾದ ಶಿಷ್ಯರು ವೈವಿಧ್ಯಪೂರ್ಣ ಕೃತಿಗಳನ್ನು ಸಾಕಾರಗೊಳಿಸಿದರು.

ಮೊದಲಿಗೆ-ಅಖಿಲಾ, ವಿಘ್ನವಿನಾಯಕನನ್ನು ಮನಸಾ ವಂದಿಸಿ, ‘ಮಹಾ ಗಣಪತಿಂ ಮನಸಾ ಸ್ಮರಾಮಿ…’ಕೃತಿಯನ್ನು ಗಣೇಶನ ವಿವಿಧ ಭಂಗಿಗಳನ್ನು ಸುಂದರವಾಗಿ ಪ್ರದರ್ಶಿಸುವ ಮೂಲಕ ಆರಂಭಿಸಿದಳು. ಸಣ್ಣ ವಯಸ್ಸಿನ ಹುಡುಗಿ ಆಸಕ್ತಿಯಿಂದ ನಾಟ್ಯ ಕಲಿತು ಗುರುಗಳು ಹೇಳಿಕೊಟ್ಟಿದ್ದನ್ನು ಸೂಕ್ತವಾಗಿ ಒಪ್ಪಿಸಿದಳು.  ನಡುನಡುವೆ ಸಣ್ಣ ಜತಿಗಳನ್ನು ನಿರೂಪಿಸುತ್ತ, ವಿನಾಯಕನ ಗುಣ ವಿಶೇಷಗಳನ್ನು ಚಿತ್ರಿಸುತ್ತ ಭಕ್ತಿಭಾವವನ್ನು ಪ್ರದರ್ಶಿಸಿದಳು.

ನಂತರ- ಅಪೇಕ್ಷಾ, ಊತುಕಾಡು ವೆಂಕಟಸುಬ್ಬಯ್ಯರ್ ರಚಿಸಿದ  ‘ಅಲೈ ಪಾಡುವೆ ಕೃಷ್ಣಾ’ ಎಂಬ ಕೃತಿಯಲ್ಲಿ ಕೃಷ್ಣನ ಗುಣಗಾನವನ್ನು ಸುಂದರ ಆಂಗಿಕಗಳ ಮೂಲಕ ದೃಶ್ಯೀಕರಿಸಿದಳು. ಆತ್ಮವಿಶ್ವಾಸದ ಹೆಜ್ಜೆಗಳಲ್ಲಿ ಕಲಾವಿದೆ, ಹಾವ-ಭಾವಗಳೊಂದಿಗೆ ಸುಮನೋಹರವಾಗಿ ಅಭಿನಯಿಸಿದಳು. ನೃತ್ಯ ಸಂಯೋಜನೆ ಮೆಚ್ಚುವಂತಿದ್ದು, ಸರಳ ನೃತ್ತಾವಳಿ ಶೋಭಿಸಿತು. ಕೃಷ್ಣನ ಮುದವಾದ ಭಂಗಿಗಳನ್ನು ಚೆಂದವಾಗಿ ತೋರುತ್ತ, ರಾಧೆಯ ವಿರಹವನ್ನು ಸೂಕ್ತವಾಗಿ ಅಭಿವ್ಯಕ್ತಿಸಿ, ಮುಂದೆ ಭರವಸೆಯ ಕಲಾವಿದೆಯಾಗುವ ಸೂಚನೆ ತೋರಿದಳು.

ಮುಂದೆ- ಕೃಷ್ಣಪ್ರಿಯ, ಮಹಾನಂದಸ್ವಾಮಿ ವಿರಚಿತ ‘ಶ್ರೀಹರಿ ಕೌತ್ವಂ’ ಅನ್ನು ಸುಂದರವಾಗಿ ನಿರೂಪಿಸಿದಳು. ವಿಷ್ಣುವಿನ ಗುಣ-ವಿಶೇಷ, ಮಹಿಮೆಗಳನ್ನು ಎತ್ತಿಹಿಡಿವ ದಶಾವತಾರದ ಸಂಚಾರಿಗಳನ್ನು ಸಂಕ್ಷಿಪ್ತವಾಗಿ, ಪರಿಣಾಮಕಾರಿಯಾಗಿ ಹಿಡಿದಿಡುವ ಪ್ರಯತ್ನ ಮಾಡಿದಳು. ಮುಖಾಭಿವ್ಯಕ್ತಿ, ಆಂಗಿಕ ಚಲನೆ, ಹಸ್ತಮುದ್ರೆಗಳು ಸ್ಫುಟವಾಗಿದ್ದು ನರ್ತನ ವೈಖರಿ ಆನಂದ ನೀಡಿತು.

ಅಂತ್ಯದಲ್ಲಿ ಸರಯೂ ‘ಅಳಗಿರಿ ನಂದಿನಿ’-ದೇವೀಕೃತಿಯನ್ನು ಶಕ್ತಿಶಾಲಿಯಾಗಿ ಪ್ರದರ್ಶಿಸಿದಳು. ಹಸನ್ಮುಖ, ಉತ್ಸಾಹ ಭಾವ ಎದ್ದು ಕಾಣುತ್ತಿತ್ತು. ಪಾರ್ವತಿಯ ವೀರೋಚಿತ ಭಾವ-ಭಂಗಿಗಳನ್ನು ನಿರೂಪಿಸಿದಳು. ಕಲಿತದ್ದನ್ನು ಅಚ್ಚುಕಟ್ಟಾಗಿ ನಿರೂಪಿಸುವ ಶ್ರದ್ಧೆ ಕಾಣುತ್ತಿದ್ದ ಅವಳ ನೃತ್ಯ ಪ್ರದರ್ಶನ ಮೋಹಕವಾಗಿ ಮೂಡಿಬಂತು. ನೃತ್ಯ ಪ್ರದರ್ಶನದ ಎಲ್ಲ ಕೃತಿಗಳೂ  ದೈವೀಕತೆಯ ನೆಲೆಯಲ್ಲಿ ಪ್ರದರ್ಶಿತವಾಗಿದ್ದು ಗಮನಾರ್ಹವಾಗಿತ್ತು.

Related posts

ಕಣ್ಮನ ಸೆಳೆದ ವೈವಿಧ್ಯಪೂರ್ಣ ‘ತಾಳ್-ತರಂಗ್ ’

YK Sandhya Sharma

ನಾಟ್ಯ-ಯೋಗ ಚತುರೆ ನವ್ಯಾ ದೇಸಾಯಿ

YK Sandhya Sharma

‘ಅಭಿವ್ಯಕ್ತಿ’ ಯ ಸುಂದರಕಾಂಡ ಹೊಸಪ್ರಯೋಗ

YK Sandhya Sharma

Leave a Comment

This site uses Akismet to reduce spam. Learn how your comment data is processed.